بسم الله الرحمن الرحيم
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
‘ಸಾವು‘
ಅಂತ್ಯವೋ…? ಹೊಸದೊಂದು ಆರಂಭವೋ?
ಹೇಳಿರಿ, “ನೀವು ಯಾವ ಸಾವಿನಿಂದ ದೂರ ಓಡುತ್ತಿರುವಿರೋ ಅದು ಖಂಡಿತ ನಿಮ್ಮ ಮುಂದೆ ಬರಲಿದೆ. ಆ ಬಳಿಕ ನಿಮ್ಮನ್ನು, ಗುಪ್ತ ಮತ್ತು ಬಹಿರಂಗವಾದ ಎಲ್ಲವನ್ನೂ ಬಲ್ಲವನ (ದೇವನ) ಬಳಿಗೆ, ಮರಳಿಸಲಾಗುವುದು. ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ಆಗ ಅವನು ನಿಮಗೆ ತಿಳಿಸುವನು.” (ಖುರ್’ಆನ್ ಅಧ್ಯಾಯ 62, ಸೂಕ್ತಿ 8)
ಈ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ಮನುಷ್ಯನೂ ಖಂಡಿತವಾಗಿ ಸಾಯಲೇಬೇಕು, ಹಾಗು ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಬಹಳಷ್ಟು ಬಾರಿ ನಾವು ಬೇರೆಯವರ ಸಾವನ್ನು ನೋಡುತ್ತೇವೆ, ಇಲ್ಲವೇ ಅದರ ಬಗ್ಗೆ ಕೇಳುತ್ತೇವೆ ಅಥವಾ ಮಾತನಾಡುತ್ತೇವೆ, ಆದರೆ ಸಾವಿನ ನಂತರ ಏನಾಗುತ್ತದೆ? ಸಾವು ನಿಜವಾಗಿಯೂ ಅಂತ್ಯವೇ? ಕೆಲವರು ಹೇಳಬಹುದು, “ಸಾವಿನ ಬಗ್ಗೆ ಯೋಚಿಸುವುದಕ್ಕೇನಿದೆ? ಅದು ನಮ್ಮ ನಿಯಂತ್ರಣದ ಹೊರಗಿದೆ. ನಮ್ಮ ಸಮಯ ಬರುತ್ತದೆ ಮತ್ತು ನಾವು ಸಾಯುತ್ತೇವೆ, ಅಷ್ಟೇ! ಸಮಯ ಇರುವಾಗಲೇ ಸಂಪೂರ್ಣವಾಗಿ ಜೀವಿಸಬೇಕು. ತಿನ್ನುವುದು, ಕುಡಿಯುವುದು, ಪ್ರೀತಿಸುವುದು, ಅಧಿಕಾರ, ಹೆಸರು ಮತ್ತು ಸಂಪತ್ತು ಸಂಪಾದಿಸುವುದು… ಸಾವಿನಂತಹ ಅಹಿತಕರ ವಸ್ತುವಿನ ಬಗ್ಗೆ ಯೋಚನೆಮಾಡಬೇಡಿ.” ಸಾವು ಅಂತ್ಯವೇ ಆಗಿದ್ದಲ್ಲಿ, ಇದು ಸರಿ ಎನ್ನಬಹುದು, ನಾವು ಅದರ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಆದರೆ ಒಂದು ವೇಳೆ ಸಾವು ಅಂತ್ಯವಲ್ಲದಿದ್ದರೆ? ಬನ್ನಿ, ಸ್ವಲ್ಪ ಯೋಚಿಸೋಣ.
ನಾವು ಈ ಭೂಮಿಗೆ ಹೇಗೆ ಬಂದೆವು? ನಮ್ಮನ್ನು ಇಲ್ಲಿ ಇಟ್ಟವರ್ಯಾರು?
ನಾವು ಏನೂ ಇಲ್ಲದೆ ಉದ್ಭವಿಸಿದೆವಾ? ನಮ್ಮನ್ನು ನಾವೇ ಸೃಷ್ಟಿಸಿಕೊಂಡೆವಾ? ನಮ್ಮ ಸ್ವಂತ ಇಚ್ಛೆಯೊಂದಿಗೆ ನಾವು ಭೂಮಿಗೆ ಬಂದೆವಾ? ಇದಕ್ಕೆಲ್ಲಾ ಉತ್ತರ ‘ಇಲ್ಲ’ ಎಂದಾದರೆ, ನಮಗೆ ಒಬ್ಬ ಸೃಷ್ಟಿಕರ್ತ ಇದ್ದಾನೆಯೇ?
ಜಗತ್ತಿಗೆ ಒಂದು ಮೂಲವಿತ್ತು ಎಂದು ವಿಜ್ಞಾನಿಗಳು ಒಪ್ಪುತ್ತಾರೆ, ಏಕೆಂದರೆ ಜಗತ್ತಿನ ವಯಸ್ಸನ್ನು ಅಳಿಯಬಹುದು. ಈ ಕಾರಣಕ್ಕಾಗಿ, ನಮ್ಮ ಬಳಿ ಎರಡೇ ಸಾಧ್ಯತೆಗಳು ಉಳಿಯುತ್ತವೆ –
1) ಜಗತ್ತು ತಾನಾಗಿಯೇ ಉದ್ಭವಿಸಿತು ಅಥವಾ
2) ಒಬ್ಬ ಸೃಷ್ಟಿಕರ್ತ ಜಗತ್ತನ್ನು ಸೃಷ್ಟಿಸಿದನು, ಅವನನ್ನೇ ನಾವು ದೇವನು ಎಂದು ಉಲ್ಲೇಖಿಸುತ್ತೇವೆ.
ಯಾರಾದರೂ ಜಗತ್ತು ತಾನಾಗಿಯೇ ಉದ್ಭವಿಸಿತು ಎಂದು ನಂಬುವುದಾದರೆ, ಅದರರ್ಥ ಜಗತ್ತು ಅಸ್ತಿತ್ವದಲ್ಲಿ ಇಲ್ಲದಿರುವಾಗ ತನ್ನನ್ನು ತಾನೇ ಸೃಷ್ಟಿಸಿಕೊಂಡಿತು! ಇದು ಹೇಗಿದೆ ಎಂದರೆ, ಒಂದು ಪೆನ್ನು ತನ್ನನ್ನು ತಾನೇ ಸೃಷ್ಟಿಸಿಕೊಂಡಿತು ಅಥವಾ ನೀವೇ ನಿಮಗೆ ಜನ್ಮ ನೀಡಿದಿರಿ ಎಂದಂತೆ. ಇದು ತಾರ್ಕಿಕವಾಗಿಯೂ (ಲಾಜಿಕಲ್) ಮತ್ತು ವೈಜ್ಞಾನಿಕವಾಗಿಯೂ ಅಸಾಧ್ಯ. ಜಗತ್ತು ತನ್ನನ್ನು ತಾನೇ ಸೃಷ್ಟಿಸಿಕೊಂಡಿಲ್ಲ, ಆದ್ದರಿಂದ ಉಳಿದಿರುವ ಒಂದೇ ಒಂದು ಸಾಧ್ಯತೆ ಎಂದರೆ ಅದನ್ನು ಒಬ್ಬ ಸೃಷ್ಟಿಕರ್ತ ಸೃಷ್ಟಿಸಿದನು. ಯಾವ ಸೃಷ್ಟಿಕರ್ತ ಜಗತ್ತನ್ನು ಸೃಷ್ಟಿಸಿದನೋ ಅವನೇ ನಮ್ಮನ್ನೂ ಸೃಷ್ಟಿಸಿದನು.
ನೀವು ಕೇಳಬಹುದು, “ಹಾಗಿದ್ದರೆ, ಸೃಷ್ಟಿಕರ್ತನನ್ನು ಸೃಷ್ಟಿಸಿದವರು ಯಾರು?”
ನಾವು ಎಲ್ಲದರ ಆರಂಭ ಮತ್ತು ಅಂತ್ಯವನ್ನು ಅಳೆಯಲು ‘ಸಮಯ’ವನ್ನು ಬಳಸುತ್ತೇವೆ. ಜಗತ್ತಿನಂತೆಯೇ, ‘ಸಮಯ’ ಕೂಡ ಅಸ್ತಿತ್ವಕ್ಕೆ ಬಂದಿರುವಂತಹದ್ದು. ಜಗತ್ತಿನಲ್ಲಿರುವ ಎಲ್ಲ ವಸ್ತುಗಳು ಸಮಯದ ಮೇಲೆ ಅವಲಂಬಿಸಿವೆ, ಆದ್ದರಿಂದ ಅವೆಲ್ಲದಕ್ಕೂ ಒಂದು ಆರಂಭ ಮತ್ತು ಅಂತ್ಯವಿದೆ. ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತ, ‘ಸಮಯ’ ಅಸ್ತಿತ್ವಕ್ಕೆ ಬರುವ ಮೊದಲಿನಿಂದಲೂ ಇದ್ದನು, ಆದ್ದರಿಂದ ಅವನು ಅದರಿಂದ ಮುಕ್ತನಾಗಿದ್ದಾನೆ.
ಆದ್ದರಿಂದ ಸೃಷ್ಟಿಕರ್ತನಿಗೆ ಆರಂಭವಾಗಲಿ, ಅಂತ್ಯವಾಗಲಿ ಇಲ್ಲ ಮತ್ತು ಅವನು ಸದಾಕಾಲ ಅಸ್ತಿತ್ವದಲ್ಲಿ ಇರುವವನು. ಉದಾಹರಣೆಗೆ, ನಿಮ್ಮ ಕೈಯಲ್ಲಿರುವ ಈ ಕರಪತ್ರಿಕೆ ಸದಾಕಾಲ ಅಸ್ತಿತ್ವದಲ್ಲಿ ಇದ್ದಿದ್ದೇ ಆದರೆ, ಇದಕ್ಕೆ ಯಾವುದೇ ಬರಹಗಾರನ ಅವಶ್ಯಕತೆ ಇರುತ್ತಿರಲಿಲ್ಲ.
ದೇವನು ನಮ್ಮನ್ನು ಸೃಷ್ಟಿಸಿದ್ದೇಕೆ? ಈ ಜೀವನ ಮತ್ತು ಸಾವು ಏಕೆ?
ದೇವನು ನಮ್ಮನ್ನು ಯಾವುದೇ ಆಟಕ್ಕಾಗಲಿ, ನಾಟಕಕ್ಕಾಗಲಿ ಅಥವಾ ಮೋಜಿಗಾಗಲಿ ಸೃಷ್ಟಿಸಲಿಲ್ಲ. ದೇವನು ನಮ್ಮನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸೃಷ್ಟಿಸಿದನು – ಅದೇನೆಂದರೆ, ಕೇವಲ ನಮ್ಮನ್ನು ಸೃಷ್ಟಿಸಿದ ನಿಜವಾದ ದೇವನನ್ನು ಮಾತ್ರ ಆರಾಧಿಸಬೇಕು ಮತ್ತು ಅವನ ಸೃಷ್ಟಿಗಳಲ್ಲಿನ ಸೂರ್ಯ, ಚಂದ್ರ, ಗ್ರಹಗಳು, ಮನುಷ್ಯರು, ವಿಗ್ರಹಗಳು, ಚಿತ್ರಗಳು (ಫೋಟೋಗಳು) ಇತ್ಯಾದಿಗಳನ್ನು ಎಂದೂ ಆರಾಧಿಸಬಾರದು. ದೇವನ ಆರಾಧನೆಯೆಂದರೆ, ಅವನಿಗೆ ಪ್ರಾರ್ಥನೆ ಸಲ್ಲಿಸುವುದು ಮತ್ತು ಒಳ್ಳೆಯ ಕೆಲಸಗಳನ್ನು ಮಾಡುತ್ತ, ಕೆಟ್ಟ ಕೆಲಸಗಳಿಂದ ದೂರ ಉಳಿದು ಅವನಿಗೆ ಸಂಪೂರ್ಣ ಶರಣಾಗಿ ಜೀವನ ಸಾಗಿಸುವುದಾಗಿದೆ.
ಭೂಮಿಯ ಮೇಲಿನ ನಿಮ್ಮ ಕೆಲಸಗಳಿಗೆ ನೀವು ದೇವನ ಬಳಿ ಉತ್ತರಿಸಬೇಕಿದೆ!
ನೀವು ಕೆಲ ಜನರು ಹೇಳುವುದನ್ನು ಕೇಳಿರಬಹುದು, “ಒಳ್ಳೆಯವರಾಗಿದ್ದು ಏನಾಗ ಬೇಕಿದೆ. ಎಷ್ಟೋ ಲಂಚಕೋರ ಮತ್ತು ಕೆಟ್ಟ ಜನರು ಹೆಸರು ಮತ್ತು ಸಂಪತ್ತಿನ ಜೀವನ ಸಾಗಿಸುತ್ತಿದ್ದಾರೆ. ಒಳ್ಳೆಯರಾಗಿರುವ ಬಗ್ಗೆ ನಾವೇಕೆ ಇಷ್ಟು ಯೋಚಿಸಬೇಕು? ಜೀವನದಲ್ಲಿ ಏನು ಸಾಧಿಸುತ್ತೇವೆ ಎಂಬುದೇ ಮುಖ್ಯ.” ಕೇಳುವುದಕ್ಕೆ, ಈ ಮಾತುಗಳು ಸರಿಯಲ್ಲವೇ ಅನಿಸುತ್ತೆ; ಆದರೆ ನಾವು ನೆನಪಿನಲ್ಲಿಟ್ಟು ಕೊಳ್ಳಬೇಕಾದ ವಿಷಯವೇನೆಂದರೆ, ನಮ್ಮ ಸೃಷ್ಟಿಕರ್ತನಾದ ದೇವನು ಅತ್ಯಂತ ನ್ಯಾಯವಂತ ಮತ್ತು ನಾವು ಈ ಪ್ರಪಂಚದಲ್ಲಿ ಮಾಡಿದ ಯಾವುದೇ ಕೆಲಸದಿಂದಲೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ.
ಈ ಪ್ರಪಂಚ ಒಂದಲ್ಲ ಒಂದು ದಿನ ಕೊನೆಗೆ ಬರಲಿದೆ. ಮೊಟ್ಟ ಮೊದಲನೆಯ ಮನುಷ್ಯನಿಂದ ಹಿಡಿದು ಕೊನೆಯವನವರೆಗೆ ಎಲ್ಲರಿಗೂ ನಿರ್ಣಾಯಕ ದಿನದಂದು ಪುನಃ ಜೀವಕೊಡಲಾಗುವುದು ಮತ್ತು ಅವರವರ ಕೆಲಸಗಳ ಬಗ್ಗೆ ಪ್ರಶ್ನಿಸಲಾಗುವುದು. ನಿಮ್ಮ ಸಾವಿನ ನಂತರ, ಇಡೀ ಮನುಷ್ಯಕುಲದೊಂದಿಗೆ ನಿಮ್ಮನ್ನು ಕೂಡ ನಿರ್ಣಾಯಕ ದಿನದಂದು ಜೀವಂತಗೊಳಿಸಲಾಗುವುದು.
ಸಾವಿನ ನಂತರದ ಜೀವನ ನಂಬುವುದು ತಾರ್ಕಿಕವೇ (ಲಾಜಿಕಲ್)?
ನಮಗೆಲ್ಲರಿಗೂ ತಿಳಿದಂತೆ ಯಾವುದೇ ವಸ್ತುವನ್ನು ಮೊದಲನೇ ಬಾರಿ ಸೃಷ್ಟಿಸುವುದು ಕಷ್ಟಕರ ಮತ್ತು ಅದನ್ನು ಪುನರಾವರ್ತಿಸುವುದು (ಪದೇ ಪದೇ ಮಾಡುವುದು) ಸುಲಭ. ದೇವನಿಗೆ ನಮ್ಮನ್ನು ಮೊದಲನೇ ಬಾರಿ ಸೃಷಿಸುವುದರಲ್ಲಿ ಯಾವುದೇ ಆಯಾಸವಾಗದಿದ್ದಾಗ, ನಮ್ಮ ಸಾವಿನ ನಂತರ ಜೀವಕೊಡುವುದರಲ್ಲಿ ಆಯಾಸವಾಗುವುದೇ? ಸಾವಿನ ನಂತರ ನಮ್ಮನ್ನು ಜೀವಂತಗೊಳಿಸುವುದು ದೇವನಿಗೆ ಅತ್ಯಂತ ಸುಲಭ.
ನಿಜವಾಗಿಯೂ ಸಾವಿನ ನಂತರದ ಜೀವನದ ಅಗತ್ಯವಿದೆಯೇ?
ನಮಗೆ ಸಾವಿನ ನಂತರದ ಜೀವನದ ಅಗತ್ಯವಿದೆ, ಏಕೆಂದರೆ ನಾವೆಲ್ಲರೂ ನ್ಯಾಯವನ್ನು ಬಯಸುತ್ತೇವೆ. ನಾವಿರುವ ಈ ಪ್ರಪಂಚ ಅನ್ಯಾಯಗಳಿಂದ ತುಂಬಿದೆ. ನಮ್ಮ ಸುತ್ತಲೂ ಎಷ್ಟೋ ಒಳ್ಳೆಯ ಜನರು ಕಷ್ಟ ಅನುಭವಿಸುತ್ತಿರುವಾಗ, ಅದೆಷ್ಟೋ ಕೆಟ್ಟ ಜನರು ತಮ್ಮ ಜೀವನವನ್ನು ಸುಗಮವಾಗಿ ಸಾಗಿಸುವುದನ್ನು ಕಾಣುತ್ತೇವೆ. ಪರಿಪೂರ್ಣ ನ್ಯಾಯ ಈ ಪ್ರಪಂಚದಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ, ತನ್ನನ್ನು ಮತ್ತು ಇತರೆ ಮುಗ್ಧ ಜನರನ್ನು ಕೊಂದು, ಅವರ ಕುಟುಂಬದವರ ನೋವು, ಶೋಕಗಳಿಗೆ ಕಾರಣವಾಗುವ ಒಬ್ಬ ಆತ್ಮಾಹುತಿ ಬಾಂಬರ್‍ನನ್ನು ಹೇಗೆ ಶಿಕ್ಷಿಸಬಹುದು? ಈ ರೀತಿಯ ಆತ್ಮಾಹುತಿ ಸ್ಫೋಟದಲ್ಲಿ ಜೀವ ಕಳೆದುಕೊಂಡವರಿಗೆ ನಾವು ಹೇಗೆ ತಾನೆ ಪರಿಹಾರ ಕೊಡಿಸಬಹುದು? ನಾವೆಲ್ಲ ಒಪ್ಪುವಂತೆ ಆತ್ಮಾಹುತಿ ಬಾಂಬರ್‍ನನ್ನು ಶಿಕ್ಷಿಸಬೇಕು ಮತ್ತು ಸಾವನಪ್ಪಿದ ಮುಗ್ಧ ಜನರಿಗೆ ಪರಿಹಾರ ಕೊಡಿಸಬೇಕು, ಆದರೆ ನಿಜವೆಂದರೆ ನಾವು ಆತ್ಮಾಹುತಿ ಬಾಂಬರ್‍ನನ್ನು ಶಿಕ್ಷಿಸಲಾಗುವುದಿಲ್ಲ ಮತ್ತು ಸಾವನಪ್ಪಿದ ಮುಗ್ಧ ಜನರಿಗೆ ಪರಿಹಾರ ಕೊಡಿಸಲೂ ಸಾಧ್ಯವಿಲ್ಲ.
ಸಾವಿನ ನಂತರದ ಜೀವನದಲ್ಲಿ ಪರಿಪೂರ್ಣ ನ್ಯಾಯ
ನಮ್ಮ ಉದ್ದೇಶಗಳನ್ನು ಸಂಪೂರ್ಣವಾಗಿ ತಿಳಿದಿದ್ದು, ಈ ಪ್ರಪಂಚದಲ್ಲಿ ನಮ್ಮ ಕೆಲಸಗಳ ಪ್ರಭಾವಗಳನ್ನು ಸಂಪೂರ್ಣವಾಗಿ ಅರಿತಿರುವ ದೇವನು ನಮ್ಮನ್ನು ಸದಾಕಾಲ ಗಮನಿಸುತ್ತಲೇ ಬಂದಿದ್ದಾನೆ. ದೇವನು ನಮ್ಮ ಒಳ್ಳೆಯ ಕೆಲಸಗಳನ್ನು ಕೆಟ್ಟ ಕೆಲಸಗಳ ವಿರುದ್ಧ ತೂಗಿಸಿ, ತನ್ನ ನಿರ್ಣಯವನ್ನು ಅದರಂತೆ ತಿಳಿಸಲಿದ್ದಾನೆ. ನಿರ್ಣಾಯಕ ದಿನದಂದು ನಮ್ಮ ಅತ್ಯಂತ ಸಣ್ಣ ಕೆಲಸಗಳನ್ನೂ ಪರಿಗಣಿಸಲಾಗುವುದು. ಪ್ರತಿಯೊಬ್ಬ ಮನುಷ್ಯನಿಗೂ ತನಗೆ ನೀಡಲಾಗುವ ಪ್ರತಿಫಲ ಮತ್ತು ಶಿಕ್ಷೆಯ ಕಾರಣ ತಿಳಿದಿರುತ್ತದೆ.
ಕೊಡಲಾಗುವ ಉತ್ತಮ ಪ್ರತಿಫಲ ಸ್ವರ್ಗ ಮತ್ತು ಶಿಕ್ಷೆ ನರಕ. ಸ್ವರ್ಗ ಮತ್ತು ನರಕಗಳಲ್ಲಿನ ಜೀವನ ನಿರಂತರ. ಆ ಜೀವನ ನಿರಂತರವಾದ ಕಾರಣ ದೇವನು ಆತ್ಮಾಹುತಿ ಬಾಂಬರ್‍ನಂತಹ ದುಷ್ಟ ಜನರನ್ನು, ಅವನು ಎಷ್ಟು ಜನರನ್ನು ಕೊಂದಿದ್ದನೋ ಅಷ್ಟು ಬಾರಿ ಅಥವಾ ಅದಕ್ಕಿಂತ ಸೂಕ್ತವಾದಂತಹ ರೀತಿಯಲ್ಲಿ ಶಿಕ್ಷಿಸಬಹುದು. ಹಾಗೆಯೇ, ದೇವನು ಬಲಿಪಶುವಾಗಿದ್ದ ಮುಗ್ಧ ಜನರಿಗೆ ಅವನಿಚ್ಛೆಯಂತೆ ಕೊನೆಯಿಲ್ಲದಂತೆ ಪರಿಹಾರಕೊಡಬಹುದು. ಇದುವೇ ಪ್ರತಿಯೊಬ್ಬ ಮನುಷ್ಯ ಹಂಬಲಿಸುವ, ಆದರೆ ಈ ಪ್ರಪಂಚದಲ್ಲಿ ದೊರೆಯದ ಪರಿಪೂರ್ಣ ನ್ಯಾಯ.
ಸ್ವರ್ಗ – ಯಾರಿಗೆ, ನರಕ – ಯಾರಿಗೆ?
ಯಾವ ಸತ್ಕರ್ಮಿಗಳು ಏಕ ನೈಜ ದೇವನನ್ನು ಆರಾಧಿಸಿದ್ದರೋ ಮತ್ತು ಯಾವುದೇ ವಸ್ತು/ಮನುಷ್ಯನೆದುರು ಸಾಷ್ಟಾಂಗ ಬೀಳದೇ ಅಥವಾ ಪೂಜಿಸದೇ ಹಾಗು ದಯೆ ಮತ್ತು ನೈತಿಕತೆಯ ಜೀವನ ಸಾಗಿಸಿದ್ದರೋ, ಅವರಿಗೆ ಸ್ವರ್ಗದಲ್ಲಿ ನಿರಂತರ ಸುಖ ಮತ್ತು ಸಂತೋಷವನ್ನು ಪ್ರತಿಫಲವಾಗಿ ಕೊಡಲಾಗುವುದು.
ಯಾವ ದುಷ್ಕರ್ಮಿಗಳು ನಿಜವನ್ನು ತಿಳಿದ ನಂತರವೂ, ದೇವನ ಸೃಷ್ಟಿಯಾದ ಸೂರ್ಯ, ಚಂದ್ರ, ಗ್ರಹಗಳು, ಮನುಷ್ಯರು, ವಿಗ್ರಹಗಳು, ಚಿತ್ರಗಳು ಇತ್ಯಾದಿಗಳನ್ನು ಆರಾಧಿಸುತ್ತಾರೋ ಮತ್ತು ದುಷ್ಟ ಹಾಗು ನಾಚಿಕೆಗೀಡಿನ ಕೆಲಸಗಳನ್ನು ಮಾಡುತ್ತ ಸೃಷ್ಟಿಕರ್ತನಿಗೆ ಅವಿಧೇಯನಾಗಿ ಜೀವನ ನಡೆಸಿದ್ದರೋ, ಅವರನ್ನು ಸದಾಕಾಲಕ್ಕೆ ಭುಗಿಲೇರುತ್ತಿರುವ ನರಕದ ಬೆಂಕಿಯಲ್ಲಿ ಶಿಕ್ಷಿಸಲಾಗುವುದು.
ಸ್ವರ್ಗ ಎಂದರೆ ಏನು?
ಸತ್ಕರ್ಮಿಗಳು ಏನೇ ಬಯಸಿದರು ಕೊಡಲಾಗುವಂತಹ, ಎಂದಿಗೂ ಕೊನೆಯಾಗದ ಸುಖದ ತಾಣವೇ ಸ್ವರ್ಗ. ಅಲ್ಲಿ ಯಾವುದೇ ಕಾಯಿಲೆ, ನೋವು, ದ್ವೇಷ, ಮತ್ಸರ, ವೃದ್ಧಾಪ್ಯ ಇತ್ಯಾದಿಗಳಿಲ್ಲ. ದೇವನು ಈ ಸತ್ಕರ್ಮಿಗಳಿಗೆ ಅವರು ಎಂದೂ ಕಂಡಿರದ, ಕೇಳಿರದ ಅಷ್ಟೇ ಅಲ್ಲದೆ ಎಂದೂ ಕಲ್ಪಿಸಿಕೊಂಡಿಲ್ಲದಂತಹ ಸುಖ, ಸವಲತ್ತುಗಳನ್ನು ಕೊಡುಗೆಯಾಗಿ ನೀಡುವನು.
ನರಕ ಎಂದರೆ ಏನು?
ದುಷ್ಕರ್ಮಿಗಳು ಭುಗಿಲೇರುತ್ತಿರುವ ಬೆಂಕಿಯಲ್ಲಿ ನಿರಂತರವಾಗಿ ನರಳುವ ತಾಣವೇ ನರಕ. ಅವರು ಅಲ್ಲಿ ಜೀವಿಸಲೂ ಆಗದೆ ಸಾಯಲೂ ಆಗದೆ ನರಳುತ್ತಿರುತ್ತಾರೆ. ಅಲ್ಲಿ ಅವರ ಊಟ ಗಾಯದಿಂದ ಹೊರಬಂದ ಕೀವು (ಪಸ್) ಮತ್ತು ಮುಳ್ಳಿನ ಗಿಡಗಳು ಹಾಗು ಕುಡಿಯಲು ಅತ್ಯಂತ ಕುದಿಯುತ್ತಿರುವ ನೀರಾಗಿರುತ್ತದೆ.
ದೇವನು ಅತ್ಯಂತ ಕ್ಷಮಾಮಯಿ ಮತ್ತು ಅತ್ಯಂತ ಕರುಣಾಮಯಿ
ದೇವನು ಕ್ರೂರಿಯಲ್ಲ ಮತ್ತು ಜನರು ನರಕದಲ್ಲಿ ಶಿಕ್ಷೆಗೀಡಾಗುವುದನ್ನು ನೋಡಲು ಇಚ್ಛಿಸುವುದಿಲ್ಲ. ದೇವನು ನಮ್ಮ ಸತ್ಕರ್ಮಗಳಿಗೆ ಹಲವು ಪಟ್ಟು ಪ್ರತಿಫಲ ನೀಡುತ್ತಾನೆ ಮತ್ತು ತನ್ನ ಮಿತಿಯಿಲ್ಲದ ಕ್ಷಮೆಯಿಂದ ತನ್ನ ಕರುಣೆಯನ್ನು ಚಾಚುತ್ತಾನೆ. ಅವನು ತನ್ನ ಕ್ಷಮೆಯಾಚಿಸುವವರನ್ನು ಕ್ಷಮಿಸಲು ಸದಾ ಸಿದ್ಧನಿರುತ್ತಾನೆ. ಕೇವಲ ತಮ್ಮ ಕೆಲಸಗಳನ್ನು ತಿದ್ದುಕೊಳ್ಳಲು ಒಪ್ಪದ ಮತ್ತು ದೇವನ ಕ್ಷಮೆಯಾಚಿಸದೇ ಅದೇ ಸ್ಥಿತಿಯಲ್ಲಿ ಸಾಯುವ ಧಿಕ್ಕಾರಿಗಳು ಮಾತ್ರ ನರಕದ ಬೆಂಕಿಯಲ್ಲಿ ಹಾಕಲ್ಪಡುತ್ತಾರೆ.
ಹಾಗಾದರೆ ಪುನರ್ಜನ್ಮ ಎನ್ನುವುದು ಇಲ್ಲವೆ? ಈ ಭೂಮಿಗೆ ನಾವು ಹಿಂದಿರುಗಿ ಬರುವುದಿಲ್ಲವೇ?
ಜನ್ಮ ಮತ್ತು ಪುನರ್ಜನ್ಮದ ಪರಿಕಲ್ಪನೆಯಲ್ಲಿ ನ್ಯಾಯವೆಂಬುದಿಲ್ಲ. ಗಮನಿಸಿ, ನ್ಯಾಯ ಒದಗಿಸುವುದರಲ್ಲಿ ಒಂದು ಪ್ರಮುಖ ಅಂಶವೆಂದರೆ ಪ್ರತಿಫಲ ಅಥವಾ ಶಿಕ್ಷೆಯ ಕಾರಣಗಳನ್ನು ತಿಳಿಸಿಕೊಡುವುದು. ಉದಾಹರಣೆಗೆ, ಪೋಲೀಸರ ಗುಂಪೊದು ನಿಮ್ಮ ಮನೆಗೆ ಬಂದು, ನಿಮ್ಮನ್ನು ಬಂಧಿಸಿದರೆ, ನೀವು ‘ಏಕೆ ಮತ್ತು ಯಾವ ಅಪರಾಧಕ್ಕಾಗಿ ನನ್ನನ್ನು ಬಂಧಿಸುತ್ತಿದ್ದೀರಾ’ ಎಂದು ಕೇಳುದಿಲ್ಲವೇ? ಪೋಲೀಸರು ಬಂಧನದ ಕಾರಣ ತಿಳಿಸದಿದ್ದರೆ, ನೀವು ಬಂಧನಕ್ಕೆ ತಡೆ ಒಡ್ಡುವುದಿಲ್ಲವೇ? ಇದನ್ನು ನೀವು ಅನ್ಯಾಯವೆಂದು ಪರಿಗಣಿಸುವುದಿಲ್ಲವೇ?
ಈ ಪ್ರಪಂಚದಲ್ಲಿನ ನಿಮ್ಮ ಜನ್ಮ ಮೊದಲನೆಯದೋ, ಎರಡನೆಯದೋ ಅಥವಾ ಮೂರನೆಯದೋ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಯಾವ ಕೆಲಸಗಳಿಗಾಗಿ, ಈ ಜನ್ಮದಲ್ಲಿ ಪ್ರತಿಫಲ ಅಥವಾ ಶಿಕ್ಷೆ ನೀಡಲಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ? ನಿಮಗೆ ಈ ಪ್ರಶ್ನಗಳಿಗೆ ಉತ್ತರ ತಿಳಿದಿಲ್ಲವೆಂದರೆ, ಈ ಜನ್ಮದಲ್ಲಿ ನಿಮಗೆ ಪ್ರತಿಫಲ ಅಥವಾ ಶಿಕ್ಷೆ ನೀಡುವುದು ಅನ್ಯಾಯವಲ್ಲವೇ?
ಹಾಗೆಯೇ, ಕಳೆದ ಜನ್ಮದಲ್ಲಿ ನಿಮಗೆ ಯಾರಾದರು ನೋವುಂಟು ಮಾಡಿದ್ದರೆ, ಆ ಮನುಷ್ಯನಿಗೆ ಆ ಪಾಪದ ಬದಲಾಗಿ ಶಿಕ್ಷಿಸಲಾಯಿತೇ? ಹೌದು ಎಂದರೆ, ಇದು ನಿಮಗೆ ತಿಳಿದಿದೆಯೇ? ಇಲ್ಲವೆಂದರೆ, ನಿಮಗೆ ನ್ಯಾಯ ಕೊಡಲಾಗಿಲ್ಲ. ಹೀಗೆ ನೀವೇ ನೋಡುವಂತೆ, ಪುನರ್ಜನ್ಮದ ಪರಿಕಲ್ಪನೆಯು ತಾರ್ಕಿಕವಲ್ಲ ಹಾಗೂ ನ್ಯಾಯರಹಿತವಾಗಿದೆ.
ಸಾವಿನ ನಂತರದ ಜೀವನದ ಬಗ್ಗೆ ದೇವನು ನಮಗೆ ತಿಳಿಸಿದ್ದಾನೆಯೇ? ಹೌದೆಂದರೆ ಹೇಗೆ?
ದೇವನು ನಮ್ಮ ಅಸ್ತಿತ್ವದ ಉದ್ದೇಶ ಮತ್ತು ಸಾವಿನ ನಂತರ ಜೀವನದ ಬಗ್ಗೆ, ಪ್ರವಾದಿಗಳ ಮೂಲಕ ನಮಗೆ ತಿಳಿಸಿದ್ದಾನೆ. ಪ್ರವಾದಿಗಳು ನಮಗೆ ನಿದರ್ಶನವಾಗಿ ಬಾಳಿದ ನ್ಯಾಯಯುತ ಮನುಷ್ಯರು, ಅವರಲ್ಲಿ ಯಾವುದೇ ದೈವಿಕ ಗುಣಗಳಿರಲಿಲ್ಲ. ದೇವನು ಪ್ರವಾದಿಗಳನ್ನು ಪ್ರತಿ ದೇಶ, ಸಮುದಾಯಕ್ಕೆ ಕಳಿಸಿಕೊಟ್ಟಿದ್ದಾನೆ. ಕೆಲವು ಸಂಸ್ಕೃತಿಗಳಲ್ಲಿ ಪ್ರವಾದಿಗಳ ಹೆಸರುಗಳನ್ನು ಕಾಪಾಡಿಕೊಳ್ಳಲಾಗಿದೆ ಮತ್ತು ಭಾರತದಂತಹ, ಕೆಲವಲ್ಲಿ ಕಾಪಾಡಿಕೊಳ್ಳಲಾಗಿಲ್ಲ. ಹೆಸರಿನೊಂದಿಗೆ ನಮಗೆ ತಿಳಿದಿರುವ ಪ್ರವಾದಿಗಳಲ್ಲಿ ಕೆಲವರು, ನೋಹ್, ಅಬ್ರಾಹಮ್, ಡೇವಿಡ್, ಸೋಲಮನ್, ಮೋಶೆ ಮತ್ತು ಏಸು. ಈ ಸರಣಿಯಲ್ಲಿ ಕೊನೆಯ ಮತ್ತು ಕಟ್ಟ ಕಡೆಯ ಪ್ರವಾದಿಯೇ, ಪ್ರವಾದಿ ಮುಹಮ್ಮದ್.
ಸಾವಿನ ನಂತರದ ಜೀವನದ ಸಾಕ್ಷಿ – ಖುರ್’ಆನ್
ಖುರ್’ಆನ್ ದೇವನು ತನ್ನ ಕಟ್ಟ ಕಡೆಯ ಪ್ರವಾದಿಯಾದ, ಪ್ರವಾದಿ ಮುಹಮ್ಮದ್‍ರವರ ಮೂಲಕ ಕೊಟ್ಟ ಕೊನೆಯ ಅವತೀರ್ಣ (ಮಾನವ ಕುಲಕ್ಕೆ ಕೊಡಲಾಗಿರುವ ಸೂಚನಾ ಕೈಪಿಡಿ/ಮ್ಯಾನ್ಯುಅಲ್). ಖುರ್’ಆನ್, ಪ್ರವಾದಿ ಮುಹಮ್ಮದ್‍ರಿಂದ ಬರೆಯಲ್ಪಟ್ಟ ಕೃತಿಯಲ್ಲ. ಸಂಪೂರ್ಣ ಖುರ್’ಆನ್ ದೇವನ ನುಡಿ, ಅದು ಕಳೆದ 14 ಶತಮಾನಗಳಿಂದ ಕಿಂಚಿತ್ತೂ ಬದಲಾಗದೆ ಉಳಿದಿದೆ. ಖುರ್’ಆನ್‍ನ ಕರ್ತೃವಾದ ದೇವನು ಅದರಲ್ಲಿ ಒಂದಾದರೂ ತಪ್ಪನ್ನು ತೆಗೆಯಲು ಸವಾಲೊಡ್ಡುತ್ತಾನೆ. ದೇವನು ಹೇಳುತ್ತಾನೆ,
“ಅವರೇನು ಖುರ್’ಆನ್‍ನ ಕುರಿತು ಚಿಂತನೆ ಮಾಡುವುದಿಲ್ಲವೇ? ಒಂದು ವೇಳೆ ಇದು ಅಲ್ಲಾಹನ ಹೊರತು ಬೇರೆ ಯಾರ ಕಡೆಯಿಂದ ಬಂದಿದ್ದರೂ, ಅವರು ಇದರಲ್ಲಿ ಹಲವು ವಿರೋಧಾಭಾಸಗಳನ್ನು ಕಾಣುತ್ತಿದ್ದರು.” (ಖುರ್’ಆನ್ ಅಧ್ಯಾಯ 4: ಸೂಕ್ತಿ 82).