ಇಸ್ಲಾಂ ಧರ್ಮದಲ್ಲಿ ಮಹಿಳೆಯ ಹಕ್ಕು ಭಾದ್ಯತೆಗಳು
ಆದರಣೆ, ಗೌರವ, ಸಹೃದಯ.
ವಾಸ್ತವಿಕ ನುಡಿ
ಇಸ್ಲಾಮ್ ಧರ್ಮದ ಪೂರ್ವ ಯುಗದಲ್ಲಿ ಹೆಣ್ಣಿನ ಜನನ, ಸಮಾಜದಲ್ಲಿ ಅಪಮಾನ, ಅನಿಷ್ಟವೆಂದು ಭಾವಿಸುತ್ತಿದ್ದರು. ಅನೇಕ ವೇಳೆ ಹೆಣ್ಣುಶಿಶುಗಳನ್ನು ಜೀವಂತ ಹೂಳುತ್ತಿದ್ದರು. ವೇಶ್ಯಾವಾಟಿಕೆ ಪ್ರಚಲಿತವಾಗಿತ್ತು. ವಿವಾಹವಿಚ್ಛೇದನವು ಸಹ ಗಂಡಸರ ಇಚ್ಛೆ ಮತ್ತು ನಿರ್ಧಾರವಾಗಿತ್ತು. ಅನುವಂಶಿಯತೆ, ಆಸ್ತಿಪಾಸ್ತಿಯ ಹಕ್ಕು, ಕೇವಲ ಬಲಶಾಲಿಗಳಿಗೆ ಮಾತ್ರವಿತ್ತು. ದಬ್ಬಾಳಿಕೆ ಶೋಷಣೆ ಅತ್ಯಾಚಾರಗಳು ಎಲ್ಲಾ ಕಡೆ ತಾಂಡವಾಡುತ್ತಿದ್ದವು.
ಇಸ್ಲಾಂ ಧರ್ಮದ ಉದಯದಿಂದ ಈ ಅನಿಷ್ಟ ಆಚರಣೆಗಳು ಕೊನೆಗೊಂಡವು. ಇಂದೂ ಸಹ ಮುಂದುವರೆದ ರಾಷ್ಟ್ರಗಳಲ್ಲಿ ಪುರುಷರಿಗೆ ಸಿಗುವಷ್ಟು ಗೌರವ ಸ್ಥಾನಮಾನ ಸ್ತ್ರೀಯರಿಗೆ ಸಿಗುತ್ತಿಲ್ಲ. ಸಮಾನ ಸೇವೆ, ದುಡಿಮೆಗೆ ಸಮಾನ ವೇತನ ಎಂದು ಹೇಳಿದೆ ಹೊರತು ಕೆಲವು ಕಡೆ ಪುರುಷರಿಗಿಂತ ಕಡಿಮೆ ಸಂಭಾವನೆ ಸಿಗುತ್ತದೆ. ಆದರೆ ಇಸ್ಲಾಂ ಧರ್ಮ ಮಹಿಳೆಯರನ್ನು ಅಗೌರವ ಅನಾದಾರಗಳಿಂದ ಕಾಣದೆ, ನಡೆಸಿಕೊಳ್ಳದೆ ಅಮೂಲ್ಯ ಸ್ಥಾನಮಾನಗಳಿಂದ ಆದರಿಸುತ್ತದೆ.
ಕೆಲವು ಮಧ್ಯ ಪ್ರಾಚ್ಯ ದೇಶಗಳಲ್ಲಿ ಅಥವಾ ಬೇರೆಡೆ ಇರುವ ಕೆಲವು ಮುಸ್ಲಿಂ ಕುಟುಂಬಗಳಲ್ಲಿ ಮಹಿಳೆಯರನ್ನು ಕೀಳಾಗಿ ಕಾಣುವುದು ಕೆಟ್ಟರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು ಕಾಣ ಸಿಕ್ಕರೆ ಅದು ಅವರ ಕೀಳು ಸಂಸ್ಕೃತಿ. ಹಿರಿಯರಿಂದ ಬಂದ ಅನಾಗರೀಕ ಸಂಪ್ರದಾಯ ಪದ್ಧತಿಗಳನ್ನೇ ಮುಂದುವರೆಸುತ್ತಿರುವುದರಿಂದ ಅದು ಅವರಲ್ಲಿ ಮಾತ್ರ ಅನುಷ್ಟಾನದಲ್ಲಿದೇ ಹೊರತು ಅವರು ಇಸ್ಲಾಂ ಸ್ವೀಕರಿಸಿ ಅನುಸರಿಸುತ್ತಿರುವುದರಿಂದಲ್ಲ ಎಂಬುದು ಸ್ಪಷ್ಟವಾಗಿದೆ. ಇಸ್ಲಾಂ ಧರ್ಮದಲ್ಲಿ ಅನಿಷ್ಟ ಅನಾಚಾರಗಳು ಇದ್ದಿದ್ದರೆ ಜಗತ್ತಿನ ಅನೇಕ ವಿದ್ಯಾವಂತ ಕುಲೀನ ಮಹಿಳೆಯರು ಇಸ್ಲಾಂ ಧರ್ಮವನ್ನೇಕೆ ಸ್ವೀಕರಿಸಿ ಸನ್ಮಾರ್ಗಿಗಳಾಗಿ ಜೀವನ ಸಾಗಿಸುತ್ತಿದ್ದರು ?
ಇಸ್ಲಾಂ ಧರ್ಮದಲ್ಲಿ ಸ್ತ್ರೀಯರನ್ನು ಅವರ ಸ್ಥಾನಮಾನ ಹಾಗೂ ಹಕ್ಕು ಭಾದ್ಯತೆಗಳಿಂದ ವಂಚಿಸಿ, ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ಆದರೆ ಇದು ಸತ್ಯಕ್ಕೆ ಬಹುದೂರದ ಕಲ್ಪನೆ ಮತ್ತು ಹುರುಳಿಲ್ಲದ್ದಾಗಿದೆ. ಹಾಗಾದರೆ ಪ್ರಪಂಚದ ಕೋಟ್ಯಾಂತರ ಮುಸ್ಲಿಂ ಮಹಿಳೆಯರು ವಿದ್ಯಾವಂತರಾಗಿರುವಂತಹಾ ಈ ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಅವರು ತಮ್ಮ ಹಕ್ಕು ಬಾಧ್ಯತೆಗಳಿಂದ ವಂಚಿತಗೊಳ್ಳುತ್ತಿದ್ದಾರೆ ಹಾಗೂ ದಬ್ಬಾಳಿಕೆಗೆ ಗುರಿಯಾಗಿ ಮೂಕ ವೇದನೆ ಅನುಭವಿಸುತ್ತಿದ್ದಾರೆಂಬ ವಿಷಯ ತಪ್ಪು ಕಲ್ಪನೆಯಾಗಿದೆ. ಅಥವ ಇಂತಹಾ ಕಟ್ಟು ಕಥೆಗಳು ಕೇವಲ ಕಾಲ್ಪನಿಕವಲ್ಲವೇ ? ಹೇಗೆಂದರೆ
“ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕಿರುವ ಹಾಗೆಯೇ ಸ್ತ್ರೀಯರಿಗೂ ಪುರುಷರ ಮೇಲೆ ನ್ಯಾಯಯೋಚಿತ ಹಕ್ಕು ಇದೆ’’ (ಕುರ್’ಆನ್:2:228)
ಮುಂದುವರಿದ ರಾಷ್ಟ್ರಗಳೆಂದು ಹೇಳಿಕೊಳ್ಳುತ್ತಿರುವ ಪಾಶ್ಚಿಮಾತ್ಯ ದೇಶಗಳು ಕೇವಲ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಿಗೆ ಕೊಟ್ಟಿರುವಂತಹಾ ಹಕ್ಕು ಬಾಧ್ಯತೆಗಳನ್ನು, ಇಸ್ಲಾಂಧರ್ಮವು (ಅಲ್ಲಾಹನು, ಮಹಮ್ಮದ್{ಸ} ರವರ ಮೂಲಕ) 1435 ವರ್ಷಗಳ ಹಿಂದೆಯೇ ಕೊಟ್ಟು ಅವರು ತಮ್ಮ ಹಕ್ಕುಗಳಿಂದ ಸುಖ ಸಂತೋಷದಿಂದಿರುವಂತೆ ಮಾಡಿದೆ.
ನಿದರ್ಶನ : ಅನಿಬೆಸೆಂಟ್ ಹೇಳಿರುವಂತೆ “ಕ್ರೈಸ್ತ ಧರ್ಮವು ಇಂಗ್ಲೆಂಡ್ ದೇಶದಲ್ಲಿ ಕೇವಲ 30 ವರ್ಷಗಳ ಹಿಂದಿನಿಂದ ಮಹಿಳೆಯರಿಗೆ ಅವರ ಸ್ಥಾನಮಾನಗಳನ್ನು ಪರಿಗಣಿಸಿ, ಅವರ ಆಸ್ತಿಯ ಹಕ್ಕನ್ನು ಮಂಜೂರು ಮಾಡಿದೆ. ಅದೇ ಇಸ್ಲಾಂ ಧರ್ಮವು ಇಂತಹಾ ಎಲ್ಲಾ ಹಕ್ಕುಗಳನ್ನು ಇಸ್ಲಾಂ ಧರ್ಮದ ಪ್ರಾರಂಭದಿಂದಲೂ ಮಹಿಳೆಯರಿಗೆ ನೀಡಿದೆ. ಹೀಗೆ ಮಹಿಳೆಯರು ಇಸ್ಲಾಂ ಧರ್ಮದಲ್ಲಿ ಆತ್ಮರಹಿತ ಜೀವಿಗಳು. ಯಾವ ಹಕ್ಕು ಭಾದ್ಯತೆಗಳೂ ಇಲ್ಲದ ಕೇವಲ ಜೀವಿಗಳು ಎಂದು ಹೇಳುತ್ತಿರುವುದು ನಿಜವಾಗಿಯೂ ಮಿಥ್ಯಾರೋಪ ಮತ್ತು ದೋಷಪೂರಿತ ನಿಂದನೆಯಾಗಿದೆ. (ಮುಹಮ್ಮದ್ {ಸ} ರವರ. ಜೀವನಚರಿತ್ರೆ ಮತ್ತು ಬೋಧನೆಗಳು 133)
ಸಮಾನ ಪ್ರತಿಫಲ ಮತ್ತು ಸಮಾನ ಪರಿಗಣನೆ
ಇಸ್ಲಾಂ ಧರ್ಮದಲ್ಲಿ ಸ್ತ್ರೀಪುರುಷರು ಧರ್ಮಾನುಸರಣೆ ಮಾಡುವ ಅಥವ ಅಲ್ಲಾಹನನ್ನು ಆರಾಧಿಸುವ ವಿಧಿವಿಧಾನಗಳು ಒಂದೇ ಬಗೆಯಾಗಿದ್ದು ಯಾವುದೇ ರೀತಿಯಾದಂತಹಾ ವ್ಯತ್ಯಾಸಗಳಿಲ್ಲ, ಅಲ್ಲಾಹ ವಿಶ್ವಾಸದಲ್ಲಿ, ದೇವದೂತರಲ್ಲಿ, ಪ್ರವಾದಿಗಳಲ್ಲಿ, ಧರ್ಮಗ್ರಂಥಗಳಲ್ಲಿ ಪ್ರಳಯ ದಿನದಲ್ಲಿ ಹಾಗೂ ವಿಶ್ವಕ್ಕೆ ಏಕೈಕ ದೇವನೆಂಬ ನಂಬಿಕೆಯಲ್ಲಿ ಒಂದೇ ಬಗೆ ಅಲ್ಲದೆ ಅಲ್ಲಾಹನು ಅಂತಿಮ ದಿನದಲ್ಲಿ ಸ್ತ್ರೀ-ಪುರುಷರಿಗೆ ನ್ಯಾಯ ತೀರ್ಮಾನ, ದಂಡನೆ, ಪುಣ್ಯಕರ್ಮಗಳಿಗೆ ಸಿಗುವ ಪ್ರತಿಫಲ, ಅನುಗ್ರಹ, ಸ್ವರ್ಗಸುಖ ಇಬ್ಬರಿಗೂ ಒಂದೇ ಬಗೆಯದ್ದಾಗಿದೆ.
ನಿದರ್ಶನ:
“ನಾನು ನಿಮ್ಮಲ್ಲಿ ಯಾರೊಬ್ಬರ ಕರ್ಮವನ್ನೂ ನಿಷ್ಫಲಗೊಳಿಸುವವನಲ್ಲ. ಪುರುಷರಾಗಲಿ ಸ್ತ್ರೀಯರಾಗಲಿ ನೀವೆಲ್ಲ ಒಂದೇ ವರ್ಗದವರು’ (ಖುರ್’ಆನ್-3:195)
ಈ ಮೇಲಿನ ಸೂಕ್ತಿಗಳಿಂದ, ಮಾನವನಿಗೆ ಸಿಗುವ ಧಾರ್ಮಿಕ ಪ್ರತಿಫಲಗಳು ಅವನ ಪಾಪ-ಪುಣ್ಯಗಳ ಕೃತ್ಯದಿಂದಲೇ ಹೊರತು ಸ್ತ್ರೀ-ಪುರುಷರೆಂಬ ಲಿಂಗಭೇದದಿಂದಲ್ಲ,
ಶೈಕ್ಷಣಿಕ ಸಮಾನ ಹಕ್ಕುಗಳು
ಇಸ್ಲಾಂ ಧರ್ಮದಲ್ಲಿ ಪ್ರವಾದಿ ಮುಹಮ್ಮದ್{ಸ} ರವರು `ಪ್ರತಿಯೊಬ್ಬ ಮುಸ್ಲಿಮನಿಗೂ ಶಿಕ್ಷಣ(ಜ್ಞಾನಾರ್ಜನೆ) ಕಡ್ಡಾಯ’ ಎಂದು ನಿರ್ದೇಶಿಸಿದ್ದಾರೆ.
ಹೀಗೆ ಸ್ತ್ರೀಪುರುಷರನ್ನು ಸಮಾನವಾಗಿ ವಿದ್ಯೆ ಪಡೆಯಲು ಜ್ಞಾನ ಸಂಪಾದನೆಗೆ ಲಿಂಗಭೇದವಿಲ್ಲವೆಂದು ಆದೇಶಿಸಿದ್ದಾರೆ. ಹಾಗೂ ಮುಹಮ್ಮದ್{ಸ}ರ ಕಾಲದಲ್ಲೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಮಹಿಳಾಪಂಡಿತರು ಕಾಣಸಿಗುತ್ತಿದ್ದರು. ಅವರಲ್ಲಿ ಕೆಲವರು ಅವರ ಮನೆತನದಲ್ಲೇ ಮತ್ತು ಸಂಗಾತಿಗಳು ಹಾಗೂ ಪುತ್ರಿಯರು ಆಗಿದ್ದರು. ಅವರಲ್ಲಿ ಪ್ರಮುಖರೆಂದರೆ ಪ್ರವಾದಿ.ಮುಹಮ್ಮದ್ {ಸ} ರ ಧರ್ಮ ಪತ್ನಿಯಾದ ‘ಆಯಿಶಾ(ರ)’ ಆಗಿದ್ದರು. ಇವರಿಂದ ಶೇ 25 ರಷ್ಟು ಭಾಗ, ಇಸ್ಲಾಂಮಿನ ಧಾರ್ಮಿಕ ಕಾನೂನು ನೀತಿ ನಿಯಮಗಳು ಜನರಿಗೆ ರವಾನಿಸಲ್ಪಟ್ಟಿವೆ. ಇನ್ನು ಹಲವಾರು ನ್ಯಾಯಶಾಸ್ತ್ರ ಪಂಡಿತ ಮಹನೀಯರು ಮಹಿಳೆಯರಾಗಿದ್ದು ಪುರುಷಪಂಡಿತರು ಇವರ ಶಿಷ್ಯರಾಗಿ ಜ್ಞಾನಾರ್ಜನೆ ಪಡೆಯುತ್ತಿದ್ದರು.
ಜೀವನ ಸಂಗಾತಿ ಆಯ್ಕೆಗೆ ಸಮಾನ ಹಕ್ಕು
ಇಸ್ಲಾಂ ಧರ್ಮವು ಮಹಿಳೆಯರಿಗೆ ತನ್ನ ಜೀವನ ಸಂಗಾತಿಯನ್ನು (ಪತಿಯನ್ನು) ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗೌರವಪೂರ್ವಕವಾಗಿ ನೀಡಿದೆ ಮತ್ತು ವಿವಾಹದ ನಂತರ ತಮ್ಮ ಮನೆತನದ ಹೆಸರನ್ನು ತನ್ನ ಹೆಸರಿನೊಂದಿಗೆ ಲಗತ್ತಿಸಿಕೊಳ್ಳುವ ಹಕ್ಕು ಕೊಟ್ಟಿದೆ.
ನಿದರ್ಶನ :
ಒಮ್ಮೆ ಓರ್ವ ಯುವತಿ ಪ್ರವಾದಿ ಮುಹಮ್ಮದ್{ಸ} ರವರ ಬಳಿ ಬಂದು, “ನನ್ನ ತಂದೆಯವರು ತಮ್ಮ ಘನತೆ, ಸಾಮಾಜಿಕ ಗೌರವಕ್ಕಾಗಿ ನನ್ನನ್ನು ಬಲವಂತವಾಗಿ ತನ್ನ ಸೋದರ/ಸೋದರಿಯ ಮಗನಿಗೆ ವಿವಾಹ ಮಾಡಿದ್ದಾರೆ ಎಂದು ದೂರಿತ್ತಳು. ಪ್ರವಾದಿ ಮುಹಮ್ಮದ್ {ಸ} ಕೂಡಲೆ ಆ ತರುಣಿಯ ತಂದೆಯನ್ನು ಕರೆಸಿದರು ಮತ್ತು ಆ ತರುಣಿಗೆ ತನ್ನಿಚ್ಛೆಯ ಪ್ರಕಾರ ವಿವಾಹವಾದವನೊಂದಿಗೆ ಇರುವ ಹಾಗೂ ನಿರಾಕರಿಸುವ ಸಂಪೂರ್ಣ ಹಕ್ಕನ್ನು ನೀಡಿದರು. ಆ ತರುಣಿಯು ಪ್ರವಾದಿ ಮುಹಮ್ಮದ್{ಸ} ರವರೆ ನಾನು ನನ್ನ ತಂದೆಯ ಗೌರವಕ್ಕಾಗಿ ಅವರು ಮಾಡಿದ ಕಾರ್ಯವನ್ನು ಸ್ವೀಕರಿಸಿದ್ದೇನೆ. ಆದರೆ ಇತರ ಯುವತಿಯರಿಗೆ ಅನ್ಯಾಯ ಆಗಬಾರದೆಂದು ಮತ್ತು ಅವರನ್ನು ಬಲವಂತವಾಗಿ ಮದುವೆ ಮಾಡಬಾರದೆಂಬುದು ನನ್ನ ಇಚ್ಛೆ ಎಂದಳು.
ಸಮಾನತೆಯನ್ನು ಕಾಣುವ ವಿಭಿನ್ನತೆಗಳು
ಕೆಲವು ಬಾಹ್ಯ ಮತ್ತು ದೈಹಿಕ ಭಿನ್ನತೆಗಳು ಒಂದೆಡೆ ಇದ್ದರೂ ವಿಜ್ಞಾನಿಗಳ ಪ್ರಕಾರ ಹಲವು ಸೂಕ್ಷ್ಮವಾದ ವ್ಯತ್ಯಾಸಗಳು ಸ್ತ್ರೀ ಮತ್ತು ಪುರುಷರ ಮಾನಸಿಕ, ಬೌದ್ಧಿಕ, ಭಾವನಾತ್ಮಕ ತಿಳುವಳಿಕೆಯ ಮತ್ತು ಪ್ರತಿಕ್ರಿಯೆಗಳ ಅಂಶಗಳು ಕೆಲವೊಂದು ವಿಷಯಗಳಲ್ಲಿ ವ್ಯತ್ಯಸ್ಥವಾಗಿ ಕಂಡುಬರುತ್ತದೆ.
ಹಾರ್ಡ್‍ವರ್ಡ್ ವಿಶ್ವವಿದ್ಯಾನಿಲಯದ ಖ್ಯಾತ ಜೈವಿಕ ಸಮಾಜಶಾಸ್ತ್ರದ ಅಥವ ಸಾಮಾಜಿಕ ಜೀವವಿಜ್ಞಾನ ಶಾಸ್ತ್ರದ ಪ್ರವೀಣನಾದ ‘ಎಡ್ವರ್ಡ್ ಓ ವಿಲ್ಸನ್’ ಹೀಗೆ ವಿಶಾದಿಸುತ್ತಾನೆ. “ಮಹಿಳೆಯರು ಭಾಷಾಕೌಶಲ್ಯತೆಯಲ್ಲಿ ಪ್ರವೀಣರಾಗಿರುತ್ತಾರೆ ಮತ್ತು ಸಾಮಾಜಿಕ ಕೌಶಲ್ಯತೆ ಹಾಗೂ ಪರರನ್ನು ಅರ್ಥೈಸಿಕೊಳ್ಳುವ ವಿಷಯಗಳಲ್ಲಿ ಪುರುಷರಿಗಿಂತ ಉತ್ತಮರಾಗಿರುತ್ತಾರೆ. ಆದರೆ ಇತರೇ ವಿಷಯಗಳಲ್ಲಿ ಪುರುಷರು ಸ್ವಾತಂತ್ರತೆ, ಒಡೆತನ, ಬಾಹ್ಯಾಕಾಶ, ಗಣಿತಕಲೆ, ಉನ್ನತ ದರ್ಜೆಯ ಅಕ್ರಮಣ ಮತ್ತು ಇತರೇ ವಿಷಯಗಳಲ್ಲಿ ಮೇಲುಗೈ ಹೊಂದಿರುತ್ತಾರೆ. ಎರಡೂ ಲಿಂಗಗಳ ವ್ಯಕ್ತಿಗಳು ಎಲ್ಲಾ ವಿಷಯಗಳಲ್ಲೂ ಒಂದೇ ಬಗೆ ಎಂದು ಪರಿಗಣಿಸುವುದು ಸೂಕ್ಷ್ಮ ಭಿನ್ನತೆಗಳನ್ನು ಅಲಕ್ಷಿಸುವುದು ಮೂರ್ಖತನವಾಗುತ್ತದೆ ಇಸ್ಲಾಂ ಧರ್ಮದಲ್ಲಿ ಸ್ತ್ರೀಪುರುಷರು ಬಹಳಷ್ಟು ವಿಷಯಗಳಲ್ಲಿ ಒಂದೇ ಬಗೆಯಾಗಿದ್ದರೂ, ಕೆಲವು ಅಂಶಗಳಲ್ಲಿ ಅವರ ಕಾರ್ಯ ವೈಖರಿಯಲ್ಲಿ ಭಿನ್ನತೆಗಳು ಗಣನೀಯವಾಗಿವೆ. ಏಕೆಂದರೆ ಅವರವರ ದೈವದತ್ತ ಮತ್ತು ದೇಹಧರ್ಮದ ಪ್ರಾಕೃತಿಕ ವಿಷಯಗಳು ಭಿನ್ನತೆಗೆ ಕಾರಣವಾಗಿವೆ.
ಸೃಷ್ಟಿಸಿದವನು ಅರಿಯದಿರುವನೆ ? ವಸ್ತುತಃ ಅವನು ಅತ್ಯಂತ ಸೂಕ್ಷ್ಮಜ್ಞನೂ ವಿವರಪೂರ್ಣನೂ ಆಗಿರುತ್ತಾನೆ’’ (ಖುರ್’ಆನ್-67:14)
ಕೌಟುಂಬಿಕ (ಘಟಕ) ಒಗ್ಗಟ್ಟು
ಅಲ್ಲಾಹನು ಸ್ತ್ರೀಪುರುಷರನ್ನು ಭಿನ್ನವಾಗಿ ಸೃಷ್ಟಿಸಿರುವುದು ವಿಶಿಷ್ಟಪೂರ್ಣವಾದ ಅವರ ಜೀವನ ಪಾತ್ರವನ್ನು ಕೌಶಲ್ಯಪೂರ್ಣವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಲಿಕ್ಕಾಗಿ. ಈ ಭಿನ್ನತೆಗಳು ಮೇಲು ಕೀಳೆಂಬ ಭಾವನೆಗಳ ದೃಷ್ಟಿಕೋನಕ್ಕೆ ಸಾಕ್ಷಿಯಲ್ಲ. ಆದರೆ ವಿಶಿಷ್ಟಪೂರ್ಣ ಇಸ್ಲಾಂ ಧರ್ಮದಲ್ಲಿ ಕುಟುಂಬವು ಕೇಂದ್ರಿಯ ಪ್ರಾಮುಖ್ಯತೆ ಹೊಂದಿದೆ. ಪುರುಷನು ಮನೆತನದ ಆರ್ಥಿಕ ಹಣಕಾಸಿನ ಜವಾಬ್ದಾರಿಯಿಂದ ಉತ್ತಮ ಜವಾಬ್ದಾರಿ ನಿರ್ವಹಿಸಲು ಬದ್ಧನಾದರೆ ಅಂತೆಯೇ ಸ್ತ್ರೀಯು ಕುಟುಂಬದ ಭೌತಿಕ, ಶೈಕ್ಷಣಿಕ ಹಾಗೂ ಭಾವನಾತ್ಮಕ ಕ್ಷೇತ್ರಗಳಲ್ಲಿ ತನ್ನ ಉತ್ತಮ ಸೇವಾ ಕಾಣಿಕೆ ಸಲ್ಲಿಸುವ ಜವಾಬ್ದಾರಿ ಹೊಂದಿದ್ದಾಳೆ. ಹೀಗೆ ಇಬ್ಬರಲ್ಲೂ ಸಹಕಾರ ಸೇವೆ ತ್ಯಾಗಗಳನ್ನು ಬಳಸಿಕೊಂಡು ಕೌಟುಂಬಿಕ ಮತ್ತು ತಮ್ಮ ಸುಖಶಾಂತಿ ವೃದ್ಧಿಸಲು ಇಸ್ಲಾಂ ಪ್ರೋತ್ಸಾಹಿಸುತ್ತದೆ. ಆದರೆ ಇಬ್ಬರಲ್ಲಿ ಸ್ಪರ್ಧೆ ಅಥವಾ ಮೇಲುಕೀಳೆಂಬ ಭಾವನೆ ಇಸ್ಲಾಂ ಬೆಳೆಸುವುದಿಲ್ಲ.
ಹಾಗೆಯೇ ಪುರುಷನಾಗಲೀ ಮಹಿಳೆಯಾಗಲಿ ಒಬ್ಬರನ್ನೊಬ್ಬರು ಅಗಲಿ ಭಾವನಾತ್ಮಕವಾಗಿ ಸಂತೋಷದಿಂದ ಬಾಳಲಾರರು. ಅಲ್ಲಾಹ ಹೇಳಿದಂತೆ `ಅವರು ನಿಮಗೆ ಉಡುಪಾಗಿರುವರು ಮತ್ತು ನೀವು ಅವರಿಗೆ ಉಡುಪಾಗಿರುವಿರಿ’ (ಖುರ್’ಆನ್-2:187)
ದಂಪತಿಗಳಲ್ಲಿ ಪರಸ್ಪರ ಪ್ರೀತಿ ಮತ್ತು ದಯೆ (ಕರುಣೆ ಅಥವ ಅಂತಃಕರುಣೆ)
ಪ್ರವಾದಿ ಮುಹಮ್ಮದ್{ಸ} ಜನರಿಗೆ ಪ್ರೋತ್ಸಾಹದಾಯಕವಾಗಿ “ತಮ್ಮ ತಮ್ಮ ಜೀವನ ಸಂಗಾತಿಯರನ್ನು ಉತ್ತಮ ಮಟ್ಟದಲ್ಲಿ ನಡೆಸಿಕೊಳ್ಳಬೇಕೆಂದು ಹೇಳಿದ್ದಾರೆ. ಹಾಗೂ “ನಿಮ್ಮಲ್ಲಿ ಯಾರು ತಮ್ಮ ಸಹಜೀವನ ಸಂಗಾತಿಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಾರೋ ಅವರು ಸಮಾಜದಲ್ಲಿ ಅತ್ಯುತ್ತಮರಾಗಿರುತ್ತಾರೆ.
ಪವಿತ್ರ ಕುರಾನ್ :
`ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದನು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.’ (ಖುರ್’ಆನ್-30:21)
ತಾಯಂದಿರ ಮತ್ತು ಪುತ್ರಿಯರ ಉನ್ನತ ಸ್ಥಾನಮಾನಗಳು
ಒಬ್ಬ ತಾಯಿ ತನ್ನ ಮಮತೆ, ಜಾಗ್ರತೆಯ ಶುಶ್ರೂಷೆ, ಪ್ರೀತಿ, ವಾತ್ಸಲ್ಯಗಳಿಂದ ಮಗುವಿನ ಬಾಲ್ಯಾವಸ್ಥೆಯಲ್ಲಿ ಬಹು ಮಹತ್ತರ ಪ್ರಭಾವ ಬೀರುತ್ತಾಳೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಆದುದರಿಂದಲೇ ಇಸ್ಲಾಂ ಧರ್ಮದ ಉನ್ನತ ಗೌರವ, ಸ್ಥಾನಮಾನಗಳಿಗಾಗಿ, ತಾಯಂದಿರಿಗೆ ಕೊಡುವ ಆದರತೆ ಸನ್ಮಾನಗಳು ನಿಜಕ್ಕೂ ಸರಿಯೆ.
ಪವಿತ್ರ ಕುರಾನಿನಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ.
`ಮತ್ತು ತನ್ನ ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ನಾವು ಮಾನವನಿಗೆ ಆದೇಶಿಸಿದೆವು. ಅವನ ತಾಯಿಯು ಬಹಳ ಕಷ್ಟಪಟ್ಟು ಅವನನ್ನು ಗರ್ಭದಲ್ಲಿರಿಸಿದಳು ಮತ್ತು ಕಷ್ಟಪಟ್ಟು ಅವನನ್ನು ಹೆತ್ತಳು’ (ಖುರ್’ಆನ್-46:15)
ಒಬ್ಬರು ಒಮ್ಮೆ ಪ್ರವಾದಿ ಮುಹಮ್ಮದ್ {ಸ} ರವರನ್ನು ಪ್ರಶ್ನಿಸುತ್ತಾರೆ. “ ಓ ಪ್ರಿಯ ಮುಹಮ್ಮದ್ {ಸ} ರವರೆ, ನಮ್ಮಲ್ಲಿ ಯಾವ ವ್ಯಕ್ತಿ ಅಲ್ಲಾಹನಿಗೆ ಅತ್ಯಂತ ಪ್ರಿಯ ಮತ್ತು ಸನ್ಮಾನಕ್ಕೆ ಯೋಗ್ಯ (ಅರ್ಹ) ನಾಗುತ್ತಾನೆ’’ ? ಪ್ರವಾದಿ ಮುಹಮ್ಮದ್{ಸ}ರವರು ಸ್ಪಷ್ಟಪಡಿಸಿದರು. ‘ನಿಮ್ಮ ತಾಯಿ’ ಪುನಃ ನಂತರ ಯಾರು ಎಂದು ಕೇಳಿದಾಗ, ಅದೇ ಉತ್ತರವನ್ನು ನೀಡುವರು. ಮತ್ತೊಮ್ಮೆ ಇವರ ನಂತರ ಯಾರು ಎಂದು ಕೇಳಿದಾಗ ಅದೇ ಉತ್ತರವನ್ನು ನೀಡುವರು. ನಂತರ ನಾಲ್ಕನೇ ಬಾರಿ ಕೇಳಿದಾಗ ‘ನಿಮ್ಮ ತಂದೆ’ ಎಂದು ಉತ್ತರಿಸಿದರು.
ಆದುದರಿಂದಲೇ ಯಾರು ತನ್ನ ಮಾತಾಪಿತರನ್ನು ಪ್ರೀತಿ ಆದರಗಳಿಂದ ಚೆನ್ನಾಗಿ ಪಾಲಿಸಿ ಪೋಷಿಸುತ್ತಾನೋ ಅಲ್ಲಾಹನು ಆತನಿಗೆ ತನ್ನ ಪ್ರೀತಿ ಮತ್ತು ದಯೆ, ಉತ್ತಮ ಸ್ಥಾನ, ಸನ್ಮಾನ ಕೊಡುತ್ತಾನೆ.
ಪ್ರವಾದಿ ಮುಹಮ್ಮದ್{ಸ} ರವರು ಹೀಗೆ ತಿಳಿಸುತ್ತಾರೆ. ಅಲ್ಲಾಹನು ಯಾರಿಗೆ ಇಬ್ಬರು ಪುತ್ರಿಯರನ್ನು ದಯಪಾಲಿಸಿದನೋ ಅವನು ಅವರನ್ನು ಅತ್ಯಂತ ಪ್ರೀತಿ ಅಂತಃಕರುಣೆಯಿಂದ ಸಾಕಿ-ಸಲುಹಿ ಸಂಪ್ರೀತಿಯಿಂದ ಪೋಷಿಸುತ್ತಾನೋ ಆ ಕಾರಣದಿಂದ ಆತನು ಸ್ವರ್ಗ ಸುಖ ಪಡೆಯುತ್ತಾನೆ.’’