ಝೈನಬ್(ರ) ಮಕ್ಕಾದಲ್ಲಿ ಬನೂ ಹಿಲಾಲ್ ಕುಟುಂಬದಲ್ಲಿ ಪ್ರವಾದಿತ್ವಕ್ಕೆ 13 ವರ್ಷ ಮೊದಲು ಜನಿಸಿದರು. ಅವರ ತಾಯಿ ಹಿಂದ್ ಬಿಂತ್ ಔಫ್ ಪ್ರವಾದಿ(ಸ) ರವರ ಇನ್ನೊಬ್ಬ ಪತ್ನಿ ಮೈಮೂನಾ ಬಿಂತ್ ಹಾರಿಸ್(ರ) ರಿಗೂ ತಾಯಿಯಾಗಿದ್ದರು. ಝೈನಬ್(ರ) ಮೊದಲು ತುಫೈಲ್ ಬಿನ್ ಹಾರಿಸ್‌ರನ್ನು ವಿವಾಹವಾದರು. ಕೆಲವೇ ವರ್ಷಗಳಲ್ಲಿ ಈತ ನಿಧನನಾದ ಅಥವಾ ವಿಚ್ಛೇದನ ನೀಡಿದ. ನಂತರ ಝೈನಬ್(ರ) ಉಬೈದ ಬಿನ್ ಹಾರಿಸ್(ರ) ರನ್ನು ವಿವಾಹವಾದರು.
ಇಸ್ಲಾಂ ಸ್ವೀಕಾರ:
ಝೈನಬ್(ರ) ಆರಂಭಕಾಲದಲ್ಲೇ ಇಸ್ಲಾಂ ಸ್ವೀಕರಿಸಿದ್ದರು. ಪ್ರವಾದಿ(ಸ) ಮದೀನಕ್ಕೆ ಹಿಜ್ರ ಮಾಡಲು ಆದೇಶಿಸಿದಾಗ ಅವರು ಮದೀನಕ್ಕೆ ಹಿಜ್ರ ಮಾಡಿದರು.
ಝೈನಬ್(ರ) ರವರ ಗಂಡ ಉಬೈದ(ರ) ಉಹುದ್ ಯುದ್ಧದಲ್ಲಿ ಹುತಾತ್ಮರಾದರು. ಗಂಡನ್ನು ಕಳಕೊಂಡ ಝೈನಬ್(ರ) ಒಂಟಿಯಾಗಿದ್ದರು.
ಪ್ರವಾದಿ(ಸ)ರೊಂದಿಗೆ ವಿವಾಹ:
ಉಹುದ್ ಯುದ್ಧದಲ್ಲಿ ಗಂಡನನ್ನು ಕಳಕೊಂಡು ವಿಧವೆಯಾದ ಝೈನಬ್(ರ) ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಆಗ ಪ್ರವಾದಿ(ಸ) ರವರು ಹಫ್ಸಾ(ರ) ರನ್ನು ವಿವಾಹವಾಗಿ ಕೆಲವು ತಿಂಗಳುಗಳಷ್ಟೇ ಕಳೆದಿದ್ದವು. ಝೈನಬ್(ರ) ರವರ ಬಗ್ಗೆ ತಿಳಿದುಕೊಂಡ ಪ್ರವಾದಿ(ಸ) ಆಕೆಯನ್ನು ವಿವಾಹವಾಗಲು ನಿರ್ಧರಿಸಿದರು. ಆಕೆಗೆ ವಿವಾಹ ಪ್ರಸ್ತಾಪವನ್ನು ಕಳುಹಿಸಿದಾಗ ಆಕೆ ಸಂತೋಷದಿಂದ ಒಪ್ಪಿಕೊಂಡರು. ಹಿಜರಿ ಶಕೆ 4ನೇ ರಮದಾನ್ ತಿಂಗಳಲ್ಲಿ ವಿವಾಹ ನೆರವೇರಿತು. ಯುದ್ಧದಲ್ಲಿ ಗಂಡಂದಿರನ್ನು ಕಳಕೊಂಡು ವಿಧವೆಯರಾಗುವ ಮಹಿಳೆಯರನ್ನು ಇಸ್ಲಾಂ ನಿರ್ಲಕ್ಷಿಸುವುದಿಲ್ಲ ಎಂದು ತೋರಿಸಿಕೊಡುವುದಕ್ಕಾಗಿ ಪ್ರವಾದಿ(ಸ) ರವರು ಝೈನಬ್(ರ) ರನ್ನು ವಿವಾಹವಾಗಿದ್ದರು. ಝೈನಬ್(ರ) ರವರು ಪ್ರವಾದಿ(ಸ) ರವರು ವಿವಾಹವಾದ ಕುರೈಶ್ ಗೋತ್ರಕ್ಕೆ ಸೇರದ ಮೊದಲ ಪತ್ನಿಯಾಗಿದ್ದರು.
ಉಮ್ಮುಲ್ ಮಸಾಕೀನ್:
ಝೈನಬ್(ರ) ಜಾಹಿಲೀ ಕಾಲದಲ್ಲೇ ಉಮ್ಮುಲ್ ಮಸಾಕೀನ್ (ಬಡವರ ತಾಯಿ) ಎಂಬ ಹೆಸರಲ್ಲಿ ಖ್ಯಾತರಾಗಿದ್ದರು. ಇದಕ್ಕೆ ಕಾರಣ ಅವರು ಬಡವರಿಗೆ ತೋರುತ್ತಿದ್ದ ಅನುಕಂಪ ಹಾಗೂ ಬಡವರಿಗೆ ಮಾಡುತ್ತಿದ್ದ ಸಹಾಯ. ಅವರು ತಮ್ಮ ಕೈಯಲ್ಲಿರುವುದನ್ನೆಲ್ಲಾ ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡುತ್ತಿದ್ದರು. ಇಸ್ಲಾಂ ಸ್ವೀಕರಿಸಿದ ಮೇಲೆ ಇದು ಇನ್ನೂ ಹೆಚ್ಚಾಯಿತು.
ಮರಣ:
ವಿವಾಹವಾಗಿ ಪ್ರವಾದಿ(ಸ) ರವರ ಮನೆಗೆ ಕಾಲಿಟ್ಟ ಬಳಿಕವೂ ಝೈನಬ್(ರ) ಬಡವರಿಗೆ ನೆರವಾಗುವುದನ್ನು ಮುಂದುವರಿಸಿದ್ದರು. ಆದರೆ ಕೆಲವೇ ತಿಂಗಳುಗಳಲ್ಲಿ ಅವರು ರೋಗಪೀಡಿತರಾಗಿ ತಮ್ಮ 30ನೇ ವಯಸ್ಸಿನಲ್ಲಿ ಹಿ.ಶ. 4 ರಬೀಉಲ್ ಆಖರ್ ತಿಂಗಳಲ್ಲಿ ಇಹಲೋಕವನ್ನು ತ್ಯಜಿಸಿದರು. ಪ್ರವಾದಿ(ಸ) ರವರು ಅವರಿಗೆ ಜನಾಝ ನಮಾಝ್ ನಿರ್ವಹಿಸಿದರು. ಅವರನ್ನು ಬಕೀಅ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.