ರಮದಾನ್
ಪರಮದಯಾಮಯನು ಕರುಣಾನಿಧಿಯು ಆದ ದೇವನಾಮದಿಂದ
ರಮದಾನಿನ ಶುಭಾಷಯಗಳು
ಬನ್ನಿ ರಮದಾನಿನ ಒಳಾರ್ಥವನ್ನು ತಿಳಿಯೋಣ.
ಆತ್ಮೀಯ ಸಹೋದರ ಸಹೋದರಿಯರೆ, ಪ್ರತಿವರುಷವೂ ರಮದಾನಿನ ಆಗಮನವಾಗುತ್ತದೆ. ಇದು ಸಂತಸ ಸಂಭ್ರಮವನ್ನು ಹೊತ್ತು ತರುತ್ತಿದ್ದು ಅದು ತಮ್ಮೆಲ್ಲರೊಂದಿಗೆ ಹಂಚಿಕೊಳ್ಳಲೆಂದೇ ಆಗಿದೆ. ಪ್ರಪಂಚದಾದ್ಯಂತ ಇರುವ ಮುಸ್ಲಿಂಮರು ಉಪವಾಸ ವ್ರತವನ್ನು ಆಚರಿಸುವುದರ ಮೂಲಕ ರಮದಾನ ತಿಂಗಳನ್ನು ಆರಂಭಿಸುತ್ತಾರೆ. ಸೂರ್ಯೋದಯದ ಮುಂಚಿನಿಂದ ಸೂರ್ಯಾಸ್ತದವರೆಗೆ ಎಲ್ಲಾ ತರಹದ ಆಹಾರ ಪಾನಿಯಗಳಿಂದ, ಸ್ತ್ರೀ ಸಂಭೋಗದಿಂದ ದೂರವಿರುತ್ತಾರೆ ಅದು ದೈಹಿಕ ಉಪವಾಸ ಮಾತ್ರವೆಂದು ಕರೆಸಿಕೊಂಡರೆ, ಮಾನಸಿಕವಾದ ಉಪವಾಸವು ಪರಸ್ಪರ ಬೈಯುವುದು, ದ್ವೇಷ, ಅಸೂಯೆ, ಸುಳ್ಳು ಹೇಳುವುದು, ಇತ್ಯಾದಿ ಎಲ್ಲ ತರಹದ ಪೈಶಾಚಿಕ ಮತ್ತು ಕೆಟ್ಟ ನಡುವಳಿಕೆಗಳಿಂದ ಹೊರತಾದ ಅಧ್ಯಾತ್ಮಿಕ ಭಾಗವಾಗಿದ್ದು, ದೈಹಿಕ ಮತ್ತು ಮಾನಸಿಕವಾದ ಎರಡೂ ನಡತೆಗಳಿಗೂ ಶುದ್ದತೆಯ ಮಹತ್ವವನ್ನು ಕೊಡಲಾದ, ಉಪವಾಸದ ಎರೆಡು ಭಾಗಗಳಾಗಿವೆ.
ಸಂದೇಶವಾಹಕ ಮುಹಮ್ಮದ್ ಸ. ಹೇಳಿದರು “ಯಾರು (ಉಪವಾಸದ ಸಂದರ್ಭದಲ್ಲಿ) ಕೆಟ್ಟ ಮಾತುಗಳಾಡುವುದರಿಂದ ಕೆಟ್ಟ ನಡತೆಯಿಂದ (ದುರ್ನಡೆತೆಯಿಂದ) ದೂರವಿರುವುದಿಲ್ಲವೂ ಅಂತಹವನ ಅನ್ನ ಪಾನಿಯ ತ್ಯಜಿಸುವುದನ್ನು ದೇವನು ಸ್ವೀಕರಿಸಲಾರ ಅಥವ ದೇವನಿಗೆ ಅವಶ್ಯಕತೆಯಿಲ್ಲ” (ಹದೀಸ ಗ್ರಂಥ)
ರಮದಾನಿನ ಮುಖ್ಯ ವಿಷೇಶತೆಯೇನು ?
ದೇವನು ಪವಿತ್ರ ಖುರ್‍ಆನಿನಲ್ಲಿ ಹೇಳುವನು,
“ವಿಶ್ವಾಸಿಗಳೇ ನೀವು ಧರ್ಮನಿಷ್ಟರಾಗಬೇಕೆಂದು, ನಿಮಗಿಂತ ಹಿಂದಿನವರಿಗೆ ಕಡ್ಡಾಯಗೊಳ್ಳಿಸಿದಂತೆ ನಿಮಗೂ ಉಪವಾಸಗಳನ್ನು ಕಡ್ಡಾಯಗೊಳ್ಳಿಸಲಾಗಿದೆ.”
“ರಮದಾನ್ ತಿಂಗಳಲ್ಲೇ ಖುರ್‍ಆನ್‍ನ್ನು ಇಳಿಸಿಕೊಡಲಾಯಿತು ಅದು ಮಾನವರಿಗೆಲ್ಲ ಮಾರ್ಗದರ್ಶಿಯಾಗಿದೆ (ಅದರಲ್ಲಿ) ಸನ್ಮಾರ್ಗದ ಸ್ಪಷ್ಟ ವಿವರಗಳಿಗೆ ಮತ್ತು ಅದು ಸತ್ಯ-ಮಿಥ್ಯಗಳ ಪ್ರತ್ಯೇಕಿಸುವ ಓರೆಗಲ್ಲಾಗಿದೆ. ನಿಮ್ಮಲ್ಲಿ ಈ ತಿಂಗಳನ್ನು ಕಂಡವನು ಉಪವಾಸ ಅಚರಿಸಬೇಕು. (ಈ ತಿಂಗಳಲ್ಲಿ) ರೋಗಿಯಗಿದ್ದವನು ಅಥವಾ ಪ್ರಯಾಣದಲ್ಲಿದ್ದವನು ಇತರ ದಿನಗಳಲ್ಲಿ ಎಣಿಕೆ ಪೂರ್ತಿಗೊಳಿಸಬೇಕು. ದೇವನು ನಿಮಾಗಾಗಿ (ಧರ್ಮವನ್ನು) ಸರಳಗೊಳಿಸಬಯಸುತ್ತಾನೆ. ಅವನು ನಿಮ್ಮನ್ನು ಇಕ್ಕಟ್ಟಿಗೆ ಗುರಿಪಡಿಸಬಯಸುವುದಿಲ್ಲ. ನೀವು (ಉಪವಾಸಗಳ) ಸಂಖ್ಯೆಯನ್ನು ಪೂರ್ತಿಗೊಳಿಸಿ, ದೇವನು ನಿಮಗೆ ಒದಗಿಸಿದ ಮಾರ್ಗದರ್ಶನಕ್ಕಾಗಿ ಅವನ ಮಹಿಮೆಯನ್ನು ಕೊಂಡಾಡಬೇಕು ಮತ್ತು ನೀವು ಅವನಿಗೆ ಕೃತಜ್ಞತೆ ಸಲ್ಲಿಸಬೇಕೆಂದು” (ಇದನ್ನು ವಿಧಿಸಲಾಗಿದೆ) ಖುರ್‍ಆನ್ 2:183 ಮತ್ತು 185.
ಪವಿತ್ರ ಖುರ್‍ಆನ್‍ನ ಸೂಕ್ತಿಗಳು ಹೇಳುವ ಪ್ರಕಾರ ಪವಿತ್ರ ಖುರ್‍ಆನ್ ರಮದ್ಸಾನ ತಿಂಗಳಲ್ಲಿ ಅವತೀರ್ಣಗೊಂಡಿದೆ. ಸಂಪೂರ್ಣ ತಿಂಗಳು ಉಪವಾಸವನ್ನು ಆಚರಿಸುವುದರ ಮೂಲಕ ನಾವು ದೇವನಿಗೆ ಕೃತಜ್ಞತೆ ತೋರುತ್ತೇವೆ. ಈದ್-ಉಲ್-ಫಿತ್ರ್ ಹಬ್ಬವನ್ನು ಆಚರಿಸುವುದರ ಮೂಲಕ ಉಪವಾಸಗಳನ್ನು ಕೊನೆಗೊಳಿಸುತ್ತೇವೆ. ರಮದಾನಿನಂತಹ ಮಾಸವನ್ನು ದಯಪಾಲಿಸಿ ಸುವರ್ಣ ಅವಕಾಶ ಅನುಭವವನ್ನು ನೀಡಿದ ಕರುಣಾತೀತನಾದ ದೇವನಿಗೆ ನಮನಗಳು. ಆ ದಿನದ ನಡೆಯು ಸಾಮಾಜಿಕವಾಗಿ ಹಬ್ಬವನ್ನು ಆಚರಿಸುವುದರ ಮೂಲಕ, ಹಬ್ಬದಡಿಗೆಯನ್ನು ತಯಾರಿಸಿ ಊಟ ಮಾಡುವುದು, ಪರಸ್ಪರ ಶುಭಕೋರುವುದು ಜೊತೆ ಜೊತೆಯಾಗಿ ಕಂಡುಬರುತ್ತದೆ. ಈ ಹಬ್ಬದ ದಿನ ಆರಂಭವಾಗುವ ಮುನ್ನ ಪ್ರತಿಯೊಬ್ಬರು ತಮ್ಮ ಜಕಾತ್ ಹಣವನ್ನು ಬಡವರಿಗೆ ಹಣದ ಅಥವಾ ಧಾನ್ಯದ ರೂಪದಲ್ಲಿ ದಾನ ನೀಡುತ್ತಾರೆ. ತಮ್ಮ ಸುತ್ತ ಮುತ್ತಲಿರುವ ಬಡವರಿಗೆ ಹುಡುಕಿ ಕೈಲಾದಷ್ಟು ದಾನ ಮಾಡಬೇಕಾಗಿದ್ದು ಈ ಶುಭ ಸಂದರ್ಭದಲ್ಲಿ ಅವರನ್ನು ಪ್ರಸನ್ನರಾಗಿಸುವುದಾಗಿದೆ
ಖುರ್‍ಆನಿನ ವಿಶೇಷತೆಯೇನು?
ಖುರ್‍ಆನ್ ಒಂದು ದಿವ್ಯ ಗ್ರಂಥವಾಗಿದ್ದು ಎಲ್ಲಾ ಮುಸ್ಲೀಮರು ಓದುತ್ತಾರೆ. ಈ ಗ್ರಂಥದ ಮೂಲಕ ಜೀವನದಲ್ಲಿ ಹೇಗೆ ಬದುಕುವುದೆಂದು ತಿಳಿಯುವುದಕ್ಕಾಗಿ ಇದುವೆ ದೇವನಿಂದ ಬಂದಿರುವ ಅಂತಿಮ ಗ್ರಂಥ. ದೇವನಿಂದ ಅವತೀರ್ಣವಾಗಿರುವ ಗ್ರಂಥಗಳ ಸಾಲಿನಲ್ಲಿ ಇದುವೆ ಅಂತಿಮ ಗ್ರಂಥ. ಇದರಲ್ಲಿ ದೇವನಿಂದ ಬಂದಿರುವ ನುಡಿಗಳಿವೆ. ಅದು ಎಂದೂ ಬದಲಾಗುವುದಿಲ್ಲ, ಬದಲಾಯಿಸಲು ಸಾಧ್ಯವಿಲ್ಲ. ಇದು ಜಿಬ್ರಾಯಿಲ್ ಎಂಬ ದೇವದೂತರ ಮೂಲಕವಾಗಿ 1435 ವರ್ಷಗಳ ಹಿಂದೆ ಮುಹಮ್ಮದ್ ಸ ರವರ ಮೇಲೆ ಅವತೀರ್ಣಗೊಂಡಿದೆ. ಒಳಿತು ಕೆಡುಕುಗಳ ವ್ಯತ್ಯಾಸವನ್ನು ಪ್ರತ್ಯೇಕವಾಗಿ ಅರ್ಥಮಾಡಿಕೊಳ್ಳಲು ಅಂತಿಮ ದಿನ ತೀರ್ಪಿಗೆ ಸಹಾಯವಾಗಲೆಂದಾಗಿದೆ. ಈ ಖುರ್‍ಆನ್‍ನ ಮೂಲಕವೇ ನಮ್ಮೆಲ್ಲರ ತೀರ್ಪೂ ಸಹ ಆಗಲಿದೆ.
ಪವಿತ್ರ ಖುರ್‍ಆನ್ ಕೇವಲ ಮುಸ್ಲೀಮರಿಗೆ ?
ಖಂಡಿತ ಇಲ್ಲ … ಇದು ಮುಸ್ಲಿಮರಲ್ಲಿ ಹಾಗೂ ಮುಸ್ಲಿಮೇತರರಲ್ಲಿ ಇರುವ ಒಂದು ಅಪಾರ್ಥವಾಗಿದೆ ದೇವನೊಬ್ಬನೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು ಅವನು ನಮ್ಮೆಲ್ಲರನ್ನು ಒಂದು ಹೆಣ್ಣು ಮತ್ತು ಒಂದೇ ಗಂಡಿನಿಂದ ಸೃಷ್ಠಿಸಿದ್ದಾನೆ. ದೇವನು ಪ್ರತಿಯೊಂದು ಕಾಲದಲ್ಲಿ ಪ್ರತಿಯೊಂದು ಜನಾಂಗಕ್ಕೆ ತನ್ನ ಸಂದೇಶವನ್ನು ತಿಳಿಸಲು ಸಂದೇಶವಾಹಕರನ್ನು ಕಳುಹಿಸಿದನು. ಅವರೆಲ್ಲರು ಒಂದೇ ಸಂದೇಶವನ್ನು ಸಾರಿದರು ಆ ಸಂದೇಶ,
“ಓ ಜನರೆ ನೀವು ನಿಮ್ಮ ಸೃಷ್ಠಿಕರ್ತನಿಗೆ ವಿಧೇಯರಾಗಿ ನಡೆಯಿರಿ. ಅವನಿಗೆ ವಿಧೇಯರಾಗಿ ನಡೆದರೆ ನಿಮಗೆ ಸ್ವರ್ಗ ಸುಖ ದೊರೆಯಲಿದೆ. ನೀವು ವಿರುದ್ಧವಾಗಿ ನಡೆದರೆ ನಿಮಗೆ ನರಕ ದೊರೆಯಲಿದೆ”
ಅರಬಿ ಭಾಷೆಯಲ್ಲಿ ಇಸ್ಲಾಂ ಎಂದರೆ ಶರಣಗತಿ ಎಂಬುದಾಗಿದೆ. ಸೃಷ್ಠಿಕರ್ತನಿಗೆ ವಿಧೇಯನಾಗಿ ಶರಣಾಗುವವನಿಗೆ `ಮುಸ್ಲಿಂ’ ಎಂದು ಕರೆಯುತ್ತಾರೆ. ಸಂದೇಶವಾಹಕರ ಸಾಲಿನಲ್ಲಿಯೇ ಅಂತಿಮ ಸಂದೇಶವಾಹಕ ಮುಹಮ್ಮದ್ ಸ. ರವರೂ ಸಹ ಇದೇ ಸಂದೇಶವನ್ನು ಬೋಧಿಸಿದರು. (ಅದು ಸೃಷ್ಠಿಕರ್ತನಿಗೆ ವಿಧೇಯರಾಗಿರಿ ಎಂಬುದಾಗಿದೆ) ಪವಿತ್ರ ಖುರ್‍ಆನ್ ಅವರ ಮೇಲೆ ಅವತೀರ್ಣವಾದ ಭಾಗಗಳ ಸಂಗ್ರಹವೇ ಆಗಿದೆ. ಇದು ಕೇವಲ ಒಂದೇ ಜನಾಂಗಕ್ಕೆ ಸೀಮಿತವೆಂಬುದು ಹೇಗೆ ಸಾಧ್ಯ? ಮೇಲಿನ ವಚನದಲ್ಲಿ ಓ ಜನರೇ ಎಂದು ಉಲ್ಲೇಖಿಸಿರುವುದು ಎಲ್ಲರಿಗಾಗಿ ಎಂಬುದಕ್ಕೆ ಸಾಕ್ಷಿ ಆಗಿದೆ.
ಖುರ್‍ಆನ್‍ನ ಸಂದೇಶವೇನು?
ಪವಿತ್ರ ಖುರ್‍ಆನ್ ಕೆಲವು ನಂಬಿಕೆಯ ವಿಷಯಗಳ ಕುರಿತು ಮಾರ್ಗದರ್ಶನ ಮಾಡುತ್ತದೆ. ಅದು ಎಲ್ಲ ಕಾಲದಲ್ಲಿಯೂ ಬೇರೆ ಬೇರೆ ಭಾಗಗಳಲ್ಲಿ ದೇವನು ತನ್ನ ದೇವ ದೂತರ ಮೂಲಕ ಆಯಾ ದೇಶದ ಜನರಿಗಾಗಿ ಅವತೀರ್ಣಗೊಳಿಸಿ ಬೋಧನೆ ಮಾಡಿದ ಅಂಶಗಳಾಗಿವೆ. ಆ ಅಂಶಗಳು
1)ಒಂದೇ ಕುಲ : ಪ್ರಪಂಚದಲ್ಲಿರುವ ಎಲ್ಲಾ ಮಾನವಕುಲದ ಜನಾಂಗವು ಒಂದೇ ಗಂಡು ಹೆಣ್ಣಿನಿಂದ ಹುಟ್ಟಿ ಪ್ರಪಂಚದಾದ್ಯಂತ ವ್ಯಾಪಿಸಿದ್ದಾರೆ. ನಾವು ಎಲ್ಲೇ ಇದ್ದರೂ, ಯಾವುದೇ ಭಾಷೆ ಮಾತಾನಾಡಿದರು, ನಾವೆಲ್ಲಾರು ಒಂದೇ ಕುಟುಂಬದ ಅಂಗಗಳಾಗಿದ್ದೇವೆ.
“ಮಾನವರೇ, ನಿಮ್ಮನ್ನು ಒಂದೇ ಜೀವದಿಂದ ಸೃಷ್ಠಿಸಿದ ನಿಮ್ಮ ಒಡೆಯನಿಗೆ ನಿಷ್ಠರಾಗಿರಿ. ಅವನು ಅದೇ ಜೀವದಿಂದ ಅದರ ಜೊತೆಯನ್ನು ಸೃಷ್ಠಿಸಿದನು ಮತ್ತು ಅವರಿಬ್ಬರ ಮೂಲಕ ಅನೇಕಾರು ಪುರುಷರನ್ನು ಸ್ತ್ರೀಯರನ್ನು (ಲೋಕದಲ್ಲಿ) ಹಬ್ಬಿಸಿದನು.” 4:1.ಪವಿತ್ರ ಖುರ್‍ಆನ್(ಅಲ್ಲಾಹನೆಂದರೆ ಆರಾಧನೆಗೆ ಅರ್ಹನಿರುವವನೊಬ್ಬನೇ ದೇವರು.)
2)ಒಬ್ಬನೇ ದೇವನು : ಸರ್ವ ಮಾನವ ಕುಲವನ್ನು, ಪ್ರಪಂಚವನ್ನು, ಪ್ರಪಂಚದ ಸಕಲ ಸೃಷ್ಟಿಗಳನ್ನು ಸೃಷ್ಟಿಸಿ ಪರಿಪಾಲನೆ ಮಾಡುತ್ತಿರುವ ದೇವನು ಒಬ್ಬನೇ. ಅವನು ಮಾತ್ರವೇ ಆರಾಧನೆಗೆ ಅರ್ಹನಾಗಿರುವನು
“ಹೇಳಿರಿ ದೇವನು ಏಕ ಮಾತ್ರನು. ಅವನು ನಿರಪೇಕ್ಷನು. ಅವನಿಗೆ ಯಾರೂ ಜನಿಸಿಲ್ಲ. ಅವನು ಯಾರಿಗೂ ಜನಿಸಿದವನಲ್ಲ ಮತ್ತು ಅವನಿಗೆ ಸಾರಿಸಾಟಿ ಯಾರೂ ಇಲ್ಲ.” (ಪವಿತ್ರ ಖುರ್‍ಆನ್112:1-4).
ಆ ಏಕೈಕನಾದ ಸೃಷ್ಠಿಕರ್ತನನ್ನು ಬಿಟ್ಟು ಇನ್ನುಳಿದೆಲ್ಲವೂ ಆತನ ಸೃಷ್ಠಿಗಳಾಗಿವೆ ಅವನ ಬದಲಾಗಿ ಸೃಷ್ಠಿಗಳನ್ನು ಆರಾಧನೆ ಮಾಡುವುದು ಮತ್ತು ನಿರ್ಜೀವ ವಸ್ತುಗಳ ಆಕೃತಿಗಳನ್ನು ತೋರಿಸಿ ದೇವರೆನ್ನುವುದು, ಅತ್ಯಂತ ಘೋರ ಪಾಪ ಮತ್ತು ಮೋಸವಾಗಿದೆ. ಈ ಕೆಲಸವು ಪರಿಶುದ್ದನಾದ ಆದೇವನನ್ನು ಅವಹೇಳನ ಮಾಡಿದಂತಾಗಿದೆ ಹಾಗೂ ಅದು ಮಾನವ ಜನಾಂಗವನ್ನು ಗುಂಪುಗುಂಪುಗಳಾಗಿ ವಿಂಗಡಿಸುವುದೆ ಆಗಿದೆ ಹಾಗಾಗಿ ಈ ಮಹಾಪಾಪವನ್ನು ದೇವನು ಎಂದಿಗೂ ಮನ್ನಿಸುವುದಿಲ್ಲ.
ಮನಷ್ಯನು ಪಾಪವೆಸಗಬಾರದೆಂದರೆ ಆತನು ದೇವನ ಬಗ್ಗೆ ಧøಡ ನಂಬಿಕೆ ಹಾಗೂ ಭಯಭಕ್ತಿ ಉಳ್ಳವನಾಗಿರಬೇಕು ಅವನು ನನ್ನ ಪಾಪಗಳನ್ನು ಬಲ್ಲವನಾಗಿರುವನು ಅದು ಅಂತಿಮ ದಿನದಂದು ಬಹಿರಂಗವಾಗಲಿದೆ ಎಂಬುವುದನ್ನು ಅರಿಯಬೇಕು ನಿರ್ಜೀವ ಮತ್ತು ಜಡ ವಸ್ತುಗಳನ್ನು ತೋರಿಸಿ ಅದೇ ದೇವರು ಎಂದು ಭೋಧಿಸುವುದರಿಂದ ಮನುಷ್ಯನಿಗೆ ನಿಜವಾದ ದೇವನ ಮೇಲಿರುವ ಭಯ ಇಂದು ಕಾಣೆಯಾಗಿದೆ ಈ ನಿಜವಾದ ದೇವ ಭಯವಿಲ್ಲವಾದುದರಿಂದ ಮನುಷ್ಯನು ಯಾವುದೇ ರೀತಿಯ ಪಾಪವನ್ನು ಮಾಡಲು ತಯಾರಾಗುತ್ತಾನೆ ಹಿಂಜರಿಯುವುದಿಲ್ಲ, ಇದೇ ಭೂಮಿಯ ಮೇಲೆ ಪಾಪಗಳು ಮತ್ತು ಕೇಡುಗಳು ಹೆಚ್ಚಾಗಲು ಮುಖ್ಯ ಕಾರಣವಾಗಿವೆ, ಈ ಪಾಪದಿಂದ ಮನುಷ್ಯನು ಹಿಂದಿರುಗಿದರೆ ದೇವನ ಹೆಸರಿನಲ್ಲಿರುವ ಭೇಧ ಭಾವಗಳನ್ನು ಕಲ್ಪಿಸುವುದು ಭೋದಿಸುತ್ತಿರುವುದು ಹಾಗೂ ದೇವನ ಹೆಸರಿನಲ್ಲಿ ಮನಷ್ಯನ ಸಂಪತ್ತು ಕೊಳ್ಳೆಹೊಡೆಯಾಲಾಗುತ್ತಿರುವ ಕಾರ್ಯಗಳು ನಿಲ್ಲುತ್ತವೆ. ಆಗ ಪ್ರಪಂಚದಲ್ಲಿ ಸಹೋದರತೆ ಮತ್ತು ಮಾನವ ಸಮಾನತೆ ಮತ್ತು ಶಾಂತಿ ಹಿಂದಿರುಗಲು ಸಾಧ್ಯ ಆಗಿದೆ.
3)ಕರ್ಮ ಫಲ ಮತ್ತು ಪರಲೋಕ ಜೀವನ: ಈ ಲೋಕ ಒಂದು ದಿನ ಸಂಪೂರ್ಣವಾಗಿ ಸರ್ವನಾಶವಾಗಲಿದೆ ದೇವನು ಎಲ್ಲಾ ಮಾನುಷ್ಯರನ್ನು ಅವರವರು ಮಾಡಿರುವ ಒಳಿತು ಕೆಡುಕುಗಳ ಪ್ರತಿಫಲವನ್ನು ನೀಡಲು ಮತ್ತೆ ಪುನರ್ಜನ್ಮವನ್ನು ನೀಡಿ ಎಬ್ಬಿಸುವನು ಈಲೋಕದಲ್ಲಿ ದೇವನ ಆಜ್ಞೆಗಳ ಪ್ರಕಾರ ಬದುಕಿದವರಿಗೆ ಸ್ವರ್ಗವು ಅಕ್ರಮವೆಸಗಿದ ದುಷ್ಟರಿಗೆ ನರಕದ ತೀರ್ಪು ನೀಡಲಿದ್ದಾನೆ
“ಪ್ರತಿಯೊಂದು ಜೀವವೂ ಮರಣವನ್ನು ಸವಿಯಲೇಬೆಕು, ಪುನರುತ್ಥಾನ ದಿನ ನಿಮಗೆ ನಿಮ್ಮ (ಕರ್ಮಗಳ) ಪೂರ್ಣ ಪ್ರತಿಫಲವು ಸಿಗಲಿದೆ (ಅಂದು ನರಕದಿಂದ ರಕ್ಷಿತನಾದವನು ಮತ್ತು ಸ್ವರ್ಗವನ್ನು ಪ್ರವೇಶಿಸಿದವನು ವಿಜಯಿಯಾದನು, ಇಹ ಲೋಕದ ಜೀವನ ಒಂದು ಮೋಸದ ವ್ಯವಹಾರವೆ ಹೋರತು ಬೆರೆನೂ ಅಲ್ಲ” (ಖುರ್‍ಆನ್.3:185)
ಈ ಮೇಲಿರುವ ಮುಖ್ಯವಾದ ಬೋಧನೆಗಳನ್ನು ಬಿಟ್ಟು ಖುರ್‍ಆನ್ ಹೇಳುವುದು ಮನುಷ್ಯನು ತನ್ನ ಜೀವನದಲ್ಲಿ ಎದುರಿಸಿದ ಸಮಸ್ಯಗಳಿಗೂ ಸಹ ಸೃಷ್ಠಿಕರ್ತನು ಕೊಡುವ ಖಚಿತ ಪರಿಹಾರಗಳನ್ನು ಖುರ್‍ಆನ್ ಹೇಳುತ್ತದೆ. ಕುಟುಂಬ ,ಮದುವೆ ,ದಾಂಪತ್ಯ ಸಮಸ್ಯಗಳು ಸಂತಾನವನ್ನು ಬೆಳೆಸುವುದು ,ಶುಚಿತ್ವ ,ಆರೋಗ್ಯ ,ಸಂಪತ್ತು ಹಂಚಿಕೆ ,ಅಪರಾಧ, ಒಪ್ಪಂದಗಳು, ವ್ಯಾಪಾರ ,ಅರ್ಥಶಾಸ್ತ್ರ ರಾಜಕೀಯ ,ನ್ಯಾಯ-ನೀತಿ ನಿಯಮಗಳು ಇವುಗಳಲ್ಲಿ ಆದ ಅಪರಾಧಗಳು, ಹೀಗೆ ಒಬ್ಬ ಮನುಷ್ಯನ ವೈಯಕ್ತಿಕ ಹಾಗೂ ಸಮೂಹದ ಸಾಮಾಜಿಕ ಬದುಕಿನ ಹಾಗೂ ಇತರ ವಿಭಾಗಗಳಿಗೆ ಸಂಭಂದಿಸಿದ ಎಲ್ಲಾ ವಿಭಾಗಗಳ ಕುರಿತು ಅತ್ಯತ್ತಮ ಪರಿಹಾರ ಹಾಗೂ ಮಾರ್ಗದರ್ಶನವನ್ನು ಪವಿತ್ರ ಖುರ್‍ಆನ್ ಮಾಹಿತಿ ನೀಡುತ್ತಿದೆ. ಹಾಗೂ ತೀರ್ಪನ್ನು ನೀಡುತ್ತಿದ್ದ ಅದನ್ನು ಒಪ್ಪಿ ಆ ದಾರಿಯಾಲ್ಲಿ ಬದುಕನ್ನು ಸಾಗಿಸುವವರಿಗೆ ಇಹಲೋಕದಲ್ಲಿ ಶಾಂತಿ ಸಿಗುತ್ತದೆ. ಹಾಗೂ ಪರಲೋಕದಲ್ಲಿ ಸ್ವರ್ಗ ಸುಖ ಸಿಗಲಿದೆ, ಯಾರು ಇದನ್ನು ಧಿಕ್ಕರಿಸುವವರೊ ಅವರಿಗೆ ಇಹಲೋಕದಲ್ಲಿ ಅಶಾಂತಿಯೂ ಮತ್ತು ಪರಲೋಕದಲ್ಲಿ ನರಕ ಕಾದಿದೆ.
ಪ್ರವಾದಿತ್ವ : ಈ ಮೇಲಿನ ಸಂದೇಶವನ್ನು ತಲುಪಿಸಲು ದೇವನು ಮನುಷ್ಯರಲ್ಲಿಯೇ ಉತ್ತಮ ಪುರುಷರನ್ನು ಆಯ್ಕೆಮಾಡಿ ಸಂದೇಶವನ್ನು ನೀಡುತ್ತಾನೆ, ಅವರೆಲ್ಲರೂ ದೇವನು ನೀಡಿದ ಆಜ್ಞೆಗಳ ಪ್ರಕಾರ ನಡೆದು ತೋರಿಸುವುದಲ್ಲದೆ ಅದನ್ನು ಜನರಿಗೆ ಬೋಧಿಸುತ್ತಾರೆ, ಸಂದೇಶವಾಹಕರಲ್ಲೆ ಕೊನೆಯ ಸಂದೇಶವಾಹಕರ ಮುಹಮ್ಮದ್ {ಸ} ಅಂತಿಮ ಸಂದೇಶವಾಹಕರಾಗಿದ್ದಾರೆ ಇವರ ಮುಂಚಿತವಾಗಿ ಬಂದ ಸಂದೇಶವಾಹಕರು ನಿಶ್ಚಿತ ಜನಾಂಗಕ್ಕೆ ಬಂದ್ದಿದರು ಆದರೆ ಸಂದೇಶವಾಹಕ ಮುಹಮ್ಮದ್ {ಸ} ರವರು ಇಡೀ ಮಾನವ ಕುಲಕ್ಕಾಗಿ ಬಂದಿದ್ದಾರೆ. ನಾವು ಈ ಎಲ್ಲಾ ಸಂದೇಶವಾಹಕರ ಮೇಲೆ ನಂಬಿಕೆ ಇಟ್ಟು ಇವರ ಮಧ್ಯದಲ್ಲಿ ಭೇದ ಭಾವ ಮಾಡಬಾರದೆಂಬುದು ಖುರ್‍ಆನಿನ ಪ್ರತ್ಯೇಕ ಬೋಧನೆ ಆಗಿದೆ ಪವಿತ್ರ ಖುರ್‍ಆನಿನಲ್ಲಿ ಕೇವಲ ದೇವನ ಬಗ್ಗೆ ಆಷ್ಟೆ ಅಲ್ಲದೆ ಧಾರ್ಮಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಒಬ್ಬನು ಹೇಗೆ ಬದುಕಬೇಕೆಂಬುವುದನ್ನು ಸಹ ತಿಳಿಸಿಕೊಡುತ್ತಿದೆ ಪವಿತ್ರ ಖುರ್‍ಆನಿನ ಸಂದೇಶವು ಶಾಶ್ವತವಾಗಿ ಪ್ರಪಂಚದಾದ್ಯಂತ ಸರ್ವ ವ್ಯಾಪಿಯಾಗಿದೆ ಪ್ರತ್ಯಕ ಜಾತಿ ಜನಾಂಗ, ಧರ್ಮ, ವರ್ಣ ಮತ್ತು ರಾಷ್ಟ್ರ ಎಂಬುವುದುನ್ನು ಇದು ವಿಭಾಗಿಸುವುದಿಲ್ಲ.
ಇದು ಮಾನವನಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಮಾರ್ಗದರ್ಶಿಸುತ್ತದೆ. ಉದಾ: ಆರ್ಥಿಕ ವೈವಾಹಿಕ, ವಿಚ್ಚೇದನ, ವೈಯಕ್ತಿಕ ವಿಚಾರಗಳು, ಪರಂಪರೆ, ಮಾತಾ ಪಿತರ ಹಕ್ಕು ಬಾಧ್ಯತೆಗಳು ಹಾಗು ಇತರೆ ವಿಷಯಗಳ ಕುರಿತು ತಿಳಿಸುತ್ತದೆ. ಓರ್ವನನ್ನು ಕಡೆಗಣಿಸುವುದು ಖಂಡಿಸುವುದು ತೊಂದರೆ ಕೊಡುವುದು, ದ್ವೇಶಿಸುವುದನ್ನು ಮಾಡಬಾರದೆಂದು ಉಪದೇಶಿಸುತ್ತದೆ. ದೇವನು ಮನುಷ್ಯನಂತಲ್ಲ ಮನುಷ್ಯನು ದೇವನಂತಿಲ್ಲ. ದೇವನಿದ್ದಾನೆ ಎಂಬುದಕ್ಕೆ ಈ ಪ್ರಪಂಚದಲ್ಲಿರುವ ವಸ್ತುಗಳೇ ಸಾಕ್ಷಿ ಹಾಗೂ ನಿದರ್ಶನಗಳಾಗಿವೆ. ಅವೆಲ್ಲವೂ ತಮ್ಮದೇ ಆದ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಖುರಆನ್ ತಿಳಿಸುತ್ತದೆ.
ಅತ್ಮೀಯ ಸಹೋದರ ಸಹೋದರಿಯರೆ, ಖುರ್‍ಆನ್ ಇಡೀ ಮಾನವ ಕುಲಕ್ಕಾಗಿ ದೇವನಿಂದ ಅವತೀರ್ಣವಾದ ಅಂತಿಮ ವಾಣಿಯಾಗಿದೆ ಇದನ್ನು ರಮದಾನ್ ತಿಂಗಳಲ್ಲಿ ಮುಸ್ಲಿಂಮರು ಹೆಚ್ಚಾಗಿ ಪಠಿಸುತ್ತಾರೆ ನಾವು ಯಾವುದೇ ಧರ್ಮದಲ್ಲಿದ್ದರು ನಮಗೆ ಜೀವನಾವಶ್ಯಕವನ್ನು ಎಲ್ಲರಿಗೂ ಸಮಾನವಾಗಿ ಆ ದೇವನು ನೀಡಿದ್ದಾನೆ. ದೇವನು ಕೊಟ್ಟಿರುವ ಸೌಕರ್ಯಗಳು ದೇಹದ ಹೊರಗೆ ಹಾಗೂ ಒಳಗೆ ಇರುವ ಅಸಂಖ್ಯಾತ ಸುಖ ಸೌಕರ್ಯಗಳನ್ನು ನಾವು ಅನುಭವಿಸುತ್ತಿದ್ದೇವೆ. ಏನು ನಾವು ಅವನಿಗೆ ಕೃತಜ್ಞತೆ ತೋರಬಾರದೆ? ಹೌದು.. ಪವಿತ್ರ ಖುರ್‍ಆನ್ ನಮ್ಮೆಲ್ಲರಿಗೂ ದೇವನಿಗೆ ವಿಧೇಯರಾಗಿ ಹಾಗೂ ಇಹ ಮತ್ತು ಪರಲೋಕದಲ್ಲಿ ಪ್ರಗತಿಯನ್ನು ಪಡೆಯಿರಿ ಎಂದು ತಿಳಿಸುತ್ತದೆ. ಈ ರಮದ್ಸಾನ ತಿಂಗಳಿನಲ್ಲಿ ಅವನು ಅನುಗ್ರಹಿಸಿದ ಅನುಗ್ರಹಗಳನ್ನು ಬಳಸಿ ದೇವನನ್ನು ವಿಧೇಯರಾಗಲು ನಮ್ಮನ್ನು ನಾವು ಅಣಿಗೊಳಿಸಬೇಕಾಗಿದೆ.