ಎಲ್ಲಾ ಧರ್ಮಗಳು ಒಂದೇ ತಾನೆ? ಅವುಗಳಲ್ಲಿ ಯಾವುದು ಸರಿಯಾದ ಧರ್ಮ ಎಂದು ತಿಳಿಯುವುದು ಹೇಗೆ? ನಾನು ಇಸ್ಲಾಮ್ ಅನ್ನೇ ಏಕೆ ಆರಿಸಬೇಕು?
ಇತರ ಧರ್ಮಗಳು ಮತ್ತು ಸಿದ್ಧಾಂತಗಳಿಗೆ ಭಿನ್ನವಾಗಿ ಇಸ್ಲಾಂನಲ್ಲಿ ಕಂಡುಬರುವ ಮುಖ್ಯ ಸೌಂದರ್ಯಗಳು, ಅನುಕೂಲಗಳು ಮತ್ತು ವಿಶಿಷ್ಟತೆಗಳನ್ನು ಚರ್ಚಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.
1. ಸೃಷ್ಟಿಕರ್ತನೊಂದಿಗಿನ ನಿಕಟ ಸಂಬಂಧ
ಒಬ್ಬ ವ್ಯಕ್ತಿಯು ತನ್ನ ಸೃಷ್ಟಿಕರ್ತನೊಂದಿಗೆ ಹೊಂದಿರಬೇಕಾದ ವೈಯಕ್ತಿಕ ಸಂಬಂಧದ ಕುರಿತು ಇಸ್ಲಾಮ್ ಗಮನ ಹರಿಸುತ್ತದೆ. ಶಾಶ್ವತ ಸಂತೋಷದ ಕೀಲಿ ಕೈ – ‘ಸೃಷ್ಟಿಕರ್ತನ ಕುರಿತ ನಿರಂತರ ಅರಿವು’. ಓರ್ವ ದೈವ ವಿಶ್ವಾಸಿಯು ಅದನ್ನು ಹೊಂದಿರಲು ಇಸ್ಲಾಂ ಧರ್ಮವು ಪ್ರೋತ್ಸಾಹಿಸುತ್ತದೆ.
ಸೃಷ್ಟಿಕರ್ತನು ವಿಶ್ವಶಾಂತಿಯ ಮೂಲ ಎಂದು ಇಸ್ಲಾಂ ಕಲಿಸುತ್ತದೆ. ಈ ಪ್ರಮುಖ ಸಂಬಂಧದ ಮೇಲೆ ಕೇಂದ್ರೀಕರಿಸುವ ಮೂಲಕ ಮತ್ತು ಸೃಷ್ಟಿಕರ್ತನ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ, ವಿಶ್ವಾಸಿಗಳು ಆಂತರಿಕ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಬಹುದು. ತನ್ನ ಕೋರಿಕೆಗಳನ್ನು ಅನುಸರಿಸುವುದೋ ಇಲ್ಲವೇ ಲೌಕಿಕ ಸಂಪತ್ತನ್ನು ಸಂಗ್ರಹಿಸುವುದೂ ಮುಂತಾದ ಇತರ ಮಾರ್ಗಗಳ ಮೂಲಕ ಶಾಶ್ವತ ಸಂತೋಷವನ್ನು ಸಂಪಾದಿಸಲು ಯತ್ನಿಸುವ ಪ್ರಯತ್ನ ನಮ್ಮೊಳಗಿನ ಶೂನ್ಯವನ್ನು ಎಂದಿಗೂ ತುಂಬುವುದಿಲ್ಲ. ಕೇವಲ ಸೃಷ್ಟಿಕರ್ತನ ಅರಿವು ಮತ್ತು ಜ್ಞಾನ ಮಾತ್ರ ಈ ಅಗತ್ಯವನ್ನು ಪೂರೈಸುತ್ತದೆ.
ಮತ್ತು ಸೃಷ್ಟಿಕರ್ತನಿಗೆ ಕೃತಜ್ಞತೆ ಮತ್ತು ವಿಧೇಯತೆಯಲ್ಲಿ ನಿಜವಾದ ಶಾಂತಿ ಕಂಡುಬರುತ್ತದೆ: “ನಿಮಗೆ ತಿಳಿದಿರಲಿ – ಮನಸ್ಸಿನ ಸಂತೃಪ್ತಿಯು ಅಲ್ಲಾಹನನ್ನು ನೆನಪಿಸುವುದರಲ್ಲೇ ಇದೆ”.( ಕುರಾನ್ 13:28)
ಮುಸ್ಲಿಮರು ತಮ್ಮ ಸೃಷ್ಟಿಕರ್ತನೊಂದಿಗೆ ನೇರ ಸಂಪರ್ಕವನ್ನು ಹೊಂದಿರುವುದೇ ಸೃಷ್ಟಿಕರ್ತನೊಂದಿಗಿನ ಅವರ ನಿಕಟ ಸಂಬಂಧಕ್ಕೆ ನಿಜವಾದ ಕಾರಣ. ದೈವಿಕ ಆರಾಧನೆಯ ಭಾಗವಾಗಿ ಇತರರನ್ನು ಪೂಜಿಸುವುದು ಅಥವಾ ಇತರರ ಮೂಲಕ ಪೂಜಿಸುವುದು ಮುಂತಾದ ಇಸ್ಲಾಮೇತರ ಧರ್ಮಗಳ ಮಧ್ಯಸ್ಥಿಕೆ ಮತ್ತು ಶಿಫಾರಸ್ಸು ಪದ್ಧತಿಗಳು ಇಸ್ಲಾಂ ಧರ್ಮದಲ್ಲಿ ಇಲ್ಲ.
2. ಜೀವನದ ಮೇಲೆ ಸಕಾರಾತ್ಮಕ(ಪಾಸಿಟೀವ್) ದೃಷ್ಟಿಕೋನ
ತನ್ನ ಜೀವನದಲ್ಲಿ ಸಂಭವಿಸುವ ‘ಒಳ್ಳೆಯದು ಮತ್ತು ಕೆಟ್ಟದು’ ವಾಸ್ತವವಾಗಿ ಸೃಷ್ಟಿಕರ್ತನಿಂದ ಬರುವ ಪರೀಕ್ಷೆಗಳು ಎಂಬ ಸ್ಪಷ್ಟವಾದ ದೃಷ್ಟಿಕೋನವನ್ನು ಇಸ್ಲಾಂ ಧರ್ಮವು ಮನುಷ್ಯನಿಗೆ ನೀಡುತ್ತದೆ. ಸೃಷ್ಟಿಕರ್ತನಿಗೆ ಕೃತಜ್ಞತೆ ಮತ್ತು ವಿಧೇಯತೆಯನ್ನು ತೋರಿಸುವ ಮೂಲಕ ಇಡೀ ಮಾನವ ಜೀವನದ ಪ್ರಯೋಜನಕ್ಕೆ ಸಂಬಂಧಿಸಿದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆ ಘಟನೆಗಳನ್ನು ಅರ್ಥಮಾಡಿಕೊಳ್ಳುವಂತೆ ಇಸ್ಲಾಂ ಮನುಷ್ಯರನ್ನು ಉತ್ತೇಜಿಸುತ್ತದೆ. ಸೃಷ್ಟಿಕರ್ತನು, ತನ್ನ ಮಾರ್ಗದರ್ಶನವನ್ನು ಯಾರು ಸ್ವಇಚ್ಛೆಯಿಂದ, ಪೂರ್ಣಹೃದಯದಿಂದ ಆರಿಸಿಕೊಳ್ಳುತ್ತಾರೆ ಎಂಬುದನ್ನು ಪರೀಕ್ಷಿಸಲು ಅಗತ್ಯವಿರುವಷ್ಟು ಬುದ್ಧಿವಂತಿಕೆ ಅಥವಾ ಅರಿವು ಮತ್ತು ಸ್ವಾತಂತ್ರ್ಯದೊಟ್ಟಿಗೆ ಮಾನವರನ್ನು ಸೃಷ್ಟಿಸಿದನು. ಈ ಲೌಕಿಕ ಜೀವನವೇ ಅಂತಿಮ ಪರೀಕ್ಷೆಯ ನೆಲವಾಗಿದೆ. ನಮಗೆ ಸಂಭವಿಸುವ ಎಲ್ಲವನ್ನೂ ನಾವು ನಿಯಂತ್ರಿಸಲು ಸಾಧ್ಯವಿಲ್ಲವಾದರೂ, ನಮ್ಮ ಪ್ರತಿಕ್ರಿಯೆ(ರಿಯಾಕ್ಷನ್)ಯನ್ನು ನಿಯಂತ್ರಿಸುವ ಶಕ್ತಿಯನ್ನು ನಮಗೆ ನೀಡಲಾಗಿದೆ. ಮನುಷ್ಯನನ್ನು ತಮ್ಮ ನಿಯಂತ್ರಣದಲ್ಲಿರುವುದರ ಮೇಲೆ ಕೇಂದ್ರೀಕರಿಸಲು, ಸೃಷ್ಟಿಕರ್ತನು ನಮಗೆ ನೀಡಿದ ಅನುಗ್ರಹಗಳಿಗಾಗಿ ಕೃತಜ್ಞರಾಗಿರಲು ಮತ್ತು ಕಷ್ಟಕಾರ್ಪಣ್ಯಗಳಲ್ಲಿ ಸಹನೆಯಿಂದಿರಲು ಇಸ್ಲಾಂ ಧರ್ಮವು ಪ್ರೋತ್ಸಾಹಿಸುತ್ತದೆ. ಸಹನೆ ಅಥವಾ ಕೃತಜ್ಞತೆ – ಇದು ಸಂತೋಷದ ಜೀವನಕ್ಕೆ ಸೂತ್ರವಾಗಿದೆ.
ಪ್ರಾಪಂಚಿಕ ಸುಖಭೋಗಗಳಿಂದ ದೂರವಿರುವಂತೆ ಇಸ್ಲಾಂ ಧರ್ಮವು ನಮಗೆ ಬೋಧಿಸುತ್ತದೆ. ಏಕೆಂದರೆ ಅಂತಹ ಸ್ಥಿತಿಯು ಸೃಷ್ಟಿಕರ್ತನನ್ನು ಮರೆಯುವಂತೆ ಮಾಡುತ್ತದೆ. ಅಲ್ಲದೆ, ಕಷ್ಟಕಾರ್ಪಣ್ಯಗಳ ಸಮಯದಲ್ಲಿ ಮಿತಿಮೀರಿ ದುಃಖಿಸುವುದರಿಂದ ದೂರವಿರುವಂತೆ ಇಸ್ಲಾಮ್ ನಮಗೆ ಕಲಿಸುತ್ತದೆ. ಏಕೆಂದರೆ ಅದು ಸೃಷ್ಟಿಕರ್ತನ ಮೇಲೆ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಅವನನ್ನು ದೂಷಿಸುವಂತೆ ಮಾಡುತ್ತದೆ. ಓರ್ವ ಮುಸ್ಲಿಂ ಈ ಭೌತಿಕ ಪ್ರಪಂಚದೊಟ್ಟಿಗೆ ಹದ್ದನ್ನು ಮೀರಿದ ಬಾಂಧವ್ಯಗಳನ್ನು ಬೆಳೆಸಿಕೊಳ್ಳದೆ, ಯಾವುದೇ ಕಠಿಣ ಸಂದರ್ಭಗಳಲ್ಲಿರಲಿ ಚೇತರಿಸಿಕೊಳ್ಳುವ ಶಕ್ತಿ ಹೊಂದಿರುವುದಷ್ಟೇ ಅಲ್ಲದೆ ಸಮಾಜಕ್ಕೆ ಪ್ರಯೋಜನವನ್ನು ಉಂಟುಮಾಡುತ್ತಾ ಮತ್ತು ಉದಾರವಾಗಿ ವರ್ತಿಸುತ್ತಾ ಜೀವಿಸುತ್ತಾನೆ. ಆದ್ದರಿಂದ ಬಹಳ ಸಮತೋಲಿತ ಮತ್ತು ಯಶಸ್ವೀ ಜೀವನ ದೃಷ್ಟಿಕೋನವನ್ನು ಹೊಂದಿರುವನು.
3. ಪರಿಶುದ್ಧವಾದ ಮತ್ತು ಸ್ಪಷ್ಟವಾದ ದೈವಿಕತೆ.
ಇಸ್ಲಾಮೇತರ ಧರ್ಮಗಳ ಹೆಸರುಗಳು ಅವುಗಳ ಸಂಸ್ಥಾಪಕ ಅಥವಾ ಮೂಲ ಸಮಾಜದ ಹೆಸರಿನಿಂದ ಜನಪ್ರಿಯವಾಗಿವೆ. ಆದರೆ, ಇಸ್ಲಾಮಿನ ವಿಷಯದಲ್ಲಿ ಹಾಗಾಗಲಿಲ್ಲ. ಅರೇಬಿಕ್‌ನಲ್ಲಿ ‘ಇಸ್ಲಾಂ’ ಎಂಬ ಪದವು ಗುಣಲಕ್ಷಣದ ಶೀರ್ಷಿಕೆ(attributive title) ಘೋಷಿಸುವ ಪದವಾಗಿದೆ. ಅದು ‘ಬ್ರಹ್ಮಾಂಡದ ಸೃಷ್ಟಿಕರ್ತನಿಗೆ ವಿಧೇಯತೆ’ ತೋರಿಸುವುದರಲ್ಲಿ ಆದ್ಯತೆಯನ್ನು ಸೂಚಿಸುತ್ತದೆ. ಈ ಹೆಸರಿನ ಪ್ರಮುಖ ಲಕ್ಷಣವೆಂದರೆ ಅದು ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಬ್ರಹ್ಮಾಂಡದ ಸೃಷ್ಟಿಕರ್ತನ ಏಕತೆ, ಸಾರ್ವಭೌಮತ್ವ, ಘನತೆ, ಪರಿಪೂರ್ಣತೆಯನ್ನು ಪ್ರಕಟಿಸುವುದು. ಆದ್ದರಿಂದಲೇ ಇದು ಇಸ್ಲಾಂ ಧರ್ಮವು ಬೋಧಿಸುವ ಸೃಷ್ಟಿಕರ್ತನ ಶುದ್ಧವಾದ ದಿವ್ಯಲಕ್ಷಣಗಳಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿತವಾಗಿದೆ.
ಉದಾಹರಣೆಗೆ –
ಬ್ರಹ್ಮಾಂಡದ ಸೃಷ್ಟಿಕರ್ತ ಒಬ್ಬನೇ ಮತ್ತು ಆತನು ಏಕೈಕನು:
• ಆತನಿಗೆ ಯಾರೂ ಪಾಲುದಾರರಿಲ್ಲ, ಅವನಿಗೆ ಸಮಾನರಿಲ್ಲ ಮತ್ತು ಅವನಿಗೆ ಪ್ರತಿಸ್ಪರ್ಧಿಗಳಿಲ್ಲ.
• ಆತನಿಗೆ ತಂದೆ, ತಾಯಿ, ಪುತ್ರರು, ಪುತ್ರಿಯರು ಅಥವಾ ಪತ್ನಿಯರು ಇಲ್ಲ.
• ಆತನು ಮಾತ್ರ ಆರಾಧಿಸಲ್ಪಡಲು ಅರ್ಹತೆ ಉಳ್ಳವನು.
ಆತನು ಸರ್ವಶಕ್ತನು:
• ಆತನು ಸರ್ವ ಸೃಷ್ಟಿಯ ಮೇಲೆ ಸಂಪೂರ್ಣ ಅಧಿಕಾರ ಮತ್ತು ಶಕ್ತಿಯನ್ನು ಹೊಂದಿದ್ದಾನೆ.
• ಆತನಿಗೆ ನಾವು ತೋರುವ ವಿಧೇಯತೆ ಆತನ ಶಕ್ತಿಯನ್ನು ಹೆಚ್ಚಿಸುವುದೂ ಇಲ್ಲ. ಅಂತೆಯೇ, ನಮ್ಮ ಅವಿಧೇಯತೆಯು ಆತನ ಶಕ್ತಿಯನ್ನೇನು ಕುಗ್ಗಿಸುವುದೂ ಇಲ್ಲ.
ಅವನು ಅತ್ಯಂತ ಮಹೋನ್ನತನು:
• ಅವನಿಗಿಂತ ಮಹೋನ್ನತವಾದುದು ಯಾವುದೂ ಇಲ್ಲ. ಮತ್ತು ಆತನಿಗೆ ಹೋಲಿಸಬಹುದಾದದು ಯಾವುದೂ ಇಲ್ಲ.
• ಸೃಷ್ಟಿಯಲ್ಲಿನ ಜೀವಿಗಳ ಗುಣಲಕ್ಷಣಗಳ ಮತ್ತು ಅವನ ದೈವಿಕ ಗುಣಲಕ್ಷಣಗಳ ನಡುವೆ ಯಾವುದೇ ರೀತಿಯ ಹೋಲಿಕೆ ಇಲ್ಲ.
• ಆತನಲ್ಲಿರುವ ಯಾವುದೇ ಅಂಶವು ಯಾರನ್ನೂ ಅಥವಾ ಯಾವುದನ್ನೂ ಪ್ರವೇಶಿಸುವುದಿಲ್ಲ.
ಅವನು ಪರಿಪೂರ್ಣನು, ಸಂಪೂರ್ಣನು:
• ಸೃಷ್ಟಿಯ ಆರು ದಿನಗಳನ್ನು ಪೂರ್ಣಗೊಳಿಸಿದ ನಂತರ ಏಳನೇ ದಿನದಂದು ವಿಶ್ರಾಂತಿ ಪಡೆಯುವ ಅವಶ್ಯಕತೆ ಆತನಿಗೆ ಖಂಡಿತ ಇಲ್ಲ. ಏಕೆಂದರೆ ಆತನು ಅಪರಿಮಿತ ಶಕ್ತಿಸಾಮರ್ಥ್ಯಗಳನ್ನು ಹೊಂದಿದವನು.
• ಅವನು ತನ್ನ ಪರಿಪೂರ್ಣ ದೈವತ್ವವನ್ನು ನಿರಂತರವಾಗಿ ಮುಂದುವರೆಸುತ್ತಾನೆ. ಅವನು ತನ್ನ ಪರಿಪೂರ್ಣತೆಗೆ ಧಕ್ಕೆ ತರುವ ಯಾವುದನ್ನೂ ಮಾಡುವುದಿಲ್ಲ. ಉದಾಹರಣೆಗೆ – ಇತರ ಧರ್ಮಗಳು ಉಲ್ಲೇಖಿಸಿರುವಂತೆ ಮಾನವ ರೂಪವನ್ನು ಪಡೆದುಕೊಳ್ಳುವುದು.
ತನ್ನ ಮಹೋನ್ನತ ಸ್ಥಾನಮಾನಕ್ಕೆ ತಕ್ಕಂತಹ ದೈವಿಕ ಕಾರ್ಯಗಳನ್ನು ಬಿಟ್ಟು ಅಂತಹ ಕ್ಷುಲ್ಲಕ ಕಾರ್ಯಗಳನ್ನು ಸ್ವತಃ ನಿರ್ವಹಿಸುವ ಅಗತ್ಯ ಆತನಿಗಿಲ್ಲ. ಆದ್ದರಿಂದ, ಒಂದುವೇಳೆ ತನ್ನ ದೈವತ್ವದ ಸ್ಥಾನವನ್ನು ತೊರೆದು, ಅವನು ಮಾನವ ರೂಪದಲ್ಲಿ ಅವತರಿಸಿದನೆಂದು ಭಾವಿಸಿದರೆ, ಆ ಕ್ಷಣದಿಂದಲೇ ಆತನು ನಿಜವಾದ ದೇವರೇ ಅಲ್ಲ.
4. ಸಾಕ್ಷಾಧಾರ(ಪುರಾವೆ) ಮತ್ತು ನಂಬಿಕೆ ಎರಡಕ್ಕೂ ಒತ್ತುನೀಡುವುದು.
ಇಸ್ಲಾಂನಲ್ಲಿ ದೇವರ ಮೇಲಿನ ನಂಬಿಕೆಯು ಸ್ಪಷ್ಟವಾದ ಪುರಾವೆಗಳ ಮೇಲೆ ಮಾತ್ರ ಆಧಾರಿತವಾಗಿದೆ. ಸೃಷ್ಟಿಕರ್ತ ದಯಪಾಲಿಸಿದ ಬುದ್ಧಿವಂತಿಕೆಯನ್ನು ಬಳಸಿ, ಜೀವನ ಮತ್ತು ಬ್ರಹ್ಮಾಂಡದ ಬಗ್ಗೆ ಆಳವಾಗಿ ಆಲೋಚಿಸಲು ಜನರನ್ನು ಪ್ರೋತ್ಸಾಹಿಸುತ್ತದೆ. ಈ ಲೌಕಿಕ ಜೀವನವು ಒಂದು ಪರೀಕ್ಷೆಯ ಅವಧಿಯಾಗಿದೆ. ಆದಾಗ್ಯೂ, ವಿಶಾಲ ದೃಷ್ಟಿಕೋನದೊಟ್ಟಿಗೆ ಮತ್ತು ಪ್ರಾಮಾಣಿಕತೆಯೊಂದಿಗೆ ಸತ್ಯಾನ್ವೇಷಣೆ ಮಾಡುವ ಜನರಿಗೆ ಸೃಷ್ಟಿಕರ್ತನು ಅನೇಕ ಸೂಚನೆಗಳನ್ನು ಮತ್ತು ಮಾರ್ಗದರ್ಶನವನ್ನು ಕಳುಹಿಸಿದ್ದಾನೆ.
“ನಾವು ಬಹಳ ಸ್ಪಷ್ಟವಾದ ವಚನಗಳನ್ನು ಇಳಿಸಿರುತ್ತೇವೆ. ಇನ್ನು ಅಲ್ಲಾಹನೇ ತಾನಿಚ್ಛಿಸಿದವರನ್ನು ಸ್ಥಿರವಾದ ನೇರಮಾರ್ಗದೆಡೆಗೆ ಮುನ್ನಡೆಸುತ್ತಾನೆ. ”ಖುರಾನ್ 24:46
ಇತರ ಧರ್ಮದ ಜನರು ತಮ್ಮ ಧರ್ಮ ಗ್ರಂಥಗಳ ಮೂಲದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಇಸ್ಲಾಂ ಧರ್ಮದ ಮೂಲ ಗ್ರಂಥವಾಗಿರುವ ಖುರಾನ್ ಬ್ರಹ್ಮಾಂಡದ ಸೃಷ್ಟಿಕರ್ತನಿಂದ ನೇರವಾಗಿ ಅವತೀರ್ಣಗೊಳಿಸಲ್ಪಟ್ಟಿದೆ ಎಂಬ ವಾಸ್ತವವನ್ನು ಹಲವಾರು ಪುರಾವೆಗಳು, ಉಲ್ಲೇಖಗಳು, ಸೂಚನೆಗಳು ಮತ್ತು ಮಹಿಮೆಗಳು ಸ್ಪಷ್ಟವಾಗಿ ನಿರೂಪಿಸುತ್ತವೆ.
ಖುರಾನ್ :
• 23 ವರ್ಷಗಳ ಸುದೀರ್ಘ ಅವಧಿಯಲ್ಲಿ ಯಾವುದೇ ತಪ್ಪುಗಳು, ಪ್ರಮಾದಗಳು, ಲೋಪಗಳು, ದೋಷಗಳು ಮತ್ತು ವಿರೋಧಾಭಾಸಗಳಿಂದ ಮುಕ್ತವಾಗಿದೆ ಮತ್ತು ಅದು ಅವುಗಳನ್ನು ಮೀರಿ ಅತೀತವಾಗಿದೆ ಎಂದು ಸಾಬೀತುಪಡಿಸಿದೆ.
• ಅರೇಬಿಕ್ ಭಾಷೆಯಲ್ಲಿ ಅವತೀರ್ಣಗೊಂಡಾಗಿನಿಂದ, ಅದರ ಪ್ರತಿಯೊಂದು ಅಕ್ಷರ ಯಥಾರೀತಿಯಾಗಿ ಅದರ ಮೂಲ ಸ್ವರೂಪದಲ್ಲಿರುವಂತೆ ಯಾವುದೇ ಬದಲಾವಣೆಗಳು ಅಥವಾ ಸೇರ್ಪಡೆಗಳಿಲ್ಲದೆ, ಇಂದಿಗೂ ಅದು ಒಂದೇ ಒಂದು ಅಕ್ಷರವನ್ನು ಕಳೆದುಕೊಳ್ಳದೆ ಅವತೀರ್ಣಗೊಂಡಾಗಿನ ತನ್ನ ಮೂಲ ಸ್ವರೂಪದಲ್ಲಿಯೇ ಸುರಕ್ಷಿತವಾಗಿದೆ.
• ಅದರಲ್ಲಿ ಪ್ರಾಮಾಣಿಕತೆಯಿಂದ ಸತ್ಯವನ್ನು ಹುಡುಕುವ ಪ್ರತಿಯೊಬ್ಬರಿಗೂ ಸುಲಭವಾದ, ಶುದ್ಧವಾದ ಮತ್ತು ಸಾರ್ವತ್ರಿಕವಾದ ಸಂದೇಶವಿದೆ.
• ಅಸಮಾನ, ಅನನ್ಯ ಮತ್ತು ಅನುಕರಣೀಯ ಆದರೆ ಭಾಷಾಶೈಲಿ ಇರುವಂತದ್ದಾಗಿದೆ. ವಿಶ್ವವ್ಯಾಪ್ತಿಯಾಗಿ ಇದು ಅರೇಬಿಕ್ ಭಾಷೆಯ ವಾಗ್ಮಿತೆಯಲ್ಲಿ ಮತ್ತು ಸಾಹಿತ್ಯಿಕ ಸೌಂದರ್ಯದಲ್ಲಿ ಅತ್ಯುನ್ನತ ಶಿಖರವನ್ನು ತಲುಪಿದ ಏಕೈಕ ಗ್ರಂಥವಾಗಿ ಜನಪ್ರಿಯವಾಗಿದ್ದರೂ, ವಾಸ್ತವದಲ್ಲಿ ಓದಲು ಅಥವಾ ಬರೆಯಲು ಬಾರದ ಅಂದರೆ ಅನಕ್ಷರಸ್ಥ ಪ್ರವಾದಿ ಮುಹಮ್ಮದ್ ಸಲ್ಲಲಾಹು ಅಲೈಹಿ ವ ಸಲ್ಲಮ್ ರವರ ಮೇಲೆ ಖುರಾನ್ ಅವತೀರ್ಣಗೊಂಡಿತೆಂಬುದು ಸೃಷ್ಟಿಕರ್ತನ ಘನತೆಯನ್ನು ವೈಭವೀಕರಿಸುವ ಒಂದು ದೊಡ್ಡ ಸೂಚನೆ.
•1400 ವರ್ಷಗಳ ಹಿಂದೆ ಅವತೀರ್ಣಗೊಂಡಿದ್ದರೂ ಇತ್ತೀಚೆಗೆ ಕಂಡುಹಿಡಿದ ಅನೇಕ ಅದ್ಭುತ ವೈಜ್ಞಾನಿಕ ಸಂಗತಿಗಳನ್ನು ಒಳಗೊಂಡಿದೆ.
14 ಶತಮಾನಗಳ ಹಿಂದೆ ಖುರಾನ್‌ನಲ್ಲಿ ಅಭೂತಪೂರ್ವ ಮತ್ತು ಅದ್ಭುತವಾದ ವಿಷಯಗಳನ್ನು ಹೇಗೆ ಉಲ್ಲೇಖಿಸಲಾಗಿದೆ ಎಂಬ ಪ್ರಶ್ನೆಗೆ, ಸೃಷ್ಟಿಕರ್ತನನ್ನು ಹೊರತುಪಡಿಸಿ ಬೇರೆ ಯಾರೂ ಅದಕ್ಕೆ ಕಾರಣವಾಗಲಾರರು ಎಂಬುದೇ ಅತ್ಯಂತ ವಿವೇಕಯುತ ಮತ್ತು ತರ್ಕಬದ್ಧ ಉತ್ತರವಾಗಿದೆ.
5. ಪಾಪಗಳ ಕ್ಷಮೆ
ಇಸ್ಲಾಂ ಸೃಷ್ಟಿಕರ್ತನ ದಯೆದಾಕ್ಷಿಣ್ಯವನ್ನು ಆಶಿಸುವುದರ ಮತ್ತು ಅವನ ಕಠಿಣ ಶಿಕ್ಷೆಗಳನ್ನು ಭಯಪಡುವುದರ ನಡುವೆ ಸಮತೋಲನವನ್ನು ಪ್ರೋತ್ಸಾಹಿಸುತ್ತದೆ. ನಮ್ರತೆ, ವಿನಯ ವಿಧೇಯತೆಯೊಂದಿಗೆ ಕೂಡಿದ ಸಕಾರಾತ್ಮಕ ಜೀವನವನ್ನು ನಡೆಸಲು ಇವೆರಡರ ನಡುವೆ ಸಮತೋಲನ ಅತ್ಯಗತ್ಯ.
ನಾವು ಪರಿಶುದ್ಧರಾಗಿ ಹುಟ್ಟಿದ್ದೇವೆ, ಆದರೆ ನಮಗೆ ಪಾಪ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ನಮ್ಮನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೆ ನಾವು ಪರಿಪೂರ್ಣರಲ್ಲ ಮತ್ತು ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ ಎಂದು ಚೆನ್ನಾಗಿ ತಿಳಿದಿದೆ. ಆದರೆ ಅಂತಹ ಪಾಪಗಳನ್ನು ಮಾಡುವಾಗ ನಾವು ಹೇಗೆ ವರ್ತಿಸುತ್ತೇವೆ ಎಂಬುದು ಗಮನಿಸಬೇಕಾದ ವಿಷಯ.
ಹೇಳಿರಿ; ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ (ಅಲ್ಲಾಹನ) ದಾಸರೇ, ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ. ಖುರಾನ್ 39:53
ಸೃಷ್ಟಿಕರ್ತನು ತುಂಬಾ ಕರುಣಾಮಯಿ ಮತ್ತು ಪ್ರಾಮಾಣಿಕವಾಗಿ ಪಶ್ಚಾತ್ತಾಪಪಟ್ಟು ಕ್ಷಮೆಯನ್ನು ಕೋರುವವರನ್ನು ಕ್ಷಮಿಸುತ್ತಾನೆ ಎಂದು ಇಸ್ಲಾಂ ಕಲಿಸುತ್ತದೆ. ಪ್ರಾಮಾಣಿಕತೆ, ಪಶ್ಚಾತ್ತಾಪ, ಅಂತಹ ಪಾಪವನ್ನು ಮತ್ತೆ ಮಾಡಬಾರದು ಎಂಬ ದೃಢ ಸಂಕಲ್ಪ ಮತ್ತು ದುಶ್ಚಟಗಳಿಂದ ದೂರವಿರುವುದು ಮೊದಲಾದವುಗಳು ಕ್ಷಮೆ ಕೇಳುವಲ್ಲಿ ಇರಬೇಕಾದ ಮುಖ್ಯ ಅಂಶಗಳಾಗಿವೆ. ಹೀಗಾಗಿ, ಸ್ವಯಂ-ವಿಕಾಸ ಮತ್ತು ಸ್ವಯಂ-ಶುದ್ಧೀಕರಣದ ಪ್ರಕ್ರಿಯೆಯನ್ನು ನಿರಂತರವಾಗಿ ಹೊಂದಲು ಇಸ್ಲಾಂ ನಮ್ಮನ್ನು ಪ್ರೋತ್ಸಾಹಿಸುತ್ತದೆ. ಈ ಪ್ರಕ್ರಿಯೆಯು ವ್ಯಕ್ತಿ ಮತ್ತು ಸೃಷ್ಟಿಕರ್ತನ ನಡುವೆ ನೇರವಾಗಿ ನಡೆಯಬೇಕು. ತಾವು ಮಾಡಿದ ತಪ್ಪುಗಳ, ಪಾಪಗಳ ಕುರಿತು ಧರ್ಮಗುರುಗಳಿಗೆ ಅಥವಾ ಪುರೋಹಿತರಿಗೆ ತಿಳಿಸಬೇಕಾದ ಅಥವಾ ಅವರ ಮುಂದೆ ತಪ್ಪೊಪ್ಪಿಕೊಳ್ಳುವ ಅಗತ್ಯ ಯಾವ ಮಾತ್ರಕ್ಕೂ ಇಲ್ಲ. ಇದಲ್ಲದೆ, ಪಾಪದ ಶುದ್ಧೀಕರಣಕ್ಕಾಗಿ ದೇವರು ಸ್ವಯಂ ಬಲಿಯಾಗುವುದು ಅಥವಾ ಬೇರೊಬ್ಬರಲ್ಲಿ ಬಲಿ ನೀಡಲು ಕೇಳಿಕೊಳ್ಳುವುದು ಅಸತ್ಯವೇ ಹೊರತು ಮತ್ತೇನೂ ಅಲ್ಲ.
6. ಜವಾಬ್ದಾರಿಕೆ ಮತ್ತು ಅಂತಿಮ ನ್ಯಾಯ
ಸೃಷ್ಟಿಕರ್ತನು ಯಾವುದೇ ಪಕ್ಷಪಾತವನ್ನು ತೋರಿಸದ ಸರ್ವೋಚ್ಚ ನ್ಯಾಯಾಧೀಶ ಮತ್ತು ತೀರ್ಪಿನ ದಿನದಂದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಕರ್ಮಗಳಿಗೆ ಜವಾಬ್ದಾರನಾಗಿರುತ್ತಾನೆ ಎಂದು ಇಸ್ಲಾಂ ಕಲಿಸುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ವ್ಯತ್ಯಾಸವನ್ನು ಗುರುತಿಸುವ ಅರಿವು ಮತ್ತು ಎರಡರ ನಡುವೆ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರಿಗೂ ನೀಡಲಾಗಿರುವುದರಿಂದ, ಪ್ರತಿಯೊಬ್ಬರೂ ಅವರವರ ಕರ್ಮಕ್ಕೆ ಜವಾಬ್ದಾರರಾಗಿರುತ್ತಾರೆ.
ಪ್ರತಿಯೊಬ್ಬರ ಪುಣ್ಯಗಳಿಗೆ ಪುರಸ್ಕರಿಸುವ ಅಥವಾ ಪಾಪಗಳಿಗೆ ತಕ್ಕ ಶಿಕ್ಷೆಯಾಗುವ ಅಂತಿಮ ತೀರ್ಪಿನ ದಿನ ಇರಬೇಕು ಎಂಬುದು ನಿರಾಕರಿಸಲಾಗದ ನ್ಯಾಯಯುತ ಬೇಡಿಕೆಯಾಗಿದೆ. ಈ ಪ್ರಪಂಚದಲ್ಲಿ ನ್ಯಾಯ ಎಲ್ಲರಿಗೂ ಸಿಗುವುದಿಲ್ಲ. ಅಂತಹ ತೀರ್ಪಿನ ದಿನ ಇಲ್ಲದಿದ್ದರೆ, ಈ ಜೀವನವು ಅರ್ಥಹೀನವಾಗುತ್ತದೆ. ನಾವು ನಮ್ಮ ಜವಾಬ್ದಾರಿಗಳನ್ನು ಎಷ್ಟು ಉತ್ತಮವಾಗಿ ಪೂರೈಸಿದ್ದೇವೆ ಮತ್ತು ನಮಗೆ ನೀಡಿದ ಸ್ವಾತಂತ್ರ್ಯವನ್ನು ನಾವು ಎಷ್ಟು ಉತ್ತಮವಾಗಿ ಬಳಸಿದ್ದೇವೆ ಎಂಬುದರ ಮೇಲೆ ಅಂತಿಮ ತೀರ್ಪು ಇರುತ್ತದೆ ಎಂದು ಇಸ್ಲಾಂ ಕಲಿಸುತ್ತದೆ. ಆ ದಿನ ನಾವು ಮಾಡುವ ಎಲ್ಲವನ್ನೂ ತಿಳಿದಿರುವ ಮತ್ತು ನೋಡುವ ಮಹತ್ತರ ಶಕ್ತಿಯನ್ನು ಹೊಂದಿದ ಬ್ರಹ್ಮಾಂಡದ ಜ್ಞಾನಿಯೂ ಮತ್ತು ವಿವೇಕವಂತನೂ ಆದ ಸೃಷ್ಟಿಕರ್ತನಿಂದ ನಾವು ನಿರ್ಣಯಿಸಲ್ಪಡುತ್ತೇವೆ. ಇಂತಹ ಪರಿಕಲ್ಪನೆಯು ಸಮಾಜವನ್ನು ಒಟ್ಟಾಗಿ ಬದುಕಲು ಪ್ರೋತ್ಸಾಹಿಸುತ್ತದೆ. ಎಲ್ಲದಕ್ಕಿಂತ ಮಿಗಿಲಾಗಿ, ಕೊನೆಗೆ ನ್ಯಾಯವೇ ಮೇಲುಗೈ ಸಾಧಿಸುತ್ತದೆ ಎಂಬ ಸಂತೃಪ್ತಿ ಜನರಿಗೆ ಸಿಗುತ್ತದೆ.
7. ಪ್ರಾಯೋಗಿಕ ಮತ್ತು ಸಮತೋಲಿತ ಜೀವನ ವಿಧಾನ
ಇಸ್ಲಾಂ ಧರ್ಮವು ದೈವ ನಂಬಿಕೆ ಮತ್ತು ಆಚರಣೆಗಳ ನಡುವೆ ಸರಿಯಾದ ಸಮತೋಲನವನ್ನು ನಿರ್ದೇಶಿಸುತ್ತದೆ. ಸುಸ್ಥಿರ ಬದುಕಿಗೆ ಇವೆರಡೂ ಅಗತ್ಯ. ಇಸ್ಲಾಂ ಧರ್ಮವು ಎಲ್ಲಾ ಪರಿಸ್ಥಿತಿಗಳಲ್ಲಿ ಮತ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಮಾರ್ಗದರ್ಶನವನ್ನು ಕಲಿಸುತ್ತದೆ. ಜನರ ಆಧ್ಯಾತ್ಮಿಕ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಗತ್ಯಗಳನ್ನು ಪೂರೈಸುವ ಪ್ರಾಯೋಗಿಕ ಆರಾಧನಾ ಕ್ರಮಗಳೊಂದಿಗೆ ಕೂಡಿದ ಪ್ರಾಯೋಗಿಕ ಧರ್ಮವಾಗಿದೆ – ಇಸ್ಲಾಮ್ ಧರ್ಮ.
ಅನೇಕ ಪ್ರಯೋಜನಗಳಿಂದ ತುಂಬಿರುವ ಕೆಲವು ಪ್ರಾಯೋಗಿಕ ಆರಾಧನಾ ಕ್ರಮಗಳು:
• ದೈನಂದಿನ ಐದು ಬಾರಿ ಪ್ರಾರ್ಥನೆಗಳು – ತನ್ನ ಕರ್ತನೊಟ್ಟಿಗೆ ನಿರಂತರ ಸಂಪರ್ಕದಲ್ಲಿರುವ ಆಧ್ಯಾತ್ಮಿಕ ಅಗತ್ಯವನ್ನು (ವಿಶೇಷವಾಗಿ ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ) ತೃಪ್ತಿಪಡಿಸುವ ಮೂಲಕ ಆತ್ಮವನ್ನು ಸಮೃದ್ಧಗೊಳಿಸುತ್ತದೆ. ರುಕೂ (ಮೊಣಕಾಲುಗಳ ಮೇಲೆ ಕೈಗಳಿಟ್ಟು ಮುಂದಕ್ಕೆ ಬಾಗಿ ವಂದಿಸುವಿಕೆ) ಮತ್ತು ಸಜ್ದಾಗಳನ್ನು ( ಮೊಂಡಿಯೂರಿ ಸಾಷ್ಟಾಂಗ) ಮಾಡುವ ಮೂಲಕ ನಮ್ಮಲ್ಲಿ ನಮ್ರತೆ ಮತ್ತು ವಿಧೇಯತೆಯನ್ನು ತುಂಬುತ್ತದೆ; ಸಾಮೂಹಿಕವಾಗಿ ಮಾಡುವ ನಮಾಜು ವಿಸ್ವಾಸಿಗಳ ನಡುವಿನ ವ್ಯತ್ಯಾಸಗಳು, ಅಹಂಕಾರ ಮತ್ತು ಜನಾಂಗೀಯ ತಾರತಮ್ಯವನ್ನು ನಿವಾರಿಸುತ್ತದೆ; ಸೃಷ್ಟಿಕರ್ತನ ಮುಂದೆ ನಿರಂತರವಾಗಿ ನಿಲ್ಲುವುದರಿಂದ ಪಾಪಗಳು ಮತ್ತು ತಪ್ಪುಗಳನ್ನು ಮಾಡದಂತೆ ನಮ್ಮನ್ನು ತಡೆಯುತ್ತದೆ.
• ದಾನ (ಜಕಾತ್) – ಸ್ವಾರ್ಥದಿಂದ ಮನುಷ್ಯನನ್ನು ಶುದ್ಧೀಕರಿಸುತ್ತದೆ; ಅಗತ್ಯವಿರುವವರ ಕಡೆಗೆ ಸಹಾನುಭೂತಿ ಮತ್ತು ದಯೆಯನ್ನು ತೋರುವಂತೆ ಪ್ರೋತ್ಸಾಹಿಸುತ್ತದೆ; ಸೃಷ್ಟಿಕರ್ತನು ನೀಡಿದ ಅನುಗ್ರಹಗಳನ್ನು ಜ್ಞಾಪಿಸುತ್ತದೆ; ಬಡತನವನ್ನು ನಿರ್ಮೂಲನೆ ಮಾಡಲು ಕೊಡುಗೆ ನೀಡುತ್ತದೆ; ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
• ರಂಜಾನ್ ತಿಂಗಳಲ್ಲಿ ಉಪವಾಸ – ಆಧ್ಯಾತ್ಮಿಕ ಸ್ವಯಂ ಶುದ್ಧೀಕರಣ ನಡೆಯುತ್ತದೆ, ಸ್ವಯಂ ಸಂಯಮ ಮತ್ತು ಆತ್ಮ ವಿಶ್ವಾಸ ಹೆಚ್ಚಾಗುತ್ತದೆ; ವೈಜ್ಞಾನಿಕವಾಗಿ ಸಾಬೀತಾದ ಆರೋಗ್ಯ ಪ್ರಯೋಜನಗಳು ಸಹ ದೊರೆಯುತ್ತವೆ; ಬಡವರ ದುಸ್ಥಿತಿಯ ಬಗ್ಗೆ ಸಹಾನುಭೂತಿ ಒದಗಿಸುತ್ತದೆ ಮತ್ತು ಅವುಗಳ ಕುರಿತ ತಿಳುವಳಿಕೆಗೆ ಅವಕಾಶ ನೀಡುತ್ತದೆ; ಸೃಷ್ಟಿಕರ್ತನಿಗೆ ವಿಧೇಯತೆಯನ್ನು ತೋರಿಸುವ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಜನರಿಗೆ ತರಬೇತಿ ನೀಡುತ್ತದೆ.
• ಹಜ್ ಯಾತ್ರೆ – ಮಕ್ಕಾದಲ್ಲಿ ಎಲ್ಲಾ ಜನರು ಒಂದೇ ರೀತಿಯ ಸಾಮಾನ್ಯ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಯಾವುದೇ ಭೇದಭಾವಗಳಿಲ್ಲದೆ ಸಾಮೂಹಿಕವಾಗಿ ಏಕಕಾಲದಲ್ಲಿ ಅನೇಕ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ, ಇದು ಜನಾಂಗ, ಜಾತಿ, ಕುಲ, ಬಣ್ಣ ಮತ್ತು ಅಂತಸ್ತುಗಳನ್ನು ಲೆಕ್ಕಿಸದೆ ಎಲ್ಲಾ ಮಾನವರನ್ನು ಒಂದುಗೂಡಿಸುತ್ತದೆ. ಸಕಲ ಮಾನವಕುಲಕ್ಕೆ ಅಂತಿಮ ಧರ್ಮವಾಗಿ ನಮ್ಮ ಸೃಷ್ಟಿಕರ್ತನು ಇಸ್ಲಾಂ ಧರ್ಮವನ್ನು ಕಳುಹಿಸಿದನು. ಅದರ ಪ್ರತಿಯೊಂದು ನಿಯಮವನ್ನು ಸರಿಯಾಗಿ ಅನುಸರಿಸಿದರೆ ವ್ಯಕ್ತಿ ಮತ್ತು ಸಮಾಜ ಎರಡಕ್ಕೂ ಪ್ರಯೋಜನಕಾರಿಯಾಗುತ್ತದೆ. ಕುರಾನ್‌ನಲ್ಲಿ ಉಲ್ಲೇಖಿಸಲಾದ ಕೆಲವು ಉತ್ತಮ ಅಭ್ಯಾಸಗಳು – ಪ್ರಾಮಾಣಿಕ ಜೀವನ, ಕ್ಷಮೆ, ಸತ್ಯವನ್ನು ಹೇಳುವುದು, ಹೆಂಡತಿಯೊಂದಿಗೆ ಉತ್ತಮವಾಗಿ ವರ್ತಿಸುವುದು, ಸಹನೆಯನ್ನು ತೋರಿಸುವುದು, ನಿಷ್ಪಕ್ಷಪಾತವಾಗಿ ವರ್ತಿಸುವುದು, ಮಧ್ಯಮ ಮಾರ್ಗವನ್ನು ಅನುಸರಿಸುವುದು, ಚಿತ್ತಶುದ್ಧಿ ಹೊಂದಿ ಜೀವಿಸುವುದು, ತಂದೆ-ತಾಯಿ, ಕುಟುಂಬ ಮತ್ತು ಹಿರಿಯರನ್ನು ಗೌರವಿಸುವುದು ಇತ್ಯಾದಿ. ಇಂದು ಜಗತ್ತು ಎದುರಿಸುತ್ತಿರುವ ಅನೇಕ ವೈಯಕ್ತಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳನ್ನು ಬುಡಸಹಿತ ನಿರ್ಮೂಲನೆ ಮಾಡಲು ಅಥವಾ ಕಡಿಮೆ ಮಾಡಲು ಇಸ್ಲಾಂ ಅನೇಕ ತತ್ವಗಳನ್ನು ಹೊಂದಿದೆ.
8. ವಿಶ್ವವ್ಯಾಪ್ತಿ ಮತ್ತು ಕಾಲಾತೀತ ದೈವಿಕ ಸಂದೇಶ
ಆದಾಮ್‍ನ ಸೃಷ್ಟಿಯಿಂದ ಅಂತಿಮ ತೀರ್ಪಿನ ದಿನದವರೆಗೆ ಎಲ್ಲಾ ಯುಗದ ಒಟ್ಟು ಮಾನವಕುಲಕ್ಕೆ ಅನ್ವಯಿಸುವ ಸಂದೇಶವನ್ನು ಇಸ್ಲಾಂ ಧರ್ಮವು ಒಳಗೊಂಡಿದೆ. ಇಲ್ಲಿಯವರೆಗೆ ಅನ್ವಯಿಸಿದಂತೆ, ಇದು ಈ ಕಾಲಕ್ಕೂ ಅನ್ವಯಿಸುತ್ತದೆ. ಏಕೆಂದರೆ ಇಸ್ಲಾಮಿನ ಮೂಲತತ್ವಗಳು ಸ್ವಭಾವಿಕವಾಗಿ ಸಹಜವಾಗಿವೆ. ಉದಾಹರಣೆಗೆ – ಸೃಷ್ಟಿಕರ್ತನು ಪ್ರತಿಯೊಬ್ಬರಿಗೂ ದೊರಕಬಹುದಾದಂತಿರಬೇಕು. ಜನರು ನಂಬಿಕೆ ಮತ್ತು ಸತ್ಕಾರ್ಯಗಳ ಮೂಲಕ ಮಾತ್ರ ದೇವರ ಅನುಗ್ರಹವನ್ನು ಪಡೆಯಬಹುದು ಮತ್ತು ತಮ್ಮ ಮಧ್ಯೆ ಪ್ರತ್ಯೇಕಿಸಿಕೊಳ್ಳಬಹುದು – ಜನಾಂಗ, ಸಂಪತ್ತು, ಲಿಂಗ, ಜಾತಿ, ಸ್ಥಾನಮಾನ ಅಥವಾ ಸಾಮಾಜಿಕ ವರ್ಗೀಕರಣದಿಂದ ಅಲ್ಲ.
ಕೊನೆಯ ಮಾತು
ಇಸ್ಲಾಮಿನ ಕಾಲಾತೀತ ಮತ್ತು ಅದ್ಭುತವಾದ ಸಂದೇಶ ಹಾಗೂ ನೋಹ್, ಅಬ್ರಹಾಂ, ಮೋಸೆಸ್, ಜೀಸಸ್(ಅಲೈಹಿಸ್ಸಲಾಮ್) ಮತ್ತು ಮುಹಮ್ಮದ್(ಸಲ್ಲಲ್ಲಾಹು ಅಲೈಹಿವ ಸಲ್ಲಮ್) ಸೇರಿದಂತೆ ಎಲ್ಲಾ ಪ್ರವಾದಿಗಳ ಸಂದೇಶವು ಒಂದೇ ಆಗಿದೆ. ಅವರೆಲ್ಲರೂ ತಮ್ಮ ಜನರನ್ನು “ಏಕೈಕ ನಿಜವಾದ ದೇವನಿಗೆ ಮಾತ್ರವೇ ಸಮರ್ಪಿಸಿಕೊಳ್ಳಿ” ಅಂದರೆ ಮುಸ್ಲಿಮರಾಗುವಂತೆ ಕರೆದರು. ಅರೇಬಿಕ್ ಭಾಷೆಯಲ್ಲಿ ಮುಸ್ಲಿಂ ಎಂದರೆ ಸಮರ್ಪಿಸಿಕೊಳ್ಳುವಿಕೆ. ಈ ರೀತಿ ಸೃಷ್ಟಿಕರ್ತನಿಗೆ ಸಮರ್ಪಿಸಿಕೊಳ್ಳುವ ಮೂಲಕ ಸೃಷ್ಟಿಕರ್ತನ ಘನತೆಯನ್ನು ಒಪ್ಪಿಕೊಳ್ಳುತ್ತಾ ಮತ್ತು ಪ್ರಾಮಾಣಿಕವಾಗಿ ಅವನನ್ನು ಮಾತ್ರ ಆರಾಧಿಸುತ್ತಾ ಮಾನವ ಜೀವನದ ಉದ್ದೇಶವನ್ನು ಪೂರೈಸಿದ ನಂತರ, ಇಹಪರ ಲೋಕದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಹೀಗೆ ಸಮರ್ಪಿಸಿಕೊಳ್ಳುವುದರ ಮೂಲಕ ಇಸ್ಲಾಂನಲ್ಲಿ ಲೆಕ್ಕವಿಲ್ಲದಷ್ಟು ಲಾಭವನ್ನೂ ಕೂಡ ಹೊಂದಬಹುದು.