ಪರಮ ದಯಾಮಯನು ಕರುಣಾನಿಧಿಯೂ ಆದ ದೇವ ನಾಮದಿಂದ
ದೇವನಿದ್ದರೆ ಅನ್ಯಾಯಗಳೇಕೆ?
- ದೇವನು ಏಕೆ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿದ್ದಾನೆ?
- ದೇವನೆಂದು ಒಬ್ಬನಿದ್ದರೆ ಇಲ್ಲಿ ಅಕ್ರಮಗಳು ಏಕೆ ನಡೆಯುತ್ತಿವೆ?
- ದೇವ ವಿಶ್ವಾಸಿಗಳಿಗೆ ರೋಗಗಳು ಮತ್ತು ಕಷ್ಟಗಳು ಏಕೆ ಬರುತ್ತಿವೆ?
- ದೇವರನ್ನು ನಂಬದವರು ಹಾಗೂ ಆರಾಧಿಸದವರು ಚೆನ್ನಾಗಿಯೇ ಬದುಕುತ್ತಾರಲ್ಲವೆ?
- ದೇವರನ್ನು ಆರಾಧಿಸದೇ ಇರುವವರಿಗೆ ನಷ್ಟವೇನೂ ಆಗುತ್ತಿಲ್ಲವಲ್ಲ?
ಈ ರೀತಿಯ ಸಂಶಯಗಳು ಬಹಳಷ್ಟು ಜನರಲ್ಲಿ ಬರುವುದು ಸಹಜವೇ ಆಗಿದೆ. ಆದರೂ ಬಹಳಷ್ಟು ಜನರು ಇದು ದೇವರ ನಂಬಿಕೆ. ಇದರಲ್ಲಿ ಪ್ರಶ್ನೆಗಳನ್ನು ಕೇಳಬಾರದು. ಆ ನಂಬಿಕೆಯನ್ನು ಹಾಗೆಯೇ ಒಪ್ಪಿಕೊಳ್ಳಬೇಕೆಂದು ಹೇಳಿ, ಸಮಾಧಾನಪಡಿಸಿ ಮುಂದೆ ದೇವನ ಬಗ್ಗೆ ಚಿಂತನೆಯೂ ಮಾಡಲು ಬಿಡುವುದಿಲ್ಲ. ಈ ಸಂಶಯಗಳ ಅಸ್ಪಷ್ಠತೆ ಅವರನ್ನು ನಾಸ್ತಿಕತೆಯೆಡೆಗೆ ಒಯ್ಯುತ್ತದೆ. ಆದರೆ ದೇವನ ಸತ್ಯವಾದ ಇಸ್ಲಾಮ್ ಮಾರ್ಗ ಈ ಎಲ್ಲಾ ಪ್ರಶ್ನೆಗಳಿಗೆ ಸುಸ್ಪಷ್ಟವಾದ ಉತ್ತರ ನೀಡುತ್ತದೆ. ವೈಚಾರಿಕವಾಗಿ ಪರಿಶೀಲಿಸಿದರೆ ಈ ಸಂದೇಹ ಖಂಡಿತ ನಿವಾರಣೆ ಮಾಡುತ್ತದೆ.
ಈ ಮೇಲಿನ ಸಂಶಯಗಳು ಬರಲು ಮುಖ್ಯವಾದ ಕಾರಣವೇನೆಂದರೆ ಈ ಪ್ರಪಂಚವೆ ಎಲ್ಲವೂ, ಪ್ರಪಂಚದಲ್ಲೇ ಎಲ್ಲವು, ಇದಕ್ಕಿಂತ ಹೆಚ್ಚಿನದ್ದು ಇಲ್ಲವೇ ಇಲ್ಲ ಎಂಬ ಸಂಕುಚಿತ ಮನೋಭಾವನೆ.
ಒಂದು ಬಾವಿಯೊಳಗೆ ಹುಟ್ಟಿ ಬೆಳೆದಿರುವ 2 ಕಪ್ಪೆಗಳು ಆ ಬಾವಿಯ ಆಳ ಅಗಲದ ಬಗ್ಗೆ, ಬಣ್ಣದ ಬಗ್ಗೆ, ಅಭಿಮಾನದಿಂದ ಇದೆ ಸರ್ವಸ್ವ ಎಂಬಂತೆ ಮಾತನಾಡುತ್ತಿದ್ದವು. ಆಗ ಬಾವಿಯ ಮೇಲಿನಿಂದ ಬಕೆಟ್ ಒಂದು ನೀರಿಗಿಳಿದಾಗ ಅದು ಈ ಕಪ್ಪೆಗಳನ್ನು ನೀರಿನೊಂದಿಗೆ ಕೊಂಡೊಯ್ದು ಬಾವಿಯಿಂದ ಹೊರಗೆ ಬಿಟ್ಟಿತು. ಹೊರಗೆ ಬಿದ್ದ ಕಪ್ಪೆಗಳಿಗೆ ಸುತ್ತಮುತ್ತಲಿನ ಪ್ರದೇಶ ನೋಡಿ ಆಶ್ಚರ್ಯವಾಗಿತ್ತು. ಆಗಲೆ ಅವುಗಳಿಗೆ ಈ ಊರಲ್ಲಿ ತಮ್ಮ ಬಾವಿ ಎಷ್ಟು ಚಿಕ್ಕ ಸ್ಥಳ ಎಂಬುದು ಅರಿವಾಯಿತು. ಹೀಗೆಯೇ ಆ ಕಪ್ಪೆಗಳಿಗೆ ರಾಕೆಟ್ ನಂತಹ ವಾಯುವಾಹನವೊಂದರಲ್ಲಿ ಮೇಲೆ ತೆಗೆದುಕೊಂಡು ಹೋಗಿ ತೋರಿಸಿದರೆ, ಈ ಊರು ಜಿಲ್ಲೆಯ ಒಂದು ಭಾಗ ಎಂದು ಗೊತ್ತಾಗುತ್ತದೆ. ಇನ್ನೂ ಮೇಲೆ ಕೊಂಡೊಯ್ದು ತೋರಿಸಿದರೆ, ಈ ಊರಿನ ಭಾಗ ಕರ್ನಾಟಕ, ಕೇರಳ, ತಮಿಳುನಾಡುಗಳೆಂಬ ರಾಜ್ಯಗಳ ಒಂದು ಭೂ ಭಾಗವೆಂಬುದು ಕಾಣುತ್ತದೆ. ಇನ್ನೂ ಮೇಲೆ ಹೋದಂತೆ ಭಾರತವಿರುವ ಏಷ್ಯಾಖಂಡ ಮತ್ತು ಇತರೆ ಖಂಡಗಳು ಕಾಣಸಿಗುತ್ತವೆ. ಇನ್ನೂ ಮೇಲೆ ಹೋದಂತೆ ಭೂಮಿಯು ಒಂದು ಚೆಂಡಿನಂತಿರುವ ಉಂಡೆಯಾಗಿದ್ದು, ಸೌರವ್ಯೂಹದ ಒಂದು ಭಾಗವಾಗಿದೆ ಎಂಬುದು ಕಾಣಸಿಗುತ್ತದೆ. ಇನ್ನೂ ದೂರ ಸರಿದಂತೆ ಭೂಮಿಯು ಆಕಾಶ ಕಾಯಗಳಲ್ಲಿರುವ ಒಂದು ಕಣ ಏಂಬುದು ಆ ಕಪ್ಪೆಗಳಿಗೆ ತಿಳಿಯುತ್ತದೆ.
ಈ ಬಾವಿಯ ಕಪ್ಪೆಗಳಂತೆಯೇ ನಮ್ಮಲ್ಲಿ ತುಂಬಾ ಜನರು ಜೀವಿಸುತ್ತಿದ್ದೇವೆ. ವಿಜ್ಞಾನ ಎಷ್ಟೇ ಬೆಳವಣಿಗೆಯಾದರೇನು ತಮ್ಮ ಬುದ್ಧಿಯನ್ನು ಮಂಕಾಗಿಸಿ ಈ ಪ್ರಪಂಚದ ವಾಸ್ತವಿಕತೆಯ ಬಗ್ಗೆ ಚಿಂತಿಸುತ್ತಿಲ್ಲವಲ್ಲ. ಇದು ತಪ್ಪಾಗಿದೆ, ಈ ರೀತಿಯ ಸಂಕುಚಿತ ಚಿಂತನೆಯುಳ್ಳವರಿಗೆ ದೇವರ ಬಗ್ಗೆ ಮತ್ತು ಅವನ ಯೋಜನೆಗಳ ಬಗ್ಗೆ ಯೋಚಿಸಲಾಗುತ್ತಿಲ್ಲ. ಈ ವಾಸ್ತವಿಕತೆಯನ್ನು ಕಣ್ಣುಮುಚ್ಚಿಕೊಂಡು ತಳ್ಳುವ ಕಾರಣದಿಂದ ಅಂತಹವರು ನರಕಾಗ್ನಿಗೆ ಬಲಿಯಾಗುತ್ತಾರೆ. ಬನ್ನಿರಿ, ನಾವು ಸ್ವಲ್ಪ ವಿಶಾಲವಾಗಿ ಚಿಂತಿಸೋಣ.
ಈ ಪ್ರಪಂಚದ ವಿಶಾಲತೆ, ಪಕ್ವತೆ, ಚಲನೆ, ಮತ್ತು ಇದರ ಹಿಂದೆ ಮುಂದೆ ಇರುವ ವಿಷಯಗಳೆಲ್ಲವೂ ಸೃಷ್ಟಿಕರ್ತನ ಬಗ್ಗೆಯೂ, ಅವನ ಪದ್ಧತಿಗಳ ಬಗ್ಗೆಯೂ ಹೇಳುವ ದೃಷ್ಠಾಂತಗಳಾಗಿವೆ ಎಂಬುದು ನಾವು ನೋಡುತ್ತೇವೆ. ದೇವನು ತನ್ನ ಗ್ರಂಥದಲ್ಲಿ ಹೇಳುವನು
“ಅಲ್ಲಾಹನು ಸತ್ಯವಿಶ್ವಾಸಿಗಳ ನಡುವೆ ಅವರಲ್ಲೆ ಒಬ್ಬರನ್ನು ದೂತರಾಗಿ ನೇಮಿಸುವ ಮೂಲಕ ಅವರಿಗೆ ಉಪಕಾರ ಮಾಡಿರುವನು. ಅವರು (ದೂತರು) ಅವರಿಗೆ ದೇವರ ವಚನಗಳನ್ನು ಓದಿ ಕೇಳಿಸುತ್ತಾರೆ. ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ಯುಕ್ತಿಯ ಜ್ಞಾನವನ್ನು ನೀಡುತ್ತಾರೆ. ಇದಕ್ಕೆ ಮುನ್ನ ಅವರು (ವಿಶ್ವಾಸಿಗಳು) ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದರು” ಖುರ್‍ಆನ್2:164.
ಈ ರೀತಿಯಾಗಿ ಇಡೀ ಪ್ರಪಂಚವು ನಮಗಾಗಿ ವ್ಯವಸ್ಥಿತವಾಗಿ ನಡೆಯುತ್ತಿರುವಾಗ ನಾವು ವ್ಯರ್ಥವಾಗಿ ಸೃಷ್ಟಿಸಲ್ಪಟ್ಟಿದ್ದೇವೆಯೇ? ಹೀಗೆ ಚಿಂತನೆ ಮಾಡಿದರೆ ದೇವನ ಸಂದೇಶವಾಕರು ಮತ್ತು ದೇವನ ಗ್ರಂಥಗಳು ನಮಗೆ ಹೇಳುವುದು ವಾಸ್ತವ ಎಂಬುದು ಅರ್ಥವಾಗುತ್ತದೆ. ಆ ವಾಸ್ತವವೇನೆಂದರೆ ಈ ಪ್ರಪಂಚವನ್ನು ದೇವನು ಒಂದು ಪರೀಕ್ಷಾ ಕೊಠಡಿಯೊಳಗೆ ವಿಧಿಸಲ್ಪಟ್ಟಿದ್ದು, ಆ ಕಾಲದಲ್ಲಿ ಬಂದು ಹೋಗುವೆವು. ಇಲ್ಲಿ ದೇವನ ಆಜ್ಞೆಗಳಿಗೆ ವಿಧೇಯವಾಗಿ ಮಾಡುವ ಕರ್ಮಗಳು ಪುಣ್ಯಗಳಾಗಿ ಮತ್ತು ದೇವನ ಆಜ್ಞೆಗಳಿಗೆ ವಿರುದ್ಧವಾಗಿ ಮಾಡುವ ಕಾರ್ಯಗಳು ಪಾಪಗಳಾಗಿ ಅಥವಾ ಕೆಡುಕುಗಳಾಗಿ ದಾಖಲಾಗುತ್ತವೆ. ಈ ರೀತಿಯಾಗಿ ಪ್ರತಿಯೊಬ್ಬರಿಗೂ ಒಳಿತು, ಕೆಡುಕು ಅಥವಾ ಪಾಪ-ಪುಣ್ಯ ಮಾಡಲು ಸ್ವಾತಂತ್ರ್ಯ ಹಾಗೂ ಸಂದರ್ಭ ಕೊಡುವ ಸ್ಥಳವೇ ಈ ತಾತ್ಕಾಲಿಕ ಪರೀಕ್ಷಾ ಕೊಠಡಿ. ಹಾಗೆ ಇಲ್ಲಿ ಐಶ್ವರ್ಯವೂ, ಬಡತನವೂ, ಒಳ್ಳೆಯದು, ಕೆಡುಕು, ನ್ಯಾಯ-ಅನ್ಯಾಯ ಎಂಬುದೆಲ್ಲಾ ನಮ್ಮ ಜೀವನದಲ್ಲಿ ಮತ್ತೆ ಮತ್ತೆ ಬರುತ್ತಿರುತ್ತವೆ. ಒಳ್ಳೆಯವರಿಗೆ ಕಷ್ಟವು, ಕೆಟ್ಟವರಿಗೆ ಸುಖ ನೀಡುವುದು ಇಲ್ಲಿ ಸಾಮಾನ್ಯ. ಆದರೆ ಅದನ್ನು ನೋಡಿ ಅವಸರದಿಂದ ಯಾವುದೇ ನಿರ್ಧಾರವನ್ನು ಕೈಗೊಳ್ಳಬಾರದು. “ದೇವನೆ ಇಲ್ಲವೆಂದು, ದೇವನಿದ್ದರೆ ಈ ಅನ್ಯಾಯಗಳು ನಡೆಯುತ್ತಿದ್ದವಾ?” ಎಂದು ಹೇಳುವುದು ಅಜ್ಞಾನದ ಸಂಕೇತವಾಗಿದೆ.
ತಕ್ಷಣ ಶಿಕ್ಷಿಸಿದರೇನಾಗುವುದು?
ಒಂದು ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ನಡೆಯುತ್ತಿರುವಾಗ, ಒಬ್ಬ ವಿಧ್ಯಾರ್ಥಿ ತಪ್ಪಾಗಿ ಉತ್ತರ ಬರೆಯುತ್ತಿರುವುದನ್ನು ನೋಡಿದ ಕೊಠಡಿ ಮೇಲ್ವಿಚಾರಕ ತಕ್ಷಣ ಮಧ್ಯ ಪ್ರವೇಶಿಸಿ ಆ ವಿಧ್ಯಾರ್ಥಿಯನ್ನು ಸರಿಪಡಿಸಿದರೆ, ಅಥವಾ ಶಿಕ್ಷಿಸಿದರೆ ಪರೀಕ್ಷೆಯ ಮುಖ್ಯ ಉದ್ದೇಶ ಇಡೇರುತ್ತದೆಯೆ? ಅದೇ ರೀತಿಯಾಗಿ ಇದು ದೇವನು ನಡೆಸುತ್ತಿರುವ ಪರೀಕ್ಷೆಯೆ ಆಗಿದೆ. ದೇವನು ಪರೀಕ್ಷಾ ಕೊಠಡಿಗೆ ಒಂದು ಕಾಲಾವಕಾಶವನ್ನು ನಿಶ್ಚಯಿಸಿದ್ದಾನೆ. ಹಾಗೆಯೇ ಈ ಕೊಠಡಿಯೊಳಗೆ ಬಂದು ಹೋಗುವ ಪ್ರತಿಯೊಬ್ಬರಿಗೂ ಸಹ ಅವರದೇ ಆದ ಕಾಲಾವಕಾಶವನ್ನು ನಿಶ್ಚಯಿಸಿದ್ದಾನೆ. ಈ ಪರೀಕ್ಷೆಗೆ ಕೂರುವ ಎಲ್ಲರಿಗೂ ಅದನ್ನು ಪೂರ್ತಿಗೊಳಿಸುವ ಅವಕಾಶವನ್ನು ಕೊಟ್ಟಿದ್ದಾನೆ. ಕೆಲವರು ಅವಸರ ಪಟ್ಟು ದೇವನು ಅನ್ಯಾಯಿಗಳಿಗೆ ತಕ್ಷಣ ಏಕೆ ಶಿಕ್ಷೆಕೊಡುತ್ತಿಲ್ಲ ಎಂದು ಕೇಳುವ ಪ್ರಶ್ನೆಗೆ ಉತ್ತರವಾಗಿ ದೇವನು ತನ್ನ ಗ್ರಂಥದಲ್ಲಿ ಹೇಳುತ್ತಿದ್ದಾನೆ.
“ಒಂದು ವೇಳೆ ದೇವನು ಜನರು ಎಸಗುವ ಅಕ್ರಮಕ್ಕಾಗಿ ಅವರನ್ನು (ಆಗಲೇ) ದಂಡಿಸಲು ಹೊರಟಿದ್ದರೆ, ಅವನು ಇದರ (ಭೂಮುಖದ) ಮೇಲೆ ಯಾವ ಜೀವಿಯನ್ನು ಜೀವಂತ ಉಳಿಸುತ್ತಿರಲ್ಲಿಲ್ಲ. ನಿಜವಾಗಿ ಅವನು ಒಂದು ನಿರ್ದಿಷ್ಟ ಅವಧಿಯ ತನಕ ಅವರಿಗೆ ಕಾಲಾವಕಾಶವನ್ನು ನೀಡುತ್ತಿದ್ದಾನೆ. ಕೊನೆಗೆ ಅವರ ಕಾಲವು ಬಂದು ಬಿಟ್ಟಾಗ, ಅದನ್ನು ಕ್ಷಣ ಮಾತ್ರಕ್ಕಾದರೂ ಮುಂದೂಡಲು ಅಥವಾ ಹಿಂದೂಡಲು ಅವರಿಂದ ಸಾಧ್ಯವಿಲ್ಲ.” ಖುರ್‍ಆನ್ 16 : 61.
“ಮತ್ತು ನಿಮ್ಮೊಡೆಯನು ಕ್ಷಮಾಶೀಲನೂ ಕರುಣಾಳುವೂ ಅವನು ಅವರ ಎಲ್ಲ ಕರ್ಮಗಳ ಆಧಾರದಲ್ಲಿ ಅವರನ್ನು ದಂಡಿಸಲು ಹೊರಟಿದ್ದಾರೆ. ಅವರ ಮೇಲೆ ಶಿಕ್ಷೆಯನ್ನೆರಗಿಸಲು ಆತುರಪಡುತ್ತಿದ್ದನು. ಆದರೆ ಅವನು ಅವರಿಗೆಂದು ಒಂದು ಸಮಯವನ್ನು ನಿಶ್ಚಯಿಸಿಟ್ಟಿರುವನು. ಅದರ ವಿರುದ್ಧ ಅವರಿಗೆ ಯಾವ ಆಶ್ರಯವೂ ಸಿಗದು.” ಖುರ್‍ಆನ್ 18:58.
ನ್ಯಾಯ ಯಾವಾಗ ಪೂರ್ಣಗೊಳ್ಳುತ್ತದೆ?
ಈ ಪರೀಕ್ಷಾ ಕೊಠಡಿ ಒಂದು ದಿನ ಮುಚ್ಚಲಾಗುತ್ತದೆ. ನಂತರ ದೇವನ ಆಜ್ಞೆಯಿಂದ ಪರೀಕ್ಷೆಯ ತೀರ್ಪು ಸಹ ಬರಲಿದೆ. ಅಂದು ಪ್ರಪಂಚದಲ್ಲಿ ಹುಟ್ಟಿರುವ ಮೊದಲ ಮಾನವನಿಂದ ಕೊನೆಯ ಮಾನವನವರೆಗೂ ಎಲ್ಲರಿಗೂ ಪುನಃ ಜೀವ ಕೊಟ್ಟು ಎಬ್ಬಿಸಲಾಗುತ್ತದೆ. ಅಂದು ಕೊನೆಯ ತೀರ್ಪಿನ ದಿನ ಯಾರಿಗೆ ಪರೀಕ್ಷೆಯಲ್ಲಿ ದೇವನು ವಿಜಯ ನೀಡುತ್ತಾನೊ ಅವರಿಗೆ ಸ್ವರ್ಗ, ಯಾರು ಅನುತೀರ್ಣರಾಗುತ್ತಾರೋ ಅವರಿಗೆ ನರಕವು ವಿಧಿಸಲ್ಪಡುತ್ತದೆ.
“ಪ್ರತಿಯೊಂದು ಜೀವವೂ ಮರಣವನ್ನು ಸವಿಯಲೇ ಬೇಕು. ಪುನರುತ್ಥಾನ ದಿನ ನಮಗೆ ನಿಮ್ಮ (ಕರ್ಮಗಳು) ಪೂರ್ಣ ಪ್ರತಿಫಲವು ಸಿಗಲಿದೆ. (ಅಂದು) ನರಕದಿಂದ ರಕ್ಷಿತನಾದವನು ಮತ್ತು ಸ್ವರ್ಗವನ್ನು ಪ್ರವೇಶಿಸಿದವನು ವಿಜಯಿಯಾದನು. ಇಹಲೋಕದ ಜೀವನವಂತೂ ಕೇವಲ ಒಂದು ಮೋಸದ ವ್ಯವಹಾರವೇ ಹೊರತು ಬೇರೇನೂ ಅಲ್ಲ.” ಖುರ್‍ಆನ್ 3: 185.
ಹೌದು ಆ ದಿನವೇ ನ್ಯಾಯ ಪೂರ್ಣಗೊಳ್ಳವ ದಿನ ಆಗಿದೆ. ಈ ಭೂಮಿಯ ಮೇಲೆ ಮಾಡಿರುವ ಎಲ್ಲಾ ಅನ್ಯಾಯಗಳು, ಮೋಸಗಳು, ಮಾನವನ ಹಕ್ಕುಗಳ ಉಲ್ಲಂಘನೆಗಳು, ಪ್ರತಿಯೊಂದೂ ಕೂಡ ತೆರೆಯಲ್ಪಡುತ್ತವೆ. ಯಾರೂ ನೋಡುತ್ತಿಲ್ಲವೆಂದು ರಹಸ್ಯವಾಗಿ ಮಾಡಿರುವ ಕಾರ್ಯಗಳಾಗಲೀ, ನಮ್ಮನ್ನು ಯಾರೂ ಕೇಳುವವರಿಲ್ಲ ಎಂಬ ಅಹಂಕಾರದಿಂದ ಮಾಡಿರುವ ಅಕ್ರಮಗಳಾಗಲೀ ಎಲ್ಲವೂ ಹೊರ ಹಾಕಲ್ಪಡಲಿವೆ. ಅಂದು ಪ್ರತಿಯೊಬ್ಬರಿಗೂ ಅವರ ಸಂಪೂರ್ಣ ಹಕ್ಕುಗಳನ್ನು ಕೊಡಲಾಗುತ್ತದೆ ಎಷ್ಟೆಂದರೆ ಒಂದು ಕಣದಷ್ಟು ವ್ಯತ್ಯಾಸವಾಗಲಾರದು.
“ನ್ಯಾಯ ತೀರ್ಮಾನ ದಿನದಂದು ಅವರವರ ಹಕ್ಕುಗಳನ್ನು ಅವರವರಿಗೆ ನೀವು ಕೂಡಲೇ ಬೇಕಾಗುತ್ತದೆ. ಕೊಂಬಿರುವ ಕುರಿಯು ಕೊಂಬಿಲ್ಲದ ಕುರಿಯ ಮೇಲೆ ಅತಿಕ್ರಮವೆಸಗಿದ್ದರೆ ಅದರ ಬದಲನ್ನು ಸಹ ಅಂದು ಕೊಡಲಾಗುವುದು”. “ಹದೀಸ್‍ಗ್ರಂಥ 4679 ಮುಸ್ಲಿಂ”