بسم الله الرحمن الرحيم
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಪರಿಚಯ
ನಿಜವೆಂದರೆ ನಾವಿಂದು ಬದುಕಿದ್ದೇವೆ ಹಾಗು ಒಂದಲ್ಲಾ ಒಂದು ದಿನ ಸಾಯುತ್ತೇವೆ. ಭೂಮಿಯ ಮೇಲೆ ನಾವು ಏಕಿದ್ದೇವೆ ಎಂದು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಸುತ್ತಲೂ ನೋಡಿ. ನಾವೇ ಮಾಡಿರುವ ವಸ್ತುಗಳಿಂದ ನಾವು ಸುತ್ತುವರಿದಿದ್ದೇವೆ. ಈ ವಸ್ತುಗಳನ್ನು ನಾವು ಯಾಕೆ ಮಾಡಿದ್ದು? ಈ ವಸ್ತುಗಳಿಗೆ ಏನಾದರು ಉದ್ದೇಶವಿದೆಯಾ? ಉತ್ತರ, ಖಂಡಿತವಾಗಿಯೂ ಹೌದು. ನಮ್ಮ ಶರೀರದ ಅಂಗಗಳನ್ನು ಒಮ್ಮೆ ನೋಡೋಣ.
ಯಾವುದೇ ಉದ್ದೇಶವಿಲ್ಲದೆ ಇರುವ ಒಂದಾದರೂ ಅಂಗವನ್ನು ಕಾಣುತ್ತೀವಾ? ನಮ್ಮ ಸುತ್ತಲಿರುವ ಪ್ರಾಕೃತಿಕ ವಸ್ತುಗಳು, ಉದಾಹರಣೆಗೆ ಮರಗಳು, ಬೆಟ್ಟಗಳು ಇತರೆ ಇವುಗಳನ್ನು ಒಮ್ಮೆ ನೋಡೋಣ. ಅವು ಯಾವುದೇ ಉದ್ದೇಶವಿಲ್ಲದೆ ಇವೆಯಾ? ನಾವು ಸೃಷ್ಟಿಸಿದ ಎಲ್ಲಾದಕ್ಕೂ ಉದ್ದೇಶವಿದೆ, ನಮ್ಮ ಅಂಗಗಳಿಗೆಲ್ಲಾ ಉದ್ದೇಶವಿದೆ, ಪ್ರಾಕೃತಿಕ ವಸ್ತುಗಳಾದ ಮರಗಳು, ಬೆಟ್ಟಗಳಿಗೂ ಉದ್ದೇಶವಿರುವಾಗ, ಸಂಪೂರ್ಣ ಮನುಜಕುಲ ಯಾವುದೇ ಉದ್ದೇಶವಿಲ್ಲದೇ ಅಸ್ತಿತ್ವದಲ್ಲಿದೆ ಎಂದು ಭಾವಿಸುವುದರಲ್ಲಿ ಅರ್ಥವಿದೆಯಾ?
ಹಾಗಾದರೆ ನಾವು ಏಕೆ ಅಸ್ತಿತ್ವದಲ್ಲಿದ್ದೇವೆ? ಹೆಸರು ಮತ್ತು ಆಸ್ತಿಗಳಿಸಲೆಂದೇ? ಮಜಾ ಮಾಡಲೆಂದೇ? ಪ್ರಪಂಚದಲ್ಲಿ ಅತ್ಯಂತ ಶ್ರೀಮಂತನಾಗಲೇ? ಇಲ್ಲ, ಜೀವನದಲ್ಲಿ ಇದಕ್ಕಿಂದ ಮಿಗಿಲಾದದ್ದು ಇರಬೇಕು, ಸ್ವಲ್ಪ ಯೋಚಿಸೋಣ. ನಮ್ಮ ಅಸ್ತಿತ್ವದ ಉದ್ದೇಶವನ್ನು ಯಾರು ನಿರ್ಧರಿಸುತ್ತಾರೆ?
ನೀವು ಹೇಳಬಹುದು, “ನಾನು ನನ್ನ ಅಸ್ತಿತ್ವದ ಉದ್ದೇಶವನ್ನು ನಿರ್ಧರಿಸುತ್ತೇನೆ”. ಒಂದು ಪೆನ್ನು/ಲೇಖನಿಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅದರ ನಿಜವಾದ ಉದ್ದೇಶವೇನು? ಪೆನ್ನಿನ ಮೂಲ ಉದ್ದೇಶ ಬರೆಯುವುದು. ಇದನ್ನು ನಿರ್ಧರಿಸಿದವರು ಯಾರು – ಪೆನ್ನನ್ನು ಬಳಸವವನೋ ಅಥವಾ ಅದನ್ನು ತಯಾರುಮಾಡಿದವನೋ? ಪೆನ್ನನ್ನು ತನ್ನ ಬೆನ್ನು ಕೆರೆಯಲು ಯಾರಾದರು ಉಪಯೋಗಿಸಿದರೂ, ಪೆನ್ನನ್ನು ಇದಕ್ಕಾಗಿಯೇ ತಯಾರು ಮಾಡಿದ್ದು ಎಂದುಹೇಳಲು ಸಾಧ್ಯವೇ? ಪೆನ್ನನ್ನು ತಯಾರುಮಾಡಿದವರೇ ಅದರ ನಿಜ ಉದ್ದೇಶವನ್ನು ನಿರ್ಧರಿಸುತ್ತಾರೆ. ಹೀಗೆಯೇ, ನಾವು ಈ ಪ್ರಪಂಚದಲ್ಲಿನ ನಮ್ಮ ಉದ್ದೇಶಕ್ಕೆ ನಮ್ಮದೇ ಆದ ಕಾರಣಗಳನ್ನು ಕೊಟ್ಟರೂ, ಅವು ಎಂದೂ ನಮ್ಮ ಅಸ್ತಿತ್ವದ ನಿಜ ಉದ್ದೇಶ ಆಗುವುದಿಲ್ಲ. ಏಕೆಂದರೆ ನಮ್ಮ ಅಸ್ತಿತ್ವದ ನಿಜ ಉದ್ದೇಶವನ್ನು ಕೇವಲ ನಮ್ಮ ಸೃಷ್ಟಿಕರ್ತನಿಂದ ಮಾತ್ರ ತಿಳಿಯಬಹುದು.
ನಮಗೆ ಒಬ್ಬ ಸೃಷ್ಟಿಕರ್ತ ಇದ್ದಾನೆಯೇ?
ನಾವೊಂದು ಸೇತುವೆ, ಒಂದು ಮಷಿನ್(ಸಾಧನ) ಅಥವ ಗಾಡಿಯನ್ನು ನೋಡಿದಾಗ, ಅದರ ಅಸ್ತಿತ್ವಕ್ಕೆ ಒಬ್ಬ ಉತ್ಪಾದಕ ಅಥವ ಒಂದು ಕಂಪನಿ ಕಾರಣ ಎಂದು ಅಲ್ಲಗಳೆಯುವುದಿಲ್ಲ. ಹಾಗಾದರೆ ಈ ಜಗತ್ತಿನ ಬಗ್ಗೆ ಏನಂತೀರ? ಉತ್ತಮವಾದ ರೀತಿ- ನೀತಿ, ಶಿಸ್ತು ಮತ್ತು ವಿನ್ಯಾಸಗಳನ್ನು ಈ ಜಗತ್ತಿನಲ್ಲಿ ಕಾಣುತ್ತೇವೆ.
ಉದಾಹರಣೆಗೆ, ಮುಂದಿನ ನೂರಾರು ವರ್ಷಗಳಿಗೆ ಸೂರ್ಯ ಮತ್ತು ಚಂದ್ರ ಗ್ರಹಣಗಳ, ಸೂರ್ಯ ಹುಟ್ಟುವ ಮತ್ತು ಮುಳುಗುವ ಹೊತ್ತನ್ನು ನಿಖರವಾಗಿ ಕಂಡುಹಿಡಿಯಬಹುದು. ಇದು ಕೇವಲ, ಗ್ರಹಗಳು ಮತ್ತು ನಕ್ಷತ್ರಗಳ ನಡುವೆ ಇರುವ ತಾಳ-ಮೇಳ, ಸಮತೋಲನ ಮತ್ತು ಹೊಂದಿಕೆಯಿಂದಾಗಿ ಸಾಧ್ಯ. ಬೇರೆ-ಬೇರೆ ಬಣ್ಣಗಳನ್ನು ಗೋಡೆಯ ಮೇಲೆ ಎರಚುವುದರಿಂದ ಒಂದು ಕೈ ಅಥವ ಒಂದು ಪಕ್ಷಿಯ ಆಕಾರ ಮೂಡಿಸಬಹುದೇ ಹೊರತು ಎಂದಿಗೂ ಮೊನಾಲಿಸ ಮಾಡಲು ಸಾಧ್ಯವಿಲ್ಲ. ನಮ್ಮ ಜಗತ್ತಿನ ವಿನ್ಯಾಸ ಮೊನಾಲಿಸಾಗಿಂತ ಅದೆಷ್ಟೋ ಕ್ಲಿಷ್ಟಕರ. ಈ ವಿನ್ಯಾಸ ಒಬ್ಬ ಸೃಷ್ಟಿಕರ್ತನಿಲ್ಲದೇ ಅಸ್ತಿತ್ವಕ್ಕೆ ಬಂತು ಎಂದು ನಂಬುವುದು ಎಷ್ಟರ ಮಟ್ಟಿಗೆ ಸರಿ? ನಮಗೆಲ್ಲರಿಗೂ ಗೊತ್ತು, ಸ್ಫೋಟ ವಿನಾಶಕಾರಿ ಎಂದು. ಈ ಸುಂದರ ಮತ್ತು ಸಂಪೂರ್ಣ ವಿನ್ಯಾಸ ಕೇವಲ ಅದೃಷ್ಟ ಅಥವ ಬಿಗ್ ಬ್ಯಾಂಗ್‍ನಂತಹ ಒಂದು ಸ್ಫೋಟದಿಂದ ಅಸ್ತಿತ್ವಕ್ಕೆ ಬರಲು ಸಾಧ್ಯವೆ? ಬೇಡದಿರುವ ಲೋಹದ ವಸ್ತುಗಳ ರದ್ದಿಯಲ್ಲಿನ ಒಂದು ಸ್ಫೋಟದಿಂದ ಮರ್ಸಿಡೀಸ್ ಬೆಂಜ್ ಮತ್ತು ರೋಲ್ಸ್ ರಾಯ್ಸ್ ಕಾರುಗಳು ಬಂತು ಎಂದರೆ ನೀವು ನಂಬುತ್ತೀರ?
ಜಗತ್ತನ್ನು ದೇವನು ಸೃಷ್ಟಿಸಿದರೆ, ದೇವರನ್ನು ಸೃಷ್ಟಿಸಿದವರು ಯಾರು?
ವಿಶ್ವವಿಜ್ಞಾನದ (ಕಾಸ್ಮೋಲಜಿ – ವಿಶ್ವದ ರಹಸ್ಯಗಳನ್ನು ವಿಶ್ಲೇಷಿಸುವ ವಿಜ್ಞಾನ) ಪ್ರಕಾರ ಈ ಜಗತ್ತಿಗೆ ಒಂದು ಪ್ರಾರಂಭವಿತ್ತು. ಜಗತ್ತಿನಂತೆಯೇ, ‘ಸಮಯ’ – ನಾವು ಆರಂಭ ಮತು ಕೊನೆಯನ್ನು ಅಳೆಯಲು ಬಳಸುವ ಸಾಧನ – ಕೂಡ ಅಸ್ತಿತ್ವಕ್ಕೆ ಬಂತು. ಈ ಜಗತ್ತಿನಲ್ಲಿ ಸೃಷ್ಟಿಸಿರುವ ಪ್ರತಿ ವಸ್ತುವೂ ‘ಸಮಯ’ದ ಮೇಲೆ ಅವಲಂಬಿಸಿದೆ, ಹಾಗಾಗೆ ಅವುಗಳಿಗೆ ಒಂದು ಆರಂಭ ಮತ್ತು ಅಂತ್ಯವಿದೆ. ಈ ಜಗತ್ತನ್ನು ಸೃಷ್ಟಿಸಿದವನು ‘ಸಮಯ’ ಅಸ್ತಿತ್ವಕ್ಕೆ ಬರುವ ಮುಂಚಿನಿಂದಲೂ ಇದ್ದುದರಿಂದ, ಅವನು ಇದರಿಂದ ಸ್ವತಂತ್ರ. ಹಾಗಾಗಿ ಸೃಷ್ಟಿಕರ್ತನಿಗೆ ಆರಂಭ ಅಥವ ಅಂತ್ಯವಿಲ್ಲ ಮತ್ತು ಅವನು ಸದಾಕಾಲ ಅಸ್ತಿತ್ವದಲ್ಲಿದ್ದನು. ಉದಾಹರಣೆಗೆ, ಈ ಸಣ್ಣ ಪುಸ್ತಕ ಸದಾಕಾಲ ಅಸ್ತಿತ್ವದಲ್ಲಿದ್ದರೆ, ಒಬ್ಬ ಸೃಷ್ಟಿಕರ್ತ ಅಥವ ಲೇಖಕನ ಅವಶ್ಯಕತೆಯಿಲ್ಲ. ಹಾಗೇ, ದೇವನು ಸದಾಕಾಲ ಅಸ್ತಿತ್ವದಲ್ಲಿ ಇದ್ದುದರಿಂದ ಅವನಿಗೆ ಯಾರೂ ಸೃಷ್ಟಿಕರ್ತನಿಲ್ಲ.
ದೇವನು ನಮ್ಮನ್ನು ಸೃಷ್ಟಿಸಿ, ಮಾರ್ಗದರ್ಶನವಿಲ್ಲದೇ ಬಿಟ್ಟನೇ? ದೇವನು ನಮ್ಮನ್ನು ಸೃಷ್ಟಿಸಿ, ಮಾರ್ಗದರ್ಶನವಿಲ್ಲದೇ ಬಿಟ್ಟಿಲ್ಲ. ನೀವು ಕಾರನ್ನು ಓಡಿಸುವುದು ಹೇಗೆ ಎಂದು ತೋರಿಸಬೇಕಿದ್ದರೆ ಕಾರನ್ನು ಬಳಸುತ್ತೀರೆ ಹೊರತು ಬೈಕನ್ನಲ್ಲ. ಹಾಗೆಯೇ, ದೇವನು ಉತ್ತಮ ಮನುಷ್ಯರನ್ನು ಆಯ್ಕೆ ಮಾಡಿ ಅವರ ಮೂಲಕ ಇತರೆ ಮನುಷ್ಯರಿಗೆ ಉತ್ತಮ ಜೀವನ ಹೇಗೆ ನಡೆಸಬೇಕೆಂದು ತಿಳಿಸಿಕೊಟ್ಟರು. ಇವರೇ ದೇವನು ಕಳುಹಿಸಿದ ಪ್ರವಾದಿಗಳು.
ಪ್ರವಾದಿಗಳು – ಮನುಕುಲಕ್ಕೆ ಮಾದರಿ/ಆದರ್ಶ ಪ್ರವಾದಿಗಳು ಉತ್ತಮ ಮನುಷ್ಯರಾಗಿದ್ದರು ಮತ್ತು ಮಾದರಿಯಾಗಿ ಬಾಳಿದರು. ಇವರುಗಳು ಕೇವಲ ಮನುಷ್ಯರಾಗಿದ್ದರು, ಅವರಿಗೆ ಯಾವುದೇ ದೈವಿಕ ಗುಣಗಳಿರಲಿಲ್ಲ. ದೇವನು ಭಾರತವೂ ಸೇರಿದಂತೆ ಪ್ರತಿ ದೇಶ/ಸಮಾಜಕ್ಕೂ ಪ್ರವಾದಿಗಳನ್ನು ಕಳುಹಿಸಿದನು. ಪ್ರವಾದಿಗಳಲ್ಲಿ ಕೆಲವರು – ನೂಹ್, ಅಬ್ರಹಾಮ್, ದಾವೂದ್, ಸುಲೈಮಾನ್, ಮೂಸ ಮತ್ತು ಏಸು. ಪ್ರವಾದಿಗಳ ಈ ಸಾಲಿನಲ್ಲಿ ಕಟ್ಟ ಕಡೆಯವರು, ಪ್ರವಾದಿ ಮುಹಮ್ಮದ್. ಅವರನ್ನು ವಿಶ್ವದ ಅಂತ್ಯದವರೆಗೆ ಸಂಪೂರ್ಣ ಮನುಕುಲಕ್ಕೆ ಕಳುಹಿಸಲಾಗಿತ್ತು. ಅವರಿಗೂ ಮುಂಚಿನ ಪ್ರವಾದಿಗಳನ್ನು ಕೇವಲ ನಿರ್ದಿಷ್ಟ/ಆಯ್ದ ಜನರು ಮತ್ತು ಸಮಯಕ್ಕೆ ಕಳುಹಿಸಲಾಗಿತ್ತು. ಪ್ರವಾದಿಗಳು ಕಲಿಸಿದ್ದೇನು?
ದೇವನ ಎಲ್ಲಾ ಪ್ರವಾದಿಗಳು 3 ವಿಷಯಗಳನ್ನು ಕಲಿಸಿದರು. ಅವು,
-
ನಮ್ಮ ಅಸ್ತಿತ್ವದ ಉದ್ದೇಶ
-
ದೇವನ ಗುಣಗಳು/ವೈಶಿಷ್ಟ್ಯ
-
ಸಾವಿನ ನಂತರ ದೇವನಿಗೆ ನಮ್ಮ ಜೀವನದ ಲೆಕ್ಕ ಒಪ್ಪಿಸಬೇಕಾಗುವುದು
ನಮ್ಮ ಅಸ್ತಿತ್ವದ ಉದ್ದೇಶ ನಮ್ಮ ಅಸ್ತಿತ್ವದ ಉದ್ದೇಶ, ಕೇವಲ ನಮ್ಮ ಸೃಷ್ಟಿಕರ್ತನನ್ನು ಆರಾಧಿಸುವುದು ಮತ್ತು ಅವನ ಆಜ್ಞೆ ಪಾಲಿಸುವುದು (ಅವನು ತಿಳಿಸಿದಂತೆ ನಡೆಯುವುದು) ಹಾಗು ಇದಲ್ಲದೆ ಬೇರೇನೂ ಇಲ್ಲ. (ಅಂದರೆ, ಕೇವಲ ಸೃಷ್ಟಿಕರ್ತನನ್ನು ಆರಾಧಿಸಿರಿ, ಸೃಷ್ಟಿಸಿದಂತಹ ಪ್ರತಿಮೆಗಳು, ಚಿತ್ರಗಳು, ಸೂರ್ಯ, ಚಂದ್ರ, ಗ್ರಹಗಳು ಇತ್ಯಾದಿಗಳನ್ನಲ್ಲ. ಜೊತೆಗೆ, ಯಾರನ್ನೇ ಅಥವ ಯಾವುದನ್ನೇ ದೇವನಿಗೆ ಸಮಾನ ಮಾಡಬೇಡಿ. ದೇವನ ಅಸ್ತಿತ್ವವನ್ನೂ ನಿರಾಕರಿಸಬೇಡಿ).
ದೇವನ ಗುಣಗಳು/ವೈಶಿಷ್ಟ್ಯ,
-
ದೇವನು ಒಬ್ಬನೇ ಮತ್ತು ಅವನಿಗೆ ಯಾರೂ ಸಮಾನರಿಲ್ಲ
-
ದೇವನಿಗೆ ಊಟ, ನಿದ್ರೆ, ಸಂಸಾರ, ಹೆಂಡತಿ, ಮಕ್ಕಳು ಇತ್ಯಾದಿ ಯಾವುದರ ಅವಶ್ಯಕತೆಯೂ ಇಲ್ಲ. ಹಾಗಾಗಿ ದೇವನು ಮಲಗುವುದಿಲ್ಲ, ಊಟ ಮಾಡುವುದಿಲ್ಲ ಅಥವ ತಂದೆ, ತಾಯಿ, ಹೆಂಡತಿ, ಮಕ್ಕಳನ್ನು ಹೊಂದಿಲ್ಲ.
-
ದೇವನು ಸರ್ವಶಕ್ತನು ಹಾಗು ಅವನು ತನ್ನ ಸೃಷ್ಟಿಯಂತೆ ಇಲ್ಲವಾದ್ದರಿಂದ, ಅವನಿಗೆ ಸುಸ್ತಾಗುವುದಿಲ್ಲ ಅಥವ ಮರೆಯುವುದಿಲ್ಲ ಅಥವ ತಪ್ಪುಗಳನ್ನು ಮಾಡುವುದಿಲ್ಲ.
-
ದೇವನು ಎಲ್ಲಾ ಮನುಷ್ಯರನ್ನು ಪ್ರೀತಿಸುತ್ತಾನೆ ಮತ್ತು ಅವರ ಜಾತಿ, ಬಣ್ಣ, ಬುಡಕಟ್ಟು ಅಥವ ವಂಶದ ಬುನಾದಿಯ ಮೇಲೆ ತಾರತಮ್ಯ ಮಾಡುವುದಿಲ್ಲ.
ಸಾವಿನ ನಂತರದ ಜೀವನ ಈ ಪ್ರಪಂಚ ಒಂದು ದಿನ ಕೊನೆಗೆ ಬರುತ್ತದೆ. ಮೊದಲನೇ ಮನುಷ್ಯನಿಂದ ಕಡೆಯ ಮನುಷ್ಯನವರೆಗೆ ಎಲ್ಲಾ ಮನುಷ್ಯರನ್ನು ನಿರ್ಣಾಯಕ ದಿನದಂದು, ಮತ್ತೆ ಜೀವಂತಗೊಳಿಸಲಾಗುವುದು ಮತ್ತು ಅವರ ಕೆಲಸಗಳ ಬಗ್ಗೆ ಪ್ರಶ್ನಿಸಲಾಗುವುದು. ಯಾರು, ಒಬ್ಬನೇ ಆದ ನಿಜ ದೇವನನ್ನು (ಸೃಷ್ಟಿಕರ್ತನನ್ನು) ಆರಾಧಿಸಿದ್ದರೋ ಮತ್ತು ಒಳ್ಳೆಯ ಕೆಲಸಗಳನ್ನು ಮಾಡಿದ್ದರೋ ಅವರಿಗೆ ಉತ್ತಮ ಪ್ರತಿಫಲ ಕೊಡಲಾಗುವುದು ಹಾಗು ಯಾರು ದೇವನನ್ನು ಧಿಕ್ಕರಿಸಿ, ಅವನ ಆಜ್ಞೆಗಳನ್ನು ಪಾಲಿಸಿರಲಿಲ್ಲವೋ ಅವರನ್ನು ಶಿಕ್ಷಿಸಲಾಗುವುದು. ಆ ಉತ್ತಮ ಪ್ರತಿಫಲವೇ ಸ್ವರ್ಗ ಮತ್ತು ಶಿಕ್ಷೆಯೇ ನರಕ. ಸ್ವರ್ಗ ಮತ್ತು ನರಕಗಳಲ್ಲಿನ ಜೀವನ ನಿರಂತರವಾದದ್ದು ಮತ್ತು ಎಂದೂ ಮುಗಿಯದು.
ಸಾವಿನ ನಂತರದ ಜೀವನದ ಅವಶ್ಯಕತೆಯಿದೆಯೇ? ನಾವೆಲ್ಲರೂ ನ್ಯಾಯ ಬಯಸುತ್ತೇವೆ, ಆದರೆ ಈ ಪ್ರಪಂಚ ಅನ್ಯಾಯದಿಂದ ತುಂಬಿದೆ. ಕೆಟ್ಟ ಜನರು ಮಜಾ ಮಾಡುತ್ತಿದ್ದಾರೆ ಮತ್ತು ಒಳ್ಳೆ ಜನರು ಬಳಲುತ್ತಿದ್ದಾರೆ. ಇನ್ನೊಂದು ಅನ್ಯಾಯವೆಂದರೆ, ಹಲವಾರು ಕೊಲೆ ಮಾಡಿರುವ ಒಬ್ಬ ಕೊಲೆಗಾರನನ್ನು ಸೂಕ್ತವಾದ ರೀತಿಯಲ್ಲಿ ಶಿಕ್ಷಿಸಲು ಸಾಧ್ಯವಿಲ್ಲ, ಏಕೆಂದರೆ ಆ ಕೊಲೆಗಾರನಿಗೆ ಗಲ್ಲು ಶಿಕ್ಷೆಯೇ ಸಿಕ್ಕರು, ಅದು ಕೇವಲ ಕೊಲೆಯಾದವರಲ್ಲಿ ಒಬ್ಬನ ಸಲುವಾಗಿನ ಶಿಕ್ಷೆ, ಮಿಕ್ಕವರ ಗತಿಯೇನು? ಎಷ್ಟೋ ಒಳ್ಳೆಯ ಜನರನ್ನು ಹಿಂಸಿಸಲಾಗಿದೆ ಮತ್ತು ಹಲವರನ್ನು ಕೊಲ್ಲಲಾಗಿದೆ! ಆ ಒಳ್ಳೆ ಜನರಿಗೆ ಅವರ ಒಳ್ಳೆತನದ ಪ್ರತಿಫಲ ಕೊಡಬಾರದೆ? ಪರಿಪೂರ್ಣ ನ್ಯಾಯವೆಂಬುದು ಈ ಭೂಮಿಯ ಮೇಲಿನ ಜೀವನದಲ್ಲಿ ಅಸಾದ್ಯ ಎಂದು ಇದು ತೋರಿಸುತ್ತದೆ. ಪರಿಪೂರ್ಣ ನ್ಯಾಯ ಕೊಡುವ ದೇವನು ಇಂತಹ ಅನ್ಯಾಯದ ಕೊನೆಯನ್ನು ಎಂದೂ ಸಹಿಸುವುದಿಲ್ಲ. ದೇವನು ನಮಗೆ ಪರಿಪೂರ್ಣ ನ್ಯಾಯದ ಭರವಸೆಯನ್ನು ಸಾವಿನ ನಂತರದ ಜೀವನದಲ್ಲಿ ಕೊಟ್ಟಿದ್ದಾನೆ. ಸಾವಿನ ನಂತರದ ಜೀವನ ಸಾಧ್ಯವೇ? ನಮಗೆಲ್ಲರಿಗೂ ಗೊತ್ತು ಏನನ್ನಾದರೂ ಮೊದಲ ಬಾರಿ ಸೃಷ್ಟಿಸುವುದು ಕಷ್ಟ ಮತ್ತು ಅದನ್ನೇ ಪದೇ ಪದೇ ಮಾಡುವುದು ಸುಲಭ. ದೇವನಿಗೆ ನಮ್ಮನ್ನು ಮೊದಲ ಬಾರಿ ಸೃಷ್ಟಿಸಲು ಕಷ್ಟವಾಗದಿದ್ದಾಗ, ನಮಗೆ ಸಾವಿನ ನಂತರ ಜೀವ ಕೊಡುವುದು ಕಷ್ಟ ಹೇಗಾಗುವುದು? ನಮ್ಮನ್ನು ಸಾವಿನಿಂದ ಮರಳಿಸಿ ಜೀವ ಕೊಡುವುದು ದೇವನಿಗೆ ಬಹಳ ಸುಲಭ. ದೇವನು ಕ್ಷಮಿಸದಿರುವ ಕೆಟ್ಟ ಕೆಲಸ/ ಪಾಪ ಕಾರ್ಯವೇನು? ನಿಜ ಏನೆಂದು ತಿಳಿದ ಮೇಲೆ ಕೂಡ, ಯಾರು ಈ ಕೆಳಗಿನವುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅವರನ್ನು ದೇವನು ಕ್ಷಮಿಸುವುದಿಲ್ಲ.
-
ಪ್ರಾಕೃತಿಕ ವಸ್ತುಗಳಾದ ಗಾಳಿ, ನೀರು, ಗ್ರಹಗಳು ಮತ್ತು ಮಾನವ-ನಿರ್ಮಿತ ವಸ್ತುಗಳಾದ ಕಲ್ಲಿನ ಕೆತ್ತನೆ, ಪ್ರತಿಮೆ, ಚಿತ್ರ, ಸಂತರ ಘೋರಿಗಳು, ಧಾರ್ಮಿಕ ವ್ಯಕ್ತಿಗಳು ಇತರೆ, ಯಾವುದನ್ನೇ ಆಗಲಿ ಬೇಡುವ, ತಲೆ ಬಾಗುವ ಮೂಲಕ ಆರಾಧನೆಯಲ್ಲಿ ದೇವನಿಗೆ ಸಮಾನರನ್ನಾಗಿ ಮಾಡುವುದು.
-
ಮನುಷ್ಯರನ್ನು ದೇವನ ಮಗ ಅಥವ ಹೆಂಡತಿ ಅಥವ ದೇವನ ಪೀಳಿಗೆ ಎಂದು ಕರೆಯುವುದು ಅಥವ ದೇವನಂತಹ ಗುಣಗಳನ್ನು ಹೊಂದಿರುವುದಾಗಿ ಹೇಳಿ, ಅವರನ್ನು ದೇವನನ್ನಾಗಿ ಮಾಡುವುದು.
-
ದೇವನ ಮೇಲೆ ಅಪನಂಬಿಕೆ ಇಡುವುದು
ಇಸ್ಲಾಮ್ ಎಂಬುದು ಏನು?
ಇಸ್ಲಾಮ್ ಪ್ರವಾದಿ ಮುಹಮ್ಮದ್‍ರವರು ಸ್ಥಾಪಿಸಿದ ಹೊಸ ಧರ್ಮವೇನಲ್ಲ. ಇಸ್ಲಾಮ್, ಒಂದು ಅರಬ್ಬಿ ಭಾಷೆಯ ಪದ, ಇದರರ್ಥ ನಿಜ ದೇವನಿಗೆ ಶರಣಾಗುವುದು ಎಂದು. ದೇವನ ಪ್ರವಾದಿಗಳೆಲ್ಲರೂ ಇದೇ ಜೀವನ ಶೈಲಿಯನ್ನು ಅನುಸರಿಸಿದರು ಹಾಗು ಹೇಳಿಕೊಟ್ಟರು – ದೇವನಿಗೆ ಅಂದರೆ ಸೃಷ್ಟಿಕರ್ತನಿಗೆ ಶರಣಾಗುವುದು, ಇದನ್ನು ನಾವು ಅರಬ್ಬಿ ಭಾಷೆಯಲ್ಲಿ ಇಸ್ಲಾಮ್ ಎಂದು ಕರೆಯುತ್ತೇವೆ.
ಮುಸ್ಲಿಮ್ ಎಂದರೆ ಯಾರು? ಯಾರು ದೇವನ ಆಜ್ಞೆಯಂತೆ ನಡೆಯುತ್ತಾರೊ ಹಾಗು ದೇವನನ್ನೇ ಆರಾಧಿಸುತ್ತಾರೊ ಅವರನ್ನು ಅರಬ್ಬಿ ಭಾಷೆಯಲ್ಲಿ ಮುಸ್ಲಿಮ್ ಅಂದು ಕರೆಯಲಾಗುತ್ತದೆ. ನೀವು ದೇವನ ಆಜ್ಞಾಕಾರಿಯಾಗಿ, ಅವನೊಬ್ಬನನ್ನೇ ಆರಾಧಿಸುವುದಾದರೆ ನಿಮ್ಮನ್ನು ಅರಬ್ಬಿ ಭಾಷೆಯಲ್ಲಿ ಮುಸ್ಲಿಮ್ ಎಂದು ಕರೆಯಲಾಗುತ್ತದೆ. ಅಲ್ಲಾಹ್ ಎಂದರೆ ಯಾರು? ಅಲ್ಲಾಹನು ಮುಸ್ಲಿಮರ ದೇವರಲ್ಲ. ಅರಬ್ಬಿ ಭಾಷೆಯಲ್ಲಿ ಅಲ್ಲಾಹ್ ಎಂದರೆ ದೇವರು. ಉದಾಹರಣೆಗೆ, ನೀರನ್ನು ಇಂಗ್ಲಿಷ್‍ನಲ್ಲಿ ವಾಟರ್(water) ಎಂದು, ಹಿಂದಿಯಲ್ಲಿ ಪಾನಿ ಎಂದು, ಅರಬ್ಬಿಯಲ್ಲಿ ಮಾಉ/ಮೋಯ ಎಂದು ಕರೆಯಲಾಗುತ್ತದೆ. ಇದೇ ರೀತಿ ಕನ್ನಡದಲ್ಲಿ ದೇವರು, ಇಂಗ್ಲಿಷ್‍ನಲ್ಲಿ ಗಾಡ್ (God), ಹಿಂದಿಯಲ್ಲಿ ಈಶ್ವರ್(ईश्वर) ಮತ್ತು ಅರಬ್ಬಿಯಲ್ಲಿ ಅಲ್ಲಾಹ್(الله) ಎಂದು ಹೇಳಲಾಗುತ್ತದೆ.
ಮೇಲಿನ ಮಾಹಿತಿಗಳಿಗೆಲ್ಲಾ ಪುರಾವೆ – ಖುರ್’ಆನ್ ಖುರ್’ಆನ್ ದೇವನು ತನ್ನ ಕಟ್ಟ ಕಡೆಯ ಸಂದೇಶವಾಹಕರಾದ ಪ್ರವಾದಿ ಮುಹಮ್ಮದ್‍ದವರಿಗೆ ನೀಡಿದ ಕೊನೆಯ ಅವತೀರ್ಣವಾಗಿದೆ. ಪ್ರವಾದಿ ಮುಹಮ್ಮದ್ ಖುರ್’ಆನನ್ನು ರಚಿಸಲಿಲ್ಲ. ಸಂಪೂರ್ಣ ಖುರ್’ಆನ್ ದೇವ ವಚನ ಹಾಗು ಇದು ಕಳೆದ 14 ಶತಮಾನಗಳಿಂದ ಬದಲಾಗದೆ ಉಳಿದಿದೆ. ಖುರ್’ಆನ್ ತನ್ನಲ್ಲಿ ಒಂದಾದರೂ ತಪ್ಪನ್ನು ಕಂಡುಹಿಡಿಯಲು ಸವಾಲು ಹಾಕುತ್ತದೆ. ಈ ಪುಸ್ತಕದ
ಕರ್ತೃ(ದೇವನು) ಹೇಳುತ್ತಾನೆ, “ಇವರೇಕೆ ಖುರ್’ಆನನ್ನು ಸೂಕ್ಷ್ಮವಾಗಿ ಗಮನಿಸುವುದಿಲ್ಲವೆ? ದೇವನ ಹೊರತಾಗಿ ಬೇರೆ ಯಾರಿಂದಲಾದರು ಇದು ಬಂದಿದ್ದರೆ, ಇದರಲ್ಲಿ ಅನೇಕ ತಪ್ಪುಗಳು ಮತ್ತು ಅಸಮಂಜಸ ವಿಷಯಗಳು ಇರುತಿದ್ದವು” (ಖುರ್’ಆನ್ 4: 82)
ಖುರ್’ಆನ್ ಭೂಶಾಸ್ತ್ರ, ಭ್ರೂಣಶಾಸ್ತ್ರ, ಖಗೋಳಶಾಸ್ತ್ರ, ಸಮುದ್ರಶಾಸ್ತ್ರ, ಕಾನೂನು, ಮನಃಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ ಇತರೆ ವಿಷಯಗಳ ಬಗೆಗೂ ತಿಳಿಸಿಕೊಡುತ್ತದೆ. ಆಶ್ಚರ್ಯವೆಂದರೆ, ಖುರ್’ಆನ್ 21ನೇ ಶತಮಾನದಲ್ಲಿ ವಿಜ್ಞಾನದಲ್ಲಿ ಕಂಡುಹಿಡಿದ ಅನೇಕ ವಿಷಯಗಳನ್ನು ಸುಮಾರು 14 ಶತಮಾನಗಳ ಹಿಂದೆಯೇ ಕರಾರುವಾಕ್ಕಾಗಿ ತಿಳಿಸಿದೆ. ಇದು ಮನುಷ್ಯರಾದಂತಹ ಪ್ರವಾದಿ ಮುಹಮ್ಮದ್‍ರವರು ಸ್ವಂತವಾಗಿ ತಿಳಿಯಲು ಅಸಾಧ್ಯ.
ನಮ್ಮ ಕೊನೆಯ ಮಾತುಗಳು ಇವನ್ನು ಕೇವಲ ಜೀವನದ ಉದ್ದೇಶವನ್ನು ನಿಮಗೆ ತಿಳಿಸಲೆಂದೇ ಬರೆಯಲಾಗಿದೆ. ನಾವು ಈಗಲಾದರೂ ಇದರ ಬಗ್ಗೆ ಗಂಭೀರವಾಗಿ ಯೋಚಿಸಿ, ದೇವನ ಇಚ್ಛೆಯಂತೆ ಜೀವನ ಸಾಗಿಸಬೇಕಾಗಿದೆ. ಇದನ್ನು ಓದಲು ಸಮಯ ಕಳೆದಿದ್ದಕ್ಕಾಗಿ ನಾವು ಮನಸಾರೆ ನಿಮ್ಮನ್ನು ಕೃತಜ್ಞತೆ ಸಲ್ಲಿಸುತ್ತೇವೆ.