ಸಅದ್(ರ) ರವರ ವಂಶಾವಳಿಯು ನಾಲ್ಕನೇ ಪಿತಾಮಹ ಕಿಲಾಬ್‌ರಲ್ಲಿ ಪ್ರವಾದಿ(ಸ) ರೊಂದಿಗೆ ಸಂಧಿಸುತ್ತದೆ.
ಜನನ ಮತ್ತು ಬೆಳವಣಿಗೆ:
ಸಅದ್(ರ) ಮಕ್ಕಾದಲ್ಲಿ ಜನಿಸಿದರು. ಅವರು ಹುಟ್ಟಿದ ವರ್ಷ ಯಾವುದೆಂಬ ಬಗ್ಗೆ ಭಿನ್ನಮತವಿದೆ. ಕೆಲವರು ಹಿ.ಪೂ. 23 ಎಂದರೆ ಕೆಲವರು ಹಿ.ಪೂ. 27 ಎನ್ನುತ್ತಾರೆ. ಅವರು ಬಾಣಗಳನ್ನು ಮೊನೆ ಮಾಡುವ ಮತ್ತು ಬಿಲ್ಲುಗಳನ್ನು ತಯಾರಿಸುವ ವೃತ್ತಿಯಲ್ಲಿದ್ದರು. ಅವರು ಬಾಲ್ಯದಲ್ಲೇ ನಿಪುಣ ಬಿಲ್ಲುಗಾರರಾಗಿದ್ದರು.
ಇಸ್ಲಾಮ್ ಸ್ವೀಕಾರ:
ಅಬೂಬಕರ್(ರ) ಇಸ್ಲಾಮ್ ಸ್ವೀಕರಿಸಿದ ನಂತರ ತಮ್ಮ ಹತ್ತಿರದವರನ್ನು ಇಸ್ಲಾಮಿಗೆ ಆಮಂತ್ರಿಸುವ ಕೆಲಸ ಮಾಡುತ್ತಿದ್ದರು. ಅವರು ಸಅದ್(ರ) ರನ್ನು ಇಸ್ಲಾಮಿಗೆ ಆಮಂತ್ರಿಸಿದರು. ಸಅದ್(ರ) ಅವರ ಆಮಂತ್ರಣವನ್ನು ಸ್ವೀಕರಿಸಿದರು. ಅಬೂಬಕರ್(ರ) ಅವರನ್ನು ಪ್ರವಾದಿ(ಸ) ರವರ ಬಳಿಗೆ ಕರೆದೊಯ್ದರು. ಪ್ರವಾದಿ(ಸ) ಅವರಿಗೆ ಇಸ್ಲಾಮಿನ ಬಗ್ಗೆ ತಿಳಿಸಿ ಕುರ್‌ಆನ್ ಪಾರಾಯಣ ಮಾಡಿ ಕೇಳಿಸಿದರು. ಸಅದ್(ರ) ಇಸ್ಲಾಮ್ ಸ್ವೀಕರಿಸಿದರು. ಆಗ ಅವರಿಗೆ 19 ವರ್ಷ ಪ್ರಾಯವಾಗಿತ್ತು.
ಸಅದ್‌ರ ತಾಯಿ:
ಸಅದ್(ರ) ರ ತಾಯಿ ಇಸ್ಲಾಮ್ ಧರ್ಮವನ್ನು ವಿರೋಧಿಸುತ್ತಿದ್ದರು. ಮಗ ಇಸ್ಲಾಮ್ ಸ್ವೀಕರಿಸಿದ ಸುದ್ದಿ ತಿಳಿದಾಗ ಆಕೆ ಮಗನನ್ನು ಕರೆದು ಹೇಳಿದಳು: “ಸಅದ್! ಇದೇನು ನೀನು ಹೊಸ ಧರ್ಮವನ್ನು ಸೇರಿಕೊಂಡಿದ್ದೀಯಾ? ನೀನು ಆ ಧರ್ಮವನ್ನು ತೊರೆಯಬೇಕು. ಇಲ್ಲದಿದ್ದರೆ ಸಾಯುವ ತನಕ ನಾನು ತಿನ್ನುವುದಾಗಲಿ ಕುಡಿಯುವುದಾಗಲಿ ಮಾಡುವುದಿಲ್ಲ.” ಸಅದ್(ರ) ರಿಗೆ ಬೇಸರವಾಯಿತು. ಅವರು ತಾಯಿಯನ್ನು ಬಹಳ ಪ್ರೀತಿಸುತ್ತಿದ್ದರು. ಅವರು ಹೇಳಿದರು: “ಅಮ್ಮಾ! ಹಾಗೆ ಮಾಡಬೇಡಿ.”
ತಾಯಿ ನಿರಾಹಾರ ಸತ್ಯಾಗ್ರಹ ಕೈಗೊಂಡರು. ದಿನಗಳು ರಾತ್ರಿಗಳು ಉರುಳಿದವು. ತಾಯಿ ಏನೂ ತಿನ್ನುವುದು ಕಾಣುವುದಿಲ್ಲ. ಆಕೆ ತುಂಬಾ ಬಳಲಿದ್ದಳು. ತಾಯಿಯ ಪರಿತಾಪಕರ ಸ್ಥಿತಿಯನ್ನು ಕಂಡು ಸಅದ್(ರ) ತಾಯಿಯ ಬಳಿ ಬಂದು ಹೇಳಿದರು: “ಅಮ್ಮಾ! ನೀನು ಹೀಗೆ ಏನೂ ತಿನ್ನದೆ ಕುಡಿಯದೆ ಇರುವುದು ಸರಿಯಲ್ಲ. ನೀನು ಎಷ್ಟೇ ಪ್ರಯತ್ನಪಟ್ಟರೂ ನಾನು ಇಸ್ಲಾಮ್ ಧರ್ಮವನ್ನು ತೊರೆಯುವುದಿಲ್ಲ. ನಿನ್ನ ಈ ಒಂದು ದೇಹವಲ್ಲ, ಬದಲಿಗೆ ನಿನ್ನ ಇಂತಹ ಸಾವಿರ ದೇಹಗಳು ನನ್ನ ಮುಂದೆ ಹೀಗೆ ಆಹಾರ ಸೇವಿಸದೆ ಪ್ರಾಣ ತ್ಯಜಿಸಿದರೂ ನಾನು ನನ್ನ ನಿರ್ಧಾರವನ್ನು ಬದಲಿಸಲಾರೆ.”
ಕೊನೆಗೆ ತನ್ನ ಮಗನ ದೃಢ ನಿಶ್ಚಯದ ಮುಂದೆ ತಾಯಿ ಸೋತಳು. ಸಅದ್(ರ) ರ ಬಗ್ಗೆ ಈ ಕುರ್‌ಆನ್ ವಚನ ಅವತೀರ್ಣವಾಯಿತು: “ನಿನಗೆ ಯಾವುದೇ ತಿಳುವಳಿಕೆ ಇಲ್ಲದ್ದನ್ನು ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡಬೇಕೆಂದು ಅವರಿಬ್ಬರು (ತಂದೆತಾಯಿ) ನಿನ್ನನ್ನು ಒತ್ತಾಯಿಸಿದರೆ ಅವರ ಮಾತನ್ನು ಕೇಳಬೇಡ. ಆದರೆ ಇಹಲೋಕದ ವಿಚಾರದಲ್ಲಿ ಅವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವರ್ತಿಸು. ನನ್ನ ಕಡೆಗೆ ಮರಳಿದವರ ಮಾರ್ಗವನ್ನು ಹಿಂಬಾಲಿಸು. ನಿಮ್ಮ ಮರಳುವಿಕೆ ನನ್ನ ಬಳಿಗಾಗಿದೆ. ನಂತರ ನೀವು ಏನು ಮಾಡುತ್ತಿದ್ದಿರೆಂದು ನಾನು ನಿಮಗೆ ತಿಳಿಸಿಕೊಡುವೆನು.” (ಲುಕ್ಮಾನ್ 15)
ಮೊತ್ತಮೊದಲು ಹರಿಸಿದ ರಕ್ತ:
ಇಸ್ಲಾಮಿಗಾಗಿ ಮೊತ್ತಮೊದಲು ಶತ್ರುವಿನ ರಕ್ತ ಹರಿಸಿದವರು ಸಅದ್(ರ) ಆಗಿದ್ದರು. ಆ ಕಾಲದಲ್ಲಿ ಮುಸ್ಲಿಮರು ಬಹಳ ಭಯದಿಂದ ಜೀವಿಸುತ್ತಿದ್ದರು. ಅವರು ನಮಾಝ್ ಮಾಡಲು ಹತ್ತಿರದ ಕಣಿವೆಗಳಿಗೆ ಹೋಗಬೇಕಾಗುತ್ತಿತ್ತು. ಒಮ್ಮೆ ಸಅದ್(ರ) ಮತ್ತು ಸಹಾಬಾಗಳು ಕಣಿವೆಯಲ್ಲಿ ನಮಾಝ್ ಮಾಡುತ್ತಿದ್ದಾಗ ಅಲ್ಲಿಗೆ ಕೆಲವು ಮುಶ್ರಿಕರು ಬಂದರು. ಅವರು ಇವರನ್ನು ಮತ್ತು ಇವರ ಧರ್ಮವನ್ನು ಹೀಯಾಳಿಸಿದರು. ನಮಾಝನ್ನು ಅಡ್ಡಿಪಡಿಸಿದರು. ಅಲ್ಲಿ ಸಂಘರ್ಷವುಂಟಾಯಿತು. ಸಅದ್(ರ) ಒಬ್ಬ ಮುಶ್ರಿಕನಿಗೆ ಒಂಟೆಯ ಬಾಯಿಗೆ ಕಟ್ಟುವ ಬೆಲ್ಟಿನಿಂದ ಬಡಿದರು. ಅವನ ತಲೆ ಒಡೆದು ರಕ್ತ ಹರಿಯಿತು. ಇದು ಇಸ್ಲಾಮ್ ಮತ್ತು ಕುಫ್ರ್‌ನ ಸಂಘರ್ಷದಲ್ಲಿ ಚೆಲ್ಲಿದ ಶತ್ರುವಿನ ಮೊದಲ ರಕ್ತವಾಗಿತ್ತು.
ಹಿಜ್ರ:
ಸಅದ್(ರ) ಮೊತ್ತಮೊದಲು ಮದೀನಕ್ಕೆ ಹಿಜ್ರ ಮಾಡಿದವರಲ್ಲಿ ಒಬ್ಬರಾಗಿದ್ದರು. ಅವರು ಪ್ರವಾದಿ(ಸ) ರಿಗಿಂತಲೂ ಮುಂಚೆ ಹಿಜ್ರ ಮಾಡಿದರು. ಬರಾಅ್ ಬಿನ್ ಆಝಿಬ್(ರ) ಹೇಳುತ್ತಾರೆ: “ನಮ್ಮ ಬಳಿಗೆ ಮೊದಲು ಹಿಜ್ರ ಬಂದವರು ಮಿಸ್‌ಅಬ್ ಬಿನ್ ಉಮೈರ್ ಮತ್ತು ಇಬ್ನ್ ಉಮ್ಮ್ ಮಕ್ತೂಮ್. ನಂತರ ಬಿಲಾಲ್, ಸಅದ್ ಬಿನ್ ಅಬೀ ವಕ್ಕಾಸ್, ಅಮ್ಮಾರ್ ಬಿನ್ ಯಾಸಿರ್ ಬಂದರು. ನಂತರ ಇಪ್ಪತ್ತು ಸಹಾಬಾಗಳೊಂದಿಗೆ ಉಮರ್ ಬಂದರು. ನಂತರ ಪ್ರವಾದಿ(ಸ) ಬಂದರು.”
ಔದಾರ್ಯ:
ಸಅದ್(ರ) ತಮ್ಮ ಶೌರ್ಯಕ್ಕೆ ಹೆಸರುವಾಸಿಯಾದಂತೆಯೇ, ತಮ್ಮ ಔದಾರ್ಯಕ್ಕೂ ಹೆಸರುವಾಸಿಯಾಗಿದ್ದರು. ಪ್ರವಾದಿ(ಸ) ರ ಜೊತೆ ವಿದಾಯ ಹಜ್ಜ್ ನಿರ್ವಹಿಸುತ್ತಿದ್ದಾಗ, ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾದರು. ತಾನು ಬದುಕುವುದಿಲ್ಲ ಎಂದೇ ಅವರು ಭಾವಿಸಿದ್ದರು. ಪ್ರವಾದಿ(ಸ) ಅವರನ್ನು ಭೇಟಿ ಮಾಡಲು ಬಂದಾಗ ಅವರು ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ನನ್ನಲ್ಲಿ ಅಗಾಧ ಸಂಪತ್ತಿದೆ. ನನಗೆ ಉತ್ತರಾಧಿಕಾರಿಯಾಗಿ ಒಬ್ಬ ಮಗಳು ಮಾತ್ರ ಇದ್ದಾಳೆ. ನನ್ನ ಸಂಪತ್ತಿನ ಮೂರನೇ ಎರಡು ಭಾಗವನ್ನು ನಾನು ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಲೇ?” “ಬೇಡ” ಪ್ರವಾದಿ ಉತ್ತರಿಸಿದರು. “ಹಾಗಾದರೆ, ಅರ್ಧ ಭಾಗವನ್ನು ದಾನ ಮಾಡಲೇ?” ಸಅದ್(ರ) ಕೇಳಿದರು. ಪ್ರವಾದಿ ಮತ್ತೆ “ಬೇಡ” ಎಂದರು. “ಹಾಗಾದರೆ, ಮೂರನೇ ಒಂದನ್ನು ದಾನ ಮಾಡಲೇ?” ಸಅದ್(ರ) ಕೇಳಿದರು. ಪ್ರವಾದಿ ಹೇಳಿದರು: “ಸರಿ, ಮೂರನೇ ಒಂದನ್ನು ದಾನ ಮಾಡಿ. ಆದರೆ ಮೂರನೇ ಒಂದು ಕೂಡ ಹೆಚ್ಚು. ನಿಮ್ಮ ಉತ್ತರಾಧಿಕಾರಿಗಳನ್ನು ಶ್ರೀಮಂತರಾಗಿ ಬಿಟ್ಟುಬಿಡುವುದು ಅವರನ್ನು ಜನರ ಮುಂದೆ ಕೈಚಾಚುವವರಂತೆ ಬಿಟ್ಟುಬಿಡುವುದಕ್ಕಿಂತ ಉತ್ತಮ. ಅಲ್ಲಾಹನ ಸಂತೃಪ್ತಿಯನ್ನು ಪಡೆಯಲು ನೀವು ಏನು ಖರ್ಚು ಮಾಡಿದರೂ, ಅದಕ್ಕಾಗಿ ನಿಮಗೆ ಪ್ರತಿಫಲ ದೊರೆಯುತ್ತದೆ. ಅದು ನಿಮ್ಮ ಹೆಂಡತಿಯ ಬಾಯಿಯಲ್ಲಿ ಇಡುವ ಒಂದು ತುತ್ತು ಅನ್ನವಾದರೂ ಸಹ.”
ಯುದ್ಧಗಳು:
ಸಅದ್(ರ) ಎಲ್ಲಾ ಯುದ್ಧಗಳಲ್ಲೂ ಪಾಲ್ಗೊಂಡಿದ್ದರು. ಬದ್ ಯುದ್ಧದಲ್ಲಿ ಅವರು ವಿಶಿಷ್ಟ ಪಾತ್ರ ವಹಿಸಿದ್ದರು. ಉಹುದ್ ಯುದ್ಧದಲ್ಲಿ ಅವರು ನಿರ್ಣಾಯಕ ಸ್ಥಿತಿಯಲ್ಲಿ ಪ್ರವಾದಿ(ಸ) ರೊಂದಿಗೆ ಅಚಲವಾಗಿ ನಿಂತು ಹೋರಾಡಿದರು. ಉಹುದ್ ಯುದ್ಧದಲ್ಲಿ ಅವರು ಬಿಲ್ಲುಗಾರರಾಗಿದ್ದರು. ಪ್ರವಾದಿ(ಸ) ಅವರನ್ನು ಬಾಣ ಬಿಡುವಂತೆ ನಿರಂತರ ಉತ್ತೇಜನ ನೀಡುತ್ತಿದ್ದರು. ಅವರು ಆ ಯುದ್ಧದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಾಣ ಬಿಟ್ಟರೆಂದು ಹೇಳಲಾಗುತ್ತದೆ. ಅಬೂಬಕರ್(ರ) ಖಲೀಫರಾದ ನಂತರ ಉಸಾಮ(ರ) ರೊಂದಿಗೆ ಸೈನ್ಯವನ್ನು ಮದೀನದ ಹೊರಗೆ ಕಳುಹಿಸಿದಾಗ ಮದೀನದ ಸುತ್ತಮುತ್ತಲಿನ ಗೋತ್ರಗಳವರು ಮದೀನದ ಮೇಲೆ ಆಕ್ರಮಣ ಮಾಡದಂತೆ ಅದರ ಸರಹದ್ದುಗಳಲ್ಲಿ ಅಲೀ(ರ), ಝುಬೈರ್(ರ), ತಲ್ಹ(ರ) ರೊಂದಿಗೆ ಸಅದ್(ರ) ರನ್ನೂ ಕಾವಲು ನಿಲ್ಲಿಸಿದ್ದರು.
ಉಮರ್(ರ) ರವರ ಕಾಲದಲ್ಲಿ:
ಸಅದ್(ರ) ಮುಖ್ಯವಾಗಿ ಖಾದಿಸಿಯ್ಯದಲ್ಲಿ ಪರ್ಷಿಯನ್ನರನ್ನು ಎದುರಿಸಲು ಉಮರ್(ರ) ಕಳುಹಿಸಿದ ಪ್ರಬಲ ಮುಸ್ಲಿಂ ಸೈನ್ಯದ ಸೇನಾಧಿಪತಿಯೆಂದು ಖ್ಯಾತರಾಗಿದ್ದಾರೆ. ಶತಮಾನಗಳಿಂದ ಈ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿದ್ದ ಸಾಸಾನಿಯನ್ ಸಾಮ್ರಾಜ್ಯಕ್ಕೆ ಅಂತ್ಯ ಹಾಡಬೇಕೆಂದು ಉಮರ್(ರ) ಬಯಸಿದ್ದರು. ದೊಡ್ಡ ಸಂಖ್ಯೆಯಲ್ಲಿರುವ ಸುಸಜ್ಜಿತ ಪರ್ಷಿಯನ್ ಸೇನೆಯನ್ನು ಎದುರಿಸುವುದು ಸಣ್ಣ ಮಾತಾಗಿರಲಿಲ್ಲ. ಇದಕ್ಕಾಗಿ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಒಟ್ಟುಗೂಡಿಸಬೇಕಾಗಿತ್ತು.
ಶಸ್ತ್ರಾಸ್ತ್ರಗಳು ಅಥವಾ ಸವಾರಿಗಳನ್ನು ಹೊಂದಿದ್ದ ಎಲ್ಲರೂ ಈ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಉಮರ್(ರ) ರಾಜ್ಯಾದ್ಯಂತ ಮುಸ್ಲಿಂ ಗವರ್ನರ್‌ಗಳಿಗೆ ಸೂಚಿಸಿದರು. ಸೈನಿಕರೆಲ್ಲರೂ ಮದೀನಾದಲ್ಲಿ ಒಟ್ಟುಗೂಡಿದರು. ಈ ಸೇನೆಗೆ ಒಬ್ಬ ಪ್ರಬಲ ವ್ಯಕ್ತಿಯನ್ನು ಸೇನಾಧಿಪತಿಯಾಗಿ ಆರಿಸಬೇಕಾಗಿತ್ತು. ಉಮರ್(ರ) ಸ್ವತಃ ಆ ಕೆಲಸ ವಹಿಸಿಕೊಳ್ಳಲು ಬಯಸಿದರು. ಆದರೆ ಮದೀನಾ ಬಿಟ್ಟು ಹೋಗಬಾರದೆಂಬ ಸಹಾಬಾಗಳ ಒತ್ತಾಯಕ್ಕೆ ಮಣಿದು ಅವರು ಆ ಸ್ಥಾನವನ್ನು ಸಅದ್(ರ) ರಿಗೆ ಕೊಟ್ಟರು.
ಹಿಜ್ರ 14ರಲ್ಲಿ ಸಅದ್(ರ) ರವರ ನಾಯಕತ್ವದಲ್ಲಿ 6,000 ಸೈನಿಕರು ಮದೀನದಿಂದ ಹೊರಟರು. ಅವರು ಕಾದಿಸಿಯ್ಯ ತಲುಪುವಷ್ಟರಲ್ಲಿ ಆ ಕಡೆಯಿಂದ ಉಮರ್(ರ) ರವರ ಆಜ್ಞೆಯ ಮೇರೆಗೆ ಜರೀರ್ ಬಿನ್ ಅಬ್ದುಲ್ಲಾ ಮತ್ತು ಮುಸನ್ನ ಬಿನ್ ಹಾರಿಸ ರವರ ಸೈನ್ಯವು ಅವರ ಜೊತೆಗೂಡಿತು. ಒಟ್ಟು 30,000 ಸೈನಿಕರನ್ನು ಹೊಂದಿರುವ ಬೃಹತ್ ಸೇನೆಗೆ ಸಅದ್(ರ) ಸೇನಾಧಿಪತಿಯಾದರು.
ಸೈನ್ಯವು ಖಾದಿಸಿಯ್ಯದಲ್ಲಿ ಬೀಡುಬಿಟ್ಟಿತು. ಅವರ ವಿರುದ್ಧ ಪರ್ಷಿಯನ್ನರು ತಮ್ಮ ಅತ್ಯಂತ ಅದ್ಭುತ ಕಮಾಂಡರ್ ರುಸ್ತಮ್‌ನ ನಾಯಕತ್ವದಲ್ಲಿ 1,20,000 ಸೈನಿಕರನ್ನು ಒಟ್ಟುಗೂಡಿಸಿದರು. ಯುದ್ಧ ಪ್ರಾರಂಭವಾಗುವ ಹಂತಕ್ಕೆ ಬಂದಾಗ ಸಅದ್(ರ) ತೀವ್ರ ದುಃಖಿತರಾದರು. ಏಕೆಂದರೆ ಅವರು ಆಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಎದ್ದು ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಅವರು ಕುಳಿತಲ್ಲಿಂದಲೇ ಸೈನಿಕರನ್ನು ಪ್ರಚೋದಿಸುತ್ತಿದ್ದರು. ಯುದ್ಧ ನಾಲ್ಕು ದಿನಗಳ ಕಾಲ ಮುಂದುವರಿಯಿತು.
ಮುಸ್ಲಿಮರು ಶೌರ್ಯ ಮತ್ತು ಕೌಶಲ್ಯವನ್ನು ಪೂರ್ಣವಾಗಿ ಪ್ರದರ್ಶಿಸಿದರು. ಆದರೆ ಪರ್ಷಿಯನ್ ಆನೆ ದಳವು ಮುಸ್ಲಿಮ್ ಸೈನ್ಯವನ್ನು ಧ್ವಂಸಗೊಳಿಸಿತು. ನಾಲ್ಕನೇ ದಿನ ಸಂಜೆಯಾದಾಗ ಪ್ರಬಲ ಚಂಡಮಾರುತ ಬೀಸಿದ ಕಾರಣ ಪರ್ಶಿಯನ್ನರ ಡೇರೆಗಳು ಚೆಲ್ಲಾಪಿಲ್ಲಿಯಾದವು. ರುಸ್ತುಮನ ಸಿಂಹಾಸನ ನದಿಗೆ ಬಿತ್ತು. ಅಲ್ಲಿಂದ ಪಲಾಯನ ಮಾಡುತ್ತಿದ್ದ ರುಸ್ತುಮನನ್ನು ಮುಸ್ಲಿಮರು ಹಿಡಿದು ಕೊಂದರು. ಇದರಿಂದ ಸಂಪೂರ್ಣ ಪರ್ಶಿಯನ್ ಸೈನ್ಯ ದಿಕ್ಕೆಟ್ಟು ಓಡಿತು.
ಖಾದಿಸಿಯ್ಯಾ ಯುದ್ಧ ಜಾಗತಿಕ ಇತಿಹಾಸದ ಪ್ರಮುಖ ನಿರ್ಣಾಯಕ ಯುದ್ಧಗಳಲ್ಲಿ ಒಂದಾಗಿದೆ. ಯರ್ಮೂಕ್ ಯುದ್ಧವು ಪೂರ್ವದಲ್ಲಿ ಬೈಝಾಂಟೈನ್ ಸಾಮ್ರಾಜ್ಯಕ್ಕೆ ಅಂತ್ಯ ಹಾಡಿದಂತೆ ಖಾದಿಸಿಯ್ಯ ಯುದ್ಧವು ಸಾಸಾನಿಯನ್ ಸಾಮ್ರಾಜ್ಯಕ್ಕೆ ಅಂತ್ಯ ಹಾಡಿತು.
ಹಿಜರಿ 17ರಲ್ಲಿ ಸಅದ್(ರ) ಕೂಫದ ಆಡಳಿತಗಾರರಾದರು. ಆದರೆ ಜನರು ಅವರ ಬಗ್ಗೆ ಖಲೀಫ ಉಮರ್(ರ) ರಿಗೆ ದೂರು ನೀಡಿದಾಗ ಉಮರ್(ರ) ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಅಮ್ಮಾರ್ ಬಿನ್ ಯಾಸಿರ್(ರ) ರನ್ನು ಆಡಳಿತಗಾರರನ್ನಾಗಿ ನೇಮಿಸಿದರು.
ಹಿಜರಿ 23ರಲ್ಲಿ ಮರಣಕ್ಕೆ ಮುಂಚೆ ಉಮರ್(ರ) ಆರು ಜನರಲ್ಲಿ ಒಬ್ಬರನ್ನು ತಮ್ಮ ನಂತರ ಖಲೀಫ ಆಗಿ ಆರಿಸಬೇಕೆಂದು ಹೇಳಿದರು. ಅವರಲ್ಲೊಬ್ಬರು ಸಅದ್(ರ) ಆಗಿದ್ದರು. ಉಮರ್(ರ) ಹೇಳಿದರು. “ಅವರು ಯಾರನ್ನು ಖಲೀಫ ಆಗಿ ಮಾಡುತ್ತಾರೋ ಅವರು ನನ್ನ ಖಲೀಫ ಆಗಿದ್ದಾರೆ. ಅದು ಸಅದ್(ರ) ಆಗಿದ್ದರೂ ಸಹ. ಅವರನ್ನು ನಾನು ಕೂಫದ ಆಡಳಿತ ಸ್ಥಾನದಿಂದ ಕೆಳಗಿಳಿಸಿದ್ದು ಅವರು ಬಲಹೀನರೋ, ವಂಚಕರೋ ಆಗಿರುವ ಕಾರಣದಿಂದಲ್ಲ.” ಆದರೆ ಉಮರ್(ರ) ರವರ ಮರಣಾನಂತರ ಸಅದ್(ರ) ತಮ್ಮ ಹಕ್ಕನ್ನು ಅಬ್ದುರ್ರಹ್ಮಾನ್(ರ)ರಿಗೆ ಬಿಟ್ಟುಕೊಟ್ಟರು.
ಉಸ್ಮಾನ್(ರ) ರವರ ಮರಣದ ನಂತರ ಸಹಾಬಾಗಳ ನಡುವೆ ಸಂಭವಿಸಿದ ಯಾವುದೇ ಭಿನ್ನಾಭಿಪ್ರಾಯಗಳಲ್ಲಿ ಸಅದ್(ರ) ಭಾಗಿಯಾಗಲಿಲ್ಲ. ಜಮಲ್ ಯುದ್ಧದ ಸಮಯದಲ್ಲಿ ಅವರು ಅಲಿ(ರ) ರವರ ಪಕ್ಷಕ್ಕೋ ತಲ್ಹ(ರ) ಮತ್ತು ಝುಬೈರ್(ರ) ರವರ ಪಕ್ಷಕ್ಕೋ ಸೇರಲಿಲ್ಲ. ಅವರು ಮನೆಯಲ್ಲೇ ಉಳಿದರು. ಮುಆವಿಯ(ರ) ಅವರನ್ನು ಕರೆದಾಗ ಅವರು ನಯವಾಗಿ ತಿರಸ್ಕರಿಸಿದರು. ಅವರು ಜಮಲ್, ಸಿಫೀನ್ ಯುದ್ಧಗಳಲ್ಲಿ, ಅಥವಾ ಅದರ ನಂತರ ಉಂಟಾದ ಪಂಚಾಯಿತಿ ಮುಂತಾದ ಯಾವುದರಲ್ಲೂ ಭಾಗವಹಿಸದೇ ಮನೆಯಲ್ಲೇ ಕಾಲ ಕಳೆದರು. ಇವುಗಳ ಬಗ್ಗೆ ಯಾವುದೇ ಸುದ್ದಿಯನ್ನು ತನಗೆ ತಿಳಿಸದಂತೆ ಅವರು ತಮ್ಮ ಸಂಬಂಧಿಕರಿಗೆ ಹೇಳಿದ್ದರು.
ಮರಣ:
ಹಿಜರಿ 55 ರಲ್ಲಿ ಮುಆವಿಯ(ರ) ರವರ ಆಡಳಿತಕಾಲದಲ್ಲಿ ಸಅದ್(ರ) ನಿಧನರಾದರು. ಆಗ ಅವರಿಗೆ 78 ವರ್ಷ ಪ್ರಾಯವಾಗಿತ್ತು.