ದೃಢವಾದ ವಿಶ್ವಾಸವುಳ್ಳವರಿಗೆ ಭೂಮಿಯಲ್ಲಿ ಹಲವು ದೃಷ್ಟಾಂತಗಳಿವೆ ಮತ್ತು ನಿಮ್ಮಲ್ಲಿಯೂ (ನಿಮಗೆ ದೃಷ್ಟಾಂತ) ಇದೆ. ಹಾಗಿರುವಾಗ ನೀವು ನೋಡುವುದಿಲ್ಲವೇ ? (ಕುರ್‌ಆನ್ 51:20,21).
ಭೂಮಿ -ಆಕಾಶಗಳಲ್ಲಿ ಸಾಕಷ್ಟು ದೃಷ್ಟಾಂತಗಳಿವೆಯೆಂದು ಪವಿತ್ರ ಕುರ್‌ಆನಿನ ಹಲವೆಡೆಗಳಲ್ಲಿ ಅಲ್ಲಾಹು ಹೇಳಿದ್ದಾಗಿ ಕಾಣಬಹುದಾಗಿದೆ. ಈ ದೃಷ್ಟಾಂತಗಳೆಲ್ಲಾ ಯಾಕಾಗಿ? ಇವೆಲ್ಲಾ ಅಲ್ಲಾಹು ಮಾತ್ರವೇ ಆರಾಧನೆಗೆ ಅರ್ಹನು ಎಂಬುದರ ದೃಷ್ಟಾಂತಗಳಾಗಿವೆ. ಅಲ್ಲಾಹನ ಆರಾಧನೆಗಿರುವ ಅರ್ಹತೆಯನ್ನು ನಿರಾಕರಿಸುವುದೇ ಅತೀ ದೊಡ್ಡ ಪಾಪ. ಅಲ್ಲಾಹನ ಆರಾಧತ್ಯೆಯಲ್ಲಿ ಪಾಲುದಾರರನ್ನು ಸೇರಿಸುವುದನ್ನು ಅವನು ಎಂದಿಗೂ ಕ್ಷಮಿಸುವುದಿಲ್ಲವೆಂದು ಪವಿತ್ರ ಕುರ್‌ಆನಿನ ಮೂಲಕ ಅಲ್ಲಾಹು ಸಾರಿದ್ದಾನೆ. ಅದು ಅತಿ ಘೋರ ಅಕ್ರಮವೆಂದು ಕುರ್‌ಆನ್ ಹೇಳುತ್ತದೆ.
ಅಲ್ಲಾಹು ಮಾತ್ರವೇ ಆರಾಧನೆಗೆ ಅರ್ಹನು. ಏಕೆಂದರೆ ಅವನು ಸೃಷ್ಟಿಕರ್ತನು, ಅವನೇ ಅನ್ನದಾತನು, ಅವನೇ ಜಗತ್ತಿನ ನಿಯಂತ್ರಕನು, ಗಾಳಿಯನ್ನು ನಿಯಂತ್ರಿಸುವವನ್ನು, ಸೃಷ್ಟಿಸಲು, ಸಂರಕ್ಷಿಸಲು ಮತ್ತು ಸಂಹರಿಸಲು ಸಾಮರ್ಥ್ಯವುಳ್ಳವನೇ ಆರಾಧನೆಗೆ ಅರ್ಹನು. ಜಗತ್ತಿನಲ್ಲಿ ಕಾಣುತ್ತಿರುವ ಯಾವುದೇ ವಸ್ತುವನ್ನು ಅತಿ ಸೂಕ್ಷ್ಮವಾಗಿ, ಸುಂದರವಾಗಿ ನಿರ್ವಹಣೆ ಮಾಡುತ್ತಿರುವವನು ಸರ್ವಜ್ಞನೂ, ಸರ್ವಶಕ್ತನೂ ಆದ ಅಲ್ಲಾಹನಾಗಿದ್ದಾನೆ. ಮಳೆಸುರಿಸುವುದು, ರಾತ್ರಿ -ಹಗಲುಗಳನ್ನು ಮತ್ತೆ ಮತ್ತೆ ಬದಲಾಯಿಸಿ ತರುವುದು, ಗಿಡಗಳನ್ನು ಬೆಳೆಸುವುದು ಮತ್ತು ವಿವಿಧ ರೀತಿಯ ಫಲಗಳನ್ನು ಉತ್ಪಾದಿಸುವುದು ಎಲ್ಲವೂ ಅವನೇ.
ಈ ಎಲ್ಲಾ ವಿಷಯಗಳನ್ನು ಸರಿಯಾಗಿ ಗ್ರಹಿಸಲು ಮಾನವನಿಗೆ ಮಾತ್ರವೇ ಸಾಧ್ಯ. ಮಾನವನು ಅಲ್ಲಾಹನ ಸೃಷ್ಟಿಗಳಲ್ಲಿ ವುಶಿಷ್ಟ ಸೃಷ್ಟಿಯಾಗಿದ್ದಾನೆ. ಅವನು ಬುದ್ಧಿ, ಸಾಮರ್ಥ್ಯ ಹಾಗೂ ವಿವೇಚನಾ ಶಕ್ತಿಯುಳ್ಳವನು. ಅವನಿಗೆ ಈ ಎಲ್ಲಾ ವಿಶೇಷತೆಗಳನ್ನು ನೀಡಿದವನು ಅವನ ಸೃಷ್ಟಿಕರ್ತನಾದ ಅಲ್ಲಾಹನಾಗಿದ್ದಾನೆ. ಆದ್ದರಿಂದಲೇ ಮಾನವನಿಗೆ ಸತ್ಫಥವನ್ನು ತೋರಿಸಲಿಕ್ಕಾಗಿ ಮತ್ತು ಸದಾಚಾರ ಕಲಿಸಲಿಕ್ಕಾಗಿ ಅಲ್ಲಾಹು ಪ್ರವಾದಿಗಳನ್ನು ನಿಯೋಗಿಸಿದನು. ಪ್ರವಾದಿಗಳ ಸದ್ಭೋಧನೆಗಳನ್ನು ಸ್ವೀಕರಿಸಿ, ಸತ್ಯದ ಹಾದಿಯಲ್ಲಿ ಸಂಚರಿಸಿ, ಅಲ್ಲಾಹನನ್ನು ಮಾತ್ರ ಆರಾಧಿಸಿ ಸತ್ಕರ್ಮಗಳನ್ನು ಮಾಡುತ್ತಾ ಹಾಗೆ ಸ್ವರ್ಗದ ಹಕ್ಕುದಾರರಾಗಬೇಕಾದುದು ಮಾನವ ಜೀವನದ ಪ್ರಧಾನ ಗುರಿ. ಅದಕ್ಕಾಗಿ ಅಲ್ಲಾಹು ದೃಷ್ಟಾಂತಗಳ ಮೂಲಕ ಚಿಂತಿಸಲು ಮಾನವನಿಗೆ ಕರೆ ಕೊಡುತ್ತಾನೆ.
“ನಿಮಗೆ ನಿಮ್ಮಲ್ಲೇ ದೃಷ್ಟಾಂತಗಳಿವೆ ಎಂದು ಅಲ್ಲಾಹು ಹೇಳುತ್ತಾನೆ. ಮಾನವನು ಸೃಷ್ಟಿಗಳಲ್ಲಿ ವಿಶಿಷ್ಟನಾದ ತನ್ನ ಕುರಿತು ಮೊದಲು ಚಿಂತಿಸಬೇಕು. ಅವನಿಗೆ ಅತ್ಯಂತ ಉತ್ಕೃಷ್ಟನಾಗಲು ಮತ್ತು ಅತ್ಯಂತ ನಿಕೃಷ್ಟನಾಗಲು ಸಾಧ್ಯವಿದೆ. ಸರಿಯಾದ ಚಿಂತನೆಯ ಮೂಲಕ ಅಲ್ಲಾಹನ ಸೃಷ್ಟಿಗಳ ಕುರಿತು ವಿಶೇಷವಾಗಿ ಮನುಷ್ಯ ಸೃಷ್ಟಿಯ ಕುರಿತು ಮಾನವನು ತಿಳಿದುಕೊಳ್ಳಬೇಕಾಗಿದೆ. ಅಲ್ಲಾಹು ಹೇಳುತ್ತಾನೆ: “ನಿಜವಾಗಿಯೂ ನಾವು ಮಾನವನನ್ನು ಅತ್ಯುತ್ತಮ ಮಾದರಿಯಲ್ಲಿ ಸೃಷ್ಟಿಸಿದ್ದೇವೆ. ಬಳಿಕ ಅವನನ್ನು ನಾವು ನೀಚನಾಗಿ ಮಾಡಿಬಿಟ್ಟೆವು” (ಕುರ್‌ಆನ್ 95:4, 5).
ಮಾನವನಲ್ಲಿ ಕಾರ್ಯವೆಸಗುತ್ತಿರುವ ಯಂತ್ರಗಳು ಇದುವರೆಗೆ ವಿಜ್ಞಾನವು ಕಂಡು ಹಿಡಿದ ಎಲ್ಲಾ ಯಂತ್ರಗಳನ್ನು ಸೋಲಿಸುವಂತಹದಾಗಿದೆ. ಮನುಷ್ಯ ದೇಹದ ಕೆಲವು ಯಂತ್ರಗಳ ಕುರಿತು ಒಂದಿಷ್ಟು ಚಿಂತಿಸೋಣ. ಮನುಷ್ಯನ ಅವಯವಗಳಲ್ಲಿ ಮಿದುಳು ಅತ್ಯದ್ಭುತ ಅಂಗವಾಗಿದೆ.
ಶರೀರದಲ್ಲಿ ಅತೀ ಹೆಚ್ಚು ಆಕ್ಸಿಜನ್ ಉಪಯೋಗಿಸುವುದು ಮಿದುಳಾಗಿದೆ. ರಕ್ತದಲ್ಲಿ ಆಕ್ಸಿಜನ್‌ನ ಪ್ರಮಾಣ ಶೇ. 20 ಮಾತ್ರ. ಮಾನವನ ಮಿದುಳಿನಲ್ಲಿ ಜಗತ್ತಿನ ಅತಿ ದೊಡ್ಡ ಜ್ಞಾನ ಕೋಶವಾದ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕದ ಐದು ಪಟ್ಟಿಗಿಂತಲೂ ಹೆಚ್ಚು ವಿಷಯಗಳನ್ನು ಸಂಗ್ರಹಿಸಿಡಬಹುದಾಗಿದೆ. ಮಿದುಳಿನ ಕುರಿತು ಮಾನವನಿಗೆ ಇದುವರೆಗೆ ಬಹಳ ಸ್ವಲ್ಪವೇ ತಿಳಿದುಕೊಳ್ಳಲು ಸಾಧ್ಯವಾಗಿದೆ. ಕಂಡು ಹಿಡಿಯಲಾಗದಂತಹ ಇನ್ನೂ ಅದೆಷ್ಟೋ ವಿಷಯಗಳಿವೆ. ಅದರ ಕಾರಣವನ್ನು ಇದು ತನಕ ವಿಜ್ಞಾನಕ್ಕೆ ಕಂಡು ಹಿಡಿಯಲಾಗಿಲ್ಲ.
ನಮ್ಮ ಮಿದುಳು ಅತ್ಯದ್ಭುತಗಳ ಆಗರವಾಗಿದೆ. ಹತ್ತು ವಾಟ್ಸ್ ಪ್ರಕಾಶದ ಒಂದು ಬಲ್ಬನ್ನು ಉರಿಸಲು ಅಗತ್ಯವಿರುವಷ್ಟು ಶಕ್ತಿಯನ್ನುಪಯೋಗಿಸಿ ಮೆದುಳು ಕಾರ್ಯವೆಸಗುತ್ತದೆ. ಮಿದುಳಿನ ಶೇ. 80 ಭಾಗವೂ ಜಲಾಂಶವಾಗಿದೆ. ಶರೀರದ ಜಲಾಂಶದ ಕೊರತೆಯು ಮಿದುಳನ್ನು ಬಾಧಿಸುತ್ತದೆ. ಶರೀರಕ್ಕೆ ಆಕ್ಸಿಜನ್ ದೊರೆಯದಿದ್ದಾಗ ಆಕ್ಸಿಜನ್‌ನ ಒಟ್ಟು ಉಲಯೋಗವನ್ನು ಕಡಿಮೆ ಮಾಡಲು ಮತ್ತು ಶರೀರದ ಇತರ ಕಡೆಗಳ ಆಕ್ಸಿಜನ್‌ನನ್ನು ಮಿದುಳಿಗೆ ತಿರುಗಿಸಿ ಬಿಡಲು ವ್ಯವಸ್ಥೆಯಿದೆ. ವಿಷಯ ಸಂಗ್ರಹಣಾ ವ್ಯವಸ್ಥೆಯಿರುವುದು ಶರೀರದ ನರವ್ಯೂಹದಲ್ಲಾಗಿದೆ. ಅವು ದೇಹದ ನಾನಾ ಕಡೆಗಳಿಂದ ಸದಾ ಸಂದೇಶಗಳನ್ನು ರವಾನಿಸುತ್ತಿರುತ್ತವೆ. ಅವುಗಳಲ್ಲಿ ಶೇ. 90ರಷ್ಟನ್ನೂ ಮಿದುಳು ತಿರಸ್ಕರಿಸಿ ಬಿಡುತ್ತದೆ. ಮಹತ್ವದವುಗಳನ್ನು ಮಾತ್ರ ದೇಹದ ಆಡಳಿತ ಕೇಂದ್ರವಾದ ಮಿದುಳು ಪರಿಗಣಿಸುತ್ತದೆ. ಮನುಷ್ಯ ಶರೀರದ ಹೆಚ್ಚಿನ ಕೋಶಗಳ ಬೆಳವಣಿಗೆಯು ಒಂದು ಪ್ರಾಯದವರೆಗೆ ಮಾತ್ರವಿರುತ್ತದೆ. ಮತ್ತೆ ಅದು ನಿಲ್ಲುತ್ತದೆ. ಆದರೆ ನರಕೋಶಗಳು ಬದುಕಿರುವವರೆಗೆ ಬೆಳೆಯುತ್ತಿರುತ್ತವೆ. ಮನುಷ್ಯನ ಅವಯವಗಳಲ್ಲಿ ಕಣ್ಣು ಬೆಳವಣಿಗೆಯಾಗುವುದಿಲ್ಲ. ಮಗು ಎಷ್ಟೇ ಬೆಳೆದರೂ ಕಣ್ಣು ಮಾತ್ರ ತಾಯಿ ಪ್ರಸವಿಸಿದಾಗ ಇರುವಷ್ಟೇ ದೊಡ್ಡದಾಗಿರುತ್ತದೆ.
ಮಾನವ ದೇಹದ ಸಕಲ ಕಾರ್ಯಾಚರಣೆಗಳ ನಿಯಂತ್ರಣವಿರುವುದು ಮಿದುಳಿನಲ್ಲಾಗಿದೆ. ಸುಮಾರು ಒಂದೂಕಾಲು ಕಿ. ಗ್ರಾಂ. ತೂಕವಿರುವ ಮಿದುಳಿನಲ್ಲಿ ಮೂರು ಭಾಗಗಳಿವೆ. ಅತೀ ದೊಡ್ಡ ಭಾಗವಾದ ಸೆರಿಬ್ರಮ್ ಸುಮಾರು 2200 ಚದರ ಸೆಂ. ಮೀ. ದೊಡ್ಡದಿದೆ. ಅದನ್ನು ಮಡಿಕೆಗಳಾಗಿ ಸುರುಟಿಡಲಾಗಿದೆ. ಮನಃ ಪೂರ್ವಕವಲ್ಲದ ಕೆಲಸಗಳನ್ನು ಮಾಡಲು ಅದು ನೆರವಾಗುತ್ತದೆ. ಚಿಂತಿಸಲು, ವಿಷಯಗಳನ್ನು ಮನವರಿಕೆ ಮಾಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದು ಸೆರಿಬ್ರಮ್‌ನ ಮೂಲಕವಾಗಿದೆ. ನೆನಪುಗಳನ್ನು ಸಂರಕ್ಷಿಸುವುದು ಕೂಡಾ ಇದುವೇ. ಸೆರಿಬ್ರಮ್‌ನ ಅಡಿ ಭಾಗದಲ್ಲಿರುವ, ಸೆರಿಬ್ರಮ್‌ನ ಎರಡನೇ ಒಂದರಷ್ಟು ದೊಡ್ಡದಾದ ಸೆರಿಬೇಲ್ಲಮ್ ಎಂಬುದಾಗಿದೆ ಎರಡನೇ ಭಾಗ. ಇದು ಶರೀರದ ಸಮತೋಲನವನ್ನು ನೆಲೆಗೊಳಿಸುತ್ತದೆ. ಲೋವರ್ ಬ್ರೈನ್ ಎಂಬ ಮೂರನೇ ಭಾಗಕ್ಕೆ ಪ್ರಧಾನವಾದ ಮೂರು ಭಾಗಗಳಿವೆ. ಒಂದನೆಯದು ತಲಾಮಸ್. ಇದು ಬಿಸಿ, ತಂಪು ಹಾಗೂ ನೋವುಗಳ ಅನುಭವವುಂಟು ಮಾಡುತ್ತದೆ. ಇದು ಇಲ್ಲದಿದ್ದರೆ ಕಾಲುಗಳು ಸುಟ್ಟುಉ ಹೋದರೂ ಗೊತ್ತಾಗಲಿಕ್ಕಿಲ್ಲ. ಕೇವಲ ನಾಲ್ಕು ಗ್ರಾಂನಷ್ಟು ಮಾತ್ರವಿರುವ ಹೈಪೋತಲಾಮಸ್ ಎಂಬುದು ಎರಡನೆಯದು. ಇದು ಹಸಿವು, ಬಾಯಾರಿಕೆಗಳ ಅರಿವು ಮೂಡಿಸುತ್ತದೆ. ಮೂರನೇ ಭಾಗವಾದ ಮೆಡುಲ್ಲ ಒಬ್ಲಾಂಗೇಟ್ಟ ಸ್ಪೈನಲ್‌ಕೋಡ್‌ನ ಮೇಲಕ್ಕಿದೆ. ಹೃದಯ ಮಿಡಿತ, ಹೊಟ್ಟೆಯ ಚಲನೆ, ಶ್ವಸನ, ರಕ್ತದೊತ್ತಡ ಇತ್ಯಾದಿಗಳನ್ನು ನಿಯಂತ್ರಿಸುವುದು ಈ ಭಾಗವಾಗಿದೆ. ನಮಗೆ ನೋವಿನ ಅರಿವಾಗುವುದು ಮಿದುಳಿನ ಮೂಲಕವೆಂದೇ ತಿಳಿದೆವಷ್ಟೇ. ಆದರೆ ಮಿದುಳಿನ ನೋವನ್ನು ತಿಳಿಯಲಿಕ್ಕಾಗಲಿ, ನಮಗೆ ತಿಳಿಸಲಿಕ್ಕಾಗಲಿ ಅದಕ್ಕೆ ಸಾಧ್ಯವಿಲ್ಲ.
ಕುತ್ತಿಗೆಯ ಕೆಳಗಿರುವ ಅವಯವಗಳೊಂದಿಗೆ ಮಿದುಳನ್ನು ಜೋಡಿಸುವುದು ಸುಷುಮ್ನಾನಾಡಿ (spinal cord)ಯಾಗಿದೆ. ಇದರಿಂದ ಹೊರಟು ಬಳ್ಳಿಗಳಂತೆ ಹರಡಿರುವ ನಾಡಿಗಳು ಶರೀರವಿಡೀ ತಲುಪುತ್ತವೆ. ಸಂದೇಶಗಳು ಹಸ್ತಾಂತರಗೊಳ್ಳುವುದು ಅವುಗಳ ಮೂಲಕವಾಗಿದೆ.
ಇಷ್ಟೆಲ್ಲಾ ಪ್ರಯಾಸಕರವಾದ ಈ ಕ್ರಿಯೆಗಳೆಲ್ಲಾ ಹೇಗೆ ಉಂಟಾಯಿತು, ಯಾರು ಮಾಡಿದರು ಎಂದು ಇದನ್ನೆಲ್ಲಾ ಕಂಡು ಹಿಡಿದ ಮಾನವನು ಯಾಕಾಗಿ ಚಿಂತಿಸುವುದಿಲ್ಲ? ಮನುಷ್ಯ ಶರೀರದಲ್ಲಿ ಇದನ್ನೆಲ್ಲಾ ಈ ರೀತಿಯಾಗಿ ಜೋಡಿಸಿದವರು ಯಾರಾದರೂ ವಿಜ್ಞಾನಿಗಳೇ? ಜೀವಶಾಸ್ತ್ರ ಪರಿಣತರೇ ? ದೇವಮಾನವರೇ? ದೈವಾಂಶ ಸಂಭೂತರೇ? ಪವಾಡ ಪುರುಷರೇ? ಹೂ, ಹಣ್ಣು, ಹಣ, ಚಿನ್ನಗಳಿಂದ ಪೂಜಿಸಲ್ಪಡುವ ದೇವ, ದೇವಿಯರ ವಿಗ್ರಹಗಳೇ? ದರ್ಗಾಗಳಲ್ಲಿ ಮಲಗಿರುವ ಅವುಲಿಯಾಗಳೇ? ಜಿನ್ನ್‌ಗಳೇ, ಮಲಕ್‌ಗಳೇ? ಯಾರೂ ಅಲ್ಲ. ಆಳವಾದ ಚಿಂತನೆಯೊಂದಿಗೆ ಅಧ್ಯಯನ ಮಾಡಿದರೆ ಅದು ಭೂಮ್ಯಾಕಾಶಗಳನ್ನೂ ಅವುಗಳಲ್ಲಿರುವ ಸಕಲ ಚರಾಚರಗಳನ್ನೂ ಸೃಷ್ಟಿಸಿದ ಸರ್ವೇಶ್ವರನಾದ ಅಲ್ಲಾಹು ಎಂಬ ಸತ್ಯ ವೇದ್ಯವಾಗುತ್ತದೆ. ಆದರೆ ಹಾಗೆ ಚಿಂತಿಸಲು ಯಾರೂ ಸಿದ್ಧರಿಲ್ಲ. ಮನುಷ್ಯನ ಅಹಂಭಾವ ಅದಕ್ಕೆ ಒಪ್ಪುವುದಿಲ್ಲ. ಮಾನವನು ತನ್ನ ಸೃಷ್ಟಿಕರ್ತನೊಡನೆ ತೋರಿಸುತ್ತಿರುವುದು ಅತೀ ದೊಡ್ಡ ಕೃತಘ್ನತೆಯಾಗಿದೆ. ನಿಮ್ಮಲ್ಲೇ ನಿಮಗೆ ದೃಷ್ಟಾಂತಗಳಿವೆ ಎಂಬ ಅಲ್ಲಾಹನ ಸಂದೇಶ ಅದೆಷ್ಟು ಮಾರ್ಮಿಕವಾದುದು. ಶರೀರದ ಪ್ರತಿಯೊಂದು ಅವಯವಗಳು ಮತ್ತು ಅವುಗಳ ಕಾರ್ಯಾಚರಣೆಗಳ ಕಡೆಗೆ ಕಣ್ಣೋಡಿಸಿದರೆ ಮಾನವನು ದಿಗ್ಭ್ರಾಂತನಾಗುವನು.
ಎಂದಿಗೂ ಎಲ್ಲಿಯೂ ಸ್ಥಗಿತಗೊಳ್ಳದೆ ಓಡಿಕೊಂಡಿರುವ ಮನುಷ್ಯ ಶರೀರದ ರಕ್ತ ಒಂದು ಮಹಾ ಅದ್ಭುತವಾಗಿದೆ. ರಕ್ತವು ಶರೀರದಲ್ಲಿ ಬಹಳಷ್ಟು ಕೆಲಸಗಳನ್ನು ನಿರ್ವಹಿಸುತ್ತದೆ. ಶ್ವಾಶಕೋಶಗಳಿಂದ ಆಕ್ಸಿಜನ್‌ನನ್ನು ತರುವುದು, ಸಣ್ಣ ಕರುಳಿನಿಂದ ಪೋಷಕಾಂಶಗಳನ್ನು ಸಂಗ್ರಹಿಸುವುದು, ಕಿಡ್ನಿಗಳಿಗೆ ಯೂರಿಯಾ ತಲುಪಿಸುವುದು ಇತ್ಯಾದಿ ಕೆಲಸಗಳನ್ನು ರಕ್ತವು ಸದಾ ನಿರ್ವಹಿಸುತ್ತಿರುತ್ತದೆ. ರಕ್ತಕ್ಕೆ ದ್ರಾವಕಾವಸ್ಥೆ ನೀಡುವುದು ಅದರ ಪ್ಲಾಸ್ಮವಾಗಿದೆ. ಮಾತ್ರವಲ್ಲ ರಕ್ತದಲ್ಲಿ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಪ್ಲೇಟ್ಟ್‌ಲೆಟ್ಟ್‌ಗಳು ಮುಂತಾದವುಗಳೂ ಇವೆ. ಶರೀರ ಕೋಶಗಳಿಗೆ ಆಕ್ಸಿಜನನ್ನು ತಲುಪಿಸುವುದು ಕೆಂಪು ರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್ ಎಂಬ ವಸ್ತುವಾಗಿದೆ. ಬಿಳಿ ರಕ್ತ ಕಣಗಳು ಶರೀರದ ಪ್ರತಿರೋಧ ಸೇನಾನಿಗಳಾಗಿವೆ. ಹೊರಗಿನಿಂದ ಬರುವ ರೋಗಾಣುಗಳೊಂದಿಗೆ ಅದು ಯುದ್ಧ ಮಾಡುತ್ತವೆ. ಬಿಳಿ ರಕ್ತ ಕಣಗಳ ಸಂಖ್ಯೆ ಕೆಂಪು ರಕ್ತ ಮತ ಕಡಿಮೆ.
ಸಾವಿರ ಕೆಂಪು ರಕ್ತ ಕಣಗಳಿಗೆ ಒಂದು ಬಿಳಿಯ ರಕ್ತ ಕಣದಂತಿರುತ್ತದೆ. ಎಲುಬುಗಳೊಳಗೆ ನಿರ್ಮಿಸಲ್ಪಡುವ ಬಿಳಿ ರಕ್ತ ಕಣಗಳ ಸಂಖ್ಯೆ ರೋಗಾಣುಗಳು ಶರೀರದೊಳಗೆ ಪ್ರವೇಶಿಸಿದಾಗ ಅವಶ್ಯಕತೆಗನುಸಾರವಾರ ಹೆಚ್ಚಾಗುತ್ತವೆ. ದೇಹದಲ್ಲಿ ಗಾಯವಾದಾಗ ರಕ್ತ ಹರಿಯದಂತೆ ಹೆಪ್ಪುಗಟ್ಟಿಸುವುದು ಪ್ಲೇಟ್‌ಲಟ್ಟ್‌ಗಳಾಗಿವೆ. ಇವು ಪರಸ್ಪರ ಅಂಟಿಕೊಂಡು ರಕ್ತ ಹೊರ ಸೂಸದಂತೆ ತಡೆಯುತ್ತವೆ.
ಹೃದಯದಿಂದ ರಕ್ತವನ್ನು ಕೊಂಡುಹೋಗುವುದು ನಳಿಗೆಗಳಂತಹ ರಕ್ತನಾಳಗಳ ಮೂಲಕವಾಗಿದೆ. ಅವುಗಳಿಗೆ ಧಮನಿಗಳು ಎನ್ನಲಾಗುತ್ತದೆ. ಕೋಶಗಳಿಗೆ ಆಕ್ಸಿಜನ್ ನೀಡಿ, ಕೋಶಗಳು ಹೊರ ಹಾಕುವ ಮಾಲಿನ್ಯಗಳೊಂದಿಗೆ ಹಿಂತಿರುಗುವ ರಕ್ತದ ಪಯಣ “ಸಿರ” ಎಂಬ ಮಲಿನ ರಕ್ತನಾಡಿಗಳ ಮೂಲಕವಾಗಿದೆ. ರಕ್ತವು ಹೃದಯದಿಂದ ಹೋಗುವುದು ಮತ್ತು ಬರುವುದು ಬೇರೆ ಬೇರೆ ನಾಡಿಗಳ ಮೂಲಕವಾಗಿದೆ. ಹಾಗಾಗಿ ಶುದ್ಧ ರಕ್ತ ಮತ್ತು ಅಶುದ್ಧ ರಕ್ತ ಪರಸ್ಪರ ಬೆರೆಯುವುದಿಲ್ಲ. ಮಾನವನ ರಕ್ತವು ಹಲವು ವಿಧಗಳಲ್ಲಿವೆ. ರಕ್ತದಲ್ಲಿ ಆಂಟಿ ಜನ್ ಎಂಬ ವಸ್ತುವಿದೆ. ಅದು ರಕ್ತದಲ್ಲಿ ಗುಂಪುಗಳನ್ನುಂಟು ಮಾಡುತ್ತದೆ. ಎ. ಆಂಟಿಜನ್ ಇರುವವು ಎ. ಗ್ರೂಪ್, ಬಿ. ಆಂಟಿಜನ್ ಇರುವವು ಬಿ ಗ್ರೂಪ್, ಎರಡೂ ಇರುವವು ಎ. ಬಿ. ಗ್ರೂಫ್ ಮತ್ತು ಎರಡೂ ಇಲ್ಲದವು ಓ. ಗ್ರೂಪ್. ಪ್ರಾಣ ವಾಯುವಾದ ಆಕ್ಸಿಜನ್ ಬೆರೆತ ರಕ್ತವೇ ಶುದ್ಧ ರಕ್ತ. ಆಕ್ಸಿಜನ್ ಸಹಿತ ಹೊರಗಿನಿಂದ ಬರುವ ರಕ್ತವು ನೇರವಾಗಿ ಹೃದಯದ ಎಡ ಭಾಗದ ಮೇಲೆ ಇರುವ ಓರಿಕ್‌ಳ್ ಎಂಬ ಕೊಠಡಿಗೆ ಪ್ರವೇಶಿಸುತ್ತದೆ. ಅಲ್ಲಿಂದ ಆ ರಕ್ತವು ಸ್ವಲ್ಪ ಕೆಳಗಿರುವ ವೆಂಟ್ರಿಕ್‌ಳ್ ಎಂಬ ಕೊಠಡಿಗೆ ಪ್ರವೇಶಿಸುತ್ತದೆ. ಹೃದಯ ವಿಕಸಿಸುವಾಗ ರಕ್ತವು ಓರಿಕ್‌ಳ್‌ಗಳಲ್ಲಿ ತುಂಬುತ್ತದೆ. ಉಸಿರಾಟದ ಮೂಲಕ ಆಕ್ಸಿಜನ್ ಶ್ವಾಸಕೋಶಗಳಿಗೆ ತಲುಪುತ್ತದೆ. ಮೂಗಿನಿಂದಾಗ ಶ್ವಾಸನಾಳಗಳ ಮೂಲಕ ಒಳ ಬರುವ ಗಾಳಿಯಿಂದ ಸೋಸಿ ತೆಗೆಯುವ ಆಕ್ಸಿಜನ್‌ನನ್ನು ಶ್ವಾಸಕೋಶವು ರಕ್ತಕ್ಕೆ ಒದಗಿಸುತ್ತದೆ. ರಕ್ತವು ನೀಡುವ ಕಾರ್ಬನ್ ಡೈ ಆಕ್ಸೈಡ್ ಶ್ವಾಸನಾಳದಿಂದ ಬಂದು ಮೂಗಿನ ರಂಧ್ರಗಳ ಮೂಲಕ ಹೊರ ಬರುತ್ತದೆ. ಕ್ಯಾನ್ಸರ್ ಬಾಧಿಸದ ಶರೀರದ ಏಕೈಕ ಭಾಗ ಹೃದಯವಾಗಿದೆ.
“ನಿಜವಾಗಿಯೂ ನಾವು ಮಾನವನನ್ನು ಅತ್ಯುತ್ತಮ ಮಾದರಿಯಲ್ಲಿ ಸೃಷ್ಟಿಸಿದ್ದೇವೆ ಎಂದು ಅಲ್ಲಾಹು ಹೇಳಿದ್ದು ಅದೆಷ್ಟು ಸತ್ಯ! ಮನುಷ್ಯ ಶರೀರದ ಕುರಿತು ಏನಾದರೊಂದು ಕೊರತೆಯನ್ನು ಹೇಳಲು ಯಾರಿಗಾದರೂ ಸಾಧ್ಯವಿದೆಯೇ? ಮನುಷ್ಯನ ಯಾವುದಾದರೂ ಅವಯವವನ್ನು ಇದ್ದಲ್ಲಿಂದ ತೆಗೆದು ಬೇರೆಡೆಗೆ ಸ್ಥಳಾಂತರಿಸಲಾದೀತೇ? ಪ್ರತೀಯೊಂದನ್ನು ಸೂಕ್ತವಾದ ಸ್ಥಳದಲ್ಲೇ ಅಳವಡಿಸಲಾಗಿದೆ. ಕಣ್ಣಿರುವ ಸ್ಥಳವು ಈಗಿರುವುದಕ್ಕಿಂತ ಸೌಕರ್ಯ ಹಾಗೂ ಸೌಂದರ್ಯವಿರುವ ಸ್ಥಳ ಬೇರೆಲ್ಲಿದೆ? ಅದೇ ರೀತಿ ಮೂಗು, ಕಿವಿ, ಕೈ, ಕಾಲು, ಕೈ ಬೆರಳುಗಳು, ಕಾಲಿನ ಬೆರಳುಗಳನ್ನು ಜೋಡಿಸಲಾದ ವ್ಯವಸ್ಥೆಯನ್ನು ಬದಲಾಯಿಸಲಾದೀತೇ? ಬೆರಳುಗಳ ಮೂರು ಕೊಂಡಿಗಳನ್ನು ಎರಡಾಗಿ ಮಾಡಿದರೇನಾದೀತು ಸ್ಥಿತಿ? ಮಾಡಿದರೆ ಬೆರಳುಗಳಿಂದ ಮುಂಚಿನಂತೆ ಕೆಲಸ ಮಾಡಲಾದೀತೇ? ಕಾಲಿನ ಮಂಡಿಗಳನ್ನು ಹಿಂದಕ್ಕೆ ಮಡಚುತ್ತೇವೆ. ಅದನ್ನು ಮುಂದಕ್ಕೆ ಮಡಚುವಂತೆ ಮಾಡಿದರೇನಾಗಬಹುದು? ಅದೇ ರೀತಿ ಕೈಯ ದಂಡುಗಳು ಮುಂದಕ್ಕೆ ಮಡಚುತ್ತವೆ. ಅದನ್ನು ಹಿಂದಕ್ಕೆ ಮಡಚುವಂತೆ ಮಾಡಿದರೇನಾಗಬಹುದು? ಆದ್ದರಿಂದ ಮನುಷ್ಯನಿಗೆ ಅಲ್ಲಾಹು ನೀಡಿದ್ದಕ್ಕಿತ ಉತ್ತಮವಾದ ಹಾಗೂ ಸುಂದರವಾದ ರೂಪ ಮತ್ತು ಅಂಗಾಂಗಗಳ ವ್ಯವಸ್ಥೆಗಳನ್ನು ಬೇರೆ ಯಾರಿಗಾದರೂ ಮಾಡಲು ಸಾಧ್ಯವೇ?
ಕೆಲವೊಂದು ವಿಚಾರಗಳ ಕುರಿತು ಮಾತ್ರವೇ ಇಲ್ಲಿ ವಿವರಿಸಲಾಗಿದೆ. ಸಮುದ್ರದಂತೆ ಹರಡಿರುವ ಮಾನವನೆಂ ಯಂತ್ರದ ಆಂತರ್ಯದ ಆಳಗಳ ಕಡೆಗೆ ಇಂದು ಸಹ ಮಾನವನಿಗೆ ತಲುಪಲಾಗಲಿಲ್ಲ. ಆದರೂ ಆತ ಜಗತ್ತನ್ನೇ ಅಧೀನಗೊಳಿಸಿದ್ದೇನೆಂ ಭಾವಿಸಿಕೊಂಡಿದ್ದಾನೆ. ಮಾನವನ ಹೊರತಾದ ಇತರ ಜೀವಿಗಳ ಸೃಷ್ಟಿ ಮತ್ತು ಅವುಗಳ ಜೀವನದ ವ್ಯವಸ್ಥೆಗಳು ಅದೆಷ್ಟು ಅದ್ಭುತಕರ. ಇವೆಲ್ಲಾ ಅಲ್ಲಾಹನ ಏಕತ್ವ ಮತ್ತು ಆರಾಧ್ಯತೆಯ ದೃಷ್ಟಾಂತಗಳಾಗಿವೆ. ಆದರೆ ಮಾನವನು ಪ್ರಪಂಚದ ಈ ಎಲ್ಲಾ ಅದ್ಭುತಗಳತ್ತ ಕಣ್ಣೋಡಿಸಿ ಚಿಂತಿಸುವುದಿಲ್ಲ. ಅಹಂಭಾವವು ಮಾನವನನ್ನು ಅಧಮನನ್ನಾಗಿ ಮಾಡುತ್ತದೆ. ಶೈತಾನನು ಅವನ ಸಂಗಾತಿಯಾಗುತ್ತಾನೆ. ಹಾಗೆ ಅವನು ತನ್ನ ಸೃಷ್ಟಿಕರ್ತನನ್ನು ಕಡೆಗಣಿಸುತ್ತಾನೆ.
ಅಲ್ಲಾಹು ಹೇಳುವುದನ್ನು ನೋಡಿರಿ:
“ಆಕಾಶಗಳಲ್ಲೂ ಭೂಮಿಯಲೂ ಇರುವ ದೃಷ್ಟಾಂತಗಳೆಷ್ಟು? ಅವುಗಳ ಬಳಿಯಿಂದಾಗಿ ಅವರು(ಜನರು) ಸಂಚರಿಸುತ್ತಿರುತ್ತಾರೆ. ಆದರೆ ಅವರು ಅವುಗಳ ಬಗ್ಗೆ (ನಿರ್ಲಕ್ಷ್ಯದಿಂದ) ತಿರುಗಿ ಬಿಡುತ್ತಾರೆ. ಅವರಲ್ಲಿ ಅಧಿಕ ಮಂದಿಯೂ ಅಲ್ಲಾಹನೊಂದಿಗೆ ಸಹಭಾಗಿಗಳನ್ನು ಮಾಡಿಕೊಂಡವರಾಗಿ ವಿನಾ (ಅವನಲ್ಲಿ) ವಿಶ್ವಾಸವಿಡುವುದಿಲ್ಲ. ಹಾಗಾದರೆ ಅಲ್ಲಾಹನ ಶಿಕ್ಷೆಯಿಂದ ಮುಚ್ಚಿ ಬಿಡುವ ಯಾವುದಾದರೂ ಘಟನೆಯು ಅವರಿಗೆ ಬರುವುದರ ಕುರಿತು ಅಥವಾ ಅವರು ಅರಿಯದಂತೆಯೇ ಅವರಿಗೆ ಅಂತ್ಯಸಮಯವು ಹಠಾತ್ತನೇ ಬಂದು ಬಿಡುವುದರ ಕುರಿತು ಅವರು ನಿರ್ಭಯರಾಗಿರುವರೇ?”
(ಕುರ್‌ಆನ್ 12: 105-107).