ನಿಮ್ಮ ತಂದೆ-ತಾಯಿಯರ ಹಕ್ಕುಗಳು
’ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ’
ಮಾನವರಲ್ಲಿ ನಮ್ಮ ಸೌಜನ್ಯದ ವರ್ತನೆಗೆ, ಸೇವೆಗೆ ಮತ್ತು ಸಂಪತ್ತಿನ ಖರ್ಚಿಗೆ ಅತಿ ಹೆಚ್ಚು ಹಾಗೂ ಪ್ರಥಮ ಹಕ್ಕುದಾರರು ತಂದೆ-ತಾಯಿಗಳಾಗಿದ್ದಾರೆ.
ಇಸ್ಲಾಂ ಧರ್ಮವು ಕುಟುಂಬ ಭದ್ರತೆಗೆ ಬಹಳ ಪ್ರಾಮುಖ್ಯತೆ ನೀಡಿರುವುದನ್ನು ನಾವು ಕಾಣಬಹುದಾಗಿದೆ. ಸಮಾಜದ ಭದ್ರತೆಗೆ ಕುಟುಂಬ ಭದ್ರತೆಯೇ ಕಾರಣ. ಕುಟುಂಬ ಸದಸ್ಯರ ಪರಸ್ಪರ ಪ್ರೀತಿ, ಸಹಕಾರ ಮತ್ತು ಸೇವೆಯು ಕುಟುಂಬವನ್ನು ಭದ್ರಗೊಳಿಸುತ್ತದೆ. ಪರಸ್ಪರ ಅರಿತು ಗೌರವಿಸ ಬೇಕಾದವರನ್ನು ಗೌರವಿಸಿ ಅನುಸರಿಸಿ ಬೇಕಾದವರನ್ನು ಅನುಸರಿಸುವುದು ಕುಟುಂಬದ ಭದ್ರತೆಗೆ ಅನಿವಾರ್ಯವಾಗಿದೆ. ಕುಟುಂಬದ ಬುನಾದಿ ತಂದೆ ತಾಯಿಗಳಾಗಿದ್ದಾರೆ. ಅವರೇ ವ್ಯಕ್ತಿಗೆ ಜನ್ಮ ನೀಡಿ ಸಾಕಿ ಸಲಹಿ ಬೆಳೆಸುತ್ತಾರೆ. ಆದ್ದರಿಂದ ಸೃಷ್ಠಿಕರ್ತನಾದ ಅಲ್ಲಾಹನ ಬಳಿಕ ಮಾನವನು ಆತನ ತಂದೆ-ತಾಯಿಗಳಿಗೆ ಋಣಿಯಾಗಿರಬೇಕಾಗಿದೆ.
ಪವಿತ್ರ ಖುರಾನಿನಲ್ಲಿ ಅಲ್ಲಾಹನು ಅನೇಕ ಕಡೆಗಳಲ್ಲಿ ಮಾತಪಿತರ ಹಕ್ಕನ್ನು ಅಲ್ಲಾಹನ ಹಕ್ಕುಗಳ ಜೊತೆಗೆ ವಿವರಿಸಿದ್ದಾನೆ.
ನಿಮ್ಮ ಪ್ರಭು ಹೀಗೆ ವಿಧಿಸಿ ಬಿಟ್ಟಿದ್ದಾನೆ. ನೀವು ಕೇವಲ ಅವನೊಬ್ಬನ ಹೊರತು ಇನ್ಯಾರನ್ನು ಆರಾಧನೆ ಮಾಡಬಾರದು. ಮಾತಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, (ಪವಿತ್ರ ಖುರ್‍ಆನ್ 17:23)
ಈ ಎಲ್ಲಾ ಸೂಕ್ತಿಗಳಲ್ಲಿ ನಾವು ತಂದೆ-ತಾಯಿಗಳ ಹಕ್ಕಿನ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಮನಗಾಣಬಹುದಾಗಿದೆ. ಇದಲ್ಲದೆ ಪ್ರವಾದಿ ಮಹಮ್ಮದ್(ಸ)ರವರ ವಚನಗಳಲ್ಲಿಯೂ ಕೂಡಾ ಅಲ್ಲಾಹನ ನಂತರ ತಂದೆ-ತಾಯಿಗಳೇ ನಮ್ಮ ಹಕ್ಕುದಾರರು ಎಂದು ವಿವರಿಸುವುದನ್ನು ಕಾಣಬಹುದಾಗಿದೆ.
ಅಬ್ದುಲ್ಲಾ ಬಿನ್ ಮಸ್‍ಊದ್ (ರ) ಹೇಳುತ್ತಾರೆ. ನಾನು ಪ್ರವಾದಿ (ಸ) ರಲ್ಲಿ ವಿಚಾರಿಸಿದೆ. ‘ಯಾವ ಕಾರ್ಯವು ಅಲ್ಲಾಹನಿಗೆ ಅತ್ಯಧಿಕ ಪ್ರಿಯವಾಗಿದೆ’ ಪ್ರವಾದಿ(ಸ) ಹೇಳಿದರು. ಸಮಯಕ್ಕೆ ಸರಿಯಾಗಿ ನಿರ್ವಹಿಸುವ ನಮಾಝ್ ಆ ಬಳಿಕ ಯಾವ ಕಾರ್ಯ ಅಲ್ಲಾಹನಿಗೆ ಅತ್ಯಧಿಕ ಪ್ರಿಯವಾಗಿದೆ ಎಂದು ಕೇಳಿದಾಗ ತಂದೆ-ತಾಯಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವುದು ಎಂದು ಪ್ರವಾದಿ (ಸ) ಉತ್ತರಿಸಿದರು. ಆ ಬಳಿಕ ಎಂದು ನಾನು ವಿಚಾರಿಸಿದಾಗ ದೇವ ಮಾರ್ಗದಲ್ಲಿ ಜಿಹಾದ್ ಅಥವ ಪರಿಶ್ರಮ, ನಡೆಸುವುದು ಎಂದು ಪ್ರವಾದಿ (ಸ) ಉತ್ತರಿಸಿದರು. (ಬುಖಾರಿ ಮುಸ್ಲಿಂ)
ಮಾನವನಿಗೆ ತನ್ನ ಮಾತಾಪಿತರ ಹಕ್ಕನ್ನು ತಿಳಿದುಕೊಳ್ಳಲು ನಾವೇ ತಾಕೀತು ಮಾಡಿದ್ದೇವೆ. ಅವನ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು ತನ್ನ ಗರ್ಭದಲ್ಲಿರಿಸಿದಳು ಮತ್ತು ಅವನ ಸ್ತನಪಾನ ಬಿಡಿಸುವುದರಲ್ಲಿ ಎರಡು ವರ್ಷ ತಗುಲಿದವು (ಪವಿತ್ರ ಖುರ್‍ಆನ್ 31:14)
ಮಾತಾಪಿತರೊಂದಿಗೆ ಉತ್ತಮವಾಗಿ ನಡೆದುಕೊಳ್ಳಬೇಕೆಂದು ಆದೇಶಿಸುತ್ತಾ ಪವಿತ್ರ ಖುರ್‍ಆನ್ ಮಾತೆಯ ನಿರಂತರ ಸಂಕಷ್ಟಗಳನ್ನು ಸಹಿಸುವುದನ್ನು ಬಹಳ ಪ್ರಭಾವ ಪೂರ್ಣ ಶೈಲಿಯಲ್ಲಿ ಚಿತ್ರಿಸಿದೆ. ಅತ್ಯುತ್ತಮವಾದ ಭಾವನಾತ್ಮಕ ಶೈಲಿಯಲ್ಲಿ ತ್ಯಾಗದ ಪ್ರತಿರೂಪವಾದ ತಾಯಿಯು ತಂದೆಗಿಂತ ನಮ್ಮ ಸದ್ವರ್ತನೆಗೆ ಮತ್ತು ಸೇವೆಗೆ ಹೆಚ್ಚು ಅರ್ಹಳು ಎಂಬುದನ್ನು ಮಾರ್ಮಿಕವಾಗಿ ವಿವರಿಸಿದೆ. ಈ ವಾಸ್ತವಿಕತೆಯನ್ನು ಪ್ರಸ್ತುತ ಪ್ರವಾದಿ (ಸ) ರವರ ವಚನದಲ್ಲಿಯೂ ಕೂಡ ಸ್ಪಷ್ಟವಾಗಿ ವಿವರಿಸಿದೆ.
ಅಬೂ ಹುರೈರಾ (ರ) ಹೇಳುತ್ತಾರೆ. ಓರ್ವ ವ್ಯಕ್ತಿ ಪ್ರವಾದಿ (ಸ) ಬಳಿ ಬಂದು ಈ ರೀತಿ ವಿಚಾರಿಸಿದರು. ಪ್ರವಾದಿವರ್ಯರೇ(ಸ) ನನ್ನ ಸದ್ವರ್ತನೆಗೆ ಅತ್ಯಧಿಕ ಅರ್ಹರು ಯಾರು ? ಪ್ರವಾದಿ (ಸ) ಹೇಳಿದರು.ನಿಮ್ಮ ತಾಯಿ’ ಎಂದು ಉತ್ತರಿಸಿದರು. ಆ ಬಳಿಕ ಯಾರು ? ಎಂದು ಅವರು ವಿಚಾರಿಸಿದರು. ನಿಮ್ಮ ತಾಯಿ’ ಎಂದು ಉತ್ತರಿಸಿದರು. ತರುವಾಯ ಯಾರು ಎಂದು ಅವರು ಪ್ರಶ್ನಿಸಿದರು. ನಿಮ್ಮ ತಾಯಿ ಎಂದು ಪ್ರವಾದಿ(ಸ) ರು ಉತ್ತರಿಸಿದರು. ಮತ್ತೆ ಯಾರು ? ಎಂದು ಕೇಳಿದಾಗ ಪ್ರವಾದಿ (ಸ) ನಿಮ್ಮ ತಂದೆ ಎಂದು ಉತ್ತರಿಸಿದರು. (ಬುಖಾರಿ)
ಮಾತಾಪಿತರು ನಮ್ಮ ಸೊತ್ತಿನ ಮಾಲೀಕರೆಂದು ಪರಿಗಣಿಸಿ ಅವರಿಗಾಗಿ ಮನಃ ಬಿಚ್ಚಿ ಖರ್ಚು ಮಾಡಬೇಕೆಂದು ಪವಿತ್ರ ಖುರ್‍ಆನ್ ನಮಗೆ ಆದೇಶಿಸುತ್ತದೆ.
ನಾವೇನು ಖರ್ಚು ಮಾಡಬೇಕೆಂದು ಜನರು ನಿಮ್ಮನ್ನು ಕೇಳುತ್ತಾರೆ. ಹೇಳಿರಿ ಏನನ್ನು ಖರ್ಚು ಮಾಡುವುದಿದ್ದರೂ ಅದರ ಪ್ರಥಮ ಹಕ್ಕುದಾರರು ನಿಮ್ಮ ತಂದೆ-ತಾಯಿಗಳಾಗಿರುತ್ತಾರೆ (ಪವಿತ್ರ ಖುರ್‍ಆನ್ 2:215).
ಒಮ್ಮೆ ಪ್ರವಾದಿ(ಸ) ಬಳಿ ಓರ್ವ ವ್ಯಕ್ತಿ ಬಂದು ತನ್ನ ತಂದೆಯ ಬಗ್ಗೆ ಅವರು ಬೇಕಾದಾಗಲೆಲ್ಲಾ ನನ್ನ ಸೊತ್ತನ್ನು ತೆಗೆದುಕೊಳ್ಳುತ್ತಾರೆಂದು ದೂರಿದರು. ಪ್ರವಾದಿ (ಸ) ಆ ವ್ಯಕ್ತಿಯ ತಂದೆಯನ್ನು ಕರೆಸಿದರು. ಊರುಗೋಲಿನ ಆಸರೆ ಪಡೆದು ಓರ್ವ ಮುದಿ ಪ್ರಾಯದ ವ್ಯಕ್ತಿ ಬಂದರು. ಪ್ರವಾದಿ (ಸ) ವಿಚಾರಿಸಿದಾಗ ಅವರು ಹೀಗೆಂದರು. ‘ಒಂದು ಕಾಲದಲ್ಲಿ ನಾನು ಬಲಾಢ್ಯನಾಗಿದ್ದೆ. ಇವನು ಬಲಹೀನನೂ, ಅಶಕ್ತನೂ ಆಗಿದ್ದನು. ನಾನು ಧನಿಕನಾಗಿದ್ದೆ. ಇವನು ದರಿದ್ರನಾಗಿದ್ದ. ನಾನೆಂದೂ ಇವನನ್ನೂ ನನ್ನ ಸೊತ್ತು ತೆಗೆಯುವುದರಿಂದ ತಡೆಯಲಿಲ್ಲ. ಇಂದು ನಾನು ಬಲಹೀನನಾಗಿದ್ದೇನೆ. ಇವನು ಬಲಾಢ್ಯನೂ-ಆರೋಗ್ಯವಂತನೂ ಆಗಿರುವನು. ನಾನು ದರಿದ್ರನಾಗಿದ್ದೇನೆ. ಇವನು ಧನಿಕನಾಗಿದ್ದಾನೆ. ಈಗ ಮಾತ್ರ ಇವನು ತನ್ನ ಸೊತ್ತನ್ನು ನನ್ನಿಂದ ದೂರವಿಡುತ್ತಾನೆ’
ಮುದಿ ಪ್ರಾಯದ ತಂದೆಯ ಮಾತು ಕೇಳಿ ಪ್ರವಾದಿ (ಸ) ಅತ್ತು ಬಿಟ್ಟರು. ಆ ವ್ಯಕ್ತಿಯನ್ನು ಉದ್ದೇಶಿಸಿ `ನೀನು ಮತ್ತು ನಿನ್ನ ಸಂಪತ್ತು ನಿನ್ನ ತಂದೆಗೆ ಸೇರಿದ ಸೊತ್ತು’ ಎಂದರು.
ಈ ಎಲ್ಲಾ ಸಂಕೀರ್ಣತೆಯನ್ನು ಮನಗಂಡು ನಮ್ಮ ಯಾವುದೇ ಮಾತು ಕೃತಿಯಿಂದ ಅವರಿಗೆ ಬೇಸgವಾಗುವಂತೆ, ನೋವಾಗುವಂತೆ ಉತ್ತರಿಸಲೂ ಬಾರದು. ಅವರು ಕುಪಿತರಾಗುವಂತೆ ಜಾಗರೂಕತೆ ವಹಿಸಬೇಕು ಎಂದು ಅಲ್ಲಾಹನು ಹೇಳುತ್ತಾನೆ.
‘ಅವರ ಪೈಕಿ ಒಬ್ಬರು ಅಥವಾ ಇಬ್ಬರು ನಿಮ್ಮ ಮುಂದೆ ವೃದ್ಧಾಪ್ಯಕ್ಕೆ ತಲುಪಿದರೆ ಅವರಿಗೆ ನೀವು ಅಯ್ಯೋ ಎಂದೂ ಹೇಳದಿರಿ ಅವರಿಗೆ ಛೀಮಾರಿ ಹಾಕದಿರಿ. ಅವರೊಂದಿಗೆ ಗೌರವಪೂರ್ಣವಾಗಿ ಮಾತನಾಡಿರಿ’. (ಪವಿತ್ರ ಖುರ್‍ಆನ್ 17:23)
ಅಲ್ಲಾಹನಿಗೆ ಸಹಭಾಗಿಗಳನ್ನಾಗಿ ಆರೋಪಿಸುವುದು ತೌಹೀದ್‍ಗೆ (ಏಕದೇವತ್ವ) ವಿರುದ್ಧ ಮತ್ತು ಘೋರವಾದುದಾಗಿದೆ. ಈ ಘೋರ ಪಾಪವನ್ನು ಮಾಡುವಂತೆ ತಂದೆ-ತಾಯಿಗಳು ಉಪದೇಶಿಸಿದರೂ ಅಥವಾ ಸಮರ್ಥಿಸಿದರೂ ಅದನ್ನು ಅನುಸರಿಸಬಾರದು. ಐಹಿಕ ಜೀವನದಲ್ಲಿ ಅವರೊಡನೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ಅಲ್ಲಾಹನು ಆಜ್ಞಾಪಿಸುತ್ತಾನೆ.
‘ನನ್ನೊಂದಿಗೆ ನಿಮಗರಿವಿಲ್ಲದ ಯಾರನ್ನಾದರೂ ಸಹಭಾಗಿಯಾಗಿ ಮಾಡುವಂತೆ ಅವರು ಒತ್ತಾಯಪಡಿಸಿದರೆ ಅವರ ಮಾತನ್ನು ಸ್ವೀಕರಿಸಲೇ ಬೇಡಿರಿ. ಆದರೆ ಲೌಕಿಕ ವಿಷಯಗಳಲ್ಲಿ ಅವರೊಂದಿಗೆ ಸದ್ವರ್ತನೆ ಕೈಗೊಳ್ಳಿರಿ’ (ಪವಿತ್ರ ಖುರ್‍ಆನ್ 31:15)
ಇನ್ನೂ ತಂದೆ-ತಾಯಿಗಳು ಮುಸ್ಲಿಂಮೇತರರಾಗಿದ್ದರೂ ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಅವರನ್ನು ಗೌರವಿಸಿ ಅವರ ಸೇವೆಯನ್ನು ನಿರಂತರ ಮಾಡುತ್ತಿರಬೇಕು.
ಜಿಹಾದ್(ಅಲ್ಲಾಹನ ಮಾರ್ಗದಲ್ಲಿ ಪರಿಶ್ರಮ)ನಂತಹ ಉತ್ಕೃಷ್ಟ ಆರಾಧನೆಗಿಂತಲೂ ಉತ್ತಮ :
ಇಸ್ಲಾಂ ಮಾತಾಪಿತರ ಸೇವೆಯನ್ನು ಅಲ್ಲಾಹನ ಮಾರ್ಗದಲ್ಲಿ ಕೈಗೊಳ್ಳುವ ಜಿಹಾದ್‍ಗಿಂತಲೂ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಈ ಕೆಳಗಿನ ವಚನಗಳು ಅದನ್ನು ಪುಷ್ಠೀಕರಿಸುತ್ತವೆ.
‘ಅಲ್ಲಾಹನಿಗೆ ಅತ್ಯಧಿಕ ಪ್ರಿಯವಾದ ಕರ್ಮ ಯಾವುದು ! ಪ್ರವಾದಿವರ್ಯರು (ಸ) ಉತ್ತರಿಸಿದರು. ಸಮಯಕ್ಕೆ ಸರಿಯಾಗಿ ನಿರ್ವಹಿಸುವ ನಮಾಝ್. ಆನಂತರ ಯಾವುದೆಂದು ನಾನು ಪ್ರಶ್ನಿಸಿದೆ. ತಂದೆ-ತಾಯಿಗಳ ಸೇವೆ ಮಾಡುವುದು ಎಂದು ಉತ್ತರಿಸಿದರು. ಆ ಬಳಿಕ ಯಾವುದು ? ಎಂದು ನಾನು ಪುನಃ ಕೇಳಿದಾಗ ಅಲ್ಲಾಹನ ಮಾರ್ಗದಲ್ಲಿ ಪರಿಶ್ರಮ’ ಎಂದು ಪ್ರವಾದಿ (ಸ) ಉತ್ತರಿಸಿದರು. (ಬುಖಾರಿ / ಮುಸ್ಲಿಂ)
ತಂದೆ ತಾಯಿಗಳೊಂದಿಗೆ ಸದ್‍ವ್ಯವಹಾರ ಕೈಗೊಳ್ಳಬೇಕು. ಅವರ ಸೇವೆ ಅಥವಾ ಅವರೊಂದಿಗೆ ಮಾಡುವ ಸದ್ವರ್ತನೆ ಉಭಯ ಲೋಕಗಳ ಸೌಭಾಗ್ಯವಾಗಿದೆ. ಇನ್ನು ಅದನ್ನು ಉಲ್ಲಂಘಿಸಿದರೆ ಉಭಯ ಲೋಕದಲ್ಲೂ ಅಲ್ಲಾಹನ ಕೋಪಕ್ಕೆ ಪಾತ್ರರಾಗಬೇಕಾಗುತ್ತದೆ.
‘ಒಮ್ಮೆ ಪ್ರವಾದಿ (ಸ) ಈ ರೀತಿ ಹೇಳಿರುವರು `ಅವನು ಕೆಟ್ಟನು, ಆತ ನಿಂದ್ಯನಾದನು, ಆತ ನತದೃಷ್ಟನು, ಸಹಾಬಿಗಳು ಕೇಳಿದರು. ಓ ಪ್ರವಾದಿವರ್ಯರೇ (ಸ) ಯಾರು ? ಆಗ ಪ್ರವಾದಿ (ಸ) ತಂದೆ-ತಾಯಿಗಳಿಬ್ಬರೂ ಅಥವಾ ಅವರ ಪೈಕಿ ಒಬ್ಬರು ಮುದಿತನದಲ್ಲಿರುವಾಗ (ಅವರ ಸೇವೆ ಮಾಡಿ) ಸ್ವರ್ಗ ಸಂಪಾದಿಸಲು ಸಾಧ್ಯವಾಗದವನು’ ಎಂದು ಉತ್ತರಿಸಿದರು’. (ಮುಸ್ಲಿಮ್)
ಇಬ್ನು ಅಬ್ಬಾಸ್ (ರ) ವರದಿ ಪ್ರವಾದಿವರ್ಯರು (ಸ) ಹೇಳುತ್ತಾರೆ. ಯಾರಾದರೂ ಅಲ್ಲಾಹನ ಪ್ರೀತಿಯ ಆಕಾಂಕ್ಷೆಯಿಂದ ತಂದೆ-ತಾಯಿಗಳ ಜೊತೆ ಸೌಜನ್ಯದಿಂದ ವರ್ತಿಸುತ್ತಾನೋ ಅವರ ಬಗ್ಗೆ ಅಲ್ಲಾಹನ ಆಜ್ಞೆಗಳನ್ನು ಅನುಸರಿಸುತ್ತಾ ದಿನ ಕಳೆಯುತ್ತಾನೋ ಅವರ ಸೇವೆಗಾಗಿ ಸಮಯ ವ್ಯಯಿಸುತ್ತಾನೋ ಆತನಿಗೆ ಸ್ವರ್ಗದ ಎರಡು (2) ಬಾಗಿಲುಗಳು ತೆರೆಯುತ್ತದೆ. ಇನ್ನೂ ಅವರೊಂದಿಗೆ ಕಟುವಾಗಿ ವರ್ತಿಸಿದರೆ ಅವರ ಬಗ್ಗೆ ಅಲ್ಲಾಹನ ಆಜ್ಞೆಗಳನ್ನು ಉಲ್ಲಂಘಿಸಿದರೆ ಅವನಿಗೆ ನರಕದ ಎರಡು (2) ಬಾಗಿಲುಗಳು ತೆರೆಯಲ್ಪಡುತ್ತದೆ. ಆಗ ಸಹಾಬಿಗಳಲ್ಲೋರ್ವರು ಕೇಳಿದರು. ಓ ಅಲ್ಲಾಹನ ಸಂದೇಶವಾಹಕರೇ ತಂದೆ-ತಾಯಿಗಳು ಅವನೊಂದಿಗೆ ಕಟುವಾಗಿ ವರ್ತಿಸಿದರೆ ? ಪ್ರವಾದಿ (ಸ) ಹೇಳಿದರು. ‘ಹೌದು ತಂದೆ ತಾಯಿಗಳು ಅವನೊಂದಿಗೆ ಕಟುವಾಗಿ ವರ್ತಿಸುತ್ತಿದ್ದರೂ ಸರಿಯೇ ! ತಂದೆ ತಾಯಿಗಳು ಆತನೊಂದಿಗೆ ಅತಿರೇಕದವೆಸಗುತ್ತಿದ್ದರೂ ಸರಿಯೇ ! ತಂದೆ ತಾಯಿಗಳು ಅವನೊಂದಿಗೆ ಕ್ರೂರವಾಗಿ ವರ್ತಿಸುತ್ತಿದ್ದರೂ ಸರಿಯೇ’
ಇನ್ನೊಂದು ಪ್ರವಾದಿ ವಚನದಲ್ಲಿ ಹೀಗಿದೆ. ‘ಅಲ್ಲಾಹನ ಸಂಪ್ರೀತಿ ತಂದೆ-ತಾಯಿಗಳ ಸಂಪ್ರೀತಿಯಲ್ಲಿದೆ. ಅಲ್ಲಾಹನ ಕೋಪ ತಂದೆ-ತಾಯಿಯ ಕ್ರೋಧದಲ್ಲಿದೆ’