ಕುರ್ಆನ್ ಎಂದರೆ… ?
ಕುರ್‍ಆನ್ ಎಂಬುದು ಅಕ್ಷರಗಳ ಅರ್ಥದಲ್ಲಿ ದೈವವಾಣಿ ಅಥವ ದೈವಾಜ್ಞೆ ಎಂದಾಗಿದ್ದು . ಪ್ರವಾದಿ ಮಹಮ್ಮದ್ ಸ.ರವರಿಗೆ. ಪ್ರಧಾನ ದೇವದೂತ ಜಿಬ್ರಿಲ್‍ರ ಮೂಲಕ ಅವತರಿಸಲ್ಪಟ್ಟಿತ್ತು.
ಪವಿತ್ರ ಕುರ್‍ಆನ್: ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದಾಗಿರುತ್ತದೆ.
ಮಾನವಕುಲಕ್ಕೆ ಮಾರ್ಗದರ್ಶಿ :
ಕುರ್‍ಆನ್ “ಮಾನವರಿಗೆ ಸಾದ್ಯಾಂತ ಸನ್ಮಾರ್ಗ. ಮಾರ್ಗದರ್ಶಕ ಮತ್ತು ಸತ್ಯಾಸತ್ಯತೆಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿದೆ. ಪವಿತ್ರ ಕುರ್‍ಆನ್ 2:185
ಅಂತಿಮ ದೈವವಾಣಿ :
ಪವಿತ್ರ ಕುರ್‍ಆನ್ ಸರ್ವಶಕ್ತ ಅಲ್ಲಾಹನಿಂದ ಅಂತಿಮವಾಗಿ ಬಂದ ಸಂದೇಶ. ಇದು ಪ್ರವಾದಿ ಸ ರವರಿಗಿಂತ ಪೂರ್ವ ಬಂದ ಸಂದೇಶವಾಹಕರ ವಿವಿಧ ಭಾಗಗಳ ಸತ್ಯವಾಣಿಯ ಅಕ್ಷರಶಃ ಲಿಖಿತ ಸತ್ಯಾಂಶದ ಪರಿಪೂರ್ಣ ಗ್ರಂಥ. ಇಂದಿನ ಗ್ರಂಥಗಳಲ್ಲಿ ಉತ್ಪ್ರೇಕ್ಷೆಯಾಗಿ ಮತ್ತು ಪಾರಂಪರೆಯಲ್ಲಿ ಸೇರಿಸಲ್ಪಟ್ಟ ಅಥವ ಕಲಾತ್ಮಕವಾಗಿ ಹೆಣೆಯಲ್ಪಟ್ಟ ವಿಷಯಗಳನ್ನು ನಿರಾಕರಿಸಿ ಸಂಪೂರ್ಣ ಸತ್ಯ ಸಂದೇಶ ನೀಡುವ ಗ್ರಂಥವಿದು.
ಪವಿತ್ರ ಕುರ್‍ಆನ್ : `ಓ ಗ್ರಂಥ ನೀಡಲ್ಪಟ್ಟವರೇ ನಾವೀಗ ಅವತರಣಗೊಳಿಸಿರುವ ಹಾಗೂ ನಿಮ್ಮಬಳಿ ಮೊದಲೇ ಇದ್ದ ಗ್ರಂಥವನ್ನು ಸಮರ್ಥಿಸುವ ಈ ಗ್ರಂಥವನ್ನು ಮಾನ್ಯ ಮಾಡಿರಿ. ಪವಿತ್ರ ಕುರ್‍ಆನ್ 4 : 47
ಕುರ್‍ಆನಿನ ಗ್ರಂಥವು ಅವತರಿಸಿದ ಬಗೆ :
ಪವಿತ್ರ ಕುರ್‍ಆನ್ ಗ್ರಂಥವು ಪ್ರವಾದಿ ಮಹಮ್ಮದ್ ಸ.ರಿಗೆ ಜೆಬ್ರಯಿಲ್‍ರವರ ಮೂಲಕ ಅವತರಿಸಲ್ಪಟ್ಟಿದ್ದು. ಅದು ಮೂಲತಃ ಅರಬ್ಬಿ ಭಾಷೆಯಲ್ಲಿ ಬರೆಯಲ್ಪಟ್ಟಿದ್ದೆ ಮತ್ತು ಇದರ ಭಾಷಾಂತರ ಅರ್ಥಸಹಿತ ಅನುವಾದ ಪ್ರಪಂಚದ ಅನೇಕ ಭಾಷೆಗಳಲ್ಲಿ ನಮಗೆ ಲಭಿಸುತ್ತದೆ.
ಪವಿತ್ರ ಕುರ್‍ಆನ್ ಸಂಪೂರ್ಣವಾಗಿ ಒಂದೇ ಕಂತಿನಲ್ಲಿ ಅವತರಿಸಿಲ್ಲ. ಇದು 23 ವರ್ಷಗಳ ಕಾಲಕ್ಕಿಂತ ಹೆಚ್ಚು ಕಾಲಾವಧಿಯಲ್ಲಿ ಆಯಾ ಅನುಚಿತ ಸಮಯ ಸಂದರ್ಭಗಳಲ್ಲಿ ಅವತರಿಸಲ್ಪಟ್ಟಿದೆ. ಈ ಕಾರಣಕ್ಕಾಗಿಯೇ ಇದನ್ನು ಸಂಪೂರ್ಣ ಮತ್ತು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಆಯಾ ಸೂಕ್ತಿಗಳು ತರಲ್ಪಟ್ಟ ಪರಿಸ್ಥಿತಿ, ಕಾಲ ಮತು ಅವಶ್ಯಕತೆಗಳನ್ನು ಮೊದಲು ಅರ್ಥ ಮಾಡಿಕೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ಇದರ ಬೋಧನೆಗಳನ್ನು ಬಹುಪಾಲು ತಪ್ಪುಗ್ರಹಿಕೆಗೆ ಕಾರಣವಾಗುತ್ತದೆ.
ಇದು ಅಲ್ಲಾಹನಿಂದಲೆ ಬಂದ ವಾಣಿ ಎಂದು ಹೇಗೆ ತಿಳಿಯುವುದು :
ಸಂರಕ್ಷಣೆ : ಪವಿತ್ರ ಕುರ್‍ಆನ್ ಜಗತ್ತಿನಲ್ಲಿ ದೀರ್ಘಕಾಲದಿಂದ ಪವಿತ್ರವಾಗಿ ಸಂರಕ್ಷಿಸಲ್ಪಟ್ಟಿರುವ ಏಕೈಕ ಧರ್ಮಗ್ರಂಥವಾಗಿದ್ದು ಇದರಲ್ಲಿ ಯಾವೊಂದು ಸೂಕ್ತಿಗಳು, ಅಕ್ಷರಗಳು ಸೇರಿಸದೇ, ತೆಗೆದು ಹಾಕದೆ, ಕೈ ಬಿಡದೆ, ಬದಲಾವಣೆ ಮಾಡದೆ, ಅದರ ಮೂಲ ಅಂಶಗಳನ್ನು ಪವಿತ್ರತೆಯನ್ನು ಉಳಿಸಿಕೊಂಡು ಬಂದಿರುವ ಗ್ರಂಥವಾಗಿದೆ. ಸುಮಾರು 1434 ವರ್ಷಗಳ ಹಿಂದೆ ಬಂದಿದ್ದರೂ ಸಹ, ಈ ಗ್ರಂಥದಲ್ಲಿ ಕಿಂಚಿತ್ತೂ ಕಲುಷಿತವಾಗದಂತೆ ಸಂರಕ್ಷಿಸಲ್ಪಟ್ಟಿದೆ.
ಪವಿತ್ರ ಕುರ್‍ಆನ್ : `ಈ ಉಪದೇಶವನ್ನು ನಿಶ್ಚಯವಾಗಿಯೂ ನಾವು ಆವತ್ತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ’ ಪವಿತ್ರ ಕುರ್‍ಆನ್ 15 : 9
ಕುರ್‍ಆನ್ ಗ್ರಂಥರೂಪದಲ್ಲಿ ಸಂರಕ್ಷಿಸಲ್ಪಟ್ಟಿರುವುದು ಮಾತ್ರವಲ್ಲದೆ ಜನರ ಮನೆಗಳಲ್ಲಿಯೂ ಭದ್ರವಾಗಿ ನೆಲೆಗೊಂಡಿದೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಗ್ರಂಥ ನೋಡದೆ ಕಂಠಪಾಠವಾಗಿ ಪಠಿಸುವಂತಾಗಿದೆ. ಅಲ್ಲದೆ ಒಂದು ಸೂಕ್ತಿಯನ್ನೂ ಸಹ ಮರೆಯದೆ ತಮ್ಮ ಹೃದಯಗಳಲ್ಲಿ ನೆಲೆಗೊಳಿಸಿಕೊಂಡಿದ್ದಾರೆ.
ವೈಜ್ಞಾನಿಕ ವಿಷಯಗಳು :
ಪವಿತ್ರ ಕುರ್‍ಆನ್ ಗ್ರಂಥವು ಆಧುನಿಕ ವಿಜ್ಞಾನದ ಆವಿಷ್ಕಾರಗಳನ್ನು ವಿರೋಧಿಸುವುದೂ ಇಲ್ಲ, ಅಲ್ಲಗಳೆಯುವುದೂ ಇಲ್ಲ. ಬದಲಾಗಿ ಇವುಗಳನ್ನು ಬೆಂಬಲಿಸುತ್ತದೆ. ಕುರ್‍ಆನಿನ ಅತ್ಯಂತ ವಿಶಿಷ್ಟ ವಿಷಯಗಳ ಪೈಕಿ ವೈಜ್ಞಾನಿಕ ಅಂಶಗಳ ಹಲವಾರು ಸೂಕ್ತಿಗಳನ್ನು ಹೊಂದಿದೆ. ಇವು ನಿರ್ದಿಷ್ಟವಾಗಿ ಪ್ರಾಕೃತಿಕವಾಗಿ, ನಮ್ಮ ಅನುಭವಕ್ಕೆ ಬರುವ ವಿವಿಧ ಕ್ಷೇತ್ರಗಳ ಅಂಶಗಳನ್ನು ವರ್ಣಿಸುತ್ತದೆ. ನಿದರ್ಶನಕ್ಕಾಗಿ ಭ್ರೂಣಶಾಸ್ತ್ರ, ಪವನಶಾಸ್ತ್ರ, ಖಗೋಳಶಾಸ್ತ್ರ, ಭೂಗರ್ಭಶಾಸ್ತ್ರ ಮತ್ತು ಸಮುದ್ರಶಾಸ್ತ್ರ. ಆಧುನಿಕ ವಿಜ್ಞಾನಿಗಳು ಕುರ್‍ಆನಿನಲ್ಲಿ ಬರುವ ವೈಜ್ಞಾನಿಕ ಅಂಶಗಳನ್ನು ನಿಸ್ಸಂಶಯವಾಗಿ ಹಾಗೂ ನಿರ್ದಿಷ್ಟವಾಗಿ ಸ್ಪಷ್ಟವಾಗಿರುವುದನ್ನು 7 ನೇ ಶತಮಾನಕ್ಕಿಂತ ಮೊದಲೇ ಕುರ್‍ಆನಿನಲ್ಲಿ ವರ್ಣಿಸಲ್ಪಟ್ಟಿದೆ.
`ಶೀಘ್ರವೇ, ನಾವು ಇವರಿಗೆ ಈ ಜಗತ್ತಿನಲ್ಲೂ ಸ್ವತಃ ಇವರೊಳಗೂ ಇರುವ ನಮ್ಮ ದೃಷ್ಟಾಂತಗಳನ್ನು ತೋರಿಸಿಕೊಡುವೆವು. ಈ ಕುರ್‍ಆನ್ ನಿಜವಾಗಿಯೂ ಸತ್ಯವಾಗಿದೆ ಎಂಬುದು ಇವರಿಗೆ ವ್ಯಕ್ತವಾಗುವ ತನಕ’. ಪವಿತ್ರ ಕುರ್‍ಆನ್ 41 : 53
ವಾಸ್ತವವಾಗಿ ಅನೇಕ ವೈಜ್ಞಾನಿಕ ಅದ್ಭುತಗಳು ಕುರ್‍ಆನಿನಲ್ಲಿ ನಮೂದಿಸಲ್ಪಟ್ಟಿರುವುಗಳನ್ನೆ ಆಧುನಿಕ ವಿಜ್ಞಾನಿಗಳು ಕೇವಲ ಇತ್ತೀಚಿನ ದಿನಗಳಲ್ಲಿ ಸಂಶೋಧಿಸಿದ್ದಾರೆ ಇದಕ್ಕಾಗಿಯೇ ಅವರು ಅನೇಕ ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಬಳಸಿಕೊಂಡು ವಿಜ್ಞಾನದ ಕೊಡುಗೆಗಳಾಗಿ ಕೊಟ್ಟಿದ್ದಾರೆ ನಾವು ಈ ಕೆಳಗಿನ ಅಂಶಗಳನ್ನು ಪರಿಗಣಿಸಿದಾಗ,
1. ಕುರ್‍ಆನ್ ಗ್ರಂಥವು ತಾಯಿಯ ಗರ್ಭಕೋಶದಲ್ಲಿ ಅಂಕುರಿಸಿ ಬೆಳೆಯುವ ಮಾನವ ಭ್ರೂಣ ರೂಪುಗೊಳ್ಳುವ ಬಗ್ಗೆ, ಬಹಳ ಕೂಲಂಕುಶವಾಗಿ ವರ್ಣಿಸಲ್ಪಟ್ಟಿದೆ. ಈ ಅಂಶಗಳು ಬಹುಕಾಲ ಮಾನವ ಜೀವಶಾಸ್ತ್ರದಲ್ಲಿ ಗೊತ್ತಿಲ್ಲದೆ ಇದ್ದು ಇತ್ತೀಚೆಗಷ್ಟೆ ಸಂಶೋಧನೆಗಳ ಮೂಲಕ ಹೊರ ಬಂದಿದೆ.
2. ಪವಿತ್ರ ಕುರ್‍ಆನ್ ಗ್ರಂಥವು ಖಗೋಳ ಶಾಸ್ತ್ರದಲ್ಲಿರುವ ಆಕಾಶಕಾಯಗಳ ಕುರಿತು, (ಚಂದ್ರ, ನಕ್ಷತ್ರ, ಗ್ರಹ ಇತ್ಯಾದಿ) ಎಲ್ಲವೂ ಮೋಡಗಳ ಧೂಳುಕಣಗಳಿಂದ ರಚಿಸಲ್ಪಟ್ಟಿವೆ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೆ ಈ ಅಂಶಗಳ ಅರಿವು ಇತ್ತೀಚಿನ ವರ್ಷಗಳಿಗಿಂತ ಮುಂಚೆ ಇರಲಿಲ್ಲವೆಂದೂ, ಈ ಅಂಶಗಳೆಲ್ಲವೂ ಈಗ ಯಾವ ವಿವಾದಗಳಿಲ್ಲದೇ ಆಧುನಿಕ ವಿಶ್ವ ವಿಜ್ಞಾನದಲ್ಲಿ ವೈಜ್ಞಾನಿಕ ನಿಯಮಗಳಾಗಿವೆ.
3. ಹಾಗೆಯೇ ಕುರ್‍ಆನಿನಲ್ಲಿ ಹೇಳಲ್ಪಟ್ಟಿರುವ ಎರಡೂ ಸಮುದ್ರಗಳ ಸಂಗಮ ಮತ್ತು ಅವುಗಳ ಭಿನ್ನತೆ, ಉಷ್ಣತೆ, ಸಾಂದ್ರತೆ ಹಾಗೂ ಲವಣತೆಯ ವೈಜ್ಞಾನಿಕ ಸಂಶೋಧನೆಯ ವಿಷಯಗಳು. ಆಧುನಿಕ ವಿಜ್ಞಾನದಲ್ಲಿ ಕಂಡುಬರುವುದಕ್ಕಿಂತ ಪೂರ್ವದಲ್ಲೆ. ಶತಮಾನಗಳ ಹಿಂದೆಯೇ ಅಲ್ಲಾಹ ನ ಕುರ್‍ಆನಿನಲ್ಲಿ 1434 ವರ್ಷಗಳ ಹಿಂದೆಯೇ ಸಂದೇಶವಾಹಕರ ಮೂಲಕ ಸ್ಪಷ್ಟಪಡಿಸಿದ್ದಾನೆ.
ವಿಶಿಷ್ಟ ಏಕೈಕತೆ :
ಪವಿತ್ರ ಕುರ್‍ಆನಿನ ಅವತೀರ್ಣವಾದಾಗಿನಿಂದ, ಇಂದಿನವರೆಗೆ ಅಂತಹದೇ ಇನ್ನೊಂದು ಗ್ರಂಥವಾಗಲಿ, ಒಂದು ಅಧ್ಯಾಯವಾಗಲೀ,
ಅಂತಹದೇ ಸೂಕ್ತಿಗಳಾಗಲೀ ಯಾವೊಬ್ಬ ಪಂಡಿತ ಅಥವ ಜ್ಞಾನಿ ಬರೆಯಲು ಸಮರ್ಥನಾಗಿಲ್ಲ, ಆಗುವುದೂ ಇಲ್ಲ. ಈ ಧರ್ಮಗ್ರಂಥದ ಗೂಢಾರ್ಥದ ರೂಪ, ವರ್ಣನೆ, ಅದರ ವೈಭವ ಪೂರ್ಣಜ್ಞಾನ, ಭವಿಷ್ಯವಾಣಿಗಳು ನಿಖರವಾದ, ನಿರರ್ಗಳವಾದ ವಾಕ್‍ಝರಿಯ ಒಂದು ಸೂಕ್ತಿಯನ್ನೂ ಯಾರೊಬ್ಬರೂ ಬರೆಯಲು ಸಾಧ್ಯವಿಲ್ಲ, ಸಾಧ್ಯವಾಗಿಲ್ಲ. ಇದು ಒಂದು ಅಮೂಲ್ಯ ಮಹತ್ವದ ಏಕೈಕ ವಿಶಿಷ್ಟತೆ.
ಪೂರ್ಣತೆ:
ಪವಿತ್ರ ಕುರ್‍ಆನ್ 2 : 23 ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ ಈ ಗ್ರಂಥವು ನಮ್ಮದೋ ಅಲ್ಲವೋ ಎಂಬ ವಿಷಯದಲ್ಲಿ ನಿಮಗೆ ಸಂದೇಹವಿದ್ದರೆ ಇದಕ್ಕೆ ಸರಿಸಮಾನವಾದ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ. ಅಲ್ಲಾಹನ ಹೊರತು ನಿಮ್ಮೆಲ್ಲ ಸಾಕ್ಷಿಗಳನ್ನು ನಿಮ್ಮ ಸಹಾಯಕ್ಕಾಗಿ ಕರೆದು ತನ್ನಿ.
ಮೊಹಮ್ಮದ್ ಪೈಂಗಂಬರ್ (ಸ.ಸ) ಕುರ್‍ಆನಿನ ಗ್ರಂಥಕರ್ತರಲ್ಲವೆ ?
ಮಹಮ್ಮದ್ ಪೈಗಂಬರ್‍ರು ಅಕ್ಷರಸ್ಥ ಅಥವ ಓದುಬರಹ ಬಲ್ಲವರಾಗಲಿ, ವಿಜ್ಞಾನ, ಐತಿಹಾಸಿಕ ವಿಷಯದಲ್ಲಿ ಪಂಡಿತರು ವಿದ್ವಾಂಸರೂ ಆಗಿರಲಿಲ್ಲ. ಅವರಿಗೆ ಇಂಥಹಾ ಗ್ರಂಥ ರಚಿಸುವ ಲೇಖನಿಯ ಜ್ಞಾನವೂ ಇರಲಿಲ್ಲ. ಕುರ್‍ಆನಿನ ಅಂತರಿಕ ಸೌಂದರ್ಯ ಮತ್ತು ಅದರ ಶಿಷ್ಟಾಚಾರದ ಬಗ್ಗೆ ತಿಳಿದಿರಲಿಲ್ಲ. ಐತಿಹಾಸಿಕ ಪೂರ್ವ ಘಟನೆಗಳ ನಿಖರತೆ, ಅಂಕಿಅಂಶಗಳು, ಗತ ನಾಗರೀಕತೆಗಳ ತಿಳುವಳಿಕೆ, ವಿವರಣೆ, ಜನಜೀವನದ ಸಂಪೂರ್ಣ ಜ್ಞಾನ ಕುರ್‍ಆನಿನಲ್ಲಿ ಬಂದಿರುವಂತೆ ಪ್ರವಾದಿ ಮೊಹಮ್ಮದ್ ಸ.ಸ. ತಿಳಿಸಿರುವಂತೆ ಓದು ಬರಹ ಬಲ್ಲವರಿಗೂ ಇದು ಖಂಡಿತ ಸುಲಭವಾಗಿ ಬರಲಾರದು. ಇತರೆ ಅನಕ್ಷರಸ್ಥರಿಗೆ ಈ ಜ್ಞಾನ ಬಂದಿರಲು ಸಾಧ್ಯವಿಲ್ಲ. ಕುರ್‍ಆನಿನಲ್ಲಿ ಬಂದಿರುವಂತೆ ಆ ಕಾಲದಲ್ಲಿ ಇತರ ಯಾವ ವ್ಯಕ್ತಿಗೂ ತಿಳಿದಿರಲು ಅಸಾಧ್ಯ.
ಪವಿತ್ರ ಕುರ್‍ಆನ್
`ಈ ಕುರ್‍ಆನ್ ಅಲ್ಲಾಹನ ‘ದಿವ್ಯವಾಣಿ’ ಮತ್ತು ಬೋಧನೆಯ ಹೊರತು ರಚಿಸಲ್ಪಡುವಂತಹ ವಸ್ತುವಲ್ಲ’. ಪವಿತ್ರ ಕುರ್‍ಆನ್ 10 : 37
ಪವಿತ್ರ ಕುರ್‍ಆನಿನ ಅವತೀರ್ಣದ ಉದ್ದೇಶ
ಏಕೈಕ ನೈಜ ದೇವರಲ್ಲಿ ನಂಬಿಕೆಗಾಗಿ
ಪವಿತ್ರ ಕುರ್‍ಅನ್: ನಿಮ್ಮ ದೇವ ಏಕೈಕ ದೇವ, ದಯಾಮಯನೂ ಕರುಣಾನಿಧಿಯೂ ಆಗಿರುವವನ ಹೊರತು ಇನ್ನೊಬ್ಬ ದೇವನಿಲ್ಲ’ಪವಿತ್ರ ಕುರ್‍ಆನ್ 2 : 163
ಪವಿತ್ರ ಕುರ್‍ಆನಿನಾದ್ಯಂತ ಅತ್ಯಂತ ಮಹತ್ವಪೂರ್ಣ ಸೂಕ್ತಿ ಹೇಳಲ್ಪಟ್ಟಿರುವುದೆಂದರೆ ಏಕೈಕ ಸತ್ಯದೇವನಲ್ಲಿ ನಂಬಿಕೆ. ಅಚಲವಿಶ್ವಾಸವಿಡುವುದಾಗಿದೆ. ಅಲ್ಲಾಹನು ನಮಗೆ ಎಚ್ಚರಿಸುವುದೇನೆಂದರೆ, ನಾವು ಅತ್ಯಂತ ಮುಖ್ಯವಾಗಿ ಮನದಟ್ಟು ಮಾಡಿಕೊಳ್ಳಬೇಕಾದ ಅಂಶ. ಆತನಿಗೆ ಜೀವನ ಸಂಗಾತಿಯಿಲ್ಲ(ಪತ್ನಿ) ಸಂತಾನವಿಲ್ಲ ಆತನ ಸರಿಸಮಾನ ಸಹ ದೇವರಾರೂ ಇಲ್ಲ. ಆತನ ಹೊರತು ಆರಾಧನೆಗೆ ಮತ್ತೊಬ್ಬನು ಅರ್ಹನಿಲ್ಲ. ಆತನಿಗೆ ಸರಿಸಾಟಿ ಅಥವ ಹೋಲಿಕೆಗೆ ಅರ್ಹವಾದದ್ದು ಯಾವುದೂ ಇಲ್ಲ. ಸೃಷ್ಟಿಯಲ್ಲಿ ಕಾಣುವ ಮತ್ತು ಕಾಣದೇ ಇರುವ ಹಾಗೂ ನಮ್ಮ ಇಂದ್ರಿಯಗಳಿಗೆ ಅನುಭವವಾಗುವ ವಸ್ತುಗಳು ಅವನಿಂದ ಸೃಷ್ಟಿಯಾದವುಗಳೇ ಹೊರತು ಬೇರೇನೂ ಅಲ್ಲ.
ಹೀಗೆ ಕುರ್‍ಆನಿನ ಗ್ರಂಥವು ಏಕದೇವನಲ್ಲಿರುವ ಮಹಾನ್ ಗುಣವಿಶೇಷಣಗಳು, ಶಕ್ತಿಗಳು ಇತರರಲ್ಲಿ ಇವೆ ಎಂದು ನಂಬುವುದನ್ನು ಮತ್ತು ಆರಾಧಿಸುವುದನ್ನು ನಿರಾಕರಿಸುತ್ತದೆ.
ನಮಗೆ ನಿರ್ಣಾಯಕ ದಿನದ ತೀರ್ಪನ್ನು ಜ್ಞಾಪಿಸಲು :
ಈ ಪವಿತ್ರ ಕುರ್‍ಆನ್ ಗ್ರಂಥವು ನಮಗೆ ಹೀಗೆ ಜಾಗೃತಗೊಳಿಸುತ್ತದೆ. ಪ್ರತಿಯೊಂದು ಜೀವಿಯೂ ಮರಣದ ರುಚಿ (ಶಯ್ಯೆ) ಅಥವ ಸಾವನ್ನು ಸ್ವೀಕರಿಸಲೇಬೇಕಾಗಿದೆ ಹಾಗೂ ಪ್ರತಿ ಮಾನವನು ಆ ದಿನ ಅವನ ಸನ್ನಿಧಿಯಲ್ಲಿ ಪಾಪ ಪುಣ್ಯಗಳ ಪಟ್ಟಿ (ವಿವರ) ಕೊಡಲೇಬೇಕು ಮತ್ತು ಆ ಕರ್ಮಗಳ ಪ್ರತಿಫಲ ಪಡೆದು ಸ್ವರ್ಗ ಅಥವ ನರಕದಲ್ಲಿ ಹೋಗಲೇಬೇಕು. ಅಂದು ಅಲ್ಲಾಃನು ಯಾರಿಗೂ ಸಾಸಿವೆ ಕಾಳಿನಷ್ಟು ನ್ಯಾಯ ತೀರ್ಮಾನದಲ್ಲಿ ಅನ್ಯಾಯವೆಸಗಲಾರನು.
`ಪುನರುತ್ಥಾನ ದಿನ ನಾವು ನಿಖರವಾಗಿ ತೂಗುವ ತಕ್ಕಡಿಯನ್ನಿಟ್ಟು ಬಿಡುವೆವು. ಆನಂತರ ಯಾರ ಮೇಲೂ ಸ್ವಲ್ಪವೂ ಅಕ್ರಮವಾಗದು. ಯಾರಾದರೂ ಸಾಸಿವೆ ಕಾಳಿನಷ್ಟು ಏನಾದರೂ ಮಾಡಿದ್ದರೆ ನಾವು ಅದನ್ನು ಮುಂದೆ ತರುವೆವು ಮತ್ತು ಲೆಕ್ಕ ಪರಿಶೋಧನೆಗೆ ನಾವೇ ಸಾಕು. ಪವಿತ್ರ ಕುರ್‍ಆನ್ 21 : 47
ಮಾನವನ ಉದ್ದೇಶಪೂರಿತ ಜೀವನ ವಿಧಾನವನ್ನು ಪೂರ್ಣಗೊಳಿಸಲು
ಇಸ್ಲಾಂ ಧರ್ಮದಲ್ಲಿ ಆರಾಧನೆ ಎಂಬ ಅಂಶವು ವಿಶಾಲಾರ್ಥ ಉಳ್ಳದ್ದಾಗಿದೆ. ಇದರಲ್ಲಿ ಮಾನವನ ಪ್ರತಿಯೊಂದು ಚಿಕ್ಕ ಹಾಗೂ ಘನ ಕೆಲಸ ಕಾರ್ಯಗಳು ಅಲ್ಲಾಃನು ಮನಸ್ಸು ಒಪ್ಪುವಂತಹ ಅವನು ಸಂತುಷ್ಟನಾಗುವಂತಹ ಎಲ್ಲಾ ಕಾರ್ಯಗಳಿವೆ. ಆದುದರಿಂದ ಒಬ್ಬ ಮುಸ್ಲಿಮನು ದೇವರನ್ನು ಆರಾಧಿಸುವ ವಿಧಾನ, ತಾನು ಮಾಡುವ ಪ್ರತಿ ಚಟುವಟಿಕೆಯಲ್ಲಿ ಅವನಿಗೆ ಇಷ್ಟವಾಗುವುದನ್ನು ಮಾತ್ರ ಮಾಡುತ್ತಾನೆ. ಹೀಗೆ ಪ್ರತಿ ಕರ್ಮದಲ್ಲೂ ಆರಾಧನೆ ಅಳವಡಿಸಿಕೊಂಡು ತನ್ನ ಜೀವನದ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾನೆ. ಇದರೊಂದಿಗೆ ಕಡ್ಡಾಯವಾಗಿ ಐದು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾನೆ.
ಈ ಕೆಳಗಿನ ಸೂಕ್ತಿಗಳಲ್ಲಿ ಪವಿತ್ರ ಕುರ್‍ಆನ್ ತಿಳಿಸುತ್ತದೆ.
1. ಪ್ರಾರ್ಥನೆಗೆ : “ ಓ ಸತ್ಯ ವಿಶ್ವಾಸಿಗಳೇ ‘ಬಾಗಿರಿ’ ಮತ್ತು ‘ಸಾಷ್ಟಾಂಗವೆರಗಿರಿ’ ಮತ್ತು ನಿಮ್ಮ ಪ್ರಭುವಿನ ದಾಸ್ಯ ಆರಾಧನೆ ಮಾಡಿರಿ. ಸತ್ಕರ್ಮಗಳನ್ನೆಸಗಿರಿ. ಇದರಿಂದಲೇ ನಿಮಗೆ ಯಶಸ್ಸು ಸಿಗುವವುದೆಂದು ನಿರೀಕ್ಷಿಸಬಹುದು. ಪವಿತ್ರ ಕುರ್‍ಆನ್ 22 : 77
2. ದಾನಧರ್ಮಕ್ಕಾಗಿ : ಆದುದರಿಂದ ನಿಮ್ಮಿಂದ ಸಾಧ್ಯವಿರುವಷ್ಟು ಅಲ್ಲಾಹನನ್ನು ಭಯಪಡುತ್ತಲಿರಿ ಮತ್ತು ಆಲಿಸಿರಿ ಹಾಗೂ ಆಜ್ಞಾಪಾಲನೆ ಮಾಡಿರಿ ವiತ್ತು ಸಂಪತ್ತನ್ನು ಖರ್ಚು ಮಾಡಿರಿ. ಇದು ನಿಮಗೇ ಹಿತಕರವಾಗಿದೆ. ತಮ್ಮ ಮನಸ್ಸಿನ ಸಂಕುಚಿತತೆಯಿಂದ ಸುರಕ್ಷಿತರಾಗಿರುವವರು ಮಾತ್ರ ಯಶಸ್ವಿಗಳು ಪವಿತ್ರ ಕುರ್‍ಆನ್ 64 : 16
3. ಪ್ರಾಮಾಣಿಕತೆಗಾಗಿ : ಮಿಥ್ಯದ ಬಣ್ಣ ಬಳಿದು ಸತ್ಯವನ್ನು ಸಂದೇಹಾಸ್ಪದವನ್ನಾಗಿ ಮಾಡಬೇಡಿರಿ ಮತ್ತು ತಿಳಿದೂ ತಿಳಿದೂ ಸತ್ಯವನ್ನು ಬಚ್ಚಿಡಲು ಪ್ರಯತ್ನಿಸಬೇಡಿರಿ. ಪವಿತ್ರ ಕುರ್‍ಆನ್ 2 : 42
4. ಕೃತಜ್ಞತೆಗಾಗಿ : ಅಲ್ಲಾಃನು ನೀವು ಏನೂ ಅರಿಯದ ಸ್ಥಿತಿಯಲ್ಲಿ ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ಹೊರತಂದನು. ನೀವು ಕೃತಜ್ಞರಾಗಲಿಕ್ಕಾಗಿ ಅವನು ನಿಮಗೆ ಶ್ರವಣಶಕ್ತಿಯನ್ನು ದೃಷ್ಟಿಗಳನ್ನು ವಿಚಾರಮಾಡುವ ಮನಸ್ಸುಗಳನ್ನು ನೀಡಿದನು. ಪವಿತ್ರ ಕುರ್‍ಆನ್ 16 : 78
5. ನ್ಯಾಯಕ್ಕಾಗಿ : ಓ ಸತ್ಯ ವಿಶ್ವಾಸಿಗಳೇ, ನೀವು ನ್ಯಾಯದ ಧ್ವಜವಾಹಕರೂ ಅಲ್ಲಾಹನಿಗಾಗಿ ಸಾಕ್ಷವಹಿಸುವವರೂ ಆಗಿರಿ. ನಿಮ್ಮ ನ್ಯಾಯ ಮತ್ತು ಸಾಕ್ಷ್ಯವು ಸ್ವತಃ ನಿಮ್ಮ ಅಥವ ನಿಮ್ಮ ಮಾತಾಪಿತರ ಮತ್ತು ನಿಮ್ಮ ಸಂಬಂಧಿಕರ ವಿರುದ್ಧವಾಗಿದ್ದರೂ ಸರಿಯೇ. ಕಕ್ಷಿಯು ಧನಿಕನಿರಲಿ ಅಥವ ಬಡವನಿರಲಿ ನಿಮಗಿಂತ ಹೆಚ್ಚಾಗಿ ಅಲ್ಲಾಹನು ಅವರ ಹಿತಚಿಂತಕನಾಗಿರುತ್ತಾನೆ. ಪವಿತ್ರ ಕುರ್‍ಆನ್ 4 : 135
ಉಪಸಂಹಾರ :
ಪವಿತ್ರ ಕುರ್‍ಆನ್ ಗ್ರಂಥವು ಮಾನವ ಕುಲಕ್ಕೆ ಏಕದೇವನನ್ನು ಆರಾಧಿಸಬೇಕು ಎಂಬ ಅಂಶವನ್ನು ಸಾರವತ್ತಾಗಿ ಹಾಗೂ ಮಾನವ ಜೀವನದ ನೈಜ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಇವೆರಡನ್ನೂ ಸಾಧಿಸುವುದೇ ಯಶಸ್ಸು ಮತ್ತು ಮಾನವನ ಜೀವನವನ್ನು ಇಹಲೋಕದಲ್ಲೂ ಪರಲೋಕದಲ್ಲೂ ಸಾರ್ಥಕವೆಂದು ತೋರಿಸುತ್ತದೆ.
(ಸಂದೇಶ ವಾಹಕರೆ) ನಿಜವಾಗಿಯೂ ನಾವು ಸಕಲ ಮಾನವರಿಗಾಗಿ ಈ ಪರಮ ಸತ್ಯಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿದ್ದೇವೆ. ಇನ್ನು ನೇರಮಾರ್ಗವನ್ನನುಸರಿಸುವವನು ತಾನಾಗಿಯೇ ಅನುಸರಿಸುವನು ಮತ್ತು ಪಥಭ್ರಷ್ಟನಾಗುವವನ ಪಥಭ್ರಷ್ಟತೆಯ ದೋಷವು ಅವನ ಮೇಲೆಯೇ ಇರುವುದು. ನೀವು ಅವರ ಹೊಣೆಗಾರರಲ್ಲ. ಪವಿತ್ರ ಕುರ್ಆನ್ 39 : 41
ಇಸ್ಲಾಮನ್ನು ಅನ್ವೇಷಿಸಿ





ಅಲ್ಲಾಹ್
ನಂಬಿಕೆ




ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು





ಪ್ರವಾದಿಗಳು


ಜೀವನ ಚರಿತ್ರೆಗಳು








ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು






ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ


ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್
