ಉಮ್ಮು ಸಲಮ(ರ) ರವರ ವಂಶಾವಳಿಯು ಏಳನೇ ಪಿತಾಮಹ ಮುರ್ರರಲ್ಲಿ ಪ್ರವಾದಿ(ಸ) ರೊಂದಿಗೆ ಸಂಧಿಸುತ್ತದೆ.
ಜನನ:
ಉಮ್ಮು ಸಲಮ(ರ) ರ ನಿಜವಾದ ಹೆಸರು ಹಿಂದ್. ಅವರು ಮಕ್ಕಾದಲ್ಲಿ ಹುಟ್ಟಿದರು ಮತ್ತು ಮಕ್ಕಾದಲ್ಲೇ ಬೆಳೆದರು. ಅವರು ಅತ್ಯಂತ ಬುದ್ಧಿವಂತೆ ಮತ್ತು ವಿದ್ಯಾವಂತೆಯಾಗಿದ್ದರು. ಅವರ ತಂದೆ ಅಬೂ ಉಮಯ್ಯ ಕುರೈಶರ ಮುಖಂಡರಲ್ಲಿ ಒಬ್ಬರಾಗಿದ್ದು ದೊಡ್ಡ ಶ್ರೀಮಂತರಾಗಿದ್ದರು. ಮಕ್ಕಾದ ಜನರು ಅವರನ್ನು ಝಾದು ರ್ರಾಕಿಬ್ ಎಂದು ಕರೆಯುತ್ತಿದ್ದರು. ಏಕೆಂದರೆ ಯಾವುದೇ ಪ್ರಯಾಣದಲ್ಲಿ ಅವರು ತಮ್ಮ ಸಂಗಡಿಗರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ತಾನೊಬ್ಬನೇ ಮಾಡುತ್ತಿದ್ದರು. ಅವರು ಅಷ್ಟೊಂದು ಉದಾರಿಯಾಗಿದ್ದರು. ಉಮ್ಮು ಸಲಮ(ರ) ಕೂಡ ಈ ಗುಣವನ್ನು ಜನ್ಮತಃ ಪಡೆದಿದ್ದರು. ದಾನ ಮಾಡುವುದರಲ್ಲಿ ಅವರು ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಿದ್ದರು.
ವಿವಾಹ:
ಉಮ್ಮು ಸಲಮ(ರ) ಮಕ್ಕಾದ ಅತ್ಯಂತ ಸಜ್ಜನ ವ್ಯಕ್ತಿಯಾಗಿದ್ದ ಅಬೂ ಸಲಮ ಬಿನ್ ಅಬ್ದುಲ್ ಅಸದ್ ಮಖ್ಝೂಮಿ(ರ) ಎಂಬವರನ್ನು ವಿವಾಹವಾದರು. ಇವರು ಪ್ರವಾದಿ(ರ) ರವರ ಅತ್ತೆ ಬರ್ರ ಬಿಂತ್ ಅಬ್ದುಲ್ ಮುತ್ತಲಿಬ್‌ರ ಮಗ. ಸ್ತನಪಾನ ಸಂಬಂಧದಲ್ಲಿ ಪ್ರವಾದಿ(ಜಿ) ರವರ ಸಹೋದರ. ಇವರಿಗೆ ಮತ್ತು ಪ್ರವಾದಿ(ಸ) ರಿಗೆ ಸುವೈಬ ಸ್ತನಪಾನ ಮಾಡಿದ್ದರು.
ಇಸ್ಲಾಂ ಸ್ವೀಕಾರ:
ಉಮ್ಮು ಸಲಮ(ರ) ಮತ್ತು ಅವರ ಗಂಡ ಅಬೂ ಸಲಮ(ರ) ಇಬ್ಬರೂ ಆರಂಭಕಾಲದಲ್ಲೇ ಇಸ್ಲಾಂ ಸ್ವೀಕರಿಸಿದ್ದರು. ಇಸ್ಲಾಂ ಸ್ವೀಕರಿಸಿದ ಬಳಿಕ ಇವರ ಕುಟುಂಬಗಳು ಇವರನ್ನು ದ್ವೇಷಿಸತೊಡಗಿದರು. ಅಷ್ಟೇ ಅಲ್ಲ, ವಲೀದ್ ಬಿನ್ ಮುಗೀರನಂತವರು ಇವರನ್ನು ಬಹಿರಂಗವಾಗಿ ಹಿಂಸಿಸತೊಡಗಿದರು. ಮಕ್ಕಾದಲ್ಲಿ ಕುರೈಶರ ಹಿಂಸೆ ಮಿತಿಮೀರಿದಾಗ ಪ್ರವಾದಿ(ಸ) ರವರು ಮುಸ್ಲಿಮರಿಗೆ ಅಬಿಸೀನಿಯಾಗೆ ವಲಸೆ ಹೋಗಲು ಆದೇಶಿಸಿದರು. ಇದರಂತೆ ಉಮ್ಮು ಸಲಮ(ರ) ಮತ್ತು ಅಬೂ ಸಲಮ(ರ) ಜೊತೆಯಾಗಿ ಅಬಿಸೀನಿಯಾಗೆ ವಲಸೆ ಹೋದರು. ಅಲ್ಲಿ ಅವರು ನೆಮ್ಮದಿಯಿಂದ ಜೀವನ ನಡೆಸಿದರು. ಅಬಿಸೀನಿಯಾದಲ್ಲೇ ಉಮ್ಮು ಸಲಮ(ರ) ಸಲಮ ಎಂಬ ಮಗುವಿಗೆ ಜನ್ಮ ನೀಡಿದರು. ಈ ಮಗುವಿನ ಕಾರಣದಿಂದಲೇ ತಂದೆ ತಾಯಿಗೆ ಅಬೂ ಸಲಮ ಮತ್ತು ಉಮ್ಮು ಸಲಮ ಎಂಬ ಹೆಸರು ಬಂತು.
ಮದೀನಕ್ಕೆ ಹಿಜ್ರ:
ಮಕ್ಕಾ ನಿವಾಸಿಗಳೆಲ್ಲರೂ ಇಸ್ಲಾಂ ಸ್ವೀಕರಿಸಿದರು ಎಂಬ ಮಿಥ್ಯವಾರ್ತೆಯು ಅಬೀಸೀನಿಯಾದಲ್ಲಿ ಹಬ್ಬಿದಾಗ ಅಲ್ಲಿಗೆ ವಲಸೆ ಬಂದ ಮುಸ್ಲಿಮರು ಸಂತೋಷದಿಂದ ಮಕ್ಕಾಗೆ ಮರಳಲು ನಿರ್ಧರಿಸಿದರು. ಉಮ್ಮು ಸಲಮ(ರ) ಮತ್ತು ಅಬೂ ಸಲಮ(ರ) ಕೂಡ ಇವರಲ್ಲಿದ್ದರು. ಆದರೆ ಮಕ್ಕಾದ ಪರಿಸ್ಥಿತಿ ಸ್ವಲ್ಪವೂ ಬದಲಾಗಿರಲಿಲ್ಲ. ಮಕ್ಕಾಗೆ ಹಿಂದಿರುಗಿದ ದಂಪತಿಗೆ ಆಘಾತ ಕಾದಿತ್ತು. ಮುಶ್ರಿಕರು ತಮ್ಮನ್ನು ಸುಮ್ಮನೆ ಬಿಡಲಾರರು ಎಂದು ಖಾತ್ರಿಯಾದಾಗ ಅಬೂ ಸಲಮ(ರ) ಮತ್ತು ಉಮ್ಮು ಸಲಮ(ರ) ನೇರವಾಗಿ ಅಬೂತಾಲಿಬರ ಬಳಿಗೆ ಹೋಗಿ ಆಶ್ರಯ ಕೇಳಿದರು. ಅಬೂ ತಾಲಿಬರು ಆಶ್ರಯ ನೀಡಿದರು. ಆದರೆ ಅಬೂ ತಾಲಿಬರ ಮರಣಾನಂತರ ಕುರೈಶರ ಹಿಂಸೆ ಪ್ರಾರಂಭಯಾಯಿತು. ಹಿಂಸೆ ಮಿತಿಮೀರಿದಾಗ ಕ್ರಿ.ಶ. 622ರಲ್ಲಿ ಮದೀನಕ್ಕೆ ಹಿಜ್ರ ಹೋಗಲು ಪ್ರವಾದಿ(ಸ) ರವರು ಮುಸಲ್ಮಾನರಿಗೆ ಆದೇಶಿಸಿದರು. ಅಬೂಸಲಮ(ರ) ಮತ್ತು ಉಮ್ಮು ಸಲಮ(ರ) ಜೊತೆಯಾಗಿ ಮದೀನಕ್ಕೆ ಹಿಜ್ರ ಮಾಡಲು ನಿರ್ಧರಿಸಿದರು. ಆದರೆ ಉಮ್ಮು ಸಲಮ(ರ) ರವರ ಕುಟುಂಬಿಕರು ಉಮ್ಮು ಸಲಮ(ರ) ರಿಗೆ ಹಿಜ್ರ ಮಾಡಲು ಬಿಡಲಿಲ್ಲ. ಪರಿಣಾಮವಾಗಿ ಅಬೂ ಸಲಮ(ರ) ಒಂಟಿಯಾಗಿ ಹಿಜ್ರ ಮಾಡಿದರು. ಅಬೂ ಸಲಮ(ರ) ರವರ ಕುಟುಂಬದವರು ಬಂದು ಉಮ್ಮು ಸಲಮ(ರ) ರ ಜೊತೆಗಿದ್ದ ಮಗುವನ್ನು ಕಿತ್ತುಕೊಂಡು ಹೋದರು. ಉಮ್ಮು ಸಲಮ(ರ) ಏಕಾಂಗಿಯಾದರು. ಗಂಡ ಮತ್ತು ಮಗುವನ್ನು ಕಳಕೊಂಡು ತೀವ್ರ ಸಂಕಟವನ್ನು ಅನುಭವಿಸುತ್ತಿದ್ದ ಉಮ್ಮು ಸಲಮ(ರ) ರನ್ನು ಕಂಡು ಅವರ ಕುಟುಂಬದವರ ಮನ ಕರಗಿತು. ಅವರು ಆಕೆಗೆ ಮದೀನಕ್ಕೆ ಹೋಗಲು ಅನುಮತಿ ನೀಡಿದರು. ಮಗುವನ್ನೂ ಆಕೆಯ ಕೈಗೆ ಒಪ್ಪಿಸಿದರು. ಉಮ್ಮು ಸಲಮ(ರ) ಒಂಟಿಯಾಗಿ ಮದೀನಕ್ಕೆ ಹೊರಟರು. ಮಗುವಲ್ಲದೆ ಇನ್ನಾರೂ ಜೊತೆಗಿರಲಿಲ್ಲ. ಆದರೆ ದಾರಿ ಮಧ್ಯೆ ಉಸ್ಮಾನ್ ಬಿನ್ ತಲ್ಹ ಅವರನ್ನು ಕಂಡು ಮದೀನಕ್ಕೆ ತಲುಪಿಸಿದರು.
ತಾನು ಮದೀನಕ್ಕೆ ಹಿಜ್ರ ಮಾಡಿದ ಘಟನೆಯನ್ನು ವಿವರಿಸುತ್ತಾ ಉಮ್ಮುಸಲಮ(ರ) ಹೇಳುತ್ತಾರೆ: ಅಬೂಸಲಮ(ರ) ಮದೀನಕ್ಕೆ ಹಿಜ್ರ ಹೋಗಲು ನಿರ್ಧರಿಸಿದರು. ನಂತರ ನನಗೊಂದು ಒಂಟೆಯನ್ನು ತಂದು ಕೊಟ್ಟು ನನ್ನನ್ನು ಮತ್ತು ನನ್ನ ಮಗನನ್ನು ಅದರಲ್ಲಿ ಕೂರಿಸಿದರು. ನಂತರ ಅದರ ಲಗಾಮನ್ನು ಹಿಡಿದು ನಡೆಯತೊಡಗಿದರು. ಹೀಗೆ ನಾವು ಮಕ್ಕಾದ ಹೊರವಲಯಕ್ಕೆ ಕಾಲಿಡುವಷ್ಟರಲ್ಲಿ ನನ್ನ ಗೋತ್ರದ ಕೆಲವು ಮಂದಿ ಬಂದು ನನ್ನ ಗಂಡನನ್ನು ತಡೆದು ಹೇಳಿದರು, ನಿನಗೆ ಬೇಕಾದಂತೆ ವರ್ತಿಸು, ಆದರೆ ನಿನ್ನ ಹೆಂಡತಿಯನ್ನು ಬಿಟ್ಟುಬಿಡು. ಅವಳು ನಮ್ಮ ಮಗಳು. ಅವಳನ್ನು ನಾವು ನಿನ್ನ ಜೊತೆಗೆ ಹೊರಡಲು ಬಿಡುವುದಿಲ್ಲ. ಹೀಗೆ ಅವರು ನನ್ನನ್ನು ಮತ್ತು ನನ್ನ ಮಗನನ್ನು ಎಳೆದುಕೊಂಡು ಹೋದರು. ಅಷ್ಟರಲ್ಲಿ ನನ್ನ ಗಂಡನ ಕಡೆಯವರು ಬಂದರು. ಅವರು ಕೋಪದಿಂದ ಕುದಿಯುತ್ತಿದ್ದರು. ಅವರು ನನ್ನ ಕೈಯಲ್ಲಿದ್ದ ಮಗುವನ್ನು ಕಿತ್ತುಕೊಂಡು ಹೇಳಿದರು, ಅಲ್ಲಾಹನಾಣೆ! ಇದು ನಮ್ಮ ಮಗು. ಇದನ್ನು ನಾವು ಬಿಟ್ಟುಕೊಡುವುದಿಲ್ಲ. ನಾನು ಒಂಟಿಯಾದೆ. ನನ್ನ ಗಂಡ ಮದೀನಕ್ಕೆ ಒಂಟಿಯಾಗಿ ಹೊರಟಿದ್ದರು. ನನ್ನ ಗಂಡನ ಕಡೆಯವರು ನನ್ನ ಮಗುವನ್ನು ಕಿತ್ತುಕೊಂಡು ಹೋದರು. ನನ್ನನ್ನು ನನ್ನ ಗೋತ್ರದವರು ಬಲವಂತದಿಂದ ಮನೆಗೆ ಒಯ್ದು ನಿರ್ಬಂಧದಲ್ಲಿಟ್ಟರು. ಅಂದಿನಿಂದ ನಾನು ಪ್ರತಿದಿನ ಆ ಘಟನೆ ನಡೆದ ಸ್ಥಳಕ್ಕೆ ತೆರಳಿ ಮುಸ್ಸಂಜೆಯ ತನಕ ಅಳುತ್ತಾ ಕೂರುತ್ತಿದ್ದೆ. ಇದು ಒಂದು ವರ್ಷದ ತನಕ ಮುಂದುವರಿಯಿತು. ಕೊನೆಗೆ ಬನೂ ಉಮಯ್ಯ ಗೋತ್ರಕ್ಕೆ ಸೇರಿದ ಒಬ್ಬ ವ್ಯಕ್ತಿ ನನ್ನ ಪರಿತಾಪಕರ ಸ್ಥಿತಿಯನ್ನು ಕಂಡು ನನ್ನ ಮನೆಯವರೊಡನೆ ಮಾತನಾಡಿದನು. ನೀವೇಕೆ ಈ ಹೆಣ್ಣಿಗೆ ಹಿಂಸೆ ಕೊಡುತ್ತೀರಿ? ಅವಳ ಗಂಡ ಮತ್ತು ಮಗನನ್ನು ಅವಳಿಂದ ದೂರ ಮಾಡಿ ಅವಳ ಜೀವನವನ್ನು ಏಕೆ ನರಳುವಂತೆ ಮಾಡುತ್ತೀರಿ? ನನ್ನ ಮನೆಯವರ ಮನ ಕರಗಿತು. ಹೋಗಿ ನಿನ್ನ ಗಂಡನನ್ನು ಸೇರಿಕೋ ಎಂದು ಹೇಳಿದರು. ಆದರೆ ಮಗುವನ್ನು ಬಿಟ್ಟು ಒಂಟಿಯಾಗಿ ಹೋಗಲು ನಾನು ಒಪ್ಪಲಿಲ್ಲ. ಹೀಗೆ ಪುನಃ ಜಟಾಪಟಿ ಉಂಟಾಯಿತು. ಕೊನೆಗೆ ಅವರು ಬನೂ ಅಸದ್ ಗೋತ್ರದವರ ಬಳಿಗೆ ಹೋಗಿ ಅವರ ಮನವೊಲಿಸಿ ಮಗುವನ್ನು ನನ್ನ ಕೈಗಿತ್ತರು. ಆದರೆ ಮದೀನಕ್ಕೆ ಹೋಗುವುದು ಹೇಗೆ? ಮಕ್ಕಾದಲ್ಲಿರುವ ಯಾರೂ ನನಗೆ ದಾರಿ ತೋರಿಸಲು ಅಥವಾ ನನ್ನೊಂದಿಗೆ ಪ್ರಯಾಣ ಮಾಡಲು ಒಪ್ಪಲಿಲ್ಲ. ಆದರೆ ನಾನು ಎದೆಗುಂದಲಿಲ್ಲ. ಮಗುವನ್ನು ಎತ್ತಿಕೊಂಡು ಒಂಟಿಯಾಗಿ ಮದೀನಕ್ಕೆ ಹೊರಟೆ. ನಾನು ತನ್‌ಈಮ್ ಎಂಬ ಸ್ಥಳಕ್ಕೆ ತಲುಪಿದಾಗ ಉಸ್ಮಾನ್ ಬಿನ್ ತಲ್ಹ (ಅವರು ಆಗ ಮುಸ್ಲಿಮರಾಗಿರಲಿಲ್ಲ) ನನ್ನನ್ನು ಭೇಟಿಯಾದರು. ಪ್ರಯಾಣದಲ್ಲಿ ನನ್ನ ಜೊತೆ ಯಾರೂ ಇಲ್ಲದ್ದನ್ನು ಕಂಡಾಗ ಅವರು ನನ್ನನ್ನು ಮದೀನಕ್ಕೆ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರಷ್ಟು ಉದಾರಿ ಮನೋಭಾವದ ವ್ಯಕ್ತಿಯನ್ನು ನಾನು ಕಂಡೇ ಇಲ್ಲ. ನಾವು ವಿಶ್ರಾಂತಿ ಪಡೆಯುವ ಸಮಯವಾಗುವಾಗ ಅವರು ನನ್ನ ಒಂಟೆಯನ್ನು ಮಂಡಿಯೂರಿಸಿ ನಾನು ಇಳಿಯುವ ತನಕ ಕಾಯುತ್ತಿದ್ದರು. ನಂತರ ಅದನ್ನು ಒಂದು ಮರಕ್ಕೆ ಕಟ್ಟಿ ದೂರ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು. ವಿಶ್ರಾಂತಿಯ ಬಳಿಕ ಅವರು ಪುನಃ ಒಂಟೆಯನ್ನು ತಂದು ಮಂಡಿಯೂರಿಸಿ ನಾನು ಕುಳಿತುಕೊಳ್ಳುವ ತನಕ ಕಾಯುತ್ತಿದ್ದರು. ನಂತರ ಅದನ್ನು ಮುನ್ನಡೆಸುತ್ತಿದ್ದರು. ಇದು ಪ್ರತಿದಿನ ಮುಂದುವರಿಯಿತು. ಕೊನೆಗೆ ನಾವು ಕುಬಾ ತಲುಪಿದಾಗ ಅವರು, ನಿನ್ನ ಗಂಡ ಈ ಊರಲ್ಲಿದ್ದಾರೆ. ಹೋಗಿ ಅವರನ್ನು ಸೇರಿಕೋ ಎನ್ನುತ್ತಾ ಮಕ್ಕಾಗೆ ಪ್ರಯಾಣ ಬೆಳೆಸಿದರು.
ಅಬೂ ಸಲಮ(ರ) ರವರ ಮರಣ:
ಅಬೂ ಸಲಮ(ರ) ಬದ್ರ್ ಮತ್ತು ಉಹುದ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಉಹುದ್ ಯುದ್ಧದಲ್ಲಿ ಅವರಿಗೆ ಗಾಯಗಳಾಗಿದ್ದವು. ಇದರ ನಂತರ ಪ್ರವಾದಿ(ಸ) ರವರು ಅವರನ್ನು ಬನೂ ಅಸದ್ ಗೋತ್ರದವರ ಸದ್ದಡಗಿಸಲು ಸೇನಾಪತಿಯಾಗಿ ನಿಯೋಗಿಸಿದರು. ಈ ಯುದ್ಧದಲ್ಲಿ ಅಬೂ ಸಲಮ ತೀವ್ರ ಸ್ವರೂಪದಲ್ಲಿ ಗಾಯಗೊಂಡರು. ಇದರ ನಂತರ ಕೆಲವೇ ಸಮಯದಲ್ಲಿ ಅವರು ಇಹಲೋಕಕ್ಕೆ ವಿದಾಯ ಕೋರಿದರು. ಯಾವುದೇ ದುರಂತ ಸಂಭವಿಸಿದರೂ ಒಬ್ಬ ಮುಸಲ್ಮಾನ, ಓ ಅಲ್ಲಾಹ್! ನನಗೆ ಸಂಭವಿಸಿದ ಈ ದುರಂತಕ್ಕೆ ಪ್ರತಿಫಲವನ್ನು ನೀಡು, ಈ ದುರಂತಕ್ಕಿಂತಲೂ ಉತ್ತಮವಾದುದನ್ನು ನನಗೆ ಬದಲಿಯಾಗಿ ನೀಡು ಎಂದು ಹೇಳಬೇಕು. ಅಬೂ ಸಲಮ(ರ) ನಿಧನರಾದಾಗ ಉಮ್ಮು ಸಲಮ(ರ) ಈ ಪ್ರಾರ್ಥನೆಯನ್ನು ಪಠಿಸಿದರು. ಆದರೆ ಅಬೂ ಸಲಮ(ರ)ರಿಗಿಂತ ಉತ್ತಮ ಗಂಡ ಯಾರಿದ್ದಾರೆ ಎಂದು ಉಮ್ಮು ಸಲಮ(ರ) ಸ್ವತಃ ಕೇಳಿದ್ದರು. ಆದರೆ ಅಲ್ಲಾಹು ಅವರ ಈ ಪ್ರಾರ್ಥನೆಯನ್ನು ಸ್ವೀಕರಿಸಿ ಅವರಿಗೆ ಪ್ರವಾದಿ ಮುಹಮ್ಮದ್(ಸ) ರನ್ನು ಜೀವನ ಸಂಗಾತಿಯಾಗಿ ನೀಡಿದನು.
ಪ್ರವಾದಿ(ರ) ರೊಂದಿಗೆ ವಿವಾಹ:
ಅಬೂ ಸಲಮ(ರ) ರ ನಿಧನದ ಬಳಿಕ ಒಂಟಿಯಾಗಿ ಬದುಕುತ್ತಿದ್ದ ಉಮ್ಮು ಸಲಮ(ರ) ರ ಬಳಿಗೆ ಅಬೂಬಕ(ರ) ರವರು ವಿವಾಹ ಪ್ರಸ್ತಾಪ ಕಳುಹಿಸಿದರು. ಆದರೆ ಉಮ್ಮು ಸಲಮ(ರ) ಅವರನ್ನು ವಿವಾಹವಾಗಲು ನಿರಾಕರಿಸಿದರು. ನಂತರ ಉಮರ್(ರ) ವಿವಾಹ ಪ್ರಸ್ತಾಪದೊಂದಿಗೆ ಬಂದರು. ಆದರೆ ಅವರು ಅದನ್ನೂ ನಿರಾಕರಿಸಿದರು. ನಂತರ ಪ್ರವಾದಿ(ಸ) ರವರು ಅವರಿಗೆ ವಿವಾಹ ಪ್ರಸ್ತಾಪವನ್ನು ಕಳುಹಿಸಿದರು. ಉಮ್ಮು ಸಲಮ(ರ) ಹೇಳಿ ಕಳುಹಿಸಿದರು, ನನಗೆ ಮೂರು ಕೊರತೆಗಳಿವೆ. ಒಂದು ನನಗೆ ಸಿಟ್ಟು ಬರುವುದು ಬೇಗ, ಇನ್ನೊಂದು ತಾನು ಈಗ ಯೌವನದಲ್ಲಿಲ್ಲ ಮತ್ತು ಮೂರನೆಯದು ತನಗೆ ಅನೇಕ ಮಕ್ಕಳಿದ್ದಾರೆ. ಪ್ರವಾದಿ(ಸ) ರವರು ಉತ್ತರ ಕಳುಹಿಸಿದರು, ನಿಮ್ಮ ಸಿಟ್ಟಿಗೆ ನಾನು ಅಲ್ಲಾಹನಲ್ಲಿ ಅದನ್ನು ನಿವಾರಿಸಿಕೊಡಲು ಪ್ರಾರ್ಥಿಸುತೇನೆ, ನಿಮ್ಮ ವಯಸ್ಸು ನನಗೆ ಅಡ್ಡಿಯಲ್ಲ ಮತ್ತು ನಿಮ್ಮ ಮಕ್ಕಳಿಗೆ ಒಬ್ಬ ಪೋಷಕನಾಗುವ ಉದ್ದೇಶದಿಂದಲೇ ನಾನು ಈ ವಿವಾಹಕ್ಕೆ ಮುಂದಾಗಿದ್ದೇನೆ. ಉಮ್ಮು ಸಲಮ(ಸ) ಸಂತೋಷದಿಂದ ಒಪ್ಪಿಕೊಂಡರು. ಹೀಗೆ ಹಿ.ಶ. 4 ಶವ್ವಾಲ್ ತಿಂಗಳಲ್ಲಿ ಅವರಿಬ್ಬರ ವಿವಾಹ ನಡೆಯಿತು.
ಯುದ್ಧಗಳು:
ಉಮ್ಮು ಸಲಮ(ಸ) ಖಂದಕ್, ಬನೂ ಮುಸ್ತಲಕ್, ಖೈಬರ್, ತಾಇಫ್, ಹುನೈನ್, ಮಕ್ಕಾ ಫತ್ಹ್ ಮುಂತಾದ ಯುದ್ಧಗಳಲ್ಲಿ ಪ್ರವಾದಿ(ಸ) ರೊಂದಿಗೆ ಇದ್ದರು. ಹುದೈಬಿಯಾ ಒಪ್ಪಂದದ ಸಂದರ್ಭದಲ್ಲೂ ಅವರು ಪ್ರವಾದಿ(ಸ) ರವರ ಜೊತೆಗಿದ್ದರು. ಒಪ್ಪಂದದ ಬಳಿಕ ಪ್ರವಾದಿ(ಸ) ರವರು ಸಹಾಬಿಗಳೊಂದಿಗೆ ಮೃಗವನ್ನು ಬಲಿ ನೀಡಿ ತಲೆ ಬೋಳಿಸಲು ಹೇಳಿದಾಗ, ಒಪ್ಪಂದದ ಷರತ್ತುಗಳಿಂದ ಮನನೊಂದ ಸಹಾಬಿಗಳು ಅದಕ್ಕೆ ಮುಂದಾಗಲಿಲ್ಲ. ಪ್ರವಾದಿ(ಸ) ರವರು ಬೇಸರದಿಂದ ಉಮ್ಮು ಸಲಮ() ರವರ ಬಳಿಗೆ ಬಂದು ವಿಷಯ ತಿಳಿಸಿದಾಗ ಉಮ್ಮು ಸಲಮ) ಹೇಳಿದರು, ಓ ಪ್ರವಾದಿಯವರೇ, ಅವರು ನೀವು ಹೇಳಿದಂತೆ ಕೇಳಬೇಕೆಂಬ ಆಸೆ ನಿಮಗಿದ್ದರೆ ನೀವು ಏನೂ ಮಾತನಾಡದೆ ನೇರವಾಗಿ ಹೋಗಿ ನಿಮ್ಮ ಮೃಗವನ್ನು ಬಲಿ ನೀಡಿ ತಲೆಯನ್ನು ಬೋಳಿಸಿ ಬಿಡಿ. ಆಗ ಅವರು ಮರು ಮಾತಿಲ್ಲದೆ ನಿಮ್ಮನ್ನು ಅನುಸರಿಸುತ್ತಾರೆ. ಪ್ರವಾದಿ(ಸ)ರವರು ನೇರವಾಗಿ ಹೋಗಿ ಮೃಗವನ್ನು ಬಲಿ ಅರ್ಪಿಸಿ ತಲೆ ಬೋಳಿಸಿದರು. ಇದನ್ನು ಕಂಡು ಸಹಾಬಿಗಳೆಲ್ಲರೂ ಬಲಿ ಅರ್ಪಿಸಿ ತಲೆ ಬೋಳಿಸತೊಡಗಿದರು. ಇಬ್ನ್ ಹಜರ್ ಅಸ್ಕಲಾನಿ ಹೇಳುತ್ತಾರೆ- ಈ ಘಟನೆಯು ಉಮ್ಮು ಸಲಮ(ರ) ರವರ ತೀಕ್ಷ್ಯ ಬುದ್ಧಿಶಕ್ತಿ ಮತ್ತು ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಚಾಣಾಕ್ಷತೆಯನ್ನು ತೋರಿಸುತ್ತದೆ.
ಹದೀಸ್ ವರದಿ:
ಉಮ್ಮು ಸಲಮ(ರ) 387 ಹದೀಸ್‌ಗಳನ್ನು ವರದಿ ಮಾಡಿದ್ದಾರೆ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಮುಂತಾದ ಖ್ಯಾತ ಸಹಾಬಿಗಳು ಅವರ ಬಳಿಗೆ ಬಂದು ಅನೇಕ ವಿಷಯಗಳ ಬಗ್ಗೆ ವಿಚಾರಿಸುತ್ತಿದ್ದರು.
ಮರಣ:
ಉಮ್ಮು ಸಲಮ(ರ) ಹಿ.ಶ. 62ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಅವರನ್ನು ಬಕೀಅ್ ಕಬರಸ್ಥಾನದಲ್ಲಿ ಪ್ರವಾದಿ(ಸ) ರವರ ಇತರ ಪತ್ನಿಯರ ಬಳಿ ದಫನ ಮಾಡಲಾಯಿತು.