ಈ ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಒಂದು ದಿನ ತಮ್ಮ ಮರಣ ಅಥವಾ ಅಂತ್ಯ ಸಂಭವಿಸುವುದು ಎಂದು ಖಚಿತವಾಗಿ ನಂಬುತ್ತಾರೆ, ಅಲ್ಲದೇ ಇದೊಂದು ವಾಸ್ತವಿಕತೆಯೂ ಹೌದು. ಆದರೆ ಇಲ್ಲಿ ನಾವು ಏಕೆ ಅಸ್ತಿತ್ವದಲ್ಲಿದ್ದೇವೆಂದು ಎಂದಾದರೂ ಯೋಚಿಸಿದ್ದೇವೆಯೇ?
ನಮ್ಮ ಸುತ್ತಮುತ್ತಲಿರುವ ಎಲ್ಲ ವಸ್ತುಗಳನ್ನು ಕೆಲಕಾಲ ವೀಕ್ಷಿಸೋಣ. ನಾವು ನಮ್ಮಿಂದಲೇ ಸೃಷ್ಟಿಸಲ್ಪಟ್ಟ ಹಲವು ವಸ್ತುಗಳಿಂದ ಸುತ್ತುವರಿಯಲ್ಪಟ್ಟಿದ್ದೇವೆ. ನಾವು ಈ ವಸ್ತುಗಳನ್ನು ಏತಕ್ಕಾಗಿ ಸೃಷ್ಟಿಸಿದ್ದೇವೆ? ಅವುಗಳ ಸೃಷ್ಟಿಗೆ ಉದ್ದೇಶವೇನಾದರೂ ಇದೆಯೇ? ಉತ್ತರವು ಸ್ಪಷ್ಟವಾಗಿದೆ, ಹೌದು! ಎಲ್ಲ ವಸ್ತುಗಳೂ ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಲ್ಪಟ್ಟಿವೆ. ನಮ್ಮ ದೇಹದಲ್ಲಿರುವ ಯಾವುದೇ ಅಂಗಾಂಗವನ್ನು ಗಮನಿಸಿ. ಇವುಗಳಲ್ಲಿ ಯಾವುದಾದರೂ ಅಂಗವು ಉದ್ದೇಶರಹಿತವಾಗಿ ಸೃಷ್ಟಿಸಿರುವುದು ನಮಗೆ ಕಂಡುಬರುತ್ತದೆಯೇ? ಇಲ್ಲ! ಹಾಗಾದರೆ, ಭೂಮಿಯ ಮೇಲೆ ನಮ್ಮ ಅಸ್ತಿತ್ವಕ್ಕೆ ಉದ್ದೇಶವಿಲ್ಲವೆಂದು ನಾವು ಹೇಗೆ ಒಪ್ಪಿಕೊಳ್ಳಬಹುದು? ವಿವೇಕವಂತರು ಮನುಷ್ಯನ ಸೃಷ್ಟಿಯ ಉದ್ದೇಶವನ್ನು ಎಂದೂ ಅಲ್ಲಗಳೆಯಲಾರರು.
ನಾವು ಏಕೆ ಸೃಷ್ಟಿಸಲ್ಪಟ್ಟಿದ್ದೇವೆ? ಖ್ಯಾತಿ ಮತ್ತು ಐಶ್ವರ್ಯ ಗಳಿಸುವುದಕ್ಕಾಗಿಯೇ? ವಿನೋದಕ್ಕಾಗಿಯೇ? ಆಗರ್ಭ ಶ್ರೀಮಂತನಾಗಲು..? ಇಲ್ಲ! ಇವೆಲ್ಲಕ್ಕೂ ಮಿಗಿಲಾಗಿ ಈ ಜೀವನಕ್ಕೆ ಒಂದು ಸುಸ್ಪಷ್ಟ ಉದ್ದೇಶವಿದೆ. ಬನ್ನಿ, ಒಂದು ಕ್ಷಣ ಈ ವಿಷಯದ ಕುರಿತು ಚಿಂತಿಸೋಣ.
ಜಗತ್ತಿನಲ್ಲಿ ನಮ್ಮ ಅಸ್ತಿತ್ವದ ಉದ್ದೇಶವನ್ನು ನಿರ್ಧರಿಸುವವರು ಯಾರು? ನಾವೇ ಸ್ವತಃ ನಮ್ಮ ಜೀವನದ ಉದ್ದೇಶವನ್ನು ನಿರ್ಧರಿಸುತ್ತೇವೆಂದು ನೀವು ಉತ್ತರಿಸಬಹುದು. ಆದರೆ ನಮ್ಮ ಜೀವನದ ಗುರಿಯನ್ನು ನಾವು ನಿರ್ಧರಿಸಬಹುದೇ ಹೊರತು ಉದ್ದೇಶವನ್ನಲ್ಲ.
ಇದನ್ನು ನಾವು ಒಂದು ಪೆನ್ನಿನ(ಲೇಖನಿಯ) ಉದಾಹರಣೆಯೊಂದಿಗೆ ತಿಳಿಯೋಣ. ಪೆನ್ನನ್ನು ರಚಿಸಿರುವುದರ ಹಿಂದಿರುವ ಉದ್ದೇಶವೇನು? ಬರವಣಿಗೆಗೆ ಉಪಯುಕ್ತವಾಗಲೆಂದು ಪೆನ್ನನ್ನು ರಚಿಸಲಾಯಿತು ಎಂಬುವುದು ಸಾರ್ವತ್ರಿಕ ಸತ್ಯ. ಇದರ ಉದ್ದೇಶವನ್ನು ನಿರ್ಧರಿಸಿದವರಾರು? ಯಾರು ಪೆನ್ನನ್ನು ಮೊಟ್ಟಮೊದಲು ನಿರ್ಮಿಸಿದರೋ ಅವರೇ ಇದರ ಉದ್ದೇಶವನ್ನೂ ನಮಗೆ ತಿಳಿಸಿದರು ಎಂಬುವುದು ಇದರ ಉತ್ತರವಾಗಿದೆ. ಈಗ ಓರ್ವನು ಇದೇ ಪೆನ್ನನ್ನು ತನ್ನ ಬೆನ್ನನ್ನು ತುರಿಸಲು ಉಪಯೋಗಿಸಿದನು ಎಂಬ ಮಾತ್ರಕ್ಕೆ ಪೆನ್ನಿನ ಮೂಲ ಉದ್ದೇಶವು ಬೆನ್ನನ್ನು ತುರಿಸುವುದು ಎಂದು ತೀರ್ಮಾನಿಸಲು ಸಾಧ್ಯವೇ? ಇದರಿಂದ ಪೆನ್ನಿನ ನೈಜ ಉಪಯೋಗವನ್ನು ಅದರ ನಿರ್ಮಾಪಕನಿಗೆ ಮಾತ್ರ ನಿರ್ಧರಿಸಲು ಸಾಧ್ಯ ಎಂದು ನಾವು ತಿಳಿಯಬಹುದು. ಇದೇ ರೀತಿ ಮಾನವಕೋಟಿಯು ತನ್ನ ಅಸ್ತಿತ್ವಕ್ಕೆ ತನ್ನದೇ ಆದ ವಿವಿಧ ಬಗೆಯ ಕಾರಣಗಳನ್ನು ಮುಂದಿಡಬಹುದೇ ಹೊರತು ಅದರ ನೈಜ ಉದ್ದೇಶವನ್ನು ಕಂಡುಕೊಳ್ಳುವುದು ಸುಲಭಸಾಧ್ಯವಲ್ಲ. ನಮ್ಮ ಜೀವನದ ನೈಜ ಉದ್ದೇಶವನ್ನು ಸರ್ವಶಕ್ತನಾದ ಸೃಷ್ಟಿಕರ್ತನಿಗೆ ಮಾತ್ರ ನಿರ್ಧರಿಸಲು ಸಾಧ್ಯ.
ನಮಗೊಬ್ಬ ‘ಸೃಷ್ಟಿಕರ್ತ’ನಿದ್ದಾನೆಯೇ? ಅಥವಾ ವಿಕಸನ ಸಿದ್ಧಾಂತವು (Evolution) ನಮ್ಮ ಅಸ್ತಿತ್ವಕ್ಕೆ ಕಾರಣವಾಯಿತೇ?
ನಾವು ಒಂದು ಸೇತುವೆಯನ್ನು ಅಥವಾ ಯಂತ್ರವನ್ನು ನೋಡಿದಾಗ, ಅದರ ಹಿಂದೆ ಒಬ್ಬ ಸೃಷ್ಟಿಕರ್ತನ ಅಥವಾ ಒಂದು ಸಂಸ್ಥೆಯ ಇರುವಿಕೆಯನ್ನು ನಾವು ನಿರಾಕರಿಸಲಾರೆವು. ಹಾಗಾದರೆ ಅತ್ಯುತ್ತಮವಾದ ವಿನ್ಯಾಸ, ಶಿಸ್ತು ಮತ್ತು ರಚನೆಯನ್ನು ಹೊಂದಿರುವ ಈ ವಿಶ್ವದ ಬಗ್ಗೆ ನೀವೇನು ಹೇಳುವಿರಿ? ಉದಾಹರಣೆಗಾಗಿ ಮುಂದಿನ 200 ವರ್ಷಗಳ ಸೂರ್ಯೋದಯ, ಸೂರ್ಯಾಸ್ತ, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳ ಸಮಯವನ್ನು ನಿಖರವಾಗಿ ಹಾಗೂ ಮುಂಚಿತವಾಗಿಯೇ ತಿಳಿಯಬಹುದಾಗಿದೆ. ಇದು ವಿಶ್ವಮಂಡಲದಲ್ಲಿ ತೇಲುತ್ತಿರುವ ಸಹಸ್ರ ಗ್ರಹ-ನಕ್ಷತ್ರಗಳ ನಡುವಿನ ಬಂಧ, ಸಮತೋಲನವನ್ನು ಸಾರುತ್ತದೆ. ವಿಶ್ವದ ಅತ್ಯುತ್ತಮ ರಚನೆಗೆ ಇದೊಂದು ಅದ್ಭುತವಾದ ಉದಾಹರಣೆಯಾಗಿದೆ.
ವಿವಿಧ ಬಣ್ಣಗಳನ್ನು ಗೋಡೆಯೊಂದಕ್ಕೆ ಅವ್ಯವಸ್ಥಿತವಾಗಿ ಸಿಂಪಡಿಸಿದಾಗ ಮನೆ ಅಥವಾ ಪಕ್ಷಿಯೊಂದರ ಆಕೃತಿಯ ರಚನೆಯು ಕಂಡುಬರಬಹುದೇ ವಿನಃ ಮೋನಾಲಿಸಾಳ ಆಕೃತಿಯು ರಚನೆಯಾಗಲು ಸಾಧ್ಯವಿಲ್ಲ. ಈ ವಿಶ್ವವು ಮೋನಾಲಿಸಾಳ ಆಕೃತಿಗಿಂತ ಎಷ್ಟೋ ಪಟ್ಟು ಕ್ಲಿಷ್ಟಕರವಾಗಿದೆ ಹಾಗಾದರೆ ಈ ವಿಶ್ವದ ರಚನೆಯು ಒಬ್ಬ ಸೃಷ್ಟಿಕರ್ತನಿಲ್ಲದೇ ಅಸ್ತಿತ್ವಕ್ಕೆ ಬಂದಿದೆ ಎಂಬ ವಿಶ್ವಾಸ ಹೊಂದುವುದು ಹೇಗೆ ಸಾಧ್ಯ?
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಸ್ಫೋಟದಿಂದ ಕೇವಲ ವಿನಾಶವಾಗುತ್ತದೆ, ಹಾಗಾದರೆ ಈ ಸುಂದರವಾದ ಮತ್ತು ಪರಿಪೂರ್ಣವಾದ ರಚನೆಯು ಕೇವಲ ಒಂದು ‘ಬಿಗ್ ಬ್ಯಾಂಗ್’ ನಂತಹ ಮಹಾಸ್ಫೋಟದಿಂದ ಉದ್ಭವಿಸಿತೇ? ಒಂದುವೇಳೆ ಮರ್‍ಸಿಡೀಸ ಬೆಂಜ್ ಮತ್ತು ರೋಲ್ಸ ರೊಯ್ಸ ಕಾರುಗಳು ಒಂದು ನಿರುಪಯುಕ್ತ ವಸ್ತು ಸಂಗ್ರಹದ(ರಿuಟಿಞ ಥಿಚಿಡಿಜ) ಮಹಾಸ್ಫೋಟದಿಂದ ಉದ್ಭವಿಸಿದವು ಎಂದು ಹೇಳಿದರೆ ನೀವು ನಂಬುವಿರಾ?
ದೇವನು ವಿಶ್ವವನ್ನು ಸೃಷ್ಟಿಸಿದ್ದಾನೆ ಎಂದಾದರೆ ಆತನನ್ನು ಸೃಷ್ಟಿಸಿದವರು ಯಾರು?
ವಿಶ್ವವಿಜ್ಞಾನದ ಪ್ರಕಾರ ಈ ವಿಶ್ವಕ್ಕೆ ಒಂದು ಪ್ರಾರಂಭವಿತ್ತು ಮತ್ತು ಈ ವಿಶ್ವದ ಪ್ರಾರಂಭದೊಂದಿಗೆ ಕಾಲವೆಂಬ ಮಾನದಂಡವೂ ಅಸ್ತಿತ್ವಕ್ಕೆ ಬಂತು ಇದರಿಂದ ಒಂದು ವಸ್ತು ಅಥವಾ ಜೀವಿಯ ಪ್ರಾರಂಭ(ಹುಟ್ಟು) ಮತ್ತು ಅಂತ್ಯವನ್ನು(ಸಾವು) ನಿರ್ಧರಿಸಬಹುದು. ಈ ವಿಶ್ವದಲ್ಲಿ ಸೃಷ್ಟಿಸಲ್ಪಟ್ಟ ಎಲ್ಲ ವಸ್ತುಗಳೂ ‘ಸಮಯ’ಕ್ಕೆ ಅವಲಂಬಿತವಾಗಿವೆ. ಆದಕಾರಣದಿಂದಾಗಿಯೇ ಅವುಗಳಿಗೆ ಪ್ರಾರಂಭ ಮತ್ತು ಅಂತ್ಯವಿದೆ. ಆದರೆ ಯಾರು ಸಮಯವನ್ನು ಸೃಷ್ಟಿಸಿದನೋ ಅವನು ಈ ಸಮಯ(ಕಾಲ)ದ ಜಾಲದಿಂದ ಮುಕ್ತನಾಗಿದ್ದಾನೆ. ಅವನೇ ಸೃಷ್ಟಿಕರ್ತನಾಗಿದ್ದಾನೆ. ಆದಕಾರಣದಿಂದಾಗಿಯೇ ಸೃಷ್ಟಿಕರ್ತನಿಗೆ ಪ್ರಾರಂಭ ಮತ್ತು ಅಂತ್ಯವಿಲ್ಲ ಮತ್ತು ಅವನು ಆದಿಕಾಲದಿಂದಲೂ ಅಸ್ತಿತ್ವದಲ್ಲಿಯೇ ಇದ್ದಾನೆ. ಉದಾಹರಣೆಗೆ ಒಂದು ವೇಳೆ ನೀವು ಓದುತ್ತಿರುವ ಈ ಕಿರುಪುಸ್ತಕವು ಅಸ್ತಿತ್ವದಲ್ಲಿ ಇರುತ್ತಿದ್ದರೆ ಇದಕ್ಕೆ ಒಬ್ಬ ನಿರ್ಮಾತೃ ಅಥವಾ ಲೇಖಕನ ಅವಶ್ಯಕತೆ ಇರುತ್ತಿರಲಿಲ್ಲ.
‘ದೇವನು’ ಮಾನವಕುಲಕ್ಕೆ ತನ್ನ ಕಡೆಯಿಂದ ಮಾರ್ಗದರ್ಶನ ಮಾಡಿರುವನೇ?
ದೇವನು ನಮ್ಮನ್ನು ಸೃಷ್ಟಿಸಿ ಮಾರ್ಗದರ್ಶನ ಮಾಡದೆ ಹಾಗೆಯೇ ಬಿಡಲಿಲ್ಲ. ಇದಕ್ಕಾಗಿಯೇ ಆತನು ನಮ್ಮೊಳಗಿನಿಂದಲೇ ಉತ್ತಮ ವ್ಯಕ್ತಿಗಳನ್ನು ಆರಿಸಿ ಅವರನ್ನು ತನ್ನ ಸಂದೇಶವಾಹಕ(ಪ್ರವಾದಿ)ರನ್ನಾಗಿ ಮಾಡಿದನು ಎಲ್ಲ ಸಂದೇಶವಾಹಕರೂ ನಮ್ಮಂತೆ ಮಾನವರೇ ಆಗಿದ್ದರು ವಿನಃ ಅವರಿಗೆ ಯಾವುದೇ ದೈವಿಕ ಶಕ್ತಿಯಿರಲಿಲ್ಲ. ಸಂಸ್ಕೃತದಲ್ಲಿ ಅವರಿಗೆ ”ಮಹರ್ಷಿ”ಗಳೆನ್ನುವರು. ಅವರು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ, ಮಾನವಕುಲದ ನಾಯಕರಾಗಿ ಇತಿಹಾಸದಲ್ಲಿ ಜೀವಿಸಿದ್ದರು. ಭೂಮುಖದ ಎಲ್ಲ ಪ್ರದೇಶಗಳಿಗೆ ಅನ್ವಯಿಸುವಂತೆ ಆಯಾ ಕಾಲದಲ್ಲಿ, ಆಯಾ ನಿರ್ದಿಷ್ಟ ಸಮುದಾಯಕ್ಕೆ ಸಂದೇಶವಾಹಕರುಗಳನ್ನು ನಿಯೋಜಿಸಲಾಗಿತ್ತು.
ಪ್ರವಾದಿ ನೂಹ್, ಅಬ್ರಹಾಮ್, ಮೋಸೆಸ್, ಡೇವಿಡ್, ಸೊಲಮನ್, ಯೇಸು (ಇವರೆಲ್ಲರ ಮೇಲೆ ಶಾಂತಿಯಿರಲಿ) ಈ ಎಲ್ಲ ಹೆಸರುಗಳು ವಿವಿಧ ಕಾಲ ಘಟ್ಟಗಳಲ್ಲಿ ಈ ಭೂಮಿಗೆ ಆಗಮಿಸಿದ ಸಂದೇಶವಾಹಕರುಗಳ ಕೆಲವು ಹೆಸರುಗಳಾಗಿವೆ. ಹೀಗೆ ಈ ಜಗತ್ತಿಗೆ ಅಂತಿಮ ಪ್ರವಾದಿಯಾಗಿ ಸೃಷ್ಟಿಕರ್ತನಿಂದ ನೇಮಿಸಲ್ಪಟ್ಟವರೇ ಪ್ರವಾದಿ ಮುಹಮ್ಮದ್(ಇವರ ಮೇಲೆ ಶಾಂತಿಯಿರಲಿ). ಈ ಹಿಂದೆ ಕಳುಹಿಸಲ್ಪಟ್ಟ ಎಲ್ಲ ಪ್ರವಾದಿಗಳೂ ನಿರ್ದಿಷ್ಟ ಕಾಲದಲ್ಲಿ ಆಯಾ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾದ ಸಂದೇಶವನ್ನು ತಂದಿದ್ದರು.
ಆದರೆ ಅಂತ್ಯ ಪ್ರವಾದಿ ಮುಹಮ್ಮದ್(ಇವರ ಮೇಲೆ ಶಾಂತಿಯಿರಲಿ) ಸಕಲ ಮಾನವಕುಲಕ್ಕೆ ಮಾರ್ಗದರ್ಶಕರಾಗಿ ಈ ಜಗತ್ತಿಗೆ ಆಗಮಿಸಿದರು ಮತ್ತು ಅವರ ಸಂದೇಶವು, ಈ ಭೂಮಿಯು ಅಸ್ತಿತ್ವದಲ್ಲಿರುವ ವರೆಗೆ ಎಲ್ಲರಿಗೂ ಅನ್ವಯಿಸುವುದು.
ಪ್ರವಾದಿ ಮುಹಮ್ಮದ್(ಸ) ಯಾವುದೇ ನವೀನ ಧರ್ಮ ಅಥವಾ ಸಂದೇಶವನ್ನು ತಂದಿಲ್ಲ. ಬದಲಾಗಿ ಅವರು ಈ ಹಿಂದಿನ ಪ್ರವಾದಿಗಳು ಜನರ ಮುಂದಿಟ್ಟಿದ್ದ ಸಂದೇಶಕ್ಕೆ ಕೇವಲ ಮರುಜೀವವನ್ನಷ್ಟೇ ನೀಡಿದರು.
ಪ್ರವಾದಿ(ಸಂದೇಶವಾಹಕರು)ಗಳ ಬೋಧನೆಗಳೇನು?
‘ಸೃಷ್ಟಿಕರ್ತ”ನಿಂದ ಈ ಭೂಮಿಗೆ ಕಳುಹಿಸಲ್ಪಟ್ಟ ಎಲ್ಲ ಪ್ರವಾದಿಗಳ ಸಂದೇಶದ ಸಾರಾಂಶವನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.
ನಮ್ಮ ಜೀವನದ ಉದ್ದೇಶವು ಕೇವಲ ಸೃಷ್ಟಿಕರ್ತನ ಆರಾಧನೆಯಾಗಿದೆ. ಆತನನ್ನು ಹೊರತುಪಡಿಸಿ ಬೇರೆಯಾರನ್ನೂ ಆರಾಧಿಸಬೇಡಿ. (ಸೃಷ್ಟಿಕರ್ತನ್ನು ಆರಾಧಿಸಿ ಅವನ ಸೃಷ್ಟಿಗಳಾದ ಸೂರ್ಯ, ಚಂದ್ರ, ಆಕಾಶ-ಭೂಮಿ, ನೀರು, ವಾಯು, ಮೂರ್ತಿ-ಚಿತ್ರ, ವಿಗ್ರಹ ಇತ್ಯಾದಿಗಳನ್ನು ಆರಾಧಿಸಬೇಡಿ. ಯಾವ ವಸ್ತುವನ್ನೂ, ಯಾವ . ಜೀವಿಯನ್ನೂ ದೇವನ ಸ್ಥಾನಕ್ಕೇರಿಸಬೇಡಿ ಮತ್ತು ಅವನ ಇರುವಿಕೆಯನ್ನು ನಿರಾಕರಿಸಬೇಡಿ).
ಈ ಭೂಮಿಯಲ್ಲಿ ನಾವೆಸಗುವ ಪ್ರತಿಯೊಂದು ಕರ್ಮ(ಕ್ರಿಯೆ)ಕ್ಕೂ ಸೃಷ್ಟಿಕರ್ತನ ಮುಂದೆ ಲೆಕ್ಕ ಸಮರ್ಪಿಸಬೇಕಾಗುವುದು.
‘ದೇವ”ನ ಗುಣಲಕ್ಷಣಗಳೇನು?
ದೇವನು ಏಕೈಕನು ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.
ಅವನು ನಿರಪೇಕ್ಷನು ಅಂದರೆ ಆತನು ಆಹಾರ, ನಿದ್ರೆ, ಕುಟುಂಬ, ಮಡದಿ, ಮಕ್ಕಳು ಮುಂತಾದ ಎಲ್ಲಾ ಬೇಡಿಕೆಗಳಿಂದ ಮುಕ್ತನಾಗಿದ್ದಾನೆ. ಆದ್ದರಿಂದ ದೇವನು ನಿದ್ರಿಸುವುದಿಲ್ಲ, ಭೋಜನ ಮಾಡುವುದಿಲ್ಲ, ಮಾತಪಿತರಾಗಲಿ, ಮಡದಿ ಮಕ್ಕಳನ್ನಾಗಲಿ ಅವನು ಹೊಂದಿರುವುದಿಲ್ಲ.
ದೇವನು ಅತ್ಯಂತ ಶಕ್ತಿಶಾಲಿಯಾಗಿ ಅವನ ಸೃಷ್ಟಿಗಳಿಂದ ಭಿನ್ನವಾಗಿರುವುದರಿಂದ, ಅವನಿಗೆ ಆಯಾಸವಾಗದು, ಮರೆಯುವಿಕೆ ಎಂಬುವುದು ಆತನಿಗಿಲ್ಲ ಅಥವಾ ಆತನಿಂದ ಯಾವುದೇ ತಪ್ಪು ಸಂಭವಿಸದು.
ಎಲ್ಲ ಮಾನವರು ಆತನ ದೃಷ್ಟಿಯಲ್ಲಿ ಸರಿಸಮಾನರು. ಬಣ್ಣ, ಜಾತಿ-ಮತ, ಕುಲಗೋತ್ರ, ಮಹಿಮೆ ಅಥವಾ ವಂಶಗಳ ಆಧಾರದಲ್ಲಿ ಯಾರ ಮೇಲೂ ತಾರತಮ್ಯ ಮಾಡಲಾಗದು.
ಮರಣಾನಂತರ ಜೀವನ:
ಎಲ್ಲ ವಸ್ತುಗಳಂತೆ ಈ ಭೂವಿಯೂ ಒಂದು ದಿನ ಅಂತ್ಯಗೊಳ್ಳಲಿದೆ. ಆ ದಿನವನ್ನೇ ‘ನಿರ್ಣಾಯಕ ದಿನ’ ಅಥವಾ ‘ನ್ಯಾಯದ ದಿನ’ವೆಂದು ಕರೆಯಲಾಗುತ್ತದೆ. ಅಂದು ಈ ಭೂಮಿಯ ಪ್ರಾರಂಭದಿಂದ, ಅಂತ್ಯದವರೆಗಿನ ಎಲ್ಲ ಮನುಷ್ಯರಿಗೂ ಮರುಜೀವವನ್ನು ನೀಡಲಾಗುವುದು ಮತ್ತು ಅವರೆಸಗಿದ ಕೃತ್ಯಗಳ ಬಗ್ಗೆ ಅವರನ್ನು ಪ್ರಶ್ನಿಸಲಾಗುವುದು. ಯಾರು ಕೇವಲ ತನ್ನ ಸೃಷ್ಟಿಕರ್ತನನ್ನು ಆರಾಧಿಸಿ ಉತ್ತಮ ಕಾರ್ಯಗಳನ್ನು ಮಾಡುತ್ತಾ, ತಮಗೆ ಭೂಮಿಯಲ್ಲಿ ಲಭಿಸಿದ ಕಾಲಾವಧಿಯಲ್ಲಿ ದೇವನ ಆಜ್ಞೆಗನುಗುಣವಾಗಿ ಜೀವಿಸಿದರೋ, ಅವರಿಗೆ ಉತ್ತಮ ಪ್ರತಿಫಲವನ್ನು ನೀಡಲಾಗುವುದು ಮತ್ತು ಯಾರು ಅವಿಧೇಯತೆ ಮತ್ತು ಅತಿರೇಕವನ್ನು ತೋರುವರೋ ಅವರಿಗೆ ಶಿಕ್ಷೆ ನೀಡಲಾಗುವುದು. ಉತ್ತಮ ಪ್ರತಿಫಲವು ಸ್ವರ್ಗವಾಗಿರುವುದು ಮತ್ತು ಶಿಕ್ಷೆಯು ನರಕವಾಗಿರುವುದು. ಸ್ವರ್ಗ ಮತ್ತು ನರಕದ ಜೀವನವು ಶಾಶ್ವತವಾಗಿದೆ- ಅದಕ್ಕೆಂದೂ ಕೊನೆಯಿಲ್ಲ.
‘ಮರಣಾನಂತರ ಜೀವನ” ಅಥವಾ ‘ನಿರ್ಣಾಯಕ ದಿನ”ದ ಅಗತ್ಯವಾದರೂ ಏನು?
ನಮ್ಮಲ್ಲಿ ಪ್ರತಿಯೊಬ್ಬರೂ ನ್ಯಾಯವನ್ನು ಬಯಸುತ್ತಾರೆ. ಇತರರಿಗೆ ನ್ಯಾಯವನ್ನು ಬಯಸದವನು ತನಗೆ ಮಾತ್ರ ನ್ಯಾಯ ದೊರೆಯಲೇಬೇಕು ಎಂದು ಹಂಬಲಿಸುವುದನ್ನು ನಾವು ಕಾಣುತ್ತೇವೆ. ಬಡವ-ಶ್ರೀಮಂತರೆಂಬ ಬೇಧವಿಲ್ಲದೆ ಎಲ್ಲರೂ ತಮಗೆ ಅನ್ಯಾಯವೆಸಗಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಶಿಸುತ್ತಾರೆ. ಓರ್ವ ದರೋಡೆಕೋರ ಅಥವಾ ಅತ್ಯಾಚಾರಿಗೆ ಆತನೆಸಗಿದ ತಪ್ಪಿಗೆ ಅನುಗುಣವಾಗಿ ಕಠಿಣ ಶಿಕ್ಷೆಯಾಗಬೇಕೆಂದು ಜನಸಾಮಾನ್ಯರು ಬಯಸುತ್ತಾರೆ. ಹಾಗಾದರೆ ಅಪರಾಧಿಗಳಿಗೆ ಅವರವರ ತಪ್ಪಿಗೆ ತಕ್ಕಂತೆ ಶಿಕ್ಷೆಯನ್ನು ಜಾರಿಗೊಳಿಸುವ ನ್ಯಾಯಯುತವಾದ ಪರಿಪೂರ್ಣ ವ್ಯವಸ್ಥೆಯೊಂದು ಈ ಭೂಮಿಯಲ್ಲಿದೆಯೇ?
ಉದಾಹರಣೆಗೆ ಹಿಟ್ಲರನು ತನ್ನ ದಬ್ಬಾಳಿಕೆಯ ಅವಧಿಯಲ್ಲಿ ಸಾವಿರಾರು ಅಮಾಯಕರನ್ನು ಕೊಂದುಹಾಕಿದನು. ಒಂದು ವೇಳೆ ಪೋಲೀಸರು ಆತನನ್ನು ಬಂಧಿಸಿದ್ದರೆ ಮಾನವನಿರ್ಮಿತ ನ್ಯಾಯವ್ಯವಸ್ಥೆಯು ಆತನೆಸಗಿದ ಅಪರಾಧಕ್ಕೆ ಯಾವ ಶಿಕ್ಷೆಯನ್ನು ನಿರ್ಣಯಿಸುತ್ತಿತ್ತು? ಹೆಚ್ಚೆಂದರೆ ಆತನಿಗೆ ಮರಣದಂಡನೆ ಅಥವಾ ”ಗ್ಯಾಸ್ ಚೆಂಬರ್”(Gas chamber) ಒಳಗೆ ಕಳುಹಿಸುವಂತೆ ಆದೇಶಿಸುತ್ತಿತ್ತು. ಈ ರೀತಿ ಮಾಡಿದ್ದರೆ ಕೇವಲ ಓರ್ವ ಯಹೂದಿಯನ್ನು ಕೊಂದುದಕ್ಕೆ ಶಿಕ್ಷೆ ನೀಡಿದಂತಾಗುತ್ತಿತ್ತೇ ವಿನಃ ಸಾವಿರಾರು ಯಹೂದಿಯರ ಪ್ರಾಣಹರಣಕ್ಕೆ ನ್ಯಾಯ ಒದಗಿಸಿದಂತಾಗುತ್ತಿರಲಿಲ್ಲ. ಸಾವಿರಾರು ಯಹೂದಿಯರನ್ನು ಕೊಲೆಗೈದ ”ಹಿಟ್ಲರ್”ನನ್ನು ಸಾವಿರ ಸಲ ನೇಣುಗಂಬಕ್ಕೇರಿಸಿ ಮರಣದ ರುಚಿ ಅನುಭವಿಸುವಂತೆ ಮಾಡುವ ನ್ಯಾಯವ್ಯವಸ್ಥೆಯೊಂದನ್ನು ಈ ಭೂಮಿಯಲ್ಲಿ ಸ್ಥಾಪಿಸಲು ನಮ್ಮಿಂದ ಸಾಧ್ಯವೇ?
ಸಾಬೀತಾದ ಅಪರಾಧಿಗಳಿಗೆ ಕೆಲವೊಮ್ಮೆ ನ್ಯಾಯಾಧೀಶರು ಎರಡೆರಡು ಬಾರಿ ”ಜೀವಾವಧಿ” ಶಿಕ್ಷೆಯನ್ನು ವಿಧಿಸಿರುವ ಸನ್ನಿವೇಶಗಳಿವೆ. ಕೆಲವೊಮ್ಮೆ ಇದು ”ನೂರು” ವರ್ಷಕ್ಕಿಂತಲೂ ಅಧಿಕವಾಗಿರುವುದು. ಇದು ಅಪರಾಧಿಯ ಅರ್ಹತೆಯ ಆಧಾರದ ಮೇರೆಗೆ ನ್ಯಾಯಾಧೀಶರು ನಿರ್ಣಯಿಸುವ ತೀರ್ಮಾನವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅಪರಾಧಿಯು ತನ್ನ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸುತ್ತಾನೆಂದು ಖಾತ್ರಿಯಾಗಿ ಹೇಳುವುದು ನಮ್ಮಿಂದ ಸಾಧ್ಯವೇ?
ನೈಜ, ಪರಿಪೂರ್ಣ ಮತ್ತು ನಿಷ್ಪಕ್ಷವಾದ ನ್ಯಾಯವೆಂದರೆ ಅನ್ಯಾಯ ಅಥವಾ ಅಕ್ರಮಕ್ಕೆ ಒಳಗಾದವರ ಸಮ್ಮುಖದಲ್ಲೇ ನ್ಯಾಯವೊದಗಿಸುವ ವ್ಯವಸ್ಥೆಯೊಂದು ಇರಬೇಕು. ”ಹಿಟ್ಲರ್”ನಿಂದ ಸಾಮೂಹಿಕವಾಗಿ ಹತ್ಯೆಗೀಡಾದ ಆ ಮುಗ್ಧ ಜನರಿಗೆ ಯಾವ ರೀತಿಯ ಪರಿಹಾರವನ್ನು ನೀಡಲು ಸಾಧ್ಯ? ಅವರಿಗೆ ನ್ಯಾಯವೊದಗಿಸಲು ಅವರಿಂದು ಜೀವಂತವಿರುವರೇ? ಸತ್ಕರ್ಮವೆಸಗುತ್ತಿದ್ದ ಅನೇಕ ಸಜ್ಜನರನ್ನು ವಿನಾ ಕಾರಣ ಹಿಂಸಿಸಿ ಅವರನ್ನು ಕೊಲೆಮಾಡಿದ ಉದಾಹರಣೆಗಳು ಇತಿಹಾಸದಲ್ಲಿ ನಮಗೆ ಕಾಣಸಿಗುತ್ತವೆ. ಈ ರೀತಿ ತಮ್ಮ ಜೀವನವನ್ನು ಕಳೆದುಕೊಂಡ ಮಹಾನ್ ವ್ಯಕ್ತಿಗಳಿಗೆ ಅವರ ಸತ್ಕರ್ಮಗಳ ಪರಿಹಾರವನ್ನು ನೀಡಬೇಕೆಂದು ನೀವು ಚಿಂತಿಸುವುದಿಲ್ಲವೇ?
ಈ ಜೀವನದಲ್ಲಿ ನಾವೆಸಗಿದ ಕರ್ಮಗಳಿಗೆ ನ್ಯಾಯಯುತವಾದ ಪ್ರತಿಫಲ ದೊರೆಯುವಂತಾಗಬೇಕಾದರೆ ಮರಣಾನಂತರ ಜೀವನವೊಂದರ ಅಗತ್ಯತೆಯಿದೆ ಎಂಬುವುದನ್ನು ಯಾವ ಬುದ್ಧಿಜೀವಿಯೂ ಅಲ್ಲಗಳೆಯಲಾರನು.
ಪುನರುತ್ಥಾನ ಅಥವಾ ನಿರ್ಣಾಯಕ ದಿನದಂದು ಸೃಷ್ಟಿಕರ್ತನಾದ ದೇವನು ಸತ್ಕರ್ಮವೆಸಗಿದವರಿಗೆ ಉತ್ತಮ ಪ್ರತಿಫಲವನ್ನೂ ಮತ್ತು ದೇವ-ಧಿಕ್ಕಾರಿಗಳಿಗೆ ಶಿಕ್ಷೆಯನ್ನೂ ನೀಡುವ ವ್ಯವಸ್ಥೆಯೊಂದನ್ನು ಸ್ಥಾಪಿಸುವನು. ಆತನು ತನ್ನ ಸೃಷ್ಟಿಗಳ(ಯ) ಮೇಲೆ ಎಂದೂ ಅನ್ಯಾಯವೆಸಗಲಾರನು.
ಸ್ವರ್ಗ ಮತ್ತು ನರಕದ ಜೀವನವು ಶಾಶ್ವತವಾದ ಕಾರಣ, ಹಿಟ್ಲರ್ ಅಥವಾ ಅತ್ಮಾಹುತಿ ದಾಳಿಗಳ ಮೂಲಕ ಸಾವಿರಾರು ಮುಗ್ಧ ಜನರ ಬಲಿತೆಗೆದುಕೊಂಡ ಅಪರಾಧಿಗಳಿಗೆ ಅವರ ತಪ್ಪಿಗೆ ಅನುಗುಣವಾಗಿ ಶಿಕ್ಷೆಯನ್ನು ನೀಡುವುದು ಕಷ್ಟಕರವಲ್ಲ. ಅವರಿಗೆ ತಮ್ಮ ಕರ್ಮಫಲಗಳ ರುಚಿಯನ್ನು ಅನುಭವಿಸುವಂತಹ ವ್ಯವಸ್ಥೆಯನ್ನು ಸೃಷ್ಟಿಕರ್ತನು ‘ನಿರ್ಣಾಯಕ ದಿನ”ದಂದು ಸ್ಥಾಪಿಸುವನು. ಅದೇ ರೀತಿ ಅನ್ಯಾಯಕ್ಕೊಳಗಾಗಿ ವಿನಾ ಕಾರಣ ತಮ್ಮ ಪ್ರಾಣವನ್ನು ಕಳೆದುಕೊಂಡ ಮುಗ್ಧ ಹಾಗೂ ಸಜ್ಜನರಿಗೆ ಅವರು ಬಯಸುವ ಎಲ್ಲಾ ರೀತಿಯ ಪರಿಹಾರವನ್ನೂ ದೇವನು ನೀಡುವನು.
ಮರಣಾನಂತರ ಜೀವನ ಸಾಧ್ಯವೇ?
ವಸ್ತುವೊಂದಕ್ಕೆ ಪ್ರಥಮಬಾರಿ ರೂಪಕೊಡುವುದು ಕಷ್ಟಕರವಾಗಿದೆ. ಆದರೆ ಅದೇ ವಸ್ತುವಿನ ರಚನೆಯನ್ನು ಪುನರಾವರ್ತಿಸುವುದು ಅಷ್ಟೇ ನಿರಾಯಾಸಕರವಾಗಿರುವುದು ಎಂಬುವುದು ನಮಗೆಲ್ಲ ತಿಳಿದಿರುವ ವಿಚಾರ. ಹಾಗಾದರೆ ನಮ್ಮನ್ನು ಮೊದಲಬಾರಿ ಸೃಷ್ಟಿಸಿರುವ ಸರ್ವಶಕ್ತನಾದ ದೇವನು, ನಾವು ಮರಣಹೊಂದಿದ ಬಳಿಕ ಪುನಃ ನಮ್ಮನ್ನು ಜೀವಂತಗೊಳಿಸುವುದು ಆತನಿಗೆ ಪ್ರಯಾಸಕರವಾಗಿರುವುದೇ? ಇಲ್ಲ, ನಿರ್ಜೀವಿಯಾದ ನಮ್ಮನ್ನು ಪುನಃರೆಬ್ಬಿಸುವುದು ”ಸೃಷ್ಟಿಕರ್ತ”ನಿಗೆ ಸುಲಭಸಾಧ್ಯವಾಗಿದೆ.
ದೇವನು ಕ್ಷಮಿಸದಿರುವ ಒಂದು ‘ಮಹಾಪಾಪ” ಯಾವುದು?
ಸತ್ಯವು ತಿಳಿದ ನಂತರ ಯಾರು ಈ ಕೆಳಕಂಡ ಕಾರ್ಯಗಳನ್ನೆಸಗುವರೋ ಅವರನ್ನು ದೇವನು ಕ್ಷಮಿಸುವುದಿಲ್ಲ:
1.ದೇವನಿಗೆ ಸಮಾನರೆಂದು ತಿಳಿದು ಇತರರನ್ನು ಆರಾಧಿಸುವುದು ಅಥವಾ ವಿಧೇಯರಾಗಿರುವುದು, ಪ್ರಾರ್ಥಿಸುವುದು ಅಥವಾ ಅವರ ಮುಂದೆ ತಲೆಬಾಗುವುದು, ಸಾಷ್ಟಾಂಗ ವೆಸುಗುವುದು ಉದಾ: ನೀರು, ಗಾಳಿ, ಅಗ್ನಿ, ಮೂರ್ತಿ-ಚಿತ್ರಗಳು, ಸಂತರ ಅಥವಾ ಸಜ್ಜನರ ಗೋರಿ, ಇತ್ಯಾದಿ ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಸ್ತುಗಳ ಪೂಜೆ-ಆರಾಧಿಸುವುದು ಇತ್ಯಾದಿ.
ಮನುಷ್ಯನನ್ನು ‘ದೇವಪುತ್ರ” ಅಥವಾ ‘ದೇವಪತ್ನಿ”ಯೆಂದು ಸಂಭೋದಿಸುವುದರ ಮೂಲಕ ಆತನನ್ನು ಪವಿತ್ರವಾದ ‘ದೇವ”ನ ಸ್ಥಾನಕ್ಕೇರಿಸುವುದು. ಹೀಗೆ ಮನುಷ್ಯನೂ ದೇವನಿಗೆ ಸರಿಸಾಟಿಯಾದ ಗುಣಗಳನ್ನು ಹೊಂದಿರುವನು ಎಂಬ ನಂಬಿಕೆ ಹೊಂದುವುದು ಅಥವಾ ದೇವನಲ್ಲಿ ಅಪನಂಬಿಕೆ ಇತ್ಯಾದಿ.
‘ಇಸ್ಲಾಮ್” ಎಂಬ ಪದದ ಅರ್ಥವೇನು?
ಇಸ್ಲಾಮ್ ಧರ್ಮವು ಪ್ರವಾದಿ ಮುಹಮ್ಮದರು(ಸ) ಸ್ಥಾಪಿಸಿದಂತಹ ಹೊಸ ಧರ್ಮವೇನಲ್ಲ. ‘ಇಸ್ಲಾಮ್” ಎನ್ನುವುದು ಅರಬ್ಬಿ ಭಾಷೆಯ ಪದವಾಗಿದೆ. ಇದರರ್ಥವು ದೇವನಿಗೆ ವಿಧೇಯರಾಗಿರುವುದು ಅಥವಾ ದೇವನ ಇಚ್ಛೆಗೆ ಶರಣಾಗುವುದೆಂದಾಗಿದೆ. ಎಲ್ಲ ಪ್ರವಾದಿಗಳು ಈ ಜೀವನದ ರೀತಿಯನ್ನೇ ಬೋಧಿಸಿದರು. ದೇವನಿಗೆ ವಿಧೇಯರಾಗಿರುವುದನ್ನು ಅರಬ್ಬಿ ಭಾಷೆಯಲ್ಲಿ ಇಸ್ಲಾಮ್ ಎಂದು ಹೇಳಲಾಗುತ್ತದೆ.
‘ಮುಸ್ಲಿಮ್” ಎಂದರೆ ಯಾರು?
ಯಾರು ಸೃಷ್ಟಿಕರ್ತನ ಆಜ್ಞೆಗೆ ತನ್ನನ್ನು ಸಮರ್ಪಿಸಿ ಇಸ್ಲಾಮ್ ಧರ್ಮವನ್ನು ಅನುಸರಿಸುತ್ತಾನೋ, ಆತನನ್ನು ‘ಮುಸ್ಲಿಮ್” ಎಂದು ಕರೆಯಲಾಗುತ್ತದೆ. ಇದೂ ಸಹ ಅರಬ್ಬಿ ಭಾಷೆಯ ಪದವಾಗಿದೆ. ಯಾವ ರೀತಿ ವಾಹನ ಚಲಾಯಿಸುವವನು ಚಾಲಕನೆನಿಸಿಕೊಳ್ಳುವನೊ, ಹಾಡನ್ನು ಹಾಡುವವನು ಹಾಡುಗಾರನೆಂದು ಕರೆಯಲ್ಪಡುವನೊ, ಹಾಗೆಯೇ ‘ಇಸ್ಲಾಮ್”ನ್ನು ಅನುಸರಿಸುವವನು ‘ಮುಸ್ಲಿಮ್” ಎಂದು ಕರೆಯಲ್ಪಡುತ್ತಾನೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸೃಷ್ಟಿಕರ್ತನ ಆಜ್ಞಾಪಾಲನೆ ಮಾಡುತ್ತಾ ಆತನಿಗೆ ಶರಣಾಗುವವನನ್ನು ‘ಮುಸ್ಲಿಮ್” ಎಂದು ಹೇಳಬಹುದು.
”ಅಲ್ಲಾಹ”ನು ಯಾರು? ಅವನು ಮುಸ್ಲಿಮರ ದೇವರೇ?
”ಅಲ್ಲಾಹ”ನು ಮುಸಲ್ಮಾನರ ದೇವರು ಮಾತ್ರ ಎಂದು ಹೆಚ್ಚಿನವರು ಭಾವಿಸುತ್ತಾರೆ. ಇದೊಂದು ತಪ್ಪುಕಲ್ಪನೆಯಾಗಿದೆ. ”ಅಲ್ಲಾಹ್” ಎಂಬುವುದು ಅರಬ್ಬಿ ಪದ. ಇದರ ಅರ್ಥ ‘ದೇವರು’ ಎಂದಾಗಿದೆ. ಅರಬ್ಬಿ ಭಾಷೆ ಮಾತನಾಡುವ ಯಹೂದಿ ಮತ್ತು ಕ್ರೈಸ್ತರೂ ”ದೇವರು” ಎಂದು ಸೂಚಿಸಲು ”ಅಲ್ಲಾಹ್” ಎಂಬ ಪದವನ್ನೇ ಬಳಸುತ್ತಾರೆ.
ನೀರು(ಕನ್ನಡ), ವಾಟರ್(ಇಂಗ್ಲಿಷ್), ಪಾನಿ(ಹಿಂದಿ), ಮಾಅ(ಅರಾಬಿಕ್) ಎಲ್ಲವೂ ಒಂದೇ ವಸ್ತುವನ್ನು ಸೂಚಿಸುತ್ತದೆ. ಹೀಗೆ ಕೇವಲ ಸೂಚಿಸಲು ಉಪಯೋಗಿಸುವ ಭಾಷೆಯ ಬದಲಾವಣೆಯಿಂದ ಒಂದು ಲೋಟದಲ್ಲಿರುವ ನೀರು ತನ್ನ ಗುಣವನ್ನು ಬದಲಾಯಿಸಲು ಸಾಧ್ಯವಿಲ್ಲ. ದೇವರು(ಕನ್ನಡ), ಗಾಡ್(ಇಂಗ್ಲಿಷ್) ಮತ್ತು ಅಲ್ಲಾಹ್(ಅರಾಬಿಕ್) ಎಲ್ಲವೂ ನಮ್ಮ, ನಿಮ್ಮೆಲ್ಲರನ್ನು ಸೃಷ್ಟಿಸಿರುವ ಜಗದೊಡೆಯನನ್ನೇ ಸೂಚಿಸುತ್ತವೆ.
ಖುರ್’ಆನ್- ಮೇಲೆ ತಿಳಿಸಿರುವ ಎಲ್ಲಾ ಚರ್ಚೆಗಳಿಗೆ ಸಾಕ್ಷಿ
ನಮ್ಮೆಲ್ಲರ ಸೃಷ್ಟಿಕರ್ತನಾದ ಅಲ್ಲಾಹನಿಂದ ಅಂತ್ಯಪ್ರವಾದಿ ಮುಹಮ್ಮದ್(ಅವರ ಮೇಲೆ ಶಾಂತಿಯಾಗಲಿ)ರ ಮೇಲೆ ಅವತೀರ್ಣವಾದ ದಿವ್ಯವಾಣಿಯ ಸಂಗ್ರಹವನ್ನೇ ”ಖುರ್’ಆನ್” ಎನ್ನಲಾಗುತ್ತದೆ. ಇದು ಮಾನವನಿಗೆ ಮಾರ್ಗದರ್ಶಕ ಕೈಪಿಡಿಯಾಗಿದೆ. ಹಲವರು ತಿಳಿದಿರುವ ಹಾಗೆ ಪ್ರವಾದಿ ಮುಹಮ್ಮದರು ಖುರ್’ಆನಿನ ಲೇಖಕರಲ್ಲ. ಖುರ್’ಆನಿನ ಪ್ರತಿಯೊಂದು ವಾಕ್ಯವೂ ದೇವನಿಂದ ಅವತೀರ್ಣಗೊಂಡಿರುವಂತಹದ್ದಾಗಿದೆ ಮತ್ತು 1400 ವರ್ಷಗಳಿಂದ ಇದು ಬದಲಾವಣೆಗೆ ತುತ್ತಾಗದೇ ತನ್ನ ನೈಜ ಸ್ಥಿತಿಯಲ್ಲಿಯೇ ಉಳಿದಿದೆ.
‘ನನ್ನಲ್ಲಿ ಒಂದಾದರೂ ತಪ್ಪು ಹುಡುಕಿ ತೋರಿಸಿ’ ಎಂದು ನಮಗೆಲ್ಲ ಖುರ್’ಆನ್ ಸವಾಲು ಹಾಕುತ್ತದೆ.
ಖುರ್’ಆನಿನ ಕರ್ತೃ ಹೇಳುತ್ತಾನೆ “ಅವರೇನು, ಖುರ್’ಆನ್ ಕುರಿತು ಚಿಂತನೆ ನಡೆಸುವುದಿಲ್ಲವೇ? ಒಂದು ವೇಳೆ ಇದು ಅಲ್ಲಾಹನ ಹೊರೆತು ಇತರರಿಂದ ಬಂದಿರುತ್ತಿದ್ದರೆ, ಅವರಿಗೆ ಇದರಲ್ಲಿ ಅನೇಕ ತಪ್ಪುಗಳು ಮತ್ತು ವಿರೋಧಾಭಾಸಗಳು ಕಾಣಸಿಗುತ್ತಿದ್ದವು” ಖುರ್’ಆನ ಅಧ್ಯಾಯ 4 ಸೂಕ್ತಿ 82.
ಖುರ್’ಆನ್ ಭೂಶಾಸ್ತ್ರ, ಭ್ರೂಣಶಾಸ್ತ್ರ, ಖಗೋಳಶಾಸ್ತ್ರ, ಸಮುದ್ರಶಾಸ್ತ್ರ, ಕಾನೂನು, ಮನಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ ಇತ್ಯಾದಿ ವಿವಿಧ ವಿಭಾಗಗಳ ಬಗ್ಗೆ ಮಾತನಾಡುತ್ತದೆ. ಆಶ್ಚರ್ಯಕರ ವಿಷಯವೇನೆಂದರೆ, 21 ನೇ ಶತಮಾನದಲ್ಲಿ ಸಂಶೋಧಿಸಲ್ಪಟ್ಟ ಹಲವಾರು ವೈಜ್ಞಾನಿಕ ಅಂಶಗಳನ್ನು ಖುರ್’ಆನ್ 1400 ವರ್ಷಗಳ ಹಿಂದೆಯೇ ಅತ್ಯಂತ ನಿಖರವಾಗಿ ತಿಳಿಸಿದೆ ಮತ್ತು ಇಂತಹ ಸಂಶೋಧನೆಗಳು ಕೈಗೊಳ್ಳುವುದು ಮಾನವರಾದಂತಹ ಪ್ರವಾದಿ ಮುಹಮ್ಮದ್(ಅವರ ಮೇಲೆ ಶಾಂತಿಯಾಗಲಿ) ರವರಿಂದ ಅಸಾಧ್ಯವಾಗಿದೆ.
ಅಂತಿಮ ಮಾತು
ತಮ್ಮ ಅಮೂಲ್ಯವಾದ ಸಮಯವನ್ನು ಈ ಕಿರುಪುಸ್ತಕವನ್ನು ಓದಲು ಕಳೆದುದಕ್ಕಾಗಿ ಧನ್ಯವಾದಗಳು. ಯಾವುದೇ ವ್ಯಕ್ತಿಯನ್ನು ಗುರಿಯಾಗಿರಿಸಿ ಅಥವಾ ಒಂದು ಧರ್ಮದ ಅನುಯಾಯಿಗಳನ್ನು ಮನನೋಯಿಸುವಂತಹ ಉದ್ದೇಶದಿಂದ ಈ ಕೈಪಿಡಿಯನ್ನು ರಚಿಸಲಾಗಿಲ್ಲ. ದೇವನ ಸಂದೇಶವನ್ನು ಮಾನವಕೋಟಿಗೆ ತಲುಪಿಸುವುದರ ಜೊತೆಗೆ ನಮ್ಮ ಜೀವನದ ನೈಜ ಉದ್ದೇಶವನ್ನು ಅರಿತುಕೊಳ್ಳುವ ಸಲುವಾಗಿ ಮಾತ್ರ ಈ ಸಣ್ಣ ಕೃತಿಯನ್ನು ನಿಮಗೆ ನೀಡುತ್ತಿದ್ದೇವೆ. ನಮ್ಮೆಲ್ಲರ ಜೀವನದ ಉದ್ದೇಶವು ಒಂದೇ ಆದಾಗ, ದೇವನ ಆದೇಶದಂತೆ ಆತನಿಗೆ ಅಧೀನರಾಗಿ ಜೀವನ ಸಾಗಿಸುವುದರಿಂದ ನಾವಿರುವ ಸಮಾಜವು ಬದಲಾಗುವುದರೊಂದಿಗೆ ಈ ಜಗತ್ತು ಮಾನವರು ನೆಲೆಯೂರಲು ಅತ್ಯಂತ ಯೋಗ್ಯಸ್ಥಳವಾಗಿ ರೂಪಗೊಳ್ಳುವುದು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.