ಸೂಫಿಗಳು ಇಸ್ಲಾಮ್ ಧರ್ಮವನ್ನು ನಾಲ್ಕು ವಿಭಾಗಗಳಾಗಿ ಮಾಡಿದ್ದಾರೆ. ಇದು ಅವರ ಇಷ್ಟಾನುಸಾರ ಮಾಡಿದ ವಿಂಗಡಣೆ. ಶರೀಅತ್, ಹಕೀಕತ್, ಝಾಹಿರ್ ಹಾಗೂ ಬಾತ್ವಿನ್.
ಶರೀಅತ್ ಅಂದರೆ ಧಾರ್ಮಿಕ ನಿಯಮಗಳು. ಹಕೀಕತ್ ಅಂದರೆ ಅಂತಃಸ್ಸತ್ವ. ಝಾಹಿರ್ ಅಂದರೆ ಪ್ರತ್ಯಕ್ಷ. ಬಾತ್ವಿನ್ ಅಂದರೆ ಪರೋಕ್ಷ. ಶರೀಅತ್ ಮತ್ತು ಝಾಹಿರ್ ಸಾಮಾನ್ಯ ಮುಸ್ಲಿಮರಿಗೆಂದೂ ಹಕೀಕತ್ ಮತ್ತು ಬಾತ್ವಿನ್ ಸೂಫಿಗಳದ್ದೆಂದೂ ವಿಂಗಡಿಸಿದ್ದಾರೆ. ಸೂಫಿಗಳು ಅಸಾಮಾನ್ಯರು. ಅಷ್ಟೇ ಅಲ್ಲ, ಅವರಲ್ಲಿ ಅಸಾಮಾನ್ಯರಲ್ಲಿ ಅಸಾಮಾನ್ಯರು ಇದ್ದಾರೆ ಎಂದು ನಂಬಿಸಲಾಗಿದೆ. ಶರೀಅತ್ ಮತ್ತು ಝಾಹಿರ್ ನಿಯಮಗಳು ಕುರ್‌ಆನ್ – ಹದೀಸ್‌ಗಳ ಬಾಹ್ಯ ಅರ್ಥಗಳು. ಹಕೀಕತ್ ಮತ್ತು ಬಾತ್ವಿನ್ ಅಂದರೆ ಅವುಗಳ ಅಂತಃಸ್ಸತ್ವ ಎಂದು ಹೇಳುತ್ತಾರೆ. ಕುರ್‌ಆನ್ – ಹದೀಸ್ ಕಲಿತವರು ಶರೀಅತಿನ ವಿದ್ವಾಂಸರಾಗುತ್ತಾರೆ. ಆದರೆ ಸೂಫಿಗಳಿಗೆ ಅದನ್ನು ಕಲಿಯಬೇಕಾದ ಅಗತ್ಯವಿಲ್ಲ. ಅವುಗಳ ತಿರುಳು( ಸತ್ವ) ಅವರಿಗೆ ಗೊತ್ತಿರುತ್ತದೆಯಂತೆ. ಮಲಕ್‌ಗಳು, ಪ್ರವಾದಿಗಳು, ಔಲಿಯಾಗಳು, ಸಮಾಧಿಗಳೊಂದಿಗೆ ನಡೆಸುವ ಸಂಭಾಷಣೆ ಮುಂತಾದ ಮಾಧ್ಯಮಗಳ ಮೂಲಕ ಸೂಫಿಗಳಿಗೆ ಅಂತಃಸ್ಸತ್ವ ಜ್ಞಾನ ದೊರೆಯುವುದಂತೆ. “ನಿಮಗೆ ಕಲಿಸಿದ ಗುರುಗಳೂ ಅವರ ಗುರುಗಳೂ ತೀರಿ ಹೋಗಿರುತ್ತಾರೆ. ಆದರೆ ನಮಗೆ ಜ್ಞಾನ ಕೊಡುವವನು ತೀರಿ ಹೋಗದವನಾಗಿರುತ್ತಾನೆ. ನೀವು ನನಗೆ ಇಂತಿಂತಹ ವ್ಯಕ್ತಿ ಕಲಿಸಿದರು ಎನ್ನುವಿರಿ. ನಾವು ಅಲ್ಲಾಹನ ಬಗ್ಗೆ ನನ್ನ ಮನಸ್ಸು ಹೇಳಿತು ಎಂದು ಹೇಳಿ ಜ್ಞಾನ ಕೊಡುತ್ತೇವೆ” ಎಂಬ ಸೂಫಿಗಳ ಮಾತನ್ನು “ಅಲ್ ಫಿಕರು ಸ್ಸೂಫೀ ” ಎಂಬ ಗ್ರಂಥದಲ್ಲಿ ಕಾಣಬಹುದು.
“ ಪ್ರವಾದಿಯವರು ಕನಸಿನಲ್ಲಿ ನನಗೆ ಗ್ರಂಥವನ್ನು ಕೊಟ್ಟರು” ಎಂದವರಿದ್ದಾರೆ. ನಾನು ಅರ್ಶ್‌ನತ್ತ ಹೋಗಿ ಬರುತ್ತಿದ್ದೇನೆ. ನನ್ನ ದೃಷ್ಟಿ ಯಾವಾಗಲೂ ಲೌಹುಲ್‌ಮಹ್‌ಫೂಝ್‌ನಲ್ಲಿರುತ್ತದೆ ಎಂದೆಲ್ಲಾ ಸೂಫಿಗಳು ಹೇಳಿದ ಬಗ್ಗೆ ನಂಬಲಾಗುತ್ತಿದೆ.
ಕೆಲವೊಮ್ಮೆ ಸೂಫಿಗಳೇ ಅಲ್ಲಾಹನಾಗುತ್ತಾರೆ ಅಥವಾ ಅಲ್ಲಾಹನ ಅವತಾರವಾಗುತ್ತಾರೆ. ಎಲ್ಲಾ ವಸ್ತುವನ್ನು ಅಲ್ಲಾಹ್ ಎನ್ನುವವರೂ ಇದ್ದಾರೆ. ಇರುವುದೆಲ್ಲ ಅಲ್ಲಾಹನೇ. ಬೇರೆ ಏನೂ ಇಲ್ಲ ಎಂಬ ವಾದದವರೂ ಇದ್ದಾರೆ. ಸೃಷ್ಟಿಕರ್ತ, ಸೃಷ್ಟಿ ಎಂಬ ವಿಂಗಡಣೆ ಇಲ್ಲವೆಂಬ ಅದ್ವೈತವಾದ ಇದರ ಘೋಷಣೆಯಾಗಿದೆ. “ಲಾ ಮೌಜೂದ ಇಲ್ಲಲ್ಲಾಹ್” ಎಂಬ ಸೂಫಿಗಳ ದಿಕ್ರ್‌ನ ಅರ್ಥ ಅಲ್ಲಾಹನಲ್ಲದೆ ಬೇರೇನೂ ಇಲ್ಲ ಎಂದಾಗಿದೆ. ರೊಟ್ಟಿ ತಿನ್ನುತ್ತಿರವ ಓರ್ವ ಸೂಫಿಯನ್ನು ಕಂಡಾಗ ಮತ್ತೊಬ್ಬ ಸೂಫಿ ಹೇಳಿದ್ದು “ಒಬ್ಬ ದೇವನನ್ನು ಮತ್ತೊಬ್ಬ ದೇವ ತಿನ್ನುತ್ತಿದ್ದಾನೆ” ಎಂದಾಗಿತ್ತು. ಇವರ ಭಾಷೆಯಲ್ಲಿ ರೊಟ್ಟಿಯೇ ದೇಬ. ಸೂಫಿಯೇ ದೇವ. “ನಾಯಿ, ಹಂದಿ ಕೂಡಾ ನಮ್ಮ ದೇವರು. ಅಲ್ಲಾಹ್ ಇಗರ್ಜಿಯಲ್ಲಿರುವ ಪಾದ್ರಿಯಲ್ಲೂ, ಕಂಬದಲ್ಲೂ, ಹುಲ್ಲು ಕಡ್ಡಿಯಲ್ಲೂ, ಕೈಯಲ್ಲೂ, ಜೇಬಲ್ಲುಜ ಇದ್ದಾನೆ” ಎಂದು ಹೇಳಿದ ಸೂಫಿಗಳಿದ್ದಾರೆ. ಆರಾಧಕ, ಆರಾಧ್ಯ ಎಂಬ ವ್ಯತ್ಯಾಸವಿಲ್ಲದ್ದರಿಂದ ಶರೀಅತ್ ನಿಯಮಗಳ ಅಗತ್ಯವಿಲ್ಲ ಎಂಬ ವಾದವಿರುವ ಸೂಫಿಗಳೂ ಇದ್ದಾರೆ. ಸೂಫಿಗಳು ಜನರಿಗೆ ಧರ್ಮ ಬೋಧನೆ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಓರ್ವ ಮುಸ್ಲಿಯಾರ್ ಕೊಡುವ ಉತ್ತರ ಹೀಗಿದೆ: ಕಾಣುತ್ತಿರುವುದೆಲ್ಲ ಅಲ್ಲಾಹು. ಅವರಿಗೆ ಎಲ್ಲೆಲ್ಲೂ ಅಲ್ಲಾಹನೇ ಕಾಣುತ್ತರುವಾಗ ಯಾರಿಗೆ ಧರ್ಮ ಬೋಧನೆ ಮಾಡಬೇಕೇ? (ವಹ್ದತ್ ಮಾಲೆ ವ್ಯಾಖ್ಯಾನ 219).
ಇಬ್ನು ಅರಬಿ ಹೇಳುತ್ತಾರೆ : “ಅಲ್ಲಾಹನು ಒಂದು ಸತ್ಯ. ದಾಸನೂ ಸತ್ಯ. ಇವರಲ್ಲಿ ಆಜ್ಞೆ ಯಾರಿಂದ ಯಾರಿಗೆ ಎಂದು ಗೊತ್ತಾಗುತ್ತಿಲ್ಲ”.
ಸೂಫಿಗಳ ಒಂದು ದ್ಸಿಕ್ರ್ “ ಸುಬ್‌ಹಾನೀ” ಎಂದಾಗಿದೆ. ಸುಬ್‌ಹಾನಲ್ಲಾಹ್ ಅಂದರೆ ಅಲ್ಲಾಹನ ಪರಿಶುದ್ಧತೆಯನ್ನು ನಾನು ಕೊಂಡಾಡುತ್ತೇನೆ ಎಂದಾಗಿದೆ. ನಾನೇ ಅಲ್ಲಾಹ್ ಆಗಿದ್ದೇನೆ ಎಂದು ಇದರ ತಾತ್ಪರ್ಯ. ಶಅನ್ ಅಂದರೆ ಭಾವ, ಕಾರ್ಯ ಎಂದರ್ಥ. ಈ ಪದವನ್ನು ಕುರ್‌ಆನ್ – ಹದೀಸ್‌ಗಳಲ್ಲಿ ಅಲ್ಲಾಹನಿಗೆ ಪ್ರಯೋಗಿಸಲಾಗಿದೆ. ಉದಾ : ಅಲ್ಲಾಹ್ ಶಅ್‌ನಹೂ ತಅಲಾ (ಅಲ್ಲಾಹ್ ಅವನ ಮಹಿಮೆ ಮಹತ್ತರ) ಜಲ್ಲಶಅ್‌ನುಹೂ (ಅವನ ಕಾರ್ಯ ಪರಮಶ್ರೇಷ್ಠ) ಇದೇ ಶಅನ್ ಪದವನ್ನು ಕೆಲವು ಸೂಫಿಗಳು ತಮಗೆ ತಾವೇ ಬಳಸಿಕೊಂಡು ಮಾಆಝಮಶನೀ (ನನ್ನ ಭಾವ ಎಷ್ಟೊಂದು ಮಹತ್ತರವಾದುದು) ಎಂದು ಹೇಳಿದ್ದಾರೆ.
ಅನಲ್‌ಹಕ್ಕ್ (ನಾನೇ ಪರಮ ಸತ್ಯ) ಮಾಫಿಲ್ ಜುಬ್ಬತಿ ಇಲ್ಲಲ್ಲಾಹ್ (ನನ್ನ ಕೋಟಿನೊಳಗೆ ಅಲ್ಲಾಹ್‌ನಲ್ಲದೆ ಬೇರೇನೂ ಇಲ್ಲ) ಮಾಫಿಲ್‌ಜೈಬಿ ಇಲ್ಲಲ್ಲಾಹ್ (ನನ್ನ ಕಿಸೆಯಲ್ಲಿ ಅಲ್ಲಾಹ್ ಅಲ್ಲದೆ ಇನ್ನೇನೂ ಇಲ್ಲ). ಇದು ಹಲ್ಲಾಜ್ ಎಂಬ ಸೂಫಿಯ ಝಿಕ್ರ್‌ಗಳು. ಪುರೋಹಿತರು ಇದಕ್ಕೆಲ್ಲ ಗುಡ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
ಸೂಫಿಗಳ ಇನ್ನೂ ಕೆಲವು ಮಾತುಗಳನ್ನು ಕೇಳಿರಿ :
“ ನಾನು ನನ್ನನ್ನೇ ಪ್ರೀತಿಸುತ್ತಿದ್ದೇನೆ. ನಾನೇ ನನ್ನ ಪ್ರೇಮ ಭಾಜನ. ಒಂದೇ ದೇಹದ ಎರಡು ದೇಹಿಗಳು ನಾವು ” – ಹಲ್ಲಾಜ್.
“ ಸಮಿಅಲ್ಲಾಹು ಲಿಮನ್‌ಹಮಿದಃ: ಅಲ್ಲಾಹನು ತನ್ನನ್ನು ಸ್ತುತಿಸಿದವರನ್ನು ಕೇಳಿಸಿಕೊಳ್ಳುತ್ತಾನೆ ಎಂದು ನಮಾಝಾನಲ್ಲಿ ಮನುಷ್ಯನು ಹೇಳುತ್ತಿದ್ದರೂ ವಾಸ್ತವದಲ್ಲಿ ಆ ಮಾತು ಅಲ್ಲಾಹನು ಹೇಳುವುದಾಗಿದೆ. ಯಾಕೆಂದರೆ ಕೇಳಿಸಿದವನು ಎಂದು ಹೇಳಲು ಕೇಳಿಸಿಕೊಂಡವನಿಗೆ ಮಾತ್ರ ಸಾಧ್ಯ. ಇಲ್ಲಿ ಸ್ತುತಿಸಿದ ಮನುಷ್ಯನು ನನ್ನ ಸ್ತುತಿಯನ್ನು ಅಲ್ಲಾಹ್ ಕೇಳಿಸಿಕೊಂಡನು ಎಂದು ಹೇಗೆ ಹೇಳುತ್ತಾನೆ ? ಅಲ್ಲಾಹನಿಗೆ ಕೇಳಿಸಿದೆ ಎಂದು ಅವನಿಗೆ ಗೊತ್ತಾಗುವುದು ಹೇಗೆ? ಆದ್ದರಿಂದ ನಮಾಝ್ ಮಾಡುತ್ತಿರುವ ಮನುಷ್ಯನು ಅಲ್ಲಾಹನೇ ಆಗಿರುವುದರಿಂದ ಹಾಗೆ ಹೇಳಲು ಸಾಧ್ಯವಾಗುತ್ತದೆ. ಆ ಮನುಷ್ಯನಲ್ಲೇ ಕೇಳಿಸಿಕೊಂಡನು ಎಂದರ್ಥ. ಆದ್ದರಿಂದ ಇಲ್ಲಿ ಎರಡಿಲ್ಲ. ಎಲ್ಲವೂ ಒಂದೇ. ಅಬ್ದುಲ್ ಕರೀಮ್ ಜೈಲೀ(ಅಲ್ – ಇನ್ಸಾಲ್ ಕಾಮಿಲ್ 3:298).
ಅಲ್ಲಾಹನ ಬಗೆಗಿನ ವಿಶ್ವಾಸವು ಇಸ್ಲಾಮಿನ ಅತಿ ಪ್ರಧಾನವಾದ ಕಾರ್ಯವಾಗಿದೆ. ಅದನ್ನಿಲ್ಲಿ ಸೂಫಿಗಳು ನುಚ್ಚುನೂರು ಮಾಡುತ್ತಿದ್ದಾರೆ.
ಕಲ್ಲು, ಮುಳ್ಳು, ತೃಣ, ವೃಕ್ಷ, ಗಿಡಗಳೆಲ್ಲದರಲ್ಲೂ ದೇವನಿದ್ದಾನೆ ಎಂಬ ಅದ್ವೈತ ಸಿದ್ಧಾಂತವನ್ನು ಸೂಫಿಗಳು ಅರಬಿ ಭಾಷೆಗೆ ತರ್ಜುಮೆ ಮಾಡಿ ಇದುವೇ ಆಧ್ಯಾತ್ಮ ಎಂದು ಪ್ರಚಾರ ಮಾಡಿದರು. ಕುರ್‌ಆನಿನ “ನಿಮ್ಮ ಪ್ರಭುವಿಗಲ್ಲದೆ ನೀವು ಆರಾಧಿಸಬಾರದು ಎಂದು ಅಲ್ಲಾಹನು ವಿಧಿಸಿರುತ್ತಾನೆ” (ಕುರ್‌ಆನ್ 17:23) ಎಂಬ ವಾಕ್ಯವನ್ನು ನೀವು ಅಲ್ಲಾಹನಿಗಲ್ಲದೆ ಆರಾಧಿಸುತ್ತಿಲ್ಲ” ಎಂದು ಸೂಫಿಗಳು ದುರ್ವ್ಯಾಖ್ಯಾನ ಮಾಡಿದರು. ಆರಾಧಿಸಬಾರದು ಎಂಬ ನಿಷೇಧ ವಾಕ್ಯವನ್ನು “ಆರಾಧಿಸುತ್ತಿಲ್ಲ” ಎಂಬುದಾಗಿ ತಿರುಚಿ ಯಾರಿಗೆ, ಯಾವುದಕ್ಕೆ ಆರಾಧಿಸಿದರೂ ಅಲ್ಲಾಹನಿಗೇ ಸಲ್ಲುತ್ತದೆ ಎಂಬ ಅಪವ್ಯಾಖ್ಯಾನವನ್ನು ನೀಡಿದರು. ಆದ್ದರಿಂದ ವಿಗ್ರಹ, ಮರ , ಕಲ್ಲು, ಕಬರ್, ಬೆಳಕು ಮುಂತಾದ ಯಾವ ಸೃಷ್ಟಿಗೆ ಆರಾಧಿಸಿದರೂ ನಿಜದಲ್ಲಿ ಆ ಆರಾಧನೆ ಅಲ್ಲಾಹನಿಗೆ ಸಲ್ಲುತ್ತದೆ ಎಂಬ ವಿಶ್ವಾಸವನ್ನು ಇವರು ಹರಡಿದರು.
ಕುರ್‌ಆನಿನ ಸೂಕ್ತಗಳಿಗೆ ಸಮಾನವಾದ ವಾಕ್ಯಗಳನ್ನು ರಚಿಸಲು ಮನುಷ್ಯನಿಗೆ ಸಾಧ್ಯ ಎಂದು ಹಲ್ಲಾಜ್ ಹೇಳಿದ್ದಾನೆ. (ಅತ್ತಸವ್ವುಫ್ ಬೈನಲ್ ಹಕ್ಕಿ ವಲ್ ಖಲ್ ಖಿ 41) ಅಬೀಯ ಧೀದಿಲ್ ಬಿಸ್ತಾದೀ ಎಂಬ ಸೂಫೀ ಹೇಳುತ್ತಾನೆ: “ ಅಲ್ಲಾಹನು ಒಮ್ಮೆ ನನ್ನನ್ನು ಮೇಲಕ್ಕೆತ್ತಿ ಅವನ ಎದುರಲ್ಲಿ ನಿಲ್ಲಿಸಿದನು. ನನ್ನ ಸೃಷ್ಟಿಗಳು ನಿನ್ನನ್ನು ಕಾಣಲು ಬಯಸುತ್ತಿದ್ದಾರೆ ಎಂದನು.
ನನ್ನ ಏಕತ್ವದಿಂದ ನನ್ನನ್ನು ಅಲಂಕರಿಸಿ ನಿನ್ನ “ನಾನು” ಎಂಬ ಭಾವವನ್ನು ನನಗೆ ತೊಡಿಸಿ ನಿನ್ನ ಏಕತ್ವಕ್ಕೆ ನನ್ನನ್ನು ಎತ್ತು. ಹಾಗಾದರೆ ಸೃಷ್ಟಿಗಳು ನನ್ನನ್ನು ಕಂಡು ನಿನ್ನನ್ನೇ ಕಂಡಿದ್ದೇವೆ ಎನ್ನುತ್ತಾರೆ. ಆಗ ನೀನೇ ಅಲ್ಲಿರುವೆ. ನಾನು ಇರುವುದಿಲ್ಲ” (ಅತ್ತಸವ್ವಫ್ ಬೈನಲ್ ಹಕ್ಕಿವಲ್ ಖಲ್‌ಖಿ 44).
“ ಸೃಷ್ಟಿಗಳಿಗೆ ಅತ್ಯಂತ ದೊಡ್ಡ ಉಪದ್ರವಕಾರಿ ಸೃಷ್ಟಿದಾತನಾಗಿರುವನು” ಎಂದು ಅಬೀ ತಾಲಿಬಿಲ್ ಮಕ್ಕಿ ಎಂಬ ಸೂಫಿ ತನ್ನ ಕೂತುಲ್ ಉಲೂಬ್ ಎಂಬ ಗ್ರಂಥದಲ್ಲಿ ಬರೆದಿದ್ದಾನೆ. ಇಸ್ಲಾಮಿಗೂ ಸೂಫಿತ್ವಕ್ಕೂ ಯಾವ ಸಂಬಂಧವೂ ಇಲ್ಲವೆನ್ನುವುದಕ್ಕೆ ಬೇರೆ ಪುರಾವೆ ಬೇಕೇ?
ಸೃಷ್ಟಿಗಳ ಮೂಲಧಾತು ಪ್ರಕಾಶದಿಂದ ಸೃಷ್ಟಿಸುವ ಪ್ರವಾದಿ(ಸ)ಯವರ ಅಣು ಎಂಬುದು ಸೂಫಿಗಳು ಪ್ರಚಾರ ಮಾಡಿದ ಇನ್ನೊಂದು ಕಟ್ಟು ಕಥೆ. ಇದಕ್ಕೆ ಕುರ್‌ಈನ್ – ಸಹೀ ಹದೀಸ್‌ಗಳಲ್ಲಿ ಯಾವ ಪುರಾವೆಯೂ ಇಲ್ಲ. ಕೆಲವು ಕೃತಕ ಹದೀಸ್‌ಗಳಿರಬಹುದು. ಅಂತಹ ಹದೀಸ್‌ಗಳು ವಿಶ್ವಾಸಗಳಿಗೆ ಪ್ರಮಾಣವಾಗುವುದಿಲ್ಲ ಓರ್ವ ಪುರೋಹಿತ ಬರೆದದ್ದನ್ನು ನೋಡಿ.
“ ಕೋಟಿಗಟ್ಟಲೆ ಖಗೋಳ ಪ್ರಪಂಚ ಯಂತ್ರಗಳು ನಿಶ್ಚಿತವ್ಯಾಸದಲ್ಲಿ ನಿಶ್ವಿತ ವೇಗದಲ್ಲಿ ಸುತ್ತುತ್ತಿರುವ ಈ ಪ್ರಪಂಚದ ಮೂಲ ಹಾಗೂ ಆತ್ಮವು ನಬಿಯವರ ತೇಜಸ್ಸಾಗಿರುತ್ತದೆ. ಆ ನೂರಾನಿಯ್ಯತ್ (ಪ್ರಭೆ) ಪ್ರಪಂಚಗಳ ಮೂಲ ಬಿಂದುವಾಗುದೆ” (ವಹ್ದತ್ ಮಾಲೆ ವ್ಯಾಖ್ಯಾನ 13: 56)
ಆದಮ್ ನಬಿಯವರು ಜಲ ಮತ್ತು ಮಣ್ಣಿನ ನಡುವೆ ಆಗಿದ್ದ ಕಾಲದಲ್ಲಿ ನಾನು ಪರಿಪೂರ್ಣತೆ ಪಡೆದಿದ್ದೆ ಎಂದು ಪ್ರವಾದಿ(ಸ)ಯವರು ಹೇಳಿದ್ದಾರೆಂಬ ಸುಳ್ಳು ಹದೀಸನ್ನು ಇವರು ಸೃಷ್ಟಿಸಿದರು. ಇಂತಹ ಅನಿಸ್ಲಾಮಿಕತೆಗಳನ್ನು ಆಲಿಸಲು ಇಲ್ಲಿ ಪಂಡಿತರುಗಳಿದ್ದಾರೆನ್ನುವುದು ಸಖೇದಾಶ್ಚರ್ಯ. ಓರ್ವ ಪಂಡಿತ್ ಬರೆಯುತ್ತಾನೆ: “ವಿಶ್ವದ ಉತ್ಪತ್ತಿಯ ಮೂಲ ಫಟಕವಾದ ಮುಹಮ್ಮದಿಯತ್ತನ್ನು ಅಲ್ಲಾಹನು ಪ್ರಪಂಚದ ಸೃಷ್ಟಿಯ ಮೊದಲೇ ರೂಪಿಸಿದ್ದನು. ಅವರ ಬಳಿಕ ಶತ ಶತಮಾನಗಳ ಅನಂತರವೇ ಆದಮರನ್ನು ಸೃಷ್ಟಿಸಿದ್ದು. ಆದ್ದರಿಂದ ಪ್ರಾಪಂಚಿಕತೆಯಲ್ಲಿ ಆದಮ(ಅ)ರು ಮೂಲ ಪುರುಷರಾಗಿದ್ದರೂ ಆತ್ಮ ಜಗತ್ತಿನ ಮೂಲ ಪುರುಷ ಮುಹಮ್ಮದ್ ನಬಿ(ಸ)ರವರಾಗಿದ್ದಾರೆ ” (ಸೂಫಿ ಸತ್ತಿನ್ನೊರು ಮುಖವುರ ಪುಟ 102). ಇಡೀ ವಿಶ್ವವೇ ನಬಿಯವರಲ್ಲಿದೆ. ಎಲ್ಲವೂ ಉಂಟಾದುದು ಅವರಿಂದಲೇ. ಅವರ ಕಿರು ಬೆರಳಿನ ಚಾಲನೆ ಪ್ರಕಾರ ಲೌಹುಲ್‌ಮಹ್ಫೂಝ್ ನಡೆಯುತ್ತಿದೆ. ಶೈಖಿನ್ ಕೀಳಿಲ್ ಪುಟ 28,29) ಈ ಎಲ್ಲಾ ಪುರಾಣಗಳಿಗೂ ಇವರಿಗೆ ಪ್ರಮಾಣ ಸೂಫಿಗಳ ಸ್ವಪ್ನಗಳಂತೆ!
ಪುರೋಹಿತರ ಸಕಲ ಅಂಧವಿಶ್ವಾಸಗಳಿಗೂ ಸೂಫಿಗಳ ಬಡಾಯಿಗಳೇ ಪ್ರಮಾಣಗಳು. ಓರ್ವ ಮುಸ್ಲಿಯಾರ್ ಬರೆಯುತ್ತಿದ್ದಾರೆ: “ಮುಹಮ್ಮದ್ ನಬಿ(ಸ) ಆತ್ಮ ಕುಲದ ಯಜಮಾನರು. ಆದಿ ಮಾನವರಾದ ಆದಮ(ಅ)ರ ಆತ್ಮಕ್ಕೂ ಪ್ರವಾದಿ ಮುಹಮ್ಮದ್‌ರೇ ಪಿತರು. ಅಲ್ಲದೆ ಮೊದಲ ಮಾನವ ಹುಟ್ಟಿದ್ದಾದರೂ ನಿಜದಲ್ಲಿ ಹುಟ್ಟಿದ್ದು ಮುಹಮ್ಮದಿಯ್ಯ ತೇಜಸ್ಸಾಗಿರುತ್ತದೆ. ಪ್ರಪಂಚದ ಆದಿಯಿಂದ ಅಂತ್ಯದವರೆಗೂ ಇಲ್ಲಿ ಯುಗ ಪುರುಷರಾಗಿ ಬರುವವರೆಲ್ಲರೂ ಮುಹಮ್ಮದಿಯ್ಯ ತೇಜಸ್ಸಾಗಿರುವರು. ನಮ್ರೂದನು ಇಬ್ರಾಹೀಮ್(ಸ)ರನ್ನು ಅಗ್ನಿ ಕುಂಡಕ್ಕೆಸೆದಾಗ ಅಲ್ಲಿ ನಾನಿದ್ದೆ. ಆ ಅಗ್ನಿಯನ್ನು ತಂಪಾಗಿ ಮಾಡಿದ್ದು ನಾನೇ ಎಂದು ಪ್ರವಾದಿ(ಸ)ಯವರು ಹೇಳಿದ್ದಾರೆ”.
ಈ ಪುರಾಣಗಳಿಗೆ ಆಧಾರವೆಲ್ಲಿದೆ? ಕುರ್‌ಆನಿನಲ್ಲಿದೆಯೇ? ಇಲ್ಲ, ಸಹೀ ಹದೀಸ್‌ಗಳಲ್ಲಿದೆಯೇ? ಖಂಡಿತಾ ಇಲ್ಲ. ಪ್ರವಾದಿ ಇಬ್ರಾಹೀಮ್(ಅ)ರನ್ನು ಅಗ್ನಿ ಕುಂಡದಿಂದ ರಕ್ಷಿಸಿದ್ದು ನಾನು ಎಂದು ಪ್ರವಾದಿಯವರು ಹೇಳಿರುವುದು ನಿಜವೇ? ಖಂಡಿತಾ ಅಲ್ಲ. ಅದು ಪ್ರವಾದಿ(ಸ)ರವರ ಹೆಸರಲ್ಲಿ ಇವರೇ ನಿರ್ಮಿಸಿದ ಶುದ್ಧ ಸುಳ್ಳು. ಇಬ್ರಾಹೀಮರಿಗೆ ಬೆಂಕಿಯನ್ನು ನಾನು ತಂಪು ಮಾಡಿಕೊಟ್ಟೆ ಎಂದು ಅಲ್ಲಾಹನು ಕುರ್‌ಆನಿನಲ್ಲಿ ಹೇಳಿರುವಾಗ, ಅಲ್ಲಾಹ್ ಹೇಳಿದ್ದು ಸುಳ್ಳು. ನಾನು ತಂಪು ಮಾಡಿದ್ದು ಎಂದು ಪ್ರವಾದಿ(ಸ)ರವರು ಹೇಳಿರಬಹುದೆಂದು ಸತ್ಯವಿಶ್ವಾಸಿಗಳಿಗೆ ನಂಬಲು ಸಾಧ್ಯವೇ ಇಲ್ಲ. ಇವರು ವಾಸ್ತವದಲ್ಲಿ ನಬಿಯವರನ್ನು ಗೌರವಿಸುವ ನೆಪದಲ್ಲಿ ನಿಂದಿಸುತ್ತಾರೆ.
ಅಲ್ಲಾಹನು ಸ್ವರ್ಗವನ್ನು ಸಿದ್ಧಪಡಿಸಿಟ್ಟು ಅದರಲ್ಲಿರುವ ಸುಖ ಸೌಭಾಗ್ಯಗಳನ್ನು ವರ್ಣಿಸಿ ಅದಕ್ಕೆ ನೀವೇ ಸೇರಲು ಪ್ರಯತ್ನಿಸಿ ಎಂದು ಮನುಷ್ಯರಿಗೆ ಕುರ್‌ಆನಿನಲ್ಲಿ ಆಹ್ವಾನ ಕೊಟ್ಟಿದ್ದಾನೆ. “ಭೂಮ್ಯಾಕಾಶಗಳಷ್ಟು ವಿಶಾಲವಾದ ಸ್ವರ್ಗದ ಸಂಪಾದನೆಯತ್ತ ಮುನ್ನುಗ್ಗಿರಿ” ಎಂದೂ ಅಂತಹ ಪರಮ ವಿಜಯಕ್ಕೆ ಸ್ಪರ್ಧಿಸುವರು ಸ್ಪರ್ಧಿಸಲಿ ಎಂದೂ ಹೇಳಿದ್ದಾನೆ. ಯಾವನು ನರಕದಿಂದ ಪಾರಾಗಿ ಸ್ವರ್ಗ ಪಡೆಯುತ್ತಾನೋ ಅವನು ಅತಿ ಮಹತ್ತರವಾದ ಜಯವನ್ನು ಸಾಧಿಸಿದವನಾಗುತ್ತಾನೆ ಎಂದೂ ಅಲ್ಲಾಹನು ಕುರ್‌ಆನಿನಲ್ಲಿ ಹೇಳಿದ್ದಾನೆ. ನರಕದ ಬಗ್ಗೆ ಹಾಗೂ ಅದರ ಯಾತನಾಮಯ ಶಿಕ್ಷೆಯ ಬಗ್ಗೆ ವಿವರಿಸಿದ ಅಲ್ಲಾಹನು ಅದರಿಂದ ಪಾರಾಗುವ ದಾರಿಯನ್ನು ಕಂಡುಕೊಳ್ಳಿರಿ ಎಂದು ಅನೇಕ ಕಡೆಗಳಲ್ಲಿ ಎಚ್ಚರಿಕೆ ನೀಡಿದ್ದಾನೆ . ಆದರೆ ಸೂಫಿಗಳು ಅಲ್ಲಾಹನ ಈ ಪ್ರೇರಣೆ ಹಾಗೂ ಮುನ್ನೆಚ್ಚರಿಕೆಗೆ ಕವಡೆ ಕಾಸಿನ ಬೆಲೆ ಕೊಡದೆ ಸ್ವರ್ಗದ ಆಸೆ ಹಾಗೂ ನರಕದ ಭಯದಿಂದ ಆರಾಧನೆ ನಡೆಸಬಾರದು ಎನ್ನುತ್ತಿರುವುದನ್ನು ನೋಡಿರಿ:
“ಯಾವನಾದರೂ ನರಕವನ್ನು ಹೆದರಿ ಅಲ್ಲಾಹನಿಗೆ ಆರಾಧಿಸಿದರೆ ಅವನು ನರಕಕ್ಕೆ ಆರಾಧನೆ ಸಲ್ಲಿಸಿದಂತಾಗುತ್ತದೆ. ಸ್ವರ್ಗವನ್ನು ಬಯಸಿ ಅಲ್ಲಾಹನಿಗೆ ಆರಾಧಿಸಿದವನು ಮೂರ್ತಿಗೆ ಆರಾಧಿಸಿದವನಾಗುತ್ತಾನೆ”. ಇದು ಅಬ್ದುಲ್ ಗನೀ ಎಂಬ ಸೂಫಿಯ ಮಾತು. (ಅಸ್ಸೂಫಿಯ್ಯ ಪುಟ 11). “ನರಕದಲ್ಲಿರುತ್ತಾರೆ” ಎಂದು ಜೈಲಿ ಎಂಬ ಸೂಫಿ ತನ್ನ ಅಲ್ ಇನ್ಸಾನುಲ್ ಕಾಮಿಲ್ ಎಂಬ ಗ್ರಂಥದಲ್ಲಿ ಬರೆದಿದ್ದಾನೆ.
ಮನುಷ್ಯನನ್ನು ದಂಡಪಿಂಢಗಳನ್ನಾಗಿ ಮಾಡುವುದೇ ಸೂಫಿ ತತ್ವದ ಉದ್ದೇಶ. ತೌಹೀದ್, ರಿಸಾಲತ್, ಆಖಿರತ್ ಎಂಬ ಇಸ್ಲಾಮಿನ ಮೂಲಭೂತ ಸಿದ್ಧಾಂತಗಳನ್ನು ಬುಡಮೇಲುಗೊಳಿಸುತ್ತಿರುವ ಸೂಫಿ ತತ್ವವು ಸಂಪೂರ್ಣವಾಗಿ ಇಸ್ಲಾಮಿನಿಂದ ದೂರವಾದ ಒಂದು ಪಂಗಡವಾಗಿದೆ.