ನೀವೇಕೆ ಆರಾಧಿಸುವುದಿಲ್ಲ?
ಆರಾಧನೆಯ ಮಹತ್ವವನ್ನರಿತಿರುವಾಗಲೂ, ಅನೇಕ ಮುಸ್ಲಿಮರು ಆರಾಧಿಸದಿರುವುದು ಅಥವಾ ಆರಾಧನೆಯ ಬೇಡಿಕೆಗಳನ್ನು ಪೂರೈಸದಿರುವುದು ನಿಜಕ್ಕೂ ದುಃಖದಾಯಕ ಸಂಗತಿಯಾಗಿರುತ್ತದೆ. ಆರಾಧನೆಯ ಮುಖ್ಯ ಉದ್ದೇಶವು ಅಲ್ಲಾಹನೊಂದಿಗಿನ ಮಾನವನ ಸಂಬಂಧವನ್ನು ಭದ್ರಗೊಳಿಸುವುದಾಗಿರುತ್ತದೆ; ಅವನ ಎಲ್ಲಾ ಅನುಗ್ರಹಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿರುತ್ತದೆ; ಮತ್ತು ನಿಮಗೆ ಅಲ್ಲಾಹನ ಹಿರಿಮೆಯನ್ನು ಜ್ಞಾಪಿಸುವುದಾಗಿರುತ್ತದೆ. ಮಾನವ ಶರೀರದ ಪೋóಷಣೆಗೆ ನೀರು, ಫಲಾಹಾರಗಳ ಅವಶ್ಯಕತೆಯಿರುವಂತೆಯೇ, ಅವನ ಅಂತರಾತ್ಮದ ಪೋಷಣೆಯು ಆರಾಧನೆಯ ಮೂಲಕ ಆಧ್ಯಾತ್ಮಿಕ ಬೇಡಿಕೆಗಳನ್ನು ಪೂರೈಸುವುದರಲ್ಲಿರುತ್ತದೆ. ಮಾನವನು ಆಧ್ಯಾತ್ಮಿಕವಾಗಿ ನಿರ್ಜೀವಿಯಾಗಿದ್ದು, ಹೊರನೋಟಕ್ಕೆ ಆರೋಗ್ಯವಂತನಾಗಿ ಗೋಚರಿಸುತ್ತಿರಲೂಬಹುದು,
ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ), ಹೇಳಿದರು, “ಅಲ್ಲಾಹನನ್ನು ಸ್ಮರಿಸುವವನು ಮತ್ತು ಸ್ಮರಿಸದವನ ಉದಾಹರಣೆ, ಸಜೀವಿ ಹಾಗು ನಿರ್ಜೀವಿಯಂತಿದೆ.”
ಅಲ್ಲಾಹ್ ಹೇಳುತ್ತಾನೆ, “ಓ ಸತ್ಯವಿಶ್ವಾಸಿಗಳೇ! ಅಲ್ಲಾಹ್ ಮತ್ತು ಅಲ್ಲಾಹನ ಸಂದೇಶವಾಹಕರು ನಿಮ್ಮನ್ನು ಜೀವನಪ್ರದಾನ ಮಾಡುವ ಸಂಗತಿಯೆಡೆಗೆ ಕರೆಯುತ್ತಿರಲು,(ಅವರ ಕರೆಗೆ) ಓಗೊಡಿರಿ.” -ಖುರ್‍ಆನ್ 8:24
ಇದರ ಮಹತ್ವ:
ಅಲ್ಲಾಹನೊಂದಿಗೆ ನೇರ ಸಂಭಾಷಣೆ,
“ಸಾಷ್ಟಾಂಗವೆರಗಿರುವ ಸ್ಥಿತಿಯಲ್ಲಿ ಮಾನವನು ತನ್ನ ಪ್ರಭುವಿಗೆ ಅತಿ ನಿಕಟನಾಗಿರುವನು”
ಆರಾಧನೆ(ಅಸ್-ಸಲಾಹ್)ಗೆ ವಾಸ್ತವದಲ್ಲಿ ಅರಬಿಭಾಷೆಯಲ್ಲಿ ಬಳಸುವ ಪದದ ನೈಜ ಅರ್ಥ “ಸಂಪರ್ಕ ಕಲ್ಪಿಸುವುದು” ಆಗಿರುತ್ತದೆ. ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ಹೇಳುತ್ತಾರೆ, “ಆರಾಧನೆಗಾಗಿ ಯಾರಾದರೂ ನಿಂತಿರಲು, ಆತನು ಅಲ್ಲಾಹನೊಂದಿಗೆ ಸಂಭಾಷಣೆಯಲ್ಲಿರುವನು, ಆದ್ದರಿಂದ, ಅವನೊಂದಿಗೆ ಮಾತನಾಡುವಾಗ ಗಂಭೀರವಾಗಿರಿ.” ನಿಮ್ಮ ಸೃಷ್ಟಿಕರ್ತನೊಂದಿಗಿನ ಈ ಸಂಬಂಧವನ್ನು ಕಡಿಯದಿರಿ.
ಇಸ್ಲಾಮಿನ ಆಧಾರಸ್ತಂಭ
ನಮಾಝ್, ಇಸ್ಲಾಮಿನ ಆಧಾರಸ್ತಂಭಗಳಲ್ಲಿ ಎರಡನೆಯ ಮುಖ್ಯ ಆಧಾರಸ್ತಂಭವಾಗಿರುತ್ತದೆ, ಮತ್ತು ಓರ್ವ ಮುಸ್ಲಿಮನ ಬಾಳಿನಲ್ಲಿ ದಿನನಿತ್ಯದ ಕಡ್ಡಾಯ ಕರ್ಮಗಳಲ್ಲೊಂದಾಗಿರುತ್ತದೆ. ಸಂದರ್ಭ-ಸನ್ನಿವೇಶಗಳನ್ನು ಲೆಕ್ಕಿಸದೆ ಪ್ರತಿದಿನವೂ ಈ ಕರ್ಮವನ್ನು ಪೂರೈಸಲೇಬೇಕಾಗಿರುತ್ತದೆ. ವಾಸ್ತವದಲ್ಲಿ, ಯುದ್ಧರಂಗದಲ್ಲಿಯೂ ಮುಸ್ಲಿಮರಿಗೆ ನಮಾಝ್ ಮಾಡುವುದರಿಂದ ಹಿಂಜರಿಯುವ ಅವಕಾಶವನ್ನು ಅಲ್ಲಾಹನು ನೀಡಿರುವುದಿಲ್ಲ.
“ನಿಮ್ಮ ನಮಾಝನ್ನು ಕಟ್ಟುನಿಟ್ಟಾಗಿ ಪಾಲಿಸಿರಿ…. (ಶತ್ರುಗಳನ್ನು) ಭಯಪಡುತ್ತಿದ್ದಲ್ಲಿ, ಪಾದಚಾರಿಗಳಾಗಿಯೋ, ಸವಾರರಾಗಿರುವ ಸ್ಥಿತಿಯಲ್ಲಿಯೋ ನಮಾಝ್ ನಿರ್ವಹಿಸಿರಿ.” ಖುರ್‍ಆನ್ 2:238-239
ಇದಾಗಿರುವುದು ಯುದ್ಧರಂಗದಲ್ಲಿನ ಪರಿಸ್ಥಿತಿ. ಹಾಗಾದರೆ ಸೌಹಾರ್ದಮಯ ವಾತಾವರಣದಲ್ಲಿನ ಪರಿಸ್ಥಿತಿ ಹೇಗಿರಬಹುದು?
ಯಶಸ್ಸು ನಮಾಝ್ ನಿರ್ವಹಿಸುವುದರಲ್ಲಿದೆ
ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ಹೇಳುತ್ತಾರೆ, “ಪುನರುತ್ಥಾನ ದಿನದಂದು ಮಾನವನಿಗೆ ವಿಚಾರಿಸಲ್ಪಡುವ ಮೊತ್ತಮೊದಲ ಕರ್ಮವೇ ಆತನ ನಮಾಝ್‍ನ ಕುರಿತು. ಅದು ತೃಪ್ತಿದಾಯಕವಾಗಿದ್ದರೆ, ಆತನು ಸುರಕ್ಷಿತನೂ, ಯಶಸ್ವಿಯೂ ಆಗುವನು. ಆದರೆ, ಅದರಲ್ಲೇನಾದರೂ ದೋಷ ಕಂಡುಬಂದಲ್ಲಿ, ಅವನು ನತದೃಷ್ಟನೂ, ಹತಾಶನೂ ಆಗಿತಿರುವನು.”
ಇದರ ಲಾಭ
ಕೆಡುಕಿನಿಂದ ರಕ್ಷಣೆ
ಅಲ್ಲಾಹನಿಂದ ಸಹಾಯ ಯಾಚಿಸುವ ಹೊರತು ಕೆಡುಕಿನಿಂದ ಸುರಕ್ಷಿತವಾಗಿರುವುದು ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲ.
ಅಲ್ಲಾಹ್ ಹೇಳುತ್ತಾನೆ: “ನಿಶ್ಚಯವಾಗಿಯೂ, ನಮಾಝ್ ಅಶ್ಲೀಲ ಹಾಗೂ ದುಷ್ಕøತ್ಯಗಳಿಂದ ತಡೆಯುತ್ತದೆ.” ಖುರ್‍ಆನ್ 29:45
ನೀವು ಅಲ್ಲಾಹನ ಮುಂದೆ ಸ್ವಇಚ್ಛೆಯಿಂದ ದಿನಕ್ಕೆ ಐದು ಬಾರಿ ನಿಂತಿರಲು, ನಿಮ್ಮಿಂದ ಪಾಪಗಳು ಜರುಗುವುದಾದರೂ ಹೇಗೆ?
ಅಂತರಂಗ ಶುದ್ಧಿ
ಸೃಷ್ಟಿಕರ್ತನೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಬಯಸುವ ನಿಮ್ಮ ಅಂತರಾತ್ಮದ ಹಾರೈಕೆಯನ್ನು ನಮಾಝ್ ಪೂರ್ತೀಕರಿಸುತ್ತದೆ. ಇಂದಿನ ತೀವ್ರಗತಿಯ ಜೀವನದಲ್ಲಿ ನಿಮ್ಮ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿಯನ್ನು ದಯಪಾಲಿಸುತ್ತದೆ.
ಅಲ್ಲಾಹನು ಹೇಳುತ್ತಾನೆ, “ನಿಸ್ಸಂಶಯವಾಗಿಯೂ, ಅಲ್ಲಾಹನ ಸ್ಮರಣೆಯಲ್ಲಿ ಹೃದಯಗಳು ತೃಪ್ತಿಯನ್ನು ಹೊಂದುತ್ತವೆ.” ಖುರ್‍ಆನ್ 13:28
ನಮ್ರತೆಯನ್ನು ಮೆರೆಯುವಿರಿ
ಅಲ್ಲಾಹನ ಮಹಾನತೆ ಹಾಗೂ ಅವನನ್ನು ಅವಲಂಬಿಸಿರಲೇಬೇಕೆಂಬ ವಾಸ್ತವಿಕತೆಯನ್ನು ಅರ್ಥೈಸಿಕೊಂಡ ಮಾನವನು ಅಹಂಕಾರ ಮತ್ತು ದರ್ಪದೊಂದಿಗೆ ಮೆರೆಯುವುದರಿಂದ ತನ್ನನ್ನು ತಡೆಹಿಡಿಯುವನು. ನಮಾಝಿನಲ್ಲಿ ಓರ್ವ ಮುಸ್ಲಿಮನು ತನ್ನ ಸರ್ವಾಂಗಗಳಲ್ಲಿ ಅತಿ ಉನ್ನತಸ್ಥಾನದಲ್ಲಿರುವ ಭಾಗ ಮತ್ತು ಚಿಂತನೆ ನಡೆಸುವಂತಹ ತನ್ನ ತಲೆಯನ್ನು ನೆಲಕ್ಕೆ ಬಾಗಿಸಿ ನುಡಿಯುವನು, “ಅತ್ಯುನ್ನತನಾದ ನನ್ನ ಪ್ರಭುವು ಅತ್ಯಂತ ಪರಿಶುದ್ಧನು.”
ಅಲ್ಲಾಹನು ಹೇಳುತ್ತಾನೆ, “ನಮಾಝಿನಲ್ಲಿ ನಮ್ರತೆಯನ್ನು ಮೆರೆಯುವ ಸತ್ಯವಿಶ್ವಾಸಿಗಳು ನಿಜಕ್ಕೂ ಯಶಸ್ವಿಗಳು.” ಖುರ್‍ಆನ್ 23:1-2
ನಿಸ್ಸಂಶಯವಾಗಿಯೂ, ನಮಾಝಿನಲ್ಲಿ ಪಠಿಸಲಾಗುವುದನ್ನು ಅರ್ಥೈಸಿಕೊಳ್ಳುವ ಹಾಗೂ ಆ ಕುರಿತು ಗಾಢವಾಗಿ ಲಕ್ಷ್ಯವಹಿಸುವ ಮೂಲಕ ಇದನ್ನು ಸಿದ್ಧಿಸಬಹುದು.
ಪಾಪಗಳಿಂದ ಮುಕ್ತಿ
ಮಾನವನಿಂದ ತಪ್ಪಾಗುವುದು ಸಹಜ. ಆದರೆ, ಅಲ್ಲಾಹನು ನಮಾಝ್‍ನ ಮೂಲಕ ಪಾಪಗಳನ್ನು ತೊಳೆದುಕೊಳ್ಳುವ ಅವಕಾಶವನ್ನು ದಯಪಾಲಿಸಿರುವನು.
ಅಲ್ಲಾಹನು ಹೇಳುತ್ತಾನೆ, “ಮತ್ತು ನಮಾಝನ್ನು ಪಾಲಿಸಿರಿ…. ನಿಶ್ಚಯವಾಗಿಯೂ, ಸತ್ಕರ್ಮಗಳು ಪಾಪಗಳನ್ನು ನಿರ್ಮೂಲನಗೊಳಿಸುತ್ತವೆ.” ಖುರ್‍ಆನ್ 11:114
ಸಂದೇಶವಾಹಕರು ತಮ್ಮ ಸಂಗಾತಿಗಳಿಗೆ ಉತ್ತಮ ಉದಾಹರಣೆಯೊಂದನ್ನು ನೀಡುತ್ತ ಹೇಳಿದರು, “ಒಂದು ವೇಳೆ ನಿಮ್ಮಲ್ಲಾರಾದರೂ ಮನೆಯ ಪಕ್ಕದಲ್ಲಿ ನದಿಯೊಂದನ್ನು ಹೊಂದಿದ್ದು, ದಿನಕ್ಕೆ ಐದು ಬಾರಿ ಅದರಲ್ಲಿ ಸ್ನಾನ ಮಾಡಿದರೆ, ಅವನ ಮೈಮೇಲೆ ಕೊಳೆಯೇನಾದರೂ ಇರುವುದೆಂದು ಭಾವಿಸುವಿರಾ?” ಎಲ್ಲರೂ ಉತ್ತರಿಸಿದರು, “ಇಲ್ಲ” ಎಂದು. ಸಂದೇಶವಾಹಕರು ಆಗ ಹೇಳಿದರು, “ಅಂತೆಯೇ, ಅಲ್ಲಾಹ್ ದಿನಕ್ಕೆ ಐದು ಬಾರಿ ನಮಾಝ್‍ನೊಂದಿಗೆ ನಿಮ್ಮ ಪಾಪಗಳನ್ನೂ ತೊಳೆದುಹಾಕುವನು.”
ಸಮಸ್ಯೆಗಳಿಗೆ ಪರಿಹಾರ
ನೀವು ಅಲ್ಲಾಹನೊಂದಿಗೆ ನಿಮ್ಮ ನಂಟನ್ನು ಭದ್ರಗೊಳಿಸಿದಲ್ಲಿ, ಅಲ್ಲಾಹನೂ ಇತರ ಸೃಷ್ಟಿಗಳೊಂದಿಗೆ ನಿಮ್ಮ ನಂಟನ್ನು ಭದ್ರಗೊಳಿಸುವನು. ಸರ್ವಶಕ್ತನಾದ ಅಲ್ಲಾಹನು, ನಿಮ್ಮ ನಮಾಝ್‍ಗೆ ಪ್ರತಿಫಲವಾಗಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವನು.
ಅಲ್ಲಾಹನು ಹೇಳುತ್ತಾನೆ, “ತಾಳ್ಮೆ ಮತ್ತು ನಮಾಝ್‍ನ ಮೂಲಕ ಸಹಾಯವನ್ನು ಯಾಚಿಸಿರಿ.” ಖುರ್‍ಆನ್ 2:153
ಮುಸ್ಲಿಮರನ್ನು ಒಂದುಗೂಡಿಸುತ್ತದೆ
ಸಾಮೂಹಿಕ ನಮಾಝ್‍ಗಳು ಮುಸ್ಲಿಮರಲ್ಲಿ ಬಾಂಧವ್ಯತೆಯನ್ನೂ, ಸಮಾನತೆಯನ್ನೂ ಮತ್ತು ಔದಾರ್ಯತೆಯನ್ನೂ ಬೆಳೆಸುತ್ತವೆ. ನಮಾಝ್ ನಿರ್ವಹಿಸುವವರು ಪರಸ್ಪರರ ಹೆಗಲಿಗೆ ಹೆಗಲನ್ನು ಸೇರಿಸಿ, ಯಾವುದೇ ಭಾಷೆ, ರಾಷ್ಟ್ರ, ಬಣ್ಣ, ಐಶ್ವರ್ಯ, ಕುಟುಂಬ ಅಥವಾ ಅಂತಸ್ತನ್ನು ಲೆಕ್ಕಿಸದೇ ಒಂದಾಗಿ ನಿಂತುಕೊಳ್ಳುವರು. ಐಕ್ಯತೆಯನ್ನು ಸೂಚಿಸುವ ಈ ಪದ್ಧತಿಯು ಜನರ ಮಧ್ಯೆ ಸೃಷ್ಟಿಯಾಗಬಹುದಾದ ಎಲ್ಲ ವ್ಯತ್ಯಾಸಗಳನ್ನೂ ತೊಡೆದುಹಾಕುತ್ತದೆ.
ನಮಾಝನ್ನು ತೊರೆಯುವುದು
“ಓ ಜನರೇ, ಪರಮ ದಯಾಮಯನಾದ ನಿಮ್ಮ ಪ್ರಭವಿನ ವಿಷಯದಲ್ಲಿ ನಿಮ್ಮನ್ನು ದಾರಿಗೆಡಿಸಿದ್ದಾದರೂ ಏನು?” ಖುರ್‍ಆನ್ 82:6
ನೀವು ನಿಮ್ಮ ಸೃಷ್ಟಿಕರ್ತನ ಆಜ್ಞೆಯನ್ನು ಧಿಕ್ಕರಿಸುವಿರಿ
ನಿಮ್ಮ ಸೃಷ್ಟಿಯ ಪರಮೋದ್ದೇಶವೇ ಅಲ್ಲಾಹನ ಆರಾಧನೆಯಾಗಿರುತ್ತದೆ. ಆದಾಗ್ಯೂ, ಪ್ರತಿದಿನ ನೀವು ನಿಮ್ಮ ಸೃಷ್ಟಿಕರ್ತನ ಆಜ್ಞೆಯ ವಿರುದ್ಧ ನಡೆಯುತ್ತಿರುವಿರಿ.
“ಆ ನಂತರ ಬಂದ ಜನಾಂಗವೊಂದು ನಮಾಝನ್ನು ತೊರೆಯಿತು ಮತ್ತು ಸ್ವೇಚ್ಛೆಯನ್ನು ಪಾಲಿಸಲಾರಂಭಿಸಿತು. ಅವರು ನರಕಾಗ್ನಿಯಲ್ಲೆಸೆಯಲ್ಪಡುವರು, ಆದರೆ ಪಶ್ಚಾತ್ತಾಪ ಪಟ್ಟು ವಿಶ್ವಾಸವಿರಿಸುವ ಮತ್ತು ಸತ್ಕರ್ಮಗಳನ್ನೆಸೆಗುವವರ ಹೊರತು.” ಖುರ್‍ಆನ್ 19:59-60
“(ನರಕದಲ್ಲಿರುವವರನ್ನು ಪ್ರಶ್ನಿಸಲಾಗುವುದು:) ನೀವು ನರಕಾಗ್ನಿಯಲ್ಲಿ ಬೀಳಲು ಕಾರಣವೇನು?, ಅವರು ಹೇಳುವರು: ನಾವು ನಮಾಝ್ ನಿರ್ವಹಿಸುವವರಲ್ಲಾಗಿರಲಿಲ್ಲ….” ಖುರ್‍ಆನ್ 74:42-43
ನೀವು ಕೃತಘ್ನರಾಗುವಿರಿ
ಅಲ್ಲಾಹನೊಂದಿಗೆ ನಿಕಟ ಸಂಬಂಧ ಕಲ್ಪಿಸಿಕೊಳ್ಳಲಿಕ್ಕಾಗಿ ನಿಮ್ಮ ಪ್ರಭುವು ನೀಡುವ ಆಹ್ವಾನವನ್ನು ತಿರಸ್ಕರಿಸುವುದು ಕೃತಘ್ನತೆಯ ಅಂತಿಮ ಹಂತವನ್ನು ತಲುಪಿದ್ದಾಗಿರುತ್ತದೆ.
ಅಲ್ಲಾಹನು ನಿಮ್ಮನ್ನು ಸೃಷ್ಟಿಸಿದನು ಮತ್ತು ಎಲ್ಲವನ್ನೂ ದಯಪಾಲಿಸಿದನು. “ಅಲ್ಲಾಹನು ನಿಮ್ಮನ್ನು ಸೃಷ್ಟಿಸಿದನು ಮತ್ತು ನಿಮಗೆ ಶೃವಣಶಕ್ತಿಯನ್ನೂ ಮತ್ತು ದೃಷ್ಟಿಯನ್ನೂ ಮತ್ತು ಹೃದಯವನ್ನೂ ದಯಪಾಲಿಸಿದನು. ನೀವು ಅಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ.” ಖುರ್‍ಆನ್ 67:23
ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ನಮಾಝಿನಲ್ಲಿ ಅಧಿಕ ಕಾಲ ನಿಂತಕೊಳ್ಳುತ್ತಿದ್ದ ಕಾರಣ ಅವರ ಕಾಲುಗಳು ಬಾತುಕೊಳ್ಳುತ್ತಿದ್ದವು. ಅದಕ್ಕೆ ಕಾರಣವನ್ನು ಕೇಳಲು, ಅವರ ಉತ್ತರ ಈ ರೀತಿ ಇರುತ್ತಿತ್ತು: “ನಾನು ನನ್ನ ಪ್ರಭುವಿನ ನೆಚ್ಚಿನ ದಾಸನಾಗಬಾರದೇ?”
ನೀವು ಸೋಮಾರಿಗಳಾಗುತ್ತಿರುವಿರಿ
ನಿರ್ಣಾಯಕ ದಿನದಂದು ನಿಮ್ಮ ಸೃಷ್ಟಿಕರ್ತನಿಗೆ, ಭೂಮ್ಯಾಕಾಶಗಳನ್ನು ಸೃಷ್ಟಿಸಿದವನ ಮುಂದೆ ಯಾವ ನೆಪವೊಡ್ಡಲಿರುವಿರಿ? ಅವನು ನಿಮಗೆ ದಿನಕ್ಕೆ 24 ಗಂಟೆಗಳನ್ನು ದಯಪಾಲಿಸಿದ್ದಾಗ್ಯೂ, ಕೇವಲ 30 ನಿಮಿಷವಷ್ಟನ್ನೇ ನಮಾಝಿಗಾಗಿ ವ್ಯಯಿಸಲು ಆದೇಶಿಸಿರುವನು!
ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ಹೇಳಿದರು, “ಪುನರುತ್ಥಾನ ದಿನದಂದು ಐದು ವಿಷಯಗಳ ಕುರಿತು ವಿಚಾರಿಸಲಾಗುವ ಹೊರತು ಆದಮ್‍ನ ಸಂತಾನವನ್ನು ಅವನ ಪ್ರಭುವಿನ ಹಿಡಿತದಿಂದ ಬಿಡುಗಡೆ ಮಾಡಲಾಗದು: ಅವನ ಜೀವನ ಮತ್ತು ಅವನು ಅದನ್ನು ವ್ಯಯಿಸಿದ ರೀತಿ; ಅವನ ಯೌವ್ವನ ಮತ್ತು ಅವನು ಅದನ್ನು ಉಪಯೋಗಿಸಿದ ಬಗೆ; ಅವನ ಸಂಪತ್ತು ಮತ್ತು ಹೇಗೆ ಅವನು ಅದನ್ನು ಗಳಿಸಿದನು; ಮತ್ತು ಹೇಗೆ ಅದನ್ನು ಖರ್ಚು ಮಾಡಿದನು; ಮತ್ತು ಅವನಿಗೆ ದಯಪಾಲಿಸಿದ ಜ್ಞಾನಕ್ಕೆ ತಕ್ಕಂತೆ ಎಷ್ಟರಮಟ್ಟಿಗೆ ಅವನು ವರ್ತಿಸಿದನು.”
ನೀವು ನಷ್ಟ ಹೊಂದುವಿರಿ
ಅಲ್ಲಾಹನು ಹೇಳುತ್ತಾನೆ, “ಮತ್ತು ನನ್ನ ಸ್ಮರಣೆಯಿಂದ ವಿಮುಖನಾದವನ ಕುರಿತು- ನಿಶ್ಚಯವಾಗಿಯೂ, ಅವನಿಗಾಗಿ ಶೋಚನೀಯ ಜೀವನವು ಕಾದಿದೆ. ಮತ್ತು ಪುನರಿತ್ಥಾನ ದಿನದಂದು ನಾವು ಅವನನ್ನು ಅಂಧನನ್ನಾಗಿ ಎಬ್ಬಿಸುವೆವು. ಆತನು ಹೇಳುವನು, “ಓ ನನ್ನ ಪ್ರಭು, (ಒಂದು ಕಾಲದಲ್ಲಿ) ನಾನು ದೃಷ್ಟಿಯುಳ್ಳವನಾಗಿದ್ದಿರುವಾಗ ನೀನು ನನ್ನನ್ನು ಅಂಧನನ್ನಾಗಿ ಎಬ್ಬಿಸಿರಲು ಕಾರಣವಾದರೂ ಏನು?” (ಅಲ್ಲಾಹನು) ಹೇಳುವನು, “ಅಂತೆಯೇ, ನಮ್ಮ ನಿದರ್ಶನಗಳು ನಿನ್ನ ಬಳಿ ಬಂದಾಗ ನೀನು ಮರೆತುಬಿಟ್ಟಿದ್ದೆ; ಇಂದು ನೀನು ಅದೇ ರೀತಿ ಮರೆಯಲ್ಪಡುತ್ತಿರುವೆ.” ಖುರ್‍ಆನ್ 20:124-6
ನೀವು ನಿಮ್ಮನ್ನೇ ನಷ್ಟಕ್ಕೊಳಪಡಿಸಿಕೊಳ್ಳುತ್ತಿರುವಿರಿ.
ಅಲ್ಲಾಹನಿಗೆ ನಿಮ್ಮ ಆರಾಧನೆಯ ಅಥವಾ ಯಾರಿಂದಲೂ ಯಾವುದರ ಅವಶ್ಯಕತೆಯೂ ಇರುವುದಿಲ್ಲ. ಅವನು ಮಹಾಮಹಿಮನು! ಆದರೆ, ನೀವು ಅವನ ಕೃಪೆಯನ್ನಾಧರಿಸಿರುವಿರಿ.
“ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸಿರಿ, ಮತ್ತು ಆ ವ್ಯಕ್ತಿಯ ಕೃತಜ್ಞತೆಯು ಸ್ವತಃ ಆತನ ಒಳಿತಿಗಾಗಿಯೇ ಆಗಿರುವುದು ಮತ್ತು ಯಾರಾದರೂ ಅಲ್ಲಾಹನನ್ನು ಧಿಕ್ಕರಿಸಿದಲ್ಲಿ, ಅವನಂತೂ ನಿರಪೇಕ್ಷನೂ ಸರ್ವಸ್ತುತ್ಯರ್ಹನೂ ಆಗಿರುವನು” ಖುರ್‍ಆನ್ 31:12