ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಆಯ್ಕೆಯಾಗಿರದ ಪರಿಸರದಲ್ಲಿ ಜನಿಸುತ್ತಾನೆ. ಈ ಜಗತ್ತಿನಲ್ಲಿಯ ಅವನ ಅಸ್ತಿತ್ವದ ಆರಂಭದಿಂದಲೇ ಅವನ ಕುಟುಂಬದ ಧರ್ಮ ಅಥವಾ ಸಮಾಜದ ಸಿದ್ಧಾಂತಗಳನ್ನು ಅವನ ಮೇಲೆ ಬಲವಂತವಾಗಿ ಹೇರಲಾಗುತ್ತದೆ. ಅವನು ಯೌವ್ವನಾವಸ್ಥೆಗೆ ತಲುಪುವಷ್ಟರಲ್ಲಿ ಸಾಮಾನ್ಯವಾಗಿ, ಅವನ ಸಮಾಜದ ನಂಬಿಕೆಗಳೇ ಸತ್ಯವಾಗಿದ್ದು, ಪ್ರತಿಯೊಬ್ಬನೂ ಆ ನಂಬಿಕೆಯನ್ನೇ ಹೊಂದಿರಬೇಕೆಂಬ ಭಾವನೆಗಳು ಅವನ ಮನ-ಮಸ್ತಿಷ್ಕಗಳಲ್ಲಿ ಸಂಪೂರ್ಣವಾಗಿ ಬೇರೂರಿಬಿಡುತ್ತದೆ.
ಆದರೆ, ಕೆಲವರು ಫ್ರೌಢರಾದಂತೆ, ಅನ್ಯ ನಂಬಿಕೆಗಳ ಪರಿಚಯವಾಗತೊಡಗಿದಾಗ, ತಮ್ಮ ಸಮಾಜದಲ್ಲಿ ತಮ್ಮ ನಂಬಿಕೆಗಳ ಅಧಿಕೃತತೆಯ ಬಗ್ಗೆಯೇ ಪ್ರಶ್ನಿಸಲಾರಂಭಿಸುತ್ತಾರೆ. ಪ್ರತಿಯೊಂದು ಜಾತಿ, ಪಂಗಡ, ತತ್ವ ಮತ್ತು ಸಿದ್ಧಾಂತವೂ, ‘ಮಾನವನ ಹಿತದೃಷ್ಟಿಯಿಂದ ತನ್ನದೊಂದೇ ಸರಿಯಾದ ಮಾರ್ಗ ‘ ಎಂದು ಪ್ರತಿಪಾದಿಸುತ್ತಿರುವುದನ್ನು ಮನಗಂಡು, ಸತ್ಯವನ್ನು ಬಯಸುವವರು ಸಾಕಷ್ಟು ಬಾರಿ ಗೊಂದಲದ ಹಂತವನ್ನು ತಲುಪುತ್ತಾರೆ. ವಾಸ್ತವದಲ್ಲಿ, ಎಲ್ಲವೂ ಜನರನ್ನು ಒಳಿತಿನ ಕಡೆಗೆ ಪ್ರೇರೇಪಿಸುತ್ತವೆ ಎಂದಾದರೆ, ‘ಯಾವುದು ಸರಿಯಾದ ಮಾರ್ಗ?’.
ಎಲ್ಲವೂ ಸರಿಯಾಗಿರಲು ಸಾಧ್ಯವಿಲ್ಲ. ಏಕೆಂದರೆ, ಪ್ರತಿಯೊಂದು ಧರ್ಮವೂ, ಇತರೆಲ್ಲ ಧರ್ಮಗಳನ್ನು ತಪ್ಪಾಗಿಯೇ ಘೋಷಿಸುತ್ತವೆ. ಹಾಗಿರುವಾಗ, ಸತ್ಯವನ್ನು ಬಯಸುವವರು ಸರಿಯಾದ ಮಾರ್ಗವನ್ನು ಕಂಡುಕೊಳ್ಳವುದಾದರೂ ಹೇಗೆ? ಇಂತಹ ನಿರ್ಣಾಯಕ ತೀರ್ಮಾನವನ್ನು ಕೈಗೊಳ್ಳಲು ಆ ದೇವರು ನಮ್ಮೆಲ್ಲರಿಗೂ ಬುದ್ದಿ ಮತ್ತು ವಿವೇಚನಾ ಶಕ್ತಿಯನ್ನು ದಯಪಾಲಿಸಿರುವನು. ಮನುಷ್ಯನ ಜೀವನದಲ್ಲಿ ನಿಜಕ್ಕೂ ಇದೊಂದು ಮಹತ್ವಪೂರ್ಣ ತೀರ್ಮಾನವಾಗಿರುವುದು. ಅವನ ಭವಿಷ್ಯವೂ ಇದನ್ನೇ ಅವಲಂಬಿಸಿರುತ್ತದೆ. ಆದ ಕಾರಣ, ನಮ್ಮಲ್ಲಿ ಪ್ರತಿಯೊಬ್ಬನೂ ಇಲ್ಲಿ ವಿಶದೀಕರಿಸಲಾಗಿರುವ ಆಧಾರವನ್ನು ಸಂಯಮದಿಂದ ಪರಿಶೀಲಿಸಿ, ಇನ್ನೂ ಆಧಾರಗಳು ದೊರಕುವಲ್ಲಿಯವರೆಗೆ, ಸರಿಯೆನ್ನಿಸುವ ಮಾರ್ಗವನ್ನು ಆಯ್ಕೆ ಮಾಡಲಿ.
ಇತರೆಲ್ಲ ಧರ್ಮಗಳಂತೆ ಅಥವಾ ವಿಚಾರಗಳಂತೆ, ಇಸ್ಲಾಂ ಕೂಡಾ, ತಾನು ಆ ದೇವರ ಕಡೆಗೆ ಕೊಂಡೊಯ್ಯುವ ಏಕೈಕ ನೈಜ ಮಾರ್ಗವೆಂಬುದನ್ನು ಪ್ರತಿಪಾದಿಸುತ್ತದೆ. ಈ ವಿಷಯದಲ್ಲಿ ಇಸ್ಲಾಂ, ಅನ್ಯ ಧರ್ಮಗಳಿಗೆ ಹೊರತುಪಡಿಸಿದ್ದಲ್ಲ. ಈ ಪ್ರತಿಪಾದನೆಯನ್ನು ಅಂಗೀಕರಿಸಲು ಕೆಲವು ಆಧಾರಗಳನ್ನು ನೀಡುವ ಉದ್ದೇಶದಿಂದ ಈ ಪುಸ್ತಕವು ರಚಿತಗೊಂಡಿದೆ. ಆದರೆ ಒಂದು ವಿಷಯ ಮಾತ್ರ ಎಂದಿಗೂ ನಮ್ಮ ತಿಳುವಳಿಕೆಯಲ್ಲಿರಬೇಕು. ಅದೇನೆಂದರೆ, ವಾಸ್ತವಿಕತೆಯಿಂದ ನಮ್ಮನ್ನು ಅಂಧರನ್ನಾಗಿಸುವ ಉದ್ವೇಗ ಹಾಗು ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಬದಿಗಿರಿಸಿ ವಿವೇಚಿಸಿದಾಗ ಮಾತ್ರ ಒಬ್ಬ ವ್ಯಕ್ತಿ ಸತ್ಪಥವನ್ನು ಕಂಡುಕೊಳ್ಳಲು ಸಾಧ್ಯ. ಆಗಲೇ ಮತ್ತು ಆಗ ಮಾತ್ರವೇ, ನಾವು ದೇವರು ದಯಪಾಲಿಸಿರುವ ಬುದ್ಧಿವಂತಿಕೆಯನ್ನು ಬಳಸಲು ಮತ್ತು ಅದರ ಮೂಲಕ ಸುಸ್ಪಷ್ಟವಾದ ಮತ್ತು ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಬಹುದು.
ಇಸ್ಲಾಂ, ದೇವರ ನೈಜ ಧರ್ಮವೆನ್ನುವುದರ ಪ್ರತಿಪಾದನೆಗೆ ಬೆಂಬಲವಾಗಿ ಅನೇಕ ಆಧಾರ ಪ್ರಮಾಣಗಳನ್ನು ಮುಂದಿಡಬಹುದು. ಈ ಎಲ್ಲ ಸ್ಪಷ್ಟ ಪ್ರಮಾಣಗಳಲ್ಲಿ ಕೇವಲ ಮೂರನ್ನು ಮಾತ್ರ ಈ ಕೆಳಗೆ ವಿಶದೀಕರಿಸಲಾಗಿದೆ. ಮೊದಲ ತರ್ಕವು ‘ಧರ್ಮದ ಹೆಸರಿನ ದೈವಿಕ ಮೂಲ ಮತ್ತು ಅದರ ಅರ್ಥ’ ವೈಶಾಲ್ಯತೆಯನ್ನು ಆಧರಿಸಿದೆ. ಎರಡನೆಯದಾಗಿ, ದೇವರ, ಮಾನವನ ಮತ್ತು ಸೃಷ್ಟಿಯ ಪರಸ್ಪರ ಸಂಬಂಧಗಳ ಕುರಿತು ಏಕಮಾತ್ರ ಮತ್ತು ಕ್ಲಿಷ್ಟಕರವಲ್ಲದ ಶಿಕ್ಷಣ’ -ವನ್ನೊಳಗೊಂಡಿದೆ. ಮೂರನೆಯ ತರ್ಕವು ಒಂದು ಮಹಾಸತ್ಯದ ಅನ್ವೇಷಣೆಯಾಗಿದೆ. ಅದೇನೆಂದರೆ, ‘ಇಸ್ಲಾಂ ಧರ್ಮವು ಸಾರ್ವತ್ರಿಕವಾಗಿ ಎಲ್ಲ ಮಾನವರೂ ಎಲ್ಲ ಕಾಲದಲ್ಲೂ ಅನುಸರಿಸಬಹುದಾದಂತಹ ಧರ್ಮ’ ಎಂಬುದು. ಒಂದು ಧರ್ಮವನ್ನು ನೈಜ ಧರ್ಮ ಎಂದು ಪರಿಗಣಿಸಲು ಅಗತ್ಯವಿರುವ ತಾರ್ಕಿಕ ಮತ್ತು ಬುದ್ಧಿಯ ಬೇಡಿಕೆಯು ಈ ಮೂರು ಮೂಲ ತತ್ವಗಳೇ ಆಗಿವೆ. ಮುಂದೆ ಬರಲಿರುವ ಪುಟಗಳಲ್ಲಿ ಈ ವಿಷಯಗಳ ಬಗ್ಗೆ ವಿಶದೀಕರಿಸಲಾಗಿದೆ.
ಧರ್ಮದ ಹೆಸರು
ಇಸ್ಲಾಮಿನ ಬಗ್ಗೆ ಪ್ರಥಮವಾಗಿ ತಿಳಿದಿರಬೇಕಾದ ಮತ್ತು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಾದ ವಿಷಯವೆಂದರೆ , ‘ಇಸ್ಲಾಂ’ ಎಂಬ ಪದದ ಅರ್ಥ. ಅರಬಿ ಭಾಷೆಯ ‘ಇಸ್ಲಾಂ’ ಎಂಬ ಪದದ ಅರ್ಥ – ‘ಮಾನವನು ತನ್ನನ್ನು ಸಂಪೂರ್ಣವಾಗಿ ಆ ಏಕೈಕ ನೈಜ ಆರಾಧ್ಯನಿಗೆ ಶರಣಾಗಿಸುವುದು’ ಎಂದು. ಹೀಗೆ ತನ್ನನ್ನು ಸಂಪೂರ್ಣವಾಗಿ ಆ ಏಕೈಕ ನೈಜ ಆರಾಧ್ಯನಿಗೆ ಶರಣಾಗತಗೊಳಿಸಿದ ವ್ಯಕ್ತಿಯನ್ನು ಅರಬಿ ಭಾಷೆಯಲ್ಲಿ ‘ಮುಸ್ಲಿಂ’ ಎಂದು ಕರೆಯಲಾಗುತ್ತದೆ.
ಕ್ರಿಶ್ಚಿಯನ್ ಧರ್ಮವನ್ನು ಜೀಸಸ್ ಕ್ರೈಸ್ಟ್‌ರ ನಾಮದಿಂದ, ಬೌದ್ಧ ಧರ್ಮವನ್ನು ಗೌತಮ್ ಬುದ್ಧರಿಂದ, ಕನ್‌ಫ್ಯೂಷಿಯನ್ ಧರ್ಮವನ್ನು ಕನ್‌ಫ್ಯೂಷಿಯಸ್‌ರಿಂದ, ಮಾರ್ಕ್ಸ್‌ವಾದಿ ಧರ್ಮವನ್ನು ಕಾರ್ಲ್‌ಮಾಕ್ಸ್‌ರಿಂದ ಜೂಡಾಯಿಸಂ ಧರ್ಮವನ್ನು ಜೂಡಾಹ್ ಎನ್ನುವ ಜನಾಂಗದಿಂದ ಮತ್ತು ಹಿಂದು ಧರ್ಮವನ್ನು ಸಿಂಧು ನದಿಯ ನಾಮದಿಂದ ಹೆಸರಿಸಲಾಗಿರುವಂತೆ, ಇಸ್ಲಾಂ ಧರ್ಮವನ್ನು ಯಾವುದೇ ವ್ಯಕ್ತಿಯ ಅಥವಾ ಜನಾಂಗದ ಮೇರೆಗೆ ಹೆಸರಿಸಲಾಗಿಲ್ಲ, ಅಥವಾ ಇದು ಒಬ್ಬ ವ್ಯಕ್ತಿಯ ನಂತರದ ಪೀಳಿಗೆಗಳು ನಿರ್ಧರಿಸಿರುವ ಹೆಸರೂ ಅಲ್ಲ. ಇಸ್ಲಾಂ (ನೈಜ ಆರಾಧ್ಯನೆದುರು ಸಂಪೂರ್ಣವಾಗಿ ಶರಣಾಗತಗೊಳ್ಳುವ) ಧರ್ಮ, ಪ್ರಥಮ ಮಾನವ ಮತ್ತು ದೇವರ ಪ್ರಥಮ ಪ್ರವಾದಿಯಾದ ‘ಆದಮ್’ರಿಗೆ ದಯಪಾಲಿಸಲಾದಂತಹ ಧರ್ಮ ಮತ್ತು ಅಲ್ಲಾಹನ ವತಿಯಿಂದ ಮಾನವರೆಡೆಗೆ ಕಳುಹಿಸಲಾದ ಎಲ್ಲ ಪ್ರವಾದಿಗಳ ಧರ್ಮವೂ ಇದುವೇ ಆಗಿರುವುದು.
ಅಷ್ಟೇ ಅಲ್ಲದೆ, ಈ ಧರ್ಮದ ಹೆಸರು ಕೂಡ ಸ್ವತಃ ದೇವರಿಂದಲೇ ನಿಶ್ಚಯಿಸಲ್ಪಟ್ಟಿದ್ದು, ಅದನ್ನು ಸ್ಪಷ್ಟವಾಗಿ ಅವನು ಮಾನವನಿಗೆ ಅವತೀರ್ಣಗೊಳಿಸಿದ ಅಂತಿಮ ಗ್ರಂಥದಲ್ಲಿ ಲಿಖಿತಗೊಳಿಸಿರುವನು. ಅರಬಿ ಭಾಷೆಯಲ್ಲಿ ‘ ಖುರ್‌ಆನ್’ ಎಂದು ಕರೆಯಲ್ಪಡುವ ಈ ಅಂತಿಮ ದೈವಗ್ರಂಥದಲ್ಲಿ ಅಲ್ಲಾಹನು ಈ ರೀತಿ ಹೇಳುತ್ತಾನೆ:
“ಈ ದಿನ ನಿಮಗಾಗಿ ನಿಮ್ಮ ಧರ್ಮವನ್ನು ಸಂಪೂರ್ಣಗೊಳಿಸಿರುವೆನು. ನನ್ನ ಕೊಡುಗೆಗಳನ್ನು ನಿಮ್ಮ ಮೇಲೆ ಪರಿಪೂರ್ಣಗೊಳಿಸಿರುವೆನು ಮತ್ತು ನಿಮಗಾಗಿ ಇಸ್ಲಾಂಅನ್ನು ನಿಮ್ಮ ಧರ್ಮದ ನೆಲೆಯಲ್ಲಿ ಅಂಗೀಕರಿಸಿರುವೆನು.”
[ಸೂರಃ ಅಲ್ – 5:3]“ಯಾರಾದರೂ ಇಸ್ಲಾಂನ ಹೊರತು ಯಾವುದಾದರೂ ಇತರ ಪದ್ಧತಿಯನ್ನು ಸ್ವೀಕರಿಸಲಿಚ್ಛಿಸಿದರೆ ಅವರ ಆ ಪದ್ಧತಿಯನ್ನು ಎಷ್ಟು ಮಾತ್ರಕ್ಕೂ ಸ್ವೀಕರಿಸಲಾಗದು.” [ಸೂರಃ ಆಲಿ -ಇಮ್ರಾನ್ 3:85]
ಹೀಗೆ, ಇಸ್ಲಾಂ – ಮುಹಮ್ಮದ್‌ರಿಂದ(ಅವರ ಮೇಲೆ ಶಾಂತಿ ಇರಲಿ) ಏಳನೆಯ ಶತಮಾನದಲ್ಲಿ ಅರೇಬಿಯಾ ದೇಶದಲ್ಲಿ ಆಗಮಿಸಿದ ಹೊಸಧರ್ಮವಾಗಿರುವುದಾಗಿ ವಾದಿಸುವುದಿಲ್ಲ. ಬದಲಾಗಿ, ಆದಮ್ ಮತ್ತು ಆನಂತರ ಬಂದ ಎಲ್ಲ ಪ್ರವಾದಿಗಳಿವೂ ಅವತೀರ್ಣಗೊಂಡಿದ್ದಂತೆಯೇ ಸರ್ವಶಕ್ತನಾದ ಅಲ್ಲಾಹನ ನೈಜಧರ್ಮವು ತನ್ನ ಅಂತಿಮ ಹಾಗು ಪರಿಪೂರ್ಣ ರೂಪದಲ್ಲಿ ಪ್ರಕಟಗೊಂಡಿದೆ.
ಈ ಸಂದರ್ಭದಲ್ಲಿ, ತಮ್ಮದೊಂದೇ ಸತ್ಪಥ ಎಂದು ವಾದಿಸುವ ಇತರ ಎರಡು ಧರ್ಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿಮರ್ಶಿಸೋಣ. ಬೈಬಲ್‌ನಲ್ಲಿ ಎಲ್ಲಿಯೂ ದೇವರು, ಪ್ರವಾದಿ ಮೂಸಾರ ಜನಾಂಗ ಅಥವಾ ಅಥವಾ ಅವರ ಅನುಯಾಯಿಗಳ ಧರ್ಮವನ್ನು ಜೂಡಾಯಿಸಂ ಎಂದಾಗಲಿ ಅಥವಾ ಜೀಸಸ್ ಕ್ರೈಸ್ಟ್ (ಏಸು ಕ್ರಿಸ್ತ)ರ ಅನುಯಾಯಿಗಳ ಧರ್ಮವನ್ನು ಕ್ರಿಶ್ಚಿಯನ್ ಎಂದಾಗಲಿ ಕರೆದಿರುವುದನ್ನು ನೀವು ಕಾಣಲಾರಿರಿ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಜೂಡಾಯಿಸಂ ಅಥವಾ ಕ್ರಿಶ್ಚಿಯನ್ ಎಂಬ ಹೆಸರು ದೈವಿಕ ಮೂಲವನ್ನಾಗಲಿ ಅಥವಾ ಮಾನ್ಯತೆಯನ್ನಾಗಲಿ ಪಡೆದಿಲ್ಲ. ಜೀಸಸ್‌ರ ಕಾಲಾನಂತರ ಹಲವಾರು ವರ್ಷಗಳ ಅವಧಿಯಲ್ಲಿ ಅವರ ಧರ್ಮಕ್ಕೆ ಕ್ರಿಶ್ಚಿಯನ್ ಎಂಬ ಹೆಸರನ್ನು ನೀಡಲಾಯಿತು.
ಹಾಗಾದರೆ, ವಾಸ್ತವದಲ್ಲಿ, ಈ ಹೆಸರಿಗೆ ವ್ಯತಿರಿಕ್ತವಾದ ಜೀಸಸ್‌ರ ಧರ್ಮವಾದರೂ ಯಾವುದು?(1) ದೇವರೊಂದಿಗಿನ ಮಾನವನ ಸಂಬಂಧವನ್ನು ವಿವರಿಸುವಲ್ಲಿ ಅವರು ತಮ್ಮ ಅನುಯಾಯಿಗಳಿಗೆ, ಮಾರ್ಗದರ್ಶಿಯಾಗಿ ಸ್ವೀಕರಿಸಿಕೊಳ್ಳಲು ನಿರ್ದೇಶಿಸಿದ ಅವರ ಶಿಕ್ಷಷವೇ ಅವರ ಧರ್ಮವನ್ನು ಬಿಂಬಿಸುತ್ತದೆ.
ಇಸ್ಲಾಮಿನ ಪ್ರಮಾಣ ಗ್ರಂಥಗಳಲ್ಲಿ, ಜೀಸಸ್ ಅಲ್ಲಾಹನಿಂದ ಕಳುಹಿಸಲ್ಪಟ್ಟ ಓರ್ವ ಸಂದೇಶವಾಹಕರಾಗಿರುತ್ತಾರೆ ಮತ್ತು ಅವರ ಹೆಸರು ‘ಈಸಾ’ ಎಂದಾಗಿರುತ್ತದೆ.
ಹಿಂದಿನ ಪ್ರವಾದಿಗಳಂತೆಯೇ, ಇವರೂ ಕೂಡ ಜನರನ್ನು ದೇವರ ಇಚ್ಛೆಗೆ ಶರಣಾಗಲು ಆಹ್ವಾನವಿತ್ತರು (ಅದನ್ನೇ ಇಸ್ಲಾಂ ಎಂದು ಹೆಸರಿಸಬಹುದು). ಉದಾಹರಣೆಗೆ, ಬೈಬಲ್‌ನ ಹೊಸ ಒಡಂಬಡಿಕೆಯಲ್ಲಿ ಜೀಸಸ್ ತಮ್ಮ ಅನುಯಾಯಿಗಳಿಗೆ ದೇವರನ್ನು ಈ ರೀತಿ ಪ್ರಾರ್ಥಿಸುವಂತೆ ಕಲಿಸುತ್ತಾರೆ:
“ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ, ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ.” [ ಲೂಕ 11:2 / ಮತ್ತಾಯ 6:9-10]
ಬೈಬಲ್‌ನಲ್ಲಿ (Gospel) ವರದಿಯಾಗಿರುವ ಜೀಸಸ್‌ರ ಅನೇಕ ಹೇಳಿಕೆಗಳಲ್ಲಿ ಅವರು ಈ ವಿಚಾರಕ್ಕಾಗಿಯೇ ಹೆಚ್ಚಿನ ಮಹತ್ವ ನೀಡಿರುವರು. ಉದಾಹರಣೆಗೆ, ತಮ್ಮನ್ನು ಶರಣಾಗತಗೊಳಿಸುವವರಿಗೆ ಮಾತ್ರ ಸ್ವರ್ಗದಲ್ಲಿ ಸ್ಥಾನ ಎಂದು ಅವರು ಉಒದೇಶಿಸುತ್ತಿದ್ದರು. ಅಷ್ಟೇ ಅಲ್ಲ, ಜೀಸಸ್ – ತಾವು ಕೂಡ ಅಲ್ಲಾಹನ ಆಶಯಗಳಿಗೆ ಶರಣಾಗಿರುವುದಾಗಿ ಸೂಚಿಸಿರುವರು.
“ನನ್ನನ್ನು ‘ಪ್ರಭು’, ಎಂದು ಕೂಗುವವರೆಲ್ಲರೂ ಪರಲೋಕ ರಾಜ್ಯದಲ್ಲಿ ಸೇರುವರೆಂದು ನೆನೆಸಬೇಡಿರಿ, ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕ ರಾಜ್ಯಕ್ಕೆ ಸೇರುವನು.” [ಮತ್ತಾಯ 7:21]
“ನನ್ನಷ್ಟಕ್ಕೇ ನಾನೇ ಏನನ್ನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯ ತೀರಿಸುತ್ತೇನೆ ಮತ್ತು ಸ್ವಂತ ಇತ್ತ ನೆರವೇರಬೇಕೆಂದು ಅಪೇಕ್ಷಿಸದೇ, ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವುದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.” [ಯೋಹಾನ 5:30]
ಬೈಬಲ್‌ನ (Gospel) ಇನ್ನೂ ಅನೇಕ ವರದಿಗಳು ಜೀಸಸ್ ತಮ್ಮ ಅನುಯಾಯಿಗಳಿಗೆ ತಾವು ಆ ನೈಜ ಆರಾಧ್ಯನಲ್ಲವೆಂಬುದಾಗಿ ಸ್ಪಷ್ಟಪಡಿಸಿರುವುದನ್ನು ಸೂಚಿಸುತ್ತದೆ. ಉದಾಹರಣೆಗೆ, ಅಂತಿಮ ಕಾಲದ ಬಗ್ಗೆ ಮಾತನಾಡುವಾಗ, ಜೀಸಸ್ ಈ ರೀತಿ ಹೇಳುತ್ತಾರೆ:
“ಆ ದಿನದ ವಿಷಯವಾಗಲಿ, ಆ ಘಳಿಗೆಯ ವಿಷಯವಾಗಲಿ ನನ್ನ ತಂದೆಗೆ ತಿಳಿಯುವುದೇ ಹೊರತು ಮತ್ತಾರಿಗೂ ತಿಳಿಯದು. ಪರಲೋಕದಲ್ಲಿರುವ ದೂತರಿಗೂ ತಿಳಿಯದು. ಮಗನಿಗೂ ತಿಳಿಯದು.” [ಮಾರ್ಕ 13:32]
ಹೀಗೆ, ಈ ಮುಂಚಿನ ಪ್ರವಾದಿಗಳಂತೆಯೇ, ಜೀಸಸ್ ಮತ್ತು ಅವರ ನಂತರ ಬಂದ ಪ್ರವಾದಿಯೂ ಕಲಿಸಿರುವ ಧರ್ಮ, ಇಸ್ಲಾಂ: ಅಲ್ಲಾಹನ ಇಚ್ಛೆಗೆ ಶರಣಾಗುವುದಾಗಿರುತ್ತದೆ.
ದೇವರು ಮತ್ತು ಸೃಷ್ಟಿ
ವ್ಯಕ್ತಿಯು ತನ್ನ ಆಶಯಗಳನ್ನು ಸಂಪೂರ್ಣವಾಗಿ ದೇವರಿಗೆ ಶರಣಾಗಿಸುವ ಕಾರ್ಯವು ಆರಾಧನೆಯ ಸತ್ವವನ್ನು ನಿದರ್ಶಿಸುತ್ತದೆ. ದೇವರ ದಿವ್ಯಧರ್ಮವಾದ ಇಸ್ಲಾಂನ ಮೂಲ ಸಂದೇಶ-ಆ ಏಕೈಕ ಆರಾಧ್ಯನನ್ನು ಮಾತ್ರ ಆರಾಧಿಸುವುದಾಗಿರುತ್ತದೆ. ಅಷ್ಟೇ ಅಲ್ಲದೆ, ದೇವರ ಹೊರತು ಯಾವುದೇ ವ್ಯಕ್ತಿ, ಸ್ಥಳ ಅಥವಾ ವಸ್ತುವಿಗೆ ಮೀಸಲಾಗಿಟ್ಟ ಆರಾಧನೆಯನ್ನು ತ್ಯಜಿಸುವುದೂ ಧರ್ಮದ ಬೇಡಿಕೆಯಾಗಿದೆ. ಏಕೆಂದರೆ ದೇವರ ಹೊರತು ಇನ್ನಾವುದನ್ನೆಲ್ಲಾ ‘ಸಕಲ ವಸ್ತುಗಳ ಸೃಷ್ಟಿಕರ್ತ’ ಎಂದು ಭಾವಿಸಲಾಗಿದೆಯೋ ಅವೆಲ್ಲವೂ ಸ್ವಯಂ ದೇವರ ಸೃಷ್ಟಿಯಾಗಿರುವುವು. ಮೂಲತಃ ಇಸ್ಲಾಂ ಮಾನವನನ್ನು ಸೃಷ್ಟಿಯ ಆರಾಧನೆಯಿಂದ ದೂರ ಸರಿಸಿ ಸೃಷ್ಟಿಕರ್ತನ ಆರಾಧನೆಯೆಡೆಗೆ ಆಹ್ವಾನಿಸುತ್ತದೆ. ಆ ಏಕದೇವನು ಮಾತ್ರ ಮಾನವನ ಆರಾಧನೆಗೆ ಅರ್ಹನು. ಏಕೆಂದರೆ, ಕೇವಲ ಅವನಿಂದಲೇ ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡುವುವು.
ಅಂತೆಯೇ ಒಬ್ಬ ವ್ಯಕ್ತಿಯು ಮರವನ್ನು ಆರಾಧಿಸಿ, ಅವನ ಪ್ರಾರ್ಥನೆಗಳು ಉತ್ತರಿಸಲ್ಪಟ್ಟಲ್ಲಿ, ಆ ಪ್ರಾರ್ಥನೆಗಳಿಗೆ ಉತ್ತರಿಸಿದ್ದು ಆ ಮರವಲ್ಲ. ಬದಲಾಗಿ ಆರಾಧಿಸಲು ಇಂಥ ಸಂದರ್ಭ-ಸನ್ನಿವೇಶಗಳನ್ನು ಅನುಮತಿಸಿದ ಆ ದೇವನೇ ಉತ್ತರಿಸುತ್ತಾನೆ. “ಅದು ಸ್ವಾಭಾವಿಕ ತಾನೇ!” ಎಂದು ಕೆಲವರು ಉದ್ಗರಿಸಬಹುದು. ಆದರೆ ಆ ಮರವನ್ನು ಆರಾಧಿಸುವವನಿಗೆ ಇದು ಹಾಗಾಗಿರಲಾರದು.
ಅದೇ ರೀತಿ ನಮ್ಮ ಪ್ರಾರ್ಥನೆಗಳನ್ನು ಜೀಸಸ್‌ರಿಗಾಗಲಿ, ಬುದ್ಧರಿಗಾಗಲಿ ಅಥವಾ ಕೃಷ್ಣ, ಸಂತ ಕ್ರಿಸ್ಟೋಫರ್ ಅಥವಾ ಸಂತ ಜ್ಯೂಡ್‌ರಿಗಾಗಲಿ ಅಥವಾ ಅದು ಮುಹಮ್ಮದ್‌ರಿಗೇ ಆಗಲಿ ಸಲ್ಲಿಸಿದಾಗ ಅದಕ್ಕೆ ಉತ್ತರಿಸುವವನು ಆ ಏಕಮಾತ್ರ ಆರಾಧ್ಯದೈವನೇ ಹೊರತು ಈ ವ್ಯಕ್ತಿಗಳಲ್ಲ. ಜೀಸಸ್ ಎಂದಿಗೂ ತಮ್ಮ ಅನುಯಾಯಿಗಳಿಗೆ ತಮ್ಮನ್ನು ಆರಾಧಿಸಲು ಆಗ್ರಹಿಸಿಲ್ಲ, ಬದಲಾಗಿ ಆ ಏಕೈಕ ಆರಾಧ್ಯನ ಆರಾಧನೆಯೆಡೆಗೆ ಆಹ್ವಾನಿಸಿದ್ದರು. ಅದನ್ನೇ ‘ಖುರ್‌ಆನ್’ ದೃಢಿಕರಿಸುತ್ತದೆ.
ಅಲ್ಲಾಹನು , “ಓ ಮರ್ಯಮ್‌ರ ಪುತ್ರ ಈಸಾ, ಅಲ್ಲಾಹನ ಹೊರತು ನನ್ನನ್ನೂ ನನ್ನ ಮಾತೆಯನ್ನೂ ದೇವರನ್ನಾಗಿ ಮಾಡಿಕೊಳ್ಳಿರೆಂದು ನೀವು ಜನರೊಡನೆ ಹೇಳಿದ್ದೀರಾ ?” ಎಂದು ಕೇಳುವಾಗ ಅವರು (ಜೀಸಸ್) ಉತ್ತರಿಸುವರು : “ನೀನು ಪರಮಪಾವನನು, ನನಗೆ ಹೇಳಲು ಹಕ್ಕಿಲ್ಲದಂತಹ ಮಾತನ್ನು ಹೇಳುವ ಕಾರ್ಯ ನನ್ನದಾಗಿರಲಿಲ್ಲ.” [ಸೂರಃ ಮಾಇದಃ 5:116]
ಅಷ್ಟೇ ಅಲ್ಲ, ಜೀಸಸ್ ಕೂಡ ಆರಾಧಿಸುವಾಗ ಸ್ವತಃ ತನ್ನನ್ನೇ ಆರಾಧಿಸುತ್ತಿರಲಿಲ್ಲ. ಬದಲಾಗಿ, ಅವರು ಆ ಏಕೈಕ ನೈಜ ಆರಾಧ್ಯನನ್ನೇ ಆರಾಧಿಸುತ್ತಿದ್ದರು. ಬೈಬಲ್‌ನಲ್ಲಿ ಉಲ್ಲೇಖಿಸಿರುವಂತೆ ಜೀಸಸ್ ಹೇಳುತ್ತಾರೆ :
“ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬುದಾಗಿ ಬರೆದಿದೆ.” [ಲೂಕ 4:8]
ಈ ಮೂಲ ತತ್ವವನ್ನೇ ‘ ಖುರ್‌ಆನ್’ನ ಆರಂಭಿಕ ಅಧ್ಯಾಯವು ಒಳಗೊಂಡಿರುತ್ತದೆ. ಅದುವೇ ಸೂರಃ ಫಾತಿಹಾ ಅಧ್ಯಾಯ 1ರ ಸೂಕ್ತ 5.
“ನಾವು ನಿನ್ನೋರ್ವನನ್ನೇ ಆರಾಧಿಸುತ್ತೇವೆ ಮತ್ತು ನಿನ್ನೋರ್ವನಿಂದಲೇ ಸಹಾಯವನ್ನು ಯಾಚಿಸುತ್ತೇವೆ.”
ಇನ್ನೊಂದೆಡೆ, ಅಂತಿಮವಾಗಿ ಅವತೀರ್ಣಗೊಂಡಿರುವ ಗ್ರಂಥ ‘ ಖುರ್‌ಆನ್ ‘ನಲ್ಲಿ ದೇವರು ಈ ರೀತಿ ಹೇಳಿರುವನು :
ನಿಮ್ಮ ಪ್ರಭು ಹೀಗೆ ಹೇಳುತ್ತಾನೆ – “ನನ್ನನ್ನು ಪ್ರಾರ್ಥಿಸಿರಿ, ನಾನು ನಿಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸುವೆನು'”. [ ಸೂರಃ ಘಾಫಿರ್ 40:60]
ಇಸ್ಲಾಂನ (ಏಕೈಕ ನೈಜ ಆರಾಧ್ಯದೈವನ ಆರಾಧನೆಯನ್ನು ಮಾತ್ರ ಸೂಚಿಸುವ ಧರ್ಮದ ) ಮೂಲ ಸಂದೇಶವು, ದೇವರು ಮತ್ತು ಸೃಷ್ಟಿಯನ್ನು ಸಂಪೂರ್ಣವಾಗಿ ಪ್ರತ್ಯೇಕಗೊಳಿಸುತ್ತಿರುವುದು ನಿಜಕ್ಕೂ ಗಮನಾರ್ಹ ವಿಷಯ. ಸೃಷ್ಟಿಕರ್ತನು ಆತನ ಸೃಷ್ಟಿಗೆ ಸಮಾನವೂ ಅಲ್ಲ, ಅಥವಾ ಸೃಷ್ಟಿಯ ಒಂದು ಭಾಗವೂ ಅಲ್ಲ. ಅದೇ ರೀತಿ ಸೃಷ್ಟಿಯು ದೇವರಿಗೆ ಸಮಾನವೂ ಅಲ್ಲ ಅಥವಾ ದೈವಾಂಶದ ಒಂದು ಭಾಗವೂ ಅಲ್ಲ. ಇದು ಸಹಜವೆಂದನಿಸಬಹುದಾದರೂ, ಇಂದು ಅನೇಕ ಜನರು ಈ ಸಿದ್ದಾಂತದ ಅರಿವಿಲ್ಲದೆಯೇ ಅಥವಾ ಅಲಕ್ಷ್ಯತನದಿಂದ ಸೃಷ್ಟಿಕರ್ತನ ಬದಲಾಗಿ ಸೃಷ್ಟಿಯ ಆರಾಧನೆಯಲ್ಲಿ ತೊಡಗಿರುವರು.
ಹೀಗೊಂದು ನಂಬಿಕೆ ಇದೆ, – ದೇವರ ಅಸ್ತಿತ್ವವು ಸೃಷ್ಟಿಯ ಎಲ್ಲೆಡೆಯೂ ಹರಡಿಕೊಂಡಿದೆ, ಅಥವಾ ದೇವರ ದೈವಿಕಶಕ್ತಿಯು ಇಲ್ಲವೇ ಸ್ವತಃ ದೇವರೇ ಆತನ ಸೃಷ್ಟಿಯ ಕೆಲವು ಭಾಗಗಳಲ್ಲಿ ಉಪಸ್ಥಿತನಿರುವನು / ಉಪಸ್ಥಿತನಿದ್ದನು ಎಂದು. ಅವರ ಈ ನಂಬಿಕೆಯು, ಸೃಷ್ಟಿಯ ಆರಾಧನೆಗೆ ಸಮರ್ಥನೆಯನ್ನು ನೀಡುತ್ತದೆ ಮತ್ತು ಅದನ್ನೇ ದೇವರ ಆರಾಧನೆ ಎಂದು ಹೆಸರಿಸಲಾಗುತ್ತದೆ. ಆದರೆ ದೇವಸಂದೇಶವಾಹಕರು ತಂದ ಇಸ್ಲಾಮಿನ ಸಂದೇಶ ಕೇವಲ ನೈಜ ಆರಾಧ್ಯನನ್ನು ಮಾತ್ರ ಆರಾಧಿಸುವುದಾಗಿದೆ ಮತ್ತು ನೇರವಾಗಿಯೋ, ಪರೋಕ್ಷವಾಗಿಯೋ ಆತನ ಸೃಷ್ಟಿಯ ಆರಾಧನೆಯಿಂದ ದೂರವಿರುವುದಾಗಿದೆ. ಖುರ್‌ಆನ್‌ನಲ್ಲಿ ದೇವರು ಸ್ಪಷ್ಟವಾಗಿ ಉಲ್ಲೇಖಿಸುತ್ತಾನೆ.
“ನಾವು ಪ್ರತಿಯೊಂದು ಸಮುದಾಯದಲ್ಲಿ ಓರ್ವ ಸಂದೇಶವಾಹಕನನ್ನು ಕಳುಹಿಸಿದೆವು, ‘ಅಲ್ಲಾಹನ ಆರಾಧನೆ ಮಾಡಿರಿ ಮತ್ತು ತಾಘೂತ್‌ನ (ಮಿಥ್ಯ ಆರಾಧ್ಯರ ) ಆರಾಧನೆಯಿಂದ ದೂರವಿರಿ’ ಎಂಬ ಆದೇಶದೊಂದಿಗೆ.” [ಸೂರಃ ಅನ್ನಹ್ಲ್ 16:36]
‘ನೀವು ಮಾನವರಿಂದ ನಿರ್ಮಿಸಲ್ಪಟ್ಟ ವಿಗ್ರಹಗಳಿಗೆ ತಲೆಬಾಗುವುದೇಕೆ?’ ಎಂದು ವಿಗ್ರಹಾರಾಧಕರನ್ನು ಪ್ರಶ್ನಿಸಲಾದಾಗ, ಹೆಚ್ಚುಕಡಿಮೆ ಏಕಪ್ರಕಾರವಾಗಿ ಬರುವ ಉತ್ತರ ‘ನಾವು ವಾಸ್ತವದಲ್ಲಿ ಈ ಕಲ್ಲಿನ ಮೂರ್ತಿಯನ್ನು ಆರಾಧಿಸುತ್ತಿಲ್ಲ. ಆದರೆ ಅದರೊಳಗಿರುವ ದೇವರನ್ನು ಆರಾಧಿಸುತ್ತಿದ್ದೇವೆ’ ಎಂದಾಗಿರುವುದು. ಅವರು, ಈ ಕಲ್ಲಿನ ವಿಗ್ರಹಗಳು ಸ್ವತಃ ದೇವರಾಗಿರದೇ, ದೈವಾಂಶದ ಕೇಂದ್ರ ಬಿಂದು ! ಆಗಿರುವುದೆಂದೂ ಪ್ರತಿಪಾದಿಸುತ್ತಾರೆ. “ದೇವರು ಯಾವುದೇ ರೀತಿಯಲ್ಲಿ ಆತನ ಸೃಷ್ಟಿಯಲ್ಲಿ ಉಪಸ್ಥಿತನಿರುವನು” ಎಂಬ ತರ್ಕವನ್ನು ಸ್ವೀಕರಿಸುವ ವ್ಯಕ್ತಿಯು ತನ್ನ ವಾದವು ವಿಗ್ರಹಾರಾಧನೆಯೇ ಆಗಿರುವುದು ಎಂಬುದನ್ನು ಸ್ವೀಕರಿಸಬೇಕಾಗುವುದು. ಆದರೆ, ಇಸ್ಲಾಂನ ಮೂಲ ಸಂದೇಶವನ್ನು ಮತ್ತು ಅದರ ಹಕ್ಕುಗಳನ್ನು ಅರ್ಥೈಸಿಕೊಂಡವನು, ವಿಗ್ರಹಾರಾಧನೆಯನ್ನು ಎಷ್ಟೇ ಸಬೂಬುಗಳನ್ನೊಡ್ಡಿದರೂ ಸ್ವೀಕರಿಸಲಾರನು.
ಪುರಾತನ ಕಾಲದಿಂದಲೂ ಆಗಾಗ್ಗೆ ದೈವಾಂಶಸಂಭೂತಿ ಪ್ರಕ್ರಿಯೆಯನ್ನು ಮಂಡಿಸುವ ವ್ಯಕ್ತಿಗಳ ವಾದವು, ‘ದೇವರು ಮಾನವನಲ್ಲಿ ಉಪಸ್ಥಿತನಿರುವನು’ ಎಂಬ ಅಪನಂಬಿಕೆಯನ್ನಾಧರಿಸಿದೆ. ಇನ್ನೂ ಮುಂದುವರಿದು, ನಮ್ಮೆಲ್ಲರಿಗಿಂತಲೂ ದೇವರು ಅವರಲ್ಲಿ ಅಧಿಕವಾಗಿ ಉಪಸ್ಥಿತನಿರುವನು ಎಂದೂ ಮತ್ತು ಇತರೆಲ್ಲರೂ ಆತನ ಮುಂದೆ ಶರಣಾಗಬೇಕು ಮತ್ತು ಆತನನ್ನು ದೇವರೆಂದೂ ಅಥವಾ ದೇವರು ವ್ಯಕ್ತಿಯಲ್ಲಿ ಕೇಂದ್ರೀಕೃತವಾಗಿರುವನೆಂದೂ ಭಾವಿಸಿ ಆರಾಧಿಸಿಬೇಕೆಂದು ಪ್ರತಿಪಾದಿಸುತ್ತಾರೆ. ಅಂತೆಯೇ, ಇತೃ ದೈವಿಕ ಪ್ರಭುತ್ವವನ್ನು ಕೊಂಡಾಡುತ್ತಿದ್ದ ವ್ಯಕ್ತಿಗಳ ಅವರ ಮರಣಾನಂತರ, ದೇವರು ಮಾನವನಲ್ಲಿ ಉಪಸ್ಥಿತನಿರುವನೆಂಬ ಮಿಥ್ಯನಂಬಿಕೆಗಳನ್ನು ಕೂಡಿಟ್ಟ ಇತರರೊಂದಿಗೆ ಮಣ್ಣಾಗಿ ಹೋದರು.
ಈಗಾಗಲೇ ಒಂದು ವಿಷಯವಂತೂ ಸಂಪೂರ್ಣವಾಗಿ ಸ್ಪಷ್ಟವಾಗಿರಬೇಕು. ಅದೇನೆಂದರೆ, ಇಸ್ಲಾಮಿನ ಮೂಲ ಸಂದೇಶವನ್ನು ಮತ್ತು ಅದರ ಹಕ್ಕುಗಳನ್ನು ಅರ್ಥೈಸಿಕೊಂಡಿರುವವನು ಯಾವುದೇ ಪರಿಸ್ಥಿತಿಯಲ್ಲಾದರೂ ಮಾನವಾರಾಧನೆಯನ್ನು ಮಾತ್ರ ಸಮ್ಮತಿಸಲಾರನು. ದೇವರ ಧರ್ಮವು ಮೂಲತಃ ಸೃಷ್ಟಿಕರ್ತನ ಆರಾಧನೆಯೆಡೆಗಿನ ಸ್ಪಷ್ಟ ಆಹ್ವಾನವಾಗಿದೆ ಮತ್ತು ಸಕಲ ರೀತಯಿಂದಲೂ ಸೃಷ್ಟಿಯ ಆರಾಧನೆಯನ್ನು ಸಂಪೂರ್ಣವಾಗಿ ತ್ಯಜಿಸುವುದಾಗಿರುತ್ತದೆ. ಇದುವೇ ಇಸ್ಲಾಮಿನ ಮೂಲ ಸಿದ್ಧಾಂತದ ಅರ್ಥವಾಗಿದೆ,
“ಲಾ ಇಲಾಹ ಇಲ್ಲಲ್ಲಾಹ್” [ಅಲ್ಲಾಹನ ಹೊರತು (ಆರಾಧನಾಯೋಗ್ಯ) ಆರಾಧ್ಯನಾರೂ ಇಲ್ಲ]
ಈ ಧ್ಯೇಯವಾಕ್ಯದ ಪ್ರಾಮಾಣಿಕ ದೃಢೀಕರಣ ಮತ್ತು ಪ್ರವಾದಿತ್ವದ ಸ್ವೀಕಾರ ಸ್ವಾಭಾವಿಕವಾಗಿಯೇ ಒಬ್ಬ ವ್ಯಕ್ತಿಯನ್ನು ಇಸ್ಲಾಮಿನ ಮೇರೆಯೊಳಗೆ ಕರೆತರುವುದು ಮತ್ತು ಇದರಲ್ಲಿ ನಿಷ್ಕಪಟ ಸತ್ಯವಿಶ್ವಾಸವು ಆತನಿಗೆ ಸ್ವರ್ಗವನ್ನು ಖಾತರಿಯಾಗಿಸುವುದು. ಆದ್ದರಿಂದಲೇ ಇಸ್ಲಾಮಿನ ಸಂದೇಶವಾಹಕರು (ಅವರ ಮೇಲೆ ಶಾಂತಿ ಇರಲಿ) ಈ ರೀತಿ ಹೇಳಿರುವುದಾಗಿ ವರದಿಯಾಗಿದೆ,
“ಯಾರು ‘ಲಾ ಇಲಾಹ ಇಲ್ಲಲ್ಲಾಹ್’ [ಅಲ್ಲಾಹನ ಹೊರತು (ಆರಾಧನಾ ಯೋಗ್ಯ) ಆರಾಧ್ಯನಾರೂ ಇಲ್ಲ] ಎಂದು ಉಚ್ಛರಿಸುವರೋ ಮತ್ತು ಆ ವಿಶ್ವಾಸದೊಂದಿಗೆ ಮರಣ ಹೊಂದುವರೋ ಅವರು ಸ್ವರ್ಗವನ್ನು ಪ್ರವೇಶಿಸುವರು.”(2)
ಈ ‘ಸಾಕ್ಷ್ಯವಚನ’ದ ಮೇಲೆ ಸಂಪೂರ್ಣ ವಿಶ್ವಾಸವಿರಿಸುವುದರ ಅರ್ಥವೇನೆಂದರೆ, ದೇವರ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ಕಲಿಸಿಕೊಟ್ಟಂತೆ ತನ್ನನ್ನು ದೇವರಿಗೆ ಶರಣಾಗಿಸುವುದು. ಅಷ್ಟೇ ಅಲ್ಲದೆ, ಸತ್ಯವಿಶ್ವಾಸಿಯು ಮಿಥ್ಯ ಆರಾಧ್ಯರ ಆರಾಧನೆಯನ್ನೆಲ್ಲಾ ತ್ಯಜಿಸಬೇಕಾದುದೂ ಇದರ ಬೇಡಿಕೆಯಾಗಿದೆ.
ಮಿಥ್ಯ ಧರ್ಮಗಳ ಸಂದೇಶ
ಇಂದು ಜಗತ್ತಿನಲ್ಲಿ ಅನೇಕ ಜಾತಿ, ಧರ್ಮ, ಪಂಗಡ, ಸಂಸ್ಕೃತಿ ಮತ್ತು ಸಿದ್ಧಾಂತಗಳು ಅಸ್ತಿತ್ವದಲ್ಲಿದ್ದು, ಎಲ್ಲವೂ ತಾವು ಸತ್ಪಥದಲ್ಲಿರುವುದಾಗಿ ಅಥವಾ ತಾವು ಮಾತ್ರವೇ ಸತ್ಪಥದಲ್ಲಿರುವುದಾಗಿ ಪ್ರತಿಪಾದಿಸುತ್ತವೆ. ಹಾಗಿದ್ದಲ್ಲಿ, ‘ಯಾವುದು ಸತ್ಪಥ’ ಎಂದು ನಿರ್ಧರಿಸುವುದಾದರೂ ಹೇಗೆ? ಅಥವಾ ವಾಸ್ತವದಲ್ಲಿ, ‘ಎಲ್ಲವೂ ಸರಿಯೇ?’ ಉತ್ತರವನ್ನು ಕಂಡುಕೊಳ್ಳಲು ಒಂದು ಮಾರ್ಗವೆಂದರೆ, ಅಂತಿಮ ಸತ್ಯದ ಕುರಿತು ಪ್ರತಿಪಾದಿಸುವ ವಿವಿಧ ಸಂಘಟನೆಗಳ ಶಿಕ್ಷಣದಲ್ಲಿ, ಸ್ಪಷ್ಟವಾಗಿ ಗೋಚರಿಸುವ ವ್ಯತ್ಯಾಸಗಳನ್ನು ನಿರ್ಮಲಗೊಳಿಸುವುದು. ಮತ್ತು ಅವರು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಆರಾಧನೆಯಲ್ಲಿ ಯಾರನ್ನು ಕೂಗಿ ಕರೆಯುತ್ತಾರೆ? ಎಂಬುದನ್ನು ಪರೀಕ್ಷಿಸುವುದು. ಎಲ್ಲ ಮಿಥ್ಯಧರ್ಮಗಳಲ್ಲಿಯೂ ದೇವರ ಕುರಿತು ಇರುವ ಒಂದು ಸರ್ವೇಸಾಮಾನ್ಯ ಪರಿಕಲ್ಪನೆಯೆಂದರೆ – ಅವರು ಒಂದೋ, ‘ಎಲ್ಲ ಮಾನವರೂ ದೇವರು’ ಎಂದು ವಾದಿಸುವರು, ಇಲ್ಲವೇ ‘ನಿರ್ದಿಷ್ಟ ವ್ಯಕ್ತಿಗಳು ಮಾತ್ರ ದೇವರು’ ಎಂದು ಹೇಳುವರು, ಅಥವಾ ‘ನಿಸರ್ಗವೇ ದೇವರು’ ಎಂದು ಅಥವಾ ‘ದೇವರು’ ಎಂಬುದು ಕೇವಲ ಮಾನವನ ಕಲ್ಪನಾಲೋಕದ ಒಂದು ಕಟ್ಟುಕತೆಯಾಗಿದೆ’ ಎಂದು ವಾದಿಸುವರು.
ಆದ್ದರಿಂದ, ಮಿಥ್ಯಧರ್ಮಗಳ ಮೂಲಸಂದೇಶವು ‘ದೇವನನ್ನು ಆತನ ಸೃಷ್ಟಿಯ ರೂಪದಲ್ಲಿಯೇ ಆರಾಧಿಸಬಹುದು’ ಎಂದಾಗಿರಲು ಸಾಧ್ಯ. ಮಿಥ್ಯಧರ್ಮಗಳ ‘ಸೃಷ್ಟಿಯನ್ನೇ ಅಥವಾ ಸೃಷ್ಟಿಯ ಕೆಲವು ಅಂಶಗಳನ್ನೇ ದೆವರು’ ಎಂದು ಕರೆಯುವ ಮೂಲಕ ಅವುಗಳ ಆರಾಧನೆಯೆಡೆಗೆ ಜನರನ್ನು ಆಹ್ವಾನಿಸುತ್ತವೆ.
ಉದಾ: ಪ್ರವಾದಿ ಜೀಸಸ್(ಏಸು) ತಮ್ಮ ಅನುಯಾಯಿಗಳನ್ನು ದೇವರ ಆರಾಧನೆಯೆಡೆಗೆ ಆಹ್ವಾನಿಸಿದರು. ಆದರೆ, ‘ಅವರ ಅನುಯಾಯಿಗಳು’ ಎಂದು ಕರೆಸಿಕೊಳ್ಳುತ್ತಿರುವವರು ಇಂದು ‘ಜೀಸಸ್‌ರೇ ದೇವರು’ ಎಂದು ವಾದಿಸುತ್ತ ಜನರನ್ನು ಅವರ ಆರಾಧನೆಯೆಡೆಗೆ ಆಹ್ವಾನಿಸುತ್ತಿರುವರು. ಬುದ್ಧ, ಒಬ್ಬ ಸಮಾಜ ಸುಧಾರಕರಾಗಿದ್ದು ಭಾರತದ ಧರ್ಮಗಳಲ್ಲಿ ಅನೇಕ ಮಾನವೀಯತೆಯ ತತ್ವಗಳನ್ನು ಪರಿಚಯಿಸಿದರು. ತಾವು ದೇವರಾಗಿರುವುದಾಗಿ ಅವರು ಎಂದೂ ವಾದಿಸಿಲ್ಲ. ಅಲ್ಲದೇ , ತಮ್ಮ ಅನುಯಾಯಿಗಳಿಗೂ ಅವರು ತಮ್ಮನ್ನು ಆರಾಧನೆಯ ವಸ್ತುವನ್ನಾಗಿ ಮಾಡಿಕೊಳ್ಳುವಂತೆ ಎಂದಿಗೂ ಸೂಚಿಸಿಲ್ಲ. ಆದಾಗ್ಯೂ ಇಂದು ಹೊರದೇಶಗಳಲ್ಲಿರುವ ಬೌದ್ಧರು ಬುದ್ಧರನ್ನೇ ದೇವರನ್ನಾಗಿ ಸ್ವೀಕರಿಸಿರುವರು ಮತ್ತು ತಮ್ಮ ಕಲ್ಪನೆಗಳಿಗನುಸಾರ ಬುದ್ಧರ ಪ್ರತಿಕೃತಿಯನ್ನು ನಿರ್ಮಿಸಿ ಅದಕ್ಕೆ ತಲೆಬಾಗುವರು.
ಹೀಗೆ ಅವರ ಆರಾಧನೆಯ ಕೇಂದ್ರ ವಸ್ತುವನ್ನು ಕಂಡು ಹಿಡಿಯುವ ಮೂಲಕ ಮಿಥ್ಯ ಧರ್ಮಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಆ ಧರ್ಮದ ಮೂಲ ಸ್ವಭಾವವನ್ನರಿಯಬಹುದು. ದೇವರು ‘ಖುರ್‌ಆನ್’ನಲ್ಲಿ ಹೇಳುತ್ತಾನೆ :
“ಅವನನ್ನು ಬಿಟ್ಟು ನೀವು ಯಾರ ಆರಾಧನೆ ಮಾಡುತ್ತಿರುವಿರೋ ಅವರೆಲ್ಲಾ ನೀವೂ ಮತ್ತು ಪೂರ್ವಿಕರೂ ಇರಿಸಿಕೊಂಡಿರುವ ಕೆಲವು ಹೆಸರುಗಳ ವಿನಾ ಇನ್ನೇನೂ ಅಲ್ಲ. ಅಲ್ಲಾಹನು ಅವುಗಳ ಬಗ್ಗೆ ಯಾವ ಪ್ರಮಾಣವನ್ನು ಇಳಿಸಿರುವುದಿಲ್ಲ. ಆಜ್ಞಾಧಿಕಾರವು ಅಲ್ಲಾಹನಿಗೇ ಹೊರತು ಇನ್ನಾರುಗೂ ಇಲ. ಅವನ ಹೊರತು ನೀವು ಇನ್ನಾರ ಆರಾಧನೆಯನ್ನೂ ಮಾಡಬಾರದೆಂದು ಅವನ ಕಟ್ಟಪ್ಪಣೆ ಇದೆ. ಇದೇ ಅಪ್ಪಟ ಋಜು ಜೀವನಮಾರ್ಗ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.” ( ಸೂರಃ ಯೂಸುಫ್ 12:40)
‘ಎಲ್ಲ ಧರ್ಮಗಳೂ ಒಳಿತನ್ನೇ ಕಲಿಸಿರುತ್ತವೆ, ಹಾಗಿರುವಾಗ ನಾವು ಯಾವುದನ್ನೇ ಅನುಸರಿಸಿದರೂ ಏನು ವ್ಯತ್ಯಾಸವಾಗುತ್ತದೆ?’ ಎಂದು ಕೆಲವರು ವಾದಿಸಬಹುದು. ಅದಕ್ಕೆ ಉತ್ತರ, ಎಲ್ಲ ಮಿಥ್ಯಧರ್ಮಗಳೂ ಒಂದು ಮಹಾಪಾಪ – ಸೃಷ್ಟಿಯ ಆರಾಧನೆಯನ್ನು ಕಲಿಸುತ್ತವೆ. ಮಾನವನಿಂದಾಗುವ ಪಾಪಕಾರ್ಯಗಳಲ್ಲಿ ಸೃಷ್ಟಿಯ ಆರಾಧನೆಯು ಒಂದು ಮಹಾಪಾಪವಾಗಿರುವುದು. ಏಕೆಂದರೆ ಅದು ಮಾನವನು ದೇವರ ಆರಾಧನೆಗೆಂದೇ ಸೃಷ್ಟಿಸಲ್ಪಟ್ಟಿರುವನು. ಅಲ್ಲಾಹನು ‘ಖುರ್‌ಆನ್’ನಲ್ಲಿ ಸ್ಪಷ್ಟವಾಗಿ ನುಡಿಯುತ್ತಾನೆ.
“ನಾನು ಯಕ್ಷಗಳನ್ನೂ ಮಾನವರನ್ನೂ ಕೇವಲ ನನ್ನ ಆರಾಧನೆಗಾಗಿಯೇ ಹೊರತು ಸೃಷ್ಟಿಸಿಲ್ಲ.” (ಸೂರಃ ಅದ್ದಾರಿಯಾತ್ 51:56)
ಆದ್ದರಿಂದ, ವಿಗ್ರಹಾರಾಧನೆಯ ಮೂಲವಾಗಿರುವ ಈ ಸೃಷ್ಟಿಯ ಆರಾಧನೆಯು ಕ್ಷಮಿಸಲ್ಪಡದ ಏಕೈಕ ಮಹಾಪಾಪವಾಗಿರುವುದು. ವಿಗ್ರಹಾರಾಧನೆಯ ಸ್ಥಿತಿಯಲ್ಲಿ ಮರಣ ಹೊಂದುವ ವ್ಯಕ್ತಿಯು ಮರಣಾನಂತರದ ತನ್ನ ಜೀವನವನ್ನು ನಷ್ಟಕ್ಕೀಡುಮಾಡಿಕೊಳ್ಳುವನು. ಇದೊಂದು ಕೇವಲ ಅಭಿಪ್ರಾಯವಾಗಿರದೇ ಅವತರಿತ ಸತ್ಯವಾಗಿರುವುದು. ಅಲ್ಲಾಹನು ಮಾನವರೆಡೆಗೆ ಅವತೀರ್ಣಗೊಳಿಸಿರುವ ತನ್ನ ಅಂತಿಮ ಗ್ರಂಥದಲ್ಲಿ ಈ ರೀತಿ ಹೇಳುತ್ತಾನೆ :
“ಅಲ್ಲಾಹನು, ತನ್ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವುದನ್ನು ಮಾತ್ರ ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತು ಅವನು ಕ್ಷಮಿಸಲಿಚ್ಛಿಸುವ ಇತರ ಎಲ್ಲವನ್ನೂ ಕ್ಷಮಿಸುವನು.” (ಸೂರಃ ಅನ್ನಿಸಾ 4:48 ಮತ್ತು 116)
ದೇವರ ಧರ್ಮದ ಸಾರ್ವತ್ರಿಕತೆ
ಮಿಥ್ಯಧರ್ಮವನ್ನು ಅನುಸರಿಸುವ ಪರಿಣಾಮವು ತುಂಬಾ ಗಂಭೀರವಾಗಿರುವುದರಿಂದ, ದೇವರ ನೈಜ ಧರ್ಮವಾದರೋ, ಭೂತಕಾಲದಲ್ಲಿಯೂ ಅರ್ಥೈಸಿಕೊಳ್ಳುವಂತೆ ಹಾಗೂ ಸಾರ್ವತ್ರಿಕವಾಗಿ ಅನುಸರಿಸುವಂತಿರಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ದೇವರ ನೈಜಧರ್ಮವು ಯಾವುದೇ ಒಂದು ಜನಾಂಗ, ಪ್ರದೇಶ ಅಥವಾ ಕಾಲಾವಧಿಗೆ ಮಾತ್ರ ಸೀಮಿತವಾಗಿರಕೂಡದು.
ಅಷ್ಟೇ ಅಲ್ಲ, ಅಂತಹ ಧರ್ಮವು, ದೇವರ ಮತ್ತು ಮಾನವನ ನಡುವಿನ ಸಂಬಂಧದಲ್ಲಿ ಅರ್ಥವಿಲ್ಲದ ಶರತ್ತನ್ನು ವಿಧಿಸುವುದೂ ತರ್ಕಕ್ಕೆ ನಿಲುಕುವ ವಿಷಯವಲ್ಲ. ಉದಾ : ಬ್ಯಾಪ್ಟಿಸಂ (ಕ್ರೈಸ್ತರಲ್ಲಿ ಆಚರಣೆಯಲ್ಲಿರುವ ಸ್ನಾನದ ಪ್ರಕ್ರಿಯೆ) ಅಥವಾ ಮಾನವರನ್ನೇ ಸಂರಕ್ಷಕನನ್ನಾಗಿ ಅಥವಾ ಮಧ್ಯಸ್ಥಿಕೆಯ ನಿಮಿತ್ತವನ್ನಾಗಿ ನೇಮಿಸಿಕೊಳ್ಳುವುದು ಇತ್ಯಾದಿ. ಇಸ್ಲಾಂನ ಸಾರ್ವತ್ರಿಕತೆಯು ಇಸ್ಲಾಂನ ಮೂಲತತ್ವ ಮತ್ತು ಅದರ ವ್ಯಾಖ್ಯಾನದಲ್ಲೇ (ತನ್ನ ಮನಸ್ಸನ್ನು ದೇವರಿಗೆ ಶರಣಾಗಿಸುವುದು) ಅಡಗಿದೆ. ‘ದೇವರು ಏಕೈಕನಾಗಿದ್ದು, ಸೃಷ್ಟಿಗಳಿಂದ ಆತನು ಸಂಪೂರ್ಣವಾಗಿ ವಿಭಿನ್ನನಾಗಿರುವನು’, ಎಂದು ಮಾನವನು ಅರ್ಥೈಸಿಕೊಂಡ ಮತ್ತು ತನ್ನನ್ನು ಆ ಏಕೈಕ ಆರಾಧ್ಯನ ಮುಂದೆ ಶರಣಾಗತಗೊಳಿಸಿದ ಕ್ಷಣವೇ ಅವನು ಬಾಹ್ಯ ಮತ್ತು ಆಂತರಿಕವಾಗಿ ಮುಸ್ಲಿಮನಾಗುವನು ಮತ್ತು ಸ್ವರ್ಗಕ್ಕೆ ಅರ್ಹನಾಗುವನು.
ಹೀಗೆ, ಯಾವುದೇ ವ್ಯಕ್ತಿ, ಯಾವುದೇ ಕ್ಷಣ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ಕೇವಲ ಸೃಷ್ಟಿಯ ಆರಾಧನೆಯನ್ನು ತಿರಸ್ಕರಿಸುವ ಮತ್ತು ದೇವರೆಡೆಗೆ ಮರಳು ಮೂಲಕ ದೇವರ ಧರ್ಮವಾದ ಇಸ್ಲಾಂನ ಅನುಯಾಯಿಯಾಗಬಹುದು. ಅರ್ಥಾತ್ ಮುಸ್ಲಿಮನಾಗಬಹುದು. ಆದರೆ ಗಮನದಲ್ಲಿರಬೇಕಾದ ಸಂಗತಿಯೆಂದರೆ, ತನ್ನನ್ನು ಪ್ರಭುವಿನ ಇಚ್ಛೆಯಾನುಸಾರ ಶರಣಾಗತಗೊಳಿಸಲು ಆ ವ್ಯಕ್ತಿಯು ನಿರಂತರವಾಗಿ ಸರಿ ಮತ್ತು ತಪ್ಪಿನ ನಡುವೆ ವ್ಯತ್ಯಾಸ ಕಂಡುಕೊಳ್ಳಬೇಕು. ವಾಸ್ತವದಲ್ಲಿ, ಸತ್ಯವನ್ನು ಮಿಥ್ಯದಿಂದ ಬೇರ್ಪಡಿಸುವುದಷ್ಟೇ ಅಲ್ಲ, ಅವುಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಸಾಮರ್ಥ್ಯವನ್ನೂ ದೇವರು ಮಾನವನಿಗೆ ನೀಡಿದ್ದಾನೆ. ಈ ದೇವದತ್ತ ಸಾಮರ್ಥ್ಯವು ತನ್ನೊಂದಿಗೆ ಒಂದು ಮಹತ್ತರವಾದ ಜವಾಬ್ದಾರಿಯನ್ನೂ ಹೊಂದಿರುತ್ತದೆ. ಅದೇನೆಂದರೆ, ಮಾನವನು ಮಾಡಿರುವ ಆಯ್ಕೆಯ ಬಗ್ಗೆ ದೇವರ ಬಳಿ ಉತ್ತರಿಸಲು ಆತನು ಬದ್ಧನಾಗಿರುತ್ತಾನೆ. ಅಂತೆಯೇ ಮಾನವನು ಒಳಿತನ್ನೇ ಮಾಡಲು ಶತಪ್ರಯತ್ನಗಳನ್ನು ಮಾಡಬೇಕು ಮತ್ತು ಕೆಡುಕನ್ನು ತ್ಯಜಿಸಬೇಕು. ಈ ಸಿದ್ಧಾಂತವನ್ನು ಅಂತಿಮವಾಣಿಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ.
“ ನಿಶ್ಚಯವಾಗಿಯೂ ಪೈಗಂಬರರನ್ನು ನಂಬುವವರಿರಲಿ, ಯೆಹೂದಿಯರಿರಲಿ, ಕ್ರೈಸ್ತರಿರಲಿ, ಸಬಿಯನ್‌ರಿರಲಿ (ದೇವಚರರ ಹಾಗು ನಕ್ಷತ್ರಗಳ ಆರಾಧಕರು), ಯಾರು ಅಲ್ಲಾಹ್ ಮತ್ತು ನಿರ್ಣಾಯಕ (ಪುನರುತ್ಥಾನ) ದಿನದ ಮೇಲೆ ವಿಶ್ವಾಸವಿಟ್ಟು ಸತ್ಕರ್ಮಗಳನ್ನು ಮಾಡುವರೋ ಅವರಿಗೆ ಅದರ ಪ್ರತಿಫಲವು ಅವರ ಪ್ರಭುವಿನ ಬಳಿ ಇದ್ದೇ ಇದೆ. ಅವರಿಗೆ ಯಾವ ಭಯವೂ ವ್ಯಥೆಯೂ ಇಲ್ಲ.” (ಸೂರಃ ಅಲ್ – ಬಕರಃ 2:62)
ಒಂದು ವೇಳೆ, ಕಾರಣಾಂತರಗಳಿಂದ ಅವರ ಮುಂದೆ ಈ ಅಂತಿಮ ಸಂದೇಶವನ್ನು ವಿವರಿಸಿದಾಗಲೂ ಅವರು ಇದನ್ನು ಸ್ವೀಕರಿಸಲು ವಿಫಲರಾದಲ್ಲಿ ಅವರು ತೀವ್ರ ಅಪಾಯದಲ್ಲಿರುವರು. ಅಂತಿಮ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ಹೇಳಿರುವರು :
“ಕ್ರಿಶ್ಚಿಯನ್ ಮತ್ತು ಯೆಹೂದಿಗಳಲ್ಲಿ ಯಾರಾದರೂ ನನ್ನನ್ನು ಆಲಿಸಿಯೂ ನಾನು ತಂದಿರುವುದರ ಮೇಲೆ ವಿಶ್ವಾಸವನ್ನಿರಿಸದಿದ್ದರೆ ಮತ್ತು ಆ ಸ್ಥಿತಿಯಲ್ಲೇ ಮರಣ ಹೊಂದಿದರೆ ಆತನು ನರಕವಾಸಿಗಳಲ್ಲಿ ಸೇರುವನು.”(3)
ದೇವರ ಅಂಗೀಕಾರ
ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ : ವಿವಿಧ ಹಿನ್ನೆಲೆ, ಸಮಾಜ ಮತ್ತು ಸಂಸ್ಕೃತಿಗಳಿಂದ ಬಂದ ಜನರೆಲ್ಲರೂ ಏಕಮಾತ್ರ ನೈಜ ಆರಾಧ್ಯನ ಮೇಲೆಯೇ ವಿಶ್ವಾಸವಿಡಬೇಕೆಂದು ನಿರೀಕ್ಷಿಸುವುದಾದರೂ ಹೇಗೆ ? ಎಂಬುದು. ಏಕಮಾತ್ರ ನೈಜ ಆರಾಧ್ಯನನ್ನೇ ಆರಾಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜನರನ್ನು ಹೊಣೆಗಾರರನ್ನಾಗಿಸಲು, ಮೊದಲು ಅವರೆಲ್ಲರೂ ದೇವರ ಬಗ್ಗೆ ಅರಿಯುವಂತಾಗಬೇಕು. ಮಾನವರನ್ನು ಯಾವ ಸ್ವಾಭಾವಿಕ ಗುಣಗಳೊಂದಿಗೆ ಸೃಷ್ಟಿಸಲಾಗಿದೆಯೋ ಅದರ ಅಂಗವಾಗಿ ದೇವರ ಪರಿಕಲ್ಪನೆಯನ್ನೂ ಅವರ ಜೀವಾತ್ಮಾದಲ್ಲಿ ಮುದ್ರಿಸಿಡಲಾಗಿದೆ. ದೇವರ ಅಂತಿಮವಾಣಿಯು ತಿಳಿಸುತ್ತದೆ, ‘ ಖುರ್‌ಆನ್’ನ ಏಳನೆಯ ಅಧ್ಯಾಯದಲ್ಲಿ (ಅಲ್ ಅ’ರಾಫ್, ಸೂಕ್ತ 172 – 173) ದೇವರು ಈ ರೀತಿ ವಿವರಿಸುತ್ತಾನೆ. ಅವನು ಆದಮ್‌ರನ್ನು ಸೃಷ್ಟಿಸಿದನು. ತರುವಾಯ ಅವರ ಎಲ್ಲ ಸಂತತಿಗಳನ್ನೂ ಅಸ್ತಿತ್ವಕ್ಕೆ ತಂದು ಅವರೆಲ್ಲರನ್ನು ಪ್ರಶ್ನಿಸುತ್ತಾ ಈ ರೀತಿ ಪ್ರಮಾಣವನ್ನು ಸ್ವೀಕರಿಸಿದನು :
“ನಾನು ನಿಮ್ಮ ಆರಾಧ್ಯ ಪ್ರಭುವಲ್ಲವೇ? ” ಅದಕ್ಕೆ ಎಲ್ಲರೂ ಉತ್ತರಿಸಿದರು, “ಹೌದು, ನಾವು ಇದಕ್ಕೆ ಸಾಕ್ಷ್ಯವಹಿಸುತ್ತೇವೆ”.
ತದನಂತರ ಅಲ್ಲಾಹ್ ವಿವರಿಸುತ್ತಾನೆ, ಎಲ್ಲ ಮಾನವರೂ ಆತನೇ ಸೃಷ್ಟಿಕರ್ತ ಮತ್ತು ಆತನೇ ಆರಾಧನೆಗೆ ಅರ್ಹನಾಗಿರುವನು ಎಂದು ಸಾಕ್ಷ್ಯವಹಿಸುವಂತೆ ಮಾಡಿರಲು ಕಾರಣ ಏನೆಂಬುದಾಗಿ ಈ ರೀತಿ ಹೇಳುತ್ತಾನೆ :
“ಅದುವೇ, ನೀವು(ಮಾನವರು) ಪುನರುತ್ಥಾನ ದಿನದಂದು, ‘ನಾವು ಈ ಬಗ್ಗೆ ಅಜ್ಞರಾಗಿದ್ದೆವು’ ಎಂದು ಹೇಳ ಬಿಡಬಾರದೆಂದು.” (ಸೂರಃ ಅಲ್ – ಅ’ರಾಫ್ 7:172)
ಅರ್ಥಾತ್, ‘ಅಲ್ಲಾಹನೇ ನಮ್ಮ ಪ್ರಭುವೆಂಬುದಾಗಿ ನಮಗೆ ತಿಳಿದಿರಲಿಲ್ಲ ಮತ್ತು ಯಾರೂ ನಮಗೆ ಅಲ್ಲಾಹನನ್ನು ಮಾತ್ರ ಆರಾಧಿಸಬೇಕೆಂದು ತಿಳಿಹೇಳಲಿಲ್ಲ’ ಎಂದು ಆ ದಿನದಂದು ನಾವು ವಾದಿಸುವಂತಿಲ್ಲ. ಅಲ್ಲಾಹನು ಇನ್ನೂ ವಿಶದೀಕರಿಸುತ್ತ ಈ ರೀತಿ ಹೇಳುತ್ತಾನೆ :
“ಅಥವಾ ದೇವಸಹಭಾಗಿತ್ವವನ್ನು ನಮಗಿಂತ ಮುಂಚೆ ನಮ್ಮ ಪೂರ್ವಿಕರು ಪ್ರಾರಂಭಿಸಿದ್ದರು. ನಾವು ಅವರ ಬಳಿಕ ಅವರ ಸಂತತಿಯಲ್ಲಿ ಜನಿಸಿದವರು, ಹೀಗಿರುವಾಗ ದುರಾಚಾರಿಗಳು ಮಾಡಿದ ಅಪರಾಧಕ್ಕಾಗಿ ನೀನು ನಮ್ಮನ್ನು ಹಿಡಿಯುವೆಯಾ?’ ಎಂದು ಕೇಳಿಬಿಡಬಾರದೆಂದು ನಾವು ಹೀಗೆ ಮಾಡಿದೆವು.” (ಸೂರಃ ಅಲ್ – ಅ’ರಾಫ್ 7:173)
ಹೀಗೆ, ಪ್ರತಿಯೊಂದು ಮಗುವೂ ಸ್ವಾಭಾವಿಕವಾಗಿಯೇ ದೇವರಲ್ಲಿ ವಿಶ್ವಾಸವಿರಿಸುವ ಮತ್ತು ಆತನನ್ನು ಮಾತ್ರ ಆರಾಧಿಸುವ ಮನೋಭಾವದೊಂದಿಗೆ ಜನಿಸಿರುತ್ತದೆ, ಈ ಹುಟ್ಟು ವಿಶ್ವಾಸ ಮತ್ತು ಮನೋಭಾವವನ್ನು ಅರಬಿ ಭಾಷೆಯಲ್ಲಿ ‘ಫಿತ್ರಾಹ್’ ಎಂದು ಕರೆಯಲಾಗುತ್ತದೆ.
ಅಲ್ಲಾಹನು ಹೇಳಿರುವುದಾಗಿ ಪ್ರವಾದಿ ಮುಹಮ್ಮದರ (ಅವರ ಮೇಲೆ ಶಾಂತಿ ಇರಲಿ) ವರದಿ ಈ ರೀತಿ ಇದೆ. :
“ನಾನು ನನ್ನ ದಾಸರನ್ನು ನೈಜಧರ್ಮದೊಂದೆಗೇ ಸೃಷ್ಟಿಸಿರುವೆನು. ಆದರೆ ದುಷ್ಟರು(ಶೈತಾನರು) ಅವರನ್ನು ಪಥಭೃಷ್ಟಗೊಳಿಸಿದರು.”(4)
ಪ್ರವಾದಿ (ಅವರ ಮೇಲೆ ಶಾಂತಿ ಇರಲಿ) ಕೂಡ ಹೇಳಿರುವರು:
“ಪ್ರತಿಯೊಂದು ಮಗುವೂ ‘ಫಿತ್ರಾಹ್'(ಸಹಜಸ್ವಭಾವ)ದ ಸ್ಥಿತಿಯಲ್ಲಿಯೇ ಜನಿಸುವುದು. ನಂತರ ಆ ಮಗುವಿನ ಪಾಲಕರು ಅದನ್ನು ಯೆಹೂದಿಯನ್ನಾಗಿಯೋ, ಕ್ರೈಸ್ತನನ್ನಾಗಿಯೋ ಅಥವಾ ಝೋರಾಷ್ಟ್ರಿಯನನ್ನಾಗಿಯೋ (ಫಾರ್ಸಿ ಧರ್ಮದ ಅನುಯಾಯಿ) ಮಾಡುತ್ತಾರೆ. “(5)
ಒಂದು ವೇಳೆ ಮಗುವನ್ನು ಒಂಟಿಯಾಗಿ ಬಿಟ್ಟರೆ, ಅದು ದೇವರನ್ನು ತನ್ನದೇ ಆದ ರೀತಿಯಲ್ಲಿ ಆರಾಧಿಸಬಹುದು. ಆದರೆ, ಎಲ್ಲ ಮಕ್ಕಳೂ ತಮ್ಮ ಪರಿಸರದಿಂದ ಪ್ರಭಾವಿತರಾಗುತ್ತಾರೆ. ಅಂತೆಯೇ, ಅಲ್ಲಾಹನು ನಿಸರ್ಗದಲ್ಲಿ ನಿಗದಿಪಡಿಸಿರುವ ಭೌತಿಕ ತತ್ವಗಳಿಗೆ ಸಹಜವಾಗಿಯೇ ಮಗುವು ಶರಣಾಗುವಂತೆ, ಆ ಮಗುವಿನ ಅಂತರಾತ್ಮವೂ ಕೂಡ ಸ್ವಾಭಾವಿಕವಾಗಿಯೇ ‘ಅಲ್ಲಾಹನೇ ತನ್ನ ಪ್ರಭು ಮತ್ತು ಸೃಷ್ಟಿಕರ್ತ’ ಎಂಬ ಸತ್ಯಕ್ಕೆ ಶರಣಾಗುವುದು.
ಆದರೆ ಮಗುವಿನ ಪಾಲಕರು ಅನ್ಯಪದ್ಧತಿಯನ್ನು ಅನುಸರಿಸುವಂತೆ ಆ ಮಗುವನ್ನು ಬಲವಂತಪಡಿಸಿದಲ್ಲಿ ಅದನ್ನು ವಿರೋಧಿಸುವ ಅಥವಾ ಪ್ರತಿರೋಧಿಸುವ ಸಾಮರ್ಥ್ಯವು ಆರಂಭದ ದಿನಗಳಲ್ಲಿ ಆ ಮಗುವಿಗೆ ಇರಲಾರದು. ಇಂತಹ ಕಾಲಘಟ್ಟದಲ್ಲಿ ಆ ಮಗು ಅನುಸರಿಸುವ ಮಾರ್ಗವು ಅಲ್ಲಿನ ಸಂಪ್ರದಾಯ ಅಥವಾ ಬೆಳವಣಿಗೆಯ ಒಂದಂಶವಾಗಿರುವುದು ಮತ್ತು ಅವನ ಜೀವನದ ಒಂದು ನಿರ್ದಿಷ್ಟ ಕಾಲಾವಧಿಯವರೆಗೂ ದೇವರು ಅವನನ್ನು ಹಿಡಿಯುವುದಿಲ್ಲ.
ದೇವರ ನಿದರ್ಶನಗಳು
ಮಾನವನ ಬುದುಕಿನಾದ್ಯಂತ – ಬಾಲ್ಯಾವಸ್ಥೆಯಿಂದ ಹಿಡಿದು ಇಹಲೋಕವನ್ನು ತ್ಯಜಿಸುವಲ್ಲಿಯವರೆಗೆ – ದೇವರು(ಅಲ್ಲಾಹು) ಏಕೈಕನು ಎಂದು ಸ್ಪಷ್ಟಗೊಳ್ಳುವವರೆಗೂ ಏಕಮಾತ್ರ ನೈಜ ಆರಾಧ್ಯನ ಅನೇಕ ನಿದರ್ಶನಗಳನ್ನು ಭೂಮಿಯೆಲ್ಲೆಡೆ ಮತ್ತು ಸ್ವತಃ ಅವರಲ್ಲಿಯೇ ತೋರಿಸಲಾಗುವುದು. ‘ ಖುರ್‌ಆನ್’ನಲ್ಲಿ ದೇವರು ಹೇಳುತ್ತಾನೆ:
“ಇದು ನಿಜವೆಂದು ಸ್ಪಷ್ಟಗೊಳ್ಳುವವರೆಗೂ ನಾವು ಇವರಿಗೆ ಈ ಜಗತ್ತಿನಲ್ಲೂ, ಮತ್ತು ಸ್ವತಃ ಇವರೊಳಗೂ ನಮ್ಮ ದೃಷ್ಟಾಂತಗಳನ್ನು ತೋರಿಸಿಕೊಡುವೆವು.”
(ಸೂರಃ ಫುಸ್ಸಿಲತ್ 41:53)
ವಿಗ್ರಹಾರಾಧನೆಯು ಮಿಥ್ಯವೆಂದು ಮನಗಾಣಲು ಒಬ್ಬ ವ್ಯಕ್ತಿಗೆ ಅವತೀರ್ಣಗೊಂಡ ದೇವರ ನಿದರ್ಶನದ ಒಂದು ಉದಾಹರಣೆಯು ಈ ಕೆಳಗಿನಂತಿದೆ.
ದಕ್ಷಿಣ ಅಮೇರಿಕಾದ ಬ್ರೆಝಿಲ್‌ನಲ್ಲಿ ಅಮೆಝಾನ್ ಕಾಡಿನ ಆಗ್ನೇಯ ಭಾಗದ ನಿವಾಸಿಗಳು ಸೃಷ್ಟಿಯ ಶ್ರೇಷ್ಠ ಆರಾಧ್ಯದೈವನೆಂಬ ನೆಲೆಯಲ್ಲಿ ‘ಸ್ಕ್ವಾಚ್’ನ (ಒಬ್ಬ ವ್ಯಕ್ತಿಯ) ವಿಗ್ರಹವನ್ನಿರಿಸಿ ಗುಡಿಯೊಂದನ್ನು ನಿರ್ಮಿಸಿದರು. ಮಾರನೆಯ ದಿನ ಯುವಕನೋರ್ವ ಪ್ರಾರ್ಥನೆ ಸಲ್ಲಿಸಲು ಆ ಗುಡಿಯನ್ನು ಸಂದರ್ಶಿಸಿದನು.
ಯಾರನ್ನು ಸೃಷ್ಟಿಕರ್ತ ಮತ್ತು ಸಂರಕ್ಷಕ ಪ್ರಭು ಎಂದು ಕಲಿಸಿಕೊಡಲಾಗಿತ್ತೋ, ಅದಕ್ಕೆ ಸಾಷ್ಟಾಂಗವೆರಗುತ್ತಿರುವಾಗ, ಬಡ ಬೀದಿ ನಾಯಿಯೊಂದು ಗುಡಿಯನ್ನು ಪ್ರವೇಶಿಸಿತು. ಯುವಕನು ಮೂಕವಿಸ್ಮಿತನಾಗಿ ನೋಡುತ್ತಿರಲು, ನಾಯಿಯು ತನ್ನ ಹಿಂಗಾಲನ್ನು ಮೇಲಕ್ಕೆತ್ತಿ ಆ ವಿಗ್ರಹದ ಮೇಲೆ ಮೂತ್ರ ವಿಸರ್ಜಿಸಲಾರಂಭಿಸಿತು. ಉದ್ವೇಗದಿಂದ ಯುವಕನು ಆ ನಾಯಿಯನ್ನು ಗುಡಿಯಿಂದಾಚೆ ಬಹುದೂರದವರೆಗೂ ಅಟ್ಟಿದನು. ಕ್ರಮೇಣ ಅವನ ಉದ್ವೇಗವು ತಣ್ಣಗಾದಾಗ ‘ಈ ವಿಗ್ರಹವು ಇಡೀ ವಿಶ್ವದ ಪ್ರಭು!’ ಆಗಿರಲು ಸಾಧ್ಯವಿಲ್ಲ ಎಂಬುದು ಆತನಿಗೆ ಮನವರಿಕೆಯಾಯಿತು. ದೇವರು ಇನ್ನೆಲ್ಲೋ ಇರಬೇಕು ಎಂದು ನಿರ್ಧರಿಸಿದನು. ಇದು ವಿಚಿತ್ರವೆನಿಸಿದರೂ, ವಿಗ್ರಹದ ಮೇಲೆ ನಾಯಿಯೊಂದರ ವಿಸರ್ಜನೆ ಆ ವ್ಯಕ್ತಿಗೆ ದೇವರ ನಿದರ್ಶನವಾಗಿತ್ತು. ಈ ನಿದರ್ಶನವು ಆತನ ಆರಾಧನೆಯೆಲ್ಲವೂ ಮಿಥ್ಯವಾಗಿರುವ ಕುರಿತು ತಿಳಿಸಲು ನೀಡಿದ ದಿವ್ಯ ಸಂದೇಶವಾಗಿತ್ತು. ಈ ಸಂಗತಿಯು ಪಾರಂಪರಿಕವಾಗಿ ಕಲಿತಿದ್ದ ಮಿಥ್ಯ ಆರಾಧ್ಯರ ಆರಾಧನೆ ಮಾಡುವ ಕಾರ್ಯದಿಂದ ಅವನನ್ನು ಪಾರು ಮಾಡಿತು. ಹೀಗೆ ಆ ವ್ಯಕ್ತಿಗೆ ಉಳಿದಿರುವುದು ಎರಡೇ ದಾರಿ, ಒಂದೋ ನೈಜ ಆರಾಧ್ಯನ ಅನ್ವೇಷಣೆ ಇಲ್ಲವೇ, ಅದೇ ಮಿಥ್ಯಾರಾಧ್ಯರ ಅನುಸರಣೆ. ದೇವರ ನಿದರ್ಶನಗಳನ್ನು ಅನುಸರಿಸುವವರು ಹೇಗೆ ಸನ್ಮಾರ್ಗ ಕಂಡುಕೊಳ್ಳುವರು ಎಂಬುದನ್ನು ಇಬ್ರಾಹೀಂರ(ಅವರ ಮೇಲೆ ಶಾಂತಿ ಇರಲಿ ) ಸಂಗತಿಯನ್ನು ಪ್ರಸ್ತಾಪಿಸುವ ಮೂಲಕ ದೇವರು ಈ ರೀತಿ ವಿವರಿಸುತ್ತಾನೆ :
“ನಾವು ಇಬ್ರಾಹೀಂರಿಗೆ ಇದೇ ರೀತಿಯಲ್ಲಿ ಭೂಮಿ -ಆಕಾಶಗಳ ಸಾಮ್ರಾಜ್ಯವ್ಯವಸ್ಥೆಯನ್ನು ತೋರಿಸಿಕೊಡುತ್ತಿದ್ದೆವು. ಅವರು ದೃಢ-ವಿಶ್ವಾಸವುಳ್ಳವರಲ್ಲಾಗಬೇಕೆಂದು. ಒಮ್ಮೆ ರಾತ್ರಿ ಕಾಲವು ಅವರನ್ನಾವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು. ‘ಇದು ನನ್ನ ಪ್ರಭು’ ಎಂದರು. ಅದು ಅಸ್ತಮಿಸಿದಾಗ ‘ನಾನು ಅಸ್ತಮಿಸುವವರಿಗೆ ಮಾರುಹೋಗುವುದಿಲ್ಲ’ ಎಂದರು. ಅನಂತರ ಚಂದ್ರನು ಪ್ರಕಾಶಿಸುತ್ತಿರುವುದನ್ನು ಕಂಡಾಗ ‘ಇದು ನನ್ನ ಪ್ರಭು’ ಎಂದರು. ಆದರೆ ಅದು ಮುಳುಗಿದಾಗ ‘ನನ್ನ ಪ್ರಭು ನನಗೆ ಮಾರ್ಗದರ್ಶನವನ್ನೀಯದಿರುತ್ತಿದ್ದರೆ ನಾನೂ ಪಥಭ್ರಷ್ಟರಲ್ಲಾಗುತ್ತಿದ್ದೆ’ ಎಂದರು. ತರುವಾಯ ಸೂರ್ಯನನ್ನು ಪ್ರಕಾಶಮಾನವಾಗಿ ಕಂಡು ‘ಇದೇ ನನ್ನ ಪ್ರಭು, ಇದು ಎಲ್ಲಕ್ಕಿಂತಲೂ ದೊಡ್ಡದಾಗಿದೆ’ ಎಂದರು. ಆದರೆ ಅದು ಅಸ್ತಮಿಸಿದಾಗ ಇಬ್ರಾಹೀಂರು ಉದ್ಗರಿಸಿದರು, ‘ಓ ನನ್ನ ಜನಾಂಗಬಾಂಧವರೇ, ನೀವು ದೇವನ ಸಹಭಾಗಿಯಾಗಿಸುವವರುಗಳಿಂದೆಲ್ಲಾ ನಾನು ವಿರಕ್ತನು.’ ನಾನು ಏಕನಿಷ್ಠೆಯಿಂದ ನನ್ನ ಮುಖವನ್ನು ಭೂಮಿ – ಆಕಾಶಗಳನ್ನು ಸೃಷ್ಟಿಸಿದವನ ಕಡೆಗೆ ತಿರುಗಿಸಿದೆನು. ‘ನಾನು ಎಷ್ಟುಮಾತ್ರಕ್ಕೂ ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ.’ (ಸೂರಃ ಅಲ್ -ಅನ್‌ಆಮ್ 6:75 -79)
ಈ ಮೊದಲೇ ತಿಳಿಸಿರುವಂತೆ ದೇವರ ಬಗ್ಗೆ ಮನುಷ್ಯನಲ್ಲಿ ಸಹಜವಾಗಿರುವ ನಂಬಿಕೆ, ಮತ್ತು ಜನ್ಮತಃ ಇರುವ ದೇವಾರಾಧನೆಯೆಡೆಗಿನ ಒಲವು – ಇವೆಲ್ಲವನ್ನು ಬೆಂಬಲಿಸಲು ಮತ್ತು ದಿನನಿತ್ಯ ಅವತೀರ್ಣಗೊಳ್ಳುವ ದೇವರ ನಿದರ್ಶಗಳ ಸತ್ಯಾಂಶವನ್ನು ಪುಷ್ಠೀಕರಿಸಲು ಪ್ರತಿಯೊಂದು ಜನಾಂಗ ಮತ್ತು ಪಂಗಡಗಳ ಬಳಿ ಸಂದೇಶವಾಹಕರನ್ನು ಕಳುಹಿಸಲಾಗಿದೆ.
ಈ ಮುಂಚೆ ಬಂದ ಅನೇಕ ಪ್ರವಾದಿಗಳ ಹಲವಾರು ಶಿಕ್ಷಣಗಳು ನಶಿಸಿ ಹೋದಾಗ್ಯೂ ದೈವಪ್ರೇರಿತ ಸಂದೇಶದ ಕೆಲವು ಭಾಗ ಕಲುಷಿತಗೊಳ್ಳದೇ ಉಳಿದಿರುತ್ತವೆ, ಮತ್ತು ಮಾನವರಿಗೆ ಸರಿ ಮತ್ತು ತಪ್ಪಿನ ನಡುವೆ ಆಯ್ಕೆ ಮಾಡಲು ಸಹಕರಿಸುತ್ತಿವೆ. ಹೀಗೆ ನಡೆದುಬಂದ ದೈವಪ್ರೇರಿತ ಸಂದೇಶಗಳ ಪ್ರಭಾವವನ್ನು ಜೂಡಾಯಿಸಂನ ತೌರಾತ್‌ನಲ್ಲಿರುವ ‘Ten commandments’ನಲ್ಲಿ (ಹತ್ತು ವಿಧಿ ಅಥವಾ ಹತ್ತು ದೈವಾಜ್ಞೆ) ಕಾಣಬಹುದು. ಕಾಲಕ್ರಮೇಣ, ಇವು ಕ್ರಿಶ್ಚಿಯಾನಿಟಿಯ ಶಿಕ್ಷಣಗಳಲ್ಲಿ ಬೆರೆತುಹೋದವು. ಅಷ್ಟೇ ಅಲ್ಲದೆ, ಪ್ರಾಚೀನ ಹಾಗು ಆಧುನಿಕ ಪ್ರಪಂಚದ ಅನೇಕ ಸಮಾಜಗಳಲ್ಲಿಯ – ಕೊಲೆ, ಕಳ್ಳತನ ಹಾಗು ವ್ಯಭಿಚಾರದ ವಿರುದ್ಧ ಇರುವ ಕಾನೂನುಗಳೊಂದಿಗೂ ಬೆರೆತುಹೋದವು.
ಪ್ರವಾದಿಗಳ ಮುಖಾಂತರ ಅವತೀರ್ಣಗೊಳಿಸಿರುವವುಗಳ ಜೊತೆಗೆ, ಆಯಾ ಕಾಲದಲ್ಲಿ ಮಾನವನೆದುರು ಪ್ರಕಟಗೊಂಡ ದೈವನಿದರ್ಶನಗಳ ಮೂಲಕ ಎಲ್ಲ ಮಾನವರಿಗೂ ಆ ಏಕಮಾತ್ರ ಆರಾಧ್ಯ ದೈವನನ್ನು ಕಂಡುಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಪರಿಣಾಮವಾಗಿ, ಪ್ರತಿಯೊಂದು ಜೀವಾತ್ಮವೂ ದೇವರಲ್ಲಿಯ ತನ್ನ ವಿಶ್ವಾಸ ಮತ್ತು ದೇವರ ನೈಜಧರ್ಮದ ಸ್ವೀಕಾರದ ಕುರಿತು ಹೊಣೆಯಾಗಿರುವುದು – ಅರ್ಥಾತ್, ಇಸ್ಲಾಂನ (ದೈವೇಚ್ಛೆಗೆ ತನ್ನನ್ನು ಸಂಪೂರ್ಣವಾಗಿ ಶರಣಾಗಿಸುವುದರ) ಕುರಿತು.
ನಿರ್ಧಾರ
ಈ ಹಿಂದೆ ಪ್ರಸ್ತುತಪಡಿಸಲಾಗಿರುವ ವಿಮರ್ಶೆಗಳಲ್ಲಿ ಈಗಾಗಲೇ ಸ್ಪಷ್ಟೀಕರಿಸಲಾಗಿದೆ – ‘ಇಸ್ಲಾಂ’ ಎಂಬ ಧರ್ಮದ ಹೆಸರೇನಿದೆಯೋ, ಅದುವೇ ಇಸ್ಲಾಂನ ಮೂಲತತ್ವ ಮತ್ತು ದೇವರಡೆಗಿನ ಶರಣಾಗತಿಯನ್ನು ಬಿಂಬಿಸುತ್ತದೆ. ಮತ್ತು ಇಸ್ಲಾಂನ ಗ್ರಂಥದನ್ವಯ (ಖುರ್‌ಆನ್) ‘ಇಸ್ಲಾಂ’ ಎಂಬ ಹೆಸರು ಮಾನವನಿಂದ ಆರಿಸಲ್ಪಟ್ಟಿರದೇ ಸ್ವತಃ ದೇವರಿಂದ ಆರಿಸಲ್ಪಟ್ಟಿರುವುದಾಗಿದೆ. ಅಷ್ಟೇ ಅಲ್ಲ, ಕೇವಲ ಇಸ್ಲಾಂ ಏಕದೇವತ್ವದ ಮತ್ತು ದೇವರ ಗುಣಲಕ್ಷಣಗಳ ಕುರಿತು ಮತ್ತು ಯಾವುದೇ ಮಧ್ಯವರ್ತಿಗಳಿಲ್ಲದೇ ಆ ಏಕಮಾತ್ರ ಆರಾಧ್ಯದೈವನ ಆರಾಧನೆಯ ಕುರಿತ ಶಿಕ್ಷಣವನ್ನು ನೀಡುತ್ತದೆ. ಅಂತಿಮವಾಗಿ ದೇವರ ಆರಾಧನೆಯೆಡೆಗೆ ಸ್ವಾಭಾವಿಕವಾಗಿಯೇ ವಾಲುವ ಮನಸ್ಸಿರುವ ಕಾರಣದಿಂದಾಗಿ ಮತ್ತು ಪ್ರತಿಯೊಬ್ಬನೆಡೆಗೂ ಆಯಾ ಕಾಲಗಳಲ್ಲಿ ಅವತೀರ್ಣಗೊಂಡಿರುವ ನಿದರ್ಶನಗಳಿಂದಾಗಿ , ಇಸ್ಲಾಂ ಎಲ್ಲ ಮಾನವರಿಂದಲೂ ಎಲ್ಲ ಕಾಲಗಳಲ್ಲಿಯೂ ಅನುಸರಿಸಲ್ಪಡುವ ಅರ್ಹತೆಯನ್ನು ಕಾಯ್ದುಕೊಳ್ಳುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಿದ್ದರೆ, ಇಸ್ಲಾಂನ (ದೇವನಿಗೆ ಶರಣಾಗುವುದು) ವಿಶಾಲಾರ್ಥ, ಇಸ್ಲಾಂನ ಏಕದೇವತ್ವದ ಮೂಲಭೂತ ಕಲ್ಪನೆ ಮತ್ತು ಎಲ್ಲ ಮಾನವರೂ ಎಲ್ಲ ಕಾಲಗಳಲ್ಲಿಯೂ ಅಳವಡಿಸಿಕೊಳ್ಳಬಹುದಾದ ಜೀವನಕ್ರಮ ಕೇವಲ ಇಸ್ಲಾಮ್ ವಾದವನ್ನು ಬೆಂಬಲಿಸುತ್ತದೆ. ಅದೇನೆಂದರೆ, ಇಸ್ಲಾಮ್ ಆರಂಭದಿಂದಲೂ ದೇವರ ನೈಜ ಧರ್ಮವಾಗಿದೆ ಮತ್ತು ಮುಂದೆಯೂ ಅದು ದೇವರ ನೈಜಧರ್ಮವಾಗಿರುವುದು – ಅದು ಯಾವುದೇ ಭಾಷೆಯಲ್ಲಿ ಪ್ರಕಟಗೊಂಡಿರಲಿ.
ಅಂತಿಮವಾಗಿ, ನಾವು ಅಲ್ಲಾಹ್, ಅತ್ಯುನ್ನತನಲ್ಲಿ ಪ್ರಾರ್ಥಿಸುತ್ತೇವೆ – ಅವನು ಮಾರ್ಗದರ್ಶನವಿತ್ತಿರುವ ಸತ್ಪಥದಲ್ಲಿ ನಮ್ಮನ್ನು ನಡೆಸಲೆಂದು ಮತ್ತು ನಮ್ಮ ಮೇಲೆ ಸದಾ ತನ್ನ ಕೃಪಾದೃಷ್ಟಿಯನ್ನಿರಿಸಲೆಂದು. ನಿಸ್ಸಂದೇಹವಾಗಿಯೂ ಆತನು ಪರಮ ಕರುಣಾಮಯಿ, ಸರ್ವಸ್ತುತಿಯೂ ಅಲ್ಲಾಹನಿಗೇ ಮೀಸಲು. ಅವನು ಸರ್ವಲೋಕದ ಅಧಿಪತಿ. ಪ್ರವಾದಿ ಮುಹಮ್ಮದರು (ಅವರ ಮೇಲೆ ಶಾಂತಿ ಇರಲಿ) ಮತ್ತು ಎಲ್ಲ ಪ್ರವಾದಿಗಳ ಮೇಲೆ ಮತ್ತು ಅವರ ಅನುಯಾಯಿಗಳ ಮೇಲೆ ಶಾಂತಿ ಮತ್ತು ಅನುಗ್ರಹ ನೆಲೆಸಲಿ.
—————————————
(1 ) ಜೀಸಸ್ ಮತ್ತು ಕ್ರೈಸ್ಟ್ ಇವರೆಡೂ, ಹಿಬ್ರೂ ಭಾಷಾ ಪದವಾಗಿದ್ದು, ಗ್ರೀಕ್ ಮತ್ತು ಲ್ಯಾಟಿನ್ ಭಾಷಾ ಮೂಲದಿಂದ ಉತ್ಪತ್ತಿಯಾಗಿದೆ. ಜೀಸಸ್ (Jesus) ಎಂಬುದು ಗ್ರೀಕ್ ಭಾಷೆಯ ಈಸಸ್ (Iesous) ಎಂಬ ಪದದ ಇಂಗ್ಲೀಷ್ ಮತ್ತು ಲ್ಯಾಟಿನ್ ರೂಪವಾಗಿದೆ. ವಾಸ್ತವದಲ್ಲಿ, ಅದರ ಹಿಬ್ರೂ ಭಾಷಾ ಪದಗಳೆಂದರೆ, ಯೆಶುಆ ಅಥವಾ ಯೆಹೊಶುಆ(ಜೋಶುಆ). ಗ್ರೀಕ್ ಪದದ ‘ಕ್ರಿಸ್ಟೋಸ್’ (Christos) ಎಂಬುದು ಹಿಬ್ರೂ ಭಾಷೆಯ ‘ಮೆಸ್ಯಾಆಹ್’ (Messiah) ಅರ್ಥಾತ್ ‘ಅಭಿಷೇಕಿಸಲ್ಪಟ್ಟವನು’ ಎಂಬ ಪದದ ಭಾಷಾಂತರ ರೂಪ.
(2)ಸಹೀಹ್ ಮುಸ್ಲಿಂ (ಇಂಗ್ಲೀಷ್ ಭಾಷಾಂತರ) ಸಂ. 1, ಪುಸ್ತಕ. 1, ಹ. ನಂ.136
(3)ಸಹೀಹ್ ಮುಸ್ಲಿಂ (ಇಂಗ್ಲಿಷ ಭಾಷಾಂತರ) ಸಂ. 1, ಪುಸ್ತಕ 1, ನಂ. 386
(4)ಸಹೀಹ್ ಮುಸ್ಲಿಂ (ಇಂಗ್ಲಿಷ್ ಭಾಷಾಂತರ) ಸಂ. 51, ಪುಸ್ತಕ 7, ನಂ. 7207
(5)ಸಹೀಹ್ ಮುಸ್ಲಿಂ (ಇಂಗ್ಲಿಷ್ ಭಾಷಾಂತರ) ಸಂ. 651, ಪುಸ್ತಕ 6, ನಂ. 4775