ಝೈನಬ್(ರ) ರವರ ವಂಶಾವಳಿಯು ಹದಿನೈದನೇ ಪಿತಾಮಹ ಖುಝೈಮರಲ್ಲಿ ಪ್ರವಾದಿ(ಸ) ರೊಂದಿಗೆ ಸಂಧಿಸುತ್ತದೆ. ಝೈನಬ್(ರ) ರವರ ತಾಯಿ ಉಮೈಮ ಪ್ರವಾದಿ(ಪ್ರ) ರವರ ಅತ್ತೆ (ತಂದೆಯ ಸಹೋದರಿ).
ಜನನ:
ಝೈನಬ್(ರ) ಮಕ್ಕಾದಲ್ಲಿ ಶ್ರೇಷ್ಠ ಮನೆತನದಲ್ಲಿ ಹುಟ್ಟಿ ಅಲ್ಲಿಯೇ ಬೆಳೆದರು. ಪ್ರಸಿದ್ಧ ಸಹಾಬಿವರ್ಯ ಅಬ್ದುಲ್ಲಾ ಬಿನ್ ಜಹ್ಶ್(ರ) ಆಕೆಯ ಸಹೋದರರಾಗಿದ್ದರು.
ಇಸ್ಲಾಂ ಸ್ವೀಕಾರ ಮತ್ತು ಹಿಜ್ರ
ಝೈನಬ್(ರ) ಆರಂಭಕಾಲದಲ್ಲೇ ಇಸ್ಲಾಂ ಸ್ವೀಕರಿಸಿದ್ದರು. ಅಬ್ದುಲ್ಲಾ ಬಿನ್ ಜಹ್ಶ್(ರ) ಇಸ್ಲಾಂ ಸ್ವೀಕರಿಸಿದಾಗಲೇ ಇವರು ಇಸ್ಲಾಂ ಸ್ವೀಕರಿಸಿದ್ದರು. ಮಕ್ಕಾದಲ್ಲಿ ಕುರೈಶರ ಕಿರುಕುಳ ಮತ್ತು ಹಿಂಸೆ ತಾಳಲಾರದೆ ಹೋದಾಗ ಪ್ರವಾದಿ(ಸ) ರವರು ಮುಸ್ಲಿಮರಿಗೆ ಅಬಿಸೀನಿಯಾಗೆ ಹಿಜ್ರ ಹೋಗಲು ಆದೇಶಿಸಿದರು. ಅಬೀಸೀನಿಯಾಗೆ ಹಿಜ್ರ ಹೋದ ಮೊದಲ ತಂಡದ ಮುಂದಾಳುತ್ವವನ್ನು ಅಬ್ದುಲ್ಲಾ ಬಿನ್ ಜಹ್ಶ್(ಸ) ವಹಿಸಿದ್ದರು.
ಝೈನಬ್ ಬಿಂತ್ ಜಹ್ಶ್(ರ) ರ ಸಹೋದರ ಅಬೂ ಅಹ್ಮದ್ ಬಿನ್ ಜಹ್ಶ್(ರ), ಸಹೋದರಿಯರಾದ ಹಮ್ನ ಬಿಂತ್ ಜಹ್ಶ್ (ಮಿಸ್‌ಅಬ್ ಬಿನ್ ಉಮೈರ್‌ರವರ ಪತ್ನಿ) ಮತ್ತು ಉಮ್ಮು ಹಬೀಬ ಬಿಂತ್ ಜಹ್ಶ್(ಅಬ್ದುರಹ್ಮಾನ್ ಬಿನ್ ಔಫ್‌ರ ಪತ್ನಿ) ಮುಂತಾದವರು ಆ ತಂಡದಲ್ಲಿದ್ದರು. ನಂತರ ಪ್ರವಾದಿ(ಜಿ) ರವರು ಮದೀನಕ್ಕೆ ಹಿಜ್ರ ಹೋಗಲು ಆದೇಶಸಿದಾಗ ಝೈನಬ್ ಬಿಂತ್ ಜಹ್ಶ್(ರ) ಮದೀನಕ್ಕೆ ಹಿಜ್ರ ಹೋದರು.
ಝೈದ್ ಬಿನ್ ಹಾರಿಸ(ರ) ರೊಂದಿಗೆ ವಿವಾಹ:
ಝೈದ್ ಬಿನ್ ಹಾರಿಸ(ರ) ಗುಲಾಮರಾಗಿದ್ದರು. ಪ್ರವಾದಿ(ಸ) ರವರು ಅವರನ್ನು ಸ್ವತಂತ್ರಗೊಳಿಸಿ ದತ್ತುಪುತ್ರನಾಗಿ ಮಾಡಿಕೊಂಡಿದ್ದರು. ಝೈನಬ್(ರ) ರಿಗೆ ವಿವಾಹಪ್ರಾಯವಾದಾಗ ಪ್ರವಾದಿ(ಸ) ರವರು ತಮ್ಮ ದತ್ತುಪುತ್ರ ಝೈದ್ ಬಿನ್ ಹಾರಿಸ(ರ) ರನ್ನು ವಿವಾಹವಾಗುವಂತೆ ಸಲಹೆ ನೀಡಿದರು. ಆದರೆ ಝೈನಬ್(ರ) ರಿಗೆ ಇದು ಇಷ್ಟವಿರಲಿಲ್ಲ. ಆಕೆ ಶ್ರೇಷ್ಠ ಮನೆಯಿಂದ ಬಂದವಳು. ಝೈದ್(ರ) ಸ್ವತಂತ್ರಗೊಳಿಸಲಾದ ಗುಲಾಮ. ಆದ್ದರಿಂದ ಈ ವಿವಾಹ ಸರಿಹೊಂದಲಾರದು ಎಂದು ಝೈನಬ್(ರ) ಹೇಳಿದರು. ಆದರೆ ಪ್ರವಾದಿ(ಸ) ರಿಗೆ ಈ ವಿವಾಹ ನಡೆಯಬೇಕೆಂಬ ಬಯಕೆಯಿತ್ತು. ಅಜ್ಞಾನಕಾಲದ ಉಚ್ಚ-ನೀಚ, ಮೇಲು-ಕೀಳೆಂಬ ಸಾಮಾಜಿಕ ವ್ಯತ್ಯಾಸವನ್ನು ತೊಡೆದು ಹಾಕುವುದು ಅವರ ಇರಾದೆಯಾಗಿತ್ತು. ಕೊನೆಗೆ ಪ್ರವಾದಿ(ಸ)ರವರ ತೀರ್ಮಾನಕ್ಕೆ ವಿರುದ್ಧವಾಗಿ ಸಾಗಬಾರದೆಂಬ ಉದ್ದೇಶದಿಂದ ಝೈನಬ್(ರ) ಈ ವಿವಾಹಕ್ಕೆ ಒಪ್ಪಿದರು. ಪ್ರವಾದಿ(ಸ) ರವರು ವಿಶೇಷ ಮುತುವರ್ಜಿ ವಹಿಸಿ ಈ ವಿವಾಹವನ್ನು ನಡೆಸಿಕೊಟ್ಟರು.
ವಿಚ್ಛೇದನೆ:
ಝೈನಬ್(ರ) ಅಂದುಕೊಂಡಂತೆಯೇ ಈ ವಿವಾಹ ಯಶಸ್ವಿಯಾಗಲಿಲ್ಲ. ದಂಪತಿಗಳ ಮಧ್ಯೆ ದಿನೇ ದಿನೇ ಜಗಳ ನಡೆಯುತ್ತಿತ್ತು. ಈ ವಿಷಯ ಪ್ರವಾದಿ(ಸ) ರಿಗೂ ತಿಳಿದಿತ್ತು. ಆದರೂ ಅವರು ಈ ವಿವಾಹವು ಮುಂದುವರಿಯಬೇಕೆಂಬ ಆಸೆ ಹೊಂದಿದ್ದರು. ಜಗಳ ತಾರಕಕ್ಕೇರಿದಾಗ ಒಂದಿನ ಝೈದ್(ರ) ಪ್ರವಾದಿ(ಸ) ರವರ ಬಳಿಗೆ ಬಂದು ಈ ವಿವಾಹವನ್ನು ಮುಂದುವರಿಸಿಕೊಂಡು ಹೋಗಲು ತನ್ನಿಂದ ಸಾಧ್ಯವಿಲ್ಲ ಎಂದು ಭಿನ್ನವಿಸಿಕೊಂಡರು. ಆದರೂ ಪ್ರವಾದಿ(ಸ) ರವರು ಅಲ್ಲಾಹನನ್ನು ಭಯಪಟ್ಟು ಈ ವಿವಾಹವನ್ನು ಮುಂದುವರಿಸು ಎಂದು ಝೈದ್(ಸ) ರಿಗೆ ಸಲಹೆ ನೀಡಿದರು. ಕೊನೆಗೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಈ ವಿವಾಹವು ವಿಚ್ಛೇದನದಲ್ಲಿ ಕೊನೆಗೊಂಡಿತು.
ಪ್ರವಾದಿ(ಸ)ರೊಂದಿಗೆ ವಿವಾಹ:
ಅರೇಬಿಯಾದಲ್ಲಿ ದತ್ತುಪುತ್ರರನ್ನು ಹೆತ್ತ ಮಕ್ಕಳೆಂದು ಪರಿಗಣಿಸಲಾಗುತ್ತಿತ್ತು. ಹೆತ್ತ ಮಕ್ಕಳಿಗೆ ಅನ್ವಯವಾಗುವ ಎಲ್ಲವೂ ದತ್ತುಪುತ್ರರಿಗೂ ಅನ್ವಯವಾಗುತ್ತಿತ್ತು. ಈ ಕಾರಣದಿಂದಲೇ ಝೈದ್(ರ) ರನ್ನು ಝೈದ್ ಬಿನ್ ಮುಹಮ್ಮದ್(ಸ) ಎಂದು ಕರೆಯಲಾಗುತ್ತಿತ್ತು. ಅಲ್ಲಾಹು ಈ ಅನಿಷ್ಟ ಸಂಪ್ರದಾಯವನ್ನು ಕೊನೆಗೊಳಿಸಿ ದತ್ತುಪುತ್ರರು ಹೆತ್ತ ಮಕ್ಕಳಂತೆ ಅಲ್ಲ ಎಂಬ ನಿಯಮವನ್ನು ಜಾರಿಗೊಳಿಸಲು ನಿರ್ಧರಿಸಿದನು. ಒಮ್ಮೆ ಜಿಬ್ರಿಲ್(ಅ) ಪ್ರವಾದಿ(ಸ) ರವರ ಬಳಿಗೆ ಬಂದು ಝೈನಬ್ ಬಿಂತ್ ಜಹ್ಶ್(ರ) ನಿಮ್ಮ ಪತ್ನಿಯಾಗಲಿದ್ದಾರೆ ಎಂದು ತಿಳಿಸಿದರು. ಇದನ್ನು ಕೇಳಿ ಪ್ರವಾದಿ(ಸ) ರಿಗೆ ಸ್ವಾಭಾವಿಕವಾಗಿಯೂ ಆಘಾತವಾಯಿತು. ಏಕೆಂದರೆ ಇದು ಸಾಮಾಜಿಕ ಕಟ್ಟುಪಾಡುಗಳಿಗೆ ವಿರುದ್ಧವಾಗಿತ್ತು. ಜನರು ಏನು ಆಡಿಕೊಳ್ಳುವರೋ ಎಂದು ಪ್ರವಾದಿ(ಸ)ರಿಗೆ ಭಯವಾಯಿತು. ಆದರೆ ಈ ನಿರ್ಧಾರವನ್ನು ಏಳಾಕಾಶಗಳ ಮೇಲೆ ನಡೆಸಲಾಗಿತ್ತು. ಈ ಬಗ್ಗೆ ಜಿಬ್ರಿಲ್(ಅ) ಕುರ್‌ಆನ್ ಆಯತ್ತಿನೊಂದಿಗೆ ಇಳಿದು ಬಂದರು: “ನಿನ್ನ ಪತ್ನಿಯನ್ನು ನಿನ್ನ ಬಳಿಯೇ ಇರಿಸು ಮತ್ತು ಅಲ್ಲಾಹುವನ್ನು ಭಯಪಡು” ಎಂದು ಅಲ್ಲಾಹು ಅನುಗ್ರಹ ನೀಡಿರುವ ಮತ್ತು ತಾವು ಅನುಗ್ರಹ ನೀಡಿರುವ ಒಬ್ಬ ವ್ಯಕ್ತಿಯೊಂದಿಗೆ (ಝೈದ್(ರ)) ತಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹು ಬಹಿರಂಗಪಡಿಸಲು ಮುಂದಾಗಿರುವ ವಿಷಯವನ್ನು ತಾವು ತಮ್ಮ ಹೃದಯದಲ್ಲಿ ಮರೆಮಾಚಿದ್ದೀರಿ ಮತ್ತು ತಾವು ಜನರನ್ನು ಭಯಪಟ್ಟಿರಿ. ಆದರೆ ತಾವು ಭಯ ಪಡಲು ಹೆಚ್ಚು ಅರ್ಹತೆಯುಳ್ಳವನು ಅಲ್ಲಾಹನಾಗಿರುವನು. ತರುವಾಯ ಝೈದ್(ರ) ಆಕೆಯಿಂದ ಅಗತ್ಯವನ್ನು ಪೂರೈಸಿದಾಗ ನಾವು ಆಕೆಯನ್ನು ತಮಗೆ ಪತ್ನಿಯನ್ನಾಗಿ ಮಾಡಿದೆವು. ಇದು ತಮ್ಮ ದತ್ತುಪುತ್ರರು ಅವರ ಪತ್ನಿಯರಿಂದ ಅಗತ್ಯವನ್ನು ಪೂರೈಸಿದ ಬಳಿಕ ಅವರನ್ನು ವಿವಾಹವಾಗುವ ವಿಷಯದಲ್ಲಿ ಸತ್ಯವಿಶ್ವಾಸಿಗಳಿಗೆ ಯಾವುದೇ ಪ್ರಯಾಸವೂ ಉಂಟಾಗದಿರುವ ಸಲುವಾಗಿದೆ. ಅಲ್ಲಾಹುವಿನ ಆಜ್ಞೆಯು ಜಾರಿಗೊಳ್ಳುವಂತದ್ದೇ ಆಗಿದೆ. (ಕುರ್‌ಆನ್ 33:37) ಈ ಆಯತ್ ಅವತೀರ್ಣವಾದ ಬಳಿಕ ಪ್ರವಾದಿ(ಸ) ರವರು ಝೈನಬ್(ರ) ರನ್ನು ವಿವಾಹವಾದರು. ಇದರಿಂದ ದತ್ತುಪುತ್ರರು ವಿಚ್ಛೇದನ ನೀಡಿದ ಮಹಿಳೆಯರನ್ನು ವಿವಾಹವಾಗಬಾರದು ಎಂಬ ಅಜ್ಞಾನಕಾಲದ ಅನಿಷ್ಟ ಸಂಪ್ರದಾಯವು ಕೊನೆಗೊಂಡಿತು.
ಈ ವಿವಾಹದ ನಂತರ ಕಪಟವಿಶ್ವಾಸಿಗಳು ಮದೀನದಲ್ಲಿ ವದಂತಿಗಳನ್ನು ಹರಡತೊಡಗಿದರು. ಪ್ರವಾದಿ(ಸ) ರವರು ತಮ್ಮ ಸೊಸೆಯನ್ನೇ ಮದುವೆಯಾಗಿದ್ದಾರೆ ಎಂದರು. ಇದಕ್ಕೆ ಉತ್ತರವಾಗಿ ಪವಿತ್ರ ಕುರ್‌ಅನಿನ ಆಯತ್ ಅವತೀರ್ಣವಾಯಿತು-ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಅಂತಿಮ ಪ್ರವಾದಿಯಾಗಿದ್ದಾರೆ. ಅಲ್ಲಾಹು ಎಲ್ಲ ವಿಷಯಗಳ ಬಗ್ಗೆ ತಿಳುವಳಿಕೆಯುಳ್ಳವನಾಗಿದ್ದಾನೆ. (33:40)
ಶ್ರೇಷ್ಠತೆಗಳು:
ಝೈನಬ್(ರ) ಮಹಾ ದೇವಭಕ್ತೆಯಾಗಿದ್ದರು. ಸದಾ ಕಾಲ ಅಲ್ಲಾಹನ ಸಾಮೀಪ್ಯ ಪಡೆಯುವುದರಲ್ಲೇ ತಮ್ಮ ಸಮಯವನ್ನು ಕಳೆಯುತ್ತಿದ್ದರು. ತನ್ನಿಂದ ಏನೇ ತಪ್ಪಾದರೂ ತಕ್ಷಣ ಕ್ಷಮೆ ಬೇಡುತ್ತಿದ್ದರು. ಪ್ರವಾದಿ(ಸ) ಪತ್ನಿಯರಲ್ಲಿ ಝೈನಬ್(ರ) ರಿಗಿಂತ ಹೆಚ್ಚು ನನಗೆ ಸಾಟಿಯಾಗಿ ನಿಲ್ಲುವವರು ಯಾರೂ ಇಲ್ಲ ಧಾರ್ಮಿಕ ವಿಷಯಗಳಲ್ಲಿ ಝೈನಬ್(ರ) ಗಿಂತಲೂ ಉತ್ತಮ ಮಹಿಳೆಯನ್ನು ನಾನು ನೋಡಿಲ್ಲ. ಅವರು ಅಲ್ಲಾಹನನ್ನು ಅತ್ಯಧಿಕ ಭಯಪ ಡುತ್ತಿದ್ದರು, ಯಾವಾಗಲೂ ಸತ್ಯವನ್ನೇ ನುಡಿಯುತ್ತಿದ್ದರು, ಕುಟುಂಬ ಸಂಬಂಧವನ್ನು ಜೋಡಿಸುತ್ತಿದ್ದರು, ಉದಾರವಾಗಿ ದಾನ ಮಾಡುತ್ತಿದ್ದರು ಮತ್ತು ಅಲ್ಲಾಹನ ಸಾಮೀಪ್ಯ ಪಡೆಯುವುದಕ್ಕಾಗಿ ಅತಿಯಾಗಿ ಪರಿಶ್ರಮಪಡುತ್ತಿದ್ದರು ಎಂದು ಆಯಿಶ(ರ) ಹೇಳುತ್ತಿದ್ದರು. ನಿಮ್ಮನ್ನೆಲ್ಲಾ ಪ್ರವಾದಿ(ಸ) ರಿಗೆ ಮದುವೆ ಮಾಡಿಕೊಟ್ಟಿದ್ದು ನಿಮ್ಮ ಮನೆಯವರಾಗಿದ್ದರೆ ನನ್ನನ್ನು ಮದುವೆ ಮಾಡಿಕೊಟ್ಟದ್ದು ಅಲ್ಲಾಹು ಏಳಾಕಾಶಗಳ ಮೇಲಿನಿಂದ ಎಂದು ಝೈನಬ್(ರ) ಪ್ರವಾದಿ(ಸ) ರವರ ಇತರ ಪತ್ನಿಯರ ಮುಂದೆ ಹೆಮ್ಮೆಪಡುತ್ತಿದ್ದರು. ಆಯಿಶ(ರ) ರವರ ಬಗ್ಗೆ ಕಪಟವಿಶ್ವಾಸಿಗಳು ವ್ಯಭಿಚಾರದ ಸುಳ್ಳಾರೋಪ ಹೊರಿಸಿದಾಗ ಮದೀನದಲ್ಲಿ ಅಪಪ್ರಚಾರವಾಗಿ ಜನರು ಏನೆಲ್ಲಾ ಮಾತನಾಡುತ್ತಿದ್ದರು. ಆದರೆ ಆಯಿಶ(ರ) ಮತ್ತು ಝೈನಬ್(ರ) ರವರ ಮಧ್ಯೆ ಅಷ್ಟೊಂದು ಅನ್ನೋನ್ಯತೆ ಇಲ್ಲದಿದ್ದರೂ ಸಹ ಝೈನಬ್(ರ) ಆಯಿಶ(ರ) ರವರ ಪರವಾಗಿ ನಿಂತರು. ಆಯಿಶ(ರ) ರವರ ಬಗ್ಗೆ ಜನರು ಆಡುತ್ತಿರುವ ಇಂತಹ ಮಾತುಗಳನ್ನು ಕೇಳಿ ನನ್ನ ಕಿವಿ, ಕಣ್ಣು ಮತ್ತು ನಾಲಿಗೆಯನ್ನು ನಾನು ಮಲಿನಗೊಳಿಸುವುದಿಲ್ಲ, ಅಲ್ಲಾಹನಾಣೆ! ಆಯಿಶ(ಸ) ಅಪ್ರತಿಮ ದೇವಭಕ್ತೆ, ಅವಳು ಅಲ್ಲಾಹನನ್ನು ಅತಿಯಾಗಿ ಭಯಪಡುವವಳು, ಅವಳು ಇತರರಿಗೆ ಮಾದರಿಯಾಗಿರುವವಳು ಎಂದು ಆಯಿಶ(ರ) ರವರ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಆಡುತ್ತಿದ್ದರು. ಆಯಿಶ(ರ) ಹೇಳುತ್ತಿದ್ದರು, ನನ್ನ ಮೇಲೆ ವ್ಯಭಿಚಾರ ಆರೋಪ ಬಂದಾಗ ಆ ಅವಕಾಶವನ್ನು ಸದುಪಯೋಗಪಡಿಸಿ ಝೈನಬ್(ರ) ರಿಗೆ ನನ್ನ ಮೇಲೆ ಕೆಟ್ಟ ಆರೋಪಗಳನ್ನು ಹೇಳಬಹುದಾಗಿತ್ತು. ಆದರೆ ಅವಳು ಅಲ್ಲಾಹನನ್ನು ಭಯಪಟ್ಟು ನನ್ನ ಬಗ್ಗೆ ಸತ್ಯವನ್ನೇ ನುಡಿದಳು. ನನ್ನ ಜೀವನದ ಅತಿ ಕ್ಲಿಷ್ಟಕರ ಸನ್ನಿವೇಶದಲ್ಲಿ ಜನರೆಲ್ಲಾ ನನ್ನ ವಿರುದ್ಧವಾಗಿರುವಾಗ ಝೈನಬ್(ರ) ನನ್ನ ಪರವಾಗಿ ನಿಂತರು. ಇದನ್ನು ನಾನು ಎಂದಿಗೂ ಮರೆಯಲಾರೆ. ಝೈನಬ್(ರ) ರವರು ರಾತ್ರಿಯೆಲ್ಲಾ ನಮಾಝ್‌ನಲ್ಲಿ ಮುಳುಗಿರುತ್ತಿದ್ದರು. ತಮ್ಮ ಕಾಲು ನೋಯುವ ತನಕ ಅವರು ನಮಾಝ್ ಮಾಡುತ್ತಿದ್ದರು. ಕಾಲು ನೋಯುವಾಗ ಹಿಡಿದುಕೊಳ್ಳಲು ಅವರು ಮಸೀದಿಯ ಎರಡು ಕಂಬಗಳ ನಡುವೆ ಒಂದು ಹಗ್ಗ ಕಟ್ಟಿದ್ದರು. ಒಮ್ಮೆ ಪ್ರವಾದಿ(ಸ) ರವರು ಈ ಹಗ್ಗವನ್ನು ನೋಡಿ ಇದು ಯಾರದ್ದೆಂದು ಕೇಳಿದರು, ಅದು ಝೈನಬ್(ರ) ರದ್ದೆಂದು ಉತ್ತರ ಸಿಕ್ಕಿದಾಗ ಅವರು ಅದನ್ನು ಬಿಚ್ಚಲು ಹೇಳಿದರು. ನಿಮಗೆ ಉತ್ಸಾಹವಿರುವಷ್ಟು ನಮಾಝ್ ಮಾಡಿ, ಸುಸ್ತಾದಾಗ ಕುಳಿತುಕೊಳ್ಳಿರಿ ಎಂದು ಪ್ರವಾದಿ(ರ) ಹೇಳಿದರು. ಪ್ರವಾದಿ(ಸ) ರವರ ಮರಣಾನಂತರ ಝೈನಬ್(ರ) ಮನೆಯಿಂದ ಹೊರಗಿಳಿಯಲಿಲ್ಲ. ಪ್ರವಾದಿ(ಸ) ರವರ ಇತರ ಪತ್ನಿಯರು ಹಜ್ಜ್ ನಿರ್ವಹಿಸಲು ಹೋಗುತ್ತಿದ್ದರು. ಆದರೆ ಝೈನಬ್(ರ) ಮತ್ತು ಸೌದ(ರ) ಮನೆಯಿಂದ ಹೊರಗೆ ಕಾಲಿಟ್ಟಿರಲಿಲ್ಲ.
ಜೇನುತುಪ್ಪದ ಘಟನೆ:
ಒಮ್ಮೆ ಝೈನಬ್(ರ) ರಿಗೆ ಅವರ ತವರು ಮನೆಯವರು ಜೇನುತುಪ್ಪವನ್ನು ಕಳಿಸಿಕೊಟ್ಟರು. ಪ್ರವಾದಿ(ಸ) ರವರು ತಮ್ಮ ಮನೆಗೆ ಬಂದಾಗಲೆಲ್ಲಾ ಝೈನಬ್(ರ) ಅವರಿಗೆ ಜೇನುತುಪ್ಪ ಕುಡಿಯಲು ಕೊಡುತ್ತಿದ್ದರು. ಇದರಿಂದ ಪ್ರವಾದಿ(ಸ) ರವರು ಇತರ ಪತ್ನಿಯರ ಬಳಿಗೆ ಹೋಗುವುದು ತಡವಾಗುತ್ತಿತ್ತು. ಪ್ರವಾದಿ(ಸ) ರವರು ತಡವಾಗುವುದಕ್ಕೆ ಕಾರಣವನ್ನು ತಿಳಿದ ಆಯಿಶ(ರ) ಒಂದು ಉಪಾಯ ಹೂಡಿದರು. ಅವರು ಹಫ್ಸಾ(ರ) ಮತ್ತು ಸೌದ(ರ) ರನ್ನು ಕರೆದು ಪ್ರವಾದಿ(ಸ) ರವರು ನನ್ನ ಬಳಿಗೆ ಬಂದಾಗ ಅವರ ಬಾಯಿಂದ ಏನೋ ವಾಸನೆ ಬರುತ್ತದೆ ಎಂದು ನಾನು ಹೇಳುತ್ತೇನೆ. ನೀವು ಕೂಡ ಹಾಗೆಯೇ ಹೇಳಬೇಕು. ಆಗ ಅವರು ಝೈನಬ್(ರ) ರ ಬಳಿಗೆ ಹೋಗಿ ಜೇನುತುಪ್ಪ ಕುಡಿಯುವುದನ್ನು ನಿಲ್ಲಿಸುತ್ತಾರೆ ಎಂದರು. ಅವರಿಬ್ಬರು ಒಪ್ಪಿಕೊಂಡು ಹಾಗೆಯೇ ಮಾಡಿದರು. ಪ್ರವಾದಿ(ಸ) ರವರು ಇನ್ನು ಮುಂದೆ ನಾನು ಜೇನುತುಪ್ಪ ಕುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಇದರ ಬಗ್ಗೆ ಕುರ್‌ಆನ್ ಸೂಕ್ತಿ ಅವತೀರ್ಣವಾಯಿತು. ನಂತರ ಪ್ರವಾದಿ(ಸ) ರವರು ತನ್ನ ಪ್ರತಿಜ್ಞೆಯನ್ನು ಹಿಂದೆಗೆದು ಪ್ರಾಯಶ್ಚಿತ್ತ ನೀಡಿದರು.
ಮರಣ:
ಝೈನಬ್(ರ) ಹಿ.ಶ. 20 ರಲ್ಲಿ ತಮ್ಮ 53ನೇ ವಯಸ್ಸಿನಲ್ಲಿ ಮದೀನದಲ್ಲಿ ಮರಣಹೊಂದಿದರು. ಪ್ರವಾದಿ(ಸ) ರವರ ನಿಧನದ ಬಳಿಕ ಮೊತ್ತಮೊದಲು ಅವರನ್ನು ಸೇರಿದ ಪತ್ನಿ ಝೈನಬ್(ರ) ಆಗಿದ್ದರು. ಆಯಿಶ(ರ) ಹೇಳುತ್ತಾರೆ, ಒಮ್ಮೆ ಪ್ರವಾದಿ(ಸ) ರವರು ಹೇಳಿದರು, ನಿಮ್ಮ ಪೈಕಿ ಅತಿ ಉದ್ದದ ಕೈಯನ್ನು ಹೊಂದಿರುವವಳು ನನ್ನನ್ನು ಅತಿ ಶೀಘ್ರವಾಗಿ ಸೇರಿಕೊಳ್ಳುತ್ತಾಳೆ. ಇದನ್ನು ಕೇಳಿದ ನಂತರ ಪ್ರವಾದಿ(ಸ) ರವರ ಪತ್ನಿಯರೆಲ್ಲರೂ ತಮ್ಮ ಕೈಗಳನ್ನು ಅಳೆಯತೊಡಗಿದರು. ಅತಿ ಉದ್ದದ ಕೈ ಝೈನಬ್(ರ)ರದ್ದಾಗಿತ್ತು. ಏಕೆಂದರೆ ಅವರು ತಮ್ಮ ಕೈಯಿಂದಲೇ ಸಂಪಾದಿಸಿ ತಿನ್ನುತ್ತಿದ್ದರು ಮತ್ತು ಅತಿ ಹೆಚ್ಚಾಗಿ ದಾನ ಮಾಡುತ್ತಿದ್ದರು. ಮರಣ ಸಮೀಪಿಸಿದಾಗ ಝೈನಬ್(ರ) ಹೇಳಿದರು, ನನ್ನ ಕಫನನ್ನು ನಾನೇ ಸಿದ್ಧಪಡಿಸಿದ್ದೇನೆ. ಉಮರ್(ರ) (ಆಗ ಉಮರ(ರ) ರವರ ಆಡಳಿತವಿತ್ತು) ನನಗೆ ಕಫನ್ ಕಳಿಸಿಕೊಟ್ಟರೆ ಆ ಎರಡು ಕಫನ್‌ಗಳಲ್ಲಿ ಒಂದನ್ನು ದಾನ ಮಾಡಿ. ಅವರು ಮರಣಹೊಂದಿದಾಗ ಅವರ ಬಳಿ ಒಂದು ನಾಣ್ಯ ಕೂಡ ಇರಲಿಲ್ಲ.