ಇಸ್ಲಾಮಿಕ್ ದೌತ್ಯ ಪೂರ್ಣಗೊಂಡು ಭೂಮಿಯಲ್ಲಿ ಇಸ್ಲಾಮ್ ಸ್ಥಾನವನ್ನು ಖಚಿತಪಡಿಸುವುದರೊಂ ದಿಗೆ ಪ್ರವಾದಿ(ಸ) ರವರು ತಮ್ಮ ಇಹಲೋಕ ಜೀವನಕ್ಕೆ ವಿದಾಯ ಕೋರಿದರು. ಅವರ ಮಾತು ಮತ್ತು ಕೃತಿಗಳಲ್ಲಿ ಅದರ ಲಕ್ಷಣಗಳು ಪ್ರಕಟವಾಯಿತು.
ಹಿಜ್ರ 10ನೇ ವರ್ಷ ರಮದಾನ್ ತಿಂಗಳಲ್ಲಿ ಅವರು ಮಸೀದಿಯಲ್ಲಿ 20 ದಿನ ಇಅ್ ತಿಕಾಪ಼್ ಕುಳಿತರು. ಅವರು ಹತ್ತು ದಿನಗಳಲ್ಲದೆ ಹೆಚ್ಚು ಕೂರುತ್ತಿರಲಿಲ್ಲ. ಈ ವರ್ಷ ಜಿಬ್ರಿಯೀಲರು(ಅ) ಪ್ರತ್ಯಕ್ಷರಾಗಿ ಎರಡು ಬಾರಿ ಕುರ್‌ಆನ್ ಕಂಠಪಾಠ ನೋಡಿದ್ದರು. ವಿದಾಯದ ಹಜ್ಜ್ ನಲ್ಲಿ ಅವರು ಹೇಳಿದರು: “ಮುಂದಿನ ವರ್ಷ ನಾನು ನಿಮ್ಮನ್ನು ಈ ಜಾಗದಲ್ಲಿ ಭೇಟಿಯಾಗುವೆನೋ ಎಂದು ತಿಳಿಯದು.” ಜಮ್ರತುಲ್ ಅಖಬದ ಸಮೀಪ ಅವರು ಕೂಗಿ ಹೇಳಿದರು: “ನೀವು ನಿಮ್ಮ ಹಜ್ಜ್ ಕರ್ಮವನ್ನು ನನ್ನಿಂದ ಕಲಿಯಿರಿ. ಪ್ರಾಯಶಃ ಈ ವರ್ಷದ ನಂತರ ನಾನು ಹಜ್ಜ್ ನಿರ್ವಹಿಸದೆಯೂ ಇರಬಹುದು.” ಅದೇ ವರ್ಷ ತಶ್ರೀಖ್ ನ ದಿನಗಳಲ್ಲಿ ಒಂದಾದ ದುಲ್ ಹಿಜ್ಜ 12ರಂದು ಅವರ ನಿಧನದ ಸುದ್ದಿಯನ್ನು ತಿಳಿಸುವ ಅನ್ನಸ್ರ್ ಅಧ್ಯಾಯ ಅವತೀರ್ಣವಾಯಿತು.
ಹಿಜ್ರ 11ರ ಸಫರ್ ತಿಂಗಳ ಆರಂಭದಲ್ಲಿ ಅವರು ಉಹುದ್‌ಗೆ ಹೋಗಿ ಅಲ್ಲಿ ದಫನ ಮಾಡಲಾದ ಹುತಾತ್ಮರ ಕಬ್‌ಗಳನ್ನು ಸಂದರ್ಶಿಸಿದರು. ಹಿಂದಿರುಗಿ ಬಂದು ಮಸೀದಿಯ ಮಿಂಬರನ್ನೇರಿ ಹೇಳಿದರು: “ನಾನು ನಿಮಗಿಂತ ಮೊದಲು ಹೋಗುತ್ತೇನೆ. ಅಲ್ಲಾಹನ ಮುಂದೆ ನಿಮ್ಮ ಬಗ್ಗೆ ಸಾಕ್ಷ್ಯ ವಹಿಸಲಿದ್ದೇನೆ. ಅಲ್ಲಾಹನಾಣೆ! ಹೌದುಲ್ ಕೌಸರನ್ನು ನಾನು ಇಲ್ಲಿಂದಲೇ ಕಾಣುತ್ತಿದ್ದೇನೆ. ಭೂಮಿಯ ಭಂಡಾರದ ಕೀಲಿಕೈಗಳನ್ನು ನನಗೆ ಒಪ್ಪಿಸಲಾಗಿದೆ. ನೀವು ನನ್ನ ನಂತರ ಶಿರ್ಕ್ ಮಾಡುತ್ತೀರಿ ಎಂಬ ಭಯ ನನಗಿಲ್ಲ. ಆದರೆ ನೀವು ಲೌಕಿಕ ಕಾರ್ಯಗಳಲ್ಲಿ ಪರಸ್ಪರ ಪೈಪೋಟಿಗಿಳಿಯುವಿರೆಂದು ನನಗೆ ಭಯವಿದೆ.”
ಅಂದು ಅರ್ಧರಾತ್ರಿಯ ವೇಳೆ ಬಕೀಅ್ ಗೆ ಹೋಗಿ ಕಬ್‌ಗಳಲ್ಲಿರುವ ನಿವಾಸಿಗಳ ಪಾಪಮುಕ್ತಿಗಾಗಿ ಪ್ರಾರ್ಥಿಸಿದ ನಂತರ ಹೇಳಿದರು: “ಕಬ್ರ್ ಗಳ ನಿವಾಸಿಗಳೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ ವರ್ಷಿಸಲಿ. ನಿಮಗೆ ಉದಯಿಸಿದ ಪ್ರಭಾತವು ಈಗ ಜೀವಿಸುತ್ತಿರುವವರ ಪಾಲಿಗೆ ಉದಯಿಸಿದ ಪ್ರಭಾತಕ್ಕಿಂತ ಸಮಾಧಾನಕರವಾಗಿತ್ತು. ಕಾರ್ಗತ್ತಲ ರಾತ್ರಿಗಳಂತೆ ಫಿತ್ರವು ಅಗತ್ಯವಾಗುತ್ತದೆ. ಅದರ ಅಂತ್ಯವು ಆರಂಭವನ್ನು ಹಿಂಬಾಲಿಸುತ್ತದೆ. ಅಂತ್ಯವಾದರೋ ಆರಂಭಕ್ಕಿಂತಲೂ ಹೆಚ್ಚು ಕೆಟ್ಟದಾಗಿದೆ.” ಅನಂತರ ಅವರು ಹೀಗೆ ಹೇಳಿದರು: “ನಾವು ಸದ್ಯವೇ ನಿಮ್ಮನ್ನು ಸೇರುವೆವು.”
ಕಾಯಿಲೆಯ ಆರಂಭ:
ಹಿಜ್ರ 11ನೇ ವರ್ಷ ಸಫರ್ 28 ಅಥವಾ 29ನೇ ದಿನ
ಬಕೀಅ್ ಕಬರಸ್ಥಾನದಲ್ಲಿ ಒಂದು ಮೃತದೇಹದ ದಫನಕಾರ್ಯದಲ್ಲಿ ಪಾಲ್ಗೊಂಡು ಮರಳುವಾಗ ಪ್ರವಾದಿ(ಸ) ರವರಿಗೆ ತಲೆ ನೋವು ಆರಂಭವಾಯಿತು. ದೇಹದ ಉಷ್ಣತೆ ಹೆಚ್ಚಾಗಿ ಅದು ಅವರು ಧರಿಸಿದ್ದ ರುಮಾಲಿನ ಹೊರಗೂ ಅನುಭವವಾಗುವಷ್ಟು ತೀವ್ರವಾಗಿತ್ತು. ಅವರು ಕಾಯಿಲೆ ಪೀಡಿತರಾಗಿ 11 ದಿನಗಳ ಕಾಲ ಜನರಿಗೆ ನಮಾಝ್ ನ ನಾಯಕತ್ವ ವಹಿಸಿದ್ದರು. ಅವರು ಒಟ್ಟು 13 ಅಥವಾ 14 ದಿನಗಳ ಕಾಲ ಕಾಯಿಲೆ ಪೀಡಿತರಾಗಿದ್ದರು.
ಕೊನೆಯ ವಾರ:
ರೋಗ ಉಲ್ಬಣಿಸಿದಾಗ ಪ್ರವಾದಿ(ಸ) ರವರು ತಮ್ಮ ಪತ್ನಿಯರೊಡನೆ ಕೇಳಿದರು: “ನಾಳೆ ನಾನು ಎಲ್ಲಿರುತ್ತೇನೆ? ನಾಳೆ ನಾನು ಎಲ್ಲಿರುತ್ತೇನೆ?” ಅವರ ಪ್ರಶ್ನೆಯ ಇಂಗಿತವನ್ನು ತಿಳಿದುಕೊಂಡ ಪತ್ನಿಯರು ಪ್ರವಾದಿ(ಸ) ರವರ
ಇಚ್ಛೆಯಂತೆ ಆಯಿಶಾ(ರ) ರವರ ಕೋಣೆಗೆ ತೆರಳಲು ಅನುಮತಿ ಕೊಟ್ಟರು. ಹಾಗೆ ಅವರು ಫದ್ಲ್ ಬಿನ್ ಅಬ್ಬಾಸ್(ರ) ಹಾಗೂ ಅಲೀ ಬಿನ್ ಅಬೀ ತಾಲಿಬ್(ರ) ರ ಹೆಗಲುಗಳನ್ನು ಅವಲಂಬಿಸಿ ನಿಧಾನವಾಗಿ ನಡೆದರು. ಅವರು ಕೊನೆಯ ವಾರವನ್ನು ಅಲ್ಲಿಯೇ ಕಳೆದರು.
ಆಯಿಶಾ(ರ) ಪ್ರವಾದಿ(ಸ) ರವರಿಂದ ಕಲಿತ ಮುಅವ್ವಿದಾತ್ (ಪವಿತ್ರ ಕುರ್‌ಆನಿನ 113 ಮತ್ತು 114ನೇ ಅಧ್ಯಾ- ಯಗಳು) ಅಥವಾ ಅಭಯಯಾಚನೆಯ ಅಧ್ಯಾಯ ಹಾಗೂ ಮತ್ತಿತರ ಪ್ರಾರ್ಥನೆಗಳನ್ನು ಓದಿ ಕೈಗಳಿಗೆ ಊದಿ ಪ್ರವಾದಿ(ಸ) ರವರ ದೇಹಕ್ಕೆ ಸವರುತ್ತಿದ್ದರು.
ಐದು ದಿನಗಳ ಮೊದಲು:
ಮರಣದ ಐದು ದಿನಗಳ ಮೊದಲು ಬುಧವಾರ ಪ್ರವಾ ದಿ(ಸ) ರವರ ಜ್ವರ ಉಲ್ಬಣಿಸಿತು. ಜೊತೆಗೆ ತಲೆನೋವು ಕೂಡಾ. ಇದರಿಂದ ಅವರು ಪ್ರಜ್ಞಾಹೀನರಾದರು. ಎಚ್ಚರವಾದಾಗ “ಏಳು ಬೇರೆ ಬೇರೆ ಬಾವಿಗಳಿಂದ ಸಂಗ್ರಹಿಸಿದ ಚರ್ಮದ ಪಾತ್ರೆಯಲ್ಲಿರುವ ನೀರನ್ನು ನನ್ನ ಮೇಲೆ ಸುರಿಯಿರಿ. ಆಗ ನಾನು ಜನರೊಡನೆ ಮಾತನಾಡಬಹು- ದಲ್ಲ!” ಅವರು ಪ್ರವಾದಿ(ಸ) ರವರನ್ನು ಸ್ನಾನ ಮಾಡಲು ಉಪಯೋಗಿಸುವ ಪಾತ್ರೆಯಲ್ಲಿ ಕೂರಿಸಿ ಅವರು ಸಾಕು ಸಾಕು ಎಂದು ಹೇಳುವ ತನಕ ನೀರು ಸುರಿದರು. ಜ್ವರ ಸ್ವಲ್ಪ ಇಳಿಮುಖವಾದಾಗ ಅವರು ರುಮಾಲು ಧರಿಸಿ ಮಸೀದಿಯ ಮಿಂಬರನ್ನೇರಿ ಕುಳಿತು ಹೇಳಿದರು: “ಜನರೇ! ಇತ್ತ ಕಡೆ ಸಮೀಪಕ್ಕೆ ಬನ್ನಿರಿ.” ಅವರೆಲ್ಲರೂ ಹತ್ತಿರ ಬಂದರು. ಆಗ ಅವರು ಉಪದೇಶ ಮಾಡಿದರು. “ಯಹೂದಿ ಮತ್ತು ನಸಾರಾಗಳ ಮೇಲೆ ಅಲ್ಲಾಹನ ಶಾಪವಿರಲಿ. ಅವರು ತಮ್ಮ ಪ್ರವಾದಿಗಳ ಕಬ್ರ್ ಗಳನ್ನು ಆರಾಧನಾಲಯಗಳಾಗಿ ಮಾಡಿದರು. ನನ್ನ ಕಬ್ರ್ ನ್ನು ನೀವು ಆರಾಧನಾಲಯವನ್ನಾಗಿ ಮಾಡಬಾರದು.” (ಬುಖಾರಿ 1/62, ಮುವತ್ತ 360, 365)
ನಂತರ ಅವರು ಪ್ರತೀಕಾರ ಪಡೆದುಕೊಳ್ಳಲು ತಮ್ಮ ದೇಹವನ್ನು ಮುಂದೊಡ್ಡಿ ಹೇಳಿದರು: “ನಾನು ಯಾರದ್ದಾದರೂ ಬೆನ್ನಿಗೆ ಹೊಡೆದಿದ್ದರೆ ಅವರು ಮುಂದೆ ಬಂದು ನನ್ನ ಬೆನ್ನಿಗೆ ಹೊಡೆದು ಪ್ರತೀಕಾರ ತೀರಿಸಲಿ. ನಾನು ಯಾರದ್ದಾದರೂ ಗೌರವಕ್ಕೆ ಚ್ಯುತಿ ತಂದಿದ್ದರೆ ಅವರಿಗೆ ನನ್ನ ಗೌರವವನ್ನು ಸಮರ್ಪಿಸುತ್ತಿದ್ದೇನೆ. ಅವರು ನನ್ನೊಂದಿಗೆ ಪ್ರತೀಕಾರ ತೀರಿಸಬಹುದು.” ಅನಂತರ ಮಿಂಬರ್‌ನಿಂದ ಇಳಿದು ದುಹ್ರ್ ನಮಾಝ್ ನಿರ್ವಹಿಸಿದ ನಂತರ ಪುನಃ ಮಿಂಬರನ್ನೇರಿ ಮೊದಲಿನ ಮಾತನ್ನು ಪುನರಾವರ್ತಿಸಿದರು. ಆಗ ಒಬ್ಬರು ಕೂಗಿ ಹೇಳಿದರು: “ನೀವು ನನಗೆ ಮೂರು ದಿರ್ಹಮ್ ಕೊಡಲಿಕ್ಕಿದೆ.” ತಕ್ಷಣ ಪ್ರವಾದಿ(ಸ) ರವರು ಫದ್ಲ್(ರ) ರವರನ್ನು ಕರೆದು ಅದನ್ನು ನೀಡುವಂತೆ ಆದೇಶಿಸಿದರು. ಆ ಬಳಿಕ ಅವರು ಹೇಳಿದರು: “ಅನ್ಸಾರ್‌ಗಳ ಬಗ್ಗೆ ನಾನು ನಿಮಗೆ ಉಪದೇಶಿಸುತ್ತೇನೆ. ಏಕೆಂದರೆ ಅವರು ನನ್ನ ಕುಟುಂಬ ಮತ್ತು ಜೊತೆಗಾರರಾಗಿದ್ದಾರೆ. ಅವರು ತಮ್ಮ ಪಾಲಿನ ಕರ್ತವ್ಯವನ್ನು ಪೂರ್ಣಗೊಳಿಸಿದ್ದಾರೆ. ಈಗ ನಿಮ್ಮ ಮೇಲೆ ಅವರ ಬಾಧ್ಯತೆಗಳು ಉಳಿದುಕೊಂಡಿವೆ. ಅವರ ಪೈಕಿ ಸತ್ಕಾರ್ಯ ಮಾಡುವವರನ್ನು ಗೌರವಿಸಿರಿ. ತಪ್ಪು ಮಾಡುವವರನ್ನು ಕ್ಷಮಿಸಿರಿ.”
ಅವರು ಮುಂದುವರಿದು ಹೇಳಿದರು: “ಒಬ್ಬ ದಾಸನಿಗೆ ಇಹಲೋಕದ ಸಂಪತ್ತಿನಲ್ಲಿ ಅವನಿಗೆ ಇಷ್ಟವಿರುವುದನ್ನು ಅಥವಾ ಅಲ್ಲಾಹನ ಬಳಿಯಲ್ಲಿರುವುದನ್ನು ಆರಿಸುವ ಸ್ವಾತಂತ್ರ್ಯ ನೀಡಲಾಯಿತು. ಅವನು ಅಲ್ಲಾಹನ ಬಳಿಯಲ್ಲಿರುವುದನ್ನು ಆರಿಸಿದನು.” ಅಬೂ ಸಈದ್ ಅಲ್ ಖುದ್ರಿ(ರ) ಹೇಳುತ್ತಾರೆ: ಇದನ್ನು ಕೇಳಿ ಅಬೂಬಕ್ಕರ್(ರ) ಅಳುತ್ತಾ ಹೇಳಿದರು: “ನಿಮಗೆ ನಮ್ಮ ತಂದೆತಾಯಿಗಳನ್ನು ಅರ್ಪಿಸುತ್ತಿದ್ದೇವೆ. ವಾಸ್ತವದಲ್ಲಿ ಇದು ಪ್ರವಾದಿ(ಸ)ರವರ ಕುರಿತೇ ಆಗಿತ್ತು.” ಪ್ರವಾದಿ(ಸ)ರವರು ಹೇಳಿದರು: “ನಮ್ಮಲ್ಲಿ ಅಬೂಬಕ್ಕರ್(ರ) ಅತಿದೊಡ್ಡ ಜ್ಞಾನಿಯಾಗಿದ್ದಾರೆ.” ಆ ಬಳಿಕ ಅವರು ಹೇಳಿದರು: “ಗೆಳೆತನ ಮತ್ತು ಹಣದ ವಿಷಯದಲ್ಲಿ ಅಬೂಬಕ್ಕರ್ ನನಗೆ ಅತ್ಯಂತ ಭದ್ರತೆಯಾಗಿದ್ದರು. ಅಲ್ಲಾಹನನ್ನು ಹೊರತುಪಡಿಸಿ ಬೇರೆ ಯಾರನ್ನಾದರೂ ಆಪ್ತಮಿತ್ರನ ನ್ನಾಗಿ ಮಾಡಿಕೊಳ್ಳುವುದಿದ್ದರೆ ಅಬೂಬಕ್ಕರ್(ರ) ರನ್ನು ಮಾಡಿಕೊಳ್ಳುತ್ತಿದ್ದೆ. ಇಸ್ಲಾಮಿನಲ್ಲಿ ಸಹೋದರತ್ವ ಮತ್ತು ಭಾತೃತ್ವಕ್ಕೆ ಹೆಚ್ಚಿನ ಮಹತ್ವವಿದೆ. ಮಸೀದಿಯ ಬಾಗಿಲುಗಳ ಪೈಕಿ ಅಬೂಬಕ್ಕರ್(ರ) ರವರ ಬಾಗಿಲನ್ನು ಹೊರತುಪಡಿಸಿ ಉಳಿದವುಗಳನ್ನು ಮುಚ್ಚಿರಿ.”
ನಾಲ್ಕು ದಿನಗಳ ಮೊದಲು:
ಅಂದು ಗುರುವಾರ, ಅವರ ಕಾಯಿಲೆ ತೀವ್ರವಾಯಿತು. ಅವರು ಹೇಳಿದರು: “ಇಲ್ಲಿ ಬನ್ನಿ! ನಾನು ನಿಮಗೆ ಬರೆದು ಕೊಡುತ್ತೇನೆ. ಅನಂತರ ನೀವು ಪಥಭ್ರಷ್ಟರಾಗಲಾರಿರಿ.” ಇದನ್ನು ಕೇಳಿ ಅಲ್ಲಿದ್ದವರೊಂದಿಗೆ ಉಮರ್(ರ)
ಹೇಳಿದರು: “ಅವರಿಗೆ ನೋವು ತೀವ್ರವಾಗಿದೆ. ನಿಮ್ಮ ಬಳಿ ಕುರ್‌ಆನ್ ಇದೆಯಲ್ಲ. ನಿಮಗೆ ಅಲ್ಲಾಹನ ಗ್ರಂಥ ಸಾಕು.” ಇದರೊಂದಿಗೆ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಗದ್ದಲ ಮತ್ತು ಭಿನ್ನಾಭಿಪ್ರಾಯ ಹೆಚ್ಚಾದಾಗ ಪ್ರವಾದಿ(ಸ) ರವರು ಹೇಳಿದರು: “ಎಲ್ಲರೂ ಇಲ್ಲಿಂದ ಎದ್ದುಹೋಗಿ.” (ಬುಖಾರಿ 1/22, 429, 449, 2/638)
ಅಂದು ಅವರು ಮೂರು ಕಾರ್ಯಗಳನ್ನು ಸೂಚಿಸಿದರು.
1. ಯಹೂದಿ ನಸಾರಾ ಮತ್ತು ಮುಶ್ರಿಕರನ್ನು ಮದೀನದಿಂದ ಹೊರಹಾಕಬೇಕು. 2. ನಿಯೋಗಿಸಿದ ತುಕಡಿಗಳನ್ನು ಅಲ್ಲಿಗೆ ಕಳುಹಿಸಿಕೊಡಬೇಕು. ಮೂರನೇ ಕಾರ್ಯವನ್ನು ವರದಿಗಾರರು ಮರೆತುಬಿಟ್ಟಿದ್ದರು. ಪ್ರಾಯಶಃ ಅದು ಕುರ್‌ಆನ್ ಮತ್ತು ಸುನ್ನತ್ತನ್ನು ಅವಲಂಬಿಸಬೇಕು, ಉಸಾಮರ ನೇತೃತ್ವದ ತುಕಡಿಯನ್ನು ನಿಯೋಗಿಸಬೇಕು ಅಥವಾ ನಮಾಝ್ ಮತ್ತು ಗುಲಾಮರ ವಿಷಯದಲ್ಲಿ ಜಾಗರೂಕರಾಗಿರಬೇಕು ಎಂಬ ಉಪದೇಶವಾಗಿರಬಹುದು. (ಬುಖಾರಿ 2/637)
ರಾತ್ರಿ ಕಾಯಿಲೆ ಮಿತಿಮೀರಿ ಮಸೀದಿಗೆ ತೆರಳಲಾಗದ ಸ್ಥಿತಿಗೆ ತಲುಪಿದರು. ಅವರು ಕೇಳಿದರು: “ಜನರು ನಮಾಝ್ ನಿರ್ವಹಿಸಿದ್ದಾರೆಯೇ?” “ಇಲ್ಲ, ಅಲ್ಲಾಹನ ಸಂದೇಶವಾಹಕರೇ, ಅವರು ನಿಮ್ಮನ್ನು ನಿರೀಕ್ಷಿಸುತ್ತಿದ್ದಾರೆ” ಎಂದು ನಾವು ಉತ್ತರಿಸಿದೆವು. ಅವರು ಹೇಳಿದರು: “ಒಂದು ಪಾತ್ರೆಯಲ್ಲಿ ನೀರನ್ನು ತನ್ನಿ.” ನೀರು ತಂದಾಗ ಅದರಲ್ಲಿ ಸ್ನಾನ ಮಾಡಿದರು. ಆ ಹೊತ್ತಿನಲ್ಲಿ ಅವರಿಗೆ ಪ್ರಜ್ಞೆ ತಪ್ಪಿತು. ಪ್ರಜ್ಞೆ ಮರಳಿದಾಗ “ಜನರು ನಮಾಝ್ ನಿರ್ವಹಿಸಿದ್ದಾರೆಯೇ?” ಎಂದು ಕೇಳಿದರು. ಪುನಃ ಸ್ನಾನ ಮಾಡಿದಾಗಲೂ ಪ್ರಜ್ಞೆ ತಪ್ಪಿತು. ಅನಂತರ ಸಹಜ ಸ್ಥಿತಿಗೆ ಮರಳಿದಾಗ ಅವರು ಜನರ ನಮಾಝ್ ನ ಬಗ್ಗೆ ಪುನಃ ಕೇಳಿದರು. ಹೀಗೆ ಇದು ಮೂರು ಬಾರಿ ಪುನರಾವರ್ತನೆಯಾಯಿತು. ನಂತರ ಅವರು ತಮ್ಮ ಸ್ಥಾನದಲ್ಲಿ ನಮಾಝ್ ನ ನೇತೃತ್ವ ವಹಿಸಲು ಅಬೂಬಕ್ಕರ್(ರ) ರನ್ನು ನೇಮಿಸಿದರು. ಅನಂತರದ ದಿನಗಳಲ್ಲಿ ಅಬೂಬಕರ್(ರ) ರವರೇ ನಮಾಝ್ನ ನಾಯಕತ್ವ ವಹಿಸಿದರು. ಅವರು ಪ್ರವಾದಿ(ಸ) ರವರ ಜೀವಿತಕಾಲದಲ್ಲಿ ಒಟ್ಟು 17 ಹೊತ್ತಿನ ನಮಾಝ್ ನಲ್ಲಿ ನೇತೃತ್ವ ವಹಿಸಿದ್ದರು. ಇವು ಗುರುವಾರ ರಾತ್ರಿಯ ಇಶಾ ನಮಾಝ್ ನಿಂದ ಆರಂಭವಾಗಿ ಸೋಮವಾರದ ಫಜ್ರ್ ನಮಾಝಿನವರೆಗೆ ಮುಂದುವರಿಯಿತು.
ಆಯಿಶಾ(ರ) ರವರು ಅಬೂಬಕ್ಕರ್(ರ) ರವರಿಗೆ ನಮಾಝ್ ನೇತೃತ್ವದ ಹೊಣೆ ಒಪ್ಪಿಸಬಾರದೆಂದು ಪ್ರವಾದಿ(ಸ) ರವರೊಂದಿಗೆ ಮೂರು-ನಾಲ್ಕು ಬಾರಿ ವಿನಂತಿಸಿದರು. ಅವರು ನಮಾಝ್ನಲ್ಲಿ ಅಳುತ್ತಿದ್ದುದ ರಿಂದ ಮಾಅ್ ಮೂಮ್‌ಗಳಿಗೆ ತೊಂದರೆಯಾಗಬಹುದು ಎನ್ನುವುದೇ ಇದಕ್ಕೆ ಕಾರಣವಾಗಿತ್ತು. ಅವರು ಅದನ್ನು ಒಪ್ಪಿಕೊಳ್ಳದೆ ಹೇಳಿದರು: “ನೀವು ಯೂಸುಫ್‌ರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ ಸ್ತ್ರೀಯರ ವಿಭಾಗಕ್ಕೆ ಸೇರಿದವರಲ್ಲಾಗಿರುವಿರಿ. ಅಬೂಬಕ್ಕರ್(ರ) ರಲ್ಲಿ ನಮಾಝ್ ನ ನಾಯಕತ್ವ ವಹಿಸಲು ಹೇಳಿರಿ.
ಮೂರು ದಿನಗಳ ಮೊದಲು:
ಜಾಬಿರ್(ರ) ಹೇಳುತ್ತಾರೆ: ಮರಣಕ್ಕೆ 3 ದಿನ ಮುಂಚೆ ಪ್ರವಾದಿ(ಸ) ರವರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ. “ಅಲ್ಲಾಹನಿಗೆ ಸಂಬಂಧಿಸಿದಂತೆ ಉತ್ತಮ ವಿಚಾರವನ್ನಿಟ್ಟುಕೊಂಡಲ್ಲದೆ ನಿಮ್ಮಲ್ಲಿ ಯಾರೂ ಮರಣಹೊಂದಬಾರದು.”
ಒಂದು ಅಥವಾ ಎರಡು ದಿನಗಳ ಮೊದಲು:
ಶನಿವಾರ ಅಥವಾ ಆದಿತ್ಯವಾರ ಅವರು ಸ್ವಲ್ಪ ಚೇತರಿಸಿದಂತೆ ಕಾಣುತ್ತಿದ್ದರು. ಅವರು ಇಬ್ಬರ ಸಹಾಯದೊಂ ದಿಗೆ ಝುಹ್ರ್ ನಮಾಝ್ ಗಾಗಿ ಮಸೀದಿಗೆ ಹೊರಟರು. ಆಗ ನಮಾಝ್ ನೇತೃತ್ವವನ್ನು ಅಬೂಬಕ್ಕರ್(ರ) ವಹಿಸುತ್ತಿದ್ದರು.
ಪ್ರವಾದಿ(ಸ) ರವರನ್ನು ನೋಡಿದಾಗ ಅಬೂಬಕ್ಕ (ರ) ರವರು ಹಿಂದಕ್ಕೆ ಸರಿಯಲು ಪ್ರಯತ್ನಿಸಿದರು. ಆಗ ಪ್ರವಾದಿ(ಸ) ರವರು ಅಲ್ಲಿಯೇ ನಿಲ್ಲುವಂತೆ ಸನ್ನೆ ಮಾಡಿದರು. ತನ್ನನ್ನು ಅಬೂಬಕ್ಕರ್(ರ) ರವರ ಬಳಿಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಅವರನ್ನು ಅಬೂಬಕ್ಕರ್(ರ) ರವರ ಎಡಭಾಗದಲ್ಲಿ ಕೂರಿಸಲಾ ಯಿತು. ಅನಂತರ ಪ್ರವಾದಿ(ಸ) ರವರು ನಮಾಝ್ ನಿರ್ವಹಿಸಿದಾಗ ಅಬೂಬಕ್ಕರ್(ರ) ರವರು ಅವರನ್ನು ಅನುಗಮಿಸಿ ಜನರಿಗೆ ಕೇಳಿಸುವಂತೆ ತಕ್ಬೀರ್ ಜೋರಾಗಿ ಹೇಳುತ್ತಿದ್ದರು.
ಒಂದು ದಿನ ಮೊದಲು:
ಮರಣದ ಒಂದು ದಿನ ಮೊದಲು ಆದಿತ್ಯವಾರದಂದು ಪ್ರವಾದಿ(ಸ) ರವರು ತಮ್ಮ ಗುಲಾಮರನ್ನು ಸ್ವತಂತ್ರಗೊಳಿಸಿದರು. ಅವರ ಬಳಿಯಲ್ಲಿದ್ದ ಆರು ಅಥವಾ ಏಳು ದೀನಾರ್‌ಗಳನ್ನು ದಾನ ಮಾಡಿದರು. ತಮ್ಮ ಆಯು ಧಗಳನ್ನು ಮುಸ್ಲಿಮರಿಗೆ ನೀಡಿದರು. ಅಂದು ರಾತ್ರಿ ಆಯಿಶಾ(ರ) ರವರ ಮನೆಯಲ್ಲಿ ದೀಪ ಉರಿಸಲು ನೆ ರೆಮನೆಯವರ ಬಳಿ ಎಣ್ಣೆ ಎರವಲು ಪಡೆಯಲಾಯಿತು. ಪ್ರವಾದಿ(ಸ) ರವರ ಯುದ್ಧಾಂಗಿಯನ್ನು ಮೂವತ್ತು ಸಾಅ್ ಬಾರ್ಲಿಗಾಗಿ ಒಬ್ಬ ಯಹೂದಿಯ ಬಳಿ ಅಡವಿಡಲಾಯಿತು.
ಅಂತಿಮ ದಿನ:
ಅನಸ್ ಬಿನ್ ಮಾಲಿಕ್(ರ) ಹೇಳುತ್ತಾರೆ: ಸೋಮವಾರ ಅಬೂಬಕ್ಕರ್(ರ) ರವರ ನೇತೃತ್ವದಲ್ಲಿ ಫಜ್ರ್ ನಮಾಝ್ ಗೆ ಸಿದ್ಧತೆ ನಡೆಯುತ್ತಿದ್ದಾಗ ಪ್ರವಾದಿ(ಸ) ರವರು ಆಕಸ್ಮಿಕವಾಗಿ ಆಯಿಶಾ(ರ) ರ ಕೋಣೆಯಿಂದ ಪರದೆಯನ್ನು ಸರಿಸಿ ನಮಾಝ್ ಗೆ ನಿಂತವರನ್ನು ನೋಡಿ ಮುಗುಳ್ನಕ್ಕರು. ಆಗ ಅಬೂಬಕ್ಕರ್(ರ) ರವರು ಪ್ರವಾದಿ(ಸ) ರವರು ನಮಾಝ್ ಗೆ ಆಗಮಿಸುತ್ತಾರೆಂದು ಭಾವಿಸಿ ಹಿಂದಿನ ಸಾಲಿಗೆ ತೆರಳಲು ಪ್ರಯತ್ನಿಸಿದರು. ಪ್ರವಾದಿ(ಸ) ರವರ ಆಗಮನವನ್ನು ನಿರೀಕ್ಷಿಸಿ ಸಂತುಷ್ಟರಾದ ಜನರು ನಮಾಝ್ ನಲ್ಲಿ ಅಶ್ರದ್ಧರಾಗುತ್ತಿರುವುದನ್ನು ಕಂಡ ಅವರು ನಮಾಝ್ ಪೂರ್ತಿಗೊಳಿಸುವಂತೆ ಸನ್ನೆ ಮಾಡಿದರು. ನಂತರ ತಮ್ಮ ಕೋಣೆಗೆ ತೆರಳಿ ಪರದೆ ಇಳಿಸಿಬಿಟ್ಟರು.
ಅನಂತರ ಪ್ರವಾದಿ(ಸ) ರವರು ಬೇರೆ ಯಾವ ನಮಾಝ್ ಹಾಜರಾಗಲಿಲ್ಲ. ಮಧ್ಯಾಹ್ನಕ್ಕಿಂತ ಮೊದಲು ಪ್ರವಾದಿ(ಸ) ರವರು ತಮ್ಮ ಪ್ರೀತಿಯ ಪುತ್ರಿ ಫಾತಿಮಾರನ್ನು ಕರೆದು ಏನೋ ಹೇಳಿದಾಗ ಅವರು ದುಃಖ ತಡೆಯಲಾಗದೆ ಅತ್ತುಬಿಟ್ಟರು. ನಂತರ ಕರೆದು ಇನ್ನೊಂದು ವಿಷಯ ಹೇಳಿದರು: ಆಗ ಫಾತಿಮ ಸಂತೋಷದಿಂದ ನಕ್ಕರು. ಆಯಿಶಾ(ರ) ಹೇಳುತ್ತಾರೆ: “ಪ್ರವಾದಿ(ಸ)ರವರು ಏನು ಹೇಳಿದರೆಂದು ಕೇಳಿದಾಗ ಫಾತಿಮಾ(ರ) ಹೇಳಿದರು: “ಅವರು ತಮ್ಮ ಮರಣದ ಕುರಿತು ಹೇಳಿದಾಗ ನನಗೆ ಅಳು ಬಂತು. ಆದರೆ ನನ್ನ ಕುಟುಂಬದಲ್ಲಿ ಮೊದಲು ನನ್ನನ್ನು ಸೇರಿಕೊಳ್ಳುವುದು ನೀನಾಗಿರುವಿ ಎಂದು ಹೇಳಿದಾಗ ನನಗೆ ಸಂತೋಷವಾಗಿ ನಗು ಬಂತು.” ಫಾತಿಮಾ(ರ) ರವರು ಇಹಲೋಕದ ವನಿತೆಯರ ನಾಯಕಿಯೆಂದು ಪ್ರವಾದಿ(ಸ) ರವರು ಸುವಾರ್ತೆ ನೀಡಿದ್ದರು.
ಪ್ರವಾದಿ(ಸ)ರವರಿಗೆ ಪ್ರಜ್ಞೆ ತಪ್ಪುವಂತೆ ಕಾಯಿಲೆ ಉಲ್ಬಣಿಸಿದಾಗ ಫಾತಿಮಾ(ರ) ಸಹಿಸಲಾಗದೆ, “ಅಯ್ಯೋ ನನ್ನ ತಂದೆಯ ಸಂಕಷ್ಟವೇ!” ಎಂದರು. ಆಗ ಪ್ರವಾದಿ(ಸ) ರವರು, “ಮಗಳೇ! ಇನ್ನೆಂದೂ ನಿನ್ನ ತಂದೆಗೆ ಕಷ್ಟವಾಗಲಾರದು” ಎಂದರು. ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್(ರ) ರನ್ನು ಹತ್ತಿರ ಕರೆದು ಅವರ ಹಣೆಗೆ ಮುತಿಟ್ಟು ಉಪದೇಶ ನೀಡಿದರು. ಆ ಬಳಿಕ ಪತ್ನಿಯರನ್ನು ಕರೆದು ಅವರಿಗೂ ಉಪದೇಶವಿತ್ತರು.
ನೋವು ವಿಪರೀತವಾದಾಗ ಅವರು ಆಯಿಶಾ(ರ) ರನ್ನು ಕರೆದು ಹೇಳಿದರು: “ಆಯಿಶಾ! ಅಂದು ನಾನು ಖೈಬರ್‌ನಲ್ಲಿ ಸೇವಿಸಿದ ವಿಷದ ಪರಿಣಾಮ ಈಗ ಅನುಭವವಾಗುತ್ತಿದೆ. ಆ ವಿಷದಿಂದ ನನಗೆ ಮರಣ ಆಸನ್ನವಾಗಿದೆಯೆಂದು ತೋರುತ್ತಿದೆ.” (ಬುಖಾರಿ 2/638)
ಪ್ರಜ್ಞೆ ಬಂದಾಗ ಅವರು ಮುಖದ ಮೇಲೆ ಹಾಕಿದ್ದ ಕಪ್ಪು ಚದ್ದರವನ್ನು ಸರಿಸಿ ಹೇಳಿದರು: “ಯಹೂದಿ ಮತ್ತು ನಸಾರಾಗಳ ಮೇಲೆ ಅಲ್ಲಾಹನ ಶಾಪವಿರಲಿ, ಅವರು ಅವರ ಪ್ರವಾದಿಗಳ ಕಬ್‌ಗಳನ್ನು ಆರಾಧನಾಲಯಗಳಾಗಿ ಮಾಡಿಕೊಂಡರು.” ಅವರ ಪ್ರವೃತ್ತಿಯ ಕುರಿತು ತಾಕೀತು ಮಾಡಿದರು. ಅರೇಬಿಯಾದಲ್ಲಿ ಆ ಎರಡು ಧರ್ಮಗಳು ಬಾಕಿಯುಳಿಯಬಾರದು. ಅನಂತರ ಅವರು ಉಪದೇಶಿಸಿದರು: “ನಮಾಝ್… ನಮಾಝ್… ಮತ್ತು ನಿಮ್ಮ ಸ್ವಾಧೀನದಲ್ಲಿರುವವರು.” ಈ ಮಾತುಗಳನ್ನು ಅವರು ಹಲವು ಬಾರಿ ಪುನರಾವರ್ತಿಸಿದರು.
ಮರಣದ ಸಮಯ:
ಮರಣದ ಲಕ್ಷಣಗಳು ಪ್ರಕಟವಾಗಲು ಆರಂಭವಾ ದಾಗ ಆಯಿಶಾ(ರ) ರವರು ಅವರನ್ನು ತನ್ನೆಡೆಗೆ ಸೆಳೆದುಕೊಂಡರು. ಆಯಿಶಾ(ರ) ಹೇಳುತ್ತಾರೆ: “ಪ್ರವಾದಿ(ಸ) ರವರು ನನ್ನ ಕೋಣೆ, ನನ್ನ ದಿನ ಹಾಗೂ ನನ್ನ ಎದೆಗೆ ಒರಗಿಕೊಂಡು ನಿಧನರಾದದ್ದು ಅಲ್ಲಾಹನು ನನಗೆ ದಯಪಾಲಿಸಿದ ಮಹಾ ಅನುಗ್ರಹವಾಗಿದೆ. ನನ್ನ ಮತ್ತು ಅವರ ಉಗುಳು ಪರಸ್ಪರ ಬೆರೆಯಿತು. ಅದು ಹೇಗೆಂದರೆ, ಅಬೂಬಕ್ಕರ್(ರ) ರವರ ಮಗ ಅಬ್ದುರಹ್ಮಾನ್(ರ) ಅಲ್ಲಿಗೆ ಬಂದರು. ಅವರ ಕೈಯಲ್ಲಿ ಮಿಸ್ಟಾಕ್ ಇತ್ತು. ನನ್ನ ಎದೆಗೆ ಒರಗಿಕೊಂಡು ಮಲಗಿದ್ದ ಪ್ರವಾದಿ(ಸ) ರವರು ಆ ಮಿಸ್ವಾಕ್ ನೋಡಿದಾಗ ಅದು ಅವರಿಗೆ ಬೇಕೆನಿಸಿತು. ನಾನು ಅದನ್ನು ತೆಗೆದುಕೊಡಲೇ ಎಂದು ಕೇಳಿದಾಗ ಹೌದು ಎಂದು ತಲೆ ಅಲ್ಲಾಡಿಸಿದರು. ಆ ಮಿಸ್ಟಾಕ್ ದಪ್ಪಗಿತ್ತು. ನಾನು ಅದನ್ನು ಜಗಿದು ಮೃ ದುಗೊಳಿಸಿ ಅವರಿಗೆ ನೀಡಿದೆ. ಅವರು ಅದನ್ನು ಉಪಯೋಗಿಸಿ ದಂತಮಜ್ಜನ ಮಾಡಿದರು. ಸಮೀಪದಲ್ಲಿದ್ದ ಪಾತ್ರೆಯ ನೀರಿನಿಂದ ಮುಖ ಸವರಿದರು. ಅವರು ಹೇಳುತ್ತಿದ್ದರು: “ಲಾ ಇಲಾಹ ಇಲ್ಲಲ್ಲಾಹ್… ಮರಣಕ್ಕೆ ತುಂಬಾ ನೋವಿದೆ.” (ಬುಖಾರಿ 2/340)
ದಂತಶುದ್ಧಿ ಮುಗಿಸುವುದಕ್ಕಿಂತ ಮೊದಲು ಅವರು ಬೆರಳಿನಿಂದ ಆಕಾಶದತ್ತ ಸೂಚಿಸುತ್ತಾ ಹೇಳುತ್ತಿದ್ದರು. “ಓ ಅಲ್ಲಾಹ್, ನೀನು ಅನುಗ್ರಹಿಸಿದ ಪ್ರವಾದಿಗಳು, ಸತ್ಯವಂತರು, ಹುತಾತ್ಮರು ಹಾಗೂ ಸಜ್ಜನರ ಸಾಲಿನಲ್ಲಿ ನನ್ನನ್ನು ಸೇರಿಸು. ಓ ಅಲ್ಲಾಹ್, ನನ್ನನ್ನು ಕ್ಷಮಿಸು. ನನಗೆ ಕರುಣೆ ತೋರು. ಓ ಅಲ್ಲಾಹ್, ನೀನೇ ನನ್ನ ಅತ್ಯುತ್ತಮ ಸಂಗಾತಿ.” ಕೊನೆಯ ಮಾತನ್ನು ಅವರು ಮೂರು ಬಾರಿ ಪುನರಾವರ್ತಿಸಿದರು. ತನ್ಮಧ್ಯೆ ಅವರ ಕೈ ಮೆಲ್ಲಗೆ ಹಾಸಿಗೆಗೆ ಒರಗಿತು. ಅವರು ಅತ್ಯುನ್ನತ ಸಂಗಾತಿಯ ಬಳಿ ಸೇರಿಕೊಂಡರು. ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್.
ಇದು ಹಿಜ್ರ 11 ರಬೀಉಲ್ ಅವ್ವಲ್ 12 ಸೋಮವಾರ ಮಧ್ಯಾಹ್ನಕ್ಕೆ ಸ್ವಲ್ಪ ಮೊದಲಾಗಿತ್ತು. ಅಂದು ಅವರಿಗೆ 63 ವರ್ಷ ಮತ್ತು ನಾಲ್ಕು ದಿನ ಪ್ರಾಯವಾಗಿತ್ತು.