ماذا يقول الإسلام عن الإرهاب؟
بِسْمِ اللهِ الرَّحْمـَنِ الرَّحِيم
ನಾವು ಬದುಕುತ್ತಿರುವ ಈ ಕಾಲಘಟ್ಟದ ವಿಶಿಷ್ಟ ಲಕ್ಷಣಗಳಲ್ಲೊಂದು ನಮ್ಮ ಸಮಾಜದಲ್ಲಿ ಭೀಮಾಕಾರವಾಗಿ ಬೆಳೆದು ನಿಂತಿರುವ ಸ್ವಚ್ಛಂದ ಹಿಂಸೆಯ ನಡುವೆ ನಾವು ಬದುಕುತ್ತಿದ್ದೇವೆ ಎಂಬುದಾಗಿದೆ. ಅದು ಮಾರುಕಟ್ಟೆಯಲ್ಲಿ ಸ್ಫೋಟಗೊಳ್ಳುವ ಒಂದು ಬಾಂಬ್ ಆಗಿರಲಿ, ಒಂದು ವಿಮಾನಾಪಹರಣವಾಗಿರಲಿ, ಜನಾಂಗೀಯ ಹತ್ಯೆಗಳಾಗಿರಲಿ, ಅಥವಾ ಇನ್ನಿತರ ಏನೇ ಆಗಿರಲಿ, ಅಲ್ಲೆಲ್ಲ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿರಪರಾಧಿ ಜೀವಗಳನ್ನು ನಿರಂತರ ಬಲಿ ತೆಗೆಯಲಾಗುತ್ತಿದೆ. ಕೊಲೆಗಳು ಸಾಮಾನ್ಯವಾಗಿರುವ, ಮನುಷ್ಯ ಜೀವಕ್ಕೆ ಬೆಲೆಯೇ ಇಲ್ಲದ ಮತ್ತು ಹಿಂಸೆಯು ವಿಶ್ವವ್ಯಾಪಕವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಇವೆಲ್ಲವುಗಳ ಮಧ್ಯೆ ಜಾಗತಿಕವಾಗಿ ತಾಂಡವವಾಡುತ್ತಿರುವ ಭಯೋತ್ಪಾದನೆಯು ಸಮಾಜದ ಶಾಂತಿ ಮತ್ತು ಸುರಕ್ಷಿತತೆಗೆ ಪ್ರಮುಖ ಬೆದರಿಕೆಯಾಗಿ ನಿಂತಿದೆ.
ಭಯೋತ್ಪಾದನೆ ಎಂಬ ಪದವು ವ್ಯಾಪಕವಾಗಿ ಬಳಕೆಗೆ ಬಂದಿದ್ದು ಕೆಲವು ದಶಕಗಳ ಹಿಂದೆ. ಈ ಹೊಸ ಪಾರಿಭಾಷಿಕ ಪದದ ವಿಪರ್ಯಾಸಕರ ಫಲಿತಾಂಶಗಳಲ್ಲೊಂದು ಏನೆಂದರೆ ಇಂದು ಭಯೋತ್ಪಾದನೆಯನ್ನು ಕೇವಲ ಕೆಲವು ನಿರ್ದಿಷ್ಟ ಗುಂಪುಗಳು ಅಥವಾ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂಬುದಾಗಿದೆ. ವಾಸ್ತವವಾಗಿ ಭಯೋತ್ಪಾದನೆಯು ಜಗತ್ತಿನಾದ್ಯಂತ ಹಬ್ಬಿಕೊಂಡಿದೆ ಮತ್ತು ಹಲವಾರು ರೂಪಗಳಲ್ಲಿ ಪ್ರಕಟಗೊಳ್ಳುತ್ತಿದೆ ಎಂಬುದಾಗಿದೆ ಸತ್ಯ. ಭಯೋತ್ಪಾದಕರು ಭಯೋತ್ಪಾದನೆಯನ್ನು ಒಂದು ನಿರ್ದಿಷ್ಟ ವಿಧಾನಕ್ಕೆ ಮಾತ್ರ ಸೀಮಿತಗೊಳಿಸಿಲ್ಲ.
ಮನುಷ್ಯ ಜೀವವನ್ನು ತುಚ್ಛವಾಗಿ ಕಾಣುವವರು, ಜನರ ಮೇಲೆ ಅಧಿಕಾರವನ್ನು ಹೊಂದಿರುವವರು, ಮಾನವೀಯತೆಯನ್ನು ಕಳೆದುಕೊಂಡವರು ನಮ್ಮ ಸಮಾಜಗಳ ಮಧ್ಯೆ ಹಲವಾರು ರೂಪಗಳಲ್ಲಿ ಭಯೋತ್ಪಾದಕರಾಗಿ ಪ್ರತ್ಯಕ್ಷರಾಗುತ್ತಾರೆ. ಯಜಮಾನನ ಮೇಲಿರುವ ಕೋಪವನ್ನು ಸಹೋದ್ಯೋಗಿಗಳ ಸಂಹಾರದ ಮೂಲಕ ತೀರಿಸುವುದು, ಹಕ್ಕು ವಂಚಿತರು ಸರಕಾರದ ಗಮನ ಸೆಳೆಯುವುದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದು, ಇಷ್ಟಪಟ್ಟ ಹುಡುಗಿ ದಕ್ಕದೆ ಹೋದಾಗ ಆಕೆಯನ್ನು ಬರ್ಬರವಾಗಿ ಕೊಲೆಗೈಯ್ಯುವುದು ಇತ್ಯಾದಿಗಳೆಲ್ಲವೂ ಜನರಲ್ಲಿ ಭಯಭೀತಿಯನ್ನು ಸೃಷ್ಟಿಸುವ ಭಯೋತ್ಪಾದನೆಗಳಾಗಿವೆ.
ಆದರೆ ಅಧಿಕಾರ ಕುರ್ಚಿಯನ್ನು ಭದ್ರಪಡಿಸುವುದಕ್ಕಾಗಿ ಪ್ರಜೆಗಳ ಮಧ್ಯೆ ಒಡೆದು ಆಳುವ ನೀತಿಯನ್ನು ಪಾಲಿಸುವವರು, ಸ್ವಹಿತಾಸಕ್ತಿಗಳ ರಕ್ಷಣೆಗಾಗಿ ಜಾತಿ ಜಾತಿಗಳ ಮಧ್ಯೆ ಶೀತಲ ಸಮರಗಳನ್ನು ಹುರಿದುಂಬಿಸುವವರು, ಅಧಿಕಾರ ಪಡೆಯುವುದಕ್ಕಾಗಿ ಜನಾಂಗೀಯ ಹತ್ಯೆ ಮಾಡುವವರು ಮುಂತಾದವರು ಕೂಡ ಭಯೋತ್ಪಾದಕರೇ ಆಗಿದ್ದಾರೆ. ಆದರೆ ಇವರಿಗೆ ಶಿಕ್ಷೆ ಸಿಗುವುದು ಮಾತ್ರ ಅಪರೂಪ.
ಭಯೋತ್ಪಾದನೆಯನ್ನು ಕೇವಲ ಒಂದು ನಿರ್ದಿಷ್ಟ ಗುಂಪು ಅಥವಾ ನಿರ್ದಿಷ್ಟ ವ್ಯಕ್ತಿಗಳಿಗೆ ಸೀಮಿತಗೊಳಿಸುವ ಈ ಅರ್ಥ ನಿರೂಪಣೆ (Definition)ಯಿಂದಾಗಿ ಇಂದು ಜಾಗತಿಕವಾಗಿ ಭಯೋತ್ಪಾದನೆಯನ್ನು ಹೆಚ್ಚಾಗಿ ಮುಸ್ಲಿಮರೊಂದಿಗೆ ಥಳಕು ಹಾಕಲಾಗುತ್ತಿದೆ. ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ. Give a dog a bad name and hang it (ಒಂದು ನಾಯಿಗೆ ಒಂದು ಕೆಟ್ಟ ಹೆಸರನ್ನಿಟ್ಟು ಅದನ್ನು ನೇಣಿಗೆ ಹಾಕು). ಜಗತ್ತಿನಲ್ಲಿ ಎಲ್ಲಾದರೂ ಯಾವುದಾದರೂ ಭಯೋತ್ಪಾದನಾ ಕೃತ್ಯ ಜರುಗಿದರೆ ಅದಕ್ಕೆ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸರ್ವೇಸಾಮಾನ್ಯವಾಗಿದೆ. ಕೆಲವೊಮ್ಮೆ ಯಾವುದಾದರೂ ನಿರಪರಾಧಿಯ ಮೇಲೆ ಈ ಕೃತ್ಯದ ಹೊಣೆಯನ್ನು ಹೊರಿಸಿ ಆತನಿಗೆ ಭಯೋ ತ್ಪಾದನೆಯ ಹಣೆಪಟ್ಟಿಯನ್ನು ಕಟ್ಟಿ ಆತನನ್ನು ಗಲ್ಲಿಗೇರಿಸುವುದೂ ಇದೆ. ಕೆಲವು ಮಂದಿ ಮುಸ್ಲಿಮರು ಅಥವಾ ಕೆಲವೊಮ್ಮೆ ಮುಸ್ಲಿಮೇತರರು ನಡೆಸುವ ಭಯೋ ತ್ಪಾದನಾ ಕೃತ್ಯಗಳಿಗೆ ಇಸ್ಲಾಮ್ ಮತ್ತು ಸರ್ವ ಮುಸ್ಲಿಮರನ್ನು ಹೊಣೆಯಾಗಿಸುವುದೂ ಇದೆ.
ಆದರೆ ವಾಸ್ತವವಾಗಿ ಮಧ್ಯಯುಗದ ಕಾಲದಲ್ಲಿ ಯೂರೋಪಿನ ಅಂಧಕಾರ ಗಳನ್ನು ಒದ್ದೋಡಿಸಿ ಬೆಳಕನ್ನು ಬೆಳಗಿಸಿದ ಇಸ್ಲಾಮ್ ಭಯವನ್ನು ಪೋಷಿಸುವ ಒಂದು ಧರ್ಮವಾಗಿರಲು ಸಾಧ್ಯವೇ? ಜಗತ್ತಿನಾದ್ಯಂತ 1.2 ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ, ಅಮೇರಿಕಾದಲ್ಲಿ 7 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಇಸ್ಲಾಮ್ ನಿರಪರಾಧಿಗಳನ್ನು ಹತ್ಯೆ ಮಾಡಲು ಬೋಧಿಸುವ ಧರ್ಮವಾಗಲು ಸಾಧ್ಯವೇ? ಇಸ್ಲಾಮಿನ ಹೆಸರೇ ಶಾಂತಿ ಮತ್ತು ಶರಣಾಗತಿ ಎಂದಾಗಿರುವಾಗ ಅದು ಕೊಲೆ ಮತ್ತು ನಿರ್ನಾಮಕ್ಕೆ ಕರೆ ನೀಡುವ ಧರ್ಮವಾಗಲು ಸಾಧ್ಯವೇ?
ನಾವು ಬಹಳ ಕಾಲದಿಂದ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿರುವುದು ಮಾಧ್ಯಮಗಳಲ್ಲಿ ಮತ್ತು ಹಾಲಿವುಡ್ ಸಿನಿಮಾಗಳಲ್ಲಾಗಿದೆ. ಆದರೆ ವಾಸ್ತವವಾಗಿ ಇಸ್ಲಾಮ್ ಹಿಂಸೆಯನ್ನು ಬೋಧಿಸುತ್ತದೆಯೇ ಎಂಬುದನ್ನು ಅರಿಯಲು ನಾವು ಉತ್ತರವನ್ನು ಹುಡುಕಬೇಕಾಗಿರುವುದು ಇಸ್ಲಾಮಿನ ಮೂಲಭೂತ ಆಧಾರ ಗ್ರಂಥಗಳನ್ನು ಮತ್ತು ಅದರ ಚರಿತ್ರೆಯನ್ನಾಗಿದೆ.
ಮನುಷ್ಯ ಜೀವದ ಪಾವಿತ್ರ್ಯತೆ:
ಕುರ್‍ಆನ್ ಹೇಳುತ್ತದೆ:
﴿وَلَا تَقْتُلُوا النَّفْسَ الَّتِي حَرَّمَ اللَّهُ إِلَّا بِالْحَقِّ ذَلِكُمْ وَصَّاكُمْ بِهِ لَعَلَّكُمْ تَعْقِلُونَ ﴾
“ಅಲ್ಲಾಹು ಪವಿತ್ರಗೊಳಿಸಿದ ಜೀವವನ್ನು ನ್ಯಾಯಬದ್ಧವಾಗಿಯೇ ವಿನಾ ಕೊಲ್ಲದಿರಿ. ಇವು ನೀವು ಚಿಂತಿಸಿ ಗ್ರಹಿಸುವುದಕ್ಕಾಗಿ ಅವನು (ಅಲ್ಲಾಹು) ನಿಮಗೆ ನೀಡಿದ ಉಪದೇಶಗಳಾಗಿವೆ.” [ಕುರ್‍ಆನ್ 6:151]
ಇಸ್ಲಾಮ್ ಮನುಷ್ಯ ಜೀವವನ್ನು ಪವಿತ್ರವೆಂದು ಪರಿಗಣಿಸುತ್ತದೆ. ಇಸ್ಲಾಮಿನಲ್ಲಿ ಮನುಷ್ಯ ಜೀವದ ಪಾವಿತ್ರ್ಯತೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಮನುಷ್ಯನನ್ನು ಬದುಕಲು ಬಿಡುವುದು ಮನುಷ್ಯನ ಮೂಲಭೂತ ಹಕ್ಕುಗಳ ಪೈಕಿ ಅತಿ ಪ್ರಮುಖವಾದುದಾಗಿದೆ.
ಕುರ್‍ಆನ್ ಹೇಳುತ್ತದೆ:
﴿مَنْ قَتَلَ نَفْسًا بِغَيْرِ نَفْسٍ أَوْ فَسَادٍ فِي الْأَرْضِ فَكَأَنَّمَا قَتَلَ النَّاسَ جَمِيعًا وَمَنْ أَحْيَاهَا فَكَأَنَّمَا أَحْيَا النَّاسَ جَمِيعًا﴾
“ಒಬ್ಬನನ್ನು ಕೊಂದಿರುವುದಕ್ಕೆ ಪ್ರತಿಯಾಗಿ ಅಥವಾ ಭೂಮಿಯಲ್ಲಿ ಕ್ಷೋಭೆ ಮಾಡಿರುವುದಕ್ಕಾಗಿ ವಿನಾ ಒಬ್ಬ ವ್ಯಕ್ತಿಯನ್ನು ಯಾರಾದರೂ ಹತ್ಯೆ ಮಾಡಿದರೆ ಅದು ಸಂಪೂರ್ಣ ಮನುಷ್ಯಕುಲವನ್ನು ಹತ್ಯೆ ಮಾಡಿರುವುದಕ್ಕೆ ಸಮಾನವಾಗಿದೆ. ಒಬ್ಬ ವ್ಯಕ್ತಿಯ ಜೀವವನ್ನು ಯಾರಾದರೂ ಉಳಿಸಿದರೆ ಅದು ಸಂಪೂರ್ಣ ಮನುಷ್ಯಕುಲದ ಜೀವವನ್ನು ಉಳಿಸಿರುವುದಕ್ಕೆ ಸಮಾನವಾಗಿದೆ.” [ಕುರ್‍ಆನ್ 5:32]
ಇದು ಒಂದು ಮನುಷ್ಯ ಜೀವದ ಮೌಲ್ಯವಾಗಿದೆ. ಒಂದು ಮನುಷ್ಯನ ಜೀವವನ್ನು ಅಪಹರಣ ಮಾಡುವುದು ಸಂಪೂರ್ಣ ಮನುಕುಲದ ಜೀವವನ್ನು ಅಪಹರಣ ಮಾಡುವುದಕ್ಕೆ ಸಮಾನವೆಂದು ಕುರ್‍ಆನ್ ಹೇಳುತ್ತದೆ. ಆದ್ದರಿಂದ ಇಸ್ಲಾಮ್ ಮಾನವ ಹತ್ಯೆಯನ್ನು ಸ್ಪಷ್ಟವಾಗಿ ವಿರೋಧಿಸುತ್ತದೆ. ಆದರೆ ಸಮಾಜದಲ್ಲಿ ಶಾಂತಿ ಮತ್ತು ಸುರಕ್ಷಿತತೆಯನ್ನು ಖಾತ್ರಿಪಡಿಸುವುದಕ್ಕಾಗಿ ಮತ್ತು ನ್ಯಾಯವನ್ನು ಎತ್ತಿಹಿಡಿಯುವುದಕ್ಕಾಗಿ ಸರಕಾರವು ಅಪರಾಧಿಯೊಬ್ಬನನ್ನು ಕೊಲ್ಲುವುದು ಅನಿವಾ ರ್ಯವಾಗಿದೆ. ಇದರ ಹೊರತಾಗಿ ಯಾರಿಗೂ ಯಾರನ್ನೂ ಕೊಲ್ಲುವ ಅಧಿಕಾರವಿಲ್ಲ.
ಇಸ್ಲಾಮಿನ ಯುದ್ಧ ನೀತಿ:
ಯುದ್ಧದ ಸಂದರ್ಭಗಳಲ್ಲೂ ಕೂಡ ಇಸ್ಲಾಮ್ ಶತ್ರುಗಳೊಂದಿಗೆ ಗೌರವಾರ್ಹವಾಗಿ ವರ್ತಿಸುವಂತೆ ಕರೆ ನೀಡುತ್ತದೆ. ಶತ್ರುದೇಶದವರಲ್ಲಿ ಸೇರಿದ ಯುದ್ಧ ಮಾಡುವವರು ಮತ್ತು ಯುದ್ಧ ಮಾಡದವರನ್ನು ಇಸ್ಲಾಮ್ ಸ್ಪಷ್ಟವಾಗಿ ಬೇರ್ಪಡಿಸುತ್ತದೆ. ಮಹಿಳೆಯರು, ಮಕ್ಕಳು, ವೃದ್ಧರು, ಬಲಹೀನರು ಮೊದಲಾದ ಯುದ್ಧ ಮಾಡದವರಿಗೆ ಸಂಬಂಧಿಸಿದಂತೆ ಪ್ರವಾದಿ ಮುಹಮ್ಮದ್(ಸ)ರವರು ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿದ್ದಾರೆ.
ಮುಹಮ್ಮದ್(ಸ)ರವರು ಹೇಳಿದರು:
“ವೃದ್ಧರನ್ನೋ, ಮಕ್ಕಳನ್ನೋ, ಮಹಿಳೆಯರನ್ನೋ ಕೊಲ್ಲಬಾರದು.” [ಅಬೂದಾವೂದ್]
“ದೇವಾಲಯಗಳಲ್ಲಿರುವ ಪುರೋಹಿತರನ್ನು ಕೊಲ್ಲಬಾರದು.” ಅಥವಾ “ದೇವಾಲಯಗಳಲ್ಲಿ ಪ್ರಾರ್ಥನಾ ನಿರತರಾಗಿರುವವರನ್ನು ಕೊಲ್ಲಬಾರದು.” [ಅಹ್ಮದ್]
ಒಂದು ಯುದ್ಧದ ಸಂದರ್ಭದಲ್ಲಿ ರಣರಂಗದಲ್ಲಿ ಒಬ್ಬ ಮಹಿಳೆಯ ಮೃತದೇಹವು ಅಂಗಾತ ಬಿದ್ದಿರುವುದನ್ನು ಕಂಡಾಗ ಪ್ರವಾದಿ(ಸ)ರವರು ಕೇಳಿದರು: “ಆಕೆ ಯುದ್ಧ ಮಾಡುತ್ತಿರಲಿಲ್ಲವಲ್ಲವೇ? ಮತ್ತೇಕೆ ಆಕೆ ಕೊಲೆಯಾದಳು?”
ಶತ್ರುದೇಶವು ಇಸ್ಲಾಮೀ ದೇಶದೊಂದಿಗೆ ಯುದ್ಧ ಮಾಡುವಾಗ ಶತ್ರುದೇಶದಲ್ಲಿ ಸೇರಿದ ಯುದ್ಧ ಮಾಡದವರಿಗೆ ಇಸ್ಲಾಮ್ ಜೀವ ಸುರಕ್ಷಿತತೆಯ ಖಾತ್ರಿಯನ್ನು ನೀಡುತ್ತದೆ.
ಜಿಹಾದ್‍ನ ಬಗ್ಗೆ ತಪ್ಪುಕಲ್ಪನೆಗಳು:
ಇಸ್ಲಾಮ್ ಧರ್ಮವು ಸಂಪೂರ್ಣವಾಗಿ ತಪ್ಪುಕಲ್ಪನೆಗೊಳಗಾಗಿರುವುದರಿಂದ ಸಾಮಾನ್ಯವಾಗಿ ಜಿಹಾದ್ ಎಂಬ ಪದವು ಧರ್ಮಯುದ್ಧ ಅಥವಾ ಮುಸ್ಲಿಮೇತರರ ಕಗ್ಗೊಲೆ ಎಂಬ ಅರ್ಥಗಳನ್ನು ಪಡೆದುಕೊಂಡಿದೆ. ಹಿಂಸಾನಿರತ ಮುಸಲ್ಮಾನರು ಖಡ್ಗದ ಮೊನೆಯನ್ನು ತೋರಿಸಿ ಶರಣಾಗಲು ಆದೇಶಿಸುವಂತಹ ಚಿತ್ರಗಳನ್ನು ಬರೆಯುವ ಮೂಲಕ ಜಿಹಾದ್ ಎಂಬ ಪದವನ್ನು ಬಹಳ ಹೀನಾಯವಾಗಿ ಚಿತ್ರಿಸಲಾಗುತ್ತಿದೆ.
ವಾಸ್ತವವಾಗಿ, ಜಿಹಾದ್ ಎಂಬ ಪದವು ಜಾಹದ ಎಂಬ ಕ್ರಿಯಾ ಪದದಿಂದ ಉದ್ಭವವಾಗುತ್ತದೆ. ಜಾಹದ ಎಂದರೆ ಹೋರಾಡಿದನು, ಪರಿಶ್ರಮಿಸಿದನು ಎಂದರ್ಥ. ಆದ್ದರಿಂದ ಭಾಷಿಕವಾಗಿ ಜಿಹಾದ್ ಎಂದರೆ ಹೋರಾಟ ಮತ್ತು ಪರಿಶ್ರಮವಾಗಿದೆ. ಮನಸ್ಸು ಕೆಡುಕಿನೆಡೆಗೆ ವಾಲುವುದನ್ನು ತಡೆಗಟ್ಟಿ ಅದನ್ನು ಒಳಿತಿನೆಡೆಗೆ ಮುನ್ನಡೆಸುವ ನಿರಂತರ ಹೋರಾಟ ಅಥವಾ ಪರಿಶ್ರಮವಾಗಿದೆ ಅತಿದೊಡ್ಡ ಜಿಹಾದ್. ಆದ್ದರಿಂದ ಜಿಹಾದ್ ಎಂಬುದರ ಪ್ರಾಥಮಿಕ ಉದ್ದೇಶವು ಜೀವನದ ಎಲ್ಲ ರಂಗಗಳಲ್ಲೂ ಸೃಷ್ಟಿಕರ್ತನಿಗೆ ಶರಣಾಗುವುದಕ್ಕಾಗಿ ನಡೆಸುವ ಹೋರಾಟ ಮತ್ತು ಪರಿಶ್ರಮವಾಗಿದೆ.
ಎರಡನೆಯದಾಗಿ, ಜಿಹಾದ್ ಎಂಬುದು ಅನ್ಯಾಯದ ವಿರುದ್ಧ ನಡೆಸುವ ಹೋರಾಟವಾಗಿದೆ. ಇತರೆಲ್ಲ ಧರ್ಮಗಳಂತೆ ಇಸ್ಲಾಮ್ ಕೂಡ ಆತ್ಮರಕ್ಷಣೆ ಅಥವಾ ಸರ್ವಾಧಿಕಾರ, ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡಲು ಅನುಮತಿ ನೀಡುತ್ತದೆ.
ಕುರ್‍ಆನ್ ಹೇಳುತ್ತದೆ:
﴿وَمَا لَكُمْ لَا تُقَاتِلُونَ فِي سَبِيلِ اللَّهِ وَالْمُسْتَضْعَفِينَ مِنَ الرِّجَالِ وَالنِّسَاءِ وَالْوِلْدَانِ الَّذِينَ يَقُولُونَ رَبَّنَا أَخْرِجْنَا مِنْ هَذِهِ الْقَرْيَةِ الظَّالِمِ أَهْلُهَا وَاجْعَلْ لَنَا مِنْ لَدُنْكَ وَلِيًّا وَاجْعَلْ لَنَا مِنْ لَدُنْكَ نَصِيرًا ﴾
“ನಮ್ಮ ಪ್ರಭೂ! ಅಕ್ರಮಿಗಳಾದ ಜನರು ನೆಲೆಸುವ ಈ ನಾಡಿನಿಂದ ನಮ್ಮನ್ನು ವಿಮೋಚನೆಗೊಳಿಸು. ನಿನ್ನ ವತಿಯ ಓರ್ವ ರಕ್ಷಕನನ್ನು ನಮಗೆ ನಿಶ್ಚಯಿಸಿಕೊಡು ಮತ್ತು ನಿನ್ನ ವತಿಯ ಓರ್ವ ಸಹಾಯಕನನ್ನು ನಮಗೆ ನಿಶ್ಚಯಿಸಿಕೊಡು’ ಎಂದು ಪ್ರಾರ್ಥಿಸುತ್ತಿರುವ ದಬ್ಬಾಳಿಕೆಗೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗಾಗಿ ಅಲ್ಲಾಹುವಿನ ಮಾರ್ಗದಲ್ಲಿ ಹೋರಾಟ ಮಾಡದಿರಲು ನಿಮಗೇನಾಗಿದೆ?” [ಕುರ್‍ಆನ್ 4:75]
ಆದ್ದರಿಂದ ಆತ್ಮ ಶುದ್ಧೀಕರಣಕ್ಕಾಗಿ ಮತ್ತು ಸಮಾಜದಲ್ಲಿ ಶಾಂತಿ, ಸಮಾಧಾನ ಮತ್ತು ನ್ಯಾಯವನ್ನು ಸ್ಥಾಪಿಸುವುದಕ್ಕಾಗಿ ಹೋರಾಡಲು ಇಸ್ಲಾಮ್ ಆದೇಶಿಸುತ್ತದೆ. ತನ್ನ ಸುತ್ತ ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಕಾಣುವಾಗ ಕೈಕಟ್ಟಿ ಕೂರುವುದು ಮುಸ್ಲಿಮನಿಗೆ ಯೋಗ್ಯವಾದುದಲ್ಲ. ಮಾರ್ಟಿನ್ ಲೂಥರ್ ಹೇಳಿದಂತೆ:
“ನಾವು ಈ ತಲೆಮಾರಿನಲ್ಲೂ ಪಶ್ಚಾತ್ತಾಪ ಪಡಬೇಕಾಗಿದೆ; ದುಷ್ಕರ್ಮಿಗಳ ದ್ವೇಷಪೂರಿತ ಮಾತು ಮತ್ತು ಕೃತ್ಯಗಳಿಗಾಗಿ ಮಾತ್ರವಲ್ಲ, ಸಜ್ಜನರ ದಿಗಿಲುಗೊಳಿಸು ವಂತಹ ಮೌನಕ್ಕಾಗಿಯೂ ಸಹ.”
ಎಲ್ಲ ವಿಷಯಗಳಲ್ಲೂ ಅಲ್ಲಾಹು ಸೃಷ್ಟಿಸಿದ ಸಮತೋಲನವನ್ನು ಕಾಪಾಡು ವುದಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಇಸ್ಲಾಮ್ ಎಲ್ಲ ಮುಸ್ಲಿಮರಿಗೂ ಕರೆ ನೀಡುತ್ತದೆ. ಕಾರಣವು ಎಷ್ಟೇ ನ್ಯಾಯಬದ್ಧವಾಗಿದ್ದರೂ ಸಹ ನಿರಪರಾಧಿಯನ್ನು ಕೊಲ್ಲುವುದನ್ನು ಇಸ್ಲಾಮ್ ವಿರೋಧಿಸುತ್ತದೆ. ನಾಗರಿಕರಲ್ಲಿ ಭಯ ಮೂಡಿಸುವುದು ಎಂದೂ ಜಿಹಾದ್ ಆಗಲಾರದು ಮತ್ತು ಅದು ಎಂದೂ ಇಸ್ಲಾಮಿನ ಬೋಧನೆಗಳೊಂದಿಗೆ ಹೊಂದಾಣಿಕೆಯಾಗದು.
ಸಹಿಷ್ಣುತೆಯ ಚರಿತ್ರೆ:
ಮುಸ್ಲಿಮರು ಅನ್ಯಧರ್ಮೀಯರನ್ನು ಬಲವಂತವಾಗಿ ಮತಾಂತರ ಮಾಡುತ್ತಾರೆ ಎಂಬ ಕಟ್ಟುಕಥೆಯನ್ನು ಪಾಶ್ಚಾತ್ಯ ಮೇಧಾವಿಗಳು ಕೂಡ ಖಂಡಿಸಿದ್ದಾರೆ.
ಪ್ರಸಿದ್ಧ ಇತಿಹಾಸಕಾರರಾದ De Lacy O’Leary ಹೇಳುತ್ತಾರೆ:
“ಮತಾಂಧ ಮುಸ್ಲಿಮರು ಜಗತ್ತಿನಾದ್ಯಂತ ತಾವು ವಶಪಡಿಸಿದ ಜನಾಂಗಗಳನ್ನು ಖಡ್ಗದ ಮೊನೆಯನ್ನು ತೋರಿಸುವ ಮೂಲಕ ಬಲವಂತವಾಗಿ ಮತಾಂತರ ಮಾಡಿದರು ಎಂಬ ಇತಿಹಾಸಕಾರರು ಪದೇ ಪದೇ ಪುನರಾವರ್ತಿಸುವ ಅಸಂಬದ್ಧವು ಒಂದು ಕಟ್ಟುಕತೆಯಾಗಿದೆಯೆಂದು ಇತಿಹಾಸವು ರುಜುವಾತುಪಡಿಸಿದೆ.” [Islam At Crossroads, London, 1923, pg. 8]
ಮುಸ್ಲಿಮರು ಸ್ಪೈನ್ ದೇಶವನ್ನು 800 ವರ್ಷಗಳ ಕಾಲ ಆಳಿದರು. ಈ ಸುದೀರ್ಘ ಕಾಲಘಟ್ಟದಲ್ಲೂ ಮತ್ತು ಮುಸ್ಲಿಮರನ್ನು ಅಲ್ಲಿಂದ ಬಲವಂತವಾಗಿ ಹೊರದಬ್ಬಲಾದ ಬಳಿಕವೂ ಅಲ್ಲಿನ ಪ್ರಜೆಗಳಾದ ಮುಸ್ಲಿಮೇತರರು ಜೀವಂತ ವಾಗಿದ್ದರು ಮತ್ತು ಬೆಳವಣಿಗೆ ಹೊಂದುತ್ತಿದ್ದರು. ಮಧ್ಯಪೂರ್ವ ಮುಸ್ಲಿಮ್ ರಾಷ್ಟ್ರಗಳಲ್ಲಿ ಶತಮಾನಗಳಿಂದ ಅಲ್ಲಿನ ಅಲ್ಪಸಂಖ್ಯಾತರಾದ ಯಹೂದ ಮತ್ತು ಕ್ರೈಸ್ತರು ಬದುಕುತ್ತಲೇ ಇದ್ದಾರೆ. ಈಜಿಪ್ಟ್, ಮೊರೊಕ್ಕೊ, ಪ್ಯಾಲಸ್ತೀನ್, ಲೆಬನಾನ್, ಸಿರಿಯಾ, ಜೋರ್ಡಾನ್ ಮೊದಲಾದ ದೇಶಗಳಲ್ಲಿ ಯಹೂದ ಮತ್ತು ಕ್ರೈಸ್ತರ ಗಮನಾರ್ಹ ಜನಸಂಖ್ಯೆಯಿದೆ.
ಕುರ್‍ಆನ್ ಹೇಳುತ್ತದೆ:
لَا إِكْرَاهَ فِي الدِّينِ قَدْ تَبَيَّنَ الرُّشْدُ مِنَ الْغَيِّ فَمَنْ يَكْفُرْ بِالطَّاغُوتِ وَيُؤْمِنْ بِاللَّهِ فَقَدِ اسْتَمْسَكَ بِالْعُرْوَةِ الْوُثْقَى لَا انْفِصَامَ لَهَا وَاللَّهُ سَمِيعٌ عَلِيمٌ
“ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಸ್ಪಷ್ಟವಾಗಿ ಬೇರ್ಪಟ್ಟು ನಿಂತಿದೆ. ಆದ್ದರಿಂದ ಯಾರು ತಾಗೂತ (ಮಿಥ್ಯಾರಾಧ್ಯರ)ನ್ನು ನಿಷೇಧಿಸಿ ಅಲ್ಲಾಹುವಿನಲ್ಲಿ ವಿಶ್ವಾಸವಿಡುವನೋ ಅವನು ಅತ್ಯಂತ ಬಲಿಷ್ಠವಾದ ಹಗ್ಗವನ್ನು ಹಿಡಿದಿರುವನು. ಅದೆಂದೂ ಕಡಿದು ಹೋಗಲಾರದು. ಅಲ್ಲಾಹು (ಎಲ್ಲವನ್ನು) ಆಲಿಸುವವನೂ ಅರಿಯುವವನೂ ಆಗಿರುವನು.” [ಕುರ್‍ಆನ್ 2:256]
ಇಸ್ಲಾಮ್ – ವಿಶ್ವಭಾತೃತ್ವದ ಸಂಕೇತ:
ಉಗ್ರಗಾಮಿ ಚಿಂತನೆಗಳನ್ನು ಬಿತ್ತುವ ಪ್ರತಿಗಾಮಿ ಧರ್ಮವಾಗಿರುವುದರ ಬದಲು ಇಸ್ಲಾಮ್ ಎಂಬುದು ಮಾನವೀಯತೆಯನ್ನು ಎತ್ತಿಹಿಡಿಯುವ ಮತ್ತು ಜಾತಿ, ಕುಲ ಮತ್ತು ಜನಾಂಗೀಯತೆಯನ್ನು ಮೆಟ್ಟಿನಿಲ್ಲುವ ಒಂದು ಸಂಪೂರ್ಣ ಜೀವನ ಪದ್ಧತಿಯಾಗಿದೆ.
ಕುರ್‍ಆನ್ ಹೇಳುತ್ತದೆ:
﴿يَا أَيُّهَا النَّاسُ إِنَّا خَلَقْنَاكُمْ مِنْ ذَكَرٍ وَأُنْثَى وَجَعَلْنَاكُمْ شُعُوبًا وَقَبَائِلَ لِتَعَارَفُوا إِنَّ أَكْرَمَكُمْ عِنْدَ اللَّهِ أَتْقَاكُمْ إِنَّ اللَّهَ عَلِيمٌ خَبِيرٌ
“ಓ ಮನುಷ್ಯರೇ! ಖಂಡಿತವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆವು. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿವಿಧ ಸಮುದಾಯ ಮತ್ತು ಜನಾಂಗಗಳನ್ನಾಗಿ ಮಾಡಿರುವೆವು. ಖಂಡಿತವಾಗಿಯೂ ಅಲ್ಲಾಹುವಿನ ಬಳಿ ನಿಮ್ಮ ಪೈಕಿ ಅತ್ಯಂತ ಗೌರವಾನ್ವಿತನು ನಿಮ್ಮ ಪೈಕಿ ಅತಿಹೆಚ್ಚು ಭಯಭಕ್ತಿ ಪಾಲಿಸುವವನಾಗಿರುವನು. ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವನು.” [ಕುರ್‍ಆನ್ 49:13]
ಇಸ್ಲಾಮೀ ಶಿಕ್ಷಣಗಳ ಸಾರ್ವತ್ರಿಕತೆಯಿಂದಾಗಿ ಇಂದು ಇಸ್ಲಾಮ್ ಜಗತ್ತಿನಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಒಂದು ಧರ್ಮವಾಗಿ ಮಾರ್ಪಟ್ಟಿದೆ. ಮನುಷ್ಯ ಮನುಷ್ಯರ ನಡುವೆ ಬಡಿದಾಟ, ಕಾಳಗ, ಯುದ್ಧಗಳು ವಿಪರೀತ ಹೆಚ್ಚಾಗಿರುವ ಹಾಗೂ ವ್ಯಕ್ತಿ ಮತ್ತು ಸಾಮ್ರಾಜ್ಯಗಳಿಂದ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುತ್ತಿರುವ ಜಗತ್ತಿಗೆ ಇಸ್ಲಾಮ್ ಭವ್ಯ ಭವಿಷ್ಯತ್ತಿನ ನಿರೀಕ್ಷೆ ಹುಟ್ಟಿಸುವ ಒಂದು ಬೆಳಕಾಗಿದೆ.
وَصَلَّى اللهُ وَسَلَّم عَلَى نَبِيِّنَا مُحَمَّدِِ وَعَلى آلِهِ وَصَحْبِهِ أجْمَعِين .
– ಮುಹಮ್ಮದ್ ಹಂಝಾ ಪುತ್ತೂರು