ಮೈಮೂನ(ರ) ರವರ ವಂಶಾವಳಿಯು ಹದಿನೇಳನೇ ಪಿತಾಮಹ ಮುದರ್‌ರಲ್ಲಿ ಪ್ರವಾದಿ(ಸ) ರೊಂದಿಗೆ ಸಂಧಿಸುತ್ತದೆ.
ಜನನ ಮತ್ತು ಕುಟುಂಬ ಹಿನ್ನೆಲೆ:
ಮೈಮೂನ(ರ) ರವರ ಮೊದಲ ಹೆಸರು ಬರ್ರ ಎಂದಾಗಿತ್ತು. ಪ್ರವಾದಿ(ಸ) ರವರು ಅದನ್ನು ಮೈಮೂನ ಎಂದು ಬದಲಾಯಿಸಿದರು. ಮೈಮೂನ(ರ) ಬನೂ ಹಿಲಾಲ್ ಗೋತ್ರಕ್ಕೆ ಸೇರಿದ ಹಾರಿಸ್ ಬಿನ್ ಹಝನ್ ಎಂಬವರ ಮಗಳು. ಇವರ ತಾಯಿಯ ಹೆಸರು ಹಿಂದ್ ಬಿಂತ್ ಔಫ್. ಇವರನ್ನು ಭೂಮಿಯ ಅತ್ಯಂತ ಗೌರವಾನ್ವಿತ ಬೀಗತ್ತಿ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಇವರ ಐದು ಹೆಣ್ಣು ಮಕ್ಕಳು.
1. ಉಮ್ಮುಲ್ ಮುಅ್‌ಮಿನೀನ್ ಝೈನಬ್ ಬಿಂತ್ ಖುಝೈಮ. ಇವರು ಪ್ರವಾದಿ(ಸ) ರವರ ಪತ್ನಿ
2. ಉಮ್ಮುಲ್ ಮುಅ್‌ಮಿನೀನ್ ಮೈಮೂನ ಬಿಂತ್ ಹಾರಿಸ್. ಇವರು ಕೂಡ ಪ್ರವಾದಿ(ಸ) ರವರ ಪತ್ನಿ.
3. ಅಸ್ಮಾ ಬಿಂತ್ ಉಮೈಸ್. ಇವರನ್ನು ಮೊದಲು ಜಅಫರ್ ಬಿನ್ ಅಬೂತಾಲಿಬ್(ರ) ವಿವಾಹವಾದರು. ಇವರಿಗೆ ಅಬ್ದುಲ್ಲಾ ಔನ್ ಮತ್ತು ಮುಹಮ್ಮದ್ ಎಂಬ ಮೂರು ಮಕ್ಕಳು ಜನಿಸಿದರು. ಇವರು ಹುತಾತ್ಮರಾದ ನಂತರ ಅಬೂಬಕರ್ ಸಿದ್ದೀಕ್(ರ) ಇವರನ್ನು ವಿವಾಹವಾದರು. ಇವರಿಗೆ ಮುಹಮ್ಮದ್ ಎಂಬ ಮಗು ಜನಿಸಿತು. ಇವರ ಮರಣಾನಂತರ ಅಲೀ ಬಿನ್ ಅಬೂ ತಾಲಿಬ್(ರ) ಇವರನ್ನು ವಿವಾಹವಾದರು. ಇವರಿಗೆ ಯಹ್ಯಾ ಎಂಬ ಮಗು ಜನಿಸಿತು.
4. ಸಲ್ಮಾ ಬಿಂತ್ ಉಮೈಸ್. ಇವರನ್ನು ಹಂಝ ಬಿನ್ ಅಬ್ದುಲ್ ಮುತ್ತಲಿಬ್(ರ) ವಿವಾಹವಾದರು.
5. ಉಮ್ಮುಲ್ ಫದ್ಲ್ ಲುಬಾಬ ಕುಬ್ರಾ. ಇವರನ್ನು ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ (ರ) ವಿವಾಹವಾದರು. ಇವರು ಪ್ರಸಿದ್ದ ಸಹಾಬಿವರ್ಯರಾದ ಅಬ್ದುಲ್ಲಾ ಬಿನ್ ಅಬ್ಬಾಸ್(ರ) ರವರ ತಾಯಿ. ಇವರು ಖದೀಜ(ರ) ರವರ ನಂತರ ಇಸ್ಲಾಮ್ ಸ್ವೀಕರಿಸಿದ ಎರಡನೇ ಮಹಿಳೆ.
6. ಲುಬಾಬ ಸುಗ್ರಾ. ಇವರನ್ನು ವಲೀದ್ ಬಿನ್ ಮುಗೀರ ವಿವಾಹವಾದರು. ಇವರು ಪ್ರಸಿದ್ದ ಸಹಾಬಿವರ್ಯರು ಮತ್ತು ಅಪ್ರತಿಮ ಹೋರಾಟಗಾರರಾದ ಖಾಲಿದ್ ಬಿನ್ ವಲೀದ್(ರ) ರವರ ತಾಯಿ.
ಹೀಗೆ ಮೈಮೂನ(ರ) ರವರ ತಾಯಿ ಹಿಂದ್ ಬಿಂತ್ ಔಫ್(ರ) ರಿಗೆ ಮುಹಮ್ಮದ್ ರಸೂಲುಲ್ಲಾ(ಸ), ಅಬೂಬಕರ್ ಸಿದ್ದೀಕ್(ರ), ಅಲೀ ಬಿನ್ ಅಬೂತಾಲಿಬ್(ರ), ಜಅಫರ್ ಬಿನ್ ಅಬೂತಾಲಿಬ್(ರ), ಹಂಝ ಬಿನ್ ಅಬ್ದುಲ್ ಮುತ್ತಲಿಬ್ ಮತ್ತು ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್(ರ) ಮುಂತಾದ ಮಹಾನ್ ವ್ಯಕ್ತಿಗಳ ಅತ್ತೆಯಾಗುವ ಸೌಭಾಗ್ಯ ಒದಗಿತು.
ಪ್ರಸಿದ್ಧ ಸಹಾಬಿವರ್ಯರು ಮತ್ತು ಕುರ್‌ಆನ್ ವ್ಯಾಖ್ಯಾನಕಾರರ ಸರದಾರರು ಎಂಬ ಖ್ಯಾತಿಯನ್ನು ಪಡೆದಿರುವ ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಇವರು ಮೊಮ್ಮಗ. ಇವರ ಇನ್ನೊಬ್ಬ ಮೊಮ್ಮಗ ಮಹಾನ್ ಯೋಧರು ಮತ್ತು ಯುದ್ಧತಂತ್ರಗಳ ಬಗ್ಗೆ ಅಪಾರ ಜಾಣೆಯನ್ನು ಹೊಂದಿರುವ ಅಲ್ಲಾಹನ ಖಡ್ಗ ಎಂಬ ಹೆಸರಲ್ಲಿ ಖ್ಯಾತರಾದ ಖಾಲಿದ್ ಬಿನ್ ವಲೀದ್(ರ). ಇವರಿಬ್ಬರಿಗೂ ಮೈಮೂನ(ರ) ಚಿಕ್ಕಮ್ಮ. ಹೀಗೆ ಮೈಮೂನ ಹುತಾತ್ಮರು, ಯೋಧರು ಮತ್ತು ಬುದ್ಧಿವಂತರು ಇರುವ ಕುಟುಂಬ ಹಿನ್ನೆಲೆಯನ್ನು ಹೊಂದಿದ್ದರು.
ಮೊದಲ ವಿವಾಹ:
ಮೈಮೂನ(ರ) ರನ್ನು ಮೊದಲು ಮಸ್‌ಊದ್ ಬಿನ್ ಅಮ್ರ್ ಬಿನ್ ಉಮೈರ್ ಅಸ್ಸಕಫಿಯವರಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ವಿವಾಹ ಯಶಸ್ವಿಯಾಗಲಿಲ್ಲ. ನಂತರ ಇವರು ಅಬೂ ರುಹ್ಮ್ ಬಿನ್ ಅಬ್ದುಲ್ ಉಝ್ಝ ಎಂಬವರನ್ನು ವಿವಾಹವಾದರು. ಆದರೆ ಆತ ಕೆಲವೇ ವರ್ಷಗಳಲ್ಲಿ ಸಾವನ್ನಪ್ಪಿದ. ಮೈಮೂನ ವಿಧವೆಯಾದರು. ಆಗ ಅವರಿಗೆ ಇನ್ನೂ ಚಿಕ್ಕ ಪ್ರಾಯ.
ಪ್ರವಾದಿ(ಸ) ರೊಂದಿಗೆ ವಿವಾಹ:
ಹಿ.ಶ. 7ನೇ ವರ್ಷದಲ್ಲಿ ಪ್ರವಾದಿ(ಸ) ರವರು ಉಮ್ರ ನಿರ್ವಹಿಸಲು ಸಹಾಬಾಗಳೊಂದಿಗೆ ಮಕ್ಕಾಗೆ ಹೊರಟರು. ಮೈಮೂನ(ರ) ರಿಗೆ ಪ್ರವಾದಿ(ಸ) ರನ್ನು ವಿವಾಹವಾಗಬೇಕೆಂಬ ಆಸೆಯಿತ್ತು. ಪ್ರವಾದಿ(ಸ) ರನ್ನು ವಿವಾಹವಾಗಿ ಉಮ್ಮುಲ್ ಮುಅ್‌ಮಿನೀನ್(ಸತ್ಯವಿಶ್ವಾಸಿಗಳ ಮಾತೆ) ಎಂಬ ಪಟ್ಟವನ್ನು ಅಲಂಕರಿಸಿಕೊಳ್ಳಬೇಕೆಂದು ಅವರು ಬಯಸಿದ್ದರು. ಇದನ್ನು ಅವರು ತಮ್ಮ ಸಹೋದರಿ ಉಮ್ಮುಲ್ ಫದ್ಲ್ ಲುಬಾಬ(ರ) ರೊಂದಿಗೆ ಹೇಳಿದ್ದರು. ಲುಬಾಬ(ರ) ಇದನ್ನು ತಮ್ಮ ಪತಿ ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್(ರ) ರೊಂದಿಗೆ ಹೇಳಿದರು. ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್(ರ) ಪ್ರವಾದಿ(ಸ) ರವರ ಚಿಕ್ಕಪ್ಪ, ಪ್ರವಾದಿ(ಸ) ರವರು ಇವರನ್ನು ಬಹಳ ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಅಬ್ಬಾಸ್(ರ) ಈ ವಿಷಯವನ್ನು ಪ್ರವಾದಿ(ಸ) ರಿಗೆ ತಿಳಿಸಿದಾಗ ಪ್ರವಾದಿ(ಸ) ಈ ವಿವಾಹಕ್ಕೆ ಒಪ್ಪಿಗೆ ಸೂಚಿಸಿದರು. ಆಗ ಪ್ರವಾದಿ(ಸ) ರವರು ಉಮ್ರ ಮುಗಿಸಿದ್ದರು. ನಂತರ ಪ್ರವಾದಿ(ಸ) ರವರು ಜಅಫರ್ ಬಿನ್ ಅಬೂತಾಲಿಬ್(ರ)ರನ್ನು ಕರೆದು ವಿವಾಹದ ಸಿದ್ಧತೆಗಳನ್ನು ಮಾಡಿಕೊಳ್ಳಲು ಹೇಳಿದರು. ಹೀಗೆ ಅವರಿಬ್ಬರ ವಿವಾಹ ನೆರವೇರಿತು.
ಇನ್ನೊಂದು ವರದಿಯ ಪ್ರಕಾರ ಪ್ರವಾದಿ(ರ) ರವರು ಉಮ್ರಕ್ಕೆ ಹೊರಟಾಗ ಜಅಫರ್ ಬಿನ್ ಅಬೂತಾಲಿಬ್(ರ) ರವರ ಮೂಲಕ ಮೈಮೂನ(ರ) ರಿಗೆ ವಿವಾಹಪ್ರಸ್ತಾಪವನ್ನು ಕಳುಹಿಸಿದರು. ಮೈಮೂನ(ರ) ವಿವಾಹ ಪ್ರಸ್ತಾಪ ಸ್ವೀಕರಿಸಿ ಭಾವ ಅಬ್ಬಾಸ್ ಬಿನ್ ಅಬ್ದುಲ್ ಮುತಲಿಬ್(ರ) ರೊಂದಿಗೆ ವಿವಾಹದ ಸಿದ್ಧತೆಗಳನ್ನು ಮಾಡಿಕೊಳ್ಳಲು ಹೇಳಿದರು.
ಪ್ರವಾದಿ(ಸ) ರವರು ಉಮ್ರ ಮುಗಿಸಿ ಮಕ್ಕಾದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಸರಫ್ ಎಂಬ ಸ್ಥಳದಲ್ಲಿ ಬೀಡುಬಿಟ್ಟರು. ಮೈಮೂನ(ರ) ರನ್ನು ಅಲ್ಲಿಗೆ ಕರೆತರುವಂತೆ ಸೇವಕನಾದ ಅಬೂ ರಾಫಿಅ್ (ರ) ರಿಗೆ ಆಜ್ಞಾಪಿಸಿದರು. ಇಲ್ಲಿ ಇವರಿಬ್ಬರ ವಿವಾಹ ನಡೆಯಿತು.
ಮೈಮೂನ(ರ) ತಮ್ಮನ್ನು ತಾವೇ ಪ್ರವಾದಿ(ಸ) ರಿಗೆ ಅರ್ಪಿಸಿಕೊಂಡರು ಎಂದು ಹೇಳಲಾಗುತ್ತದೆ. ಅವರು ಪ್ರವಾದಿ(ರ) ರನ್ನು ಕಂಡಾಗ ಈ ಒಂಟೆ ಮತ್ತು ಅದರ ಮೇಲಿರುವವರನ್ನು ಅಲ್ಲಾಹು ಮತ್ತು ಅವನ ಪ್ರವಾದಿ(ಸ)ಗೆ ಅರ್ಪಿಸಿದ್ದೇನೆ ಎಂದು ಹೇಳಿದರು. ಮೈಮೂನ ಆಗ ಒಂಟೆಯ ಮೇಲಿದ್ದರು. ಆಗ ಅಲ್ಲಾಹು ಈ ಆಯತನ್ನು ಅವತೀರ್ಣಗೊಳಿಸಿದನು- “ಓ ಪ್ರವಾದಿಯವರೇ! ತಾವು ವಧುದಕ್ಷಿಣೆ ನೀಡಿ ವರಿಸಿರುವ ತಮ್ಮ ಮಡದಿಯರನ್ನು ನಾವು ತಮಗೆ ಧರ್ಮಸಮ್ಮತಗೊಳಿಸಿದ್ದೇವೆ. ಅಲ್ಲಾಹು ತಮಗೆ (ಯುದ್ಧದಲ್ಲಿ) ಅಧೀನಪಡಿಸಿಕೊಟ್ಟವರ ಪೈಕಿ ತಮ್ಮ ಬಲಗೈ ಸ್ವಾಧೀನದಲ್ಲಿರಿಸಿರುವ (ಗುಲಾಮ, ಸ್ತ್ರೀಯರನ್ನು, ತಮ್ಮೊಂದಿಗೆ ಊರು ಬಿಟ್ಟು ಬಂದ ತಮ್ಮ ಪಿತೃಸಹೋದರ ಪುತ್ರಿಯರು, ಪಿತೃಸಹೋದರಿ ಪುತ್ರಿಯರು, ಮಾತೃಸಹೋದರ ಪುತ್ರಿಯರು, ಮಾತೃಸಹೋದರಿ ಪುತ್ರಿಯರು (ಮುಂತಾದವರನ್ನು ವಿವಾಹವಾಗುವುದು ತಮಗೆ ಧರ್ಮಸಮ್ಮತವಾಗಿದೆ). ಸತ್ಯವಿಶ್ವಾಸಿನಿಯಾಗಿರುವ ಒಬ್ಬ ಹೆಣ್ಣು ತನ್ನ ಶರೀರವನ್ನು ಪ್ರವಾದಿಗೆ ದಾನ ಮಾಡುವುದಾದರೆ ಮತ್ತು ಪ್ರವಾದಿಯು ಆಕೆಯನ್ನು ವಿವಾಹವಾಗಲು ಇಚ್ಛಿಸುವುದಾದರೆ (ಅದು ಕೂಡ ಧರ್ಮಸಮ್ಮತವಾಗಿದೆ). ಇದು ಇತರ ಸತ್ಯವಿಶ್ವಾಸಿಗಳಿಗಿರದೆ ತಮಗೆ ಮಾತ್ರವಿರುವುದಾಗಿದೆ. ಅವರ ಪತ್ನಿಯರ ಮತ್ತು ಅವರ ಬಲಗೈ ಸ್ವಾಧೀನದಲ್ಲಿರಿಸಿರುವವರ ವಿಷಯದಲ್ಲಿ ನಾವು ಶಾಸನಗೊಳಿಸಿರುವುದು ನಮಗೆ ಚೆನ್ನಾಗಿ ತಿಳಿದಿದೆ. ಇದು ತಮಗೆ ಯಾವುದೇ ತೊಂದರೆಯುಂಟಾಗದಿರುವ ಸಲುವಾಗಿದೆ. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿದ್ದಾನೆ. (33.50)
ಪ್ರವಾದಿ(ಸ) ರ ಕೊನೆಯ ಪತ್ನಿ:
ಮೈಮೂನ(ರ) ಪ್ರವಾದಿ(ಸ) ರವರ ಕೊನೆಯ ಪತ್ನಿ. ವಿವಾಹವಾಗುವಾಗ ಅವರಿಗೆ 26 ವರ್ಷ ಪ್ರಾಯವಾಗಿತ್ತು. ಮದೀನಾ ಮಸೀದಿಗೆ ತಾಗಿಕೊಂಡಿರುವ ಒಂದು ಕೋಣೆಯಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಪ್ರವಾದಿ(ಸ) ರವರ ಇತರ ಪತ್ನಿಯರು ಅವರನ್ನು ಆದರದಿಂದ ಬರಮಾಡಿಕೊಂಡರು.
ಆರಾಧನೆ ಮತ್ತು ಭಕ್ತಿ:
ಮೈಮೂನ(ರ) ಅತ್ಯಧಿಕ ಆರಾಧನಾ ನಿರತರಾಗುತ್ತಿದ್ದ ರು. ಹೆಚ್ಚಿನ ವೇಳೆಯಲ್ಲೂ ಅವರು ನಮಾಝ್‌ನಲ್ಲಿರುತ್ತಿದ್ದರು. ಮಕ್ಕಾ ಮಸೀದಿಯನ್ನು ಬಿಟ್ಟರೆ ನಮಾಝ್‌ಗೆ ಅತಿಹೆಚ್ಚು ಪುಣ್ಯವಿರುವ ಸ್ಥಳ ಮದೀನ ಮಸೀದಿಯೆಂದು ತಿಳಿದ ನಂತರ ಅವರು ಮಸೀದಿಯಲ್ಲೇ ನಮಾಝ್ ಮಾಡತೊಡಗಿದರು. ಮೈಮೂನ(ರ) ಅಲ್ಲಾಹನನ್ನು ಅತ್ಯಧಿಕ ಭಯಪಡುತ್ತಿದ್ದರು. ಅಷ್ಟೇ ಅಲ್ಲ, ಕುಟುಂಬ ಸಂಬಂಧಗಳನ್ನು ಜೋಡಿಸುವುದರಲ್ಲಿ ಅವರು ಅಗ್ರಗಣ್ಯರಾಗಿದ್ದರು. ಮೈಮೂನ(ರ) ನಿಧನರಾದಾಗ ಆಯಿಶ(ರ) ಈ ರೀತಿ ಉದ್ಧರಿಸಿದ್ದರು- ಅಲ್ಲಾಹನಾಣೆ! ಮೈಮೂನ ಹೊರಟುಹೋದರು. ಅವರು ನಮ್ಮ ಪೈಕಿ ಅಲ್ಲಾಹನನ್ನು ಅತ್ಯಧಿಕ ಭಯಪಡುವವರಾಗಿದ್ದರು ಮತ್ತು ನಮ್ಮ ಪೈಕಿ ಅತಿಹೆಚ್ಚು ಕುಟುಂಬ ಸಂಬಂಧಗಳನ್ನು ಜೋಡಿಸುವವರಾಗಿದ್ದರು. ಪ್ರವಾದಿ(ಸ) ರವರು ಒಂದು ಹದೀಸಿನಲ್ಲಿ ಇವರನ್ನು ಸತ್ಯವಿಶ್ವಾಸಿನಿ ಎಂದು ಕರೆದಿದ್ದಾರೆ. ಇಬ್ನ್ ಅಬ್ಬಾಸ್ (ರ) ವರದಿ ಮಾಡಿದ ಹದೀಸಿನಲ್ಲಿ ಪ್ರವಾದಿ(ಸ) ಹೇಳುತ್ತಾರೆ- ನಾಲ್ವರು ಸಹೋದರಿಯರು ಸತ್ಯವಿಶ್ವಾಸಿನಿಗಳಾಗಿದ್ದಾರೆ. ಅವರು ಮೈಮೂನ, ಉಮ್ಮುಲ್ ಫದ್ಲ್, ಸಲ್ಮಾ ಮತ್ತು ಅಸ್ಮಾ ಬಿಂತ್ ಉಮೈಸ್
ಹದೀಸ್ ವರದಿ:
ಮಹಿಳೆಯರ ಪೈಕಿ ಪ್ರವಾದಿ(ಸ) ರಿಂದ ಅತ್ಯಧಿಕ ಹದೀಸ್ ವರದಿ ಮಾಡಿದವರು ಆಯಿಶ(ರ). ಇವರು 2210 ಹದೀಸ್‌ಗಳನ್ನು ವರದಿ ಮಾಡಿದ್ದರು. ನಂತರದ ಸ್ಥಾನವನ್ನು ಉಮ್ಮು ಸಲಮ(ರ) ಅಲಂಕರಿಸಿದ್ದರು. ಇವರು 387 ಹದೀಸ್‌ಗಳನ್ನು ವರದಿ ಮಾಡಿದ್ದರು. ಹದೀಸ್ ವರದಿಗಾರಿಕೆಯಲ್ಲಿ ಮೂರನೇ ಸ್ಥಾನವನ್ನು ಮೈಮೂನ(ರ) ಅಲಂಕರಿಸಿದ್ದಾರೆ. ಅವರು ಒಟ್ಟು 76 ಹದೀಸ್‌ಗಳನ್ನು ವರದಿ ಮಾಡಿದ್ದಾರೆ.
ಅಬ್ದುಲ್ಲಾ ಬಿನ್ ಅಬ್ಬಾಸ್(ರ), ಅಬ್ದುಲ್ಲಾ ಬಿನ್ ಶದ್ದಾದ್(ರ), ಅಬ್ದುರಹ್ಮಾನ್ ಬಿನ್ ಸಾಇಬ್(ರ), ಇಬ್ರಾಹೀಮ್ ಬಿನ್ ಅಬ್ದುಲ್ಲಾ ಬಿನ್ ಮಅ್‌ಬದ್ ಬಿನ್ ಅಬ್ಬಾಸ್(ರ), ಸುಲೈಮಾನ್ ಬಿನ್ ಯಸಾರ್(ರ) ಮುಂತಾದ ಅನೇಕ ಮಂದಿ ಅವರಿಂದ ಹದೀಸ್ ವರದಿ ಮಾಡಿದ್ದಾರೆ.
ಮರಣ:
ಹಿ.ಶ. 51 ರಲ್ಲಿ ಮೈಮೂನ(ರ) ಮಕ್ಕಾ ಮತ್ತು ಮದೀನಾದ ನಡುವಿನ ಸರಫ್ ಎಂಬ ಸ್ಥಳದಲ್ಲಿ ಪ್ರವಾದಿ(ಸ) ರವರು ಅವರನ್ನು ವಿವಾಹವಾದ ಅದೇ ಸ್ಥಳದಲ್ಲಿ ನಿಧನರಾದರು. ಆಗ ಅವರಿಗೆ 80 ವರ್ಷ ಪ್ರಾಯವಾಗಿತ್ತು.