ಅಬ್ದುರ್ರಹ್ಮಾನ್(ರ)ರವರ ವಂಶಾವಳಿಯು ಐದನೇ ಪಿತಾಮಹ ಕಿಲಾಬ್‌ರಲ್ಲಿ ಪ್ರವಾದಿ(ಸ)ರೊಂದಿಗೆ ಸಂಧಿಸುತ್ತದೆ.
ಜನನ ಮತ್ತು ಬೆಳವಣಿಗೆ:
ಆನೆ ಕಲಹದ ಹತ್ತನೇ ವರ್ಷದಲ್ಲಿ ಅಬ್ದುರ್ರಹ್ಮಾನ್(ರ) ಮಕ್ಕಾದಲ್ಲಿ ಹುಟ್ಟಿದರು. ಅವರು ಪ್ರವಾದಿ(ಸ)ರಿಗಿಂತ ವಯಸ್ಸಿನಲ್ಲಿ ಚಿಕ್ಕವರು. ಜಾಹಿಲೀ ಕಾಲದಲ್ಲಿ ಅವರ ಹೆಸರು ಅಬ್ದು ಅಮ್ರ್ ಅಥವಾ ಅಬ್ದುಲ್ ಕಅಬ ಎಂದಾಗಿತ್ತು. ಅವರು ಇಸ್ಲಾಂ ಸ್ವೀಕರಿಸಿದಾಗ ಪ್ರವಾದಿ(ಸ) ಅವರನ್ನು ಅಬ್ದುರ್ರಹ್ಮಾನ್ ಎಂದು ಕರೆದರು.
ಇಸ್ಲಾಮ್ ಸ್ವೀಕಾರ:
ಪ್ರವಾದಿ(ಸ) ದಾರುಲ್ ಅರ್ಕಮ್ ಪ್ರವೇಶಿಸುವ ಮೊದಲೇ ಅಬ್ದುರ್ರಹ್ಮಾನ್(ರ) ಇಸ್ಲಾಮ್ ಸ್ವೀಕರಿಸಿದ್ದರು. ವಾಸ್ತವವಾಗಿ ಅಬೂಬಕರ್(ರ) ಇಸ್ಲಾಮ್ ಸ್ವೀಕರಿಸಿದ ಎರಡು ದಿನಗಳ ನಂತರ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು ಎಂದು ಹೇಳಲಾಗುತ್ತದೆ.
ಹಿಂಸೆ ಮತ್ತು ಕಿರುಕುಳ:
ಆರಂಭಿಕ ಮುಸ್ಲಿಮರು ಖುರೈಷರ ಕೈಯಲ್ಲಿ ಅನುಭವಿಸಿದ ಕಿರುಕುಳ ಮತ್ತು ಹಿಂಸೆಗೆ ಅಬ್ದುರ್ರಹ್ಮಾನ್(ರ) ಹೊರತಾಗಿರಲಿಲ್ಲ. ಎಷ್ಟೇ ಹಿಂಸೆ ಮತ್ತು ಕಿರುಕುಳಗಳನ್ನು ಎದುರಿಸಬೇಕಾಗಿ ಬಂದರೂ ಅವರು ಇಸ್ಲಾಮ್ ಧರ್ಮದಲ್ಲಿ ದೃಢವಾಗಿ ನಿಂತರು. ಕಿರುಕುಳ ನಿರಂತರ ಮತ್ತು ಅಸಹನೀಯವಾದಾಗ ಮಕ್ಕಾ ಬಿಟ್ಟು ಅಬಿಸೀನಿಯಾಗೆ ಹಿಜ್ರ ಹೋಗಲು ಪ್ರವಾದಿ(ಸ) ಮುಸಲ್ಮಾನರಿಗೆ ಆದೇಶಿಸಿದರು. ಹಾಗೆ ಹಿಜ್ರ ಹೋದವರಲ್ಲಿ ಅಬ್ದುರ್ರಹ್ಮಾನ್(ರ) ಕೂಡ ಒಬ್ಬರಾಗಿದ್ದರು. ಮಕ್ಕಾದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂಬ ವದಂತಿಯನ್ನು ನಂಬಿ ಅವರು ಮಕ್ಕಾಗೆ ಹಿಂದಿರುಗಿದರು. ಆದರೆ ಈ ವದಂತಿ ಸುಳ್ಳು ಎಂದು ಸಾಬೀತಾದಾಗ ಅವರು ಮತ್ತೆ ಎರಡನೇ ಬಾರಿಗೆ ಅಬಿಸೀನಿಯಾಗೆ ಹೋದರು.
ಹಿಜ್ರ ಮತ್ತು ವ್ಯಾಪಾರ:
ಮದೀನಾಕ್ಕೆ ಹಿಜ್ರ ಬಂದ ಕೂಡಲೇ ಪ್ರವಾದಿ(ಸ)ರವರು ಮುಹಾಜಿರ್ ಮತ್ತು ಅನ್ಸಾರ್‌ಗಳನ್ನು ಸಹೋದರತ್ವದಿಂದ ಜೋಡಿಸಲು ಪ್ರಾರಂಭಿಸಿದರು. ಇದರ ಉದ್ದೇಶ ಸಹೋದರತ್ವದ ದೃಢವಾದ ಸಂಬಂಧವನ್ನು ಸ್ಥಾಪಿಸುವುದು, ಸಾಮಾಜಿಕ ಒಗ್ಗಟ್ಟು ಬಲಪಡಿಸುವುದು ಮತ್ತು ಮುಹಾಜಿರ್‌ಗಳ ಬಡತನವನ್ನು ನೀಗಿಸುವುದಾಗಿತು. ಪ್ರವಾದಿ(ಸ) ಅಬ್ದುರ್ರಹ್ಮಾನ್(ರ)ರನ್ನು ಸಅದ್ ಬಿನ್ ರಬೀಲ್(ರ)ರೊಂದಿಗೆ ಜೋಡಿಸಿದರು.
ಸಅದ್(ರ) ಹೇಳಿದರು: “ನನ್ನ ಸಹೋದರಾ! ಮದೀನಾದ ಜನರಲ್ಲೇ ನನಗೆ ಹೆಚ್ಚು ಸಂಪತ್ತು ಇದೆ. ನನಗೆ ಎರಡು ತೋಟಗಳಿವೆ ಮತ್ತು ಇಬ್ಬರು ಹೆಂಡತಿಯರಿದ್ದಾರೆ. ನೀವು ಇಷ್ಟಪಡುವ ತೋಟ ಯಾವುದೆಂದು ನೋಡಿ. ನಾನು ಅದನ್ನು ನಿಮಗಾಗಿ ಖಾಲಿ ಮಾಡುತ್ತೇನೆ. ನನ್ನ ಇಬ್ಬರು ಹೆಂಡತಿಯರಲ್ಲಿ ಯಾರು ಇಷ್ಟವೆಂದು ಹೇಳಿ. ನಾನು ನಿಮಗಾಗಿ ಅವಳಿಗೆ ವಿಚ್ಛೇದನ ನೀಡುತ್ತೇನೆ.” ಅಬ್ದುರ್ರಹ್ಮಾನ್(ರ) ಹೇಳಿದರು: “ನಿಮ್ಮ ಕುಟುಂಬ ಮತ್ತು ನಿಮ್ಮ ಸಂಪತ್ತಿನಲ್ಲಿ ಅಲ್ಲಾಹು ನಿಮಗೆ ಬರ್ಕತ್ ನೀಡಲಿ. ಮದೀನದ ಮಾರುಕಟ್ಟೆ ಎಲ್ಲಿದೆ ಎಂದು ನನಗೆ ತೋರಿಸಿ.”
ಅಬ್ದುರ್ರಹ್ಮಾನ್(ರ) ಬನೂ ಕೈನ್‌ಕಾಲ್ ಮಾರುಕಟ್ಟೆಗೆ ಹೋಗಿ ತಮ್ಮ ಬಳಿ ಇರುವ ಸಣ್ಣ ಸಂಪನ್ಮೂಲದಿಂದ ವ್ಯಾಪಾರ ಪ್ರಾರಂಭಿಸಿದರು. ಅವರು ಖರೀದಿಸಿ ಮಾರಾಟ ಮಾಡಿದರು ಮತ್ತು ಅವರ ಲಾಭವು ವೇಗವಾಗಿ ಬೆಳೆಯಿತು. ಶೀಘ್ರದಲ್ಲೇ ಅವರು ಸಾಕಷ್ಟು ಶ್ರೀಮಂತರಾಗಿ ಅನ್ಸಾರಿ ಮಹಿಳೆಯನ್ನು ವಿವಾಹವಾದರು. ಮೈಗೆ ಸುಗಂಧ ದ್ರವ್ಯವನ್ನು ಹಚ್ಚಿದ ಸ್ಥಿತಿಯಲ್ಲಿ ಅವರು ಪ್ರವಾದಿ(ಸ)ರ ಬಳಿಗೆ ಹೋದಾಗ ಪ್ರವಾದಿ(ಸ) ಕೇಳಿದರು: “ಅಬ್ದುರ್ರಹ್ಮಾನ್! ತಾವು ವಿವಾಹವಾದಿರಾ?” ಅವರು ಹೌದೆಂದು ಉತ್ತರಿಸಿದರು. ಪ್ರವಾದಿ(ಸ) ಹೇಳಿದರು: “ಹಾಗಾದರೆ ಒಂದು ಕುರಿಯನ್ನು ಕೊಯ್ದಾದರೂ ವಲೀಮ (ಔತಣ) ಮಾಡಿರಿ.”
ನಂತರ ಅಬ್ದುರ್ರಹ್ಮಾನ್(ರ) ವ್ಯಾಪಾರಕ್ಕೆ ಎಷ್ಟು ಒಗ್ಗಿಕೊಂಡರೆಂದರೆ, “ನಾನು ಕಲ್ಲು ಎತ್ತಿದರೆ ಅದರ ಕೆಳಗೆ ಚಿನ್ನ ಅಥವಾ ಬೆಳ್ಳಿ ಸಿಗುತ್ತದೆ” ಎಂದು ಅವರು ಹೇಳುತ್ತಿದ್ದರು.
ಯುದ್ಧಗಳು:
ಅಬ್ದುರ್ರಹ್ಮಾನ್(ರ) ಬದ್ರ್ ಮತ್ತು ಉಹುದ್ ಎರಡೂ ಯುದ್ಧಗಳಲ್ಲಿ ತಮ್ಮನ್ನು ಗುರುತಿಸಿಕೊಂಡರು. ಉಹುದ್ ಯುದ್ಧದ ಕೊನೆಯವರೆಗೂ ಅವರು ಅಚಲವಾಗಿ ನಿಂತರು. ಅವರಿಗೆ ಇಪ್ಪತ್ತಕ್ಕೂ ಹೆಚ್ಚು ಗಾಯಗಳಾಗಿದ್ದವು. ಅವುಗಳಲ್ಲಿ ಕೆಲವು ಆಳವಾದ ಮತ್ತು ತೀವ್ರವಾದ ಗಾಯಗಳು. ಸಈದ್ ಬಿನ್ ಜುಬೈರ್(ರ) ಹೇಳುತ್ತಿದ್ದರು: “ಅಬೂಬಕರ್, ಉಮರ್, ಉಸ್ಮಾನ್, ಅಲೀ, ತಲ್ಹ, ಝುಬೈರ್, ಸಅದ್, ಅಬ್ದುರ್ರಹ್ಮಾನ್ ಮತ್ತು ಸಈದ್ ಬಿನ್ ಝೈದ್ ಯುದ್ಧಗಳಲ್ಲಿ ಪ್ರವಾದಿ(ಸ)ರವರ ಮುಂಭಾಗದಲ್ಲಿ ಮತ್ತು ನಮಾಝ್‍ನಲ್ಲಿ ಪ್ರವಾದಿ(ಸ)ರವರ ಹಿಂಭಾಗದಲ್ಲಿ ಇರುತ್ತಿದ್ದರು.”
ಹಿಜ್ರ 5 ರಲ್ಲಿ ಪ್ರವಾದಿ(ಸ) ಅಬ್ದುರ್ರಹ್ಮಾನ್(ರ)ರನ್ನು ಸೇನೆಯೊಂದಿಗೆ ದೌಮತುಲ್ ಜಂದಲ್‌ಗೆ ಕಳುಹಿಸಿದರು. ಅಲ್ಲಿ ಅವರು ಕಲ್ಬ್ ಗೋತ್ರದವರಿಗೆ ಇಸ್ಲಾಮನ್ನು ಬೋಧಿಸಿದರು. ಗೋತ್ರದ ನಾಯಕ ಮತ್ತು ಇತರರು ಇಸ್ಲಾಮ್ ಸ್ವೀಕರಿಸಿದರು. ಅಲ್ಲಿ ಅವರು ಗೋತ್ರ ನಾಯಕನ ಮಗಳನ್ನು ವಿವಾಹವಾದರು.
ಪ್ರವಾದಿ(ಸ) ದೂರದ ತಬೂಕ್‌ಗೆ ದಂಡಯಾತ್ರೆಯನ್ನು ಕಳುಹಿಸಲು ನಿರ್ಧರಿಸಿದರು. ರೋಮನ್ ಪಡೆಗಳ ವಿರುದ್ಧ ಹೋರಾಡಲು ಸೈನಿಕರಿಗಿಂತ ಹಣಕಾಸು ಮತ್ತು ಸಾಮಗ್ರಿಗಳ ಅಗತ್ಯವು ಹೆಚ್ಚಾಗಿತ್ತು. ಮದೀನಾದಲ್ಲಿ ಆ ವರ್ಷ ಬರ ಮತ್ತು ಸಂಕಷ್ಟ ಉಂಟಾಗಿತ್ತು. ತಬೂಕ್‌ಗೆ ಪ್ರಯಾಣವು ಸಾವಿರ ಕಿಲೋಮೀಟರ್‌ಗಿಂತಲೂ ದೀರ್ಘವಾಗಿತ್ತು. ಅಗತ್ಯ ವಸ್ತುಗಳು ಕಡಿಮೆಯಿದ್ದವು. ಸವಾರಿಗಳ ಸಂಖ್ಯೆ ಎಷ್ಟು ಸೀಮಿತವಾಗಿತ್ತೆಂದರೆ, ಮುಸ್ಲಿಮರ ಗುಂಪೊಂದು ಪ್ರವಾದಿ(ಸ)ಯವರ ಬಳಿಗೆ ಬಂದು ಯುದ್ಧದಲ್ಲಿ ಸೇರಿಸಬೇಕೆಂದು ಮನವಿ ಮಾಡಿದಾಗ, ಅವರನ್ನು ಒಯ್ಯಲು ಯಾವುದೇ ಸವಾರಿ ಸಿಗದ ಕಾರಣ ಅವರನ್ನು ದೂರವಿಡಬೇಕಾಯಿತು.
ಪ್ರವಾದಿ(ಸ) ಅಲ್ಲಾಹನ ಮಾರ್ಗದಲ್ಲಿ ಉದಾರವಾಗಿ ದಾನ ಮಾಡುವಂತೆ ವಿನಂತಿಸಿದರು. ಪ್ರವಾದಿ(ಸ)ಯ ಕರೆಗೆ ಮುಸ್ಲಿಮರು ತಕ್ಷಣ ಪ್ರತಿಕ್ರಿಯಿಸಿದರು. ಅವರು ಉದಾರವಾಗಿ ದಾನ ಮಾಡಿದರು. ಅವರ ಮುಂಚೂಣಿಯಲ್ಲಿ ಅಬ್ದುರ್ರಹ್ಮಾನ್(ರ) ಇದ್ದರು. ಅವರು 200 ಔಕಿಯಾ ಚಿನ್ನ ದಾನ ಮಾಡಿದರು.
ಮುಸ್ಲಿಂ ಸೈನ್ಯವು ತಬೂಕ್‌ಗೆ ಹೊರಟಿತು. ಅಲ್ಲಿ ಅಬ್ದುರ್ರಹ್ಮಾನ್(ರ)ರಿಗೆ ಸಿಕ್ಕ ಗೌರವ ಇನ್ನಾರಿಗೂ ಸಿಕ್ಕಿರಲಿಲ್ಲ. ನಮಾಝಿನ ಸಮಯವಾಯಿತು. ಆದರೆ ಪ್ರವಾದಿ(ಸ) ಆಗ ಅಲ್ಲಿರಲಿಲ್ಲ. ಮುಸ್ಲಿಮರು ಅಬ್ದುರ್ರಹ್ಮಾನ್(ರ)ರನ್ನು ಇಮಾಮ್ ಆಗಿ ಆಯ್ಕೆ ಮಾಡಿದರು. ಅಬ್ದುರ್ರಹ್ಮಾನ್(ರ) ಇಮಾಂ ನಿಂತು ನಮಾಝ್ ಮಾಡಿದರು. ಮೊದಲನೇ ರಕಅತ್ ಮುಗಿಯುವ ಹೊತ್ತಿಗೆ ಪ್ರವಾದಿ(ಸ) ಬಂದು ಅಬ್ದುರ್ರಹ್ಮಾನ್(ರ)ರವರ ಹಿಂದೆ ನಮಾಝ್ ಮಾಡಿದರು.
ಉಮರ್(ರ)ರವರ ಮರಣಾನಂತರ:
ಉಮರ್(ರ) ಮರಣಹೊಂದುವುದಕ್ಕೆ ಮುಂಚೆ ಆರು ಜನರನ್ನು ಖಲೀಫ ಸ್ಥಾನಕ್ಕೆ ಸೂಚಿಸಿದರು. ಅವರಲ್ಲಿ ಅಬ್ದುರ್ರಹ್ಮಾನ್(ರ) ಒಬ್ಬರಾಗಿದ್ದರು. ಆ ಆರು ಜನರಲ್ಲಿ ಮೂವರು ಖಲೀಫ ಸ್ಥಾನದಿಂದ ಹಿಂದೆ ಸರಿದರು. ಉಸ್ಮಾನ್(ರ), ಅಲೀ(ರ) ಮತ್ತು ಅಬ್ದುರ್ರಹ್ಮಾನ್(ರ) ಉಳಿದರು. ಅಬ್ದುರ್ರಹ್ಮಾನ್(ರ)ರವರು ಉಸ್ಮಾನ್(ರ) ಮತ್ತು ಅಲೀ(ರ)ರಲ್ಲಿ ಯಾರಾದರೂ ಒಬ್ಬರನ್ನು ಖಲೀಫ ಮಾಡುವ ವಿಷಯದಲ್ಲಿ ಸಹಾಬಾಗಳೊಂದಿಗೆ ಸಮಾಲೋಚನೆ ಮಾಡಿ ನಂತರ ಉಸ್ಮಾನ್(ರ)ರಿಗೆ ಬೈಅತ್ ಮಾಡಿದರು. ನಂತರ ಸಹಾಬಾಗಳೆಲ್ಲರೂ ಉಸ್ಮಾನ್(ರ)ರಿಗೆ ಬೈಅತ್ ಮಾಡಿದರು.
ಕೊಡುಗೈ ದಾನಿ:
ಅಬ್ದುರ್ರಹ್ಮಾನ್(ರ) ಕೊಡುಗೈ ದಾನಿಯಾಗಿದ್ದರು. ಒಮ್ಮೆ ಅವರು ತಮ್ಮ ಅರ್ಧ ಸಂಪತ್ತನ್ನು ದಾನ ಮಾಡಿದರು. ಇನ್ನೊಮ್ಮೆ ಅವರು 40,000 ದೀನಾರ್ ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಿದರು. ಪ್ರವಾದಿ(ಸ)ರವರು ನಿಧನರಾದಾಗ, ಅಬ್ದುರ್ರಹ್ಮಾನ್(ರ) ಪ್ರವಾದಿ(ಸ)ರವರ ಕುಟುಂಬದ ಅಗತ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡರು.
ಉಮರ್(ರ)ರವರ ಕಾಲದಲ್ಲಿ ಪ್ರವಾದಿಪತ್ನಿಯರು ಹಜ್ಜಿಗೆ ಹೋದಾಗ, ಅವರ ಅಗತ್ಯಗಳನ್ನು ಪೂರೈಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಬ್ದುರ್ರಹ್ಮಾನ್(ರ) ಕೂಡ ಅವರೊಂದಿಗೆ ಹಜ್ಜ್ ಮಾಡಿದರು. ಇದು ಪ್ರವಾದಿ(ಸ)ರವರ ಕುಟುಂಬದ ಕಡೆಯಿಂದ ಅವರು ಅನುಭವಿಸಿದ ವಿಶ್ವಾಸ ಮತ್ತು ನಂಬಿಕೆಯ ಸಂಕೇತವಾಗಿದೆ.
ಮುಸ್ಲಿಮರಿಗೆ ಮತ್ತು ವಿಶೇಷವಾಗಿ ಪ್ರವಾದಿಪತ್ನಿಯರಿಗೆ ಅಬ್ದುರ್ರಹ್ಮಾನ್(ರ) ನೀಡುತ್ತಿದ್ದ ಧನಸಹಾಯ ಸರ್ವಶ್ರುತವಾಗಿದೆ. ಒಮ್ಮೆ ಅವರು ಒಂದು ಭೂಮಿಯನ್ನು ನಲವತ್ತು ಸಾವಿರ ದಿನಾರ್‌ಳಿಗೆ ಮಾರಿ ಆ ಸಂಪೂರ್ಣ ಮೊತ್ತವನ್ನು ಬನೂ ಝಹ್ರ (ಪ್ರವಾದಿ(ಸ)ರ ತಾಯಿ ಆಮಿನಾರವರ ಸಂಬಂಧಿಕರು) ಗೋತ್ರಕ್ಕೆ ಬಡ ಮುಸಲ್ಮಾನರಿಗೆ ಮತ್ತು ಪ್ರವಾದಿ ಪತ್ನಿಯರಿಗೆ ಹಂಚಿದರು.
ಆಯಿಶ(ರ) ಮತ್ತು ಉಮ್ಮು ಸಲಮಾ(ರ) ಪ್ರಾರ್ಥಿಸುತ್ತಿದ್ದರು: “ಓ ಅಲ್ಲಾಹ್! ಅಬ್ದುರಹ್ಮಾನ್‌ರಿಗೆ ನೀನು ಸ್ವರ್ಗದ ಸಲ್ಸಬೀಲ್ ನದಿಯಿಂದ ನೀರನ್ನು ಕುಡಿಸು.”
“ಓ ಅಲ್ಲಾಹ್! ಅಬ್ಬುರಹ್ಮಾನ್(ರ)ರವರ ಸಂಪತ್ತಿಗೆ ಬರಕತ್ ದಯಪಾಲಿಸು” ಎಂಬ ಪ್ರವಾದಿ(ಸ)ರವರ ಪ್ರಾರ್ಥನೆಯ ಪರಿಣಾಮವು ಅಬ್ದುರ್ರಹ್ಮಾನ್(ರ)ರವರ ಜೀವನದುದ್ದಕ್ಕೂ ಕಂಡುಬಂತು. ಅವರು ಪ್ರವಾದಿ(ಸ)ರವರ ಸಹಚರರಲ್ಲಿ ಅತ್ಯಂತ ಶ್ರೀಮಂತರಾದರು. ಅವರ ವ್ಯವಹಾರ ವಹಿವಾಟುಗಳು ಏಕರೂಪವಾಗಿ ಯಶಸ್ಸನ್ನು ಕಂಡವು. ಅವರ ಸಂಪತ್ತು ಬೆಳೆಯುತ್ತಲೇ ಇತ್ತು. ಮದೀನಾಕ್ಕೆ ಬರುವ ಮತ್ತು ಹೊರಗೆ ಹೋಗುವ ಅವರ ವ್ಯಾಪಾರ ಸಂಘಗಳು ಹೆಚ್ಚುತ್ತಲೇ ಇದ್ದವು.
ಸದಾ ಶಾಂತವಾಗಿರುತ್ತಿದ್ದ ಮದೀನಾದಲ್ಲಿ ಅದರ ಗಡಿಯಾಚೆಯಿಂದ ದೊಡ್ಡ ಶಬ್ದ ಕೇಳಿಸಿತು. ಆ ಶಬ್ದವು ಕ್ರಮೇಣ ಹೆಚ್ಚಾಗುತ್ತಾ ಬಂತು. ಧೂಳು ಮತ್ತು ಮರಳಿನ ಮೋಡಗಳನ್ನು ವಾತಾವರಣದಲ್ಲಿ ಮಿಶ್ರವಾಯಿತು. ಯಾವುದೋ ಒಂದು ದೊಡ್ಡ ವ್ಯಾಪಾರ ಸಂಘವು ಮದೀನಾ ಪ್ರವೇಶಿಸುತ್ತಿದೆ ಎಂದು ಜನರು ಅಂದುಕೊಂಡರು. ಸರಕುಗಳನ್ನು ತುಂಬಿದ ಏಳು ನೂರು ಒಂಟೆಗಳು ನಗರದ ಬೀದಿಗಳಲ್ಲಿ ಕಿಕ್ಕಿರಿದಾಗ ಜನರು ಆಶ್ಚರ್ಯಚಕಿತರಾದರು. ಇಷ್ಟು ದೊಡ್ಡ ವ್ಯಾಪಾರ ಸಂಘವನ್ನು ನೋಡಲು ಜನರು ಹೊರಗೆ ಬಂದರು. ನಗರದಾದ್ಯಂತ ಕೂಗು ಮತ್ತು ಸಂಭ್ರಮವಿತ್ತು.
ಈ ಗದ್ದಲವನ್ನು ಕೇಳಿ ಆಯಿಶ(ರ) ವಿಚಾರಿಸಿದರು: “ಮದೀನಾದಲ್ಲಿ ಏನು ನಡೆಯುತ್ತಿದೆ?”
“ಅಬ್ದುರ್ರಹ್ಮಾನ್(ರ) ವ್ಯಾಪಾರ ಸಂಘವು ಸಿರಿಯಾದಿಂದ ಸರಕುಗಳನ್ನು ತಂದಿದೆ.”
“ಇಷ್ಟೊಂದು ಗದ್ದಲವನ್ನು ಮಾಡುವ ವ್ಯಾಪಾರ ಸಂಘ?” ಆಯಿಶ ಕೇಳಿದರು.
“ಹೌದು, ಉಮ್ಮುಲ್ ಮೂಮಿನೀನ್. ಅದರಲ್ಲಿ ಏಳುನೂರು ಒಂಟೆಗಳಿವೆ.”
ಆಯಿಶ(ರ) ತಲೆ ಅಲ್ಲಾಡಿಸಿ ದೂರದಿಂದ ನೋಡುತ್ತಾ ಹೇಳಿದರು: “ಅಬ್ದುರ್ರಹ್ಮಾನ್(ರ) ತೆವಳಿಕೊಂಡು ಸ್ವರ್ಗ ಪ್ರವೇಶಿಸುವುದನ್ನು ನಾನು ಕಂಡಿದ್ದೇನೆ ಎಂದು ಪ್ರವಾದಿ(ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ.”
ಆಯಿಶ(ರ) ಉಲ್ಲೇಖಿಸಿದ ಹದೀಸ್ ಅಬ್ದುರ್ರಹ್ಮಾನ್(ರ)ರವರ ಕಿವಿಗೆ ಬಿತ್ತು. ಅವರು ನೇರವಾಗಿ ಆಯಿಶ(ರ)ರ ಮನೆಗೆ ಬಂದು ಕೇಳಿದರು: “ಅಮ್ಮಾ! ಅಲ್ಲಾಹನ ಪ್ರವಾದಿ ಹೀಗೆ ಹೇಳುವುದನ್ನು ನೀವು ಕೇಳಿದ್ದೀರಾ?” ಅವರು “ಹೌದು” ಎಂದು ಉತ್ತರಿಸಿದರು.
ಅಬ್ದುರ್ರಹ್ಮಾನ್(ರ) ಹೇಳಿದರು: “ನನಗೆ ಸಾಧ್ಯವಾದರೆ ನಾನು ಖಂಡಿತವಾಗಿಯೂ ನಿಂತುಕೊಂಡೇ ಸ್ವರ್ಗ ಪ್ರವೇಶಿಸಲು ಬಯಸುತ್ತೇನೆ. ಅಮ್ಮಾ, ಈ ಸಂಪೂರ್ಣ ವ್ಯಾಪಾರ ಸಂಘವನ್ನು ಅದರ ಎಲ್ಲಾ ಸರಕುಗಳೊಂದಿಗೆ, ನಾನು ಅಲ್ಲಾಹನ ಮಾರ್ಗದಲ್ಲಿ ದಾನ ಮಾಡುತ್ತೇನೆಂದು ನಾನು ನಿಮಗೆ ಪ್ರತಿಜ್ಞೆ ಮಾಡುತ್ತೇನೆ.”
ಐಹಿಕ ವಿರಕ್ತಿ:
ಅಬ್ದುರ್ರಹ್ಮಾನ್(ರ) ಆಗರ್ಭ ಶ್ರೀಮಂತರಾಗಿದ್ದರೂ ಕೂಡ ಅದು ಅವರ ಆರಾಧನೆಗಳಿಗೆ ಮತ್ತು ಐಹಿಕ ವಿರಕ್ತಿಗೆ ತಡೆಯಾಗಲಿಲ್ಲ. ಒಮ್ಮೆ ಅವರು ಉಪವಾಸ ಪಾರಣೆಗಾಗಿ ತಮ್ಮ ಮುಂದಿರಿಸಲಾದ ಭಕ್ಷ್ಯ ಪದಾರ್ಥಗಳನ್ನು ನೋಡಿ ಅಳುತ್ತಾ ಹೇಳಿದರು: “ಹಂಝ(ರ) ಕೊಲ್ಲಲ್ಪಟ್ಟರು. ಅವರ ಅಂತ್ಯಕ್ರಿಯೆ ಮಾಡಲು ಒಂದು ತುಂಡು ಬಟ್ಟೆಯ ಹೊರತು ಬೇರೇನೂ ಉಳಿದಿರಲಿಲ್ಲ. ಮಿಸ್‌ಅಬ್ ಬಿನ್ ಉಮೈರ್(ರ) ಕೊಲ್ಲಲ್ಪಟ್ಟರು. ಅವರ ಅಂತ್ಯಕ್ರಿಯೆ ಮಾಡಲು ಒಂದು ತುಂಡು ಬಟ್ಟೆಯ ಹೊರತು ಬೇರೇನೂ ಇರಲಿಲ್ಲ. ನಮ್ಮ ಸತ್ಕರ್ಮಗಳ ಪ್ರತಿಫಲವನ್ನು ಇಹಲೋಕದಲ್ಲೇ ನಮಗೆ ನೀಡಲಾಗುತ್ತಿದೆಯೋ ಎಂದು ನನಗೆ ಭಯವಾಗುತ್ತಿದೆ.” ಅವರು ಏನೂ ತಿನ್ನದೆ ಎದ್ದು ಹೋದರು.
ಒಮ್ಮೆ ಅವರ ಮುಂದೆ ರೊಟ್ಟಿ ಮತ್ತು ಮಾಂಸವನ್ನು ತಂದಿಡಲಾದಾಗ ಅವರು ಅಳುತ್ತಾ ಹೇಳಿದರು: “ಪ್ರವಾದಿ(ಸ) ನಿಧನರಾದರು. ಅವರಾಗಲಿ ಅವರ ಮನೆಯವರಾಗಲಿ ಒಂದು ದಿನವೂ ಹೊಟ್ಟೆ ಪೂರ್ತಿ ತಿಂದವರಲ್ಲ.”
ಮರಣ:
ಹಿಜರಿ 32 ರಲ್ಲಿ, ಉಸ್ಮಾನ್(ರ)ರವರ ಆಡಳಿತ ಕಾಲದಲ್ಲಿ ಅಬ್ದುರ್ರಹ್ಮಾನ್(ರ) ನಿಧನರಾದರು. ಆಗ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರನ್ನು ಬಕೀಅ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.