ಉಮ್ಮು ಹಬೀಬ(ರ) ರವರ ವಂಶಾವಳಿಯು ಐದನೇ ಪಿತಾಮಹ ಅಬ್ ಮನಾಸ್‌ರಲ್ಲಿ ಪ್ರವಾದಿ(ಸ) ರೊಂದಿಗೆ ಸಂಧಿಸುತ್ತದೆ.
ಜನನ ಮತ್ತು ಬೆಳವಣಿಗೆ:
ಉಮ್ಮು ಹಬೀಬ(ರ) ಕುರೈಶರ ಮುಖಂಡ ಮತ್ತು ಇಸ್ಲಾಮ್ ಧರ್ಮದ ಬದ್ಧ ಶತ್ರುವಾಗಿದ್ದ ಅಬೂ ಸುಫ್ಯಾನ್(ರ) ರ ಮಗಳು, ಅವರ ನಿಜವಾದ ಹೆಸರು ರಮ್ಲ. ಅವರು ಮಕ್ಕಾದಲ್ಲೇ ಬೆಳೆದು ದೊಡ್ಡವರಾದರು. ಆ ಕಾಲದಲ್ಲಿ ಮಕ್ಕಾದಲ್ಲಿ ವಿಗ್ರಹಾರಾಧನೆ ಮಾಡದ ಮತ್ತು ಕುರೈಶರ ಧರ್ಮವನ್ನು ಸ್ವೀಕರಿಸದೆ ಇಬ್ರಾಹೀಮರ ಧರ್ಮದಲ್ಲೇ ಉಳಿದ ನಾಲ್ಕು ಜನರಿದ್ದರು. ವರಕ ಬಿನ್ ನೌಫಲ್, ಉಸ್ಮಾನ್ ಬಿನ್ ಹುವೈರಿಸ್, ಝೈದ್ ಬಿನ್ ನೌಫಲ್ ಮತ್ತು ಉಬೈದುಲ್ಲಾ ಬಿನ್ ಜಹ್ಶ್ ಇವರೆಲ್ಲರೂ ಸತ್ಯಾನ್ವೇಷನೆಯಲ್ಲಿ ತೊಡಗಿದ್ದರು. ಇವರ ಪೈಕಿ ಉಬೈದುಲ್ಲಾ ಉಮ್ಮು ಹಬೀಬ(ರ)ರನ್ನು ವಿವಾಹವಾದರು. ಪ್ರವಾದಿ(ಸ) ರವರು ಪ್ರವಾದಿಯಾಗಿ ಇಸ್ಲಾಮ್ ಧರ್ಮವನ್ನು ಬೋಧಿಸಿದಾಗ ಇಬ್ಬರೂ ಇಸ್ಲಾಮ್ ಸ್ವೀಕರಿಸಿದರು. ಉಬೈದುಲ್ಲಾರ ಸಹೋದರರಾದ ಅಬ್ದುಲ್ಲಾ ಬಿನ್ ಜಹ್ಶ್ ಮತ್ತು ಅಬೂ ಅಹ್ಮದ್ ಬಿನ್ ಜಹ್ಶ್ ಕೂಡ ಇಸ್ಲಾಂ ಸ್ವೀಕರಿಸಿದರು. ಹಾಗೆಯೇ ಅವರ ಇಬ್ಬರು ಸಹೋದರಿಯರಾದ ಉಮ್ಮುಲ್ ಮುಅ್‌ನೀನ್ ಝೈನಬ್ ಬಿಂತ್ ಜಹ್ಶ್ ಮತ್ತು ಹಮ್ನ ಬಿಂತ್ ಜಹ್ಶ್ ಕೂಡ ಮುಸ್ಲಿಮರಾದರು. ಮಗಳು ಉಮ್ಮು ಹಬೀಬ(ರ) ಇಸ್ಲಾಂ ಸ್ವೀಕರಿಸಿದ್ದನ್ನು ಕಂಡು ಅಬೂ ಸುಫ್ಯಾನ್ ಕೆಂಡಾಮಂಡಲವಾದರು. ಮಗಳನ್ನು ಹಿಂದಕ್ಕೆ ತರಲು ಅವರು ಎಲ್ಲಾ ವಿಧಾನಗಳನ್ನು ಬಳಸಿದರು. ಆದರೆ ತಂದೆಯ ಯಾವುದೇ ಮಾತಿಗೂ ಹಿಂಸೆಗೂ ಮಗಳು ವಿಚಲಿತಳಾಗಲಿಲ್ಲ.
ಅಬಿಸೀನಿಯಾಗೆ ಹಿಜ್ರ
ಮಕ್ಕಾದಲ್ಲಿ ಕುರೈಶರ ಕಾಟ ಮಿತಿಮೀರಿದಾಗ ಪ್ರವಾದಿ(ಸ) ರವರು ತಮ್ಮ ಅನುಯಾಯಿಗಳಿಗೆ ಅಬಿಸೀನಿಯಾಗೆ ಹಿಜ್ರ ಹೋಗಲು ಅನುಮತಿ ನೀಡಿದರು. ಮುಸ್ಲಿಮರು ಅಬಿಸೀನಿಯಾಗೆ ಹಿಜ್ರ ಹೊರಟರು. ಉಬೈದುಲ್ಲಾ ಮತ್ತು ಉಮ್ಮು ಹಬೀಬ(ರ) ಅಬಿಸೀನಿಯಾಗೆ ಹಿಜ್ರ ಹೊರಟ ಎರಡನೇ ತಂಡದಲ್ಲಿ ಸೇರಿಕೊಂಡರು.
ಗಂಡನ ಮರಣ:
ಅಬಿಸೀನಿಯಾದಲ್ಲಿ ಈ ದಂಪತಿಗೆ ಒಂದು ಹೆಣ್ಣು ಮಗು ಹುಟ್ಟಿತು. ಮಕ್ಕಾದಲ್ಲೇ ಹುಟ್ಟಿತೆಂದು ಹೇಳಲಾಗುತ್ತದೆ. ಈ ಮಗುವಿನ ಹೆಸರು ಹಬೀಬ. ಈ ಮಗುವಿನಿಂದಲೇ ಅವರಿಗೆ ಉಮ್ಮು ಹಬೀಬ(ರ) ಎಂಬ ಹೆಸರು ಬಂತು. ಆದರೆ ಅಬಿಸೀನಿಯಾದಲ್ಲಿ ಉಮ್ಮು ಹಬೀಬ(ರ) ರಿಗೆ ಒಂದು ದೊಡ್ಡ ಆಘಾತವುಂಟಾಯಿತು. ಅಬಿಸೀನಿಯಾದಲ್ಲಿ ಕ್ರೈಸ್ತ ಧರ್ಮದಿಂದ ಪ್ರಭಾವಿತರಾಗಿ ಉಬೈದುಲ್ಲಾ ಕ್ರೈಸ್ತ ಧರ್ಮ ಸ್ವೀಕರಿಸಿದರು. ಮಾತ್ರವಲ್ಲ, ಪತ್ನಿಯೊಂದಿಗೆ ಕ್ರೈಸ್ತ ಧರ್ಮ ಸ್ವೀಕರಿಸುವಂತೆ ಒತ್ತಡ ಹೇರಿದರು. ಇಸ್ಲಾಂ ಧರ್ಮಕ್ಕಿಂತ ಕ್ರೈಸ್ತ ಧರ್ಮವೇ ಉತ್ತಮ ಎಂದರು. ಆದರೆ ಉಮ್ಮು ಹಬೀಬ(ರ) ಇಸ್ಲಾಂ ಧರ್ಮವನ್ನು ತೊರೆಯಲು ಸಿದ್ಧರಾಗಲಿಲ್ಲ. ಅವರು ತಮ್ಮ ನಿರ್ಧಾರದಲ್ಲಿ ಅಚಲವಾಗಿ ನಿಂತರು. ಕ್ರೈಸ್ತ ಧರ್ಮಕ್ಕೆ ಸೇರಿ ವಿಪರೀತ ಕುಡಿಯತೊಡಗಿದ ಉಬೈದುಲ್ಲಾ ಕೆಲವೇ ಸಮಯದಲ್ಲಿ ಇಹಲೋಕ ತ್ಯಜಿಸಿದರು. ವಿಧವೆಯಾದ ಉಮ್ಮು ಹಬೀಬ(ರ) ಅಬಿಸೀನಿಯಾದಲ್ಲಿ ಒಂಟಿಯಾದರು. ಮಗಳೊಂದಿಗೆ ಅವರು ಅಲ್ಲೇ ವಾಸವಾದರು.
ಇಸ್ಲಾಮೀ ಸಾಮ್ರಾಜ್ಯ ಸ್ಥಾಪನೆ:
ವರ್ಷಗಳು ಕಳೆದವು. ಬದ್ರ್, ಉಹುದ್, ಖಂದಕ್ ಯುದ್ಧಗಳು, ಹುದೈಬಿಯಾ ಒಪ್ಪಂದ ಎಲ್ಲಾ ನಡೆದು ಹೋದವು. ಉಮ್ಮು ಹಬೀಬ(ರ) ಅಬಿಸೀನಿಯಾದಲ್ಲೇ ಇದ್ದರು. ಹುದೈಬಿಯಾ ಒಪ್ಪಂದದ ಬಳಿಕ ಅರೇಬಿಯಾದ ಅನೇಕ ಗೋತ್ರ ಮತ್ತು ಬುಡಕಟ್ಟುಗಳು ಇಸ್ಲಾಮ್ ಸ್ವೀಕರಿಸಿದವು. ಇಸ್ಲಾಮೀ ಸಾಮ್ರಾಜ್ಯ ವಿಸ್ತಾರವಾಗುತ್ತಿತ್ತು. ಈ ಮಧ್ಯೆ ಸಹಾಬಾಗಳೊಡನೆ ಅಬಿಸೀನಿಯಾದ ಬಗ್ಗೆ ಮಾತನಾಡುತ್ತಿದ್ದಾಗ ಯಾರೋ ಒಬ್ಬರು ಉಮ್ಮು ಹಬೀಬ(ರ)ರ ಬಗ್ಗೆ ಪ್ರವಾದಿ ರವರ ಗಮನ ಸೆಳೆದರು. ಅವರು ಅಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿರುವ ಬಗ್ಗೆ ವಿವರಿಸಿದರು. ಆಗ ಪ್ರವಾದಿ(ಸ) ರವರು ಉಮ್ಮು ಹಬೀಬ(ರ) ರಿಗೆ ಆಸರೆಯಾಗಲು ಅವರನ್ನು ವಿವಾಹವಾಗಲು ನಿರ್ಧರಿಸಿದರು. ಉಮ್ಮು ಹಬೀಬ(ರ) ಇಷ್ಟಪಟ್ಟರೆ ನಾನು ಅವರನ್ನು ವಿವಾಹವಾಗುತ್ತೇನೆ ಎಂಬ ಸಂದೇಶವನ್ನು ಅವರು ಅಬಿಸೀನಿಯಾದ ದೊರೆ ನಜ್ಜಾಶಿಗೆ ಕಳುಹಿಸಿದರು. ಉಮ್ಮು ಹಬೀಬ(ರ) ವಿವಾಹಕ್ಕೆ ಒಪ್ಪಿಕೊಂಡರು.
ಪ್ರವಾದಿ(ಸ) ರವರೊಂದಿಗೆ ವಿವಾಹ:
ಉಮ್ಮು ಹಬೀಬ(ರ) ಅಬೀಸೀನಿಯಾದಲ್ಲಿರುವಾಗಲೇ ಪ್ರವಾದಿ(ಸ) ರವರು ಅವರನ್ನು ವಿವಾಹವಾದರು. ಖಾಲಿದ್ ಬಿನ್ ಸಈದ್ ಬಿನ್ ಆಸ್ ವಿವಾಹ ನೆರವೇರಿಸಿಕೊಟ್ಟರು. ಮಹ್ರ್ ಆಗಿ ನಜ್ಜಾಶಿಯವರು 400 ದೀನಾರ್‌ಗಳನ್ನು ನೀಡಿದರು. ಮಾತ್ರವಲ್ಲದೆ ಅಬಿಸೀನಿಯಾದಲ್ಲಿರುವ ಎಲ್ಲಾ ಮುಸ್ಲಿಮರನ್ನು ಕರೆಸಿ ದೊಡ್ಡ ಔತಣವನ್ನು ಏರ್ಪಡಿಸಿದರು. ಪ್ರವಾದಿ(ಸ) ರೊಡನೆ ಉಮ್ಮು ಹಬೀಬ(ರ) ರವರ ವಿವಾಹ ಹಿ.ಶ. 7ರಲ್ಲಿ ಜರುಗಿತು. ಆಗ ಉಮ್ಮು ಹಬೀಬ(ರ) ರಿಗೆ 36 ವರ್ಷ ಪ್ರಾಯ. ನಂತರ ಉಮ್ಮು ಹಬೀಬ(ರ) ಮದೀನಕ್ಕೆ ಬಂದು ತನ್ನ ಮಗಳು ಹಬೀಬರೊಂದಿಗೆ ಪ್ರವಾದಿ(ಸ) ರವರ ಜೊತೆಗೆ ವಾಸಿಸಿದರು. ಅಬೂ ಸುಫ್ಯಾನ್ (ರ) ರಿಗೆ ಮಗಳು ಪ್ರವಾದಿ(ಸ) ರನ್ನು ವಿವಾಹವಾದ ಸುದ್ದಿ ತಿಳಿದು ಸಂತೋಷವಾಯಿತು. ಇದು ಅವರು ಇಸ್ಲಾಂ ಸ್ವೀಕರಿಸಲು ಒಂದು ಕಾರಣ ಕೂಡ ಆಯಿತು.
ಪ್ರವಾದಿ(ಸ) ರವರು ವಿವಾಹವಾಗಲು ಕಾರಣ:
ಪ್ರವಾದಿ(ಸ) ರವರು ತಮ್ಮ ಅನುಯಾಯಿಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದರು. ಅವರ ಸ್ಥಿತಿಗತಿಗಳನ್ನು ವಿಚಾರಿಸುತ್ತಿದ್ದರು. ಗಂಡಂದಿರು ಯುದ್ಧಗಳಲ್ಲಿ ಮಡಿದು ಒಂಟಿಯರಾಗಿ ಬಿಡುವ ವಿಧವೆಯರ ಬಗ್ಗೆ ಮತ್ತು ಅವರ ಅನಾಥ ಮಕ್ಕಳ ಬಗ್ಗೆ ಅವರು ವಿಶೇಷ ಮುತುವರ್ಜಿ ವಹಿಸುತ್ತಿದ್ದರು. ಇಂತಹವರಿಗೆ ಅವರು ಜೀವನದ ನೆಲೆಯನ್ನು ಮಾಡಿಕೊಡುತ್ತಿದ್ದರು. ಇಂತಹ ಕೆಲವು ಮಹಿಳೆಯರನ್ನು ಅವರೇ ಸ್ವತಃ ವಿವಾಹವಾಗುತ್ತಿದ್ದರು. ಉದಾಹರಣೆಗೆ, ಸೌದ(ರ), ಉಮ್ಮು ಹಬೀಬ(ರ) ದೂರದ ಅಬಿಸೀನಿಯಾದಲ್ಲಿ ತನ್ನ ಗಂಡ ಕ್ರೈಸ್ತನಾದ ಹೊರತಾಗಿಯೂ ಇಸ್ಲಾಮ್ ಧರ್ಮದಲ್ಲಿ ಅಚಲವಾಗಿ ನಿಂತರು. ಅದಕ್ಕಾಗಿ ಅನೇಕ ಕಷ್ಟ-ನಷ್ಟಗಳನ್ನು ಸಹಿಸಿದರು. ಇಂತಹ ಮಹಿಳೆಯರನ್ನು ಇಸ್ಲಾಂ ಮೂಲೆಗುಂಪಾಗಿಸುವುದಿಲ್ಲ ಎಂದು ಜಗತ್ತಿಗೆ ತೋರಿಸಿಕೊಡುವುದಕ್ಕಾಗಿ ಅವರು ಸ್ವತಃ ಆ ವಿಧವೆಯನ್ನು ವಿವಾಹವಾಗಲು ಮುಂದಾದರು. ಏಕೆಂದರೆ ಪ್ರವಾದಿ(ಸ) ರವರು ಎಲ್ಲಾ ವಿಷಯಗಳಲ್ಲಿಯೂ ಅವರ ಸಮುದಾಯಕ್ಕೆ ಮಾದರಿಯಾಗಿದ್ದರು.
ತಂದೆ ಮತ್ತು ಮಗಳ ಭೇಟಿ:
ಪ್ರವಾದಿ(ಸ) ರವರು ಮಕ್ಕಾ ನಿವಾಸಿಗಳೊಡನೆ ಮಾಡಿದ್ದ ಹುದೈಬಿಯಾ ಒಪ್ಪಂದದ ಪ್ರಕಾರ ಎರಡೂ ಕಡೆಯವರು ಒಬ್ಬರ ಮೇಲೆ ಇನ್ನೊಬ್ಬರು ದಾಳಿ ಮಾಡಬಾರದು. ದಾಳಿ ಮಾಡುವವರಿಗೆ ಸಹಾಯವೂ ಮಾಡಬಾರದು. ಆದರೆ ಮಕ್ಕಾ ನಿವಾಸಿಗಳೊಡನೆ ಮೈತ್ರಿ ಮಾಡಿಕೊಂಡಿದ್ದ ಬನೂ ಬಕರ್ ಗೋತ್ರದವರು ಮುಸ್ಲಿಮರೊಡನೆ ಮೈತ್ರಿ ಮಾಡಿಕೊಂಡಿದ್ದ ಖುಝಾಅ ಗೋತ್ರದ ವಿರುದ್ಧ ಯುದ್ಧ ಸಾರಿದರು. ಮಕ್ಕಾ ನಿವಾಸಿಗಳು ಕೂಡ ಇದಕ್ಕೆ ಗುಪ್ತವಾಗಿ ಸಹಾಯ ಮಾಡಿದ್ದರು. ವಿಷಯ ತಿಳಿದ ಪ್ರವಾದಿ(ಸ) ರವರು ಮಕ್ಕಾದ ಮೇಲೆ ದಂಡೆತ್ತಿ ಹೋಗಲು ನಿರ್ಧರಿಸಿದರು. ಈ ಸುದ್ದಿ ಮಕ್ಕಾದವರ ಕಿವಿಗೆ ಬಿದ್ದಾಗ ಅವರು ಅಬೂ ಸುಫ್ಯಾನರನ್ನು ರಾಯಭಾರಿಯಾಗಿ ಪ್ರವಾದಿ(ಸ) ರವರ ಬಳಿಗೆ ಕಳುಹಿಸಿದರು. ಅಬೂ ಸುಫ್ಯಾನ್(ರ) ಮದೀನಕ್ಕೆ ಬಂದಾಗ ಪ್ರವಾದಿ(ಸ) ರವರು ಅವರನ್ನು ಸ್ವೀಕರಿಸಲಿಲ್ಲ. ಆಗ ಅವರು ನೇರವಾಗಿ ಮಗಳು ಉಮ್ಮು ಹಬೀಬ(ರ) ರ ಮನೆಗೆ ಹೋದರು. ಅಲ್ಲಿ ಅವರು ಪ್ರವಾದಿ(ಸ) ರವರು ಕುಳಿತುಕೊಳ್ಳುತ್ತಿದ್ದ ಚಾಪೆಯ ಮೇಲೆ ಕುಳಿತುಕೊಳ್ಳಲು ಬಾಗಿದಾಗ, ಉಮ್ಮು ಹಬೀಬ ಆ ಚಾಪೆಯನ್ನು ತೆಗೆದು ಮಡಚಿಟ್ಟರು. ಅಬೂ ಸುಫ್ಯಾನ್ ಕೇಳಿದರು- ಮಗಳೇ! ನೀನೇಕೆ ಚಾಪೆಯನ್ನು ಮಡಚಿದೆ? ಅದು ನನಗೆ ಯೋಗ್ಯವಲ್ಲವೆಂದೋ ಅಥವಾ ನಾನು ಅದರಲ್ಲಿ ಕುಳಿತುಕೊಳ್ಳಲು ಯೋಗ್ಯನಲ್ಲವೆಂದೋ? ಉಮ್ಮು ಹಬೀಬ(ರ) ಉತ್ತರಿಸಿದರು- ಅದು ಅಲ್ಲಾಹನ ಸಂದೇಶವಾಹಕರು(ಸ) ಕುಳಿತುಕೊಳ್ಳುವ ಚಾಪೆ, ತಾವೊಬ್ಬ ಮುಶ್ರಿಕ್ ಆಗಿದ್ದು ಮಲಿನವಾಗಿದ್ದೀರಿ. ಅಲ್ಲಾಹನ ಸಂದೇಶವಾಹಕರ(ಸ) ಚಾಪೆಯಲ್ಲಿ ತಾವು ಕುಳಿತುಕೊಳ್ಳುವುದು ನನಗೆ ಇಷ್ಟವಿಲ್ಲ.
ತಂಗಿಯ ಮದುವೆ:
ಉಮ್ಮು ಹಬೀಬ(ರ) ರಿಗೆ ಪ್ರವಾದಿ(ಸ) ರವರಲ್ಲಿ ಅತೀವ ಪ್ರೀತಿಯಿತ್ತು. ಪ್ರವಾದಿ(ಸ) ರವರ ಪತ್ನಿಯಾದುದು ತನಗೆ ಅಲ್ಲಾಹು ಕರುಣಿಸಿದ ಅತಿದೊಡ್ಡ ಅನುಗ್ರಹವೆಂದು ಅವರು ಭಾವಿಸಿದ್ದರು. ಆದರೂ ಅವರಲ್ಲಿ ಯಾವುದೇ ಅಸೂಯೆಯಿರಲಿಲ್ಲ. ತನ್ನ ತಂಗಿ ಕೂಡ ತನ್ನಂತೆ ಪ್ರವಾದಿ(ಸ) ರವರ ಪತ್ನಿಯಾಗಬೇಕೆಂದು ಅವರು ಬಯಸಿದ್ದರು. ಒಮ್ಮೆ ಅವರು ಪ್ರವಾದಿ(ಸ) ರೊಡನೆ ಹೇಳಿದರು- ಓ ಅಲ್ಲಾಹನ ಸಂದೇಶವಾಹಕರೇ! ನನ್ನ ತಂಗಿ ಇದ್ದು ಬಿಂತ್ ಅಬೂ ಸುಫ್ಯಾನ್ ಳನ್ನು ತಾವು ವಿವಾಹವಾಗಬೇ ಕು. ಪ್ರವಾದಿ(ಸ) ರಿಗೆ ಆಶ್ಚರ್ಯವಾಯಿತು. ಏಕೆಂದರೆ ಯಾವುದೇ ಹೆಣ್ಣು ಇನ್ನೊಬ್ಬ ಹೆಣ್ಣು ತನ್ನ ಸವತಿಯಾಗಿ ಬರುವುದನ್ನು ಸಹಿಸುವುದಿಲ್ಲ. ಆದ್ದರಿಂದ ಅವರು ಕುತೂಹಲದಿಂದ ಕೇಳಿದರು- ನಿನಗೆ ಇದು ಇಷ್ಟವೇ? ಉಮ್ಮು ಹಬೀಬ(ರ) ಉತ್ತರಿಸಿದರು- ಹೌದು! ನನಗೆ ಸಿಕ್ಕಿದ ಈ ಸ್ಥಾನಮಾನ ನನ್ನ ತಂಗಿಗೂ ಸಿಗಬೇಕೆಂದು ನಾನು ಬಯಸುತ್ತೇನೆ. ಅವಳು ಒಳಿತಿನಲ್ಲಿ ನನ್ನೊಡನೆ ಭಾಗಿಯಾಗಬೇಕೆಂದು ನಾನು ಬಯಸುತ್ತೇನೆ. ಆದರೆ ಇಬ್ಬರು ಅಕ್ಕತಂಗಿಯರನ್ನು ಮದುವೆಯಾಗಬಾರದು ಎಂಬ ವಿಷಯ ಬಹುಶಃ ಅವರಿಗೆ ತಿಳಿದಿರಲಿಲ್ಲವೆಂದು ಕಾಣುತ್ತದೆ. ಆದ್ದರಿಂದ ಪ್ರವಾದಿ(ಸ) ಹೇಳಿದರು- ಇಲ್ಲ. ನಾನು ಆಕೆಯನ್ನು ವಿವಾಹವಾಗುವಂತಿಲ್ಲ. ಆಗ ಉಮ್ಮು ಹಬೀಬ(ರ) ಪ್ರಶ್ನಿಸಿದರು- ಹಾಗಾದರೆ ತಾವು ಅಬೂ ಸಲಮ(ರ) ರ ಮಗಳನ್ನು ವಿವಾಹವಾಗುತ್ತೀರಂತೆ? ಪ್ರವಾದಿ(ಸ) ರವರು ಪುನಃ ಆಶ್ಚರ್ಯದಿಂದ ಕೇಳಿದರು- ಉಮ್ಮು ಸಲಮ(ರ) ರವರ ಮಗಳನ್ನು? ಉಮ್ಮು ಹಬೀಬ ಹೌದೆಂದು ಉತ್ತರಿಸಿದಾಗ ಪ್ರವಾದಿ(ಸ) ರವರು ಹೇಳಿದರು- ಅವಳು ನನ್ನ ಸಾಕು ಮಗಳು (ನನ್ನ ಹೆಂಡತಿಯ ಮಗಳು) ಆಗಿರದಿದ್ದರೂ ಸಹ ನನಗೆ ಆಕೆ ವಿವಾಹಕ್ಕೆ ಧರ್ಮಸಮ್ಮತವಾಗುತ್ತಿರಲಿಲ್ಲ. ಏಕೆಂದರೆ ಅವಳು ಸ್ತನಪಾನ ಸಂಬಂಧದಲ್ಲಿ ನನ್ನ ಸಹೋದರನ ಮಗಳು. ಸುವೈಬ (ಅಬೂಲಹಬನ ದಾಸಿ) ನನಗೂ ಅಬೂ ಸಲಮರಿಗೂ ಹಾಲುಣಿಸಿದ್ದಾರೆ.
ಹದೀಸ್ ವರದಿ:
ಪ್ರವಾದಿ(ಸ) ರಿಂದ ಹದೀಸ್ ವರದಿ ಮಾಡುವುದರಲ್ಲಿ ಆಯಿಶ, ಉಮ್ಮು ಸಲಮ ಮತ್ತು ಮೈಮೂನ(ರ) ರ ನಂತರ ಉಮ್ಮು ಹಬೀಬ(ರ) ನಾಲ್ಕನೇ ಸ್ಥಾನವನ್ನು ಅಲಂಕರಿಸುತ್ತಾರೆ. ಉಮ್ಮು ಹಬೀಬ(ರ) ಪ್ರವಾದಿ(ಸ) ರಿಂದ 65 ಹದೀಸ್‌ಗಳನ್ನು ವರದಿ ಮಾಡಿದ್ದಾರೆ.
ಮರಣ:
ಹಿ.ಶ. 44 ರಲ್ಲಿ ತನ್ನ ಸಹೋದರ ಮುಆವಿಯ ಬಿನ್ ಅಬೂ ಸುಫ್ಯಾನ್(ಸ) ರವರ ಆಡಳಿತಕಾಲದಲ್ಲಿ ಉಮ್ಮು ಹಬೀಬ(ರ) ಮದೀನದಲ್ಲಿ ನಿಧನರಾದರು. ಅವರನ್ನು ಬಕೀಅ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.