ನಿಶ್ಚಯವಾಗಿಯೂ ಅಲ್ಲಟಲಾಹನಲ್ಲೂ ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಟ್ಟವರು ಮಾತ್ರವೇ ಸತ್ಯವಿಶ್ವಾಸಿಗಳು. ಅವರು ಯಾವುದಾದರೂ ಸಾಮೂಹಿಕ ಕಾರ್ಯದಲ್ಲಿ ಅವರ (ಸಂದೇಶವಾಹಕರ) ಜೊತೆಗಿದ್ದರೆ ಅವರೊಡನೆ ಅನುಮತಿ ಕೇಳದೆ (ಬಿಟ್ಟು) ಹೋಗಬಾರದು. (ಪ್ರವಾದಿಯವರೇ) ನಿಶ್ಚಯವಾಗಿಯೂ ನಿಮ್ಮೊಡನೆ ಯಾರು ಅನುಮತಿ ಕೇಳುತ್ತಾರೋ ಅವರೇ ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವವರು. ಆದುದರಿಂದ ಅವರು ತಮ್ಮ ಕೆಲವು ಕಾರ್ಯಗಳಿಗಾಗಿ (ಬಿಟ್ಟು ಹೋಗಲು) ನಿಮ್ಮೊಡನೆ ಅನುಮತಿ ಕೇಳಿದರೆ ಅವರ ಪೈಕಿ ನೀವಿಚ್ಚಿಸುವವರಿಗೆ ಅನುಮತಿ ಕೊಟ್ಟು ಬಿಡಿರಿ ಮತ್ತು ಅವರಿಗಾಗಿ ಅಲ್ಲಾಹನೊಡನೆ ಪಾಪವಿಮೋಚನೆ ಬೇಡಿರಿ. ನಿಶ್ಚಯವಾಗಿಯೂ ಅಲ್ಲಾಹು ಅತ್ಯಂತ ಕ್ಷಮಿಸುವವನೂ ವಿಶೇಷವಾಗಿ ದಯೆ ತೋರುವವನೂ ಆಗಿರುತ್ತಾನೆ (24:62).
ಸತ್ಯವಿಶ್ವಾಸಿಗಳು ತಮ್ಮ ಸಂಘಟಿತ ಬದುಕಿನಲ್ಲೂ ಸಂಘಟನಾ ಕಾರ್ಯಗಳಲ್ಲೂ ಪಾಲಿಸಬೇಕಾದ ಇಸ್ಲಾಮೀ ಬಾಧ್ಯತೆಗಳನ್ನು ಈ ವಚನದಲ್ಲಿ ಅಲ್ಲಾಹು ನಮಗೆ ಕಲಿಸುವುದು. ಸತ್ಯವಿಶ್ವಾಸಿಗಳು ಒಂದೆಡೆ ಅಹ್‌ಝಾಬ್ ಯುದ್ಧಕ್ಕಾಗಿ ಅಣಿಗೊಂಡ ಸಂದರ್ಭವಾಗಿದೆ ಈ ಸೂಕ್ತಿಗಳ ಅವತೀರ್ಣದ ಹಿನ್ನೆಲೆಯೆಂದು ವ್ಯಾಖ್ಯಾನಕಾರರು ವಿಷದೀಕರಿಸಿದ್ದಾರೆ. ಪ್ರವಾದಿ(ಸ)ರವರು ಮತ್ತು ಅನುಯಾಯಿಗಳು ಶತ್ರುಗಳನ್ನು ತಡೆಯುವುದಕ್ಕಾಗಿ ಒಂದು ಕಂದರವನ್ನು ತೋಡುತ್ತಿದ್ದರು. ಕಷ್ಟಕರವಾದ ಆ ಕೆಲಸ ನಡೆಯುತ್ತಿರುವುದರ ನಡುವೆ ಕೆಲ ಕಪಟಿಗಳು ಅಲ್ಲಿಂದ ತಪ್ಪಿಸಿ ಹೋಗುತ್ತಾರೆ. ವಿಶ್ವಾಸಿಗಳ ರಕ್ಷಣಾ ಕಾರ್ಯಕ್ಕಿಂತಲೂ ಅವರಿಗೆ ಸ್ವಂತದ ಕಾರ್ಯ ಪ್ರಧಾನವಾಗಿತ್ತು. ಸತ್ಯ ವಿಶ್ವಾಸಿಗಳಾದರೋ ತಮ್ಮ ಅತ್ಯಗತ್ಯದ ಕೆಲಸ ಕಾರ್ಯಗಳಿಗಾಗಿ ಪ್ರವಾದಿ(ಸ)ರವರ ಅನುಮತಿ ಪಡೆದು ಹೊರ ಹೋಗಿ ಪುನಃ ಬಂದು ಕಂದರ ತೋಡುವ ಕೆಲಸದಲ್ಲಿ ನಿರತರಾಗುತ್ತಿದ್ದರು. ಇದಾಗಿದೆ ಕಂದಕದಲ್ಲಿ ನಡೆದ ಸಂಭವ.
ಅವತೀರ್ಣದ ಹಿನ್ನೆಲೆ ಯಾವುದಾಗಿದ್ದರೂ ಸಂಘಟಿತ ಜೀವಿತದ ಮಹತ್ವವನ್ನು ನಾವಿದರಲ್ಲಿ ಕಾಣುತ್ತೇವೆ. ಒಂದು ಸಮೂಹ ಮತ್ತದರ ನೇತಾರರ ನಡುವಿರವ ಸಂಬಂಧ ಮತ್ತು ಆ ನೇತಾರರನ್ನು ಅನುಸರಿಸಿ ಅನುಯಾಯಿಗಳು ಸಂಘಟಿತ ಕಾರ್ಯಗಳಲ್ಲಿ ಶಿಸ್ತಿನಿಂದ ಸಹಕರಿಸುವುದರ ಪ್ರಾಧಾನ್ಯತೆಯನ್ನು ಅಲ್ಲಾಹ್ ಇದರಲ್ಲಿ ಕಲಿಸುತ್ತಾನೆ.
ಪ್ರವಾದಿ(ಸ)ರವರು ನಾಯಕರಾಗಿ ಮತ್ತು ಸಹಾಬಿಗಳು ಅನುಯಾಯಿಗಳಾಗಿದ್ದ ಶಿಸ್ತುಬದ್ಧವಾದ ಆ ಸಂಘಟಿತ ಬದುಕು, ಅಲ್ಲಾಹು ಮತ್ತವನ ಸಂದೇಶವಾಹಕರ ಮಾರ್ಗವನ್ನು ಬೋಧನೆ ಮಾಡಲು ಸಂಘಟಿತರಾಗಿರುವ ನಮಗೆ ಪ್ರೇರಣೆಯಾಗಬೇಕು. ಸಂದೇಶವಾಹಕ(ಸ)ರವರು ಮತ್ತು ಸಹಾಬಿಗಳ ಮಾದರೀ ಸಂಬಂಧವನ್ನು ನೆಲೆಗೊಳಿಸಲು ನಾವು ಬಾಧ್ಯಸ್ಥರಾಗಿದ್ದೇವೆ. ಸಂಘಟನೆ, ಸಂಘಟಿತ ಕಾರ್ಯಾಚರಣೆಗಳು ವ್ಯಕ್ತಿಗಳಿಂದ ನೆಲೆಗೊಳ್ಳುವುದಾದರೂ ವ್ಯಕ್ತಿಗಳಿಗತೀತವಾದ ಒಂದು ಅಸ್ತಿತ್ವ ಸಂಘಟನೆಗಿದೆ. ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯನ್ನು ಅಕ್ಷರಶಃ ಅನುಸರಿಸುವ ಒಂದು ಸಂಘಟನೆಯ ಅಸ್ತಿತ್ವವು ಪವಿತ್ರವಾಗಿದೆ. ಆ ಪಾವಿತ್ರ್ಯತೆಯನ್ನು ಸಂರಕ್ಷಿಸಲು ನಾವು ಅತೀ ಹೆಚ್ಚು ಬಾಧ್ಯಸ್ಥರಾಗಿದ್ದೇವೆ. “ಕೇಳಿರಿ, ಅನುಸರಿಸಿರಿ, ನಿಮ್ಮ ನೇತಾರ ಒಬ್ಬ ಗುಲಾಮನಾಗಿದ್ದರು” ಎಂಬ ಪ್ರವಾದಿ ವಚನ (ಬುಖಾರಿ) ಮತ್ತು ನೇತೃತ್ವವನ್ನು ಅನುಸರಿಸದವನು ಅಲ್ಲಾಹನ ಮುಂದೆ ಉತ್ತರ ಸಮರ್ಪಿಸಲು ಸಾಧ್ಯವಾಗದ ರೀತಿಯಲ್ಲಿ ಅವನನ್ನು ಎದುರುಗೊಳ್ಳಲಾಗುವುದೆಂಬ ಪ್ರವಾದಿ ವಚನಗಳು ನಮಗೆ ತಿಳಿಸುವುದೇನೆಂದರೆ ವ್ಯಕ್ತಿಗಳಿಗೆ ಅತೀತವಾಗಿ ಸಂಘಟನೆಯ ಪಾವಿತ್ರ್ಯತೆ ಉಳಿಸಬೇಕೆಂಬುದಾಗಿದೆ.
ಉಬಾದತ್ ಇಬ್‌ನು ಸ್ವಾಮಿತ್(ರ)ರು ಹೇಳುತ್ತಾರೆ: “ನಾವು ಸಂದೇಶವಾಹಕ(ಸ)ರವರೊಡನೆ ಹೀಗೆ ಪ್ರತಿಜ್ಞೆ ಗೈದವು” – ಮಾತನ್ನು ಕೇಳುತ್ತೇವೆ, ಅನುಸರಿಸುತ್ತೇವೆ, ಕಷ್ಟ ಸುಖಗಳ ಸಂದರ್ಭಗಳಲ್ಲೆಲ್ಲಾ ನಮಗಿಷ್ಟವಿದ್ದರೂ ಇಲ್ಲದಿದ್ದರೂ ಸ್ವಂತ ಹಿತಾಸಕ್ತಿಗಳಿಗೆ ಅಡಚಣೆಯಾದರೂ ಅವಿಧೇಯತೆ ತೋರುವುದಿಲ್ಲ ಮತ್ತು ಯಾವ ಸಂದರ್ಭದಲ್ಲೂ ಎಲ್ಲಿಯೂ ನಾವು ಸತ್ಯವನ್ನೇ ಬಿಡುವುದಿಲ್ಲ ಎಂದು ಪ್ರವಾದಿ(ಸ)ರೊಡನೆ ನಾವು ಕರಾರು ಮಾಡಿದೆವು ” (ಬುಖಾರಿ, ಮುಸ್ಲಿಮ್)
ಸಂಘಟಿತ ಜೀವಿತದ ಕರಾರುಬದ್ಧವಾದ ವ್ಯವಸ್ಥೆಯ ಕುರಿತು ಈ ಹದೀಸ್ ಸ್ಪಷ್ಟ ಪಡಿಸುತ್ತದೆ.
ಸಂದೇಶವಾಹಕ(ಸ)ರವರ ಜತೆ ಸಾಮೂಹಿಕ ಕಾರ್ಯದಲ್ಲಿ ನಿರತರಾಗಿರುವಾಗ ಸಂದೇಶವಾಹಕ(ಸ)ರವರ ಅನುಮತಿ ಕೇಳಿ ಹೋಗುವವರು ಅಲ್ಲಾಹನನ್ನೂ ಸಂದೇಶವಾಹಕರನ್ನೂ ಅಂಗೀಕರಿಸುವವರಾಗಿದ್ದಾರೆಂಬ ಕುರ್‌ಆನಿನ ವಚನದ ಪ್ರಸ್ತಾವನೆಯು ಶಿಸ್ತಿನ ಪ್ರಾಧಾನ್ಯತೆಯನ್ನು ಎತ್ತಿ ತೋರಿಸುತ್ತದೆ. ಶಿಸ್ತು ಎಂಬುದು ಒಂದು ಸಂಘಟಿತ ಸಮೂಹದ ಶಕ್ತಿಯಾಗಿದೆ. ಅಶಿಸ್ತಿನ ಮೂಲಕ ಸಂಘಟನೆಯ ಶಕ್ತಿಯನ್ನು ಒಡೆಯುವವರು ಅಲ್ಲಾಹನಲ್ಲೂ ಸಂದೇಶವಾಹಕರಲ್ಲೂ ವಿಶ್ವಾಸವಿಡದ ಕಪಟ ವಿಶ್ವಾಸಿಗಳು. ಅನುಯಾಯಿಗಳ ಅನುಸರಣಾ ಬಾಧ್ಯತೆಯಂತೆಯೇ ನಾಯಕನ ಜವಾಬ್ದಾರಿ ಅದಕ್ಕಿಂತಲೂ ಮಹತ್ವದ್ದಾಗಿದೆ.
ಪ್ರವಾದಿ(ಸ)ರವರು ಹೇಳಿದ್ದಾರೆ: “ಒಬ್ಬ ವ್ಯಕ್ತಿ ಒಂದು ಸಮೂಹವನ್ನು ವಂಚಿಸಿ ಮರಣ ಹೊಂದಿದರೆ ಅವನಿಗೆ ಸ್ವರ್ಗ ನಿಷಿದ್ದವಾಗಿದೆ” (ಬುಖಾರಿ, ಮುಸ್ಲಿಮ್), ಅನುಯಾಯಿಗಳೊಡನೆ ಕ್ರೂರತೆ ತೋರುವವನು ಅತ್ಯಂತ ಕೆಟ್ಟ ನೇತಾರನಾಗಿದ್ದಾನೆ. ನೀನು ಅಂತಹವರ ಸಾಲಿಗೆ ಸೇರಬೇಡ” (ಬುಖಾರಿ, ಮುಸ್ಲಿಮ್).
ಒಟ್ಟಿನಲ್ಲಿ ಅಧಿಕಾರಸ್ಥರ ಸತ್ಯನಿಷ್ಠೆ ಮತ್ತು ಅನುಯಾಯಿಗಳ ಅನುಸರಣೆಗಳು ಇಸ್ಲಾಮಿನ ಸಂಘಟಿತ ವ್ಯವಸ್ಥೆಯ ತಳಹದಿಯಾಗಿದೆ. ಅದು ಅಲುಗಾಡತೊಡಗಿದರೆ ಆ ಸಮೂಹ ಶಿಥಿಲಗೊಳ್ಳುವುದರಲ್ಲಿ ಸಂದೇಹವಿಲ್ಲ.
– ಅಬ್ದುರ್-ರವೂಫ್ ಮಲಾರ್