ಹದೀಸ್ಗಳ ಉಲ್ಲೇಖದ ಜೊತೆಗೆ ಬುಖಾರಿ, ಮುಸ್ಲಿಮ್, ಅಬೂ ದಾವೂದ್ ಮುಂತಾದ ಹೆಸರುಗಳ ಉಲ್ಲೇಖ ಸಾಮಾನ್ಯ. ಅದು ಹದೀಸ್ಗಳನ್ನು ಸಂಗ್ರಹಿಸಿ ಗ್ರಂಥಗಳಲ್ಲಿ ಶೇಖರಿಸಿದ ಇಮಾಮರುಗಳ ಹೆಸರೆಂದು ಎಲ್ಲರಿಗೂ ಗೊತ್ತು. ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು ಬಹಳ ಕಡಿಮೆ. ಸಂಕ್ಷಿಪ್ತವಾಗಿ ಅಂತಹ ಹತ್ತು ಮಂದಿಯ ಪರಿಚಯವನ್ನು ಇಲ್ಲಿಕೊಡಲಾಗಿದೆ.
-
ಇಮಾಮ್ ಬುಖಾರಿ :
ಹಿ. 194. ಖುರಾಸಾನ್ ದೇಶದ ಬುಖಾರ ಎಂಬಲ್ಲಿ ಜನನ. ಬುಖಾರಿ ಅಂದರೆ ಬುಖಾರಾದವರು ಎಂದರ್ಥ. ಅವಿಭಜಿತ ಸೋವಿಯತ್ ರಷ್ಯಾಕ್ಕೆ ಸೇರಿದ್ದ ಊರು ಇದು. ಹೆಸರು ಮುಹಮ್ಮದ್. ತಂದೆಯ ಹೆಸರು ಇಸ್ಮಾಈಲ್. ಆದ್ದರಿಂದ ಮುಹಮ್ಮದ್ ಎಂಬುದು ಪೂರ್ಣ ನಾಮ.
ಬಾಲ್ಯದಲ್ಲೇ ತಂದೆಯವರು ತೀರಿದ್ದರು. ಬುಖಾರಿಯವರಿಗೆ ಆಗಲೇ ಹದೀಸ್ನಲ್ಲಿ ವಿಶೇಷ ಆಸಕ್ತಿ. 16ನೇ ವಯಸ್ಸಿನಲ್ಲೇ ಅಂದು ಲಭ್ಯವಿದ್ದ ಹದೀಸ್ ಸಂಗ್ರಹಗಳ ಎಲ್ಲಾ ಕಡತಗಳ ಕಂಠಪಾಠ. ಮತ್ತೆ ಹದೀಸ್ಗಳಿಗಾಗಿ ಹುಡುಕಾಟ. 18ನೇ ವಯಸ್ಸಿನಲ್ಲೇ ಮಕ್ಕಾಕ್ಕೆ ಹೋಗಿ ಹಜ್ ನಿರ್ವಹಿಸಿ ಅಲ್ಲೇ ತಂಗಿ ಹದೀಸ್ಬಲ್ಲವರನ್ನು ಹುಡುಕಿ ಸಂಗ್ರಹಿಸುವುದರಲ್ಲಿ ನಿರತರಾದರು.
ಹದೀಸ್ ಸಿಕ್ಕಿದರೆ ಅದನ್ನು ಹೇಳುದವರು ಮತ್ತು ಅವರಿಗೆ ಯಾರು ಹೇಳಿದ್ದು, ಆ ವ್ಯಕ್ತಿಗೆ ಹೇಳಿದ ನಾಲ್ಕನೇ ವ್ಯಕ್ತಿ ಯಾರು? ಆ ನಾಲ್ಕನೇ ವ್ಯಕ್ತಿಗೆ ಯಾರು ಹೇಳಿದ್ದರು ಎಂದು ತಿಳಿಯುತ್ತಾ ಪ್ರಸಾದಿ(ಸ)ರವರ ವರೆಗೆ ತಲುಪುವ ವರದಿಗಾರರ ಸತ್ಯಸಂಧತೆ, ಧರ್ಮನಿಷ್ಠೆಯ ವಿಷಯಗಳಲ್ಲೂ ಆಳವಾದ ಅಧ್ಯಯನ ಹೀಗೆ ಸಾವಿರಕ್ಕೂ ಮಿಕ್ಕಿದ ಹದೀಸ್ ವಿದ್ವಾಂಸರಿಂದ ಸಂಗ್ರಹ ಹಾಗೂ ಕೂಲಂಕುಷ ತಪಾಸಣೆ. ಅತ್ಯಂತ ಯೋಗ್ಯವೆಂದು ಮನವರಿಕೆಯಾದ ಹದೀಸ್ಗಳನ್ನು ಬರೆದ ಗ್ರಂಥವೇ ಸಹೀಹುಲ್ ಬುಖಾರಿ. 7275 ಹದೀಸ್ಗಳಿರುವ ಈ ಗ್ರಂಥ ಪೂರ್ಣವಾಗುವಾಗ 15 ವರ್ಷ ಹಿಡಿದಿತ್ತು. ಆದ್ದರಿಂದ ಸಹೀಹುಲ್ ಬುಖಾರಿ ಗ್ರಂಥವು ಅತ್ಯಂತ ವಿಶ್ವಾಸ ಯೋಗ್ಯವೆನಿಸಿತು. ಕುರ್ಆನ್ ಬಿಟ್ಟರೆ ಭೂಮಿಯಲ್ಲಿರುವ ಅತ್ಯಂತ ವಿಶ್ವಾಸಯೋಗ್ಯ ಗ್ರಂಥ ಎಂಬ ಸ್ಥಾನವನ್ನು ಈ ಗ್ರಂಥ ಪಡೆಯಿತು. ಸಮಕಾಲೀನ ವಿದ್ವಾಂಸರಿಂದ ಅವರಷ್ಟು ಮುಕ್ತ ಪ್ರಶಂಸೆಗೆ ಪಡೆದ ವಿದ್ವಾಂಸರು ಬೇರಿಲ್ಲ.
ಹದೀಸ್ ಸಂಗ್ರಹಕ್ಕಾಗಿ ಇಮಾಮ್ ಬುಖಾರಿ (ರ)ರವರು ಬಹಳ ಪರಿಶ್ರಮ ಪಟ್ಟರು. ಒಂದು ಹದೀಸ್ಗಾಗಿ ನೂರಿನ್ನೂರು ಮೈಲುಗಳಷ್ಟು ದೂರಕ್ಕೆ ನಡೆದುಕೊಂಡು ಹೋದದ್ದೂ ಉಂಟು.
ಹುಟ್ಟೂರು ಬುಖಾರಾದಲ್ಲೇ ನಿಧನ. ವಯಸ್ಸು 62, ಹಿಜರಿ 256ನೇ ವರ್ಷ ಈದುಲ್ ಫಿತ್ರ್ ದಿನದಂದಾಗಿತ್ತು ಮರಣ.
-
ಇಮಾಮ್ ಮುಸ್ಲಿಮ್:
ನೈನಾಬೂರಿನಲ್ಲಿ ಜನನ (ಹಿ. 204). ತಾಯಿ ತಂದೆಯವರು ಬಹಳ ಧರ್ಮಶ್ರದ್ಧೆಯುಳ್ಳವರಾಗಿದ್ದರು. ಬಾಲ್ಯದಿಂದಲೇ ಹದೀಸ್ ಕಲಿಕೆ ಹಾಗೂ ಸಂಗ್ರಹ ಕಾರ್ಯ. ಇಮಾಮ್ ಬುಖಾರಿಯವರಂತೆಯೇ ಸೂಕ್ಷ್ಮತೆ ಮತ್ತು ಜಾಗ್ರತೆ ಮಾತ್ರವಲ್ಲ, ಅವರ ಶಿಷ್ಯತ್ವವನ್ನು ಪಡೆದಿದ್ದರು. ಸಹೀಹುಲ್ ಬುಖಾರಿಗೆ ಬಹಳ ಸಮೀಪದ ಸ್ಥಾನವನ್ನೇ ಇವರ “ಸಹೀಹುಲ್ ಮುಸ್ಲಿಮ್” ಸಂಗ್ರಹ ಗ್ರಂಥವೂ ಪಡೆಯಿತು. ವರದಿಗಾರರ ಅರ್ಹತೆಗೆ ಬುಖಾರಿಯವರು ಅನುಸರಿಸಿದ ಕ್ರಮವನ್ನೇ ಸರಿ ಸುಮಾರು ಇವರೂ ಅನುಸರಿಸಿದ್ದರು. ವರದಿಗಾರರ ಪರಂಪರೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ ತನಗೆ ವರದಿ ಕೊಟ್ಟ ವ್ಯಕ್ತಿಯ ಸಮಕಾಲೀನನಾಗಿರಬೇಕು ಹಾಗೂ ಆ ವ್ಯಕ್ತಿಯಿಂದ ಕಲಿತಿರುವುದು ಕೂಡಾ ರುಜುವಾತಾಗಿರಬೇಕು ಎಂಬುದು ಇಮಾಮ್ ಬುಖಾರಿಯವರ ನಿಬಂಧನೆಗಳಲ್ಲಿ ಒಂದಾಗಿತ್ತು. ಉದಾ: ತನಗೆ ಒಂದು ಹದೀಸನ್ನು ಹೇಳಿದ ಅಬ್ದುಲ್ಲಾಹ್ ಎಂಬ ವ್ಯಕ್ತಿಯು ತನಗೆ ಈ ಹದೀಸನ್ನು ಉರ್ವತ್ ಎಂಬವರು ಹೇಳಿದ್ದಾರೆ ಎನ್ನುತ್ತಾರೆ. ಆಗ ಬುಖಾರಿಯವರು ಈ ಅಬ್ದುಲ್ಲಾಹ್ರವರು ಉರ್ವತ್ರವರು ಜೀವಿಸಿದ್ದ ಕಾಲದಲ್ಲೇ ಜೀವಿಸಿದ ವ್ಯಕ್ತಿ ಹೌದೋ ಅಲ್ಲವೋ ಎಂಬುದನ್ನು ಅಧ್ಯಯನ ಮಾಡುತ್ತಾರೆ. ಹೌದು ಎಂದು ಖಚಿತವಾದರೆ ಅಬ್ದುಲ್ಲಾಹ್ ರವರು ಉರ್ಬತ್ರಿಂದ ಹದೀಸ್ ಕಲಿತದ್ದು ಹೌದೋ ಅಲ್ಲವೋ ಎಂಬುದನ್ನು ಅಧ್ಯಯನ ಮಾಡುತ್ತಾರೆ. ಹೌದು ಎಂದು ಅಬ್ದುಲ್ಲಾಹ್ರವರು ಆ ಹದೀಸನ್ನು ಉಲ್ಲೇಖಿಸುತ್ತಾರೆ. ಅಬ್ದುಲ್ಲಾಹ್ರವರು ಉರ್ವತ್ರ ಸಮಕಾಲೀನರು ಹೌದೆಂದು ಗೊತ್ತಾದರೂ ಅಬ್ದುಲ್ಲಾಹ್ರವರು ಉರ್ವತ್ರಿಂದ ಹದೀಸ್ ಕಲಿತದ್ದು ಹೌದು ಎಂಬ ವಿಚಾರ ಖಚಿತವಾಗದೆ ಇದ್ದಲ್ಲಿ ಆ ಹದೀಸನ್ನು ಸಹೀಹುಲ್ ಬುಖಾರಿಗೆ ಸೇರಿಸುತ್ತಿರಲಿಲ್ಲ. ಆದರೆ ಇಮಾಮ್ ಮುಸ್ಲಿಮ್ರವರು ಈ ನಿಬಂಧನೆಯಲ್ಲಿ ಸ್ವಲ್ಪ ರಿಯಾಯಿತಿ ತೋರಿದ್ದರು. ಮೇಲಿನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಅಬ್ದುಲ್ಲಾಹ್ ಎಂಬವರು ಉರ್ವತ್ರವರ ಕಾಲದಲ್ಲಿ ಜೀವಿಸಿದ್ದವರು ಎಂದು ಖಚಿತವಾದರೆ ಅವರಿಗೆ ಸಾಕಾಗುತ್ತಿತ್ತು. ಅಬ್ದುಲ್ಲಾಹ್ರವರು ಉರ್ವತ್ರಿಂದ ಕಲಿತದ್ದು ಹೌದು ಎಂಬುದು ಖಚಿತವಾಗಬೇಕು ಎಂಬ ನಿಬಂಧನೆ ಅವರಿಗೆ ಇದ್ದಿರಲಿಲ್ಲ. ಯಾಕೆಂದರೆ ಅಬ್ದುಲ್ಲಾಹ್ ಎಂಬವರು ಸತ್ಯ ಸಂಧರಾಗಿರುವುದರಿಂದ, ಅವರು ಉರ್ವತ್ರವರ ಸಮಕಾಲೀನರೂ ಆಗಿರುವುದರಲ್ಲಿ ಅವರು ತಾನು ಉರ್ವತ್ರಿಂದ ಹದೀಸ್ ಕಲಿತ್ತಿದ್ದೇನೆ ಎಂದು ಸುಳ್ಳು ಹೇಳುವ ಸಾಧ್ಯತೆ ಇರಲಾರದು ಎಂದಾಗಿತ್ತು ಅವರ ವಿಶ್ವಾಸ. ಬುಖಾರಿ ಮತ್ತು ಮುಸ್ಲಿಮ್ರವರ ನಿಬಂಧನೆಗಳು ಇತರರ ನಿಬಂಧನೆಗಳಿಗಿಂತ ಸ್ವಲ್ಪ ಕಠಿಣ ಹಾಗೂ ಹೆಚ್ಚು ಸೂಕ್ಷ್ಮತೆಯಿಂದ ಕೂಡಿದ್ದರಿಂದ ಬುಖಾರಿಯವರ ಸಹೀಹುಲ್ ಬುಖಾರಿ ಪ್ರಥಮ ಸ್ಥಾನವನ್ನು ಪಡೆಯಿತು. ಮುಸ್ಲಿಮ್ರವರ ಸಹೀಹುಲ್ ಮುಸ್ಲಿಮ್ ನಂತರದ ಸ್ಥಾನವನ್ನು ಪಡೆಯಿತು. ಕುರ್ಆನ್ ಹಾಗೂ ಸಹೀಹುಲ್ ಬುಖಾರಿ ಹೊರತು ಪಡಿಸಿದರೆ ಜಗತ್ತಿನಲ್ಲೇ ಅತ್ಯಂತ ವಿಶ್ವಾಸಯೋಗ್ಯ ಗ್ರಂಥ ಸಹೀಹುಲ್ ಮುಸ್ಲಿಮ್ ಎಂಬ ವಿಷಯದಲ್ಲಿ ಅನುಮಾನವೇ ಇಲ್ಲ.
ಹುಟ್ಟೂರು ನೈನಾಬೂರ್ ಈಗಿನ ಇರಾನ್ ದೇಶಕ್ಕೆ ಸೇರಿದೆ. ಮೂರು ಲಕ್ಷ ಹದೀಸ್ಗಳನ್ನು ಕಂಠಪಾಠ ಮಾಡಿದ್ದ ಇವರು ಅವುಗಳನ್ನು ಆರಿಸಿ ಅತ್ಯಂತ ಯೋಗ್ಯವೆಂದು ಮನವರಿಕೆಯಾದ ನಾಲ್ಕು ಸಾವಿರ ಹದೀಸ್ಗಳನ್ನು ಸಂಗ್ರಹಿಸಿದರು. ಅದುವೇ ಸಹೀಹುಲ್ ಮುಸ್ಲಿಮ್. ಹಿಜ್ರಿ 261ರಲ್ಲಿ 55ನೇ ವಯಸ್ಸಿನಲ್ಲಿ ಹುಟ್ಟೂರು ನೈನಾಬೂರ್ನಲ್ಲಿ ಮರಣ. ಅಲ್ಲೇ ದಫನ.
-
ಇಮಾಮ್ ತಿರ್ಮುದಿ:
ಹೆಸರು ಮುಹಮ್ಮದ್. ತಂದೆ ಈಸಾ. ತಿರ್ಮುದ್ ಎಂಬುದು ಜನ್ಮನಾಡು. ತಿರ್ಮುದ್ನವರು ಎಂಬರ್ಥದಲ್ಲಿ ತಿರ್ಮುದಿ ಎಂದು ಪ್ರಸಿದ್ಧ. ಹಿಜ್ರಾ 209ರಲ್ಲಿ ಜನನ. 278ರಲ್ಲಿ 70 ನೇ ವಯಸ್ಸಿನಲ್ಲಿ ನಿಧನ. “ಕಿತಾಬಿಲ್ ಇಲ್ಮ್ ಎಂಬ ಹದೀಸ್ ಸಂಗ್ರಹ ಗ್ರಂಥ ಇವರದ್ದು. “ಜಾಮಿಉತಿರ್ಮುದಿ” ಇವರ ಅತ್ಯಂತ ಪ್ರಸಿದ್ಧ ಗ್ರಂಥವೆನಿಸಿದರೆ ದುರ್ಬಲ ಹದೀಸ್ಗಳನ್ನು ದುರ್ಬಲವೆಂದು ನಮೂದಿಸಿರುವುದು ಈ ಗ್ರಂಥದ ವೈಶಿಷ್ಟ್ಯ. ಜನ್ಮದಲ್ಲೇ ಕಣ್ಣಿನ ದೃಷ್ಟಿಯಲ್ಲಿ ಸ್ವಲ್ಪ ದೋಷವಿತ್ತು. ಆದರೂ ಅದನ್ನು ಲೆಕ್ಕಿಸದೆ ಓದಿದರು. ದೊಡ್ಡ ವಿದ್ವಾಂಸರಾದರು. ಬುದ್ದಿ ಶಕ್ತಿ ಹಾಗೂ ಜ್ಞಾಪಕ ಶಕ್ತಿ ಅದ್ಭುತಕರವಾಗಿತ್ತು. ಇಮಾಮ್ ಮುಹಮ್ಮದ್ ಬಿನ್ ಈಸಾ ತಿರ್ಮುದಿ ಎಂದಾಗಿದೆ ಪ್ರಸಿದ್ಧ ಹಾಗೂ ಪೂರ್ಣ ಹೆಸರು.
-
ಇಮಾಮ್ ಅಬೂದಾವೂದ್ :
ಹಿಜ್ರಾ 202ರಲ್ಲಿ ಖುರಾಸಾನಿನ ಸುಜಸ್ಥಾನದಲ್ಲಿ ಜನನ. ಇರಾಕಿನ ಬಸರಾದಲ್ಲಿ ವಾಸ. ಸಂಚಾರಿಯಾಗಿ ಹದೀಸ್ ಸಂಗ್ರಹ. “ಸುನನ್ ಅಬೀದಾವೂದ್” ಅತ್ಯಂತ ಪ್ರಸಿದ್ಧ ಸಂಗ್ರಹ ಗ್ರಂಥ. ಇಮಾಮ್ ಹಝ್ಝಾಲಿ(ರ)ರವರಿಗೆ ಈ ಗ್ರಂಥ ಬಹಳ ಆಕರ್ಷಕವೆನಿಸಿತ್ತು. “ಬುದ್ಧಿವಂತರಿಗೆ ನಬಿ ಚರ್ಯೆ ಗ್ರಂಹಿಸಿಕೊಳ್ಳಲು ಸುನನ್ ಅಬೂದಾವೂದ್ ಸಾಕು” ಎಂದಿದ್ದರು.
ಐದು ಲಕ್ಷ ಹದೀಸ್ಗಳಿಂದ ಅರಿಸಿ 4800 ಹದೀಸ್ಗಳನ್ನು ಸಂಗ್ರಹಿಸಿದ ಗ್ರಂಥವಿದು. ಬುಖಾರಿ, ಮುಸ್ಲಿಮ್ ಗ್ರಂಥಗಳನ್ನು ಬಿಟ್ಟರೆ ನಂತರದ ಸ್ಥಾನ “ಸುನನ್ ಅಬೂದಾವೂದ್ ” ಗ್ರಂಥಕ್ಕೆ ಎಂದು ಅಭಿಪ್ರಾಯ ಪಡುವವರಿದ್ದಾರೆ. ಹಿಜರಿ 275 ರಲ್ಲಿ 73ನೇ ಪ್ರಾಯದಲ್ಲಿ ಬಸರಾದಲ್ಲಿ ನಿಧನ.
-
ಇಮಾಮ್ ನಸಾಈ:
ಜಗತ್ತಿನ ಅತ್ಯಂತ ಪ್ರಸಿದ್ಧವಾದ ಆರು ಹದೀಸ್ ಗ್ರಂಥಗಳ ಪೈಕಿ ಸುನನ್ ನಸಾಈ ಒಂದು. ಅಹ್ಮದ್ ಬಿನ ಅಲಿ ನಸಾಈ ಎಂಬವರ ಸಂಗ್ರಹ ಗ್ರಂಥವಿದು. ಖುರಾಸಾನ್ನಲ್ಲಿ (ಹಿ. 315) ಜನನ. ಬಾಲ್ಯದಲ್ಲೇ ಹದೀಸ್ನಲ್ಲಿ ವಿಶೇಷ ಆಸಕ್ತಿ. ಅನೇಕ ರಾಜ್ಯಗಳಿಗೆ ಸಂಚಾರ ನಡೆಸಿ ಹದೀಸ್ ತಜ್ಞರಿಂದ ಕಲಿತು ಹದೀಸ್ಗಳ ಭಂಡಾರವಾದರು. 88ನೇ ವಯಸ್ಸು ಜೀವನ. ಹಿಜ್ರಾ 303 ರಲ್ಲಿ ನಿಧನ.
-
ಇಮಾಮ್ ಇಬ್ನು ಮಾಜಾ :
ಕಝ್ವೀನ್ನಲ್ಲಿ ಜನನ (ಹಿ. 209) ಹೆಸರು ಮುಹಮ್ಮದ್. ತಂದೆ ಮಝೀರ್. ಇವರ ನಾಲ್ಕು ಸಾವಿರ ಹದೀಸ್ಗಳ ಸಂಗ್ರಹವುಳ್ಳ ಸುನನ್ ಇಬ್ನು ಮಾಜಾ ಅತ್ಯಂತ ಪ್ರಸಿದ್ಧವಾದುದು. ಚರಿತ್ರೆಗಾರರೂ ಕುರ್ಆನ್ ವ್ಯಾಖ್ಯಾನಕಾರರೂ ಕೂಡಾ ಆಗಿದ್ದರು. 64ನೇ ಪ್ರಾಯದಲ್ಲಿ (ಹಿ. 275) ನಿಧನ.
ಇಷ್ಟರವರೆಗೆ ಪ್ರಸ್ತಾಪಿಸಿದ ಆರು ಮಂದಿ ಇಮಾಮ್ಗಳ ಆರು ಗ್ರಂಥಗಳು ಅವರದೇ ಹೆಸರಲ್ಲಿ ಬುಖಾರಿ, ಮುಸ್ಲಿಮ್, ತಿರ್ಮುದಿ, ಅಬೂದಾವೂದ್, ನಸಾಈ ಇಬ್ನು ಮಾಜ ಎಂದೇ ಪ್ರಸಿದ್ಧವಾಗಿದ್ದು ಇವುಗಳಿಗೆ “ಸಿಹಾಹುಸ್ಸಿತ್ತ” (ಆರು ಸಹೀಹ್ಗಳು) ಎಂದು ಹೆಸರಾಗಿದೆ. ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಈ ಆರು ಗ್ರಂಥಗಳ ಸಂಗ್ರಹಕಾರರು ಅರಬ್ ದೇಶದವರಾಗಿದ್ದಾರೆ. ಅವಿಭಜಿತ ಸೋವಿಯತ್ ರಾಷ್ಟ್ರ ಹಾಗೂ ಇರಾನಿಗೆ ಸೇರಿದ ಒಂದು ನಿರ್ಧಿಷ್ಟ ಪ್ರದೇಶದವರೆನ್ನವುದು ಒಂದು ವಿಶೇಎಷತೆಯಾಗಿದೆ.
-
ಇಮಾಮ್ ಬೈಹಕಿ :
ಬೈಹಕಿ ಉಲ್ಲೇಖಿಸಿದ ಹದೀಸ್ ಎಂಬ ಪ್ರಸ್ತಾಪವು ಧಾರ್ಮಿಕ ವಲಯದಲ್ಲಿ ಸಾಮಾನ್ಯವಾಗಿದೆ. ಇವರ ಪ್ರಸಿದ್ಧ ಗ್ರಂಥದಲ್ಲಿ ಅನೇಕ ದುರ್ಬಲ (5ನೇ ಪುಟಕ್ಕೆ) ಹದೀಸ್ಗಳಿದ್ದರಿಉ ವಿಶ್ವಾಸಯೋಗ್ಯವಾದ ಹಾಗೂ ಫಲವತ್ತಾದ ಧಾರಾಳ ಹದೀಸ್ಗಳು ಇರುವುದರಿಂದ ಆ ಗ್ರಂಥವು ಪ್ರಸಿದ್ಧ ವಾಯಿತು. ಹಿಜರಿ 200ರಲ್ಲಿ ಜನನ. 93ನೇ ವಯಸ್ಸಿನಲ್ಲಿ ನಿಧನ. ಹೆಸರು : ದಾವೂದ್ , ತಂದೆ : ಹುಸೈನ್.
-
ಅಲ್- ಬಲಾದೂರಿ:
ಅಹ್ಮದ್ ಬಿನ್ ಯಾಹ್ಯಾ ಎಂಬ ಹೆಸರಿನ ಇವರು ಚರಿತ್ರೆಗಾರರೂ ಹೌದು.
“ಫುತೂಹುಲ್ ಬುಲ್ದಾನ್” ಎಂಬ ಇತಿಹಾಸ ಗ್ರಂಥ ಬಹಳ ಪ್ರಸಿದ್ಧ. ಊರು ಬಾಗ್ದಾದ್, 299ರಲ್ಲಿ ನಿಧನ.
-
ದಾರಿಮಿ :
ಹೆಸರು ಉಸ್ಮಾನ್ ಬಿನ್ ಸಈದ್. ಪ್ರಸಿದ್ಧ ಹದೀಸ್ ವಿದ್ವಾಂಸರು. ಇವರ “ಮುಸ್ನದ್” ಬಹಳ ಪ್ರಸಿದ್ಧ. ಬೇರೆ ಅನೇಕ ಗ್ರಂಥಗಳಿವೆ.
199ರಲ್ಲಿ ಸಜಸ್ತಾನ್ನಲ್ಲಿ ಜನನ. ಅರಬೀ ಸಾಹಿತ್ಯ ಮತ್ತು ಫಿಕ್ಹ್ನಲ್ಲಿ ಹೆಸರುವಾಸಿ. ಹಿ. 289ರಲ್ಲಿ ಮರಣ.
-
ಇಬ್ನು ಖುಝೈಮ :
ಹೆಸರು ಅಬ್ದುಲ್ಲಾಹ್ ಬಿನ್ ಮುಸ್ಲಿಮ್, 213ರಲ್ಲಿ ಜನನ. ಭಾಷೆ, ಇತಿಹಾಸ, ಚರಿತ್ರೆ ಮುಂತಾದ ಅನೇಕ ವಿಷಯಗಳಲ್ಲಿ ಮೌಲ್ಯಧಾರಿತ ಗ್ರಂಥಗಳನ್ನು ರಚಿಸಿದ್ದ ಇವರು ಸುಪ್ರಸಿದ್ಧ ಹದೀಸ್ ವಿದ್ವಾಂಸರಾಗಿದ್ದರು. ಅನೇಕ ಗ್ರಂಥಗಳು ಇಂದಿಗೂ ವಿದ್ವತ್ ವಲಯದಲ್ಲಿ ಪ್ರಚಾರದಲ್ಲಿದೆ. ಹಿಜರಿ 270ರಲ್ಲಿ 57ನೇ ವಯಸ್ಸಿನಲ್ಲಿ ನಿಧನ.