ತನ್ನ ಸಹಾಬಿಗಳಲ್ಲಿ ಹತ್ತು ಮಂದಿ ಸ್ವರ್ಗದಲ್ಲಿರುವರೆಂದು ಪ್ರವಾದಿ(ಸ)ರವರು ಸ್ಪಷ್ಟವಾಗಿ ಹೇಳಿದ್ದಾರೆ.
ಅಹ್ಮದ್‌ರವರು ಸಈದ್ ಇಬ್ನ್ ಝೈದ್(ರ)ಯವರು ಮತ್ತು ತಿರ್ಮುದಿ ಅಬ್ದುರ್-ರಹ್ಮಾನ್ ಇಬ್ನ್ ಔಫ್(ರ)ರಿಂದ ಸಹೀಹಾದ ಸನದ್‌ನೊಂದಿಗೆ ವರದಿ ಮಾಡಿದ ಹದೀಸಿನಲ್ಲಿ ಪ್ರವಾದಿ(ಸ)ರವರು ಹೇಳಿದ್ದಾರೆ: “ಅಬೂಬಕ್ರ್ ಸ್ವರ್ಗದಲ್ಲಿ, ಉಮರ್ ಸ್ವರ್ಗದಲ್ಲಿ, ಉಸ್ಮಾನ್ ಸ್ವರ್ಗದಲ್ಲಿ, ಅಲೀ ಸ್ವರ್ಗದಲ್ಲಿ, ತಲ್‌ಹಾ ಸ್ವರ್ಗದಲ್ಲಿ, ಝುಬೈರ್ ಸ್ವರ್ಗದಲ್ಲಿ, ಅಬ್ದುರ್-ರಹ್ಮಾನ್ ಇಬ್ನ್ ಔಫ್ ಸ್ವರ್ಗದಲ್ಲಿ, ಸಅ್‌ದ್ ಸ್ವರ್ಗದಲ್ಲಿ, ಸಈದ್ ಸ್ವರ್ಗದಲ್ಲಿ ಮತ್ತು ಅಬೂ ಉಬೈದಾ ಇಬ್ನುಲ್ ಜರ್-ರಾಹ್ ಸ್ವರ್ಗದಲ್ಲಿ “. ಇದರ ಸನದ್ ಸಹೀಹ್ ಆಗಿದೆ. ನೋಡಿ” ಸಹೀಹುಲ್ ಜಾಮಿಇಸ್ಸಗೀರ್ 1:70, ಹದೀಸ್ ನಂ. 50.
ಅಹ್ಮದ್, ಅಬೂದಾವೂದ್ ಮತ್ತು ಇಬ್ನ್ ಮಾಜರವರು ಸಈದ್ ಇಬ್ನ್ ಝೈದ್(ರ)ರಿಂದ ಇದೇ ಹದೀಸನ್ನು ಸ್ವಲ್ಪ ವ್ಯತ್ಯಸ್ತವಾಗಿ ವರದಿ ಮಾಡಿದ್ದಾರೆ. ಆ ಹದೀಸಿನಲ್ಲಿ ಪ್ರವಾದಿ(ರ)ರವರು ಹೇಳಿದ್ದಾರೆ: “ಹತ್ತು ಮಂದಿ ಸ್ವರ್ಗದಲ್ಲಿ, ಅಬೂ ಬಕ್ರ್ ಸ್ವರ್ಗದಲ್ಲಿ, ಉಮರ್ ಸ್ವರ್ಗದಲ್ಲಿ, ಉಸ್ಮಾನ್ ಸ್ವರ್ಗದಲ್ಲಿ, ಅಲೀ ಸ್ವರ್ಗದಲ್ಲಿರುವರು, ತಲ್‌ಹಾ ಸ್ವರ್ಗದಲ್ಲಿ, ಝುಬೈದ್ ಇಬ್ನುಲ್ ಅವ್ವಾಮ್ ಸ್ವರ್ಗದಲ್ಲಿ, ಸಅ್‌ದ್ ಇಬ್ನ್ ಮಾಲಿಕ್ ಸ್ವರ್ಗದಲ್ಲಿರುವರು, ಅಬ್ದುಲ್ಲಾಹ್ ಇಬ್ನ್ ಔಫ್ ಸ್ವರ್ಗದಲ್ಲಿ ಮತ್ತು ಸಈದ್ ಇಬ್ನ್ ಝೈದ್ ಸ್ವರ್ಗದಲ್ಲಿ “. ಇದರ ಸನದ್ ಸಹೀಹ್ ಆಗಿದೆ. ನೋಡಿ: ಸಹೀಹುಲ್ ಜಾಮಿಇಸ್ಸಗೀರ್ 4:35, ಹದೀಸ್ ನಂ. 3905.
ಒಮ್ಮೆ ಪ್ರವಾದಿ (ಸ)ರವರು ಆರೀಸ್ ಎಂಬ ಕೊಳದಲ್ಲಿ ಕುಳಿತಿದ್ದರು. ಅಬೂ ಮೂಸಾ ಅಲ್‌ಅಶ್‌ಅರೀ(ರ)ರವರಿಗೆ ಕಾವಲಾಗಿ ನಿಂತಿದ್ದರು. ಆಗ ಅಬುಜ ಬಕ್ರ್(ರ)ರವರು ಪ್ರವಾದಿ(ಸ)ರವರನ್ನು ಕಾಣಲು ಅನುಮತಿ ಕೇಳಿದರು.
ಪ್ರವಾದಿ(ಸ)ರವರು ಹೇಳಿದರು: “ಅವನಿಗೆ ಅನುಮತಿ ನೀಡು ಮತ್ತು ಅವನಿಗೆ ಸ್ವರ್ಗವಿದೆಯೆಂದು ಶುಭವಾರ್ತೆಯನ್ನು ತಿಳಿಸು “. ನಂತರ ಉಮರ್(ರ) ಬಂದರು. ಆಗ ಪ್ರವಾದಿ(ಸ)ರವರು ಹೇಳಿದರು: ಅವನಿಗೆ ಅನುಮತಿ ನೀಡು ಮತ್ತು ಸ್ವರ್ಗವಿದೆಯೆಂದು ಅವನಿಗೆ ಶುಭವಾರ್ತೆ ತಿಳಿಸು”. ನಂತರ ಉಸ್ಮಾನ್(ರ) ಬಂದರು. ಪ್ರವಾದಿ(ಸ)ರವರು ಹೇಳಿದರು: “ಅವನಿಗೆ ಅನುಮತಿ ನೀಡು. ಅವನಿಗೆ ಒಂದು ಪರೀಕ್ಷೆಯು ಬಾಧಿಸಲಿದೆ. ಆದ್ದರಿಂದ ಅವನಿಗೆ ಸ್ವರ್ಗವಿದೆಯೆಂದು ಶುಭವಾರ್ತೆ ನೀಡು”. ಇದನ್ನು ಬುಖಾರಿ, ಮುಸ್ಲಿಮ್ ಮತ್ತು ತಿರ್ಮುದಿ ವರದಿ ಮಾಡಿದ್ದಾರೆ. ಇದೊಂದು ಸುಧೀರ್ಘ ಹದೀಸ್ ಆಗಿದೆ. ನಾವಿದನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡಿದ್ದೇವೆ.
ಇಬ್ನ್ ಮಸ್‌ಊದ್(ರ)ರಿಂದ ಸಹೀಹಾದ ಸನದ್‌ನೊಂದಿಗೆ ಇಬ್ನ್ ಅಸಾಕಿರ್ ವರದಿ ಮಾಡಿದ ಹದೀಸೊಂದರಲ್ಲಿ ಪ್ರವಾದಿ(ಸ)ರವರು ಹೇಳಿದ್ದಾರೆ: “ನನ್ನ ನಂತರ ನಿಲ್ಲುವವನು ಸ್ವರ್ಗದಲ್ಲಿರುವನು. ಅವನ ನಂತರ ನಿಲ್ಲುವವನು ಸ್ವರ್ಗದಲ್ಲಿರುವನು. ಮೂರನೆಯವನು ಮತ್ತು ನಾಲ್ಕನೆಯವನು ಸ್ವರ್ಗದಲ್ಲಿರುವರು”. (ಸಹೀಹುಲ್ ಜಾಮಿಇಸ್ಸಗೀರ್ 4:149, ಹದೀಸ್ ನಂ. 4311). ನನ್ನ ನಂತರ ನಿಲ್ಲುವವನು ಎಂಬುದರ ತಾತ್ಪರ್ಯವು ನನ್ನ ನಂತರ ಆಡಳಿತ ನಡೆಸುವವನು ಎಂದಾಗಿದೆ. ಅರ್ಥಾತ್ ಅಬೂ ಬಕ್ರ್, ಉಮರ್, ಉಸ್ಮಾನ್ ಮತ್ತು ಅಲೀ ಸ್ವರ್ಗದಲ್ಲಿರುವರು ಎಂದಾಗಿದೆ.
ತಿರ್ಮುದಿ ಮತ್ತು ಹಾಕಿಮ್ ಸಹೀಹಾದ ಸನದ್‌ನೊಂದಿಗೆ ಆಯಿಶಾ(ರ)ರಿಂದ ವರದಿ ಮಾಡಿದ ಹದೀಸೊಂದರಲ್ಲಿ ಪ್ರವಾದಿ (ಸ)ರವರು ಅಬೂ ಬಕ್ರ್(ರ)ರೊಂದಿಗೆ ಹೇಳಿದರು: “ನೀನು ನರಕದಿಂದ (ವಿಮೋಚನಗೊಳಿಸಲ್ಪಟ್ಟ) ಅಲ್ಲಾಹನ ಅತೀಕ್ (ವಿಮೋಚನೆಗೊಳಿಸಲ್ಪಟ್ಟವನು) ಆಗಿರುವೆ”. (ಸಹೀಹುಲ್ ಜಾಮಿಇಸ್ಸಗೀರ್ 2:24, ಹದೀಸ್ ನಂ. 1494).
– ಶಿಹಾಬ್ ತಲಪಾಡಿ