ಇವರ 10ನೇ ಪಿತಾಮಹ ಅಬ್ದುಮನಾಫ್‌ರಲ್ಲಿ ಇವರ ವಂಶ ಪ್ರವಾದಿ(ಸ)ರವರ ವಂಶದೊಂದಿಗೆ ಸೇರುತ್ತದೆ.
ಜನನ ಮತ್ತು ಬೆಳವಣಿಗೆ:
ಇಮಾಂ ಶಾಫಿಈ ಹಿ.ಶ. 150 ರಲ್ಲಿ ಪ್ಯಾಲಸ್ತೀನ್‌ನ ಗಾಝಾದಲ್ಲಿ ಜನಿಸಿದರು. ಅವರು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಶಿಶುವಾಗಿರುವಾಗಲೇ ತಂದೆಯನ್ನು ಕಳಕೊಂಡರು. ತಾಯಿಯ ಆಶ್ರಯದಲ್ಲಿ ಪ್ಯಾಲಸ್ತೀನಿನ ಯಮನ್ ಗೋತ್ರವಾಸಿಗಳ ನಡುವೆ ಬೆಳೆದರು. ಇಮಾಂ ಶಾಫಿಈ(ರ) ಕುರೈಶಿ ವಂಶದವರು. ಆದ್ದರಿಂದ ಅವರು ತಮ್ಮ ಗೌರವಾನ್ವಿತ ವಂಶಾವಳಿಯನ್ನು ಕಳೆದುಕೊಳ್ಳುವರೋ ಎಂಬ ಭಯದಿಂದ ಅವರ ತಾಯಿ ಅವರೊಂದಿಗೆ ಮಕ್ಕಾಗೆ ತೆರಳಿದರು. ಆಗ ಇಮಾಂ ಶಾಫಿಈಯವರಿಗೆ ಎರಡು ವರ್ಷ ಪ್ರಾಯ.
ಅವರು ಮಕ್ಕಾದಲ್ಲಿ ತಮ್ಮ ಸಂಬಂಧಿಕರ ನಡುವೆ ವಾಸಿಸಿ, ಅವರ ಸಂಸ್ಕೃತಿಯ ಬಗ್ಗೆ ಕಲಿತು, ಆ ಸಂಸ್ಕತಿಯಲ್ಲೇ ಬೆಳೆದು ದೊಡ್ಡದಾಗಬೇಕೆಂಬ ಉದ್ದೇಶವೂ ತಾಯಿಗಿತ್ತು. ಇಮಾಂ ಶಾಫಿಈ(ರ) ವಂಶಾವಳಿ ಉನ್ನತ ಮತ್ತು ಗೌರವಾನ್ವಿತವಾಗಿದ್ದರೂ ಸಹ ಅವರು ಮಕ್ಕಾದಲ್ಲಿ ಬಡ ಅನಾಥ ಮಕ್ಕಳಂತೆಯೇ ಬದುಕಿದರು. ಇದು ಅವರ ಜೀವನ ಮತ್ತು ಸ್ವಭಾವದ ಮೇಲೆ ಬಹಳ ಪ್ರಭಾವ ಬೀರಿತು.
ವಿದ್ಯಾಭ್ಯಾಸ:
ಇಮಾಂ ಶಾಫಿಈ(ರ) ರವರ ಕುಟುಂಬದಲ್ಲಿ ತೀವ್ರ ಬಡತನ ಕಾಡುತ್ತಿತ್ತು. ಆದರೂ ಅವರು ವಿದ್ಯೆ ಸಂಪಾದಿಸುವುದರ ಮೇಲೆ ಹೆಚ್ಚಾಗಿ ಗಮನಹರಿಸಿದರು. ಬಡತನ ಎಷ್ಟು ತೀವ್ರವಾಗಿತ್ತೆಂದರೆ, ವಿದ್ಯಾಭ್ಯಾಸಕ್ಕಾಗಿ ಕಾಗದವನ್ನು ಖರೀದಿಸಲು ಸಹ ಅವರ ತಾಯಿಯ ಬಳಿ ಹಣವಿರಲಿಲ್ಲ, ಆದ್ದರಿಂದ ಅವರು ಎಲ್ಲಾ ಪಾಠಗಳನ್ನು ಪ್ರಾಣಿಗಳ ಮೂಳೆಗಳ ಮೇಲೆ ಬರೆಯುತ್ತಿದ್ದರು.
ಇಮಾಂ ಶಾಫಿಈ(ರ) ಏಳರ ಹರೆಯದಲ್ಲೇ ಪವಿತ್ರ ಕುರ್‌ಆನನ್ನು ಸಂಪೂರ್ಣ ಕಂಠಪಾಠ ಮಾಡಿದರು. ಇದು ಅವರ ಬುದ್ಧಿವಂತಿಕೆ ಮತ್ತು ಅವರ ಜ್ಞಾಪಕ ಶಕ್ತಿಯನ್ನು ಸೂಚಿಸುತ್ತದೆ. ನಂತರ ಅವರು ಪ್ರವಾದಿ(ಸ)ಯವರ ಹದೀಸನ್ನು ಕಂಠಪಾಠ ಮಾಡಲು ತೊಡಗಿದರು. ಅವರು ಇಮಾಮ್ ಮಾಲಿಕ್(ರ)ರ ಮುವತ್ತವನ್ನು ಕಂಠಪಾಠ ಮಾಡಿದರು. ಆ ಕಾಲದಲ್ಲಿ ಮುವತ್ತ ಅತಿ ಶ್ರೇಷ್ಠ ಹದೀಸ್ ಗ್ರಂಥವಾಗಿತ್ತು. ಅವರು ಹೇಳುತ್ತಾರೆ: “ನಾನು ಏಳರ ಹರೆಯದಲ್ಲಿ ಕುರ್‌ಆನನ್ನು ಕಂಠಪಾಠ ಮಾಡಿದೆ ಮತ್ತು ಹತ್ತರ ಹರೆಯದಲ್ಲಿ ಮುವತ್ತವನ್ನು ಕಂಠಪಾಠ ಮಾಡಿದೆ.”
ಪವಿತ್ರ ಕುರ್‌ಆನ್ ಮತ್ತು ಪ್ರವಾದಿ(ಸ)ರ ಹದೀಸ್‌ಗಳನ್ನು ಕಂಠಪಾಠ ಮಾಡುವುದರ ಜೊತೆಗೆ, ಇಮಾಂ ಶಾಫಿಈ ಅರೇಬಿಕ್ ಭಾಷೆಯನ್ನು ಆಳವಾಗಿ ಮತ್ತು ವಿಸ್ತಾರವಾಗಿ ಕಲಿಯಲು ಒಲವು ತೋರಿದರು. ಅದಕ್ಕಾಗಿ ಅವರು ಮರುಭೂಮಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ಹುಝೈಲ್ ಬುಡಕಟ್ಟು ಜನಾಂಗದವರ ಜೊತೆ ವಾಸಿಸಿದರು.
ಇಮಾಂ ಶಾಫಿಈ(ರ) ಹೇಳುತ್ತಾರೆ: “ನಾನು ಮಕ್ಕಾವನ್ನು ತೊರೆದು ಮರುಭೂಮಿಯಲ್ಲಿ ಹುಝೈಲ್ ಗೋತ್ರದವರ ಜೊತೆಗೆ ವಾಸಿಸುತ್ತಿದ್ದೆ. ಅವರ ಮಾತುಗಳನ್ನು ಕಲಿಯುತ್ತಿದ್ದೆ. ಅವರ ಗುಣಗಳನ್ನು ಅಭ್ಯಸಿಸುತ್ತಿದ್ದೆ. ಅವರು ಅರಬ್ಬರಲ್ಲಿ ಅತ್ಯಂತ ಸ್ಫುಟವಾಗಿ ಮತ್ತು ನಿರರ್ಗಳವಾಗಿ ಮಾತನಾಡುವವರು. ಅವರು ಹೊರಡುವಾಗ ನಾನೂ ಅವರ ಜೊತೆಗೆ ಹೊರಡುತ್ತಿದ್ದೆ. ಅವರು ಹಿಂದಿರುಗುವಾಗ ನಾನೂ ಹಿಂದಿರುಗುತ್ತಿದ್ದೆ. ನಾನು ಅಲ್ಲಿಂದ ಮಕ್ಕಾಗೆ ಮರಳಿದ ಬಳಿಕ ಕವಿತೆಗಳನ್ನು ರಚಿಸಲು, ಶಿಷ್ಟಾಚಾರ ಮತ್ತು ವಾರ್ತೆಗಳನ್ನು ಹೇಳಲು ತೊಡಗಿದೆ.”
ಹುಝೈಲಿ ಜನಾಂಗದವರ ಕವಿತೆ ಮತ್ತು ವಾರ್ತೆಗಳನ್ನು ಅವರು ಎಷ್ಟರಮಟ್ಟಿಗೆ ಕಂಠಪಾಠ ಮಾಡಿದರೆಂದರೆ ಭಾಷಾಶಾಸ್ತ್ರದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದ ಅಲ್ಅಸ್ಮಈ ಹೇಳುತ್ತಿದ್ದರು: “ನಾನು ಮುಹಮ್ಮದ್ ಬಿನ್ ಇದ್ರೀಸ್ (ಇಮಾಂ ಶಾಫಿಈ) ಎಂಬ ಖುರೈಶಿ ಯುವಕನ ಮೂಲಕ ನನಗೆ ತಿಳಿದಿದ್ದ ಹುಝೈಲ್ ಕವಿತೆಗಳನ್ನು ತಿದ್ದುತ್ತಿದ್ದೆ.”
ಮರಳಿ ಮಕ್ಕಾಗೆ:
ಇಮಾಂ ಶಾಫಿಈ(ರ) ಹುಝೈಲ್ ಗೋತ್ರದವರ ಬಳಿಯಿಂದ ಮಕ್ಕಾಗೆ ಹಿಂದಿರುಗಿದ ನಂತರ, ಅಲ್ಲಿನ ಕರ್ಮಶಾಸ್ತ್ರಜ್ಞರು ಮತ್ತು ಹದೀಸ್ ವಿದ್ವಾಂಸರಿಂದ ಜ್ಞಾನ ಪಡೆಯುವುದನ್ನು ಮುಂದುವರೆಸಿದರು. ಅವರು ಎಷ್ಟರಮಟ್ಟಿಗೆ ಪಾಂಡಿತ್ಯ ಪಡೆದುಕೊಂಡರೆಂದರೆ ಮಕ್ಕಾದ ಮುಫ್ತಿ ಮುಸ್ಲಿಂ ಬಿನ್ ಖಾಲಿದ್ ಅಝ್ಝಂಜಿ ಅವರಿಗೆ ಫತ್ವಾಗಳನ್ನು ನೀಡುವ ಅಧಿಕಾರವನ್ನು ನೀಡಿದರು! ಮುಸ್ಲಿಂ ಬಿನ್ ಖಾಲಿದ್ ಅಝ್ಝಂಜಿ ಹೇಳಿದರು: “ಓ ಅಬೂ ಅಬ್ದುಲ್ಲಾ! ಫತ್ವಾ ನೀಡಿರಿ. ತಮಗೆ ಫತ್ವಾ ನೀಡುವ ಅಧಿಕಾರ ಬಂದಿದೆ.” ಆಗ ಇಮಾಂ ಶಾಫಿಈಯವರಿಗೆ ಕೇವಲ 14 ಅಥವಾ 15 ವರ್ಷ ಪ್ರಾಯ.
ಮದೀನಕ್ಕೆ ಪ್ರಯಾಣ:
ಮದೀನಾದ ಇಮಾಮ್ ಮಾಲಿಕ್ ಬಿನ್ ಅನಸ್ ಜ್ಞಾನ ಮತ್ತು ಹದೀಸ್‌ನಲ್ಲಿ ಉನ್ನತ ದರ್ಜೆಯನ್ನು ತಲುಪಿ ಅವರ ಹೆಸರು ದಿಗಂತಗಳಲ್ಲಿ ಹರಿದಾಡಿದಾಗ, ಅವರಿಂದ ಜ್ಞಾನ ಪಡೆಯಲು ಮದೀನಾಕ್ಕೆ ವಲಸೆ ಹೋಗಬೇಕೆಂಬ ಆಸೆ ಇಮಾಂ ಶಾಫಿಈಯವರಿಗೆ ಉಂಟಾಯಿತು.
ಇಮಾಮ್ ಶಾಫಿಈ ಹೇಳುತ್ತಾರೆ, “ನಾನು ಸುಮಾರು ಹದಿನಾಲ್ಕು ವರ್ಷದವನಿದ್ದಾಗ ಮಕ್ಕಾವನ್ನು ತೊರೆದೆ. ಮದೀನಕ್ಕೆ ತೆರಳುತ್ತಿದ್ದ ಒಬ್ಬ ವೃದ್ದ ನನ್ನನ್ನು ಮದೀನಾಕ್ಕೆ ಕರೆದೊಯ್ದನು. ಮದೀನಾದ ದಾರಿಯಲ್ಲಿ ನಾನು 16 ಬಾರಿ ಸಂಪೂರ್ಣ ಕುರ್‌ಆನನ್ನು ಪಾರಾಯಣ ಮಾಡಿ ಮುಗಿಸಿದೆ. ಎಂಟನೇ ದಿನ ಝುಹರ್ ನಮಾಝಿನ ನಂತರ ನಾನು ಮದೀನಾ ಪ್ರವೇಶಿಸಿದೆ. ನೇರವಾಗಿ ಮದೀನಾ ಮಸೀದಿಗೆ ಹೋದೆ. ಅಲ್ಲಿ ಇಮಾಂ ಮಲಿಕ್ ಬಿನ್ ಅನಸ್ ಹದೀಸ್ ಓದಿಕೊಡುತ್ತಿದ್ದರು.”
ಇಮಾಮ್ ಶಾಫಿಈ ಹೇಳುತ್ತಾರೆ, “ನಾನು ಇಮಾಂ ಮಾಲಿಕ್ ಬಳಿ ಹೋದೆ. ನನಗೆ ಮುವತ್ತ ಸಂಪೂರ್ಣ ಕಂಠಪಾಠವಿತ್ತು. ನನ್ನನ್ನು ನೋಡಿ ಅವರು ಹೇಳಿದರು: “ನಿಮಗೆ ಓದಿಕೊಡುವ ವ್ಯಕ್ತಿಯನ್ನು ತನ್ನಿ.” ನಾನು ಹೇಳಿದೆ: “ನಾನೇ ಓದುತ್ತೇನೆ.” ನಾನು ಮುವತ್ತವನ್ನು ಕಂಠಪಾಠದಿಂದಲೇ ಓದಿದೆ. ಆಗ ಅವರು ಅಚ್ಚರಿಯಿಂದ ಹೇಳಿದರು: “ಯಾರಾದರೂ ಯಶಸ್ವಿಯಾಗುವುದಾದರೆ ಅದು ಈ ಹುಡುಗನಾಗಿದ್ದಾನೆ.”
ಹಿ. 179 ರಲ್ಲಿ ಇಮಾಂ ಮಾಲಿಕ್ ನಿಧನರಾಗುವ ತನಕ ಇಮಾಂ ಶಾಫಿಈ ಅಲ್ಲೇ ಉಳಿದು ಜ್ಞಾನ ಸಂಪಾದಿಸಿದರು. ನಂತರ ಅಲ್ಲಿಂದ ತಮ್ಮ ಜೀವನೋಪಾಯವನ್ನು ಅರಸುತ್ತಾ ಯಮನ್‌ಗೆ ಹೊರಟರು.
ಯಮನ್‌ನಲ್ಲಿ:
30 ನೇ ವಯಸ್ಸಿನಲ್ಲಿ, ಇಮಾಂ ಶಾಫಿಈ ಯಮನ್‌ನ ನಜ್ರಾನ್‌ನಲ್ಲಿ ಅಬ್ಬಾಸಿ ಖಲೀಫರ ರಾಜ್ಯಪಾಲರಾಗಿ ನೇಮಕಗೊಂಡರು. ಅವರು ಉತ್ತಮ ಆಡಳಿತಗಾರರಾಗಿ ಹೆಸರು ಗಳಿಸಿದರು.
ಬಗ್ದಾದಿಗೆ ಪ್ರಯಾಣ:
ಆಗ ಯಮನ್‌ನಲ್ಲಿ ಒಬ್ಬ ದುಷ್ಟ ರಾಜ್ಯಪಾಲರಿದ್ದರು. ಇಮಾಮ್ ಶಾಫಿಈ ಅವರಿಗೆ ಉಪದೇಶ ನೀಡುತ್ತಿದ್ದರು ಮತ್ತು ಅನ್ಯಾಯ ಮಾಡದಂತೆ ತಡೆಯುತ್ತಿದ್ದರು. ಇಮಾಂ ಶಾಫಿಈ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುವುದು ಅವರಿಗೆ ಹಿಡಿಸಲಿಲ್ಲ. ಅವರು ಒಳಸಂಚು, ಅಪಪ್ರಚಾರ ಮತ್ತು ಅವಹೇಳನದ ಮೂಲಕ ಇಮಾಮರ ಬಾಯಿ ಮುಚ್ಚಿಸಲು ಹವಣಿಸುತ್ತಿದ್ದರು.
ಆ ಕಾಲದಲ್ಲಿ ಹಾರೂನ್ ರಶೀದ್ ಖಲೀಫರಾಗಿದ್ದರು.
ಅವರು ಅಬ್ಬಾಸಿ ವಂಶದವರು. ಅಬ್ಬಾಸಿಗಳಿಗೆ ಮತ್ತು ಅಲವಿಗಳಿಗೆ (ಅಲೀ ವಂಶದವರು) ಸರಿಹೋಗುತ್ತಿರಲಿಲ್ಲ. ಇಮಾಂ ಶಾಫಿಈ ಅಲವಿ ವಂಶದವರು. ಆದ್ದರಿಂದ ಇಮಾಂ ಶಾಫಿಈಯವರು ಸೇರಿದಂತೆ ಸುಮಾರು ಹತ್ತರಷ್ಟು ಅಲವಿ ವಂಶಸ್ತರು ಖಲೀಫರ ವಿರುದ್ಧ ದಂಗೆ ಏಳಲು ಸಿದ್ಧತೆ ನಡೆಸುತ್ತಿದ್ದಾರೆಂದು ಯಮನ್ ರಾಜ್ಯಪಾಲರು ಖಲೀಫರಿಗೆ ಸುಳ್ಳು ದೂರು ಕೊಟ್ಟರು.
ಖಲೀಫ ಇಮಾಮರನ್ನು ಬಗ್ದಾದಿಗೆ ಕರೆಸಿದರು. ಇಮಾಂ ಶಾಫಿಈಯವರನ್ನು ಬಿಟ್ಟು ಉಳಿದವರನ್ನು ಅಲ್ಲಿ ಗಲ್ಲಿಗೇರಿಸಲಾಯಿತು. ಇಮಾಮರು ತಮ್ಮ ವಾಕ್ಚಾತುರ್ಯದ ಮೂಲಕ ಮರಣದಂಡನೆಯಿಂದ ಪಾರಾದರೆಂದು ಹೇಳಲಾಗುತ್ತದೆ. ಅದೇ ರೀತಿ ಇಮಾಂ ಅಬೂ ಹನೀಫರವರ ಶಿಷ್ಯ ಮುಹಮ್ಮದ್ ಬಿನ್ ಹಸನ್ ಶೈಬಾನಿಯವರ ಶಿಫಾರಸ್ಸಿನ ಮೂಲಕ ಪಾರಾದರೆಂದೂ ಹೇಳಲಾಗುತ್ತದೆ. ಏನೇ ಆದರೂ ಈ ಘಟನೆ ಇಮಾಂ ಶಾಫಿಈಯವರ ಪಾಲಿಗೆ ವರದಾನವಾಗಿತ್ತು. ಏಕೆಂದರೆ ಅವರು ಬಗ್ದಾದಿನಲ್ಲಿ ನೆಲೆಸಿ ಇರಾಕಿ ಕರ್ಮಶಾಸ್ತ್ರವನ್ನು ಅಭ್ಯಾಸ ಮಾಡಿದರು. ಆ ಕಾಲದಲ್ಲಿ ಹಿಜಾಮ್‌ನಲ್ಲಿ ಇಮಾಮ್ ಮಾಲಿಕ್‌ರವರ ಕರ್ಮಶಾಸ್ತ್ರ ಮತ್ತು ಇರಾಕಿನಲ್ಲಿ ಅಬೂ ಹನೀಫರವರ ಕರ್ಮಶಾಸ್ತ್ರ ಎರಡು ಪ್ರಸಿದ್ಧ ಕರ್ಮಶಾಸ್ತ್ರಗಳಾಗಿದ್ದವು. ಇಮಾಂ ಶಾಫಿಈ ಎರಡೂ ಕರ್ಮಶಾಸ್ತ್ರಗಳನ್ನು ಆಳವಾಗಿ ಕಲಿತರು. ಇಮಾಮರು ಬಗ್ದಾದಿಗೆ ಬಂದದ್ದು ಹಿ. 184ರಲ್ಲಿ. ಆಗ ಅವರಿಗೆ 34 ವರ್ಷ ಪ್ರಾಯವಾಗಿತ್ತು.
ಮರಳಿ ಮಕ್ಕಾಗೆ:
ನಂತರ ಇಮಾಂ ಶಾಫಿಈ ಮಕ್ಕಾಗೆ ಹಿಂದಿರುಗಿದರು. ಹಿಂದಿರುಗುವಾಗ ಹನಫೀ ಕರ್ಮಶಾಸ್ತ್ರದ ದೊಡ್ಡ ಪುಸ್ತಕ ಭಂಡಾರವೇ ಅವರಲ್ಲಿತ್ತು. ಅವರು ಹರಂ ಮಸೀದಿಯಲ್ಲಿ ಕಲಿಸಲು ಪ್ರಾರಂಭಿಸಿದರು. ಹಜ್ ಋತುವಿನಲ್ಲಿ ಅವರನ್ನು ಹಿರಿಯ ವಿದ್ವಾಂಸರು ಭೇಟಿಯಾಗಿ, ಅವರಿಂದ ಹದೀಸ್ ಆಲಿಸುತ್ತಿದ್ದರು. ಆ ಕಾಲದಲ್ಲಿ ಇಮಾಂ ಅಹ್ಮದ್ ಬಿನ್ ಹಂಬಲ್ ಅವರನ್ನು ಭೇಟಿಯಾದರು.
ಇಮಾಂ ಶಾಫಿಈಯವರ ಫಿಕ್ಹ್ ವಿಶೇಷ ರೀತಿಯಲ್ಲಿತ್ತು. ಅದು ಕೇವಲ ಮದೀನದ ಫಿಕ್ಹ್ ಆಗಿರಲಿಲ್ಲ. ಅದೇ ರೀತಿ ಕೇವಲ ಇರಾಕಿನ ಫಿಕ್ಹ್ ಆಗಿರಲಿಲ್ಲ. ಬದಲಾಗಿ, ಅದು ಎರಡು ಫಿಕ್ಹ್ ಗಳ ಮಿಶ್ರಣವೂ, ಇಮಾಮರ ಬುದ್ಧಿಮತ್ತೆಯ ಸಾರಾಂಶವೂ ಆಗಿತ್ತು. ಅದರಲ್ಲಿ ಕುರ್‌ಆನ್ ಮತ್ತು ಸುನ್ನತ್‌ನ ಜ್ಞಾನ, ಅರೇಬಿಕ್ ಜ್ಞಾನ, ಕಿಯಾಸ್ ಮತ್ತು ಅಭಿಪ್ರಾಯಗಳು ಎಲ್ಲವೂ ಇದ್ದವು.
ಇಮಾಂ ಶಾಫಿಈ ಮಕ್ಕಾದಲ್ಲಿ 9 ವರ್ಷ ತಂಗಿದರು. ಅವರು ತಮ್ಮದೇ ಆದ ಹೊಸ ಫಿಕ್ಹ್ ನಿಯಮಗಳನ್ನು ರಚಿಸಿದರು. ಇದು ತದನಂತರ ಶಾಫಿಈ ಕರ್ಮಶಾಸ್ತ್ರ ಎಂಬ ಹೆಸರಲ್ಲಿ ಖ್ಯಾತವಾಯಿತು.
ಎರಡನೇ ಸಲ ಬಗ್ದಾದಿಗೆ:
ಹಿ. 195 ರಲ್ಲಿ ಅವರು ಪುನಃ ಬಗ್ದಾದಿಗೆ ಪ್ರಯಾಣ ಮಾಡಿದರು. ಅಲ್ಲಿ ಅವರು ಕರ್ಮಶಾಸ್ತ್ರದ ಮೂಲತತ್ವಗಳನ್ನು ಹೊಂದಿರುವ ‘ರಿಸಾಲ’ ಎಂಬ ಕೃತಿ ರಚನೆಯಲ್ಲಿ ತೊಡಗಿದರು. ಯುವಕರಾದ ಅಬ್ದುರಹ್ಮಾನ್ ಬಿನ್ ಮಹಿ ಇಮಾಂ ಶಾಫಿಈಯವರೊಂದಿಗೆ, ಕುರ್‌ಆನ್, ಸುನ್ನತ್, ಇಜ್ಮಾಅ್, ಕಿಯಾಸ್, ನಾಸಿಖ್-ಮನ್ಸೂಖ್, ಆಮ್ಮ್-ಖಾಸ್ ಮುಂತಾದ ನಿಯಮಗಳನ್ನು ಹೊಂದಿರುವ ಒಂದು ಪುಸ್ತಕವನ್ನು ಬರೆದುಕೊಡಬೇಕೆಂದು ವಿನಂತಿಸಿದಾಗ ಇಮಾಂ ಶಾಫಿಈ ‘ರಿಸಾಲ’ ಎಂಬ ಪುಸ್ತಕವನ್ನು ಬರೆದರೆಂದು ಹೇಳಲಾಗುತ್ತದೆ. ಇಮಾಂ ಶಾಫಿಈ ತಮ್ಮ ಹೊಸ ಕರ್ಮಶಾಸ್ತ್ರವನ್ನು ಕಲಿಸುತ್ತಾ ಬಗ್ದಾದಿನಲ್ಲಿ ಎರಡು ವರ್ಷ ತಂಗಿದರು. ನಂತರ ಹಿ. 198 ರಲ್ಲಿ ಅವರು ಪುನಃ ಬಗ್ದಾದಿಗೆ ಹೋಗಿ 6 ತಿಂಗಳುಗಳ ಕಾಲ ತಂಗಿದರು. ನಂತರ ಅವರು ಅಲ್ಲಿಂದ ಈಜಿಪ್ಟಿಗೆ ಹೊರಟರು.
ಹಿ. 199 ರಲ್ಲಿ ಈಜಿಪ್ಟಿಗೆ ಬಂದ ಇಮಾಮರು ಅಲ್ಲಿ ತಮ್ಮ ಕರ್ಮಶಾಸ್ತ್ರ ನಿಯಮಗಳನ್ನು ಪುನರ್ರಚಿಸಿದರು. ಅವರು ರಿಸಾಲ ಕೃತಿಯನ್ನು ತಿದ್ದಿ ಬರೆದರು.
ತಕ್ಲೀದ್‌ನ ವಿರೋಧಿ:
ಇಮಾಂ ಶಾಫಿಈ ತಕ್ಲೀದ್‌ನ (ಅಂಧಾನುಕರಣೆಯ) ಬದ್ಧ ವಿರೋಧಿಯಾಗಿದ್ದರು. ಅವರು ಹೇಳುತ್ತಿದ್ದರು: “ನನ್ನ ಗ್ರಂಥಗಳಲ್ಲಿ ಸುನ್ನತ್ತಿಗೆ ವಿರುದ್ಧವಾದ ಏನಾದರೂ ಕಂಡುಬಂದರೆ, ನೀವು ಸುನ್ನತ್ತಿನ ಪ್ರಕಾರ ನಡೆಯಿರಿ. ನನ್ನ ಮಾತನ್ನು ತಿರಸ್ಕರಿಸಿರಿ.” ಅವರು ಹೇಳುತ್ತಿದ್ದರು: “ಹದೀಸೊಂದು ಸಹೀಹಾದ ರೂಪದಲ್ಲಿ ಸಿಕ್ಕಿದರೆ ಅದೇ ನನ್ನ ಅಭಿಪ್ರಾಯವಾಗಿದೆ.” ಅವರೊಮ್ಮೆ ಇಮಾಂ ಅಹ್ಮದ್ ಬಿನ್ ಹಂಬಲ್‌ರನ್ನು ಕರೆದು ಹೇಳಿದರು: “ತಮಗೆ ಹದೀಸ್ ಮತ್ತು ಅದರ ವರದಿಗಾರರ ಬಗ್ಗೆ ನನಗಿಂತಲೂ ಹೆಚ್ಚು ಜ್ಞಾನವಿದೆ. ಆದ್ದರಿಂದ ಹದೀಸೊಂದು ಸಹೀಹ್ ಆಗಿ ಸಿಕ್ಕಿದರೆ ನನಗೆ ತಿಳಿಸಿರಿ. ಅದು ಕೂಫದಿಂದ, ಬಸ್ರದಿಂದ ಅಥವಾ ಶಾಮ್‌ನಿಂದ ಬಂದದ್ದಾದರೂ ಸರಿ. ಅದು ಸಹೀಹ್ ಆಗಿದ್ದರೆ ಅದನ್ನೇ ನನ್ನ ಅಭಿಪ್ರಾಯವಾಗಿ ಮಾಡಿಕೊಳ್ಳುವೆನು.” ಅವರು ಹೇಳುತ್ತಿದ್ದರು: “ನಾನು ಯಾವುದಾದರೂ ಅಭಿಪ್ರಾಯ ಹೇಳುವುದನ್ನು ನೀವು ಕೇಳಿದರೆ, ಮತ್ತು ಅದಕ್ಕೆ ವಿರುದ್ಧವಾಗಿ ಪ್ರವಾದಿ(ಸ) ಹದೀಸ್ ನಿಮಗೆ ಸಹೀಹಾಗಿ ಸಿಕ್ಕಿದರೆ ನನ್ನ ಬುದ್ಧಿ ಹೊರಟುಹೋಗಿದೆಯೆಂದೇ ತಿಳಿದುಕೊಳ್ಳಿ” ಅವರು ಹೇಳುತ್ತಿದ್ದರು: “ಹದೀಸ್ ವಿದ್ವಾಂಸರಿಗೆ ಸಹೀಹಾದ ರೂಪದಲ್ಲಿ ಸಿಗುವ ಯಾವುದೇ ಹದೀಸ್ ನನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದರೆ ನಾನು ಬದುಕಿನಲ್ಲೂ ಮರಣಾನಂತರವೂ ನನ್ನ ಅಭಿಪ್ರಾಯದಿಂದ ಹಿಂದೆ ಸರಿಯುತ್ತೇನೆ.”
ಖ್ಯಾತ ವಿದ್ವಾಂಸರಾದ ಇಬ್ನ್ ಹಝಮ್ ಹೇಳುತ್ತಾರೆ: “ಕರ್ಮಶಾಸ್ತ್ರದ ವಿಷಯದಲ್ಲಿ ಅಂಧವಾಗಿ ಅನುಕರಿಸಲಾಗುತ್ತಿರುವ ಇಮಾಂಗಳೆಲ್ಲರೂ ಅಂಧಾನುಕರಣೆಯನ್ನು ವಿರೋಧಿಸಿದ್ದರು. ಅವರ ಪೈಕಿ ಅಂಧಾನುಕರಣೆಯನ್ನು ಅತಿ ತೀಕ್ಷ್ಮವಾಗಿ ವಿರೋಧಿಸಿದವರು ಇಮಾಂ ಶಾಫಿಈ, ಹದೀಸ್‌ಗಳನ್ನು ಅನುಸರಿಸಬೇಕೆಂದು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದರು.”
ಮರಣ:
ಇಮಾಂ ಶಾಫಿಈ ಹಿ. 204 ರಜಬ್ ತಿಂಗಳ ಕೊನೆಯ ರಾತ್ರಿ ಈಜಿಪ್ಟಿನಲ್ಲಿ ನಿಧನರಾದರು. ಆಗ ಅವರಿಗೆ 54 ವರ್ಷ ಪ್ರಾಯವಾಗಿತ್ತು.
ಪ್ರಶಂಸೆ:
ಇಮಾಮ್ ಅಹ್ಮದ್ ಹೇಳುತ್ತಾರೆ: “ಶಾಫಿಈ ಪ್ರಪಂಚಕ್ಕೆ ಸೂರ್ಯನಂತೆ ಮತ್ತು ಜನರಿಗೆ ಆರೋಗ್ಯದಂತೆ ಇದ್ದರು.”