“ಮಾನವ ಸಮೂಹದ ಕೋಟ್ಯಂತರ ಹೃದಯಗಳಲ್ಲಿ ವಿವಾದರಹಿತವಾಗಿ ಪ್ರಭುತ್ವವನ್ನು ಸ್ಥಾಪಿಸಿರುವ ಓರ್ವ ಅತ್ಯುನ್ನತ ವ್ಯಕ್ತಿಯ ಜೀವನದ ಉತ್ತಮ ಅಂಶಗಳನ್ನು ತಿಳಿಯಬಯಸಿದ್ದೆ. ಅಂದಿನ ಜೀವನ ರಂಗದಲ್ಲಿ ಇಸ್ಲಾಮಿಗೆ ಸ್ಥಾನವನ್ನು ಗಳಿಸಿಕೊಟ್ಟಿದ್ದು ಖಡ್ಗವಲ್ಲ, ಬದಲಾಗಿ ಪ್ರವಾದಿಯ ತೀವ್ರ ನಿರಾಡಂಬರತೆ, ಪರಿಪೂರ್ಣ ಕಪಟರಹಿತ ಮನೋಭಾವ, ವಾಗ್ದಾನಗಳ ಕುರಿತು ಅತ್ಯಂತ ನಿಷ್ಠೆ, ತನ್ನ ಸ್ನೇಹಿತರು ಮತ್ತು ಸಹಾನುವರ್ತಿಗಳಿಗೆ ಅವರು ನೀಡುತ್ತಿದ್ದ ತೀವ್ರ ಪರಿಗಣನೆ, ಸತ್ಯಪ್ರಚಾರ ಕಾರ್ಯದ ಕುರಿತು ಅವರಿಗಿದ್ದ ಎದೆಗಾರಿಕೆ, ನಿರ್ಭಯತೆ ಮತ್ತು ದೇವನಲ್ಲಿದ್ದ ಪರಿಪೂರ್ಣ ನಂಬಿಕೆ ಮತ್ತು ಭರವಸೆಗಳಾಗಿದ್ದವು ಎಂಬ ವಾಸ್ತವಿಕತೆಯನ್ನು ನಾನು ಚೆನ್ನಾಗಿ ಮನದಟ್ಟುಮಾಡಿಕೊಂಡೆ. ಈ ಗುಣಗಳೇ ಅವರ ಮುಂದಿದ್ದ ಸರ್ವ ಅಡೆತಡೆಗಳನ್ನು sಸೋಲಿಸಿದ ಅಸ್ತ್ರವೇ ಹೊರತು ಖಡ್ಗವಾಗಿರಲಿಲ್ಲ. ನಾನು (ಪ್ರವಾದಿ ಜೀವನಚರಿತ್ರೆಯ) ಎರಡನೇ ಭಾಗವನ್ನು ಓದಿ ಮುಚ್ಚಿದಾಗ ಆ ಶ್ರೇಷ್ಠ ಜೀವನದ ಕುರಿತು ಇನ್ನೆನೋ ಓದಲು ಉಳಿದಿಲ್ಲವೆಂದು ಮರುಕಪಟ್ಟಿದ್ದೆ.”
ಮಹಾತ್ಮಾ ಗಾಂಧಿಯವರು 1924 ರ ಪತ್ರಿಕೆಯಾದ”young India” ದಲ್ಲಿ ಸೃಷ್ಟಿಕರ್ತನ ಅಂತಿಮ ಪ್ರವಾದಿಯಾದ ಮುಹಮ್ಮದರನ್ನು(ಅವರ ಮೇಲೆ ಶಾಂತಿಯಿರಲಿ) ಕುರಿತು ಈ ಮೇಲಿನಂತೆ ಉಲ್ಲೇಖಿಸಿದ್ದಾರೆ.
”ಪ್ರವಾದಿ”ಗಳು ಎಂದರೆ ಯಾರು?
ದೇವನು ನಮ್ಮನ್ನು ಸೃಷ್ಟಿಸಿ ಮಾರ್ಗದರ್ಶನ ಮಾಡದೆ ಹಾಗೆಯೇ ಬಿಟ್ಟುಬಿಡಲಿಲ್ಲ.ನೀವು ಕಾರನ್ನು ಓಡಿಸುವುದು ಹೇಗೆ ಎಂದು ತೋರಿಸಬೇಕಿದ್ದರೆ ಕಾರನ್ನು ಬಳಸುತ್ತೀರೆ ಹೊರತು ಬೈಕನ್ನಲ್ಲ. ಹಾಗೆಯೇ ದೇವನು ನಮ್ಮಿಂದಲೇ ಉತ್ತಮ ವ್ಯಕ್ತಿಗಳನ್ನು ಆರಿಸಿ ಅವರನ್ನು ಸಂದೇಶವಾಹಕ (ಪ್ರವಾದಿ)ರನ್ನಾಗಿ ಮಾಡಿದನು. ಎಲ್ಲ ಸಂದೇಶವಾಹಕರೂ ನಮ್ಮಂತೆ ಮಾನವರೇ ಆಗಿದ್ದರು ವಿನಃ ಅವರಿಗೆ ಯಾವುದೇ ದೈವಿಕ ಶಕ್ತಿಯಿರಲಿಲ್ಲ. ಸಂಸ್ಕೃತದಲ್ಲಿ ಅವರಿಗೆ ”ಮಹರ್ಷಿ”ಗಳೆನ್ನುವರು. ಅವರು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ, ಮಾನವಕುಲದ ನಾಯಕರಾಗಿ ಇತಿಹಾಸದಲ್ಲಿ ಜೀವಿಸಿದ್ದರು. ಭೂಮಿಯ ಎಲ್ಲ ಪ್ರದೇಶಗಳಿಗೆ ಅನ್ವಯಿಸುವಂತೆ ಆಯಾ ಕಾಲದಲ್ಲಿ, ಆಯಾ ಸಮುದಾಯಕ್ಕೆ ಸಂದೇಶವಾಹಕರುಗಳನ್ನು ಕಳುಹಿಸಲಾಗಿತ್ತು. ಪ್ರವಾದಿ ನೂಹ್, ಅಬ್ರಹಾಮ್, ಮೋಸೆಸ್, ಡೇವಿಡ್, ಸೊಲಮನ್, ಯೇಸು (ಇವರೆಲ್ಲರ ಮೇಲೆ ಶಾಂತಿಯಿರಲಿ) ಇವರೆಲ್ಲರೂ ವಿವಿಧ ಕಾಲಘಟ್ಟಗಳ್ಳಲ್ಲಿ ಈ ಭೂಮಿಗೆ ಆಗಮಿಸಿದ ಸಂದೇಶವಾಹಕರುಗಳು. ಪ್ರವಾದಿ ಮುಹಮ್ಮದರವರು ಯಾರು?
ಪ್ರವಾದಿಗಳ ಸುಧೀರ್ಘ ಸರಣಿಯಲ್ಲಿ ಕೊನೆಯ ಮತ್ತು ಅಂತಿಮ ಪ್ರವಾದಿಯಾಗಿ ಆಗಮಿಸಿದವರೇ ಪ್ರವಾದಿ ಮುಹಮ್ಮದ್. ನನ್ನ, ನಿಮ್ಮ ಸಹಿತ; ಅಂತ್ಯದಿನದವರೆಗೆ ಬರುವಂತಹ ಎಲ್ಲಾ ಮಾನವರಿಗೂ ಅವರನ್ನೇ ಪ್ರವಾದಿಯರನ್ನಾಗಿ ಕಳುಹಿಸಲಾಗಿತ್ತು.
ಆರಂಭಿಕ ಜೀವನ:
ಪ್ರವಾದಿ ಮುಹಮ್ಮದರು ”ಮಕ್ಕಾ” ನಗರದ ಖುರೇಷ್ ಎಂಬ ಪಂಗಡದಲ್ಲಿ ಜನಿಸಿದರು. ಆ ಪಂಗಡದವರು ನಗರದ ಆರ್ಥಿಕ ವ್ಯವಸ್ಥೆಯನ್ನು, ರಾಜಕಾರಣವನ್ನೂ ನಿಯಂತ್ರಿಸುತ್ತಿದ್ದರು ಅದರೊಂದಿಗೆ ಅತ್ಯುತ್ತಮ ಸಾಮಾಜಿಕ ಸ್ಥಾನಮಾನವನ್ನೂ ಹೊಂದಿದ್ದರು. ಪ್ರವಾದಿ ಮುಹಮ್ಮದರು ತಮ್ಮ ಜೀವನದ ಆರನೇಯ ವರ್ಷದಲ್ಲಿ ಅನಾಥರಾಗಬೇಕಾಯಿತು. ಪ್ರವಾದಿಯರು ತಮ್ಮ ಅತ್ಯುತ್ತಮ ಗುಣಗಳಾದ ಪ್ರಾಮಾಣಿಕತೆ, ಶ್ರೇಷ್ಠ ಸ್ವಭಾವ, ವಿಶ್ವಾಸಾರ್ಹತೆಗಳಿಂದ ಪ್ರಖ್ಯಾತರಾಗಿದ್ದರು. ಮಕ್ಕಾ ನಗರದ ಜನರು ಅವರನ್ನು ಅಲ್-ಅಮೀನ್ (ವಿಶ್ವಾಸಾರ್ಹ) ಎಂಬ ಬಿರುದಿನಿಂದ ಕರೆಯುತ್ತಿದ್ದರು.
ಪ್ರವಾದಿತ್ವ:
ಪ್ರವಾದಿ ಮುಹಮ್ಮದರು ಅನಕ್ಷರಸ್ತರಾಗಿದ್ದರು. ಅವರ ಜೀವನದ ನಲವತ್ತನೇಯ ವಯಸ್ಸಿನವರೆಗೂ ಅವರೊಬ್ಬ ರಾಜನೀತಜ್ಞ ಅಥವಾ ಬೋಧಕ ಅಥವಾ ಭಾಷಣಕಾರರೆಂದು ಜನರಿಗೆ ತಿಳಿದಿರಲಿಲ್ಲ. ಅವರು ಧಾರ್ಮಿಕ ತತ್ವಗಳನ್ನಾಗಲಿ, ನೈತಿಕತೆಯನ್ನಾಗಲಿ, ಕಾನೂನನ್ನಾಗಲಿ, ರಾಜಕಾರಣವನ್ನಾಗಲಿ, ಅರ್ಥಶಾಸ್ತ್ರವನ್ನಾಗಲಿ ಅಥವಾ ಸಮಾಜಶಾಸ್ತ್ರವನ್ನಾಗಲಿ ಎಂದೂ ಚರ್ಚಿಸಿರಲಿಲ್ಲ. ಅವರು ತಮ್ಮ ಜೀವನದ 40ನೇ ವಯಸ್ಸಿನಲ್ಲಿ ತಮ್ಮ ದಿನದ ಬಹು ಸಮಯವನ್ನು ಮಕ್ಕಾ ನಗರದ ಸಮೀಪದಲ್ಲಿರುವ ”ಹಿರಾ” ಎಂಬ ಗುಹೆಯಲ್ಲಿ ಕಳೆಯಲು ಪ್ರಾರಂಭಿಸಿದರು. ದೇವರ ಧ್ಯಾನ ಮಾಡುವುದೇ ಅವರ ಈ ಅಭ್ಯಾಸದ ಮುಖ್ಯ ಉದ್ದೇಶವಾಗಿತ್ತು. ಆ ದೇವನನ್ನೇ ಇಂಗ್ಲಿಷ್ ಭಾಷೆಯಲ್ಲಿ ”ಉoಜ”, ಹಿಂದಿ ಭಾಷೆಯಲ್ಲಿ ”ಭಗವಾನ” ಎನ್ನುವಹಾಗೆ ಅರಬ್ಬಿ ಭಾಷೆಯಲ್ಲಿ ”ಅಲ್ಲಾಹ್” ಎಂದು ಕರೆಯಲಾಗುತ್ತದೆ. ಹೀಗೆ ಧ್ಯಾನ ಮಾಡುತ್ತಿರುವಾಗ ಒಂದು ದಿನ ಅವರಿಗೆ ಪ್ರಥಮ ದೇವವಾಣಿಯು ಗೆಬ್ರಿಯೀಲ್ ಎಂಬ ದೇವದೂತರ ಮೂಲಕ ದೊರೆಯಿತು. ಹಾಗೆಯೇ ಮುಂದಿನ 23 ವರ್ಷಗಳವರೆಗೆ ವಿವಿಧ ವಿಷಯಗಳ ಕುರಿತು ಅವರು ದೇವವಾಣಿಗಳನ್ನು ಪಡೆದರು. ಆ ವಿಷಯಗಳು ದೇವನ ಏಕತೆ, ಸೃಷ್ಟಿಯ ಉದ್ದೇಶ, ಗತಿಸಿಹೋದ ಪ್ರವಾದಿಗಳ ಜೀವನ ಚರಿತ್ರೆ, ನೈತಿಕತೆ, ಶಿಷ್ಟಾಚಾರಗಳು, ಮರಣಾನಂತರ ಜೀವನ ಮುಂತಾದವುಗಳಾಗಿದ್ದವು. ಈ ದೇವವಾಣಿಗಳ ಸಂಗ್ರಹವನ್ನು ಖುರ್”ಆನ್ ಎನ್ನಲಾಗುತ್ತದೆ. ಇದು ಅಕ್ಷರಶಃ ಸಂಪೂರ್ಣ ದೇವವಾಣಿಯಾಗಿದೆ. ಖುರ್”ಆನನ್ನು ಹೊರತುಪಡಿಸಿ, ಪ್ರವಾದಿ ಮುಹಮ್ಮದರ ಆಜ್ಞೆ, ಹೇಳಿಕೆ ಮತ್ತು ಜೀವನ ಕ್ರಮದ ಪ್ರತ್ಯೇಕ ಸಂಗ್ರಹವಿದೆ ಅದನ್ನು ”ಹದೀತ್” ಎನ್ನಲಾಗುತ್ತದೆ.
ಸಂದೇಶ:
ಪ್ರವಾದಿ ಮುಹಮ್ಮದರು ”ಇಸ್ಲಾಮ್” ಎಂಬ ಹೊಸ ಧರ್ಮವೇನೂ ಸ್ಥಾಪಿಸಲಿಲ್ಲ. ಇಸ್ಲಾಮ್ ಎನ್ನುವುದು ಅರಬ್ಬಿ ಭಾಷೆಯ ಪದವಾಗಿದ್ದು ಇದರರ್ಥವು ಶರಣಾಗತಿ ಹಾಗೂ ದೇವನಿಗೆ ವಿಧೇಯರಾಗಿರುವುದು ಎಂದಾಗುತ್ತದೆ.
ಗತಿಸಿದ ಎಲ್ಲ ಪ್ರವಾದಿಗಳು ಇದನ್ನೇ ಕಲಿಸಿದ್ದರು. ಪ್ರವಾದಿ ಮುಹಮ್ಮದರು ಶರಣಾಗತಿಯ ಮತ್ತು ದೇವನಿಗೆ ವಿಧೇಯತೆಯ ಸಂದೇಶಕ್ಕೆ ಕೇವಲ ಮರುಜೀವವನ್ನಷ್ಟೇ ನೀಡಿದ್ದಾರೆ ಹೊರತಾಗಿ ಹೊಸ ಸಂದೇಶವೇನು ಬೋಧಿಸಲಿಲ್ಲ. ಪ್ರವಾದಿ ಮುಹಮ್ಮದರ ಮುಖ್ಯವಾದ ಕೆಲ ಬೋಧನೆಗಳು ಈ ರೀತಿಯಾಗಿವೆ:
1.ನಮ್ಮ ಜೀವನದ ಪರಮ ಉದ್ದೇಶವು ಕೇವಲ ಸೃಷ್ಟಿಕರ್ತನ ಆರಾಧನೆ ಮತ್ತು ಅನುಸರಣೆಯಾಗಿದೆ ಹಾಗೂ ಆತನನ್ನು ಹೊರತುಪಡಿಸಿ ಬೇರೆಯಾರನ್ನೂ ಆರಾಧಿಸುವಂತಿಲ್ಲ ಅಥವಾ ಅನುಸರಿಸುವಂತಿಲ್ಲ. (ಸೃಷ್ಟಿಕರ್ತನನ್ನು ಆರಾಧಿಸಿ ಅವನ ಸೃಷ್ಟಿಗಳಾದ ಸೂರ್ಯ, ಚಂದ್ರ, ಆಕಾಶ-ಭೂಮಿ, ಮೂರ್ತಿ-ಚಿತ್ರ ಇತ್ಯಾದಿಗಳನ್ನು ಆರಾಧಿಸಬೇಡಿ. ಯಾವ ವಸ್ತುವನ್ನೂ, ಯಾವ ಜೀವಿಯನ್ನೂ ದೇವನ ಸ್ಥಾನಕ್ಕೇರಿಸಬೇಡಿ ಮತ್ತು ಅವನ ಇರುವಿಕೆಯನ್ನು ನಿರಾಕರಿಸಬೇಡಿ)
2.ದೇವನೊಬ್ಬನೇ, ಆತನಿಗೆ ತಂದೆತಾಯಿಯರಾಗಲಿ, ಮಡದಿ ಮಕ್ಕಳಾಗಲಿ ಇರುವುದಿಲ್ಲ ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.
3.ಈ ಭೂಮಿಯಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಸೃಷ್ಟಿಕರ್ತನ ಮುಂದೆ ಉತ್ತರಿಸಬೇಕಾಗುವುದು.
4.ದೇವನು ಜಾತಿ, ಕುಲ, ಗೋತ್ರ, ದೇಹದ ಬಣ್ಣ, ಜನಾಂಗ ಅಥವಾ ಆರ್ಥಿಕ ಸಾಮಥ್ರ್ಯಗಳ ಆಧಾರದ ಮೇಲೆ ಜನರಲ್ಲಿ ತಾರತಮ್ಯ ಮಾಡುವುದಿಲ್ಲ. ದೇವನ ದೃಷ್ಟಿಯಲ್ಲಿ ಎಲ್ಲಾ ಜನರು ಸಮಾನರು.
ಧರ್ಮಬೋಧನೆಯು ಸಂಪತ್ತು, ಅಧಿಕಾರ, ರಾಜ್ಯ ಅಥವಾ ಸ್ತ್ರೀಯರನ್ನು ಪಡೆಯಲಿಕ್ಕಾಗಿರಲಿಲ್ಲ
ಪ್ರವಾದಿ ಮುಹಮ್ಮದರು ತಮ್ಮ ಧರ್ಮಬೋಧನೆಗಳನ್ನು ನಿಲ್ಲಿಸಲು ಮಕ್ಕಾದ ಜನರು ಅವರನ್ನು ರಾಜರನ್ನಾಗಿ ಸ್ವೀಕರಿಸಲು, ಅತ್ಯಂತ ಸುಂದರ ಸ್ತ್ರೀಯರನ್ನು ಮದುವೆಯಲ್ಲಿ ನೀಡಲು, ಭೂಮಿಯ ಎಲ್ಲಾ ಶ್ರೀಮಂತಿಕೆಯನ್ನು ಅವರ ಪಾದಗಳಲ್ಲಿ ಅರ್ಪಿಸಲು ಪ್ರಸ್ತಾಪಿಸಿದರು. ಪ್ರವಾದಿ ಮುಹಮ್ಮದರು ಅವರ ಎಲ್ಲಾ ಆಕರ್ಷಕ ಪ್ರಸ್ತಾಪನೆಗಳನ್ನು ತಿರಸ್ಕರಿಸಿ; ಅವಮಾನಗಳನ್ನು, ಸಾಮಾಜಿಕ ಬಹಿಷ್ಕಾರಗಳನ್ನು, ದೈಹಿಕ ಹಲ್ಲೆಗಳನ್ನು ಸಹಿಸುತ್ತ ಧರ್ಮಬೋಧನೆಯನ್ನು ಮುಂದುವರಿಸಿದರು. ಪ್ರವಾದಿಯರು ದೇವನ ಸಂದೇಶವನ್ನು ಪ್ರಾಪಂಚಿಕ ಲಾಭಗಳಿಗಾಗಿ ಬೋಧಿಸಿಲ್ಲವೆಂದು ಇದರಿಂದ ನಮಗೆ ತಿಳಿದುಬರುತ್ತದೆ.
ರಾಜ್ಯದ ಅಧಿಪತಿಗಳಾಗಿ ಪ್ರವಾದಿಯವರು:
ಮಕ್ಕಾದ ಜನರಿಂದ ದೈಹಿಕ ಮತ್ತು ಮಾನಸಿಕ ಶೋಷಣೆಗಳನ್ನು 13 ವರ್ಷಗಳವರೆಗೆ ತಾಳ್ಮೆಯಿಂದ ಸಹಿಸಿದ ನಂತರ ಮದೀನಾಯೆಂಬ ನಗರಕ್ಕೆ ಪ್ರವಾದಿ ಮುಹ್ಮದ್‍ರು ವಲಸೆ ಹೋದರು. ಅಲ್ಲಿಯ ಜನರು ಅವರನ್ನು ಪ್ರವಾದಿಯರೆಂದು ಸ್ವೀಕರಿಸುವದರೊಂದಿಗೆ ಮದೀನಾ ನಗರದ ಅಧಿಪತಿಯನ್ನಾಗಿ ಸ್ವೀಕರಿಸಿದರು. ಪ್ರವಾದಿ ಮುಹಮ್ಮದರ ಅಂತಿಮ ಸಮಯದಲ್ಲಿ, ಭಾರತದ ವಿಸ್ತಾರದಷ್ಟು ಒಂದು ಭೂಭಾಗವು ಅವರ ಆಳ್ವಿಕೆಯಲ್ಲಿತ್ತು. ಜನಪ್ರಿಯ ಧಾರ್ಮಿಕ ನಾಯಕ ಮತ್ತು ವಿಶಾಲವಾದ ರಾಜ್ಯದ ಅಧಿಪತಿಯಾದರೂ ಸಹ ಪ್ರವಾದಿ ಮುಹಮ್ಮದರು ವಿನಮ್ರತೆಯ ಮತ್ತು ಗಮನಾರ್ಹ ಸರಳತೆಯ ಉದಾಹರಣೆಯನ್ನು ಪ್ರದರ್ಶಿಸಿದರು.
ಪ್ರವಾದಿ ಮುಹಮ್ಮದರ ಸರಳ ಮತ್ತು ವಿನಮ್ರ(ಸಾಧಾರಣ) ಜೀವನ
ಪ್ರವಾದಿ ಮುಹಮ್ಮದರು ಅತ್ಯಂತ ಸರಳ ಮತ್ತು ಬಡತನದ ಜೀವನವನ್ನು ಸಾಗಿಸಿದರು. ಇವರು ಚಿಕ್ಕದಾದ ಒಂದು ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಕೈಗಳಿಂದಲೇ ತಮ್ಮ ಪಾದರಕ್ಷೆಗಳನ್ನು ಸರಿಪಡಿಸುತ್ತಿದ್ದರು, ಚರ್ಮದ ಅಂಗಿಯನ್ನು ಹೊಲಿಯುತ್ತಿದ್ದರು, ಹಾಲು ಕರೆಯುತ್ತಿದ್ದರು. ಒಲೆಯನ್ನು ಗುಡಿಸಿ ಶುಚಿಗೊಳಿಸುತ್ತಿದ್ದರು, ಬೆಂಕಿ ಉರಿಸುತ್ತಿದ್ದರು, ಅಡುಗೆ ಕೆಲಸದಲ್ಲಿ ಮನೆಯವರಿಗೆ ಸಹಾಯ ಮಡುತ್ತಿದ್ದರು. ಪ್ರವಾದಿಯರ ಮದೀನ ಜೀವನದ ಅಂತಿಮ ಘಟ್ಟದಲ್ಲಿ ಆ ಪಟ್ಟಣವು ಸಮೃದ್ಧಿಯ ನೆಲೆವೀಡಾಗಿತ್ತು. ಬೆಳ್ಳಿ ಬಂಗಾರಗಳ ಹೊಳೆ ಹರಿಯಿತು. ಅದರೆ ಆ ಶ್ರೀಮಂತಿಕೆಯ ದಿನಗಳಲ್ಲಿಯೂ ”ಅರೇಬಿಯಾದ ರಾಜನ” ಒಲೆಯಲ್ಲಿ ಹೊಗೆಯಾಡದ ಅದೆಷ್ಟೋ ವಾರಗಳು ಕಳೆದು ಹೋಗಿವೆ. ಖರ್ಜೂರ ಮತ್ತು ನೀರು ಮಾತ್ರ ಅವರ ಆಹಾರವಾಗಿತ್ತು. ನಿಧನಗೊಂಡಾಗ ಕೆಲವು ಬಿಡಿ ನಾಣ್ಯಗಳೇ ಅವರ ಸಂಪತ್ತಾಗಿ ಉಳಿದಿತ್ತು. ಜನರು ಪ್ರವಾದಿಯರಿಗೆ ಗೌರವ ಸೂಚಕವಾಗಿ ಎದ್ದುನಿಲ್ಲುವುದನ್ನು ಅವರು ನಿಷೇಧಿಸಿದ್ದರು. ಅವರಿಗೆ ಅಂಗರಕ್ಷಕರಾಗಲಿ ಅಥವಾ ಮೆನೆಯನ್ನು ಕಾಯಲು ಸೈನಿಕರಾಗಲಿ ಇರಲಿಲ್ಲ. ತಮ್ಮನ್ನು ಅತಿಯಾಗಿ ಹೊಗಳಬೇಡಿ ಎಂದು ಪ್ರವಾದಿ ಮುಹಮ್ಮದರು ಆಜ್ಞೆಮಾಡುತ್ತ ಹೇಳಿದರು, “ಯೇಸು ಕ್ರೈಸ್ತರನ್ನು ಅವರ ಜನರು ಪ್ರಶಂಸಿದಹಾಗೆ ನನ್ನನ್ನು ಅತೀಯಾಗಿ ಪ್ರಶಂಸಿಸಬೇಡಿ, ಆದರೆ ನನ್ನನ್ನು ಅಲ್ಲಾಹನ ದಾಸ ಮತ್ತು ಅವನ ಪ್ರವಾದಿಯೆಂದು ಸಂಭೋದಿಸಿರಿ.”
ಅವರು ಅತ್ಯಂತ ಸಾಧಾರಣ ಮತ್ತು ವಿನಮ್ರ ಗುಣಗಳಿಂದಾಗಿ ತಮ್ಮ ಸಹವರ್ತಿಗಳೊಂದಿಗೆ, ಅವರಲ್ಲಿಯೇ ಒಬ್ಬರ ಹಾಗೆ ಬೆರೆಯುತ್ತಿದ್ದರು, ಯಾರಾದರೂ ಅಪರಿಚಿತರು ಅವರನ್ನು ಭೇಟಿಯಾಗಲು ಬಂದಾಗ ”ನಿಮ್ಮಲ್ಲಿ ದೇವನ ಪ್ರವಾದಿ ಯಾರು?” ಎಂದು ವಿಚಾರಿಸುತ್ತಿದ್ದರು.
ಪ್ರವಾದಿಯರ ಸಮಾನತೆಯ ಬೋಧನೆ ಮತ್ತು ಅಭ್ಯಾಸ
”ಭೂಮಿಯಲ್ಲಿರುವ ಎಲ್ಲ ಮಾನವರು ಒಂದೇ ತಂದೆ-ತಾಯಿಯ ಮಕ್ಕಳು. ಅರಬ್ಬಿನ ಜನಾಂಗದವರು, ಅರಬೇತರರಿಂದ ಶ್ರೇಷ್ಠರಲ್ಲ. ಹಾಗೆಯೇ ಅರಬೇತರರು, ಅರಬ್ಬಿನ ಜನರಿಗಿಂತ ಶ್ರೇಷ್ಠರಲ್ಲ. ಅದೇ ರೀತಿ ಬಿಳಿಯ ಜನರು, ಕಪ್ಪು ಜನರಿಗಿಂತ ಶ್ರೇಷ್ಠರಲ್ಲ ಮತ್ತು ಕಪ್ಪು ಜನರು, ಬಿಳಿಯರಿಗಿಂತ ಶ್ರೇಷ್ಠರಲ್ಲ.ಆದರೆ ದೇವ ಭಯ ಧರ್ಮನಿಷ್ಟೆ ಮತ್ತು ಉತ್ತಮ ಕಾರ್ಯಗಳನ್ನು ವೆಸಗುವವನೇ ಶ್ರೇಷ್ಠನು” ಎಂದು ಪ್ರವಾದಿ ಮುಹಮ್ಮದರು ಘೋಷಿಸಿದರು.ಅದರನುಗುಣವಾಗಿ, ಮಾಜಿ ಕಪ್ಪು ಗುಲಾಮರಾಗಿದ್ದ ಬಿಲಾಲ್ ಎಂಬ ಸಹವರ್ತಿಯನ್ನು,ಇಸ್ಲಾಮಿನ ಅತೀ ಶ್ರೇಷ್ಠ ಕರ್ತವ್ಯವಾದ, ದಿನಕ್ಕೆ 5 ಬಾರಿ ನಮಾಜಿಗಾಗಿ ಜನರನ್ನು ಕೂಗಿ ಕರೆಯುವ ಕೆಲಸವನ್ನು ಪ್ರವಾದಿಯರು ನೇಮಿಸಿದರು.
ಪ್ರವಾದಿ ಮುಹಮ್ಮದ್ ಮತ್ತು ಸಮಾಜ ಸುಧಾರಣೆ
ದೇವರ ಆಜ್ಞೆಗಳನ್ನು ಪಾಲಿಸುತ್ತ, ಜನರಲ್ಲಿ ದೇವರ ಪ್ರಜ್ಞೆಯನ್ನು ಮೂಡಿಸುವುದರೊಂದಿಗೆ ಪ್ರವಾದಿ ಮುಹಮ್ಮದರು ಸಮಾಜ ಸುಧಾರಣೆಯನ್ನು ಕೈಗೊಂಡರು. ಜನರು ತಾವು ಮಾಡುತ್ತಿರುವ ಎಲ್ಲಾ ಕೆಲಸಗಳಿಗೂ ತಾವೇ ಹೊಣೆಗಾರು ಮತ್ತು ಮರಣದ ಬಳಿಕ ಆ ಎಲ್ಲಾ ಕೃತ್ಯಗಳಿಗೆ ಲೆಕ್ಕಾಚಾರವನ್ನು ನೀಡಬೇಕೆಂದು ಜನರಲ್ಲಿ ಪ್ರಜ್ಞೆಯನ್ನು ಮೂಡಿಸಿದರು. ಇವರು ಮುಕ್ತ ವ್ಯಾಪಾರ ಮತ್ತು ನೈತಿಕ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸಿದರು. ಕಾರ್ಮಿಕ ಶೋಷಣೆ ಮತ್ತು ಬಡ್ಡಿಯನ್ನು ಖಂಡಿಸಿದರು. ಮಾದಕ ವಸ್ತುಗಳು, ಮಧ್ಯಪಾನ, ವೇಶ್ಯಾವಾಟಿಕೆಗಳನ್ನು ನಿಷೇಧಿಸುವುದರೊಂದಿಗೆ ಆರೋಗ್ಯಕರ ಜೀವನವನ್ನು ಪ್ರೋತ್ಸಾಹಿಸಿದರು. ಪ್ರವಾದಿ ಮುಹಮ್ಮದರು ಸಂಸಾರಿಕ ಹಿಂಸೆಗಳನ್ನು ಖಂಡಿಸಿ ಮಹಿಳೆಯರಿಗೆ ತಮ್ಮ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಪ್ರೋತ್ಸಾಹಿಸಿದರು. ಅವರು ಪ್ರಾಣಿಗಳ, ಗಿಡಮರಗಳ ಮತ್ತು ಪರಿಸರದ ರಕ್ಷಣೆಯ ಕಾನೂನುಗಳನ್ನು ಸ್ಥಾಪಿಸಿದರು. ಅವರು ಜನರಿಗೆ ಪ್ರಯೋಜನಕಾರಿ ಜ್ಞಾನವನ್ನು ಪಡೆಯಲು ಪ್ರೋತ್ಸಾಹಿಸಿದರು, ಆ ಜ್ಞಾನವನ್ನು ಎಲ್ಲೇ ಪಡೆದರೂ ಸರಿಯೇ; ಇದರ ಪರಿಣಾಮವಾಗಿ ಮುಸಲ್ಮಾನರು ಎಂದೂ ವಿಜ್ಞಾನ ಮತ್ತು ಧರ್ಮದಲ್ಲಿ ಯಾವುದೇ ರೀತಿಯ ಘರ್ಷಣೆಯನ್ನು ಅನುಭವಿಸಲಿಲ್ಲ ಮತ್ತು ಹಲವಾರು ಶತಮಾನಗಳವರೆಗೆ ಈ ಪ್ರಪಂಚದ ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರು.
ಮುಸ್ಲೀಮೇತರರೊಂದಿಗೆ ನಡವಳಿಕೆ(ಸರ್ವ ಧರ್ಮ ಸಹಿಷ್ಣುತೆ)
ಎಲ್ಲ ಜನರನ್ನು, ಅವರ ಧರ್ಮವನ್ನು ಪರಿಗಣಿಸದೇ ಸಮಾನರಾಗಿ ಮತ್ತು ಗೌರವದೊಂದಿಗೆ ಕಾಣುವಂತೆ ಆದೇಶಿಸಿದರು. ಒಂದು ಬಾರಿ ಶವಸಂಸ್ಕಾರಕ್ಕೆ ಜನರು ಪ್ರವಾದಿ ಮುಹಮ್ಮದರ ಎದುರುಗಡೆಯಿಂದ ಸಾಗಿದಾಗ ಅವರು ಎದ್ದು ನಿಂತರು. ಅವರ ಸಂಗಡಿಗರಲ್ಲಿ ಒಬ್ಬರು ”ಇದು ಒಬ್ಬ ಯಹೂದಿಯ ಶವವೆಂದು ತಿಳಿಸಿದಾಗ” ಪ್ರವಾದಿಯರು “ಏಕೆ ಅವನೊಬ್ಬ ಮನುಷ್ಯನಲ್ಲವೇ?” ಎಂದು ಹೇಳಿದರು. ಪ್ರವಾದಿ ಮುಹಮ್ಮದರು ಸ್ವಲ್ಪ ಪ್ರಮಾಣದ ಬಾರ್ಲಿüಗಾಗಿ ತಮ್ಮ ಕವಚವನ್ನು, ತಮ್ಮ ರಾಜ್ಯದ ಪ್ರಜೆಯಾದ ಒಬ್ಬ ಯಹೂದಿಯಲ್ಲಿ ಒತ್ತೆ ಇಟ್ಟ ಘಟನೆಯನ್ನು ಮರೆಯಲಾಗದು. ಇದು, ಮುಸ್ಲಿಮೇತರರು ಸಂಪೂರ್ಣ ಸ್ವತಂತ್ರ್ರವನ್ನು ಅನುಭವಿಸುತ್ತಿದ್ದರು ಎಂದು ತಿಳಿಸುವುದಲ್ಲದೇ, ಮುಸ್ಲೀಮೇತರರು ರಾಜ್ಯದ ಅಧಿಪತಿಗೆ ಸಾಲನೀಡುವಷ್ಟು ಶ್ರೀಮಂತರೂ ಆಗಿದ್ದರು ಎಂದು ಸಾಬೀತುಪಡಿಸುತ್ತದೆ. ಪ್ರವಾದಿ ಮುಹಮ್ಮದರು ಖೈಬರಿನ ಜಮೀನನ್ನು ಬೇಸಾಯಕ್ಕಾಗಿ ಯಹೂದಿಯರಿಗೆ ನೀಡಿದರು. ಅದರ ಉತ್ಪನ್ನಗಳ ಮೇಲೆ ಸಂಪೂರ್ಣ ಅಧಿಕಾರವು ಯಹೂದಿ ಜನಾಂಗದವರದೇ ಆಗಿತ್ತು. ಒಂದು ರಾಜ್ಯದ ಅಧಿಪತಿಯಾಗಿ ಅವರು ಬೇಸಾಯದ ಜಮೀನನ್ನು ಮುಸ್ಲಿಮರಿಗೆ ನೀಡಬಹುದಿತ್ತು ಅಥವಾ ಆ ಸ್ಥಳದಲ್ಲಿ ಮುಸ್ಲಿಮರು ಮಾತ್ರ ವಾಸಿಸಲು ಆದೇಶ ನೀಡಬಹುದಿತ್ತು ಆದರೆ ಪ್ರವಾದಿಯರು ಯಹೂದಿಯರಿಗೆ ಲಾಭವಾಗುವಹಾಗೆ ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದರು. ಈ ಘಟನೆಗಳು, ಇಸ್ಲಾಮ್ ಧರ್ಮದಲ್ಲಿ ಬಲವಂತಪೂರ್ವಕ ಮತಾಂತರಗಳಾಗಿಲ್ಲವೆಂದು ಘೋಷಿಸುತ್ತವೆ.
ಸ್ತ್ರೀ ವಿಮೋಚಕ ಪ್ರವಾದಿ ಮುಹಮ್ಮದ್(ಸ):
ಅವರು ಮಹಿಳೆಯರ ಹಕ್ಕುಗಳನ್ನು ಸ್ಥಾಪಿಸಿದರು. ಮಹಿಳೆಯರ ಅಧಿಕಾರಗಳನ್ನು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಿದರು. ಸ್ತ್ರೀಯರೊಂದಿಗೆ ಕೆಟ್ಟಾಗಿ ನಡೆದುಕೊಳ್ಳುವುದರಲ್ಲಿ ಮತ್ತು ಹೆಣ್ಣು ಮಕ್ಕಳ ಕೊಲೆಯಲ್ಲಿ ಹೆಮ್ಮೆಯನ್ನು ಪಡುತ್ತಿದ್ದ ಕಠೋರ ಸಮುದಾಯವನ್ನು ಪ್ರವಾದಿಯರು ಸುಧಾರಿಸಿದರು. ಮಹಿಳೆಯರಿಗೆ ಸಂಪಾದಿಸುವ(ಗಳಿಸುವ) ಶಿಕ್ಷಣ ಪಡೆಯುವ, ಆಸ್ತಿಯನ್ನು ಪಡೆಯುವ, ತನ್ನ ಜೀವನ ಸಂಗಾತಿಯನ್ನು ಆಯ್ಕೆಮಾಡುವ, ಮರುವಿವಾಹದ, ವಿಚ್ಛೇದನದ ಇನ್ನು ಮುಂತಾದ ಹಕ್ಕುಗಳನ್ನು ಘೋಷಿಸಿದರು. ಇಂತಹ ಹಕ್ಕುಗಳು ವಿಶ್ವದ ಇತರ ಭಾಗಗಳಲ್ಲಿ ನೂರಾರು ವರ್ಷಗಳವರೆಗೂ ಕೇಳಸಿಗುತ್ತಿರಲಿಲ್ಲ.
ಪ್ರವಾದಿ ಮುಹಮ್ಮದರು ತಮ್ಮ ಅತ್ಯುತ್ತಮ ಬೋಧನೆಗಳಿಂದ ಮಹಿಳೆಯರ ಸ್ಥಾನಮಾನ ಮತ್ತು ಹಿರಿಮೆಯನ್ನು ಹೆಚ್ಚಿಸಿದರು. ಆ ಬೋಧನೆಗಳಲ್ಲಿ ಕೆಲವು ಈ ರೀತಿಯಾಗಿವೆ “ಯಾರು ತಮ್ಮ ಮಡದಿಯರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವರೋ ಅವರೇ ನಿಮ್ಮಲ್ಲಿ ಅತ್ಯುತ್ತಮರು”, “ ಈ ಭೂಲೋಕದಲ್ಲಿ ನಿಮ್ಮ ಪ್ರೀತಿಯ(ಸದ್ವರ್ತನೆಯ) ಮತ್ತು ಗೌರವಗಳ ಸಂಪೂರ್ಣ ಮತ್ತು ಪ್ರಪ್ರಥಮ ಹಕ್ಕುದಾರಳು ನಿಮ್ಮ ತಾಯಿಯಾಗಿದ್ದಾಳೆ” ,”ಸ್ವರ್ಗವು ನಿಮ್ಮ ತಾಯಿಯ ಪಾದಗಳಲ್ಲಿ ಅಡಗಿದೆ”. ಮುಂತಾದವುಗಳು.
ಯುದ್ಧಗಳು… ಏಕೆ?
ದೇಶದ ಮೇಲೆ ಯುದ್ಧಸಾರಿ ನೆರೆದೇಶದವರು ಹಲ್ಲೆಮಾಡಿದಾಗ, ತಮ್ಮ ದೇಶದ ಪ್ರಜೆಗಳನ್ನು ರಕ್ಷಿಸುವುದು ಆ ದೇಶದ ಆಡಳಿತಗಾರನ ಕರ್ತವ್ಯವಾಗಿರುತ್ತದೆ. ಉದಾಹರಣೆಗೆ ಕಾರ್ಗಿಲ್ ಯುದ್ಧವಾದಾಗ ನಮ್ಮ ದೇಶದ ಯೋಧರು ಯುದ್ಧದಲ್ಲಿ ಪಾಲ್ಗೊಂಡು, ಗಡಿ ಮತ್ತು ದೇಶದ ಪ್ರಜೆಗಳನ್ನು ರಕ್ಷಿಸಿದರು. ಪ್ರವಾದಿ ಮುಹಮ್ಮದರು ಹೋರಾಡಿದ ಯುದ್ಧಗಳೂ ಸಹ ಇದೇ ರೀತಿಯದ್ದಾಗಿದ್ದವು. ಕೇವಲ ಆತ್ಮರಕ್ಷಣೆ ಮತ್ತು ಪ್ರಜೆಗಳ ರಕ್ಷಣೆಗಾಗಿ ಈ ಯುದ್ಧಗಳನ್ನು ಕೈಗೊಳ್ಳಬೇಕಾಗಿತ್ತು. ವಾಸ್ತವದಲ್ಲಿ ಅಲ್ಲಾಹನು ಖುರಾನಿನಲ್ಲಿ ಹೇಳುತ್ತಾನೆ, “ಓ ಪ್ರವಾದಿಗಳೇ, ಶತ್ರುವು ಶಾಂತಿ ಸಂಧಾನಗಳ ಕಡೆಗೆ ವಾಲಿದರೆ, ನೀವೂ ಅದಕ್ಕೆ ಸಿದ್ಧರಾಗಿರಿ” [ಖುರ್”ಆನ್ ಆಧ್ಯಾಯ 8 ಸೂಕ್ತಿ 61]
ವೇದ ಗ್ರಂಥಗಳಲ್ಲಿ ಪ್ರವಾದಿ ಮುಹಮ್ಮದ್:
ಹಿಂದು ಧರ್ಮದ ಮಹಾನ್ ವಿದ್ವಾಂಸರಾದಂತಹ ”ಪಂಡಿತ್ ವೇದ ಪ್ರಕಾಶ ಉಪಾಧ್ಯಾಯರು”, ಸಂಸ್ಕøತದ ಮಹಾನ್ ಪಂಡಿತರಾಗಿದ್ದರು ಮತ್ತು ಅಲ್ಹಾಬಾದ್ ವಿಶ್ವವಿದ್ಯಾಲಯದಲ್ಲಿ ಅವರು ಸಂಶೋಧಕ ವಿದ್ವಾಂಸರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವೇದ, ಉಪನಿಷತ್‍ಗಳ ಹಲವಾರು ವರ್ಷಗಳ ಕಠಿಣ ಅಧ್ಯಯನ ಮತ್ತು ಸಂಶೋಧನೆಯ ನಂತರ ಅವರು 1969 ರಲ್ಲಿ “ಕಲ್ಕಿ ಅವತಾರ ಔರ ಮುಹಮ್ಮದ ಸಾಹೆಬ್” ಎಂಬ ಪುಸ್ತಕವನ್ನು ಪ್ರಕಟಿಸಿದರು. ಆ ಪುಸ್ತಕದ ಮೂಲಕ ಪ್ರವಾದಿ ಮುಹಮ್ಮದರೇ ಅಂತಿಮ ಋಷಿಯೆಂದು (ಕೊನೆಯ ಪ್ರವಾದಿ) ಸಾಬೀತುಪಡೆಸಿದರು. ಕಲ್ಕಿ ಪುರಾಣದಲ್ಲಿ ಹಾಗೂ ಭವಿಷ್ಯ ಪುರಣಾದಲ್ಲಿ ಉಲ್ಲೇಖಿಸಿರುವ ಮುಹಮ್ಮದ್ ಮತ್ತು ವೇದಗಳಲ್ಲಿ ಉಲ್ಲೇಖಿಸಿರುವ ನರಶಂಸ (ಸ್ತುತಿಸಲ್ಪಡುವವನು) ಮುಂತಾದ ಹೆಸರುಗಳಿಂದ ಉಲ್ಲೇಖಿಸಲ್ಪಟ್ಟಿದ್ದಾರೆಂದು ಘೋಷಿಸಿದರು. ಅದೇ ರೀತಿ ಮಾಜಿ ಕೆಥೋಲಿಕ್ ಬಿಷಪ್ (ಧರ್ಮಾಧಿಪತಿ)ಯರಾದಂತಹ ”ಬೆಂಜಮಿನ್ ಕೆಲ್‍ದಾನಿ” ರವರು “Muhammed in the Bible” ಎಂಬ ಪುಸ್ತಕವನ್ನು 1928 ರಲ್ಲಿ ಪ್ರಕಟಿಸಿದರು ಮತ್ತು ಪ್ರವಾದಿ ಮುಹಮ್ಮದರು ಬೈಬಲ್ಲಿನ ವಿವಿಧ ಪುಸ್ತಕಗಳಾದ ಧರ್ಮೋಪದೇಶಕಾಂಡ(Deuteronomy) 18:18-19, ಯೇಶಾಯನು(Isaiah) 42:19, ಯೊವಾನ್ನ(John) 1:21, 14:16, 15:26, 16:7 ಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದಾರೆಂದು ಸಾಬೀತು ಪಡಿಸಿದರು.
ಮಾನವ ಕುಲಕ್ಕೆ ಆದರ್ಶ ವ್ಯಕ್ತಿ
(ಈ ಹಿಂದೆ) ಎಲ್ಲಾ ಸಮುದಾಯ ಅಥವಾ ರಾಷ್ಟ್ರಕ್ಕೂ ಒಬ್ಬ ಪ್ರವಾದಿಯನ್ನು ನಿಯೋಜಿಸಲಾಗಿತ್ತು. ಆ ಪ್ರವಾದಿಗಳಲ್ಲಿ ಕೆಲವರಿಗೆ ದೈವಿಕ ಗ್ರಂಥವನ್ನೂ ನೀಡಲಾಗಿತ್ತು. ಆದರೆ ಜನರು ತಮ್ಮ ಸ್ವಾರ್ಥ ಮತ್ತು ಆಸಕ್ತಿಗನುಗುಣವಾಗಿ ಆ ಗ್ರಂಥಗಳನ್ನು ಬದಲಾಯಿಸಿದರು. ದೇವನ ನೈಜ ಮತ್ತು ಪವಿತ್ರ ಸಂದೇಶವನ್ನು ಕಲುಷಿತಗೊಳಿಸಿದರು. ಆದಕಾರಣದಿಂದ ದೇವನು ತನ್ನ ಅಂತಿಮ ದೈವವಾಣಿಯನ್ನು ಪ್ರವಾದಿ ಮುಹಮ್ಮದರಿಗೆ ಅವತೀರ್ಣಗೊಳಿಸಿದನು. ಆ ದೈವವಾಣಿಗಳ ಸಮೂಹವೇ ಖುರ್”ಆನ್ ಆಗಿದೆ ಮತ್ತು ಈ ಗ್ರಂಥವನ್ನು ಎಲ್ಲಾ ರೀತಿಯ ಬದಲಾವಣೆಗಳಿಂದ ರಕ್ಷಿಸುವ ಹೊಣೆಯನ್ನೂ ಸಹ ದೇವನೇ ಹೊತ್ತಿಕೊಂಡಿದ್ದಾನೆ.
ಪ್ರವಾದಿ ಮುಹಮ್ಮದರು ಅರಬರ ರಾಷ್ಟ್ರೀಯ ಮುಖಂಡರಲ್ಲ ಹೊರತಾಗಿ ವಿಶ್ವದ ಎಲ್ಲ ಮಾನವರಿಗೂ ಅವರ ರಾಷ್ಟ್ರೀಯತೆ ಸಂಸ್ಕøತಿಯನ್ನು ಪರಿಗಣಿಸದೇ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಲು ಬಂದ ಅನುಗ್ರಹವಾಗಿದ್ದಾರೆ. ಇವರು ವಿಶ್ವ ಸಹೋದರತೆಯನ್ನು ಬೋಧಿಸಿದರು.
ಎಲ್ಲ ಜನರನ್ನು ಒಬ್ಬನೇ ದೇವನು ಸೃಷ್ಟಿಸಿದ್ದಾನೆ ಎಂದು ಬೋಧಿಸಿ, ಒಂದೇ ಕುಟುಂಬದ ಸದಸ್ಯರಹಾಗೆ ಕಾಣುತ್ತಿದ್ದರು. ಇವರ ಬೋಧನೆಗಳು ಎಲ್ಲ ಮಾನವರ ಸಮಸ್ಯೆಗಳ ಮೂಲವನ್ನು ಸಂಭೊಧಿಸುತ್ತವೆ ಮತ್ತು ಅವುಗಳಿಗೆ ಅತ್ತ್ಯುತ್ತಮ ಪರಿಹಾರವನ್ನೂ ನೀಡುತ್ತವೆ. ಆ ಪರಿಹಾರಗಳು ದೇವರ ಆಜ್ಞೆಗಳನ್ನು ಉಲ್ಲಂಘಿಸುವುದಿಲ್ಲ. ಮಾನವರಲ್ಲಿ ಅತ್ತ್ಯುತ್ತಮರನ್ನೇ ದೇವನು ಪ್ರವಾದಿಯರನ್ನಾಗಿ ಮಾಡುತ್ತಾನೆ. ಪ್ರವಾದಿ ಮುಹಮ್ಮದರನ್ನು ಅಂತಿಮ ಪ್ರವಾದಿಯನ್ನಾಗಿ ಕಳುಹಿಸಲಾಗಿತ್ತು ಮತ್ತು ಮಾನವ ಕುಲಕ್ಕೆ ಒಬ್ಬ ಆದರ್ಶ ವ್ಯಕ್ತಿಯೆಂದು ಪೋಷಿಸಲಾಯಿತು. ಆದ್ದರಿಂದ ಪ್ರವಾದಿ ಮುಹಮ್ಮದರ ಸಂದೇಶ, ಬೋಧನೆ ಅಥವಾ ವಚನಗಳನ್ನು ತಿಳಿದುಕೊಳ್ಳುವುದು ಹಾಗು ಜೀವನದಲ್ಲಿ ಖುರಾನಿನ ನೈತಿಕ ಶಿಕ್ಷಣವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಇದರಿಂದ ಮಾತ್ರ ಈ ಜೀವನದಲ್ಲೂ ಮತ್ತು ಪರಲೋಕದ ಜೀವನದಲ್ಲೂ ಸಫಲರಾಗಿ ಮೋಕ್ಷಪ್ರಾಪ್ತಿಯಾಗಲು ಸಾಧ್ಯ.
ಈ ಕರಪತ್ರವು ಪ್ರವಾದಿ ಮುಹಮ್ಮದರ ಜೀವನ ಮತ್ತು ಸಂದೇಶವನ್ನು ತಿಳಿಯಲು ನಿಮಗೆ ಸಹಾಯ ಮಾಡಿದೆ ಎಂದು ನಂಬುತ್ತೇವೆ.