ದೇವರ ಸಂದೇಶವಾಹಕ ಮುಹಮ್ಮದ್ (ಅವರ ಮೇಲೆ ಶಾಂತಿ ಇರಲಿ)
ನೀವು ಈ ವ್ಯಕ್ತಿಯನ್ನರಿಯಬೇಕು!
ಮುಹಮ್ಮದ್(ಅವರ ಮೇಲೆ ಶಾಂತಿ ಇರಲಿ) ಯಾರು?
“ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ನಿರೀಕ್ಷೆಯನ್ನಿರಿಸಿಕೊಂಡಿರುವ ಮತ್ತು ಸತತವಾಗಿ ಅಲ್ಲಾಹನ ಸ್ಮರಣೆಯಲ್ಲಿರುವವರಿಗೆ ಅನುಸರಿಸಲು ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರಲ್ಲಿ ಉತ್ತಮ ಮಾದರಿಯಿರುತ್ತದೆ.” (ಖುರ್‍ಆನ್ 33:21)
ಕೇವಲ ಅಲ್ಲಾಹನ ಆರಾಧನೆ ಮತ್ತು ಆಜ್ಞಾಪಾಲನೆಯತ್ತ ಆಹ್ವಾನಿಸಲು ಕಳುಹಿಸಿರುವ ಎಲ್ಲ ಸಂದೇಶವಾಹಕರುಗಳ ಪೈಕಿ ಮುಹಮ್ಮದ್(ಅವರ ಮೇಲೆ ಶಾಂತಿ ಇರಲಿ) ಅಂತಿಮ ಸಂದೇಶವಾಹಕರೆಂಬುದು ಮುಸ್ಲಿಮರ ದೃಢವಿಶ್ವಾಸ.
ಇಂತಹ ಸಂದೇಶವಾಹಕರುಗಳ ಪೈಕಿ ಕೆಲವರನ್ನು ಇಲ್ಲಿ ಹೆಸರಿಸಬಹುದು, ಉದಾ: ಆದಮ್, ನೂಹ್, ಇಬ್ರಾಹೀಮ್, ಇಸ್ಮಾಯೀಲ್ , ಇಸ್‍ಹಾಕ್, ಯಾಕೂಬ್, ಯೂಸುಫ್, ಮೂಸಾ, ದಾವೂದ್, ಸುಲೈಮಾನ್ ಮತ್ತು ಏಸು.
ಮೂಸಾರನ್ನು(ಅವರ ಮೇಲೆ ಶಾಂತಿ ಇರಲಿ) ‘ತೌರಾತ್’(ಮೂಸಾರಿಗೆ ಅವತೀರ್ಣಗೊಂಡ ಕಲುಷಿತಗೊಂಡಿರದ ಮೂಲ ಗ್ರಂಥ)ನೊಂದಿಗೆ ಮತ್ತು ಏಸುವನ್ನು(ಅವರ ಮೇಲೆ ಶಾಂತಿ ಇರಲಿ) ‘ಇಂಜೀಲ್’(ಏಸುವಿಗೆ ಅವತೀರ್ಣಗೊಂಡ ಏರುಪೇರಾಗಿರದ ಪರಿಶುದ್ಧ ಮೂಲಗ್ರಂಥ – ಇಂದಿನ ಬೈಬಲ್ ಅಲ್ಲ)ನೊಂದಿಗೆ ಕಳುಹಿಸಿದ್ದಂತೆಯೇ ಮುಹಮ್ಮದ್‍ರನ್ನು(ಅವರ ಮೇಲೆ ಶಾಂತಿ ಇರಲಿ) ಪವಿತ್ರ ಖುರ್‍ಆನ್‍ನೊಂದಿಗೆ ಕಳುಹಿಸಲಾಗಿದೆ: ಇಸ್ಲಾಮ್‍ನ ಶಿಕ್ಷಣವನ್ನು ಪರಿಪಾಲಿಸುವ ಬಗೆಯನ್ನು ತಿಳಿಸಿಕೊಡಲಿಕ್ಕಾಗಿ, ಎಂಬುದು ಮುಸ್ಲಿಮರ ವಿಶ್ವಾಸ.
ಅಲ್ಲಾಹನ ಸಂದೇಶವಾಹಕರ ಪತ್ನಿ ಆಯೆಷಾರನ್ನು ತಮ್ಮ ಪತಿಯ ಕುರಿತು ವರ್ಣಿಸಲು ವಿನಂತಿಸಿಕೊಂಡಾಗ ಅವರ ಉತ್ತರ “ಅವರು(ಅವರ ಮೇಲೆ ಶಾಂತಿ ಇರಲಿ) ಚಲಿಸುವ ಖುರ್‍ಆನ್” ಎಂದಾಗಿತ್ತು. ಅರ್ಥಾತ್, ಅವರು(ಅವರ ಮೇಲೆ ಶಾಂತಿ ಇರಲಿ) ದಿನನಿತ್ಯದ ಆಗುಹೋಗುಗಳಲ್ಲಿ, ನಡೆ-ನುಡಿಗಳಲ್ಲಿ ಖುರ್‍ಆನನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದರು. ಇಲ್ಲಿ ನಾವು ಮುಹಮ್ಮದರು(ಅವರ ಮೇಲೆ ಶಾಂತಿ ಇರಲಿ) ಹೇಗೆ ಉನ್ನತ ಶಿಕ್ಷಣವನ್ನು ಉನ್ನತ ಕಾರ್ಯಗಳನ್ನಾಗಿ ಪರಿವರ್ತಿಸಿದರೆಂದು ತಿಳಿಯಲಿದ್ದೇವೆ.
ಕರುಣಾಜನಕ
“ಮತ್ತು ನಾವು(ಅಲ್ಲಾಹ್) ನಿಮ್ಮನ್ನು[ಮುಹಮ್ಮದ್(ಅವರ ಮೇಲೆ ಶಾಂತಿ ಇರಲಿ)] ಸಕಲ ಲೋಕಕ್ಕೆ ಕರುಣಾಮಯಿಯಾಗಿ ಕಳುಹಿಸಿರುತ್ತೇವೆ” (ಖುರ್‍ಆನ್ 21:107)
ಜನರನ್ನು ಆರಾಧನಾಕರ್ಮಗಳಲ್ಲಿ, ಉಪವಾಸ ವೃತಗಳನ್ನಾಚರಿಸುವಲ್ಲಿ ಮತ್ತು ದಾನಧರ್ಮಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವುದರೊಂದಿಗೆ, ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ‘ಅಲ್ಲಾಹನಲ್ಲಿರುವ ನಿಮ್ಮ ನಂಬಿಕೆಯು ಇತರರೊಂದಿಗಿನ ನಿಮ್ಮ ನಡುವಳಿಕೆಯ ಮೇಲೂ ಪ್ರಭಾವ ಬೀರಬೇಕು’ ಎಂಬ ಶಿಕ್ಷಣವನ್ನಿತ್ತರು. ಅವರು(ಅವರ ಮೇಲೆ ಶಾಂತಿ ಇರಲಿ) ಹೇಳಿದರು:
‘ನಡುವಳಿಕೆಯಲ್ಲಿ ಯಾರು ಉತ್ತಮರೋ, ಅವರೇ ನಿಮ್ಮ ಪೈಕಿ ಉತ್ತಮರು.’
ಅಲ್ಲಾಹನ ಸಂದೇಶವಾಹಕರ(ಅವರ ಮೇಲೆ ಶಾಂತಿ ಇರಲಿ) ಹಲವಾರು ನುಡಿಗಳು ಮಾನವನ ವಿಶ್ವಾಸ ಮತ್ತು ಕರ್ಮಗಳ ನಡುವಿನ ಸಂಬಂಧಗಳಿಗೇ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ. ಉದಾ:
“ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿರಿಸುವವನು ತನ್ನ ನೆರೆಹೊರೆಯವರಿಗೆ ತೊಂದರೆ ಕೊಡಬಾರದು ಮತ್ತು ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿರಿಸುವವನು ತನ್ನ ಅತಿಥಿಗಳೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು ಮತ್ತು ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿರಿಸುವವನು ಉತ್ತಮ ಮಾತುಗಳನ್ನೇ ಆಡಬೇಕು, ಇಲ್ಲವೇ ಮೌನವಹಿಸಬೇಕು.”
ಅಂತಿಮ ಸಂದೇಶವಾಹಕ ಮುಹಮ್ಮದ್‍ರು(ಅವರ ಮೇಲೆ ಶಾಂತಿ ಇರಲಿ) ಮಾನವರಿಗೆ ಕರುಣಾಜನಕರಾಗುವಂತೆ ಮತ್ತು ಪರಸ್ಪರರೊಂದಿಗೆ ಗೌರವಾದರಗಳೊಂದಿಗೆ ನಡೆದುಕೊಳ್ಳುವಂತೆ ಶಿಕ್ಷಣವನ್ನು ನೀಡಿದರು:
“ಅನ್ಯರ ಮೇಲೆ ಕರುಣೆ ತೋರದವನಿಗೆ ಕರುಣೆ ತೋರಲಾಗದು.”
ಇನ್ನೊಂದು ವರದಿಯಂತೆ, ಕೆಲವರು ಅಲ್ಲಾಹನ ಸಂದೇಶವಾಹಕರಲ್ಲಿ(ಅವರ ಮೇಲೆ ಶಾಂತಿ ಇರಲಿ) ಸತ್ಯನಿಷೇಧಿಗಳನ್ನು ಶಿಕ್ಷಿಸುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಲು ನಿವೇದಿಸಿಕೊಂಡರು. ಆದರೆ ಅವರ ಉತ್ತರ ಈ ರೀತಿಯಾಗಿತ್ತು:
“ನಾನು ಕರುಣಾಜನಕನಾಗಿ ಕಳುಹಿಸಲ್ಪಟ್ಟಿರುವೆನೇ ಹೊರತು ಶಪಿಸಲಿಕ್ಕಾಗಿಯಲ್ಲ”
ಕ್ಷಮಾಭಾವ
“ಅವರು ಕ್ಷಮಿಸುವಂಥವರಾಗಲಿ ಮತ್ತು ಮನ್ನಿಸುವಂಥವರಾಗಲಿ; ನಿಮ್ಮ ಪ್ರಭು ನಿಮ್ಮನ್ನು ಕ್ಷಮಿಸಿಬಿಡಲೆಂದು ನೀವು ಆಶಿಸುವುದಿಲ್ಲವೇ? ಮತ್ತು ಅಲ್ಲಾಹನು ಮಹಾ ಕ್ಷಮಾಶೀಲನೂ, ಪರಮ ಕರುಣಾಮಯಿಯೂ ಆಗಿರುತ್ತಾನೆ.” (ಖುರ್‍ಆನ್ 24:22)
ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ಎಲ್ಲ ಮಾನವರ ಪೈಕಿ ಅದ್ಭುತ ಕ್ಷಮಾಭಾವವನ್ನೂ, ಕರುಣಾಭಾವವನ್ನೂ ಹೊಂದಿದ್ದರು. ಯಾರಾದರೂ ಅವರನ್ನು(ಅವರ ಮೇಲೆ ಶಾಂತಿ ಇರಲಿ) ನಿಂದಿಸಿದಲ್ಲಿ, ಅವರನ್ನು ಕ್ಷಮಿಸುತ್ತಿದ್ದರು. ಅವರ(ಅವರ ಮೇಲೆ ಶಾಂತಿ ಇರಲಿ) ಮೇಲೆ ಹಾವಿಯಾಗಲು ಯತ್ನಿಸಿದಷ್ಟು ಅವರು(ಅವರ ಮೇಲೆ ಶಾಂತಿ ಇರಲಿ) ತಾಳ್ಮೆಯಿಂದಿರುತ್ತಿದ್ದರು. ವಿಶೇಷತಃ ತಾವು ಮೇಲುಗೈ ಸಾಧಿಸುವ ಲಕ್ಷಣಗಳಿದ್ದು, ತಿರುಗಿಬೀಳಲು ಶಕ್ತರಿರುವಾಗ ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ತೀವ್ರವಾಗಿ ಸಹನಾಶೀಲರೂ ಕ್ಷಮಾಶಾಲಿಯೂ ಆಗಿರುತ್ತಿದ್ದರು. ಮುಹಮ್ಮದರು(ಅವರ ಮೇಲೆ ಶಾಂತಿ ಇರಲಿ) ಸದಾ ಕ್ಷಮಿಸುವುದನ್ನೇ ಬಯಸುತ್ತಿದ್ದರು ಮತ್ತು ಎಷ್ಟೇ ತೀವ್ರ ಸ್ವರೂಪದ ಅಪರಾಧಗಳಿರಲಿ ಇಲ್ಲವೇ ಅತಿಕ್ರಮಣವಾಗಿರಲಿ, ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ಅವುಗಳನ್ನು ಕ್ಷಮಿಸುವುದರತ್ತ ಒಲವು ತೋರುತ್ತಿದ್ದರು. ಈ ಕೆಳಗಿನ ಪವಿತ್ರ ಖುರ್‍ಆನಿನ ಸೂಕ್ತದಲ್ಲಿ ಹೇಳಿರುವಂತೆ ಅಲ್ಲಾಹನ ಸಂದೇಶವಾಹಕರು ಕ್ಷಮಾಭಾವ ಮತ್ತು ಸೌಜನ್ಯತೆಗಿರುವ ಅತ್ಯುತ್ತಮ ಉದಾಹರಣೆ:
“(ಓ ಮುಹಮ್ಮದ್) ಕ್ಷಮಾಶೀಲರಾಗಿರಿ, ಒಳಿತನ್ನೇ ಬೋಧಿಸಿರಿ ಮತ್ತು ತಿಳಿಗೇಡಿಗಳನ್ನು ನಿರ್ಲಕ್ಷಿಸಿರಿ.” (ಖುರ್‍ಆನ್ 7:199)
ಸಮಾನತೆ
“ನಿಶ್ಚಯವಾಗಿಯೂ, ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ಅಲ್ಲಾಹನ ದೃಷ್ಟಿಯಲ್ಲಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು.” (ಖುರ್‍ಆನ್ 49:13)
ಈ ಕೆಳಗಿನ ಅಲ್ಲಾಹನ ಸಂದೇಶವಾಹಕರ(ಅವರ ಮೇಲೆ ಶಾಂತಿ ಇರಲಿ) ಹೇಳಿಕೆಯಲ್ಲಿ, ಎಲ್ಲ ಮಾನವರೂ ಅಲ್ಲಾಹನ ದೃಷ್ಟಿಯಲ್ಲಿ ಸಮಾನರು ಎಂಬುದು ಸ್ಪಷ್ಟವಾಗುತ್ತದೆ.
“ಎಲ್ಲ ಮಾನವರೂ ಆದಮರ ಸಂತಾನರೇ ಮತ್ತು ಆದಮರು ಮಣ್ಣಿನಿಂದ ಸೃಷ್ಟಿಸಲ್ಪಟ್ಟರು. ಧರ್ಮನಿಷ್ಠತೆಯ ವಿನಃ ಅರಬರು ಅರಬೇತರರಿಗಿಂತ ಶ್ರೇಷ್ಠರಲ್ಲ; ಅಂತೆಯೇ ಬಿಳಿಯರು ಕರಿಯರಿಗಿಂತ ಶ್ರೇಷ್ಠರಲ್ಲ.”
“ಅಲ್ಲಾಹನ ತೀರ್ಪು ನಿಮ್ಮ ರೂಪ ಅಥವಾ ನಿಮ್ಮ ಸಂಪತ್ತನ್ನು ಆಧರಿಸಿರುವುದಿಲ್ಲ, ಬದಲಾಗಿ ಅವನು ನಿಮ್ಮ ಹೃದಯವನ್ನು ಕಾಣುತ್ತಾನೆ, ನಿಮ್ಮ ಕರ್ಮಗಳನ್ನಳೆಯುತ್ತಾನೆ.”
ಒಮ್ಮೆ ಅಲ್ಲಾಹನ ಸಂದೇಶವಾಹಕರ(ಅವರ ಮೇಲೆ ಶಾಂತಿ ಇರಲಿ) ಸಂಗಡಿಗರಲ್ಲೊಬ್ಬರು ಇನ್ನೊಬ್ಬ ಸಂಗಡಿಗರಿಗೆ ಕೇವಲವಾಗಿ ಹೀಗೆ ನುಡಿದರು, “ಓ ಕರಿತಾಯಿಯ ಪುತ್ರನೇ!”. ಅಲ್ಲಾಹನ ಸಂದೇಶವಾಹಕರು ತೀವ್ರವಾಗಿ ಕುಪಿತಗೊಂಡರು, ಮತ್ತು ಹೀಗೆಂದರು, “ನೀವು ಅವನನ್ನು ಅವನ ತಾಯಿಯು ಕರಿಯಾಗಿರುವುದರ ಕುರಿತು ದೂಷಿಸುವಿರೇ? ಇಸ್ಲಾಮಿ ಪೂರ್ವ ಜೀವನದ ಅಜ್ಞಾನದ ಕುರುಹನ್ನು ಈಗಲೂ ನಾನು ನಿಮ್ಮಲ್ಲಿ ಕಾಣುತ್ತಿರುವೆನು.”
ತಾಳ್ಮೆ
“ಸತ್ಕರ್ಮಗಳೂ ದುಷ್ಕರ್ಮಗಳೂ ಏಕಸಮಾನವಲ್ಲ. ಕೆಡುಕನ್ನು ಒಳಿತಿನಿಂದ ಬಗೆಹರಿಸಿರಿ. ಹೀಗೆ, ನಿಮ್ಮ ಶತ್ರುವೂ ನಿಮ್ಮ ಆಪ್ತಮಿತ್ರನಾಗಿಬಿಡುವುದನ್ನು ನೀವು ಕಾಣುವಿರಿ” (ಖುರ್‍ಆನ್ 41:34)
ವೈಯಕ್ತಿಕ ದೋಷಾರೋಪಣೆಗಳಿಗೆ ಉತ್ತರಿಸುವುದರ ಕುರಿತು ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ತಮ್ಮ ಅನುಯಾಯಿಗಳಿಗೆ ಈ ಕೆಳಗಿನ ಸಲಹೆಯನ್ನು ನೀಡಿದ್ದರು:
“ನಿಮ್ಮೊಂದಿಗೆ ಕೆಡುಕನ್ನು ಬಯಸುವವರಿಗೆ ನೀವು ಕೆಡುಕನ್ನು ಬಯಸದಿರಿ. ಬದಲಾಗಿ ಅವರೊಂದಿಗೆ, ನಮೃವಾಗಿ ಕ್ಷಮಾಭಾವದಿಂದ ವರ್ತಿಸಿರಿ.”
ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ), ತಮಗೆ ಕೇಡನ್ನುಂಟುಮಾಡಿದವರಿಗೆ ತಕ್ಕ ಶಾಸ್ತಿ ಕಲಿಸುವ ಸಂಪೂರ್ಣ ಅವಕಾಶಗಳಿದ್ದಾಗ್ಯೂ, ಹಾಗೆ ಮಾಡದೇ ತಮ್ಮನ್ನು ತಡೆದಿರಿಸಿಕೊಂಡ ಸಾಕಷ್ಟು ಸನ್ನಿವೇಶಗಳು ಇಸ್ಲಾಮಿನ ಮೂಲಪುರಾವೆಗಳಲ್ಲಿ ಕಾಣಸಿಗುತ್ತವೆ. ಅವರು(ಅವರ ಮೇಲೆ ಶಾಂತಿ ಇರಲಿ) ಮಾನವರಿಗೆ ಸಂಕಷ್ಟಗಳಲ್ಲಿ ತಾಳ್ಮೆಯಿಂದಿರಲು ಸಲಹೆ ನೀಡುತ್ತಿದ್ದರು.:
ತನ್ನ ಪ್ರಾಬಲ್ಯತೆಯಿಂದ ಜನರ ಮೇಲೆ ಹಾವಿಯಾಗುವವನು ಪ್ರಬಲನಲ್ಲ; ಬದಲಾಗಿ ಕೋಪಾವಸ್ಥೆಯಲ್ಲಿ ತಾಳ್ಮೆ ವಹಿಸುವವನೇ ನಿಜವಾಗಿಯೂ ಪ್ರಬಲನು.”
ಸಹನೆ ಮತ್ತು ತಾಳ್ಮೆಯ ಅರ್ಥ ಮುಸ್ಲಿಮರು ನಿಷ್ಕ್ರಿಯರಾಗಿರಬೇಕೆಂದಲ್ಲ, ಅಥವಾ ನಮ್ಮ ಮೇಲೆ ದಾಳಿ ನಡೆದ ಸಂದರ್ಭಗಳಲ್ಲೂ ಪ್ರತಿರೋಧಿಸಬಾರದೆಂದಲ್ಲ. ಆ ಕುರಿತು ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ಹೇಳಿದರು:
“ಶತ್ರುವನ್ನು ಸಂಧಿಸಬೇಕೆಂದು ಅಪೇಕ್ಷಿಸದಿರಿ. ಆದರೆ, ಶತ್ರುವನ್ನು ಎದುರಿಸಬೇಕಾಗಿ ಬಂದರೆ ತಾಳ್ಮೆಯಿಂದಿರಿ (ಅರ್ಥಾತ್, ಎದುರಿಸುವಲ್ಲಿ ಸ್ಥಿರವಾಗಿರಿ).
ಸೌಮ್ಯತೆ
“ಅಲ್ಲಾಹನ ಕೃಪೆಯಿಂದ ನೀವು ಜನರೊಂದಿಗೆ ಸೌಮ್ಯರಾಗಿರುವಿರಿ. ಒಂದು ವೇಳೆ, ನೀವು ಜನರೊಂದಿಗೆ ಕಠಿಣರಾಗಿರುತ್ತಿದ್ದರೆ ಅಥವಾ ನಿರ್ದಯಿಯಾಗಿರುತ್ತಿದ್ದರೆ, ಅವರು ನಿಮ್ಮ ಸುತ್ತಮುತ್ತಲಿಂದ ಚದುರಿಹೋಗಿರುತ್ತಿದ್ದರು.” (ಖುರ್‍ಆನ್ 3:159)
ಸುಮಾರು ಹತ್ತು ವರ್ಷ ಅಲ್ಲಾಹನ ಸಂದೇಶವಾಹಕರ(ಅವರ ಮೇಲೆ ಶಾಂತಿ ಇರಲಿ) ಸೇವೆಗೈದ ಅವರ ಸಂಗಡಿಗರಲ್ಲೊಬ್ಬರು ಅವರ(ಅವರ ಮೇಲೆ ಶಾಂತಿ ಇರಲಿ) ಕುರಿತು ಹೇಳುತ್ತಾರೆ,
“ನಾನೇನನ್ನೇ ಮಾಡಿರಲಿ, ಅಲ್ಲಾಹನ ಸಂದೇಶವಾಹಕರು ಎಂದಿಗೂ ನನ್ನನ್ನು ಹೀಗೇಕೆ ಮಾಡಿದೆನೆಂದು ಜರೆಯಲಿಲ್ಲ; ನಾನೇನನ್ನಾದರು ಮಾಡುವಲ್ಲಿ ವಿಫಲನಾದರೂ, ನನ್ನ ವಿಫಲತೆಯನ್ನು ಪ್ರಶ್ನಿಸಲಿಲ್ಲ; ಎಲ್ಲ ಜನರ ಪೈಕಿ ಅವರು ಅತ್ಯಂತ ಆತ್ಮೀಯರಾಗಿದ್ದರು.”
ಇನ್ನೊಂದು ಸಂದರ್ಭದಲ್ಲಿ ಅಲ್ಲಾಹನ ಸಂದೇಶವಾಹಕರ(ಅವರ ಮೇಲೆ ಶಾಂತಿ ಇರಲಿ) ಪತ್ನಿಯು ವ್ಯಕ್ತಿಯೋರ್ವನ ಅಪಮಾನಭರಿತ ಮಾತುಗಳಿಂದ ರೇಗಿ ತೀಕ್ಷ್ಣವಾಗಿ ಉತ್ತರಿಸಿದರು. ಅದಕ್ಕೆ ಅಲ್ಲಾಹನ ಸಂದೇಶವಾಹಕರು(ಅವರ ಮೇಲೆ ಶಾಂತಿ ಇರಲಿ) ತಮ್ಮ ಪತ್ನಿಯನ್ನುದ್ದೇಶಿಸಿ ಇಂತೆಂದರು:
“ಓ ಆಯೆಷಾ! ಸೌಮ್ಯರಾಗಿರಿ ಮತ್ತು ನಮೃತೆಯನ್ನು ಪಾಲಿಸಿರಿ. ಅಲ್ಲಾಹನು ಎಲ್ಲ ಕರ್ಮಗಳಲ್ಲೂ ಸೌಮ್ಯತೆಯನ್ನು ಬಯಸುತ್ತಾನೆ.”
ಅವರು(ಅವರ ಮೇಲೆ ಶಾಂತಿ ಇರಲಿ) ಇನ್ನೊಂದೆಡೆ ಈ ರೀತಿ ಹೇಳಿರುವುದಾಗಿ ವರದಿಯಾಗಿದೆ:
“ಸೌಮ್ಯತೆಯನ್ನು ಪಾಲಿಸಿರಿ! ನಿಮ್ಮ ಕರ್ಮಗಳಲ್ಲಿ ಸೌಮ್ಯತೆಯಿರಲು, ಅದು ಆ ಕರ್ಮವನ್ನು ಸದ್ರೂಪಗೊಳಿಸುತ್ತದೆ; ಅಂತೆಯೇ, ಸೌಮ್ಯತೆ ಇರದಿದ್ದಲ್ಲಿ ಅದರ ಪ್ರಭಾವ ಕಡಿಮೆಯಾಗುತ್ತದೆ.”
ಔದಾರ್ಯತೆ
“ಮತ್ತು ಪರಮ ಕರುಣಾಮಯಿ ಅಲ್ಲಾಹನ ದಾಸರು ಭೂಮಿಯಲ್ಲಿ ಔದಾರ್ಯಪೂರ್ಣರಾಗಿ ನಡೆಯುತ್ತಾರೆ. ಮತ್ತು ತಿಳಿಗೇಡಿಗಳು ತಕರಾರಿಗೆ ಬಂದಾಗ ಅವರ ಉತ್ತರ: ‘ಶಾಂತಿ’ ಎಂದಾಗಿರುತ್ತದೆ.” (ಖುರ್‍ಆನ್25:63)
ಅಲ್ಲಾಹನ ಸಂದೇಶವಾಹಕರನ್ನು(ಅವರ ಮೇಲೆ ಶಾಂತಿ ಇರಲಿ) ಕಂಡು ಜನರು ಗೌರವಾದರಗಳೊಂದಿಗೆ ನಿಂತುಕೊಳ್ಳುವುದನ್ನು ಅವರು(ಅವರ ಮೇಲೆ ಶಾಂತಿ ಇರಲಿ) ಬಯಸುತ್ತಿರಲಿಲ್ಲ. ಜನಸಮೂಹದ ನಡುವೆ ಕುಳಿತುಕೊಳ್ಳಲು ಅವರಿಗೆ ಯಾವುದೇ ಉನ್ನತ ಅಥವಾ ಮಹತ್ವದ ಸ್ಥಳದ ಅವಶ್ಯಕತೆಯಿರಲಿಲ್ಲ, ಬದಲಾಗಿ ಅವಕಾಶವಿರುವಲ್ಲಿ ಎಲ್ಲೆಂದರಲ್ಲಿ ಆಸೀನರಾಗುತ್ತಿದ್ದರು. ಅನ್ಯರ ನಡುವೆ ವಿಶೇಷವಾಗಿ ಕಾಣಲು ಯಾವುದೇ ವಿಶೇಷ ವಸ್ತ್ರಾಭೂಷಣಗಳನ್ನು ಅವರು ಧರಿಸಿದವರಲ್ಲ. ಅವರು(ಅವರ ಮೇಲೆ ಶಾಂತಿ ಇರಲಿ) ಬಡವ-ಬಲ್ಲಿದರೆನ್ನದೆ ಎಲ್ಲರೊಂದಿಗೂ ಬೆರೆತುಹೋಗುತ್ತಿದ್ದರು. ಹಿರಿಯರೊಂದಿಗೆ ಕುಳಿತು ಚರ್ಚಿಸುತ್ತಿದ್ದರು ಮತ್ತು ವಿಧವೆಯರಿಗೆ ಸಹಕರಿಸುತ್ತಿದ್ದರು. ಅಪರಿಚಿತರು ಇವರನ್ನು(ಅವರ ಮೇಲೆ ಶಾಂತಿ ಇರಲಿ) ಜನಸಮೂಹದಿಂದ ಪ್ರತ್ಯೇಕಿಸಿ ಕಂಡುಹಿಡಿಯುವುದು ಸಾಧ್ಯವಿರಲಿಲ್ಲ, ಅಷ್ಟೊಂದು ಸಾಧಾರಣ ವ್ಯಕ್ತಿಯಾಗಿರುತ್ತಿದ್ದರು.
ತಮ್ಮ ಸಂಗಡಿಗರನ್ನುದ್ದೇಶಿಸಿ ಅವರು(ಅವರ ಮೇಲೆ ಶಾಂತಿ ಇರಲಿ) ಹೇಳುತ್ತಾರೆ:
“ನನಗೆ ಈ ರೀತಿ ಅವತೀರ್ಣಗೊಂಡಿರುತ್ತದೆ: ನೀವು ಔದಾರ್ಯಪೂರ್ಣರಾಗಿರಬೇಕು. ಪರಸ್ಪರ ದರ್ಪದಿಂದ ವರ್ತಿಸಕೂಡದು ಮತ್ತು ಅನ್ಯರನ್ನು ಪೀಡಿಸಕೂಡದು.”
ಅವರು(ಅವರ ಮೇಲೆ ಶಾಂತಿ ಇರಲಿ) ಎಷ್ಟೊಂದು ನಮ್ರರಾಗಿದ್ದರೆಂದರೆ, ಕೇವಲ ಅಲ್ಲಾಹನಿಗೆ ಅರ್ಪಿಸಬೇಕಾದ ಆರಾಧನಾಕರ್ಮಗಳನ್ನು ಜನರೆಲ್ಲಾದರೂ ತಮಗೆ ಅರ್ಪಿಸಬಹುದೆಂದು ಭಯಪಡುತ್ತಿದ್ದರು. ಅವರು(ಅವರ ಮೇಲೆ ಶಾಂತಿ ಇರಲಿ) ಈ ರೀತಿ ಹೇಳಿರುವುದಾಗಿಯೂ ವರದಿಯಾಗಿರುತ್ತದೆ:
“ಕ್ರಿಶ್ಚಿಯನ್ನರು ಮರ್ಯಮರ ಪುತ್ರ ಏಸುವನ್ನು ಶ್ಲಾಘಿಸುವಲ್ಲಿ ಅತಿರೇಕವೆಸಗಿದಂತೆ, ನೀವು ನನ್ನನ್ನು ಶ್ಲಾಘಿಸುವಲ್ಲಿ ಅತಿರೇಕವೆಸಗದಿರಿ. ನಾನಂತೂ ಪ್ರಭುವಿನ ಬರಿಯ ದಾಸನಾಗಿರುತ್ತೇನೆ. ಅಂತೆಯೇ, ನನ್ನನ್ನು ಅಲ್ಲಾಹನ ದಾಸ ಮತ್ತು ಅಲ್ಲಾಹನ ಸಂದೇಶವಾಹಕನೆಂದು ಕರೆಯಿರಿ.”
ಆದರ್ಶ ಪತಿ
“ಮತ್ತು ಅವರೊಂದಿಗೆ(ನಿಮ್ಮ ಪತ್ನಿಯರೊಂದಿಗೆ) ಸೌಹಾರ್ದಮಯ ಜೀವನ ನಡೆಸಿರಿ.” (ಖುರ್‍ಆನ್4:19)
ಅಲ್ಲಾಹನ ಸಂದೇಶವಾಹಕರ(ಅವರ ಮೇಲೆ ಶಾಂತಿ ಇರಲಿ) ಪ್ರೀತಿಯ ಪತ್ನಿ, ಆಯೆಷಾ ತಮ್ಮ ಪತಿಯ ಕುರಿತು ಹೇಳುತ್ತಾರೆ:
“ಅವರು(ಅವರ ಮೇಲೆ ಶಾಂತಿ ಇರಲಿ) ಸದಾ ಮನೆಗೆಲಸಗಳಲ್ಲಿ ಸಹಕರಿಸುತ್ತಿದ್ದರು ಮತ್ತು ಅವಶ್ಯಕತೆಯಿದ್ದಲ್ಲಿ ತಮ್ಮ ಬಟ್ಟೆಯನ್ನು ತಾವೇ ಹೊಲಿದುಕೊಳ್ಳುತ್ತಿದ್ದರು, ತಮ್ಮ ಚಪ್ಪಲಿಯನ್ನು ದುರಸ್ಥಿಪಡಿಸಿಕೊಳ್ಳುತ್ತಿದ್ದರು ಮತ್ತು ಕಸವನ್ನೂ ಗುಡಿಸುತ್ತಿದ್ದರು. ಅವರು ತಮ್ಮ ಬಳಿ ಇದ್ದ ಮೇಕೆಗಳ ಹಾಲನ್ನು ಕರೆಯತ್ತಿದ್ದರು. ಅವುಗಳನ್ನು ಸಾಕುವುದು, ಮನೆಗೆಲಸಗಳಲ್ಲಿ ಭಾಗವಹಿಸುವುದು ಅವರ ಚಟುವಟಿಕೆಗಳಲ್ಲಾಗಿದ್ದುವು.”
ಅವರು (ಅವರ ಮೇಲೆ ಶಾಂತಿ ಇರಲಿ) ಸ್ವತಃ ಆದರ್ಶ ಪತಿಯಾಗಿರುವುದಲ್ಲದೆ, ತಮ್ಮ ಅನುಯಾಯಿಗಳಿಗೂ ಅಂತೆಯೇ ಉಪದೇಶಿಸುತ್ತಿದ್ದರು:
“ಸತ್ಯವಿಶ್ವಾಸಿಗಳ ಪೈಕಿ ತಮ್ಮ ನಡುವಳಿಕೆಗಳಲ್ಲಿ ಯಾರು ಉತ್ತಮರೋ, ಅವರೇ ನಿಜವಾಗಿಯೂ ಉತ್ತಮರು. ಮತ್ತು ಅವರಲ್ಲಿಯೂ ಉತ್ತಮರಾರೆಂದರೆ, ತಮ್ಮ ಪತ್ನಿಯರೊಂದಿಗೆ ಉತ್ತಮ ನಡುವಳಿಕೆಯನ್ನು ಹೊಂದಿರುವವರು.”
ಅತ್ಯುತ್ತಮ ಮಾದರಿ
“ನಿಶ್ಚಯವಾಗಿಯೂ, ನೀವು (ಓ ಮುಹಮ್ಮದರೇ) ನಡತೆಯ ಅತ್ಯುನ್ನತ ಮಟ್ಟದಲ್ಲಿರುವಿರಿ.”(ಖುರ್‍ಆನ್68:4)
ಈ ಮೇಲೆ ತಿಳಿಸಿರುವ ಸಂಗತಿಯು ಮುಹಮ್ಮದ್‍ರು(ಅವರ ಮೇಲೆ ಶಾಂತಿ ಇರಲಿ) ಹೇಗೆ ಜೀವನ ನಡೆಸಿರುವರೆಂಬುದಕ್ಕಿರುವ ಒಂದು ಉದಾಹರಣೆಯಷ್ಟೆ. ಇಸ್ಲಾಮಿನ ನಕ್ಷೆಯನ್ನು ಮಾಧ್ಯಮಗಳು ತಿರುಚಿ ಪ್ರದರ್ಶಿಸುತ್ತಿರುವುದನ್ನು ಮತ್ತು ಪದೇಪದೇ ಅವುಗಳನ್ನೇ ಮರುಕಳಿಸುತ್ತಿರುವುದನ್ನು ಕಂಡ ಹಲವರಿಗೆ ಈ ಕರುಣೆ, ಅನುಕಂಪಗಳ ಚಿತ್ರಣವು ಅನಿರೀಕ್ಷಿತವಾಗಿ ಗೋಚರಿಸಬಹುದು.
ಆದ್ದರಿಂದ, ಇಸ್ಲಾಮನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಅದರ ಮೂಲಗಳನ್ನು ಅಭ್ಯಸಿಸುವುದು ಅತ್ಯಾವಶ್ಯ, ಅವುಗಳೇ, ಪವಿತ್ರ ಖುರ್‍ಆನ್ ಮತ್ತು ಅಲ್ಲಾಹನ ಸಂದೇಶವಾಹಕರ(ಅವರ ಮೇಲೆ ಶಾಂತಿ ಇರಲಿ) ನಡೆನುಡಿಗಳು. ಅಂತೆಯೇ, ಕೆಲವು ಮತಿಭ್ರಾಂತ ಮುಸ್ಲಿಮರ ಕೃತ್ಯಗಳಿಂದಾಗಿ ಇಸ್ಲಾಮನ್ನು ದೂಷಿಸುವುದು ಸಮಂಜಸವಲ್ಲ.
ಮುಸ್ಲಿಮೇತರರ ಟಿಪ್ಪಣಿಗಳು
ನಮ್ಮ ರಾಷ್ಟ್ರವನ್ನು ಸ್ವತಂತ್ರಗೊಳಿಸುವಲ್ಲಿ ಬಹುವಾಗಿ ಶ್ರಮಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿಯ ವ್ಯಾಖ್ಯಾನ, ಅಲ್ಲಾಹನ ಸಂದೇಶವಾಹಕರ ಕುರಿತು:
“ಅಲ್ಲಾಹನ ಸಂದೇಶವಾಹಕರ ಸರಳ ಜೀವನ, ತನ್ನನ್ನು ಸಾಮಾನ್ಯನೆಂದು ಪರಿಗಣಿಸುವ ಸಹಜ ಸ್ವಭಾವ, ವಚನಪಾಲನೆಯಲ್ಲಿರುವ ಅತಿಯಾದ ನಿಷ್ಠೆ, ತಮ್ಮ ಸಂಗಡಿಗರು ಮತ್ತು ಅನುಯಾಯಿಗಳ ಕುರಿತ ತೀವ್ರ ಕಾಳಜಿ, ಅಪೂರ್ವ ಎದೆಗಾರಿಕೆ, ಅತೀವ ನಿರ್ಭಯತೆ, ಅಲ್ಲಾಹನಲ್ಲಿರುವ ಅವರ ದೃಢವಿಶ್ವಾಸ ಮತ್ತು ಅವರ ಕರ್ತವ್ಯಪ್ರಜ್ಞೆಯು, ಅವರನ್ನು ಜೀವನದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ತಮ್ಮ ಗುರಿಯನ್ನು ತಲುಪುವಂತೆ ಮಾಡಿತೇ ಹೊರತು ಯಾವುದೇ ಖಡ್ಗಪ್ರಯೋಗವೂ ಅದನ್ನು ಸಿದ್ಧಿಸಲು ಸಾಧ್ಯವಿರಲಿಲ್ಲ.”
ಪ್ರಸಿದ್ಧ ಆಂಗ್ಲ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ ಬರೆಯುತ್ತಾರೆ:
“ಇಂದು ಜಗತ್ತು ಮುಹಮ್ಮದರ ಬುದ್ಧಿವಂತಿಕೆಯಿರುವಂಥ ಮಾನವನೊಬ್ಬನ ನಿರೀಕ್ಷೆಯಲ್ಲಿದೆ. ಮಧ್ಯಮಕಾಲದ ಧಾರ್ಮಿಕ ಮುಖಂಡರುಗಳು ತಮ್ಮ ಅಜ್ಞಾನ ಮತ್ತು ಪೂರ್ವಕಲ್ಪಿತ ಮೌಢ್ಯತೆಯನ್ನು ಪ್ರದರ್ಶಿಸುತ್ತ ಮುಹಮ್ಮದರನ್ನು ಕ್ರಿಶ್ಚಿಯನ್ ಧರ್ಮದ ವಿರೋಧಿಯೆಂದು ಪರಿಗಣಿಸಿ ಅವರನ್ನು ವಿರೂಪಗೊಳಿಸುವ ಪ್ರಯತ್ನ ನಡೆಸಿದರು. ಆದರೆ ಈ ವ್ಯಕ್ತಿಯ ಜೀವನಚರ್ಯೆಯ ಅಧ್ಯಯನ ನಡೆಸಿದ ನಾನು ಈತನ ಅಪೂರ್ವ ಜೀವನವನ್ನು ಕಂಡು ಬೆರಗಾದೆನು. ಮತ್ತು ನಾನು ಪ್ರತಿಪಾದಿಸಬಲ್ಲೆನು, ‘ಮುಹಮ್ಮದ್ ಕ್ರಿಶ್ಚಿಯನ್ ವಿರೋಧಿಯಾಗಿರಲಿಲ್ಲ’ವೆಂದು, ಬದಲಾಗಿ ಅವರನ್ನು ಮಾನವೀಯತೆಯ ರಕ್ಷಕನೆಂಬ ಅಭಿಪ್ರಾಯ ಹೊಂದಿರುತ್ತೇನೆ. ನನ್ನ ಮಟ್ಟಿಗೆ ಹೇಳುವುದಾದರೆ, ಅವರಿಗೆ ಇಂದು ಜಗತ್ತಿನಾದ್ಯಂತ ಅಧಿಕಾರ ನಡೆಸಲು ಅವಕಾಶ ದೊರೆತಲ್ಲಿ, ಅವರು ನಮ್ಮೆಲ್ಲರ ಸಂಕಷ್ಟಗಳನ್ನು ದೂರೀಕರಿಸಿರುತ್ತಿದ್ದರು ಮತ್ತು ನಾವು ಬಹುಕಾಲದಿಂದ ನಿರೀಕ್ಷಿಸುತ್ತಿರುವ ಶಾಂತಿ-ನೆಮ್ಮದಿಯು ಜಗತ್ತಿನಾದ್ಯಂತ ನೆಲೆಸಲು ಸಾಧ್ಯವಿರುತ್ತಿತ್ತು.”
‘ಇದು ಅಲ್ಲಾಹನ ವಾಗ್ದಾನ: ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನೆಸಗುವವರಿಗೆ ಅಲ್ಲಾಹನ ಬಳಿ ಕ್ಷಮೆ ಮತ್ತು ಅತ್ಯತ್ತಮ ಪ್ರತಿಫಲವು ಕಾದಿದೆ.” (ಖುರ್‍ಆನ್ 5:9)