ತಲ್ಹ(ರ) ರವರ ವಂಶಾವಳಿಯು ಆರನೇ ಪಿತಾಮಹ ಮುರ್ರರಲ್ಲಿ ಪ್ರವಾದಿ(ಸ) ರೊಂದಿಗೆ ಸಂಧಿಸುತ್ತದೆ.
ಇಸ್ಲಾಮ್ ಸ್ವೀಕಾರ:
ತಲ್ಹ(ರ) ಮಕ್ಕಾದಲ್ಲೇ ಹುಟ್ಟಿ ಬೆಳೆದರು. ಅವರು ವ್ಯಾಪಾರಾರ್ಥ ಸಿರಿಯಾಕ್ಕೆ ಹೋಗುತ್ತಿದ್ದರು. ಒಮ್ಮೆ ತರಾತುರಿಯಲ್ಲಿ ಮಕ್ಕಾಗೆ ಹಿಂದಿರುಗಿದ ತಲ್ಹ(ರ) ತನ್ನ ಮನೆಯವರಲ್ಲಿ ಕೇಳಿದರು: “ನಾವು ಹೋದ ನಂತರ ಮಕ್ಕಾದಲ್ಲಿ ಏನಾದರೂ ಸಂಭವಿಸಿತೇ?” ಅವರು “ಹೌದು, ಮುಹಮ್ಮದ್ ಬಿನ್ ಅಬ್ದುಲ್ಲಾ(ಸ) ತಾನು ಪ್ರವಾದಿ ಎಂದು ಘೋಷಿಸಿದ್ದಾರೆ ಮತ್ತು ಅಬೂ ಖುಹಾಫರ ಮಗ (ಅಬೂಬಕರ್) ಅವರನ್ನು ಹಿಂಬಾಲಿಸಿದ್ದಾರೆ” ಎಂದು ಉತ್ತರಿಸಿದರು.
ತಲ್ಹ(ರ) ನೇರವಾಗಿ ಅಬೂಬಕರ್(ರ) ರ ಬಳಿ ಹೋಗಿ ಕೇಳಿದರು: “ಮುಹಮ್ಮದ್ ಬಿನ್ ಅಬ್ದುಲ್ಲಾ(ರ) ಪ್ರವಾದಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ನೀವು ಅವರನ್ನು ಅನುಸರಿಸುತ್ತೀರಿ ಎನ್ನುವುದು ನಿಜವೇ?” “ಹೌದು” ಅಬೂಬಕರ್(ರ) ಉತ್ತರಿಸಿದರು ಮತ್ತು ಪ್ರವಾದಿ(ಸ) ರ ಬಗ್ಗೆ ತಲ್ಹರಿಗೆ ತಿಳಿಸಿದರು.
ಸಿರಿಯಾದಲ್ಲಿ ಬುಸ್ರಾ ಮಾರುಕಟ್ಟೆಯ ಸ್ಥಳದಲ್ಲಿ ಒಬ್ಬ ಸನ್ಯಾಸಿಯೊಂದಿಗೆ ನಡೆದ ವಿಚಿತ್ರ ಮುಖಾಮುಖಿಯ ಕಥೆಯನ್ನು ತಲ್ಹ(ರ) ಅಬೂಬಕರ್(ರ)ಗೆ ತಿಳಿಸಿದರು. ಆ ಸಮಯದಲ್ಲಿ ಸನ್ಯಾಸಿ “ಅಹ್ಮದ್” ಎಂದು ಹೆಸರಿನ ಯಾರಾದರೂ ಮಕ್ಕಾದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಅವರು ಪ್ರವಾದಿಗಳಲ್ಲಿ ಕೊನೆಯವರಾಗಿರುತ್ತಾರೆ ಎಂದು ಹೇಳಲಾಗಿದೆ ಎಂದು ಹೇಳಿದರು. ಆ ಪ್ರವಾದಿ ಮಕ್ಕಾದ ಪವಿತ್ರ ಸ್ಥಳಗಳನ್ನು ಬಿಟ್ಟು ಕಪ್ಪು ಮಣ್ಣು, ನೀರು ಮತ್ತು ಖರ್ಜೂರ ಮರಗಳ ಭೂಮಿಗೆ (ಮದೀನಕ್ಕೆ) ವಲಸೆ ಹೋಗುತ್ತಾರೆ ಎಂದು ಸಹ ಅವರು ಹೇಳಿದರು.
ಅಬೂಬಕರ್(ರ) ಆಶ್ಚರ್ಯಚಕಿತರಾಗಿ ತಲ್ಹ(ರ) ರನ್ನು ಪ್ರವಾದಿ(ಸ) ರ ಬಳಿ ಕರೆದೊಯ್ದರು. ಪ್ರವಾದಿ(ಸ) ಇಸ್ಲಾಂ ಧರ್ಮವನ್ನು ತಲ್ಹ(ರ) ರಿಗೆ ವಿವರಿಸಿ ಕುರ್‌ಆನ್‌ನ ಕೆಲವು ಭಾಗಗಳನ್ನು ಪಠಿಸಿದರು. ತಲ್ಹ(ರ) ಉತ್ಸಾಹಭರಿತರಾಗಿದ್ದರು. ಅವರು ತಕ್ಷಣ ಇಸ್ಲಾಮ್ ಸ್ವೀಕರಿಸಿದರು. ನಂತರ ಬುಸ್ರಾದ ಸನ್ಯಾಸಿಯ ಮಾತುಗಳನ್ನು ಪ್ರವಾದಿ(ಸ) ರಿಗೆ ತಿಳಿಸಿದರು. ಪ್ರವಾದಿ(ಸ) ರಿಗೆ ಸಂತೋಷವಾಯಿತು. ಅಬೂಬಕರ್(ರ) ಇಸ್ಲಾಂ ಧರ್ಮಕ್ಕೆ ಪರಿಚಯಿಸಿದ ನಾಲ್ಕನೇ ವ್ಯಕ್ತಿ ತಲ್ಹ(ರ) ಆಗಿದ್ದರು.
ಹಿಂಸೆ ಮತ್ತು ಕಿರುಕುಳ:
ಯುವಕರಾದ ತಲ್ಹ(ರ) ಇಸ್ಲಾಂ ಧರ್ಮ ಸ್ವೀಕರಿಸಿದ್ದು ಕಂಡು ಖುರೈಷರು ಬೆರಗಾದರು. ಇದರಿಂದ ಹೆಚ್ಚು ನಿರಾಶರಾದದ್ದು ಅವರ ತಾಯಿ. ತನ್ನ ಉದಾತ್ತ ಸ್ವಭಾವ ಮತ್ತು ಅತ್ಯುತ್ತಮ ಸದ್ಗುಣಗಳಿಂದಾಗಿ ಒಂದಿನ ತಲ್ಹ ತನ್ನ ಸಮುದಾಯದಲ್ಲಿ ನಾಯಕನಾಗುತ್ತಾನೆ ಎಂದು ಆಕೆ ಆಶಿಸಿದ್ದಳು. ತಲ್ಹ(ರ) ರನ್ನು ಇಸ್ಲಾಮ್ ಧರ್ಮದಿಂದ ಹಿಮ್ಮೆಟ್ಟಿಸಲು ಕೆಲವು ಖುರೈಷರು ಸಾಧ್ಯವಾದಷ್ಟು ಪ್ರಯತ್ನಿಸಿದರು. ಆದರೆ ಅವರು ಬಂಡೆಯಂತೆ ದೃಢವಾಗಿ ನಿಂತರು. ಸೌಮ್ಯವಾಗಿ ಹೇಳಿ ಮನವೊಲಿಸಲು ವಿಫಲರಾದಾಗ ಅವರು ಹತಾಶರಾಗಿ ಕಿರುಕುಳ ಮತ್ತು ಹಿಂಸೆ ನೀಡತೊಡಗಿದರು. ಮುಂದಿನ ಕಥೆಯನ್ನು ಮಸ್‌ಊದ್ ಬಿನ್ ಖರಶ್ ಹೇಳುತ್ತಾರೆ:
“ನಾನು ಸಫಾ ಮತ್ತು ಮಾರ್ವಾ ನಡುವೆ ಸಈ ಮಾಡುತ್ತಿದ್ದಾಗ, ಒಬ್ಬ ಯುವಕನ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಹಾಕುವ ಜನಸಮೂಹವು ಕಾಣಿಸಿಕೊಂಡಿತು. ಅವರು ಅವನ ತಲೆಯ ಮೇಲೆ ಬಡಿಯುತ್ತಿದ್ದರು. ಗುಂಪಿನಲ್ಲಿ ಒಬ್ಬ ವೃದ್ಧೆ ಅವನನ್ನು ಪದೇ ಪದೇ ಹೊಡೆಯುತ್ತಾ ನಿಂದಿಸುತ್ತಿದ್ದಳು. ನಾನು ಅಲ್ಲಿ ನೆರೆದಿದ್ದವರಲ್ಲಿ ಆ ಯುವಕ ಯಾರೆಂದು ಕೇಳಿದಾಗ, ತಲ್ಹ ಬಿನ್ ಉಬೈದುಲ್ಲಾ ಎಂದು ಅವರು ಉತ್ತರಿಸಿದರು. ಅವರು ತಮ್ಮ ಧರ್ಮವನ್ನು ತ್ಯಜಿಸಿ ಬನೂ ಹಾಶಿಮ್ ಗೋತ್ರದ ಮನುಷ್ಯನನ್ನು ಅನುಸರಿಸುತ್ತಾರೆ. ಆ ಮಹಿಳೆ ಯಾರೆಂದು ಕೇಳಿದಾಗ, ಅದು ಅವನ ತಾಯಿ ಸಅಬಾ ಬಿಂತ್ ಹದ್ರಮಿ ಎಂದು ಅವರು ಉತ್ತರಿಸಿದರು.
ಖುರೈಷರು ಅಷ್ಟಕ್ಕೆ ನಿಲ್ಲಿಸಲಿಲ್ಲ. ‘ಖುರೈಶರ ಸಿಂಹ’ ಎಂದು ಅಡ್ಡ ಹೆಸರಿರುವ ನೌಫಲ್ ಬಿನ್ ಖುವೈಲಿದ್, ತಲ್ಹ(ರ) ರನ್ನು ಹಗ್ಗದಿಂದ ಕಟ್ಟಿ ಅದೇ ಹಗ್ಗದಿಂದ ಅಬೂಬಕರ್(ರ) ರನ್ನು ಸಹ ಕಟ್ಟಿಹಾಕಿ ನಂತರ ಅವರನ್ನು ಮಕ್ಕಾದ ಪೆಡ್ಡೆ ಹುಡುಗರ ವಶಕ್ಕೆ ಒಪ್ಪಿಸಿದನು. ಆ ಘಟನೆ ತಲ್ಹ(ರ) ಮತ್ತು ಅಬೂಬಕರ್(ರ) ಅವರನ್ನು ಇನ್ನಷ್ಟು ಹತ್ತಿರಕ್ಕೆ ತಂದಿತು. ಈ ಕಾರಣದಿಂದಲೇ ಇವರಿಬ್ಬರಿಗೆ ‘ಕರೀನೈನ್’ ಎಂದು ಹೆಸರು ಬಂತೆಂದು ಹೇಳಲಾಗುತ್ತದೆ.
ಹಿಜ್ರ:
ಪ್ರವಾದಿ(ಸ) ಮತ್ತು ಅಬೂಬಕರ್(ರ) ಮದೀನಕ್ಕೆ ಹಿಜ್ರ ಹೋಗುವಾಗ ತಲ್ಹ(ರ) ವ್ಯಾಪಾರಾರ್ಥ ಶಾಮ್‌ನಲ್ಲಿದ್ದರು. ಅವರು ಶಾಮ್‌ನಿಂದ ಹಿಂದಿರುಗುವಾಗ ದಾರಿ ಮಧ್ಯೆ ಪ್ರವಾದಿ(ಸ) ಮತ್ತು ಅಬೂಬಕರ್(ರ) ರನ್ನು ಭೇಟಿಯಾದರು. ನಂತರ ಅವರು ಮಕ್ಕಾಗೆ ಹೋಗಿ ಅಲ್ಲಿರುವ ಮುಸಲ್ಮಾನರೊಂದಿಗೆ ಮದೀನಕ್ಕೆ ಹಿಜ್ರ ಹೋದರು.
ಬದ್ರ್ ಯುದ್ಧ:
ತಲ್ಹ(ರ) ಬದ್ರ್ ಯುದ್ಧದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಪ್ರವಾದಿ(ಸ) ರವರು ಅವರನ್ನು ಮತ್ತು ಸಈದ್ ಬಿನ್ ಝೈದ್(ರ) ರನ್ನು ಮದೀನಾದಿಂದ ಹೊರಗೆ ಕಳುಹಿಸಿದ್ದರು. ಅವರು ಹಿಂದಿರುಗಿದಾಗ ಪ್ರವಾದಿ(ಸ) ಮತ್ತು ಸಹಾಬಾಗಳು ಅದಾಗಲೇ ಬದ್ರ್ ಯುದ್ಧ ಮುಗಿದು ಹಿಂದಿರುಗುವ ಮಾರ್ಗದಲ್ಲಿದ್ದರು. ಪ್ರವಾದಿ(ಸ) ರೊಂದಿಗಿನ ಮೊದಲ ಯುದ್ಧದಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡಿರುವುದರಲ್ಲಿ ಅವರಿಬ್ಬರೂ ದುಃಖಿತರಾಗಿದ್ದರು. ಆದರೆ ಬದ್ರ್ ಯುದ್ಧದಲ್ಲಿ ಹೋರಾಡಿದವರಿಗೆ ಸಿಗುವ ಅದೇ ಪ್ರತಿಫಲ ನಿಮಗೂ ಸಿಗುತ್ತದೆ ಎಂದು ಹೇಳಿದಾಗ ಅವರು ಬಹಳ ಸಂತೋಷಪಟ್ಟರು.
ಉಹುದ್ ಯುದ್ಧ:
ಉಹುದ್ ಯುದ್ದದಲ್ಲಿ ತಲ್ಹ(ರ) “ಜೀವಂತ ಹುತಾತ್ಮ” ಎಂಬ ಹೆಸರನ್ನು ಗಳಿಸಿದರು. ಉಹುದ್ ಯುದ್ಧದಲ್ಲಿ ಮುಸ್ಲಿಮರು ಅಸ್ತವ್ಯಸ್ತರಾದಾಗ ಪ್ರವಾದಿ(ಸ) ಅಪಾಯಕಾರಿ ಸ್ಥಿತಿಯಲ್ಲಿದ್ದರು. ಅವರ ಬಳಿ ಹನ್ನೊಂದು ಅನ್ಸಾರಿಗಳು ಮತ್ತು ಒಬ್ಬ ಮುಹಾಜಿರ್ (ತಲ್ಹ(ರ) ಬಿನ್ ಉಬೈದುಲ್ಲಾ) ಇದ್ದರು. ಪ್ರವಾದಿ(ಸ) ಪರ್ವತವನ್ನು ಹತ್ತುತ್ತಿದರು. ಹಿಂದಿನಿಂದ ಕೆಲವು ಮುಶ್ರಿಕರು ಬೆನ್ನಟ್ಟಿ ಬರುತ್ತಿದ್ದರು. ಪ್ರವಾದಿ(ಸ) ಕೂಗಿ ಹೇಳಿದರು: “ಈ ಜನರನ್ನು ನಮ್ಮಿಂದ ಹಿಮ್ಮೆಟ್ಟಿಸಲು ಯಾರಿದ್ದೀರಿ?” ತಲ್ಹ(ರ) ಹೇಳಿದರು: “ಓ ಪ್ರವಾದಿಯವರೇ, ನಾನಿದ್ದೇನೆ.” “ಇಲ್ಲ, ನಿಮ್ಮ ಸ್ಥಾನದಲ್ಲಿರಿ” ಪ್ರವಾದಿ ಉತ್ತರಿಸಿದರು. ಆಗ ಒಬ್ಬ ಅನ್ಸಾರಿ ಸಹಾಬಿ ಮುಂದೆ ಬಂದರು. ಅವರು ಶತ್ರುಗಳೊಂದಿಗೆ ಹೋರಾಡಿ ಹುತಾತ್ಮರಾದರು. ಮುಶ್ರಿಕರು ಇನ್ನೂ ಹತ್ತಿರಕ್ಕೆ ಬರುತ್ತಿದ್ದರು. ಪ್ರವಾದಿ(ಸ) ಪರ್ವತದ ಮೇಲೆ ಏರುತ್ತಾ ಕೇಳಿದರು. “ಇವರನ್ನು ನಮ್ಮಿಂದ ಹಿಮ್ಮೆಟ್ಟಿಸಲು ಯಾರಿದ್ದೀರಿ?” ತಲ್ಹ(ರ) ಮತ್ತೆ ನಾನಿದ್ದೇನೆ ಎಂದರು. ಆದರೆ ಪ್ರವಾದಿ(ಸ) ಅವರನ್ನು ಹೋಗಲು ಬಿಡಲಿಲ್ಲ. ಆಗ ಇನ್ನೊಬ್ಬ ಅನ್ಸಾರಿ ಸಹಾಬಿ ಮುಂದೆ ಬಂದು ಅವರೊಡನೆ ಯುದ್ಧ ಮಾಡಿ ಹುತಾತ್ಮರಾದರು. ತಲ್ಹ(ರ) ರನ್ನು ಹೊರತುಪಡಿಸಿ ಪ್ರವಾದಿ(ಸ) ರೊಂದಿಗೆ ನಿಂತವರೆಲ್ಲರೂ ಹುತಾತ್ಮರಾಗುವವರೆಗೂ ಇದು ಮುಂದುವರಿಯಿತು.
ಈಗ ಪ್ರವಾದಿ(ಸ) ತಲ್ಹ(ರ) ರನ್ನು ಯುದ್ಧಕ್ಕೆ ಕಳುಹಿಸಿದರು. ಈ ಹೊತ್ತಿಗೆ, ಪ್ರವಾದಿ(ಸ) ರ ಹಲ್ಲುಗಳು ಮುರಿದು ಹೋಗಿದ್ದವು ಮತ್ತು ಹಣೆಯ ಭಾಗ ಒಡೆದಿತ್ತು. ಅವರ ತುಟಿಗಳು ಗಾಯಗೊಂಡಿದ್ದವು. ಅವರ ಮುಖದಲ್ಲಿ ರಕ್ತ ಹರಿಯುತ್ತಿತ್ತು. ಅವರು ತುಂಬಾ ಬಳಲಿದ್ದರು. ತಲ್ಹ(ರ) ಶತ್ರುಗಳೊಡನೆ ಧೀರವಾಗಿ ಹೋರಾಡಿದರು. ನಂತರ ಮತ್ತೆ ಪ್ರವಾದಿ(ಸ) ರ ಕಡೆಗೆ ತಿರುಗಿ ಪರ್ವತದ ಮೇಲೆ ಸ್ವಲ್ಪ ಮುಂದೆ ನೆಲದ ಮೇಲೆ ಮಲಗಲು ಸಹಾಯ ಮಾಡಿದರು. ನಂತರ ತನ್ನ ದಾಳಿಯನ್ನು ಮುಂದುವರಿಸಿ ಶತ್ರುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು.
ಅಬೂಬಕರ್(ರ) ಹೇಳುತ್ತಾರೆ: “ಆಗ ನಾನು ಮತ್ತು ಅಬೂ ಉಬೈದ ಪ್ರವಾದಿ(ಸ) ರಿಂದ ದೂರವಿದ್ದೆವು. ಅವರಿಗೆ ಸಹಾಯ ಮಾಡಲು ಹತ್ತಿರ ಬಂದಾಗ, ಪ್ರವಾದಿ(ಸ) ಹೇಳಿದರು: “ನನ್ನನ್ನು ಬಿಟ್ಟು ನಿಮ್ಮ ಸಹಚರನ (ತಲ್ಹ) ಬಳಿಗೆ ಹೋಗಿ.” ತಲ್ಹ ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಅವರ ದೇಹದಲ್ಲಿ ಖಡ್ಗ, ಈಟಿ ಮತ್ತು ಬಾಣದ 70 ಕ್ಕಿಂತಲೂ ಹೆಚ್ಚು ಗಾಯಗಳಿದ್ದವು. ಅವರ ಬೆರಳು ಕತ್ತರಿಸಲ್ಪಟ್ಟಿತ್ತು.”
ಉಹುದ್ ಯುದ್ಧವನ್ನು ನೆನಪಿಸಿಕೊಂಡಾಗಲೆಲ್ಲಾ, ಅಬೂಬಕರ್(ರ) ಹೇಳುತ್ತಿದ್ದರು, “ಆ ದಿನ, ಆ ಇಡೀ ದಿನ, ತಲ್ಹರಿಗೆ ಸೇರಿದೆ”.
ಉಸ್ಮಾನ್(ರ) ರವರ ಕೊಲೆ:
ಉಸ್ಮಾನ್(ರ) ರವರ ಖಿಲಾಫತ್ ಸಮಯದಲ್ಲಿ ಪಿತೂರಿಯ ಬೀಜಗಳನ್ನು ಬಿತ್ತಲಾಯಿತು. ಅವರ ವಿರುದ್ಧ ಅನೇಕ ದೂರು ಮತ್ತು ಆರೋಪಗಳು ಬಂದವು. ಕೆಲವು ಕಿಡಿಗೇಡಿಗಳು ಆರೋಪಗಳಿಂದ ಮಾತ್ರ ತೃಪ್ತರಾಗಲಿಲ್ಲ. ಬದಲಾಗಿ ಅವರನ್ನು ಮುಗಿಸಲು ನಿರ್ಧರಿಸಿದರು. ಹಿಜರಿ 35 (ಕ್ರಿ.ಶ. 656) ದಂಗೆಕೋರರ ಗುಂಪು ಉಸ್ಮಾನ್(ರ) ರ ಮನೆಗೆ ನುಗ್ಗಿ ಅವರು ಕುರ್‌ಆನ್ ಓದುವಾಗ ಕೊಲೆ ಮಾಡಿದರು. ಇದು ಇಸ್ಲಾಂ ಧರ್ಮದ ಆರಂಭಿಕ ಇತಿಹಾ ಸದಲ್ಲಿ ಅತ್ಯಂತ ಆಘಾತಕಾರಿ ಘಟನೆಯಾಗಿದೆ.
ಅಲೀ(ರ) ರವರು ಖಲೀಫರಾದರು. ತಲ್ಹ(ರ) ಮತ್ತು ಝುಬೈರ್ ಬಿನ್ ಅವ್ವಾಮ್(ರ) ಸೇರಿದಂತೆ ಎಲ್ಲಾ ಮುಸ್ಲಿಮರು ಅವರಿಗೆ ಬೈಅತ್ ಮಾಡಿದರು. ಮೊತ್ತಮೊದಲು ಬೈಅತ್ ಮಾಡಿದವರು ತಲ್ಹ(ರ) ಎಂದು ಹೇಳಲಾಗುತ್ತದೆ. ಉಸ್ಮಾನ್(ರ) ರ ಹತ್ಯೆಯಿಂದ ತಲ್ಹ(ರ) ಮತ್ತು ಝುಬೈರ್(ರ) ತೀವ್ರ ಆಘಾತಕ್ಕೊಳಗಾಗಿದ್ದರು. ಕೊಲೆಗಾರರಿಗೆ ಶಿಕ್ಷೆಯಾಗಬೇಕು ಮತ್ತು ಉಸ್ಮಾನ್(ರ)ರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಅಲೀ(ರ) ರೊಂದಿಗೆ ಬಲವಾಗಿ ವಾದಿಸಿದರು. ಆದರೆ ಅಪರಾಧವು ಕೇವಲ ಕೆಲವು ವ್ಯಕ್ತಿಗಳ ಕೆಲಸವಾಗಿರಲಿಲ್ಲ. ಬದಲಾಗಿ ಕೊಲೆಗಾರರು ಸಾಮ್ರಾಜ್ಯದಾದ್ಯಂತ ವ್ಯಾಪಿಸಿರುವುದರಿಂದ ಅವರನ್ನು ಶಿಕ್ಷಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದ್ದರಿಂದ ಅಲೀ(ರ) ಆಂತರಿಕ ಕೋಭೆ ತಣಿದ ನಂತರ ಆ ಬಗ್ಗೆ ಯೋಚಿಸುವಂತೆ ಹೇಳಿದರು.
ತಲ್ಹ(ರ) ಮತ್ತು ಝುಬೈರ್(ರ) ಉಮ್ರಾ ನಿರ್ವಹಿಸಲು ಮಕ್ಕಾಗೆ ಹೋದರು. ಅಲ್ಲಿ ಅವರು ಆಯಿಷಾ(ರ) ರನ್ನು ಭೇಟಿಯಾದರು. ಉಸ್ಮಾನ್(ರ) ರ ಹತ್ಯೆಯ ಬಗ್ಗೆ ತಿಳಿದು ಅವರು ಆಗಲೇ ಆಘಾತಕ್ಕೊಳಗಾಗಿದ್ದರು. ತಲ್ಲ(ರ), ಝುಬೈರ್(ರ) ಮತ್ತು ಆಯಿಷಾ(ರ) ಅಲ್ಲಿಂದ ಬಸ್ರಾಕ್ಕೆ ಹೊರಟರು. ಅಲ್ಲಿ ಉಸ್ಮಾನ್(ರ) ರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಯುದ್ಧರಂಗದಲ್ಲಿ:
ಉಸ್ಮಾನ್(ರ) ರವರ ಕೊಲೆಗೆ ಪ್ರತೀಕಾರ ತೀರಿಸಲು ಜನರು ಬಸ್ರಾದಲ್ಲಿ ಒಟ್ಟುಗೂಡಿದ್ದಾರೆಂಬ ಸುದ್ದಿ ತಿಳಿದ ಅಲೀ(ರ) ಒಬ್ಬ ಖಲೀಫರಾಗಿ ಅವರ ನಡುವೆ ಸಂಧಾನ ನಡೆಸುವುದಕ್ಕಾಗಿ ಬಸ್ರಾಗೆ ತೆರಳಿದರು. ಅಲ್ಲಿ ಅವರ ಮತ್ತು ತಲ್ಹ(ರ) ಹಾಗೂ ಝುಬೈರ್(ರ) ರವರ ನಡುವೆ ನಡೆದ ಅನೇಕ ಮಾತುಕತೆಗಳಿಂದ ಅಂತರಿಕ್ಷವು ತಿಳಿಯಾಗಿ ಸಂಶಯಗಳು ದೂರವಾಗಿ ಎಲ್ಲರೂ ನೆಮ್ಮದಿಯಿಂದ ಆ ರಾತ್ರಿ ಮಲಗಿದರು. ಮರುದಿನ ಎಲ್ಲರೂ ತಮ್ಮ ತಮ್ಮ ಊರಿಗೆ ಮರಳುವುದೆಂದು ತೀರ್ಮಾನಿಸಲಾಯಿತು.
ಆದರೆ ಆ ರಾತ್ರಿ ಪಿತೂರಿಗಾರರು ನೆಮ್ಮದಿಯಿಂದ ಮಲಗಲಿಲ್ಲ. ಜನರ ನಡುವೆ ಒಮ್ಮತ ಮೂಡಿದರೆ ಅದು ತಮಗೆ ಅಪಾಯಕಾರಿ ಎಂದು ಅರಿತ ಆ ಕಿಡಿಗೇಡಿಗಳು ಪ್ರಭಾತಕ್ಕೆ ಮುಂಚೆಯೇ ಎರಡೂ ಕಡೆ ದಾಳಿ ಮಾಡಿದರು. ಇದರಿಂದ ಎರಡೂ ಕಡೆಯ ಸೈನಿಕರು ಪರಸ್ಪರ ತಪ್ಪು ತಿಳಿದು ಯುದ್ಧವನ್ನು ಆರಂಭಿಸಿದರು. ಒಂದು ಕಡೆ ತಲ್ಹ(ರ) ಮತ್ತು ಝುಬೈರ್(ರ) ಮತ್ತು ಇನ್ನೊಂದು ಕಡೆ ಅಲೀ(ರ) ಎಷ್ಟೇ ವಿನಂತಿಸಿದರೂ ಜನರು ಹೋರಾಡುವುದನ್ನು ಬಿಡಲಿಲ್ಲ. ಕೊನೆಗೆ ಜನರು ತನ್ನ ಮಾತಾದರೂ ಕೇಳಬಹುದೆಂದು ಅಂದುಕೊಂಡು ಆಯಿಶ(ರ) ಒಂಟೆಯ ಮೇಲೇರಿ ಯುದ್ಧರಂಗಕ್ಕೆ ಬಂದರು. ಅವರು ಕೂಡ ಯುದ್ಧ ನಿಲ್ಲಿಸುವಂತೆ ಪರಿಪರಿಯಾಗಿ ಬೇಡಿಕೊಂಡರು. ಆದರೂ ಜನರು ಅವರ ಮಾತಿಗೆ ಕಿವಿಗೊಡಲಿಲ್ಲ.
ತಲ್ಹ(ರ) ಅಲೀ(ರ) ರವರ ವಿರುದ್ಧ ಹೋರಾಡಿಲ್ಲ. ಹೋರಾಡುವ ಉದ್ದೇಶವೂ ಅವರಿಗಿರಲಿಲ್ಲ. ಬದಲಾಗಿ ಉಸ್ಮಾನ್(ರ) ರವರ ಕೊಲೆಗಾರರನ್ನು ಶಿಕ್ಷಿಸಿ ನ್ಯಾಯವನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು. ಇದು ಇಂತಹ ಒಂದು ರಕ್ತಸಿಕ್ತ ಘಟನೆಯೊಂದಿಗೆ ಕೊನೆಗೊಳ್ಳುತ್ತದೆ ಎಂದು ಅವರು ಖಂಡಿತ ಊಹಿಸಿರಲಿಲ್ಲ.
ಮರಣ:
ಯುದ್ಧದ ನಡುವೆ ಒಬ್ಬ ಕಿಡಿಗೇಡಿ (ಇದು ಮರ್ವಾನ್ ಬಿನ್ ಹಕಮ್ ಎಂದು ಹೇಳಲಾಗುತ್ತದೆ. ಆದರೆ ಈ ಬಗ್ಗೆ ಬಲವಾದ ಸಾಕ್ಷಿಯಿಲ್ಲ) ಎಸೆದ ಬಾಣ ತಲ್ಹ(ರ) ರವರ ಕಾಲಿಗೆ ತಾಗಿ ವಿಪರೀತ ರಕ್ತಸ್ರಾವವಾಗಲು ಆರಂಭವಾಯಿತು. ಅವರನ್ನು ಯುದ್ಧರಂಗದಿಂದ ಎತ್ತಿ ಹತ್ತಿರದ ಮನೆಗೆ ಒಯ್ಯಲಾಯಿತು. ಆದರೆ ವಿಪರೀತ ರಕ್ತಸ್ರಾವದಿಂದ ಅವರು ಅಲ್ಲೇ ಅಸುನೀಗಿದರು.