ಇಸ್ಲಾಮ್ ಕುರಿತ ಸಂಶಯಗಳು ಭಾಗ – 1

ಉತ್ತರ: "ಇಸ್ಲಾಂ" ಎಂಬ ಅರೇಬಿಕ್ ಪದವು ಶಾಂತಿ ಮತ್ತು ಸಮರ್ಪಣೆ ಎಂಬ ಅರ್ಥವನ್ನೊಳಗೊಂಡಿದೆ. ಶಾಂತಿ ಎಂದರೆ ನಿಮ್ಮೊಳಗೆ ಮತ್ತು ನಿಮ್ಮ ಸುತ್ತಲೂ ಶಾಂತವಾಗಿರುವುದು. ಹಾಗೆಯೇ ಸಮರ್ಪಣೆ ಎಂದರೆ ಏಕಮಾತ್ರ ಸೃಷ್ಟಿಕರ್ತನ ಆರಾಧಕ, ಮತ್ತು ಲೋಕಗಳ ಒಡೆಯನಾದ ಅಲ್ಲಾಹನ ಚಿತ್ತಕ್ಕೆ ಸ್ವಯಂಪ್ರೇರಿತವಾಗಿ ಅರ್ಪಿಸುವುದು. ಇಸ್ಲಾಂ ಧರ್ಮವು ನೈತಿಕ ಮೌಲ್ಯಗಳು ಮತ್ತು ಜೀವನ ವಿಧಾನವನ್ನು ಪ್ರತಿನಿಧಿಸುವ ಹೆಸರಿನೊಂದಿಗಿನ ಸಂಪೂರ್ಣವಾಗಿ ವಿಶಿಷ್ಟವಾದ ಧರ್ಮವಾಗಿದೆ. ಜುಡಾಯಿಸಂ ತನ್ನ ಹೆಸರನ್ನು ಜುಡಾ ಬುಡಕಟ್ಟಿನಿಂದ ಪಡೆದುಕೊಂಡಿದ್ದರೆ, ಕ್ರಿಶ್ಚಿಯನ್ ಧರ್ಮವು ಕ್ರಿಸ್ತನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ, ಬೌದ್ಧಧರ್ಮವು ಗೌತಮ ಬುದ್ಧನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ ಮತ್ತು ಹಿಂದೂ ಧರ್ಮವು ಸಿಂಧೂ ನದಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.

ಆದರೆ ಮುಸ್ಲಿಮರು ತಮ್ಮ ಗುರುತನ್ನು ಇಸ್ಲಾಂ ಹೆಸರಿನಿಂದ ತೆಗೆದುಕೊಳ್ಳುತ್ತಾರೆಯೇ ಹೊರತು ಪ್ರವಾದಿ ಮುಹಮ್ಮದ್(ಸ) ಹೆಸರಿನಿಂದಲ್ಲ.

ಆದ್ದರಿಂದ, ಅವರನ್ನು "ಮುಹಮ್ಮದೀಯರು" ಎಂದು ಕರೆಯುವುದು ಸರಿಯಲ್ಲ.

ಉತ್ತರ: ಅಲ್ಲಾಹ್ ಎಂಬುದು ಅರೇಬಿಕ್ ಭಾಷೆಯ "ಏಕೈಕ ಆರಾಧ್ಯ, ಸೃಷ್ಟಿಕರ್ತ ಮತ್ತು ವಿಶ್ವದ ಪ್ರಭು" ಎಂಬ ಅರ್ಥವುಳ್ಳ ಹೆಸರು. ಅಲ್ಲಾಹನು ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತನಾದ ಆರಾಧಕನಲ್ಲ, ಅವನ ಸೃಷ್ಟಿಯಲ್ಲಿ ಎಲ್ಲದಕ್ಕೂ ಆರಾಧ್ಯನು ಏಕೆಂದರೆ ಅವನೇ ಎಲ್ಲವನ್ನೂ ಸೃಷ್ಟಿಸಿ ಪೋಷಿಸುವವನು. ಅರೇಬಿಕ್ ಭಾಷೆಯಲ್ಲಿ ಅಲ್ಲಾಹ್.

ಉತ್ತರ: ಇಲ್ಲವೇ ಇಲ್ಲ. ವಾಸ್ತವವಾಗಿ, ಅಲ್ಲಾಹ್ ಏಕೈಕನು ಮತ್ತು ಸಂಪೂರ್ಣನು. ಅವನು ತನ್ನ ಸೃಷ್ಟಿಯಲ್ಲಿ ಯಾವುದನ್ನೂ ಹೋಲುವುದಿಲ್ಲ. ಅಲ್ಲಾಹನ ಕುರಿತಾಗಿ ಅಲಾಹನೇ ಬಹಿರಂಗಪಡಿಸಿದ ಹೊರತುಪಡಿಸಿ ಒಬ್ಬ ಮುಸ್ಲಿಮನು ಅಲ್ಲಾಹನ ಕುರಿತು ಏನನ್ನೂ ಸ್ವತಃ ಹೇಳಲು ಸಾಧ್ಯವಾಗುವುದಿಲ್ಲ.

ಉತ್ತರ: ಕಾಬಾವು ಎಲ್ಲಾ ಮುಸ್ಲಿಮರು ತಮ್ಮ ಐದು ದೈನಂದಿನ ಪ್ರಾರ್ಥನೆಗಳಿಗಾಗಿ ಪರಸ್ಪರ ಅಭಿಮುಖವಾಗಿ ನಿಂತಿರುವ ಆರಾಧನಾ ಸ್ಥಳವಾಗಿದೆ. ಅಲ್ಲಾಹನು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ(ಅ) ಮತ್ತು ಪ್ರವಾದಿ ಇಸ್ಮಾಯಿಲ್(ಅ) ಅವರಿಗೆ ಇದನ್ನು ನಿರ್ಮಿಸಲು ಆದೇಶಿಸಿದನು. ಅದೊಂದು ಕಲ್ಲಿನ ಕಟ್ಟಡ. ಪ್ರವಾದಿ ಆದಮ್(ಅ) ನಿರ್ಮಿಸಿದ ಅಲ್ಲಾಹನ ಮೊಟ್ಟಮೊದಲ ದೇವಾಲಯದ ಮೂಲ ಅಡಿಪಾಯದ ಮೇಲೆ ಇದನ್ನು ನಿರ್ಮಿಸಲಾಗಿದೆ ಎಂದು ಹಲವರು ನಂಬುತ್ತಾರೆ. ಅಲ್ಲಾಹನು ಇಬ್ರಾಹಿಂ(ಅ) ಅವರಿಗೆ ಎಲ್ಲಾ ಮಾನವಕುಲವನ್ನು ಭೇಟಿ ಮಾಡಲು ಆಹ್ವಾನಿಸಲು ಆದೇಶಿಸಿದನು. ಪ್ರವಾದಿ ಇಬ್ರಾಹಿಂ(ಅ) ಅವರ ಕರೆಗೆ ಓಗೊಟ್ಟು, ಯಾತ್ರಿಕರು ಸ್ಥಳವನ್ನು ತಲುಪಿದ ನಂತರ 'ಲಬ್ಬೈಕ್ ಅಲ್ಲಾಹುಮ್ಮ ಲಬ್ಬೈಕ್' ಅಂದರೆ 'ನಾವು ಹಾಜರಾಗಿದ್ದೇವೆ, ಓ ಕರ್ತನೇ, ನಾವು ಹಾಜರಾಗಿದ್ದೇವೆ' ಎಂದು ಹೇಳುತ್ತಾರೆ. ಕಾಬಾ ಎಂದರೆ ಚೌಕ. ಕಅಬ್ ಎಂದರೆ ಉನ್ನತ, ಘನತೆ.

 
 

 

 

ಉ: "ಮುಸ್ಲಿಮ್" ಎಂಬ ಪದವು ಸ್ವಯಂಪ್ರೇರಣೆಯಿಂದ ಮತ್ತು ಪೂರ್ಣ ಹೃದಯದಿಂದ ಅಲ್ಲಾಹನ ಚಿತ್ತಕ್ಕೆ ತನ್ನನ್ನು ತಾನು ಸಮರ್ಪಿಸುವವನು ಎಂದರ್ಥ, "ಅಲ್ಲಾಹನ ಹೊರತುಪಡಿಸಿ ಯಾವುದೇ ದೇವರು ಇಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸ ಮತ್ತು ಪ್ರವಾದಿ ಎಂದು ನಾನು ಸಾಕ್ಷಿ ಹೇಳುತ್ತೇನೆ". ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾರು ತನ್ನ ಇಚ್ಛೆಯನ್ನು ಅಲ್ಲಾಹನ ಇಚ್ಛೆಗೆ ಸಮರ್ಪಿಸುತ್ತಾನೋ ಅವರನ್ನು ಮುಸ್ಲಿಮ್ ಎಂದು ಕರೆಯಲಾಗುತ್ತದೆ. ಆದುದರಿಂದ ಪ್ರವಾದಿ ಮುಹಮ್ಮದ್(ಸ.ಅ)ರವರಿಗೆ ಮೊದಲು ಆಗಮಿಸಿದ ಪ್ರವಾದಿಗಳೆಲ್ಲರೂ ಮುಸ್ಲಿಮರೇ ಆಗಿದ್ದರು. ಖುರಾನ್ ದಿವ್ಯಗ್ರಂಥದಲ್ಲಿ ನಿರ್ದಿಷ್ಟವಾಗಿ ಮೂಸಾ(ಅ)  ಮತ್ತು ಇಸಾ(ಅ)  ಅವರಿಗಿಂತ ಬಹಳ ಹಿಂದೆಯೇ ಜೀವಿಸಿದ ಇಬ್ರಾಹಿಂ(ಅ) ಅವರನ್ನು ಉಲ್ಲೇಖಿಸುತ್ತಾ, "ಅವನು (ಇಬ್ರಾಹಿಂ) ಯಹೂದಿ ಅಥವಾ ಕ್ರಿಶ್ಚಿಯನ್ ಆಗಿರಲಿಲ್ಲ, ಆದರೆ ಅವನು ಮುಸ್ಲಿಮನಾಗಿದ್ದನು, ಏಕೆಂದರೆ ಅವನು ಅಲ್ಲಾಹನ ಚಿತ್ತಕ್ಕೆ ವಿಧೇಯನಾದನು".

ಆದ್ದರಿಂದ ಕೆಲವು ಮುಸ್ಲಿಮರು ಯಾವಾಗಲೂ ಅಲ್ಲಾಹನನ್ನು ಸಾಧ್ಯವಾದಷ್ಟು ಮೆಚ್ಚಿಸಲು ಮತ್ತು ಅವನ ಹೊಗಳಿಕೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಅಲ್ಲಾಹನ ಇಚ್ಛೆಗೆ ಅಧೀನರಾಗದೆಯೂ ಮತ್ತು ಇಸ್ಲಾಮಿನ ಹೆಸರಿನಲ್ಲಿ ಯಾವಾಗಲೂ ಕೆಟ್ಟ ಕೆಲಸಗಳನ್ನು ಮಾಡುತ್ತಲೂ ಮತ್ತು ತಮ್ಮ ನಿಜವಾದ ಧರ್ಮದ ಕುರಿತು ಎಂದಿಗೂ ಕಾಳಜಿ ವಹಿಸದೆಯೂ ಹೆಸರಿಗೆ ಮಾತ್ರ ಮುಸ್ಲಿಮರು ಎಂದು ಕರೆಯಲ್ಪಡುವವರೂ ಇದ್ದಾರೆ.

ಹಾಗಾಗಿ ಅಂತಹವರ ನಡವಳಿಕೆಯನ್ನು ಆಧರಿಸಿ ಇಸ್ಲಾಮಿನ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಇಸ್ಲಾಂ ಪರಿಪೂರ್ಣವಾಗಿದೆ ಆದರೆ ಮನುಷ್ಯರಾಗಿರುವುದರಿಂದ ಮುಸ್ಲಿಮರು ಪರಿಪೂರ್ಣರಲ್ಲ. ನಿಜವಾದ ಇಸ್ಲಾಂ ಧರ್ಮವನ್ನು ತಿಳಿದುಕೊಳ್ಳಬೇಕಾದರೆ, ಅವನು ಇಸ್ಲಾಂ ಧರ್ಮವನ್ನು ಅಧ್ಯಯನ ಮಾಡಬೇಕೇ ಹೊರತು ಮುಸ್ಲೀಮರನ್ನಲ್ಲ.

ಉ: ಸಂಕ್ಷಿಪ್ತವಾಗಿ, ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಮಕ್ಕಾದ ಅತ್ಯುತ್ತಮ ಬುಡಕಟ್ಟುಗಳಲ್ಲಿ ಒಂದಾದ ಖುರೈಶ್ ಬುಡಕಟ್ಟಿನವರು. ಕ್ರಿ.ಶ 570 ರಲ್ಲಿ ಜನಿಸಿದರು.

ಅವರು ಪ್ರವಾದಿ ಇಬ್ರಾಹಿಂ(ಅ)ರವರ ಹಿರಿಯ ಪುತ್ರ ಪ್ರವಾದಿ ಇಸ್ಮಾಯಿಲ್(ಅ) ಅವರ ವಂಶಕ್ಕೆ ಸೇರಿದವರು. ಅವರು ಹುಟ್ಟುವ ಮೊದಲೇ ಅವರ ತಂದೆ ನಿಧನರಾದರು ಮತ್ತು ಅವರು ಆರು ವರ್ಷದವರಾಗಿದ್ದಾಗ, ಅವರ ತಾಯಿ ಕೂಡ ನಿಧನರಾದರು. ಅವರು ಯಾವ ಶಾಲೆಯಲ್ಲಿಯೂ ಓದಿಲ್ಲ. ಏಕೆಂದರೆ ಆ ಕಾಲದ ಪದ್ಧತಿಯ ಪ್ರಕಾರ ಅವರು ತನ್ನ ಬಾಲ್ಯದಲ್ಲಿ ಒಂದು ಹಳ್ಳಿಯಲ್ಲಿದ್ದರು.

ಮೊದಲಿಗೆ ಹಲೀಮಾ ಎಂಬ ಹೆಸರಿನ ಹಾಲುಡಿಸುವಾಕೆಯ ಬಳಿ ಬೆಳೆದರು, ನಂತರದ ಕೆಲವು ಕಾಲ ಅವರು ತಮ್ಮ ಅಜ್ಜನೊಟ್ಟಿಗೂ ಮತ್ತು ಚಿಕ್ಕಪ್ಪರ ಬಳಿಯೂ ಬೆಳೆದರು. ಅವರ ಯೌವನದಲ್ಲಿ ಅವರು ಅತ್ಯುತ್ತಮ, ನಿಷ್ಕಳಂಕ, ಸತ್ಯವಂತ, ದಯಾಮಯಿ, ಗೌರವಾನ್ವಿತ ಮತ್ತು ಪ್ರಾಮಾಣಿಕ ಎಂದು ಖ್ಯಾತಿ ಪಡೆದಿದ್ದರು. ಆಗಾಗ್ಗೆ ಹಿರಾ ಎಂಬ ಗುಹೆಯಲ್ಲಿ ಏಕಾಂತದಲ್ಲಿ ದಿನಗಳನ್ನು ಕಳೆಯುತ್ತಿದ್ದರು.

ಉತ್ತರ: ತಮ್ಮ 40 ನೇ ವಯಸ್ಸಿನಲ್ಲಿ, ಮೊದಲ ಬಾರಿಗೆ ಹೀರಾ ಗುಹೆಯಲ್ಲಿ ಏಕಾಂತದಲ್ಲಿದ್ದಾಗ, ದೇವದೂತ ಜಿಬ್ರೀಲ್ ಅಲೈಹಿಸ್ಸಲಾಮ್ ಅವರಿಗೆ ಕಾಣಿಸಿಕೊಂಡು. ಅಲ್ಲಾಹನಿಂದ ಮೊದಲ ದಿವ್ಯಸಂದೇಶ ತಲುಪಿಸಿ, ಅಲ್ಲಾಹನು ಆತನನ್ನು ಅಂತಿಮ ಪ್ರವಾದಿಯನ್ನಾಗಿ ಆರಿಸಿಕೊಂಡ ವಿಚಾರವನ್ನು ತಿಳಿಸಿದರು. ಆ ದಿನದಿಂದ 23 ವರ್ಷಗಳವರೆಗೆ ದಿವ್ಯವಾಣಿ ಅವನ ಮೇಲೆ ಅವತೀರ್ಣಗೊಂಡಿತು. ಅವುಗಳನ್ನು ಅವರ ಸಹಚರರು ಕುರಾನ್ ಗ್ರಂಥವಾಗಿ ಎಂದು ಸಂಕಲಿಸಿದ್ದಾರೆ.

ಇದು ವಿಶ್ವದ ಸೃಷ್ಟಿಕರ್ತನಾದ ಅಲ್ಲಾಹನು ಸಮಸ್ತ ಮನುಕುಲಕ್ಕೆ ಕಳುಹಿಸಿದ ಅಂತಿಮ ದಿವ್ಯ ಸಂದೇಶವಾಗಿದೆ. ದೈವಿಕ ಕುರಾನ್ ಅದರ ಮೂಲ ಅವತೀರ್ಣಗೊಂಡ ರೂಪದಲ್ಲಿಯೇ ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ. ಯಾವುದೇ ಬದಲಾವಣೆಗಳನ್ನು ಎಂದಿಗೂ ಮಾಡಲಾಗಿಲ್ಲ. ತೋರಾ(Torah), ಕೀರ್ತನೆಗಳು(Psalms) ಮತ್ತು ಯೇಸುವಿನ ಸುವಾರ್ತೆಗಳ(Gospels) ಸತ್ಯಗಳನ್ನು ಪುನರುಚ್ಚರಿಸುತ್ತದೆ[1].

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಪ್ರವಾದಿ ಜಿಬ್ರೀಲ್ ಅಲೈಹಿಸ್ಸಲಾಮ್ ಅವರಿಂದ ಕೇಳಿದ ವಾಕ್ಯಗಳನ್ನು ಪಠಿಸಲು ಪ್ರಾರಂಭಿಸಿದರು. ಮತ್ತು ಅಲ್ಲಾಹನು ತನಗೆ ಪ್ರಕಟಿಸಿದ ಸತ್ಯದ ಸಂದೇಶಗಳನ್ನು ಜನರಿಗೆ ಕಲಿಸಲು ಆರಂಭಿಸಿದರು. ಇದರಿಂದ ಅವರು ಮತ್ತು ಅವನ ಸಣ್ಣ ಗುಂಪಿನ ಸಹಚರರು ತೀವ್ರ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಎದುರಿಸಬೇಕಾಯಿತು. ಅದು ಎಷ್ಟು ವಿಪರೀತವಾಗಿತ್ತೆಂದರೆ, ಕೆಲವು ಕಾಲಗಳ ನಂತರ ಅಲ್ಲಾಹನು ಅವನಿಗೆ ಬೇರೆ ಸ್ಥಳಕ್ಕೆ ವಲಸೆ ಹೋಗಲು ಅನುಮತಿ ನೀಡಿದನು. ಮಕ್ಕಾದಿಂದ ಮದೀನಕ್ಕೆ ಈ ಅವರ ವಲಸೆಯನ್ನು ಹಿಜ್ರತ್ ಎಂದು ಕರೆಯಲಾಗುತ್ತದೆ. ಈ ಆಧಾರದ ಮೇಲೆಯೇ ಇಸ್ಲಾಮಿನ ಕ್ಯಾಲೆಂಡರ್ ಅನ್ನು ತಯಾರಿಸಲಾಗಿದೆ.

ಕೆಲವು ಕಾಲಗಳ ನಂತರ, ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಮತ್ತು ಅವನ ಸಹಚರರು ಹೋಲಿಸಲಾಗದ ವಿಜಯಶಾಲಿಗಳಾಗಿ ಮಕ್ಕಾ ನಗರವನ್ನು ಪ್ರವೇಶಿಸಿದರು, ತಮ್ಮ ಮೇಲೆ ಅನೇಕ ದೌರ್ಜನ್ಯಗಳು, ದುಷ್ಕೃತ್ಯಗಳನ್ನು ಮಾಡಿದ ಶತ್ರುಗಳನ್ನು ಕ್ಷಮಿಸಿ, ಇಸ್ಲಾಂ ಅನ್ನು ಸ್ಥಾಪಿಸಿದರು. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ತಮ್ಮ 63 ನೇ ವಯಸ್ಸಿನಲ್ಲಿ ನಿಧನರಾದರು. ಅರೇಬಿಯನ್ ಪೆನಿನ್ಸುಲಾದ ಹೆಚ್ಚಿನ ಭಾಗವು ಇಸ್ಲಾಂ ಧರ್ಮವನ್ನು ಅನುಸರಿಸುವುದನ್ನು ಮುಂದುವರೆಸಿತು. ಅವರ ಮರಣದ ನಂತರ, ಇಸ್ಲಾಂ ಪೂರ್ವ ಚೀನಾದವರೆವಿಗೂ ಮತ್ತು ಪಶ್ಚಿಮಕ್ಕೆ ಸ್ಪೇನ್‌ನವರೆಗೂ ಹರಡಿತು.

ಉ: ಖಂಡಿತವಾಗಿಯೂ ಇಲ್ಲ. ಮುಸ್ಲಿಮರು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅಥವಾ ಇತರ ಯಾವುದೇ ಪ್ರವಾದಿಯನ್ನು ಪೂಜಿಸುವುದಾಗಲಿ ಆರಾಧಿಸುವುದಾಗಲಿ ಮಾಡುವುದಿಲ್ಲ. ಆದಮ್ ಅಲೈಹಿಸ್ಸಲಾಮ್, ನೋಹಾ ಅಲೈಹಿಸ್ಸಲಾಮ್, ಇಬ್ರಾಹಿಂ ಅಲೈಹಿಸ್ಸಲಾಮ್, ದಾವೂದ್ ಅಲೈಹಿಸ್ಸಲಾಮ್, ಸುಲೈಮಾನ್ ಅಲೈಹಿಸ್ಸಲಾಮ್, ಮೂಸಾ ಅಲೈಹಿಸ್ಸಲಾಮ್ ಮತ್ತು ಜೀಸಸ್ ಅಲೈಹಿಸ್ಸಲಾಮ್ ಮೊದಲಾದ ಪ್ರವಾದಿಗಳ ಜೊತೆಗೂಡಿ ಎಲ್ಲಾ ಪ್ರವಾದಿಗಳನ್ನು ಮುಸ್ಲೀಮರು ನಂಬುತ್ತಾರೆ. ಅಲ್ಲಾಹನ ಪ್ರವಾದಿಗಳ ಸಾಲಿನಲ್ಲಿ ಪ್ರವಾದಿ ಮುಹಮ್ಮದ್ (ಸ) ಕೊನೆಯ ಹಾಗೂ ಅಂತಿಮ ಪ್ರವಾದಿ ಎಂದು ಕೂಡ ನಂಬುತ್ತಾರೆ. ಅಲ್ಲಾಹನು ಮಾತ್ರ ಆರಾಧನೆಗೆ ಅರ್ಹನೆಂದೂ, ಯಾವ ಮನುಷ್ಯನೂ ಪೂಜೆಗೆ ಅರ್ಹನಲ್ಲ ಎಂದು ಅವರು ದೃಢವಾಗಿ ನಂಬುತ್ತಾರೆ.

ಉ: ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಮೇಲೆ ದೇವದೂತರಾದ ಜಿಬ್ರೀಲ್ ಅಲೈಹಿಸ್ಸಲಾಮ್ ಮೂಲಕ ಅವತರಿಸಲಾದ ಮೂಲ ಅರೇಬಿಕ್ ಭಾಷೆಯ ವಚನಗಳ ಸಂಗ್ರಹವಾಗಿದೆ ಖುರಾನ್ ಗ್ರಂಥ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಇದು ಪ್ರಕಟವಾದಾಗ, ಅವರು ಅದನ್ನು ತನ್ನ ಸಹಚರರಿಗೆ ಕಲಿಸಿದರು. ಕೆಲವು ಸಹಚರರು ಅದನ್ನು ಬರವಣಿಗೆಯಲ್ಲಿ ಸಂರಕ್ಷಿಸಿದರು, ಇನ್ನೂ ಕೆಲವರು ಕಂಠಪಾಠ ಮಾಡಿದರು ಬಹಳ ಉತ್ತಮವಾಗಿ ಸಂರಕ್ಷಿಸಿದರು. ಅವರ ಜೀವಿತಾವಧಿಯಲ್ಲಿ ಆ ಸಹಚರರು ಅವರಿಗೆ ಓದಿಹೇಳಿ ದೃಢಪಡಿಸಿಕೊಂಡರು. ಹಲವಾರು ಶತಮಾನಗಳು ಕಳೆದರೂ, ಅದರ 114 ಅಧ್ಯಾಯಗಳಲ್ಲಿ, ಇಂದಿಗೂ ಒಂದಕ್ಷರವೂ ಬದಲಾಗಿಲ್ಲ. ಅದು ಎಂದಿಗೂ ಬದಲಾಗುವುದೂ ಇಲ್ಲ. ಆದ್ದರಿಂದ, 14 ಶತಮಾನಗಳ ಹಿಂದೆ ಪ್ರವಾದಿ ಮುಹಮ್ಮದ್ ಅವರಿಗೆ ಪ್ರಕಟ ಪಡಿಸಲಾದ ಖುರಾನ್ ಮಾತ್ರ ಎಲ್ಲ ರೀತಿಯಲ್ಲೂ ಪರಿಪೂರ್ಣವಾಗಿದೆ. ಅದ್ವಿತೀಯವೂ ಹಾಗೂ ಅಪೂರ್ವವೂ ಆಗಿದೆ.

ಉ: ಖುರಾನ್ ಬ್ರಹ್ಮಾಂಡದ ಸೃಷ್ಟಿಕರ್ತನಾದ ಅಲ್ಲಾಹನ ಕೊನೆಯ ಮತ್ತು ಅಂತಿಮ ದೈವಿಕ ಸಂದೇಶವಾಗಿದೆ. ಮುಸ್ಲಿಮರ ದೈವ ನಂಬಿಕೆ ಮತ್ತು ಆಚರಣೆಯ ಮುಖ್ಯ ಮೂಲಧಾರವಾಗಿದೆ. ಇಸ್ಲಾಮಿನ ಸಿದ್ಧಾಂತ, ಆರಾಧನೆ, ಜೀವನ, ಸಾವು, ವಿವಾಹ, ವಿಚ್ಛೇದನ, ಶಿಕ್ಷಣ, ವಿಜ್ಞಾನ, ಕುಟುಂಬ, ಸಾಮಾಜಿಕ ವ್ಯವಹಾರಗಳು, ಮಾನವ ಹಕ್ಕುಗಳು, ಸೂಕ್ತವಾದ ಮಾನವ ನೈತಿಕ ನಡವಳಿಕೆ ಮತ್ತು ಸಮಾನ ಆರ್ಥಿಕತೆ ಇತ್ಯಾದಿ ಎಲ್ಲಾ ವಿಷಯಗಳು ಮತ್ತು ಅಂಶಗಳನ್ನು ಖುರಾನ್ ಗ್ರಂಥವು ಸಂಬೋಧಿಸುತ್ತದೆ. ಆದಾಗ್ಯೂ, ಅದರ ನಿಜವಾದ ಮುಖ್ಯಾಂಶ ಎಲ್ಲಾ ಲೋಕಗಳ ಸೃಷ್ಟಿಕರ್ತ ಅಲ್ಲಾಹ್ ಮತ್ತು ಅವನ ಸೃಷ್ಟಿಗಳ ನಡುವಿನ ಸಂಬಂಧವಾಗಿದೆ.

ಹೌದು ಇವೆ. ಅವು ಸುನ್ನತ್ ಗಳು ಅಂದರೆ, ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಆಚರಣೆಗಳು ಮತ್ತು ದೃಷ್ಟಾಂತಗಳು ಮುಸ್ಲಿಮರಿಗೆ ಎರಡನೇ ಪ್ರಮುಖ ಅಧಿಕೃತ ಮೂಲವಾಗಿದೆ.

ಹದೀಸ್ ಪ್ರವಾದಿ ಮುಹಮ್ಮದ್(ಸ) ಅವರ ಅಧಿಕೃತವಾಗಿ ದಾಖಲಾದ ಹೇಳಿಕೆಗಳು, ಹೇಳಿಕೆಗಳು ಮತ್ತು ಆಚರಣೆಗಳು. ಹದೀಸ್ ಎಂದರೆ ಅಧಿಕೃತವಾಗಿ ದಾಖಲಿಸಲಾದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಮಾತುಗಳು, ಆಚರಣೆಗಳು ಮತ್ತು ತಮ್ಮ ಸಹಚರರಿಗೆ ನೀಡಲಾದ ಅನುಮತಿಗಳಾಗಿದೆ. ಸುನ್ನತ್‌ನಲ್ಲಿರಿಸುವ ವಿಶ್ವಾಸ ಇಸ್ಲಾಮಿಕ್ ನಂಬಿಕೆಯ ಎರಡನೇ ಪ್ರಮುಖ ಭಾಗವಾಗಿದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಬೋಧನೆಗಳ ಕೆಲವು ದೃಷ್ಟಾಂತಗಳು:

1_'ಇತರರಿಗೆ ಕರುಣೆ ತೋರಿಸದವರಿಗೆ ಅಲ್ಲಾಹನು ಕರುಣೆ ತೋರಿಸುವುದಿಲ್ಲ.'

2_'ನಿಮ್ಮಲ್ಲಿ ಯಾರೊಬ್ಬರೂ ತನಗಾಗಿ ಅಪೇಕ್ಷಿಸುವುದನ್ನೇ ಇತರರಿಗಾಗಿ ಬಯಸದ ಹೊರತು ನಿಜವಾದ ವಿಶ್ವಾಸಿಗಲಾಗುವುದಿಲ್ಲ.'

3_'ತನ್ನ ಎದುರಾಳಿಯನ್ನು ಹೊಡೆದುರುಳಿಸುವವನು ಬಲಶಾಲಿಯಲ್ಲ, ಆದರೆ ಕೋಪದ ತೀವ್ರತೆಯಲ್ಲಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬಲ್ಲವನು ಬಲಶಾಲಿ.' (ಬುಖಾರಿ, ಮುಸ್ಲಿಂ, ತಿರ್ಮಿತಿ ಮತ್ತು ಬೈಹಕಿ ಹದೀಸ್‌ನಿಂದ)

ನಮ್ಮೆಲ್ಲರ ದೇವನಾದ ಅಲ್ಲಾಹನು ಏಕೈಕನು, ಅನನ್ಯನು, ಅಪೂರ್ವನು, ಪರಿಪೂರ್ಣನು, ಸರ್ವಲೋಕಗಳ ಪ್ರಭುವು ಮತ್ತು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕಲಿಸುವ ಏಕೈಕ ಧರ್ಮ ಇಸ್ಲಾಂ ಮಾತ್ರ.

ಅಲ್ಲಾಹನನ್ನು ಮಾತ್ರ ಆರಾಧಿಸಬೇಕು ಹೊರತು ಯೇಸು(ಜೀಸಸ್) ಅಥವಾ ವಿಗ್ರಹಗಳನ್ನಾಗಲಿ ಅಥವಾ ದೇವದೂತರುಗಳನ್ನು ಆರಾಧಿಸಕೂಡದೆಂದು ಎಂದು ಸಂಪೂರ್ಣವಾಗಿ ನಂಬುವ ಧರ್ಮ, ಇಸ್ಲಾಮ್ ಮಾತ್ರವೇ.

1400 ವರ್ಷಗಳ ಹಿಂದೆ ಪ್ರಕಟವಾದ ಕುರಾನ್‌ ಗ್ರಂಥದಲ್ಲಿ ಯಾವುದೇ ವಿರೋಧಾಭಾಸಗಳು ಅಥವಾ ವ್ಯತ್ಯಾಸಗಳಿಲ್ಲ. ಅದರಲ್ಲಿ ಅನೇಕ ವೈಜ್ಞಾನಿಕ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಇತ್ತೀಚೆಗೆ ಅವುಗಳಲ್ಲಿ ಕೆಲವನ್ನು ಆಧುನಿಕ ತಾಂತ್ರಿಕ ಉಪಕರಣಗಳ ಸಹಾಯದಿಂದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ, ಮಿಕ್ಕವುಗಳನ್ನು ಆವಿಷ್ಕರಿಸುವ ಸಾಧನಗಳು ತಯಾರು ಮಾಡುವ ಆ ಮಟ್ಟವನ್ನು ಅವರು ಇನ್ನೂ ತಲುಪಿಲ್ಲ. ಆದ್ದರಿಂದ, ಖುರಾನ್ ಎಂದಿಗೂ ವಿಜ್ಞಾನವನ್ನು ವಿರೋಧಿಸುವುದಿಲ್ಲ.

ಕುರಾನ್‌ನಲ್ಲಿ ಒಂದು ಅಧ್ಯಾಯದಂತೆ ಯಾವುದೇ ಅಧ್ಯಾಯವನ್ನು ಮಾಡಲು ಅಲ್ಲಾಹನು ಅವರಿಗೆ ಸವಾಲು ಹಾಕಿದನು. ಇದಲ್ಲದೆ, ಯಾರೂ ಎಂದಿಗೂ ಆತನ ಸವಾಲನ್ನು ಎದುರಿಸಲು ಸಿದ್ಧರಿಲ್ಲವೆಂದೂ ಕೂಡ ಸ್ಪಷ್ಟಪಡಿಸಿದ್ದಾನೆ. ಕಳೆದ 14 ಶತಮಾನಗಳಿಂದ ಇಂದಿನವರೆಗೂ ಇದು ಉತ್ತರವಿಲ್ಲದ ಸವಾಲಾಗಿಯೇ ಉಳಿದಿದೆ.

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಮುಸ್ಲಿಮೇತರರೊಬ್ಬರು ಬರೆದ "The 100 most influential men in History" ಎಂಬ ಪುಸ್ತಕದಲ್ಲಿ ಅವರು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರಿಗೆ ಮೊದಲ ಸ್ಥಾನ ಮತ್ತು ಪ್ರವಾದಿ ಜೀಸಸ್ ಅಲೈಹಿ ಸಲ್ಲಮ್ ಅವರಿಗೆ ಮೂರನೇ ಸ್ಥಾನವನ್ನು ನೀಡಿದ್ದಾರೆ. ಪ್ರವಾದಿ ಜೀಸಸ್ ಅಲೈಹಿಸ್ ಸಲಾಂ ಕೂಡ ಅಲ್ಲಾಹನಿಂದ ಕಳುಹಿಸಲ್ಪಟ್ಟ ಪ್ರವಾದಿ ಎಂಬುದನ್ನು ನಾವು ಇಲ್ಲಿ ತಪ್ಪದೆ ನೆನಪಿಸಿಕೊಳ್ಳಬೇಕು.

ನಿಸ್ಸಂದೇಹವಾಗಿ ಸಹಿಸಿಕೊಳ್ಳುತ್ತದೆ. ಇಸ್ಲಾಂನಲ್ಲಿ ಸಂಪೂರ್ಣವಾಗಿ ಪರಧರ್ಮ ಸಹಿಷ್ಣುತೆ ಇದೆ. ಕುರಾನ್‌ನಲ್ಲಿ ಅಲ್ಲಾಹನ ಆಜ್ಞೆಯಾಗಿದೆ:
ಧರ್ಮದಲ್ಲಿ ಬಲವಂತವಿಲ್ಲ. (2:256)

ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿಲ್ಲದ ಮತ್ತು ನಿಮ್ಮನ್ನು ನಿಮ್ಮ ನಾಡಿನಿಂದ ಹೊರ ಹಾಕಿಲ್ಲದ ಜನರೊಡನೆ ನೀವು ಸೌಜನ್ಯ ತೋರುವುದನ್ನು ಮತ್ತು ಅವರ ಜೊತೆ ನ್ಯಾಯವಾಗಿ ವ್ಯವಹರಿಸುವುದನ್ನು ಅಲ್ಲಾಹನು ತಡೆಯುವುದಿಲ್ಲ. ನ್ಯಾಯ ಪಾಲಿಸುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ.(60:8)

ಇಸ್ಲಾಮಿಕ್ ರಾಜ್ಯದಲ್ಲಿ ಅಲ್ಪಸಂಖ್ಯಾತರ ರಕ್ಷಣೆಯು ಇಸ್ಲಾಮಿಕ್ ಕಾನೂನಿನ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ಆದ್ದರಿಂದಲೇ, ಎಲ್ಲಾ ಇಸ್ಲಾಮೀಯ ದೇಶಗಳಲ್ಲಿ ಮುಸ್ಲಿಮೇತರರ ದೇವಾಲಯಗಳು ಮತ್ತು ಆರಾಧನಾ ಸ್ಥಳಗಳನ್ನು ಇಂದಿಗೂ ಕಾಣಬಹುದು.

ಇತಿಹಾಸದಲ್ಲಿ ಇಸ್ಲಾಮಿನ ಪರಧರ್ಮ ಸಹಿಷ್ಣುತೆಯ ಕುರಿತ ಅನೇಕ ಉದಾಹರಣೆಗಳಿವೆ. 634 ರಲ್ಲಿ, ಖಲೀಫ್ ಉಮರ್ ರದೀಯಲ್ಲಾಹು ಅನ್ಹು ಅವರು ಜೆರುಸಲೇಮ್ ನಗರವನ್ನು ಪ್ರವೇಶಿಸಿದಾಗ, ಅವರು ಅಲ್ಲಿನ ಎಲ್ಲಾ ಪ್ರಜೆಗಳಿಗೂ ಆಶ್ರಯ ನೀಡಿದರು ಮತ್ತು ಇಸ್ಲಾಂ ಧರ್ಮವನ್ನು ಅನುಸರಿಸದೆಯೇ ಅವರ ಸ್ವಂತ ಧರ್ಮದ ಪ್ರಕಾರ ಸ್ವತಂತ್ರವಾಗಿ ಬದುಕಲು ಅವಕಾಶ ನೀಡಿದರು. ಇಸ್ಲಾಮಿಕ್ ಸಹಿಷ್ಣುತೆಯ ಮತ್ತೊಂದು ಉತ್ತಮ ಉದಾಹರಣೆಯೆಂದರೆ ಸ್ಪೇನ್‌ನಲ್ಲಿ ಮುಸ್ಲಿಂ ಆಳ್ವಿಕೆಯ ಅವಧಿ. ಸ್ಪೇನ್‌ನಲ್ಲಿ ಇಸ್ಲಾಮಿಕ್ ಆಳ್ವಿಕೆಯ ಆ ಸಮಯದಲ್ಲಿ ಯಹೂದಿಗಳು ಸುವರ್ಣಯುಗವನ್ನು ಅನುಭವಿಸಿದರು. ಇದಲ್ಲದೆ, ಇಸ್ಲಾಂ ಮುಸ್ಲಿಂ ಅಲ್ಲದ ಅಲ್ಪಸಂಖ್ಯಾತರಿಗೆ ತಮ್ಮದೇ ಆದ ನ್ಯಾಯಾಲಯಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತು ಮತ್ತು ಅವರಿಗೆ ಸಾಕಷ್ಟು ಸ್ವಾಯತ್ತತೆಯನ್ನು(Autonomy) ನೀಡಿದೆ.

ಜುದಾಯಿಸಂ ಜೊತೆಗೆ, ಇವುಗಳ ಬೇರುಗಳು ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಮ್ ಗೆ ಸೇರುತ್ತವೆ. ಈ ಮೂರೂ ಧರ್ಮಗಳ ಪ್ರವಾದಿಗಳು ಹೇಳುವುದಾದರೆ ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಮ್ ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಮ್ ಇಬ್ಬರು ಪುತ್ರರ ಸಂತತಿಯಿಂದಲೇ ಆಯ್ಕೆಯಾದವರು. ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಮ್ ಅವರ ಹಿರಿಯ ಪುತ್ರ ಪ್ರವಾದಿ ಇಸ್ಮಾಯಿಲ್ ಅಲೈಹಿಸ್ಸಲಾಮ್ ಅವರ ಸಂತತಿಯಿಂದ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಆಯ್ದುಕೊಳ್ಳಲ್ಪಟ್ಟರು. ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಮ್ ಅವರ ಎರಡನೇ ಮಗ ಪ್ರವಾದಿ ಇಸಾಖ್ ಅಲೈಹಿಸ್ಸಲಾಮ್ ಅವರ ಸಂತತಿಯಿಂದ ಪ್ರವಾದಿ ಮೂಸಾ ಅಲೈಹಿಸ್ಸಲಾಮ್, ಪ್ರವಾದಿ ಜೀಸಸ್ ಅಲೈಹಿಸ್ಸಲಾಮ್ ಮೊದಲಾದವರು ಆಯ್ದುಕೊಳ್ಳಲ್ಪಟ್ಟರು.

ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಮ್ ಒಂದು ಪಟ್ಟಣವನ್ನು ಸ್ಥಾಪಿಸಿದರು. ಇಂದಿಗೂ ದು ಮೆಕ್ಕಾ ಎಂದು ಪ್ರಸಿದ್ಧಿ ಹೊಂದಿದೆ. ಮತ್ತು ಅಲ್ಲಿ ಅವರು ಕಾಬಾ ಗೃಹವನ್ನು ನಿರ್ಮಿಸಿದರು. ಇಂದಿಗೂ, ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜು ಮಾಡುವಾಗ ಕಾಬಗೃಹದ ದಿಕ್ಕಿಗೆ ಮುಖಮಾಡಿ ನಿಲ್ಲುತ್ತಾರೆ.

ಪ್ರವಾದಿ ಜೀಸಸ್ ಅಲೈಹಿಸ್ಸಲಾಮ್ ಮತ್ತು ಅವರ ತಾಯಿ ಕನ್ಯೆ ಮೇರಿ ಅವರನ್ನು ಮುಸ್ಲಿಮರು ಬಹಳ ಗೌರವಿಸುತ್ತಾರೆ. ತಂದೆಯಿಲ್ಲದೆ ಜನಿಸಿದ ಪ್ರವಾದಿ ಜೀಸಸ್ ಅಲೈಹಿಸ್ಸಲಾಮ್ ಅವರ ಜನ್ಮವು ಒಂದು ಮಹಿಮೆ ಎಂದು ಕುರಾನ್ ಹೀಗೆ ಪ್ರಕಟಿಸುತ್ತದೆ.

ಅಲ್ಲಾಹನ ಬಳಿ, ಈಸಾರ ಉದಾಹರಣೆಯು ಆದಮ್‌ರಂತಿದೆ. ಅವನು ಅವರನ್ನು ಮಣ್ಣಿನಿಂದ ಸೃಷ್ಟಿಸಿದ್ದನು ಮತ್ತು ಅವರೊಡನೆ ‘‘ಆಗು’’ ಎಂದಷ್ಟೇ ಹೇಳಿದ್ದನು, ಅವರು ಆಗಿ ಬಿಟ್ಟಿದ್ದರು. (ಕುರಾನ್ 3.59).

"ಪ್ರವಾದಿಯಾಗಿ, ಅಲ್ಲಾಹನ ಕೃಪೆಯಿಂದ, ಅವರು ತಮ್ಮ ತಾಯಿಯ ಶೀಲವನ್ನು ದೃಢಪಡಿಸಿದರು, ಅವನ ಜನನದ ನಂತರ ತಕ್ಷಣ ಜನರಿಗೆ ಉತ್ತರಿಸುವುದು, ಅಂಧರಿಗೆ ದೃಷ್ಟಿ ನೀಡುವುದು, ಕುಷ್ಠ ರೋಗಿಗಳನ್ನು ಗುಣಪಡಿಸುವುದು, ಸತ್ತವರನ್ನು ಮತ್ತೆ ಬದುಕಿಸುವುದು, ಜೇಡಿಮಣ್ಣಿನಿಂದ ಪಕ್ಷಿಯನ್ನು ತಯಾರಿಸುವುದು ಮುಂತಾದ ಅನೇಕ ಮಹಿಮೆಗಳನ್ನು ಪ್ರದರ್ಶಿಸಲಾಯಿತು. ಎಲ್ಲಕ್ಕಿಂತ ಮಿಗಿಲಾಗಿ ಅಲ್ಲಾಹನ ಸಂದೇಶವನ್ನು ಸಾರುವುದು. ಕುರಾನ್ ಪ್ರಕಾರ, ಅವನನ್ನು ಶಿಲುಬೆಗೇರಿಸಲಾಗಿಲ್ಲ. ಸ್ವರ್ಗಕ್ಕೆ ಎತ್ತಲ್ಪಟ್ಟರು”. (ಕುರಾನ್, ಮರಿಯಮ್ ಅಧ್ಯಾಯ)

ವಾಸ್ತವವಾಗಿ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಬೋಧನೆಗಳಿಂದ ನಮಗೆ ತಿಳಿದಿದೆ, ಈ ಲೌಕಿಕ ಜೀವನದಲ್ಲಿ ಯಾರೂ ಅಲ್ಲಾನನ್ನು ನೋಡಿಲ್ಲ. ಆತನನ್ನು ಯಾವುದೇ ರೀತಿಯಲ್ಲಿ ತಲುಪಲು ನಮ್ಮ ಇಂದ್ರಿಯಗಳನ್ನು ಬಳಸುವ ಶಕ್ತಿ ಸಾಮರ್ಥ್ಯ ನಮಗಿಲ್ಲ. ಏನೇ ಆಗಲಿ, ಈ ಇಡೀ ವಿಶ್ವವು ತನ್ನಿಂದ ತಾನೇ ಅಸ್ತಿತ್ವದಲ್ಲಿರಲು ಅಸಾಧ್ಯವೆಂಬ ಮೂಲ ಸತ್ಯವನ್ನು ಕಂಡುಹಿಡಿಯಲು ನಮ್ಮ ಪಂಚೇಂದ್ರಿಯಗಳನ್ನು ಬಳಸಲು ಇಸ್ಲಾಂ ನಮ್ಮನ್ನು ಪ್ರೋತ್ಸಾಹಿಸುತ್ತದೆ.

ಈ ಮಹಾನ್ ವಿಶ್ವವನ್ನು ನಿಖರವಾಗಿ ವಿನ್ಯಾಸಗೊಳಿಸಿದ ಮತ್ತು ಅಸ್ತಿತ್ವಕ್ಕೆ ತರಿಸಿದ ಒಬ್ಬ ಸರ್ವಶಕ್ತನಾದ ಸೃಷ್ಟಿಕರ್ತ ಅಸ್ತಿತ್ವದಲ್ಲಿರಲೇಬೇಕು. ಇದು ನಮ್ಮ ಶಕ್ತಿ ಸಾಮರ್ಥ್ಯಕ್ಕೆ ಮೀರಿದ ವಿಷಯ. ಆದರೂ, ನಾವು ಅದನ್ನು ಗ್ರಹಿಸಬಹುದು, ಅನುಭವಿಸಬಹುದು ಮತ್ತು ನೋಡಬಹುದು. ಉದಾಹರಣೆಗೆ, ಕಲಾವಿದನನ್ನು/ಕಲಾವಿದೆಯನ್ನು ಗುರುತಿಸಲಿಕ್ಕಾಗಿ ನಾವು ಅವನ ಅಥವಾ ಅವಳ ಚಿತ್ರಕಲೆ ಮಾಡುವಾಗ ಖುದ್ದಾಗಿ ಹಾಜರಿದ್ದು ಅವರನ್ನು ನೋಡುವ ಅಗತ್ಯವಿಲ್ಲ. ಆದ್ದರಿಂದ, ಚಿತ್ರಕಲೆ ಚಿತ್ರಿಸಿದ ಕಲಾವಿದನನ್ನು ನಾವು ನೋಡಲಾಗದಿದ್ದರೂ, ಚಿತ್ರಕಲೆ ಕಲಾವಿದರಿಂದ ಮಾಡಲ್ಪಟ್ಟಿದೆ ಎಂದು ನಾವು ಗುರುತಿಸುತ್ತೇವೆಯೇ ಹೊರತು ಆ ಚಿತ್ರಕಲೆ ತನ್ನಿಂದ ತಾನೇ ಅಸ್ತಿತ್ವಕ್ಕೆ ಬಂದಿತು ಎಂದು ಭಾವಿಸುವುದಿಲ್ಲ. ಅದೇರೀತಿಯಾಗಿ, ಅಲ್ಲಾಹನನ್ನು ನೋಡಲೇಬೇಕಾದ ಅವಶ್ಯಕತೆಯಿಲ್ಲದೆ, ಆತನೇ ಎಲ್ಲವನ್ನೂ ಸೃಷ್ಟಿಸಿದನು ಎಂದು ನಾವು ನಂಬಬಹುದು.

ಇಸ್ಲಾಮಿಕ್ ಧರ್ಮದ ಆಧಾರ ಸ್ತಂಭಗಳು ಐದು. ಅವುಗಳೆಂದರೆ:

ಶಹಾದಃ ಎಂದರೆ ಸಾಕ್ಷಿ: ಅಲ್ಲಾಹನನ್ನು ಹೊರತುಪಡಿಸಿ ಆರಾಧನೆಗೆ ಯಾರೂ ಅರ್ಹರಿಲ್ಲ ಎಂದು ಮತ್ತು ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅಲ್ಲಾಹನ ಸೇವಕರೂ ಮತ್ತು ಪ್ರವಾದಿಯೂ ಎಂದು ಸಾಕ್ಷಿಯನ್ನು ನುಡಿಯುವುದಾಗಿದೆ.

ಸಲಾಹ್ - ನಮಾಜ್: ಪ್ರತಿದಿನ ಐದು ಬಾರಿ ನಮಾಜ್ ಮಾಡುವುದು.

ಸೌಮ್ - ಉಪವಾಸ: ರಂಜಾನ್ ತಿಂಗಳು ಪೂರ್ತಿ ಕಡ್ಡಾಯ ಉಪವಾಸ.

ಝಕಾತ್ - ವಿಧಿದಾನ: ಧನಿಕರ ಸಂಪತ್ತಿನಿಂದ ನೀಡಲ್ಪಡುವ ಅವಶ್ಯಕವರ್ಗದ(ಬಡವರ) ಹಕ್ಕು.

ಹಜ್ ಯಾತ್ರೆ: ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಮರ್ಥರಾಗಿರುವವರು ಜೀವನದಲ್ಲಿ ಕನಿಷ್ಟ ಒಮ್ಮೆಯಾದರೂ ಮಕ್ಕಾಕ್ಕೆ ಹೋಗಿ ಹಜ್ಜ್ ಯಾತ್ರೆಯಲ್ಲಿ ಭಾಗವಹಿಸುವುದು.

ಉದಾಹರಣೆಗೆ - ನಾವು ಕಟ್ಟಡದ ನಿರ್ಮಾಣ ಯೋಜನೆಯನ್ನು ಹೊಂದಿದ್ದೇವೆ ಎಂದು ಭಾವಿಸೋಣ. ಅದನ್ನು ಉತ್ತಮ ಆಕಾರದಲ್ಲಿ ನಿರ್ಮಿಸಲು, ಅದರ ಎಲ್ಲಾ ಆಧಾರ ಕಂಬಗಳು ಎತ್ತರ ಮತ್ತು ದೃಢತೆಯಲ್ಲಿ ಸಮಾನವಾಗಿರಬೇಕು. ಇಸ್ಲಾಂ ವಿಷಯದಲ್ಲೂ ಅದೇ ರೀತಿ ಆಗಿದೆ. ಒಬ್ಬ ಮುಸ್ಲಿಮನಾಗಿ ಇಸ್ಲಾಮಿನ ಎಲ್ಲ ಆಧಾರ ಸ್ತಂಭಗಳನ್ನು ಸಮಾನವಾಗಿ ಪಾಲಿಸಬೇಕು. ಉದಾಹರಣೆಗೆ, ರಂಜಾನ್ ತಿಂಗಳ ಉಪವಾಸಗಳನ್ನು ಆಚರಿಸದಿರುವುದು, ಅಥವಾ ದಿನಕ್ಕೆ ಐದು ಬಾರಿ ನಮಾಜು ಮಾಡದೆ ಹಜ್ ಮಾಡಿದರೆ ಸಾಕು ಎಂದು ಭಾವಿಸುವುದು ಸರಿಯಲ್ಲ.

ಕಟ್ಟಡವು ಕೇವಲ ಪಿಲ್ಲರ್ಸ(ಆಧಾರ ಕಂಬ)ಗಳನ್ನು ಮಾತ್ರ ಒಳಗೊಂಡಿದೆ ಎಂದು ಭಾವಿಸೋಣ. ಅಂತಹ ಸ್ಥಿತಿಯಲ್ಲಿ ಅದನ್ನು ಕಟ್ಟಡ ಎಂದು ಕರೆಯಲಾಗುವುದಿಲ್ಲ. ಅದರ ಮೇಲೆ ಚಾವಣಿ(ರೂಫ್) ಇರಬೇಕು. ಇದು ಗೋಡೆಗಳು, ಬಾಗಿಲುಗಳು ಮತ್ತು ಕಿಟಕಿಗಳು ಇತ್ಯಾದಿಗಳನ್ನು ಹೊಂದಿರಬೇಕು. ಆಗ ಮಾತ್ರ ಅದು ಕಟ್ಟಡ ಎಂದು ಕರೆಯಲ್ಪಡುತ್ತದೆ. ಇಸ್ಲಾಂ ಧರ್ಮದ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಇಸ್ಲಾಂ ಧರ್ಮವು ಕೇವಲ ಮೂಲಸ್ಥಂಭಗಳನ್ನು ಮಾತ್ರ ಹೊಂದಿಲ್ಲ. ಅದರಲ್ಲಿ ಇಸ್ಲಾಮಿಕ್ ನೈತಿಕತೆ ಎಂದು ಕರೆಯಲ್ಪಡುವ ಪ್ರಾಮಾಣಿಕತೆ, ಸತ್ಯನಿಷ್ಠೆ, ದಯಾಗುಣ, ದಾನಧರ್ಮಗಳು, ಇತರರನ್ನು ಗೌರವಿಸುವುದು, ಇಂತಹ ಇನ್ನೂ ಅನೇಕ ಮುಖ್ಯಾಂಶಗಳೂ ಕೂಡ ಇವೆ.

ಆದ್ದರಿಂದ, ಒಬ್ಬ ಮುಸ್ಲಿಮನಾಗಿ ಬದುಕಲು, ಕೇವಲ ಇಸ್ಲಾಂ ಧರ್ಮದ ಆಧಾರ ಸ್ತಂಭಗಳನ್ನು ಮಾತ್ರ ಆಚರಿಸಿದರೆ ಸಾಕಾಗುವುದಿಲ್ಲ; ಅವುಗಳ ಜೊತೆಗೆ ಉತ್ತಮ ಮಾನವನ ಉತ್ತಮ ಗುಣಗಳನ್ನು ಹೊಂದಲು ಸಾಧ್ಯವಾದಷ್ಟು ಶಕ್ತಿಮೀರಿ ಪ್ರಯತ್ನಿಸಬೇಕು. ಹಾಗಾದಲ್ಲಿ ಮಾತ್ರ ಆ ಕಟ್ಟಡದ ನಿರ್ಮಾಣ ಮುಗಿದು ತುಂಬಾ ಸುಂದರವಾಗಿ ಕಾಣುತ್ತದೆ.

ಆರಾಧನೆಯ ನಿಜವಾದ ಉದ್ದೇಶವೆಂದರೆ ಅಲ್ಲಾಹನ ಕುರಿತ ಭಯಭಕ್ತಿಯನ್ನು ಅಭ್ಯಾಸ ಮಾಡುವುದು. ಇಲ್ಲಿ ಭಯಭಕ್ತಿ ಯೆಂದರೆ, ಪ್ರತಿಯೊಂದು ಸಂದರ್ಭದಲ್ಲಿಯೂ ಆತನು ನನ್ನನ್ನು ಗಮನಿಸುತ್ತಾನೆ ಮತ್ತು ನಾವು ಆತನಿಗೆ ಮಾಡುವ ಪ್ರತಿ ಕಾರ್ಯದ ಅರಿವಿರುತ್ತದೆ ಎಂಬುದಾಗಿದೆ. ಆದ್ದರಿಂದ, ಈ ಅಭ್ಯಾಸವು ಪ್ರಾರ್ಥನೆ, ಉಪವಾಸ ಅಥವಾ ದಾನಧರ್ಮವಾಗಿರಲಿ, ಅವು ನಮ್ಮನ್ನು ಅಲ್ಲಾಹನ ಹತ್ತಿರಕ್ಕೆ ಒಯ್ಯುತ್ತವೆ.

ಯಾವಾಗ ಒಬ್ಬರ ಆಲೋಚನೆಗಳು ಮತ್ತು ಅಭ್ಯಾಸಗಳಲ್ಲಿ ಅಲ್ಲಾಹನ ಭಯಭಕ್ತಿ ಆವರಿಸಿಕೊಳ್ಳುತ್ತದೆಯೋ, ಆ ವ್ಯಕ್ತಿಗೆ ಇಹಪರಲೋಕದಲ್ಲಿ ಅಲ್ಲಾಹನ ಅನುಗ್ರಹಗಳು ಬಹಳವಾಗಿ ದಯಪಾಲಿಸಲ್ಪಡುವ ಅತ್ಯುತ್ತಮ ಸ್ಥಾನದ ಅಗ್ರಸ್ಥಾನವನ್ನು ತಲುಪುತ್ತಾರೆ.

ಅಲ್ಲಾಹನು ಅತ್ಯಂತ ನ್ಯಾಯಮಯಿ ಮತ್ತು ತನ್ನ ನ್ಯಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾನೆ. ನಮ್ಮ ಮಾತು ಮತ್ತು ಕಾರ್ಯಗಳಿಗೆ ನಾವೇ ಜವಾಬ್ದಾರರಾಗಿರುವ ವ್ಯವಸ್ಥೆಯನ್ನು ಸ್ಥಾಪಿಸಿದ್ದಾನೆ. ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರಿಗೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಮತ್ತು ಯಾರು ಕೆಟ್ಟದ್ದನ್ನು ಮಾಡುತ್ತಾರೋ, ಅವರು ಕಠಿಣ ಶಿಕ್ಷೆಗೆ ಒಳಗಾಗುತ್ತಾರೆ. ಆದುದರಿಂದಲೇ ಆತನು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದನು. ಇವೆರಡೂ ವಿಭಿನ್ನ ಪ್ರವೇಶ ಅಗತ್ಯತೆಗಳನ್ನು ಹೊಂದಿವೆ. ಪ್ರಸ್ತುತ ಜೀವನವು ತಾತ್ಕಾಲಿಕ ಜೀವನವೆಂದು ಎಂದು ಮುಸ್ಲಿಮರು ನಂಬುತ್ತಾರೆ. ಇದೊಂದು ಪರೀಕ್ಷೆಯಾಗಿದೆ. ನಾವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ(ಪಾಸಾದರೆ), ಸ್ವರ್ಗದಲ್ಲಿ ಒಳ್ಳೆಯ ಜನರ ಸಹವಾಸದಲ್ಲಿ ಶಾಶ್ವತ ಆನಂದದ ಜೀವನ ನಮಗೆ ಪ್ರಸಾಧಿಸಲ್ಪಡಲಾಗುತ್ತದೆ.

ಇಲ್ಲ. ಖುರಾನ್ ಸ್ಪಷ್ಟವಾಗಿ ಹೇಳುತ್ತದೆ,ಕಿಂಚಿತ್ತಾದರೂ ಒಳಿತನ್ನು ಮಾಡಿದವನು ಅದನ್ನು ಕಾಣುವನು. ಮತ್ತು ಕಿಂಚಿತ್ತಾದರೂ ಕೆಡುಕನ್ನು ಮಾಡಿದವನು ಅದನ್ನು ಕಾಣುವನು. (ಕುರಾನ್ 99: 7-8).

(ಗತಕಾಲದ) ವಿಶ್ವಾಸಿಗಳು, ಯಹೂದಿಗಳು, ಕ್ರೈಸ್ತರು ಮತ್ತು ಸಬಯನರ ಪೈಕಿ ಅಲ್ಲಾಹನಲ್ಲಿ ಮತ್ತು ಅಂತಿಮ ದಿನ (ಪರಲೋಕ)ದಲ್ಲಿ ನಂಬಿಕೆಯಿಟ್ಟ ಹಾಗೂ ಸತ್ಕರ್ಮ ಮಾಡಿದ ಜನರಿಗಾಗಿ, ಅವರ ಒಡೆಯನ ಬಳಿ ಅವರ ಪ್ರತಿಫಲ ಇದ್ದೇ ಇದೆ ಮತ್ತು ಅವರಿಗೆ ಯಾವುದೇ ಭಯವೂ ಇರದು, ದುಃಖವೂ ಇರದು. (ಕುರಾನ್ 2:62)

ಇದರರ್ಥ, ಒಳ್ಳೆಯ ಕೆಲಸ ಮಾಡಿದ ಮುಸ್ಲಿಮೇತರರಿಗೆ ಇಹಲೋಕದಲ್ಲಿ ಅವರ ಸತ್ಕಾರ್ಯಗಳಿಗೆ ತಕ್ಕ ಪ್ರತಿಫಲ ದೊರೆಯುತ್ತದೆ. ಅಲ್ಲದೆ, ಒಳ್ಳೆಯ ಕೆಲಸ ಮಾಡುವ ಮುಸ್ಲಿಮರಿಗೆ ಇಹಲೋಕದಲ್ಲಿ ಮಾತ್ರವಲ್ಲದೆ ಪರಲೋಕದಲ್ಲಿಯೂ ಪ್ರತಿಫಲವಿದೆ. ಆದಾಗ್ಯೂ, ಅಂತಿಮ ತೀರ್ಪು ಸಂಪೂರ್ಣವಾಗಿ ಅಲ್ಲಾಹನಲ್ಲಿಯೇ ಇರುತ್ತದೆ.

ಇಸ್ಲಾಮ್ ಧರ್ಮವು ಸಚ್ಚರಿತೆ ಮತ್ತು ಪಾತಿವ್ರತೆಯ ಕುರಿತು ಒತ್ತು ನೀಡುತ್ತದೆ.

ಯಾವುದೇ ವ್ಯಕ್ತಿಯನ್ನು ಲೈಂಗಿಕ ವಸ್ತುವಾಗಿ ಪರಿಗಣಿಸುವುದು ಸರಿಯಲ್ಲ. ಪುರುಷರು ಮತ್ತು ಮಹಿಳೆಯರಿಗಾಗಿ ಬಟ್ಟೆಯ ವಿಷಯದಲ್ಲಿ ಕೆಲವು ನಿರ್ಧಿಷ್ಟ ಮಾರ್ಗದರ್ಶಿ ಸೂತ್ರಗಳಿವೆ. ಅವು ತುಂಬಾ ತೆಳ್ಳಗಿದ್ದು ಅಥವಾ ತುಂಬಾ ಬಿಗಿಯಾಗಿದ್ದು, ಅವರ ದೇಹದ ಆಕಾರವನ್ನು ಬಹಿರಂಗಪಡಿಸುವಂತದ್ದಾಗಿರಬಾರದು. ಪುರುಷರ ಉಡುಪು ಕನಿಷ್ಠ ಮೊಣಕಾಲುಗಳ ಕೆಳಗೆ ಅಂದರೆ ಕಾಲ್ಗಂಟುಗಳಿಂದ ಹೊಕ್ಕುಳದವರೆಗೆ ಮುಚ್ಚಬೇಕು. ಮಹಿಳೆಯರ ಉಡುಪುಗಳು ಅವರ ಸಂಪೂರ್ಣ ದೇಹವನ್ನು ಆವರಿಸಬೇಕು.

ಹಂದಿಮಾಂಸ ಅಥವಾ ಹಂದಿಮಾಂಸಕ್ಕೆ ಸಂಬಂಧಿಸಿದ ಇತರ ಉತ್ಪನ್ನಗಳು, ಅಲ್ಲಾಹನ ಹೆಸರಿನಲ್ಲಿ ಕುರ್ಬಾನಿ ಮಾಡುವ ಮೊದಲೇ ಮೃತವಾದ ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳ ಮಾಂಸವನ್ನು ತಿನ್ನಬಾರದು, ಅದರ ರಕ್ತವನ್ನು ಕುಡಿಯಬಾರದು ಎಂದೂ ಮತ್ತು ಅಮಲೇರಿಸುವ ಮದ್ಯ, ಮಾದಕ ದ್ರವ್ಯಗಳನ್ನು ಬಳಸಬೇಡಿರೆಂದೂ ಖುರಾನ್ ಮುಸ್ಲಿಮರಿಗೆ ಸ್ಪಷ್ಟವಾಗಿ ಆದೇಶಿಸುತ್ತದೆ.

 
 

 

 

"ಜಿಹಾದ್" ಎಂಬ ಅರೇಬಿಕ್ ಪದದ ಅರ್ಥವು ಶ್ರಮಿಸುವುದು ಅಥವಾ ಪ್ರಯಾಸ ಪಡುವುದು. ನಮ್ಮ ದೈನಂದಿನ ಜೀವನದಲ್ಲಿ ಅಲ್ಲಾಹನ ಸಂತೋಷಕ್ಕಾಗಿ ನಾವು ಪ್ರಾಮಾಣಿಕತೆಯಿಂದ ಮಾಡುವ ಪ್ರತಿಯೊಂದು ಕಾರ್ಯವನ್ನು ಜಿಹಾದ್ ಎಂದು ಪರಿಗಣಿಸಲಾಗುತ್ತದೆ. ಇದು ಪ್ರತಿ ಉತ್ತಮ ಕಾರ್ಯವನ್ನು ಒಳಗೊಳ್ಳುತ್ತದೆ. ಸರ್ವೋಚ್ಚ ಜಿಹಾದ್ ಎಂದರೆ, ನಿರಂಕುಶ ರಾಜನ ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ನಿಂತು ಅವನ ಮುಂದೆ ಸತ್ಯವನ್ನು ಹೇಳುವುದು. ಕೆಟ್ಟ ಆಲೋಚನೆಗಳು ಮತ್ತು ಕೆಟ್ಟ ಕೆಲಸಗಳಿಂದ ಸ್ವಯಂ ನಿಯಂತ್ರಣವು ಕೂಡ ಮಹಾನ್ ಜಿಹಾದ್ ಅಡಿಯಲ್ಲಿ ಬರುತ್ತದೆ. ಹೌದು, ಇಸ್ಲಾಂ ಧರ್ಮದ ರಕ್ಷಣೆಗಾಗಿ ಅಥವಾ ಶತ್ರುಗಳ ದಾಳಿಯಿಂದ ಇಸ್ಲಾಮಿಕ್ ರಾಜ್ಯದ ರಕ್ಷಣೆಗಾಗಿ ಸಶಸ್ತ್ರ ಹೋರಾಟವನ್ನೂ ಕೂಡ ಜಿಹಾದ್ ಒಳಗೊಂಡಿದೆ. ಆದರೆ ಅದಕ್ಕೆ ಒಂದು ಷರತ್ತಿದೆ. ಈ ರೀತಿಯ ಜಿಹಾದ್ ಯುದ್ಧವು ಇಸ್ಲಾಮಿಕ್ ಧಾರ್ಮಿಕ ಮಾರ್ಗದರ್ಶನ ಅಥವಾ ಕುರಾನ್ ಮತ್ತು ಸುನ್ನತ್‌ಗಳನ್ನು ಅನುಸರಿಸಿ ಆಡಳಿತ ನಡೆಸುವ ಇಸ್ಲಾಮಿಕ್ ರಾಷ್ಟ್ರದ ರಾಜ ಅಥವಾ ನಾಯಕನು ಘೋಷಿಸಬೇಕಾಗುತ್ತದೆ ಅಥವಾ ಅನುಮತಿಸಬೇಕಾಗುತ್ತದೆ.

 ಕ್ರಿ.ಶ 622 ರಲ್ಲಿ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಮಕ್ಕಾದಿಂದ ಮದೀನಾ ನಗರಕ್ಕೆ ವಲಸೆ ಬಂದಾಗಿನಿಂದ ಮುಸ್ಲಿಂ ಹಿಜ್ರಿ ಕ್ಯಾಲೆಂಡರ್ ಪ್ರಾರಂಭವಾಗುತ್ತದೆ. ಇದು ಚಂದ್ರಮಾನ ಕ್ಯಾಲೆಂಡರ್ ಆಗಿದ್ದೂ, ಇದು 354 ದಿನಗಳನ್ನು ಒಳಗೊಂಡಿದೆ. ಮೊಹರಂ ಈ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು. ಇಂಗ್ಲಿಷ್ ಕ್ಯಾಲೆಂಡರ್‌ನಲ್ಲಿ ಕ್ರಿ.ಶ. 2023 ವರ್ಷವು ಹಿಜ್ರಿ ಕ್ಯಾಲೆಂಡರ್‌ನ 1445 ವರ್ಷಕ್ಕೆ ಸಮಾನವಾಗಿದೆ.

ಈದುಲ್ ಫಿತ್ರ್ ಹಬ್ಬವನ್ನು ಪ್ರತಿ ವರ್ಷ ರಂಜಾನ್ ತಿಂಗಳ ಉಪವಾಸದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಶೇಷ ಸಾಮೂಹಿಕ ಈದ್ ನಮಾಜ್ ಮಾಡುವುದು, ಸೇವಿಗೆಯ ವಿಶೇಷ ಪಾಯಸ(ಷೀರ್ ಕುರ್ಮ) ಸೇವಿಸುವುದು ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು, ಬಡವರಿಗೆ ಫಿತ್ರಾದಾನ ನೀಡುವುದು ಇತ್ಯಾದಿಗಳು ಈ ಹಬ್ಬದ ಒಂದು ಭಾಗವಾಗಿದೆ.

ಈದ್ ಅಲ್-ಅಧಾ (ಬಕ್ರೀದ್) ಹಬ್ಬವನ್ನು ಪ್ರತಿ ವರ್ಷ ದಿಲ್ ಹಜ್ ತಿಂಗಳ ಹತ್ತನೇ ದಿನದಂದು ಆಚರಿಸಲಾಗುತ್ತದೆ. ವಿಶೇಷ ಸಾಮೂಹಿಕ ಈದ್ ನಮಾಜ್ ಮಾಡುವುದು, ಈ ಹಬ್ಬದ ಒಂದು ಭಾಗವೆಂದರೆ ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವವರು ಕುರ್ಬಾನಿ ನೀಡುವುದು. ಅಲ್ಲಾಹನ ಆದೇಶವನ್ನು ಶಿರಸಾವಹಿಸಿ ವಿಧೇಯತೆಯಿಂದ ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಮ್ ತನ್ನ ಮಗ ಪ್ರವಾದಿ ಇಸ್ಮಾಯಿಲ್ ಅಲೈಹಿಸ್ಸಲಾಮ್ ರನ್ನು ಬಲಿಕೊಡಲು ತಯಾರಾದ ಅಭೂತಪೂರ್ವ ಘಟನೆಯನ್ನು ನೆನಪಿಸಿಕೊಳ್ಳಲು ಕುರ್ಬಾನಿಯಾಗಿ ಮೇಕೆ, ಕುರಿ, ಹಸು ಅಥವಾ ಒಂಟೆಯನ್ನು ಅರ್ಪಿಸುವುದು, ಅದರ ಮಾಂಸದ ಮೂರು ಭಾಗದಲ್ಲಿ ಒಂದು ಭಾಗವನ್ನು ಬಡವರಿಗೂ ಮತ್ತು ಇನ್ನೊಂದನ್ನು ಸಂಬಂಧಿಕರಿಗೂ ಹಂಚುವುದು, ತಮಗೆ ಸೇರಿದ ಭಾಗದೊಂದಿಗೆ, ತಮಗಾಗಿ ಭೋಜನವನ್ನು ತಯಾರಿಸಿಕೊಳ್ಳುವುದು ಮುಂತಾದ ಆಚರಣೆಗಳು ಈ ಹಬ್ಬದ ಭಾಗವಾಗಿದೆ.

ಷರಿಯಾವು ಇಸ್ಲಾಮಿಕ್ ಕಾನೂನಿನ ಸಮಗ್ರ ದೇಹವಾಗಿದ್ದು ಈ ಕೆಳಗಿನ ಎರಡು ಮೂಲಗಳಿಂದ ಪಡೆಯಲಾಗಿದೆ:

a)       ಖುರಾನ್ ಗ್ರಂಥ

b)      ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಸುನ್ನತ್.

ಷರಿಯಾ ನಮ್ಮ ಜೀವನದಲ್ಲಿ ಪ್ರತಿಯೊಂದನ್ನೂ ಸಂಬೋಧಿಸುತ್ತದೆ. ಜೀವನ, ಸಂಪತ್ತು, ರಾಜಕೀಯ ಮತ್ತು ಧಾರ್ಮಿಕ ಸ್ವಾತಂತ್ರ್ಯ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳಂತಹ ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸುವುದು ಇಸ್ಲಾಮಿಕ್ ಷರಿಯಾ ಕಾನೂನಿನ ಮುಖ್ಯ ಉದ್ದೇಶವಾಗಿದೆ. ಇಸ್ಲಾಮಿಕ್ ಷರಿಯಾ ಕಾನೂನುಗಳ ಅನುಷ್ಠಾನದಿಂದಾಗಿಯೇ, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅಪರಾಧಗಳ ಸಂಖ್ಯೆ ಬಹಳ ಕಡಿಮೆ.

ಎಂದಿಗೂ ಇಲ್ಲಾ. ಕುರಾನ್ ಪ್ರಕಾರ, "ಇಸ್ಲಾಂ ಧರ್ಮದಲ್ಲಿ ಯಾವುದೇ ಬಲವಂತವಿಲ್ಲ" (2:256), ಆದ್ದರಿಂದ, ಮುಸಲ್ಮಾನರಾಗುವಂತೆ ಯಾರೂ ಯಾರನ್ನೂ ಬಲವಂತ ಪಡಿಸಬಾರದು. ಜನರು ಮತ್ತು ಪ್ರದೇಶಗಳನ್ನು ಅವರ ನಿರಂಕುಶ ರಾಜರು ಮತ್ತು ಚಕ್ರವರ್ತಿಗಳಿಂದ ಬಿಡುಗಡೆಗೊಳಿಸಲಿಕ್ಕಾಗಿ, ಅವರಿಗೆ ಸ್ವೇಚ್ಚೆ ಮತ್ತು ಸ್ವಾತಂತ್ರ್ಯವನ್ನು ನೀಡಲು ಇಸ್ಲಾಮಿಕ್ ಸೇನೆಗಳು ಖಡ್ಗವನ್ನು ಬಳಸಿದ್ದು ನಿಜ. ಏಕೆಂದರೆ ಆ ದಿನಗಳಲ್ಲಿ ಖಡ್ಗವನ್ನು ಮುಖ್ಯವಾಗಿ ಯುದ್ಧಭೂಮಿಯಲ್ಲಿ ಬಳಸಲಾಗುತ್ತಿತ್ತು. ಆದಾಗ್ಯೂ, ಇಸ್ಲಾಂ ಧರ್ಮವು ಎಂದಿಗೂ ಕತ್ತಿಯಿಂದ ಹರಡಲಿಲ್ಲ. ಏಕೆಂದರೆ ಇಸ್ಲಾಮಿಕ್ ಸೇನೆಗಳ ಬಗ್ಗೆ ಯಾವುದೇ ಪುರಾವೆಗಳಿಲ್ಲದ ಇಂಡೋನೇಷ್ಯಾ, ಚೀನಾ ಮತ್ತು ಆಫ್ರಿಕಾದ ಹಲವು ಭಾಗಗಳಲ್ಲಿ ಇಂದಿಗೂ ಮುಸ್ಲಿಮರಿದ್ದಾರೆ. ಆದ್ದರಿಂದ ಇಸ್ಲಾಂ ಧರ್ಮವು ಖಡ್ಗದಿಂದ ಹರಡಿತು ಎಂದು ಹೇಳುವುದು, ಸ್ವಯಂಚಾಲಿತ ಮೆಷಿನ್ ಗನ್, ಎಫ್ -16, ಅಣುಬಾಂಬ್ ಇತ್ಯಾದಿಗಳಿಂದ ಕ್ರಿಶ್ಚಿಯನ್ ಧರ್ಮವು ಹರಡಿತು ಎಂದು ಹೇಳಿದಂತಾಗುತ್ತದೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಕ್ರಿಶ್ಚಿಯನ್ ಧರ್ಮವು ಕ್ರಿಶ್ಚಿಯನ್ ಮಿಷನರಿಗಳಿಂದ ಹರಡಿತು. ಅರಬ್ ಪ್ರದೇಶದಲ್ಲಿ ಕೂಡ ಶೇಕಡಾ ಹತ್ತರಷ್ಟು ಜನರು ಇಂದಿಗೂ ಕ್ರೈಸ್ತರಾಗಿಯೇ ಬದುಕುತ್ತಿದ್ದಾರೆ. ಹಾಗಿದ್ದಲ್ಲಿ ಏಕೆ "ಇಸ್ಲಾಮಿಕ್ ಖಡ್ಗ"ವು ಮುಸ್ಲಿಂ ದೇಶಗಳಲ್ಲಿ ವಾಸಿಸುವ ಮುಸ್ಲಿಮೇತರ ಅಲ್ಪಸಂಖ್ಯಾತರನ್ನು ಇಸ್ಲಾಂಗೆ ಪರಿವರ್ತಿಸಲು ಸಾಧ್ಯವಾಗದೇ ಹೋಯಿತು? 700 ವರ್ಷಗಳ ಕಾಲ ಮುಸಲ್ಮಾನರ ಆಳ್ವಿಕೆಗೆ ಒಳಪಟ್ಟ ಭಾರತದಲ್ಲಿ ಇಂದಿಗೂ ಮುಸ್ಲಿಮರು ಅಲ್ಪಸಂಖ್ಯಾತರಾಗಿಯೇ ಉಳಿದಿದ್ದಾರೆ. ಅಮೆರಿಕಾದಲ್ಲಿ, ಇಸ್ಲಾಂ ಧರ್ಮವು ಬಹಳ ವೇಗವಾಗಿ ಹರಡುತ್ತಿದೆ ಮತ್ತು ಅಲ್ಲಿ ಮುಸ್ಲಿಮರ ಸಂಖ್ಯೆಯು ಯಾವುದೇ ಕತ್ತಿಯಿಲ್ಲದೆ ಸುಮಾರು 6 ಮಿಲಿಯನ್ ತಲುಪಿದೆ.

ಇಲ್ಲವೇ ಇಲ್ಲ. ಇಸ್ಲಾಂ ಧರ್ಮವು ಶಾಂತಿ, ದೇವರಿಗೆ ವಿಧೇಯತೆ, ಸೌಜನ್ಯ, ಪ್ರೀತಿ, ದಯೆ ಇತ್ಯಾದಿಗಳ ಅತ್ಯುತ್ತಮ ನೈತಿಕ ಮೌಲ್ಯಗಳನ್ನು ಹೊಂದಿರುವ ನಿಜವಾದ ಧರ್ಮವಾಗಿದೆ. ಮಾನವ ಜೀವನದ ಸುರಕ್ಷತೆಗೆ ಒತ್ತು ನೀಡಲಾಗಿದೆ.

ಖುರಾನ್ ಘೋಷಿಸುತ್ತದೆ, [ಅಧ್ಯಾಯ 5, ವಚನ 32], "ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ."

ಕ್ರುಸೇಡ್ ದಾಳಿಗಳು, ಸ್ಪೇನ್ ಮತ್ತು ವಿಶ್ವ ಸಮರದಲ್ಲಾದ ಹಿಂಸಾಚಾರ ಅಥವಾ ಬೋಸ್ನಿಯಾದಲ್ಲಿ ಕ್ರಿಶ್ಚಿಯನ್ ಸರ್ಬ್ಸ್ ಕೈಗೊಂಡ ಮುಸ್ಲಿಮರ ಹತ್ಯಾಕಾಂಡಗಳು ಅಥವಾ ರೆವರೆಂಡ್ ಜಿಮ್ ಜೋನ್ಸ್, ಡೇವಿಡ್ ಕೋರೆಶ್, ಡಾ. ಬರೂಚ್ ಗೋಲ್ಡ್ ಸ್ಮಿತ್ ರ ಹಿಂಸಾತ್ಮಕ ದಾಳಿಗಳು ಇತ್ಯಾದಿಗಳನ್ನೊಳಗೊಂಡಂತೆ ಎಲ್ಲಾ ರೀತಿಯ ಹಿಂಸೆ ಮತ್ತು ದೌರ್ಜನ್ಯಗಳನ್ನು ಇಸ್ಲಾಂ ಸಂಪೂರ್ಣವಾಗಿ ಖಂಡಿಸುತ್ತದೆ. ಹಿಂಸೆ ಮತ್ತು ದೌರ್ಜನ್ಯವನ್ನು ಉತ್ತೇಜಿಸುವ ಯಾರೇ ಆಗಿರಲಿ, ಅಂತಹವರು ತಮ್ಮ ಧರ್ಮೋಪದೇಶಗಳನ್ನು ಅನುಸರಿಸಲೇ ಇಲ್ಲ. ಏಕೆಂದರೆ ಯಾವ ಧರ್ಮವೂ ಆ ಕಾರ್ಯಗಳನ್ನು ಪ್ರೋತ್ಸಾಹಿಸುವುದಿಲ್ಲ. ಆದಾಗ್ಯೂ, ಒಮ್ಮೊಮ್ಮೆ ಪ್ಯಾಲೆಸ್ಟೈನ್ ಪ್ರಜೆಗಳಂತೆ ದಬ್ಬಾಳಿಕೆಗೆ ಒಳಗಾಗಿ ಬಳಲುತ್ತಿರುವ ಜನರ ಬಳಿ ದಂಗೆಯನ್ನು ಹೊರತುಪಡಿಸಿ ಇನ್ನೊಂದು ದಾರಿ ಇಲ್ಲದಿರಬಹುದು. ಇದು ತಪ್ಪೆಂದಾದರೂ ಇತರ ದೇಶಗಳ ಗಮನ ಸೆಳೆಯಲು ಇದೊಂದೇ ದಾರಿ ಎಂದು ಅವರು ಭಾವಿಸುತ್ತಿರಬಹುದು. ಆದರೆ ಇಂತಹ ದಂಗೆಗೆ ಇಸ್ಲಾಂ ಧರ್ಮವೇ ಕಾರಣ ಎಂದು ಕೆಲವರು ಭಾವಿಸುತ್ತಾರೆ. ಮತ್ತು ಇಸ್ಲಾಂ ಅಸ್ತಿತ್ವದಲ್ಲಿಲ್ಲದ ಅನೇಕ ಪ್ರದೇಶಗಳಲ್ಲಿಯೂ ಸಹ ಅತ್ಯಂತ ಗಂಭೀರವಾದ ಭಯೋತ್ಪಾದನೆ ಮತ್ತು ಹಿಂಸಾಚಾರ ನಡೆಯುತ್ತಿದೆ ಅಲ್ಲವೇ? ಮತ್ತು ಅದನ್ನು ಏನೆಂದು ಕರೆಯಲಾಗುತ್ತದೆ? ಉದಾಹರಣೆಗೆ, ಐರ್ಲೆಂಡ್, ದಕ್ಷಿಣ ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಮತ್ತು ಶ್ರೀಲಂಕಾ ಮುಂತಾದ ದೇಶಗಳಲ್ಲಿ ಭಯೋತ್ಪಾದನೆ. ಕೆಲವೊಮ್ಮೆ ಹಿಂಸಾತ್ಮಕ ದೌರ್ಜನ್ಯಗಳು, ಭಯೋತ್ಪಾದನೆಯೆಂಬುದು ವಶಪಡಿಸಿಕೊಂಡ ನಿರಂಕುಶಾಧಿಕಾರಿಗಳ ಮತ್ತು ದುರಾಕ್ರಮಣಕ್ಕೊಳಗಾದ ಅಸಹಾಯಕರ ನಡುವಿನ ಹೋರಾಟ ಅಥವಾ ತುಳಿತಕ್ಕೊಳಗಾದರ ಮತ್ತು ದಬ್ಬಾಳಿಕೆಗಾರರ ನಡುವಿನ ಹೋರಾಟ ಆಗಿರಬಹುದು. ಜನರು ಏಕೆ ಭಯೋತ್ಪಾದಕರಂತೆ ಬದಲಾಗುತ್ತಿರುವರು ಎಂದು ಕಂಡುಹಿಡಿಯಬೇಕಾದ ಅವಶ್ಯಕತೆ ಬಹಳ ಇದೆ. ದುರದೃಷ್ಟವಶಾತ್, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ಯಾಲೆಸ್ಟೈನ್ ಪ್ರಜೆಗಳನ್ನು ಭಯೋತ್ಪಾದಕರೆಂದು ತೋರ್ಪಡಿಸಿ, ಅಸಹಾಯಕ ಪ್ಯಾಲೇಸ್ಟಿನಿಯನ್ ಪ್ರಜೆಗಳನ್ನು ಕೆಟ್ಟದಾಗಿ ದಬ್ಬಾಳಿಕೆ ಮಾಡುವುದಷ್ಟೇ ಅಲ್ಲದೆ ತಮ್ಮ ಪ್ರಜೆಗಳ ಮೇಲೂ ದೌರ್ಜನ್ಯ ಎಸಗುತ್ತಿರುವ ಶಸ್ತ್ರಸಜ್ಜಿತ ಇಸ್ರೇಲಿ ಆಕ್ರಮಣಕಾರರನ್ನು ಮಾತ್ರ ಭಯೋತ್ಪಾದಕರೆಂದು ಹೆಸರಿಸಲಾಗಿಲ್ಲ. ಮುಸ್ಲಿಮೇತರ ಭಯೋತ್ಪಾದಕರು ನಡೆಸಿದ ಒಕ್ಲಹೋಮ ನಗರ ಬಾಂಬ್ ದಾಳಿ ಕೇಸ್ಗಳಂತೆ ಅನೇಕ ಸ್ಥಳಗಳಲ್ಲಿ ಯಾವುದೇ ಪುರಾವೆಗಳಿಲ್ಲದೆ ಮತ್ತು ನಿಜವಾದ ತನಿಖೆ ಪ್ರಾರಂಭವಾಗುವ ಮೊದಲೇ ಮಾಧ್ಯಮಗಳಲ್ಲಿ ಮುಸ್ಲಿಮರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ. ಕೆಲವೊಮ್ಮೆ ಶಾಂತಿಯನ್ನು ಬಯಸುತ್ತಿರುವವರೂ ಮತ್ತು ಶಾಂತಿಯ ನಾಶಮಾಡುವವರುಗಳಿಬ್ಬರೂ ಒಂದೇ ಧರ್ಮಕ್ಕೆ ಸೇರಿದ ಪ್ರಕರಣಗಳೂ ಇವೆ.

ಇಸ್ಲಾಂನಲ್ಲಿ "ಮೂಲಭೂತವಾದ"(ಫಂಡಮೆಂಟಲ್) ಎಂಬ ಪರಿಕಲ್ಪನೆ ಇಲ್ಲ. "ಮೂಲಭೂತವಾದ"(ಫಂಡಮೆಂಟಲ್) ಎಂಬುದು ಒಂದು ಪ್ರಾಥಮಿಕ ಇಸ್ಲಾಮಿಕ್ ನಿಯಮ ನಿಬಂಧನೆಗಳ ಅನುಗುಣವಾಗಿ ಮತ್ತು ಅದರ ಪ್ರಕಾರ ಅವರ ಜೀವನ ಬದಲಾಯಿಸಿಕೊಳ್ಳಲು ಬಯಸುವ ಮುಸ್ಲಿಮರ ಮೇಲೆ ಒಂದು ರೀತಿಯ ಛಾಪು ಮೂಡಿಸಲಿಕ್ಕಾಗಿ ಪಾಶ್ಚಾತ್ಯ ಮಾಧ್ಯಮ ಈ ಪದದ ಬಳಕೆ ಮಾಡಿದೆ. ಇಸ್ಲಾಂ ಒಂದು ಧರ್ಮ ಮತ್ತು ಅಲ್ಲಾಹ್ ನ ಕುರಿತಾಗಿ ಭಯಭಕ್ತಿಯನ್ನು ತೋರಿಸುವ ಗುಣ. ಒಟ್ಟಿನಲ್ಲಿ ಓರ್ವ ಮುಸ್ಲಿಂ ಖಂಡಿತವಾಗಿಯೂ ತೀವ್ರವಾದಿಯೋ ಅಥವಾ ಭಯೋತ್ಪಾದಕನೋ ಆಗಲು ಸಾಧ್ಯವೇ ಇಲ್ಲ. ಇಸ್ಲಾಂ ಮಂದವಾದದ ಮತ್ತು ಉಗ್ರವಾದದ ನಡುವಿನ ಮಾರ್ಗವಾಗಿದೆ. ಯಾವಾಗಲೂ ಅಲ್ಲಾಹನಲ್ಲಿ ಭಯಭಕ್ತಿಯನ್ನು ಹೊಂದಿ ಜೀವಿಸಲು ಬೋಧಿಸುವ ಸಜೀವ ಧರ್ಮ. ಓರ್ವ ಮುಸ್ಲಿಮನು ಉಗ್ರವಾದಿ, ಧರ್ಮಾಂಧ ಅಥವಾ ಭಯೋತ್ಪಾದಕನಾಗಿರಲು ಸಾಧ್ಯವಿಲ್ಲ.

ಹೌದು, ವ್ಯತ್ಯಾಸವಿದೆ. ಇಸ್ಲಾಂನಲ್ಲಿ, ವಿವಾಹವೆನ್ನುವುದು ಓರ್ವ ಮಹಿಳೆ ಮತ್ತು ಓರ್ವ ಪುರುಷನ ನಡುವೆ ಒಗಟ್ಟಾಗಿ ಜವಾಬ್ದಾರಿಗಳನ್ನು ಹಂಚಿಕೊಂಡು ಜೀವನ ನಡೆಸಲು ಸಂಭವಿಸುವ ಒಂದು ಪವಿತ್ರ ಒಡಂಬಡಿಕೆ. ಇದರೊಟ್ಟಿಗೆ, ಇಸ್ಲಾಂ ಧರ್ಮದ ವಿವಾಹ ಪದ್ಧತಿಯಲ್ಲಿ ಪ್ರಾಯೋಗಿಕವಾಗಿ ಇಬ್ಬರ ನಡುವೆ ಪರಸ್ಪರ ಒಪ್ಪಿದ ವಿಷಯಗಳೊಂದಿಗೆ ಒಂದು ಕಟ್ಟುನಿಟ್ಟಾದ ಒಪ್ಪಂದವನ್ನು ಬರೆಯಲಾಗುವುದು. ಇಸ್ಲಾಂನಲ್ಲಿ, ವಧು ಅಥವಾ ವರನ ಇಷ್ಟಕ್ಕೆ ವಿರುದ್ಧವಾಗಿ ವಿವಾಹವಾಗುವಂತಿಲ್ಲ. ವಿವಾಹವನ್ನು ಏರ್ಪಡಿಸುವಲ್ಲಿ ಪೋಷಕರ ಪಾತ್ರ ಕೇವಲ ನಿರೀಕ್ಷಿತ ಪತಿ ಮತ್ತು ಪತ್ನಿಗೆ ಒಳ್ಳೆಯ ಸಲಹೆ ನೀಡುವುದಕ್ಕಷ್ಟೇ ಸೀಮಿತವಾಗಿದೆ. ಅದಲ್ಲದೇ ಅವರು ತಮ್ಮ ನಿರ್ಧಾರವನ್ನು ತಮ್ಮ ಮಕ್ಕಳ ಮೇಲೆ ಪ್ರಯೋಗಿಸುವ ಪ್ರಯತ್ನವನ್ನು ಮಾಡಕೂಡದು.

  • Trending
  • Comments
  • Latest

Recommended

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page