ಅಬೂ ಉಬೈದ(ರ)ರವರ ವಂಶಾವಳಿಯು ಆರನೇ ಪಿತಾಮಹ ಫಿಹ್ರ್ ರಲ್ಲಿ ಪ್ರವಾದಿ(ಸ)ರೊಂದಿಗೆ ಸಂಧಿಸುತ್ತದೆ.
ಜನನ ಮತ್ತು ಬೆಳವಣಿಗೆ:
ಅಬೂ ಉಬೈದ(ರ)ರವರ ಜನನ ಮತ್ತು ಬೆಳವಣಿಗೆಯ ಬಗ್ಗೆ, ಅಥವಾ ಅವರ ಜಾಹಿಲೀಕಾಲದ ಜೀವನದ ಬಗ್ಗೆ ಯಾವುದೇ ವಿವರಣೆ ಲಭ್ಯವಿಲ್ಲ.
ಇಸ್ಲಾಮ್ ಸ್ವೀಕಾರ:
ಅಬೂ ಉಬೈದ(ರ) ಮೊತ್ತಮೊದಲು ಇಸ್ಲಾಮ್ ಸ್ವೀಕರಿಸಿದವರಲ್ಲಿ ಒಬ್ಬರು. ಅಬೂಬಕರ್(ರ) ಇಸ್ಲಾಮ್ ಸ್ವೀಕರಿಸಿದ ನಂತರ ಅಬೂ ಉಬೈದ(ರ), ಅಬ್ದುರಹ್ಮಾನ್ ಬಿನ್ ಔಫ್(ರ), ಉಸ್ಮಾನ್ ಬಿನ್ ಮಝ್ಊನ್(ರ) ಅರ್ಕಮ್ ಬಿನ್ ಅಬೂ ಅರ್ಕಮ್(ರ) ಮುಂತಾದವರನ್ನು ಇಸ್ಲಾಮಿನ ಕಡೆಗೆ ಆಮಂತ್ರಿಸಿದಾಗ ಅವರೆಲ್ಲರೂ ಇಸ್ಲಾಮ್ ಸ್ವೀಕರಿಸಿದರು.
ಬದ್ ಯುದ್ಧ:
ಕ್ರಿ.ಶ. 624 ರಲ್ಲಿ ಮುಸ್ಲಿಮರು ಮತ್ತು ಮಕ್ಕಾದ ಖುರೈಶರ ನಡುವೆ ಜರುಗಿದ ಮೊದಲ ಪ್ರಮುಖ ಯುದ್ಧದಲ್ಲಿ (ಬದ್ರ್ ಯುದ್ಧದಲ್ಲಿ ಅಬೂ ಉಬೈದ(ರ) ಭಾಗವಹಿಸಿದರು. ಈ ಯುದ್ಧದಲ್ಲಿ ಅವರ ತಂದೆ ಅಬ್ದುಲ್ಲಾ ಬಿನ್ ಜರ್ರಾಹ್ ಖುರೈಶ್ ಸೈನ್ಯದಲ್ಲಿದ್ದರು. ಅಬೂ ಉಬೈದ(ರ) ಅವರೊಂದಿಗೆ ಹೋರಾಡುವುದನ್ನು ಆದಷ್ಟು ತಪ್ಪಿಸಲು ನೋಡಿದರು. ಆದರೆ ಎಲ್ಲೇ ಹೋದರೂ ಅವರ ತಂದೆ ಅವರ ಮುಂದೆ ಅಡ್ಡ ಬರುತ್ತಿದ್ದರು. ಕೊನೆಗೆ ಅಬೂ ಉಬೈದ(ರ) ಅವರ ಮೇಲೆ ಖಡ್ಗ ಬೀಸಿ ಅವರನ್ನು ಕೊಂದರು. ಕುರ್‌ಆನ್‌ನ ಈ ಆಯತ್ ಅವರ ಬಗ್ಗೆ ಅವತೀರ್ಣವಾಯಿತೆಂದು ಹೇಳಲಾಗುತ್ತದೆ: “ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವ ಜನರು ಅಲ್ಲಾಹು ಮತ್ತು ಅವನ ರಸೂಲರನ್ನು ವಿರೋಧಿಸುವವರನ್ನು ಪ್ರೀತಿಸುವುದನ್ನು ನೀವು ಕಾಣಲಾರಿರಿ. ಅವರು ಅವರ ತಂದೆ, ಮಕ್ಕಳು, ಸಹೋದರರು ಅಥವಾ ಕುಟುಂಬಿಕರಾದರೂ ಸರಿ.” (ಖುರಾನ್ 58:22)
ಉಹುದ್ ಯುದ್ಧ:
ಕ್ರಿ.ಶ. 625 ರಲ್ಲಿ ಅವರು ಉಹುದ್ ಯುದ್ಧದಲ್ಲಿ ಭಾಗವಹಿಸಿದರು. ಯುದ್ಧದ ಎರಡನೇ ಹಂತದಲ್ಲಿ ಖಾಲಿದ್ ಬನ್ ವಲೀದ್(ರ)ರವರ ಅಶ್ವಸೈನ್ಯವು ಹಿಂಭಾಗದಿಂದ ಮುಸ್ಲಿಮರ ಮೇಲೆ ದಾಳಿ ಮಾಡಿ ಯುದ್ಧದ ದಿಕ್ಕನ್ನು ಬದಲಾಯಿಸಿದಾಗ, ಹೆಚ್ಚಿನ ಮುಸ್ಲಿಂ ಸೈನಿಕರು ಯುದ್ಧಭೂಮಿಯಿಂದ ಹಿಮ್ಮೆಟ್ಟಿದರು. ಆದರೆ ಕೆಲವರು ಸ್ಥಿರವಾಗಿ ಉಳಿದಿದ್ದರು. ಸ್ಥಿರವಾಗಿ ನಿಂತವರಲ್ಲಿ ಅಬೂ ಉಬೈದ(ರ) ಕೂಡ ಒಬ್ಬರು. ಅವರು ಪ್ರವಾದಿ(ಸ)ರನ್ನು ಖುರೈಶಿ ಸೈನಿಕರ ದಾಳಿಯಿಂದ ಕಾಪಾಡಿದರು.
ಅಬೂಬಕರ್(ರ) ಹೇಳುತ್ತಾರೆ: “ಉಹುದ್ ಯುದ್ಧದ ಸಂದರ್ಭ ಪ್ರವಾದಿ(ಸ)ರವರ ಮುಖಕ್ಕೆ ಕಲ್ಲು ತಾಗಿ ಅವರ ರಕ್ಷಾಕವಚದ ಎರಡು ಕೊಂಡಿಗಳು ಅವರ ಕೆನ್ನೆಗಳ ಒಳಗೆ ತೂರಿಕೊಂಡಿದ್ದವು. ನಾನು ಪ್ರವಾದಿ(ಸ)ರವರ ಬಳಿಗೆ ಓಡೋಡಿ ಹೋಗುತ್ತಿದ್ದೆ. ಅಷ್ಟರಲ್ಲಿ ನನಗಿಂತಲೂ ವೇಗವಾಗಿ ಒಬ್ಬ ವ್ಯಕ್ತಿ ಅವರ ಬಳಿಗೆ ತಲುಪಿದ್ದರು. ನಾನು ಹೇಳಿದೆ: “ಓ ಅಲ್ಲಾಹ್! ಇದನ್ನೊಂದು ಸತ್ಕರ್ಮವಾಗಿ ಮಾಡು.” ಆ ವ್ಯಕ್ತಿ ಅಬೂ ಉಬೈದ(ರ) ಆಗಿದ್ದರು. ಅವರು ಹೇಳಿದರು: “ಅಬೂಬಕ್ಕರ್! ಅಲ್ಲಾಹನ ಹೆಸರಲ್ಲಿ ನಾನು ಕೇಳುತ್ತಿದ್ದೇನೆ. ಪ್ರವಾದಿ(ಸ)ರವರ ಕೆನ್ನೆಯಿಂದ ಅದನ್ನು ಹೊರ ತೆಗೆಯುವ ಕೆಲಸವನ್ನು ನನಗೆ ಬಿಟ್ಟುಬಿಡಿ.” ನಾನು ಒಪ್ಪಿಕೊಂಡೆ. ಅವರು ತಮ್ಮ ಹಲ್ಲಿನಿಂದ ಕಚ್ಚಿ ಅದರ ಒಂದು ಕೊಂಡಿಯನ್ನು ಹೊರಗೆಳೆಯುವಲ್ಲಿ ಸಫಲರಾದರು. ಆಗ ಅವರ ಮುಂದಿನ ಒಂದು ಹಲ್ಲು ಮುರಿದು ಬಿತ್ತು. ಅವರು ಅದನ್ನು ಲೆಕ್ಕಿಸದೆ ಆ ರಕ್ಷಾಕವಚದ ಇನ್ನೊಂದು ಕೊಂಡಿಯನ್ನು ತಮ್ಮ ಹಲ್ಲಿನಿಂದ ಕಚ್ಚಿ ಎಳೆದರು. ಆಗ ಅವರ ಇನ್ನೊಂದು ಹಲ್ಲು ಕೂಡ ಮುರಿದುಬಿತ್ತು. ಅಂದಿನಿಂದ ಅಬೂ ಉಬೈದ(ರ) ಮುಂದಿನ ಎರಡು ಹಲ್ಲುಗಳಿಲ್ಲದ ವ್ಯಕ್ತಿಯಾಗಿದ್ದರು.”
ಇತರ ಯುದ್ಧಗಳು:
ನಂತರ ಕ್ರಿ.ಶ. 627 ರಲ್ಲಿ ಅವರು ಖಂದಕ್ ಯುದ್ಧದಲ್ಲಿ ಮತ್ತು ಬನೂ ಖುರೈಝ ಯುದ್ಧದಲ್ಲಿ ಭಾಗವಹಿಸಿದರು. ಹತ್ತಿರದ ಹಳ್ಳಿಗಳನ್ನು ಲೂಟಿ ಮಾಡುತ್ತಿದ್ದ ಸಅಲಬಾ ಮತ್ತು ಅನ್ಮಾರ್ ಬುಡಕಟ್ಟು ಜನಾಂಗದವರ ಮೇಲೆ ದಾಳಿ ಮಾಡಿ ನಾಶಮಾಡಲು ಹೊರಟ ಸಣ್ಣ ದಂಡಯಾತ್ರೆಯ ಸೇನಾಧಿಪತಿಯಾಗಿ ಅವರನ್ನು ನೇಮಿಸಲಾಯಿತು.
ಕ್ರಿ.ಶ. 628 ರಲ್ಲಿ ಅವರು ಹುದೈಬಿಯಾ ಒಪ್ಪಂದದಲ್ಲಿ ಭಾಗವಹಿಸಿದರು ಮತ್ತು ಒಪ್ಪಂದದ ಬಗ್ಗೆ ಸಾಕ್ಷಿಗಳಲ್ಲೊಬ್ಬರಾದರು. ಅದೇ ವರ್ಷದಲ್ಲಿ, ಅವರು ಖೈಬರ್‌ಗೆ ಕಳುಹಿಸಲಾದ ಮುಸ್ಲಿಂ ಅಭಿಯಾನದ ಒಂದು ಭಾಗವಾಗಿದ್ದರು.
ಝಾತು ಸ್ಸಲಾಸಿಲ್ ಯುದ್ಧ:
ಕ್ರಿ.ಶ. 629 ರಲ್ಲಿ ಪ್ರವಾದಿ(ಸ)ರವರು ಅಮ್ರ್ ಬಿನ್ ಆಸ್(ರ)ರನ್ನು ಝಾತು ಸ್ಸಲಾಸಿಲ್‌ಗೆ ಕಳುಹಿಸಿದರು. ಅವರು ಅಲ್ಲಿಂದ ಸೈನ್ಯದ ಬಲವರ್ಧನೆಗಾಗಿ ಇನ್ನೊಂದು ಸೈನ್ಯವನ್ನು ಆವಶ್ಯಪಟ್ಟಾಗ, ಪ್ರವಾದಿ(ಸ) ಅಬೂ ಬಕ್ರ್(ರ) ಮತ್ತು ಉಮರ್(ರ)ರನ್ನು ಒಳಗೊಂಡ ಸೈನ್ಯದ ಸೇನಾಧಿಪತಿಯಾಗಿ ಅಬೂ ಉಬೈದ(ರ)ರನ್ನು ಕಳುಹಿಸಿದರು. ಅವರು ಶತ್ರುಗಳ ಮೇಲೆ ದಾಳಿ ನಡೆಸಿ ಸೋಲಿಸಿದರು.
ಅದೇ ವರ್ಷದ ನಂತರ, ಖುರೈಶಿ ಯಾತ್ರಿಕ ಸಂಘಗಳ ಮಾರ್ಗಗಳನ್ನು ಕಂಡುಹಿಡಿಯಲು ಅವರ ನೇತೃತ್ವದಲ್ಲಿ ಮತ್ತೊಂದು ದಂಡಯಾತ್ರೆಯನ್ನು ಕಳುಹಿಸಲಾಯಿತು. ಈ ಚಕಮಕಿಯನ್ನು ಸೈಫುಲ್ ಜರಾ ಎಂದು ಕರೆಯಲಾಗುತ್ತದೆ.
ಮಕ್ಕಾ ವಿಜಯ:
ಕ್ರಿ.ಶ. 630 ರಲ್ಲಿ, ಮುಸ್ಲಿಮರ ಸೈನ್ಯಗಳು ಮಕ್ಕಾ ವಿಜಯಕ್ಕಾಗಿ ಧಾವಿಸಿದಾಗ ಅಬೂ ಉಬೈದ(ರ) ನಾಲ್ಕು ವಿಭಿನ್ನ ಮಾರ್ಗಗಳಿಂದ ಮಕ್ಕಾಗೆ ಪ್ರವೇಶಿಸಿದ ನಾಲ್ಕು ಮುಸ್ಲಿಂ ಸೇನೆಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದರು. ಅದೇ ವರ್ಷದ ನಂತರ, ಅವರು ಹುನೈನ್ ಕದನ ಮತ್ತು ತಾಯಿಫ್ ಮುತ್ತಿಗೆಯಲ್ಲಿ ಭಾಗವಹಿಸಿದರು.
ತಬೂಕ್ ಯುದ್ಧ:
ಸ್ವತಃ ಪ್ರವಾದಿ(ಸ) ನೇತೃತ್ವದಲ್ಲಿ ಜರುಗಿದ ತಬೂಕ್ ಅಭಿಯಾನದಲ್ಲಿ ಅವರು ಭಾಗವಹಿಸಿದ್ದರು. ತಬೂಕ್‌ನಿಂದ ಹಿಂದಿರುಗಿದ ನಂತರ, ನಜ್ರಾನ್‌ನಿಂದ ಕ್ರಿಶ್ಚಿಯನ್ ನಿಯೋಗ ಮದೀನಾಕ್ಕೆ ಬಂದು ಇಸ್ಲಾಂ ಧರ್ಮದ ಬಗ್ಗೆ ಆಸಕ್ತಿ ತೋರಿಸಿ, ತಮ್ಮೊಂದಿಗೆ ಇಸ್ಲಾಮಿಕ್ ಕಾನೂನುಗಳು, ಧರ್ಮದ ವಿಷಯಗಳಲ್ಲಿ ಮತ್ತು ಇತರ ಬುಡಕಟ್ಟು ವ್ಯವಹಾರಗಳಲ್ಲಿ ಮಾರ್ಗದರ್ಶನ ನೀಡುವ ವ್ಯಕ್ತಿಯನ್ನು ಕಳುಹಿಸುವಂತೆ ಪ್ರವಾದಿ(ಸ)ರಲ್ಲಿ ಕೇಳಿಕೊಂಡಾಗ, ಅವರೊಂದಿಗೆ ಹೋಗಲು ಪ್ರವಾದಿ(ಸ) ಅಬೂ ಉಬೈದ(ರ)ರನ್ನು ನೇಮಕ ಮಾಡಿದರು. ಪ್ರವಾದಿ(ಸ) ಅವರನ್ನು ತೆರಿಗೆ ಸಂಗ್ರಹಕಾರರಾಗಿ ಬಹ್ರೈನ್‌ಗೂ ಕಳುಹಿಸಿದರು. ಕ್ರಿ.ಶ. 632 ರಲ್ಲಿ ಪ್ರವಾದಿ(ಸ) ನಿಧನರಾದಾಗ ಅಬೂ ಉಬೈದ(ರ) ಮಕ್ಕಾದಲ್ಲಿದ್ದರು.
ಅಬೂಬಕರ್(ರ)ರವರ ಕಾಲದಲ್ಲಿ:
ಕ್ರಿ.ಶ. 632 ರಲ್ಲಿ ಪ್ರವಾದಿ(ಸ) ನಿಧನರಾದಾಗ ಅವರ ಉತ್ತರಾಧಿಕಾರದ ವಿಷಯದಲ್ಲಿ ಸಕೀಫಾ ಬನೂ ಸಾಇದಲ್ಲಿ ಸಮಾಲೋಚನೆ ನಡೆಯಿತು. ಖಲೀಫ ಸ್ಥಾನದ ಅಭ್ಯರ್ಥಿಗಳಾಗಿ ಉಮರ್(ರ) ಅಬೂಬಕರ್(ರ) ಮತ್ತು ಅಬೂ ಉಬೈದ(ರ) ರನ್ನು ಹೆಸರಿಸಿದರು. ಆದರೆ ಅಬೂ ಉಬೈದ(ರ) ಅದನ್ನು ನಿರಾಕರಿಸಿ ಖಲೀಫರಾಗಿ ಅಬೂಬಕರ್(ರ)ರಿಗೆ ಬೈಅತ್ ಮಾಡಿದರು.
ಧರ್ಮಪರಿತ್ಯಾಗಿಗಳೊಂದಿಗೆ ನಡೆದ ಯುದ್ಧಗಳ ನಂತರ ಅಬೂಬಕರ್(ರ) ಖಾಲಿದ್ ಬಿನ್ ವಲೀ(ರ)ರನ್ನು ಇರಾಕ್ ವಶಪಡಿಸಿಕೊಳ್ಳಲು ಕಳುಹಿಸಿದಾಗ, ಸೈನ್ಯದ ನಾಲ್ಕು ತುಕಡಿಗಳಲ್ಲಿ ಒಂದಕ್ಕೆ ಅಬೂ ಉಬೈದ(ರ)ರನ್ನು ಸೇನಾಧಿಪತಿಯಾಗಿ ಮಾಡಿದರು. ಶುರಹ್ಬೀಲ್ ಬಿನ್ ಹಸನರ ಸೈನ್ಯದ ಹಿಂಭಾಗದಲ್ಲಿ ತಬೂಕ್ ಮಾರ್ಗದಲ್ಲಿ ಚಲಿಸುವಂತೆ ಅವರಿಗೆ ಆದೇಶಿಸಲಾಯಿತು.
ಕ್ರಿ.ಶ. 634 ರಲ್ಲಿ ಖಾಲಿದ್ ಬಿನ್ ವಲೀದ್(ರ) ಇರಾಕ್‌ನಿಂದ ಸಿರಿಯಾಕ್ಕೆ ಬರುವವರೆಗೂ ಅವರು ಮುಸ್ಲಿಂ ಸೇನೆಗಳ ಮುಖ್ಯಸ್ಥರಾಗಿದ್ದರು. ತಾನು ಬುಸ್ರಾ ನಗರವನ್ನು ತಲುಪುವವರೆಗೂ ಅವರು ಅಲ್ಲಿಯೇ ಇರಬೇಕೆಂದು ಖಾಲಿದ್ ಬಿನ್ ವಲೀದ್(ರ) ಅವರಿಗೆ ಆದೇಶಿಸಿದರು. ಬುಸ್ರಾದಲ್ಲಿ ಖಾಲಿದ್(ರ) ಮತ್ತು ಅಬೂ ಉಬೈದಾ(ರ) ಜೊತೆಯಾದರು. ಬುಸ್ರಾ ಕದನದ ನಂತರ ನಗರವು ಅವರಿಗೆ ಶರಣಾಯಿತು.
1,00,000 ಸೈನಿಕರನ್ನು ಹೊಂದಿರುವ ರೋಮನ್ ಸೈನ್ಯವು ಅಜ್ನಾದೀನ್‌ನಲ್ಲಿ ಮುಸ್ಲಿಮರ ವಿರುದ್ಧ ದಂಡೆತ್ತಿ ಬಂದಿದೆಯೆಂಬ ಸುದ್ದಿ ತಿಳಿದಾಗ ಮುಸ್ಲಿಂ ಸೈನ್ಯದ ಎಲ್ಲಾ ವಿಭಾಗಗಳು ಜುಲೈ 24, 634 ರಂದು ಅಜ್ನಾದೀನ್‌ನಲ್ಲಿ ಸೇರಿಕೊಂಡವು. ಮುಸ್ಲಿಮ್ ಸೈನ್ಯವು ಸುಮಾರು 32,000 ಸಂಖ್ಯೆಯಲ್ಲಿತ್ತು. ಮುಸ್ಲಿಮರು ರೋಮನ್ನರನ್ನು ಸೋಲಿಸಿದರು.
ಒಂದು ವಾರದ ನಂತರ ಅಬೂ ಉಬೈದ(ರ) ಮತ್ತು ಖಾಲಿದ್(ರ) ಡಮಾಸ್ಕಸ್ ಕಡೆಗೆ ಹೊರಟರು. ಡಮಾಸ್ಕಸ್‌ಗೆ ಹೋಗುವಾಗ ದಾರಿ ಮಧ್ಯೆ ನಡೆದ ಕದನದಲ್ಲಿ ಅವರು ಮತ್ತೊಂದು ರೋಮನ್ ಸೈನ್ಯವನ್ನು ಸೋಲಿಸಿದರು. ಚಕ್ರವರ್ತಿ ಹೆರಾಕ್ಲಿಯಸ್‌ನ ಅಳಿಯ ತೋಮೂರ್, ಖಾಲಿದ್(ರ)ರ ಸೈನ್ಯವನ್ನು ತಡೆಯಲು ಮತ್ತೊಂದು ಸೈನ್ಯವನ್ನು ಕಳುಹಿಸಿದನು. ಆದರೆ ಅಬೂ ಉಬೈದ(ರ) ಮತ್ತು ಶುರಹೀಲ್ ಬಿನ್ ಹಸನ(ರ)ರ ಸೈನ್ಯಗಳು ಸೇರಿಕೊಂಡು ಅವರನ್ನು ಸೋಲಿಸಿದರು.
ಉಮರ್(ರ)ರ ಕಾಲದಲ್ಲಿ:
ಕ್ರಿ.ಶ. 634 ರ ಆಗಸ್ಟ್ 22 ರಂದು ಅಬೂಬಕರ್(ರ)ರವರ ಮರಣಾನಂತರ ಉಮರ್(ರ) ಖಲೀಫರಾದರು. ಉಮರ್(ರ) ಖಲೀಫ ಆಗುತ್ತಿದ್ದಂತೆ ಅವರು ಖಾಲಿದ್ ಬಿನ್ ವಲೀದ್(ರ)ರನ್ನು ಇಸ್ಲಾಮಿಕ್ ಸೈನ್ಯದ ಸೇನಾಧಿಪತಿ ಸ್ಥಾನದಿಂದ ಮುಕ್ತಗೊಳಿಸಿ ಅಬೂ ಉಬೈದ(ರ)ರನ್ನು ಹೊಸ ಸೇನಾಧಿಪತಿಯಾಗಿ ನೇಮಿಸಿದರು. ಮುಸ್ಲಿಮ್ ಸೈನ್ಯ ಗಳಿಸಿದ ವಿಜಯಗಳು ಖಾಲಿದ್(ರ)ರವರ ಕಾರಣದಿಂದಾಗಿ ಎಂಬ ಅಭಿಪ್ರಾಯವನ್ನು ಹೋಗಲಾಡಿಸಲು ಹೀಗೆ ಮಾಡಲಾಯಿತು.
ಯುರ್ಮೂಕ್ ಯುದ್ಧ:
ಇತ್ತ ಮುಸ್ಲಿಮರು ಡಮಾಸ್ಕಸ್ ತಲುಪಿ ನಾಲ್ಕು ತಿಂಗಳುಗಳ ಕಾಲ ನಗರಕ್ಕೆ ಮುತ್ತಿಗೆ ಹಾಕಿದರು. ಕ್ರಿ.ಶ. 635 ಸೆಪ್ಟೆಂಬರ್ 3 ರಂದು ಡಮಾಸ್ಕಸ್ ಮುಸ್ಲಿಮರ ವಶವಾಯಿತು.
ಅಬೂ ಉಬೈದ(ರ) ಡಮಾಸ್ಕಸ್‌ನಿಂದ ಹಿಮ್ಸ್‌ಗೆ ಹೋಗುವ ದಾರಿಯಲ್ಲಿ ಬೃಹತ್ ರೋಮನ್ ಸೈನ್ಯವು ಮುಸ್ಲಿಮರ ವಿರುದ್ಧ ದಂಡೆತ್ತಿ ಬರುತ್ತಿದೆಯೆಂಬ ಸುದ್ದಿ ತಲುಪಿತು. ಅವರು ಮರಳಿ ಡಮಾಸ್ಕಸ್‌ಗೆ ಬಂದು ಎಲ್ಲಾ ಸೇನಾದಿಪತಿಗಳನ್ನು ಕರೆಸಿ ಸಮಾಲೋಚನೆ ಮಾಡಿದರು. ನಂತರ ರೋಮನ್ ಸೈನ್ಯವನ್ನು ಎದುರಿಸಲು ಯರ್ಮೂಕ್‌ಗೆ ಹೋಗುವುದೆಂದು ತೀರ್ಮಾನಿಸಲಾಯಿತು. ಯರ್ಮೂಕ್ ಯುದ್ಧವು ಆರು ದಿನಗಳ ಕಾಲ ನಡೆಯಿತೆಂದು ಹೇಳಲಾಗುತ್ತದೆ. ಯರ್ಮೂಕ್ ವಿಜಯವು ಮುಸ್ಲಿಮರಿಗೆ ಇರಾಕನ್ನು ಜಯಿಸಲು ಸಹಾಯ ಮಾಡಿತು. ಕ್ರಿ.ಶ. 637ರಲ್ಲಿ ಪ್ಯಾಲಸ್ತೀನ್ ಮುಸಲ್ಮಾನರ ಕೈಗೆ ಬಂತು.
ಮರಣ:
ಅಬೂ ಉಬೈದ(ರ) ಜಾಬಿಯಾಕ್ಕೆ ಹೋದ ಕೂಡಲೇ ಪ್ಲೇಗ್ ಪೀಡಿತರಾದರು. ಸಾವು ಅವರ ಮೇಲೆ ತೂಗಾಡುತ್ತಿದ್ದಂತೆ, ಅವರು ತನ್ನ ಸೈನಿಕರಿಗೆ ಹೇಳಿದರು: “ನಾನು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತೇನೆ, ಅದು ನಿಮ್ಮನ್ನು ಯಾವಾಗಲೂ ಒಳಿತಿನ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ. ನಮಾಝ್ ಸಂಸ್ಥಾಪಿಸಿ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಿ, ಝಕಾತ್ ನೀಡಿ, ಹಜ್ ಮತ್ತು ಉಮ್ರಾ ನಿರ್ವಹಿಸಿ, ಒಗ್ಗೂಡಿ ಒಬ್ಬರಿಗೊಬ್ಬರು ಬೆಂಬಲ ನೀಡಿ, ನಿಮ್ಮ ಸೇನಾಧಿಪತಿಗಳ ಮಾತನ್ನು ಕೇಳಿ ಮತ್ತು ಅವರಿಂದ ಏನನ್ನೂ ಮರೆಮಾಚಬೇಡಿ. ಇಹಲೋಕವು ನಿಮ್ಮನ್ನು ನಾಶ ಮಾಡಲು ಆಸ್ಪದ ನೀಡಬೇಡಿ. ಮನುಷ್ಯನು ಸಾವಿರ ವರ್ಷ ಬದುಕಿದರೂ, ನನ್ನನ್ನು ನೀವು ನೋಡುವ ಈ ಸ್ಥಿತಿಯೊಂದಿಗೆ ಅವನು ಒಂದಲ್ಲ ಒಂದು ದಿನ ಕೊನೆಗೊಳ್ಳುತ್ತಾನೆ. ನಿಮ್ಮ ಮೇಲೆ ಅಲ್ಲಾಹನ ಶಾಂತಿ ಮತ್ತು ಕರುಣೆ ಇರಲಿ.”
ನಂತರ ಅವರು ಮುಆಝ್ ಬಿನ್ ಜಬಲ್(ರ)ರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿ ಜನರನ್ನು ನಮಾಝನಲ್ಲಿ ಮುನ್ನಡೆಸುವಂತೆ ಆದೇಶಿಸಿದರು. ನಮಾಝಿನ ನಂತರ ಮುಆಝ್(ರ) ಮರಳಿ ಬಂದಾಗ ಅವರ ಆತ್ಮವು ದೇಹದಿಂದ ಬೇರ್ಪಟ್ಟಿತ್ತು. ಮುಆಝ(ರ) ಎದ್ದು ನಿಂತು ಹೇಳಿದರು: “ಓ ಜನರೇ, ನೀವು ಒಬ್ಬ ಮನುಷ್ಯನ ಸಾವಿನಿಂದ ಬಳಲುತ್ತಿದ್ದೀರಿ. ಅಲ್ಲಾಹನಾಣೆ! ನಾನು ಅಬೂ ಉಬೈದ(ರ)ರಿಗಿಂತ ಹೆಚ್ಚು ನೀತಿವಂತ ಹೃದಯವನ್ನು ಹೊಂದಿರುವ, ಎಲ್ಲಾ ದುಷ್ಟರಿಂದಲೂ ದೂರವಿರುವ ಮತ್ತು ತನಗಿಂತಲೂ ಜನರಿಗೆ ಹೆಚ್ಚು ಪ್ರಾಮಾಣಿಕನಾಗಿರುವ ವ್ಯಕ್ತಿಯನ್ನು ನೋಡಿಲ್ಲ. ಅವರ ಮೇಲೆ ಕರುಣೆ ತೋರಲು ಅಲ್ಲಾಹನೊಡನೆ ಪ್ರಾರ್ಥಿಸಿರಿ.”
ಅಬೂ ಉಬೈದ(ರ) ಕ್ರಿ.ಶ. 639 ರಲ್ಲಿ ನಿಧನರಾದರು. ಅವರನ್ನು ಜಾಬಿಯಾದಲ್ಲಿ ದಫನ ಮಾಡಲಾಯಿತು.
ವ್ಯಕ್ತಿತ್ವ:
ಅವರ ರೂಪ ಗಮನಾರ್ಹವಾಗಿತ್ತು. ಅವರು ತೆಳ್ಳಗೆ ಎತ್ತರವಾಗಿದ್ದರು. ಅವರ ಮುಖವು ಪ್ರಕಾಶಮಾನವಾಗಿತ್ತು. ಅವರಿಗೆ ವಿರಳ ಗಡ್ಡವಿತ್ತು. ಅವರನ್ನು ನೋಡುವುದು ಸಂತೋಷದಾಯಕವೂ ಅವರನ್ನು ಭೇಟಿಯಾಗುವುದು ಆಹ್ಲಾದಕರವೂ ಆಗಿತ್ತು. ಅವರು ಅತ್ಯಂತ ವಿನಯಶೀಲ, ವಿನಮ್ರ ಮತ್ತು ಸಾಕಷ್ಟು ಸಂಕೋಚ ಸ್ವಭಾವದವರಾಗಿದ್ದರು. ಆದರೂ ಕಠಿಣ ಪರಿಸ್ಥಿತಿಯಲ್ಲಿ ಅವರು ಗಂಭೀರ ಮತ್ತು ಎಚ್ಚರವಾಗಿರುತ್ತಿದ್ದರು. ಅವರಿಗೆ ಪ್ರವಾದಿ(ಸ)ರವರು ‘ಸಮುದಾಯದ ವಿಶ್ವಸ್ಥ’ ಎಂಬ ಬಿರುದನ್ನು ನೀಡಿದ್ದರು.
ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಿದ್ದರು, “ಖುರೈಶ್ ಗೋತ್ರದ ಮೂವರು ವ್ಯಕ್ತಿಗಳು ಅತ್ಯಂತ ಪ್ರಮುಖರು, ಅತ್ಯುತ್ತಮ ಸ್ವಭಾವದವರು ಮತ್ತು ಅತ್ಯಂತ ಸಭ್ಯರು. ಅವರು ನಿಮ್ಮೊಂದಿಗೆ ಮಾತನಾಡಿದರೆ, ನಿಮ್ಮನ್ನು ಮೋಸಗೊಳಿಸುವುದಿಲ್ಲ ಮತ್ತು ನೀವು ಅವರೊಂದಿಗೆ ಮಾತನಾಡಿದರೆ, ಅವರು ನಿಮ್ಮ ಮೇಲೆ ಸುಳ್ಳು ಆರೋಪಿಸುವುದಿಲ್ಲ. ಅವರು ಅಬೂಬಕರ್(ರ), ಉಸ್ಮಾನ್ ಬಿನ್ ಅಫ್ಫಾನ್(ರ) ಮತ್ತು ಅಬೂ ಉಬೈದ(ರ).”
ಶಾಮ್‌ನ ಕ್ರೈಸ್ತರು ಅಬೂ ಉಬೈದ(ರ)ರಿಂದ ಬಹಳ ಪ್ರಭಾವಿತರಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಅವರು ಕಸೀನ್ ನಗರವನ್ನು ವಶಪಡಿಸಿಕೊಂಡ ನಂತರ ಕ್ರೈಸ್ತ ಬುಡಕಟ್ಟು ಜನಾಂಗದವರಾದ ಬನೂ ತನೂಖ್ ಮತ್ತು ಬನೂ ಸಲೀಜ್ ಸಂಪೂರ್ಣವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಸಿರಿಯಾದಲ್ಲಿ ತನ್ನ ಪ್ರಜೆಗಳಾಗಿ ವಾಸಿಸುವ ಮುಸ್ಲಿಮೇತರರಿಗೆ ಅಬೂ ಉಬೈದ(ರ) ಅನೇಕ ಕೊಡುಗೆಗಳನ್ನು ನೀಡಿದ್ದರು.