ಇಮಾಂ ಮಾಲಿಕ್(ರ) ಹಿ. 93 ರಲ್ಲಿ ವಲೀದ್ ಬಿನ್ ಅಬ್ದುಲ್ ಮಲಿಕ್‌ರ ಆಡಳಿತಕಾಲದಲ್ಲಿ ಮದೀನಾ ಮುನವ್ವರದಲ್ಲಿ ಜನಿಸಿದರು. ಅವರು ವಿದ್ವಾಂಸರ ಮನೆತನದಲ್ಲೇ ಹುಟ್ಟಿ ಬೆಳೆದರು. ಅವರ ತಾತ ಮಾಲಿಕ್ ಬಿನ್ ಅಬೂ ಆಮಿರ್ ತಾಬಿಊನ್‌ಗಳ ಪೈಕಿ ಹಿರಿಯರೂ ವಿದ್ವಾಂಸರೂ ಆಗಿದ್ದರು. ಅವರು ಅನೇಕ ಸಹಾಬಾಗಳಿಂದ ಹದೀಸ್ ವರದಿ ಮಾಡಿದ್ದರು. ಇಮಾಂ ಮಾಲಿಕ್(ರ) ರವರ ತಂದೆ ಹದೀಸ್ ಕ್ಷೇತ್ರದಲ್ಲಿ ಅಷ್ಟು ಪರಿಣತರಲ್ಲದಿದ್ದರೂ ತಂದೆಯ ಸಹೋದರರೆಲ್ಲರೂ ಅನೇಕ ಹದೀಸ್‌ಗಳನ್ನು ವರದಿ ಮಾಡಿದವರಾಗಿದ್ದರು. ಸ್ವತಃ ಮಾಲಿಕ್(ರ) ರವರ ಸಹೋದರ ನದ್ರ್ ಬಿನ್ ಅನಸ್(ರ) ಕೂಡ ಹದೀಸ್ ವಿದ್ವಾಂಸರಾಗಿದ್ದರು.
ವಿದ್ಯಾಭ್ಯಾಸ:
ಇಮಾಂ ಮಾಲಿಕ್(ರ) ಚಿಕ್ಕ ವಯಸ್ಸಿನಲ್ಲೇ ಕುರ್‌ಆನ್ ಕಂಠಪಾಠ ಮಾಡಿದ್ದರು. ಆ ಕಾಲದಲ್ಲಿ ಮಕ್ಕಳು ಹತ್ತನೇ ವಯಸ್ಸಿನೊಳಗೆ ಕುರ್‌ಆನ್ ಸಂಪೂರ್ಣ ಕಂಠಪಾಠ ಮಾಡುವುದು ಸಂಪ್ರದಾಯವಾಗಿತ್ತು. ಕುರ್‌ಆನ್ ಕಂಠಪಾಠದ ನಂತರ ಅವರು ಹದೀಸ್ ಕಂಠಪಾಠ ಮಾಡಲು ಆಸಕ್ತಿ ತೋರಿದರು. ಅವರ ಆ ಪರಿಸರವು ಹದೀಸ್ ಕಂಠಪಾಠವನ್ನು ಪ್ರೋತ್ಸಾಹಿಸುವ ರೀತಿಯಲ್ಲಿತ್ತು. ಆದ್ದರಿಂದ ಹದೀಸ್ ಕಲಿಯಲು ವಿದ್ವಾಂಸರ ಬಳಿಗೆ ಕಳುಹಿಸುವಂತೆ ಅವರು ತಾಯಿಗೆ ಸಲಹೆ ನೀಡಿದರು. ತಾಯಿ ಅವರಿಗೆ ಅತ್ಯುತ್ತಮ ಉಡುಪನ್ನು ತೊಡಿಸಿ, ತಲೆಗೆ ರುಮಾಲು ಕಟ್ಟಿ ಕಳುಹಿಸಿದರು. ಕಳುಹಿಸುವಾಗ, “ಮಗೂ! ಇಮಾಂ ರಬೀಅರ ಬಳಿಗೆ ಹೋಗು, ಅವರಿಂದ ವಿದ್ಯೆ ಪಡೆಯುವುದಕ್ಕೆ ಮುನ್ನ ಅವರ ಸ್ವಭಾವವನ್ನು ಕಲಿತುಕೋ” ಎಂದು ಹೇಳಲು ಮರೆಯಲಿಲ್ಲ.
ತಾಯಿಯ ಸಲಹೆಯಂತೆ ಇಮಾಂ ಮಾಲಿಕ್(ರ) ನೇರವಾಗಿ ರಬೀಅರ ಬಳಿಗೆ ಹೋಗಿ ಅವರ ಶಿಷ್ಯತ್ವವನ್ನು ಸ್ವೀಕರಿಸಿದರು. ಅವರಿಗೆ ಚಿಕ್ಕಂದಿನಿಂದಲೇ ಬರೆದದ್ದನ್ನೆಲ್ಲಾ ಕಂಠಪಾಠ ಮಾಡುವ ಸ್ವಭಾವವಿತ್ತು. ತರಗತಿ ಮುಗಿದ ಬಳಿಕ ಅವರು ಮರದ ನೆರಳಲ್ಲಿ ಕುಳಿತು ತಾವು ಬರೆದದ್ದನ್ನೆಲ್ಲಾ ಕಂಠಪಾಠ ಮಾಡುತ್ತಿದ್ದರು. ಒಮ್ಮೆ ಅವರು ಮರದಡಿಯಲ್ಲಿ ಕುಳಿತು ಕಂಠಪಾಠ ಮಾಡುವುದನ್ನು ಕಂಡ ತಂಗಿ ತಂದೆಗೆ ವಿಷಯ ತಿಳಿಸಿದಳು. ತಂದೆ ಹೇಳಿದರು: “ಮಗಳೇ! ಅವನು ಅಲ್ಲಾಹನ ಸಂದೇಶವಾಹಕರ(ಸ) ಹದೀಸ್‌ಗಳನ್ನು ಕಂಠಪಾಠ ಮಾಡುತ್ತಿದ್ದಾನೆ.”
ಇಮಾಂ ಮಾಲಿಕ್(ರ) ರಿಗೆ ಬಾಲ್ಯದಲ್ಲಿ ಪಾರಿವಾಳ ಸಾಕುವ ಹವ್ಯಾಸವಿತ್ತು. ಒಮ್ಮೆ ಅವರ ತಂದೆ ಅವರಿಗೂ ಅವರ ಅಣ್ಣನಿಗೂ ಫಿಕ್ಹ್ ಗೆ ಸಂಬಂಧಿಸಿದ ಒಂದು ಪ್ರಶ್ನೆ ಕೇಳಿದರು. ಅಣ್ಣ ಸರಿ ಉತ್ತರ ಹೇಳಿದರೆ ಇಮಾಂ ಮಾಲಿಕ್(ರ) ರ ಉತ್ತರ ತಪ್ಪಾಗಿತ್ತು. ತಂದೆ ಗದರಿಸುತ್ತಾ ಹೇಳಿದರು: “ನಿನಗೆ ವಿದ್ಯೆಗಿಂತ ಪಾರಿವಾಳವೇ ಹೆಚ್ಚಾಗಿದೆ.” ಇಮಾಂ ಮಾಲಿಕ್(ರ) ಕೋಪದಿಂದ ಎದ್ದು ನೇರವಾಗಿ ಮದೀನಾದ ಪ್ರಸಿದ್ಧ ಫಕೀಹ್ (ಕರ್ಮಶಾಸ್ತ್ರಜ್ಞ) ಇಬ್ ಹುರ್ಮುಝ್(ರ) ರ ಬಳಿಗೆ ಹೋಗಿ ಏಳು ವರ್ಷಗಳ ಕಾಲ ಅವರ ಬಳಿ ವಿದ್ಯೆ ಕಲಿತರು. ಅವರು ಬೆಳಗ್ಗಿನ ಜಾವದಲ್ಲಿ ಅಲ್ಲಿಗೆ ಹೋದರೆ ಮರಳುವಾಗ ರಾತ್ರಿಯಾಗುತ್ತಿತ್ತು.
ಅವರು ಇಚ್ಛೆ ಉಮರ್(ರ) ರವರ ಶಿಷ್ಯ ನಾಫಿಲ್(ರ) ರವರ ಬಳಿಯೂ ಹದೀಸ್ ಕಲಿತರು. ಇಬ್ನ್ ಶಿಹಾಬ್ ಝುಕ್ರಿ(ರ) ರಿಂದಲೂ ಹದೀಸ್ ಕಲಿತರು. ಅವರು ರಬೀಅರ ಬಳಿ ಕಲಿಯುತ್ತಿದ್ದಾಗ ಒಮ್ಮೆ ಇಮಾಂ ಝುಹ್ರಿ(ರ) ಮದೀನಕ್ಕೆ ಬಂದರು. ರಬೀಅ ಮತ್ತು ಮಾಲಿಕ್ ಇಬ್ಬರೂ ಅವರ ತರಗತಿಗೆ ಹೋದರು. ಅಲ್ಲಿ ಅವರು 40 ಹದೀಸ್‌ಗಳನ್ನು ಹೇಳಿದರು. ಮರುದಿನ ಪುನಃ ಅವರ ತರಗತಿಯಿತ್ತು. ತರಗತಿಯಲ್ಲಿ ಅವರು ಕೇಳಿದರು: “ನಾನು ನಿನ್ನೆ ಹೇಳಿದ 40 ಹದೀಸ್ ಯಾರಿಗೆ ಕಂಠಪಾಠವಿದೆ?” ರಬೀಅ ಹೇಳಿದರು: “ನೀವು ನಿನ್ನೆ ಹೇಳಿದ ಹದೀಸ್‌ಗಳನ್ನು ನೀವು ಹೇಳಿದ ರೀತಿಯಲ್ಲೇ ನಿಮಗೆ ತಿಳಿಸುವ ಒಬ್ಬ ವ್ಯಕ್ತಿಯಿದ್ದಾರೆ.” ಝುಹ್ರಿ ಕೇಳಿದರು: “ಯಾರು?” ಅವರು ಇಮಾಮ್ ಮಾಲಿಕ್‌ರನ್ನು ತೋರಿಸಿದರು. ಇಮಾಮ್ ಮಾಲಿಕ್ ಆ ಹದೀಸ್‌ಗಳನ್ನು ತಿಳಿಸಿಕೊಟ್ಟರು. ಆಗ ಝುಹ್ರಿ ಹೇಳಿದರು: “ಈ ಹದೀಸ್‌ಗಳನ್ನು ಯಾರಾದರೂ ಕಂಠಪಾಠ ಮಾಡಿರಬಹುದೆಂದು ನಾನು ಭಾವಿಸಿರಲಿಲ್ಲ”
ಇಮಾಮ್ ಮಾಲಿಕ್(ರ) ಚಿಕ್ಕಂದಿನಲ್ಲೇ ಹದೀಸ್‌ಗಳಿಗೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದರು. ಮನಸ್ಸು ಸ್ಥಿರ ಮತ್ತು ಶಾಂತವಾಗಿರುವ ಸ್ಥಿತಿಯಲ್ಲೇ ಹೊರತು ಅವರು ಹದೀಸ್‌ಗಳನ್ನು ಸ್ವೀಕರಿಸುತ್ತಿರಲಿಲ್ಲ. ಏಕೆಂದರೆ ಅವರು ಹದೀಸ್‌ಗಳಿಗೆ ಬಹಳ ಗೌರವ ನೀಡುತ್ತಿದ್ದರು. ಅವರು ನಿಂತಿರುವಾಗ ಅಥವಾ ಮನಸ್ಸು ಸ್ಥಿರವಾಗಿರದ ಸಂದರ್ಭದಲ್ಲಿ ಹದೀಸ್‌ಗಳನ್ನು ಸ್ವೀಕರಿಸುತ್ತಿರಲಿಲ್ಲ. ಏಕೆಂದರೆ ಅದು ಮರೆತುಹೋಗಬಹುದೋ ಎಂಬ ಭಯ ಅವರನ್ನು ಕಾಡುತ್ತಿತ್ತು. ಇಮಾಮ್ ಮಾಲಿಕ್ ವಿದ್ಯೆಗಾಗಿ ಹಣವನ್ನು ತೆಗೆದಿಡುತ್ತಿರಲಿಲ್ಲ. ಒಮ್ಮೆ ಅವರಿಗೆ ವಿದ್ಯೆ ಕಲಿಯಲು ಹಣದ ಅವಶ್ಯಕತೆ ಬಂದಾಗ ಅವರು ತಮ್ಮ ಮನೆಯ ಛಾವಣಿಯನ್ನು ಬಿಚ್ಚಿ ಅದರಲ್ಲಿದ್ದ ಮರದ ದಿಂಬುಗಳನ್ನು ಮಾರಿ ಹಣವನ್ನು ಹೊಂದಿಸಿದರು.
ಮಸ್ಟಿದುನ್ನಬವಿಯಲ್ಲಿ ಸ್ಥಾನ:
ವಿದ್ಯಾಭ್ಯಾಸ ಮುಗಿದ ಬಳಿಕ ಇಮಾಮ್ ಮಾಲಿಕ್ ಮಸ್ಜಿದ್ ನಬವಿಯಲ್ಲಿ ಹದೀಸ್ ಕಲಿಸುವ ಮತ್ತು ಫತ್ವಾ ನೀಡುವ ಸ್ಥಾನವನ್ನು ಪಡೆದರು. ಈ ಸ್ಥಾನದ ಬಗ್ಗೆ ಅವರು ಹೀಗೆನ್ನುತ್ತಾರೆ: “ಹದೀಸ್ ಕಲಿಸಲು ಮತ್ತು ಪತ್ವ ನೀಡಲು ಬಯಸುವವರೆಲ್ಲರಿಗೂ ಆಗ ಮಸೀದಿಯಲ್ಲಿ ಸ್ಥಾನ ಸಿಗುತ್ತಿರಲಿಲ್ಲ. ಯಾರಿಗೆ ಸ್ಥಾನ ನೀಡಬೇಕೆಂದು ಮದೀನದ ವಿದ್ವಾಂಸರು ಮತ್ತು ಹಿರಿಯರು ಸಮಾಲೋಚನೆ ಮಾಡುತ್ತಿದ್ದರು. ಆ ಸ್ಥಾನಕ್ಕೆ ಯಾರನ್ನಾದರೂ ಅರ್ಹರೆಂದು ಕಂಡರೆ ಅವರಿಗೆ ಸ್ಥಾನವನ್ನು ನೀಡುತ್ತಿದ್ದರು. ನನ್ನ ವಿಷಯದಲ್ಲಿ ನಾನು ಆ ಸ್ಥಾನಕ್ಕೆ ಅರ್ಹನೆಂದು 70 ವಿದ್ವಾಂಸರು ಸಾಕ್ಷಿ ಹೇಳಿದ್ದರು.”
ಇಮಾಮ್ ಮಾಲಿಕ್ ಮಸ್ಜಿದ್ ನಬವಿಯಲ್ಲಿ ಉಮರ್ ಬಿನ್ ಖತ್ತಾಬ್(ರ)ರು ಸಮಾಲೋಚನೆ ಮಾಡಲು ಮತ್ತು ತೀರ್ಪು ನೀಡಲು ಕೂರುತ್ತಿದ್ದ ಸ್ಥಳದಲ್ಲಿ ಕೂರಲು ನಿರ್ಧರಿಸಿದರು. ಈ ಸ್ಥಳವು ಪ್ರವಾದಿ(ಸ)ಯವರ ಮಿಂಬರ್ ಮತ್ತು ಸಮಾಧಿಯ ಮಧ್ಯೆ ಇರುವ ಖೂಖ ಉಮರ್ ಆಗಿದೆಯೆಂದು ಇಬ್ನ್ ಸಅದ್ ತಮ್ಮ ತಬಕಾತ್‌ನಲ್ಲಿ ಹೇಳಿದ್ದಾರೆ. ಅದೇ ರೀತಿ ಹೊರಗೆಲ್ಲಾದರೂ ಹದೀಸ್ ತರಗತಿ ನಡೆಸಲು ಅಥವಾ ಫತ್ವಾ ನೀಡಲು ಬಯಸಿದರೆ ಅವರು ಅಬ್ದುಲ್ಲಾ ಬಿನ್ ಮಸ್‌ಊದ್(ರ)ರ ಮನೆಯನ್ನು ಆರಿಸುತ್ತಿದ್ದರು.
ತರಗತಿಯ ಸ್ವರೂಪ:
ಇಮಾಮ್ ಮಾಲಿಕ್(ರ)ರವರ ಹದೀಸ್ ತರಗತಿಗಳು ಬಹಳ ಗಂಭೀರವಾಗಿಯೂ ಶಾಂತವಾಗಿಯೂ ಇರುತ್ತಿದ್ದವು. ಅಲ್ಲಿ ಯಾವುದೇ ಸದ್ದುಗದ್ದಲಗಳು ಕೇಳುತ್ತಿರಲಿಲ್ಲ. ಸೂಜಿ ಬಿದ್ದರೂ ಕೇಳುವಷ್ಟು ಮೌನವು ಅಲ್ಲಿ ಆವರಿಸಿಕೊಂಡಿರುತ್ತಿತ್ತು. ಇಮಾಮ್ ಮಾಲಿಕ್ ರವರ ತರಗತಿಗಳಲ್ಲಿ ಮೌನವಾಗಿ ಕೂರುವುದು ಕಡ್ಡಾಯವಾಗಿತ್ತು. ಅವರು ಹೇಳುತ್ತಿದ್ದರು: “ನಾನು ಕಲಿಸುವ ವಿದ್ಯೆಯೊಂದಿಗೆ ನೀವು ಶಾಂತತೆಯನ್ನು, ಸಹಿಷ್ಣುತೆಯನ್ನು ಮತ್ತು ಗಾಂಭೀರ್ಯವನ್ನು ಕಲಿತುಕೊಳ್ಳಬೇಕು.” ಅವರು ಹೇಳುತ್ತಿದ್ದರು: “ವಿದ್ಯೆ ಕಲಿಯುವವರು ಗಂಭೀರವಾಗಿ, ಶಾಂತವಾಗಿ ಮತ್ತು ಭಯಭಕ್ತಿಯಿಂದ ಕುಳಿತುಕೊಳ್ಳಬೇಕು. ಪೂರ್ವಿಕ ಸಜ್ಜನರ ಸ್ವಭಾವಗಳು ಅವರಲ್ಲಿ ಮೈಗೂಡಿಕೊಂಡಿರಬೇಕು. ವಿದ್ಯೆ ಕಲಿಯುವವರು ಹಾಸ್ಯ-ಲಾಸ್ಯಗಳಿಂದ ದೂರವಿರಬೇಕು.” ಇನ್ನೊಮ್ಮೆ ಅವರು ಹೇಳಿದರು: “ವಿದ್ಯೆ ಕಲಿಯುವ ಮರ್ಯಾದೆಗಳಲ್ಲಿ ಒಂದು ಮುಗುಳ್ಳಗೆಯ ಮೂಲಕವಲ್ಲದೆ ನಗದಿರುವುದು.”
ಇಮಾಮ್ ಮಾಲಿಕ್ ರವರ ಮನೆಗೆ ಯಾರಾದರೂ ವಿದ್ಯೆ ಕಲಿಯಲು ಬಂದರೆ ಅವರು ತಮ್ಮ ದಾಸಿಯನ್ನು ಕಳುಹಿಸಿ ಕೇಳುತ್ತಿದ್ದರು: “ನೀವು ಬಂದದ್ದು ಫತ್ವಾ ಕೇಳುವುದಕ್ಕೋ ಅಥವಾ ಹದೀಸ್ ಕಲಿಯುವುದಕ್ಕೋ?” ಫತ್ವಾ ಕೇಳುವುದಕ್ಕೆ ಎಂದು ಹೇಳಿದರೆ ಅವರು ಹೊರಬಂದು ಫತ್ವಾ ಹೇಳುತ್ತಿದ್ದರು. ಆದರೆ ಅವರು ಬಂದದ್ದು ಹದೀಸ್ ಕಲಿಯುವುದಕ್ಕೆ ಎಂದಾದರೆ ಇಮಾಮ್ ಮಾಲಿಕ್ ಅವರೊಡನೆ ಕುಳಿತುಕೊಳ್ಳಲು ಹೇಳುತ್ತಿದ್ದರು. ನಂತರ ಅವರು ಸ್ನಾನ ಮಾಡಿ, ಸುಗಂಧ ಹಚ್ಚಿ, ಉತ್ತಮ ಬಟ್ಟೆಯನ್ನು ಧರಿಸಿ, ರುಮಾಲನ್ನು ಸುತ್ತಿ ಬರುತ್ತಿದ್ದರು. ಹದೀಸ್ ಓದಲು ಅವರು ಒಂದು ಎತ್ತರದ ಸ್ಥಾನದಲ್ಲಿ ಕುಳಿತುಕೊಳ್ಳುತ್ತಿದ್ದರು. ಅಲ್ಲಿ ಲೋಬಾನದ ಹೊಗೆ ಹಾಕಲಾಗುತ್ತಿತ್ತು. ಹದೀಸ್ ತರಗತಿ ಮುಗಿಯುವ ತನಕ ಲೋಬಾನ ಉರಿಯುತ್ತಲೇ ಇರುತ್ತಿತ್ತು. ಅಬ್ದುಲ್ಲಾ ಬಿನ್ ಮುಬಾರಕ್(ರ) ಹೇಳುತ್ತಾರೆ: ಒಮ್ಮೆ ಇಮಾಮ್ ಮಾಲಿಕ್ ರವರು ಹದೀಸ್ ತರಗತಿಗಾಗಿ ಕುಳಿತರು. ಆಗ ಒಂದು ಚೇಳು 16 ಸಲ ಅವರಿಗೆ ಕುಟುಕಿತು. ಇಮಾಮ್ ಮಾಲಿಕ್ ರವರ ಮುಖದ ಬಣ್ಣ ಬದಲಾಗುತ್ತಿತ್ತು. ಆದರೂ ಅವರು ಕದಲಲಿಲ್ಲ. ಹದೀಸ್ ಓದುವುದನ್ನು ನಿಲ್ಲಿಸಲಿಲ್ಲ. ಹದೀಸ್ ತರಗತಿ ಮುಗಿದು ಜನರೆಲ್ಲರೂ ಹೊರಹೋದ ಬಳಿಕ ನಾನು ಕೇಳಿದೆ: “ಇಮಾಮರೇ, ನಾನು ಇಂದು ನಿಮ್ಮನ್ನು ವಿಚಿತ್ರವಾಗಿ ಕಂಡಿದ್ದೇನೆ.” ಆಗ ಅವರು ಹೇಳಿದರು: “ಹೌದು: ಪ್ರವಾದಿ(ಸ) ಯವರ ಹದೀಸ್‌ಗೆ ಗೌರವ ನೀಡುವುದಕ್ಕಾಗಿ ನಾನು ಆ ನೋವನ್ನು ಮೌನವಾಗಿ ಸಹಿಸಿಕೊಂಡೆ.”
ಸೂಕ್ಷ್ಮತೆ:
ಇಮಾಮ್ ಮಾಲಿಕ್(ರ) ರವರು ತಮ್ಮ ಮಾತಿನಲ್ಲಿ ಅಥವಾ ಫತ್ವಗಳಲ್ಲಿ ತಪ್ಪು ಬರದಂತೆ ಆದಷ್ಟು ಸೂಕ್ಷ್ಮತೆ ವಹಿಸುತ್ತಿದ್ದರು. ಜನರು ಅವರೊಡನೆ ಸಂಶಯ ಕೇಳುವಾಗಲೆಲ್ಲಾ ಹೆಚ್ಚಿನ ಸಂದರ್ಭಗಳಲ್ಲೂ ಅವರು “ನನಗೆ ತಿಳಿದಿಲ್ಲ” ಎಂದೇ ಉತ್ತರ ಕೊಡುತ್ತಿದ್ದರು. ಹೆಚ್ಚಾಗಿ ಅವರು ಹೇಳುತ್ತಿದ್ದ ಮಾತು: ಇದು ಕೇವಲ ನನ್ನ ಅಭಿಪ್ರಾಯ ಮಾತ್ರ. ಇದರ ಬಗ್ಗೆ ನನಗೆ ದೃಢವಾದ ಅರಿವಿಲ್ಲ.” ಒಮ್ಮೆ ಒಬ್ಬ ವ್ಯಕ್ತಿ ಅವರ ಬಳಿಗೆ ಸಂಶಯ ನಿವಾರಣೆಗಾಗಿ ಬಂದರು. ಅವರನ್ನು ಯಾರೋ ಒಬ್ಬರು ಮೊರೊಕ್ಕೋದಿಂದ ಮದೀನಕ್ಕೆ ಕಳುಹಿಸಿದ್ದರು. ಅವರು ಮೊರೊಕ್ಕೋದಿಂದ ಆರು ತಿಂಗಳು ಪ್ರಯಾಣ ಮಾಡಿ ಮದೀನಾ ತಲುಪಿದ್ದರು. ಆದರೆ ಇಮಾಮ್ ಮಾಲಿಕ್(ರ) ಹೇಳಿದರು: “ನಿಮ್ಮನ್ನು ಯಾರು ಕಳುಹಿಸಿದರೋ ಅವರೊಡನೆ, ಇಮಾಮ್ ಮಾಲಿಕ್ ರಿಗೆ ಈ ವಿಷಯದಲ್ಲಿ ಯಾವುದೇ ಜ್ಞಾನವಿಲ್ಲ ಎಂದು ಹೇಳಿರಿ.”
ಇಮಾಂ ಮಾಲಿಕ್ ರವರು ಪದೇ ಪದೇ ಹೇಳುತ್ತಿದ್ದ ಒಂದು ಮಾತು ಹೀಗಿತ್ತು: “ನಾನೊಬ್ಬ ಮನುಷ್ಯ ಮಾತ್ರ. ನಾನು ಹೇಳಿದ್ದು ಕೆಲವೊಮ್ಮೆ ಸರಿಯಾದರೆ ಕೆಲವೊಮ್ಮೆ ತಪ್ಪಾಗುತ್ತದೆ. ಆದ್ದರಿಂದ ನಾನು ಹೇಳಿದ ಅಭಿಪ್ರಾಯವನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿ. ನನ್ನ ಅಭಿಪ್ರಾಯವೇನಾದರೂ ಕುರ್‌ಆನ್ ಮತ್ತು ಸುನ್ನತ್ತಿಗೆ ಅನುಗುಣವಾಗಿದ್ದರೆ ಅದನ್ನು ಸ್ವೀಕರಿಸಿ. ಅದೇನಾದರೂ ಕುರ್‌ಆನ್ ಮತ್ತು ಸುನ್ನತ್ತಿಗೆ ವಿರುದ್ಧವಾಗಿದ್ದರೆ ಅದನ್ನು ತಿರಸ್ಕರಿಸಿ.”
ಇಮಾಂ ಮಾಲಿಕ್ ರವರು ಧಾರ್ಮಿಕ ವಿಷಯಗಳಲ್ಲಿ ತರ್ಕ ಮಾಡುವುದನ್ನು ವಿರೋಧಿಸುತ್ತಿದ್ದರು. ಅವರು ಹೇಳುತ್ತಿದ್ದರು: “ಧರ್ಮದ ವಿಷಯದಲ್ಲಿ ತರ್ಕ ಮಾಡುವುದರಿಂದ ಮನುಷ್ಯನ ಹೃದಯದಿಂದ ಜ್ಞಾನದ ಪ್ರಕಾಶವು ಹೊರಟುಹೋಗುತ್ತದೆ.”
ಪರೀಕ್ಷೆ:
ಇಮಾಮ್ ಮಾಲಿಕ್(ರ) ರವರು ಎಲ್ಲಾ ರೀತಿಯ ದಂಗೆ, ಕೋಭೆಗಳಿಂದ ದೂರವಿರುತ್ತಿದ್ದರು. ದಂಗೆ, ಕೋಭೆಗಳಲ್ಲಿ ಪಾಲ್ಗೊಳ್ಳುವಂತೆ ಅವರು ಯಾರಿಗೂ ಉತ್ತೇಜನ ನೀಡುತ್ತಿರಲಿಲ್ಲ. ಹಾಗಿದ್ದೂ ಕೂಡ ಅವರು ಆಡಳಿತಗಾರರ ಶಿಕ್ಷೆಯಿಂದ ಪಾರಾಗಲಿಲ್ಲ. ಹಿ. 146 ಅಥವಾ 147 ರಲ್ಲಿ ಆಡಳಿತಗಾರರು ಅವರಿಗೆ ಚಾವಟಿಯಿಂದ ಬಾರಿಸಿ ಥಳಿಸಿದರು. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿದೆ. ಪ್ರಸಿದ್ಧ ಅಭಿಪ್ರಾಯ ಪ್ರಕಾರ ಇದಕ್ಕೆ ಕಾರಣ ಒಂದು ಹದೀಸ್ ಆಗಿತ್ತೆಂದು ಹೇಳಲಾಗುತ್ತದೆ. ಇಮಾಂ ಮಾಲಿಕ್ ವರದಿ ಮಾಡಿದ ಈ ಹದೀಸನ್ನು ಆಧಾರವಾಗಿಟ್ಟು ಕೆಲವರು ಖಲೀಫ ಅಬೂ ಜಅಫರ್ ಮನ್ಸೂರ್ ರಿಗೆ ಬೈಅತ್ ನಿರಾಕರಿಸಿದರು. ವಿಷಯ ಖಲೀಫರಿಗೆ ತಲುಪಿದಾಗ ಅವರು ಇಮಾಮರಿಗೆ ಚಾವಟಿಯಿಂದ ಬಾರಿಸುವಂತೆ ಆಜ್ಞಾಪಿಸಿದರೆಂದು ಹೇಳಲಾಗುತ್ತದೆ.
ಇಮಾಮ್ ಮಾಲಿಕ್ ರಿಗೆ ಬಾರಿಸಿದ್ದು ಖಲೀಫ ಅಲ್ಲ. ಬದಲಾಗಿ ಅಂದು ಮದೀನಾ ನಗರದ ರಾಜ್ಯಪಾಲರಾಗಿದ್ದ ಜಾಫರ್ ಬಿನ್ ಸುಲೈಮಾನ್ ಆಗಿದ್ದರು ಮತ್ತು ಖಲೀಫರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲವೆಂದೂ ಹೇಳಲಾಗುತ್ತದೆ.
ಪ್ರಶಂಸೆ:
ಇಮಾಮ್ ಶಾಫಿಈ(ರ) ಹೇಳುತ್ತಾರೆ: “ವಿದ್ವಾಂಸರ ಮಧ್ಯೆ ಇಮಾಮ್ ಮಾಲಿಕ್ ತಾರೆಯಂತೆ.” “ತಾಬಿಊನ್ ಗಳ ನಂತರ ಇಮಾಮ್ ಮಾಲಿಕ್ ಸೃಷ್ಟಿಗಳ ಮೇಲೆ ಅಲ್ಲಾಹನ ಪುರಾವೆಯಾಗಿದ್ದಾರೆ.” “ಇಮಾಮ್ ಮಾಲಿಕ್ ಮತ್ತು ಇಬ್ ಉಯಯ್ನ ಇಲ್ಲದಿರುತ್ತಿದ್ದರೆ ಹಿಜಾಝ್‍ನ ಜ್ಞಾನವು ಕಣ್ಮರೆಯಾಗುತ್ತಿತ್ತು.” “ಇಮಾಮ್ ಮಾಲಿಕ್ ರವರ ಕಡೆಯಿಂದ ಹದೀಸ್ ಬಂದರೆ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ” “ಇಮಾಮ್ ಮಾಲಿಕ್ ರಿಗೆ ಯಾವುದೇ ಹದೀಸಿನ ವಿಷಯದಲ್ಲಿ ಸಂಶಯ ಉಂಟಾದರೆ ಅವರು ಸಂಪೂರ್ಣ ಹದೀಸನ್ನೇ ಬಿಟ್ಟುಬಿಡುತ್ತಿದ್ದರು.”
ಇಮಾಮ್ ಅಹ್ಮದ್ ಬಿನ್ ಹಂಬಲ್(ರ) ರೊಂದಿಗೆ ಒಬ್ಬ ವ್ಯಕ್ತಿ ಕೇಳಿದರು: “ನಾನು ಹದೀಸ್ ಕಂಠಪಾಠ ಮಾಡಬೇಕೆಂದಿದ್ದೇನೆ. ನಾನು ಯಾರ ಹದೀಸ್‌ಗಳನ್ನು ಕಂಠಪಾಠ ಮಾಡಲಿ”? ಅವರು ಉತ್ತರಿಸಿದರು: “ಇಮಾಮ್ ಮಾಲಿಕ್ ಬಿನ್ ಅನಸ್‍ರ ಹದೀಸ್‌ಗಳನ್ನು ಕಂಠಪಾಠ ಮಾಡಿರಿ.”
ಇಮಾಮ್ ಝಹಬಿ(ರ) ಹೇಳುತ್ತಾರೆ: “ಇಮಾಮ್ ಮಾಲಿಕ್ ರಲ್ಲಿ ಇದ್ದಂತಹ ಕೆಲವು ವೈಶಿಷ್ಟ್ಯಗಳನ್ನು ನಾನು ಇತರ ಯಾರಲ್ಲೂ ಕಂಡಿಲ್ಲ. 1. ಜೀವನಪೂರ್ತಿ ಹದೀಸ್ ವರದಿಗಾರಿಕೆ ಮಾಡಿರುವುದು, 2. ಸೂಕ್ಷ್ಮ ಬುದ್ಧಿಮತ್ತೆ, ಗ್ರಹಣಶಕ್ತಿ ಮತ್ತು ವಿಶಾಲ ಜ್ಞಾನ, 3. ಅವರೊಂದು ಪುರಾವೆ ಎಂಬ ವಿಷಯದಲ್ಲಿ ವಿದ್ವಾಂಸರಿಗಿದ್ದ ಒಮ್ಮತಾಭಿಪ್ರಾಯ. 4. ಅವರು ಧರ್ಮಶ್ರದ್ಧೆಯುಳ್ಳವರು, ನ್ಯಾಯವಂತರು, ಸುನ್ನತ್ತಿನ ಹಿಂಬಾಲಕರು ಆಗಿದ್ದರೆಂಬ ವಿಷಯದಲ್ಲಿ ವಿದ್ವಾಂಸರಿಗಿದ್ದ ಒಮ್ಮತಾಭಿಪ್ರಾಯ. 5. ಕರ್ಮಶಾಸ್ತ್ರ ಮತ್ತು ಫತ್ವಗಳ ವಿಷಯದಲ್ಲಿ ಅವರಿಗಿದ್ದ ಅಗ್ರಗಣ್ಯತೆ.”
ಮರಣ:
ಹಿ. 179 ರಲ್ಲಿ 22 ದಿನಗಳ ಕಾಲ ಅನಾರೋಗ್ಯದಿಂದ ಬಳಲಿದ ನಂತರ ಇಮಾಮ್ ಮಾಲಿಕ್(ರ) ರವರು ನಿಧನರಾದರು. ಅವರನ್ನು ಬಕೀಅ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.