ಹಿಜರಿ 5ನೇ ವರ್ಷದಲ್ಲಿ ಅರೇಬಿಯಾದ ಪ್ರಮುಖ ಭಾಗಗಳು ಇಸ್ಲಾಮಿನ ತೆಕ್ಕೆಗೆ ಬಂದವು. ಮದೀನಾ ಅಭ್ಯುದಯ ಹೊಂದುವ ಒಂದು ಸಾಮ್ರಾಜ್ಯವಾಗಿ ಮಾರ್ಪಟ್ಟಿತು. ಮದೀನಾದ ಸುತ್ತುಮುತ್ತಲಿನ ಗೋತ್ರಗಳು ಇಸ್ಲಾಮಿನ ಬಗ್ಗೆ ಮೃದು ಧೋರಣೆಯನ್ನು ತಾಳಿದವು. ಬನೂ ಖುಝಾಅ ಗೋತ್ರ ಅವುಗಳಲ್ಲಿ ಒಂದಾಗಿತ್ತು. ಬನೂ ಮುಸ್ತಲಕ್ ಇದರ ಒಂದು ಉಪಗೋತ್ರವಾಗಿತ್ತು. ಹಾರಿಸ್ ಬಿನ್ ಅಬೂ ದರಾರ್ ಈ ಗೋತ್ರದ ಮುಖಂಡರಾಗಿದ್ದರು. ಅವರಿಗೆ ಒಬ್ಬ ಸುಂದರ ಮಗಳಿದ್ದಳು. ಆಕೆಯ ಹೆಸರು ಜುವೈರಿಯ. ಜುವೈರಿಯ(ರ) ಬನೂ ಮುಸ್ತಲಕ್ ಗೋತ್ರದಲ್ಲಿ ಐಷಾರಾಮಿ ಜೀವನದಲ್ಲಿ ಬೆಳೆದರು. ಒಬ್ಬ ರಾಜಕುಮಾರಿಗೆ ಇರಬೇಕಾದ ಎಲ್ಲಾ ಸವಲತ್ತುಗಳು ಮತ್ತು ಅನುಗ್ರಹಗಳು ಅವರಿಗೆ ಇದ್ದವು. ಅವರು ಮಹಾ ಬುದ್ದಿವಂತೆ ಮತ್ತು ಚಾಣಾಕ್ಷಮತಿಯಾಗಿದ್ದರು. ಭಾಷೆ ಮತ್ತು ಸಾಹಿತ್ಯ ಶೈಲಿಯನ್ನೆಲ್ಲಾ ಕರಗತ ಮಾಡಿಕೊಂಡಿದ್ದರು. ಅವರು ಅದೇ ಗೋತ್ರದ ಮುಸಾಫಿಲ್ ಬಿನ್ ಸಫ್ವಾನ್ ಎಂಬುವನನ್ನು ವಿವಾಹವಾಗಿದ್ದರು.
ಬನೂ ಮುಸ್ತಲಕ್ ಯುದ್ಧ:
ಬನೂ ಮುಸ್ತಲಕ್ ಗೋತ್ರದವರು ಮುಸ್ಲಿಮರ ವಿರುದ್ಧ ದಾಳಿ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆಂಬ ವಾರ್ತೆ ಸಿಕ್ಕಿದಾಗ ಪ್ರವಾದಿ(ಸ) ಅವರ ಮೇಲೆ ದಾಳಿ ಮಾಡಲು ನಿರ್ಧರಿಸಿದರು. ಅದಕ್ಕಾಗಿ ಸುಮಾರು ಏಳು ನೂರು ಯೋಧರನ್ನು ಸಿದ್ಧಪಡಿಸಿದರು. ಪ್ರವಾದಿ(ಸ) ಸ್ವತಃ ಈ ಯುದ್ಧದಲ್ಲಿ ಪಾಲ್ಗೊಂಡರು. ಆಯಿಶ(ರ)ಕೂಡ ಜೊತೆಗಿದ್ದರು. ಮುಸ್ಲಿಮರು ಮರೀಸೀಲ್ ಎಂಬ ಸ್ಥಳವನ್ನು ತಲುಪಿದಾಗ ಶತ್ರುಗಳಿಗೆ ಇಸ್ಲಾಂ ಸ್ವೀಕರಿಸಲು ಆಹ್ವಾನ ನೀಡಿದರು. ಆದರೆ ಅವರು ಈ ಆಹ್ವಾನವನ್ನು ಸ್ವೀಕರಿಸುವ ಬದಲು ಮುಸ್ಲಿಮರ ಮೇಲೆ ದಾಳಿ ಮಾಡಿದರು. ಘೋರ ಕದನ ನಡೆಯಿತು. ಮುಸ್ಲಿಮರು ಶತ್ರುಗಳನ್ನು ಸುತ್ತುವರಿದರು. 10 ಜನರು ಕೊಲ್ಲಲ್ಪಟ್ಟು 700 ಜನರನ್ನು ಸೆರೆ ಹಿಡಿಯಲಾಯಿತು. ಸೆರೆಯಾದವರಲ್ಲಿ ಅನೇಕ ಮಹಿಳೆಯರೂ ಇದ್ದರು. ಜುವೈರಿಯ(ರ) ರವರ ಗಂಡ ಯುದ್ಧದಲ್ಲಿ ಮಡಿದರು.
ಪ್ರವಾದಿ(ಸ) ರೊಂದಿಗೆ ವಿವಾಹ:
ಸೆರೆಯಾದ ಮಹಿಳೆಯರಲ್ಲಿ ಜುವೈರಿಯ(ರ) ಕೂಡ ಇದ್ದರು. ಖೈದಿಗಳನ್ನು ಜೀಟಿ ಹಾಕಿ ಹಂಚಿದಾಗ ಇವರು ಸಾಬಿತ್ ಬಿನ್ ಕೈಸ್(ರ) ರವರ ಪಾಲಿಗೆ ಬಂದರು. ರಾಜಕುಮಾರಿಯಂತೆ ಬದುಕಿದ್ದ ಜುವೈರಿಯ(ರ)ರಿಗೆ ಗುಲಾಮ ಸ್ತ್ರೀಯಾಗಿ ಬದುಕುವುದು ಅಸಹನೀಯವಾಗಿತ್ತು. ಆದ್ದರಿಂದ ಅವರು ಪರಿಹಾರ ನೀಡುವ ಷರತ್ತಿನ ಮೇಲೆ ವಿಮೋಚನಾ ಪತ್ರಕ್ಕೆ ಸಹಿ ಹಾಕಿದರು. ಆದರೆ ಪರಿಹಾರ ನೀಡಲು ಅವರ ಬಳಿ ಏನೂ ಇರಲಿಲ್ಲ. ಆದ್ದರಿಂದ ಅವರು ಪ್ರವಾದಿ(ಸ) ರವರ ಬಳಿಗೆ ಬಂದು ಹೇಳಿದರು, “ಓ, ಅಲ್ಲಾಹನ ಸಂದೇಶವಾಹಕರೇ! ನಾನು ಜುವೈರಿಯ ಬಿಂತ್ ಹಾರಿಸ್, ಬನೂ ಮುಸ್ತಲಕ್ ಗೋತ್ರದ ಮುಖಂಡನ ಮಗಳು. ನನಗೊಂದು ವಿಪತ್ತು ಸಂಭವಿಸಿದೆ. ಅದು ನಿಮಗೆ ತಿಳಿದದ್ದೇ ಆಗಿದೆ. ನಾನು ವಿಮೋಚನಾ ಪತ್ರಕ್ಕೆ ಸಹಿ ಹಾಕಿದ್ದೇನೆ. ಆದರೆ ಪರಿಹಾರ ನೀಡಲು ನನ್ನ ಬಳಿ ಏನೂ ಇಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ.” ಪ್ರವಾದಿ(ಸ)ರವರು ಹೇಳಿದರು: “ಅದಕ್ಕಿಂತ ಉತ್ತಮವಾದ ಒಂದನ್ನು ನಾನು ನಿಮಗೆ ಮಾಡಿಕೊಡಲೇ? ನಾನು ನಿಮ್ಮ ಪರವಾಗಿ ಪರಿಹಾರವನ್ನು ನೀಡಿ ನಿಮ್ಮನ್ನು ವಿವಾಹವಾಗುವುದು ನಿಮಗೆ ಇಷ್ಟವೇ?” ಜುವೈರಿಯ(ರ) ಸಂತೋಷದಿಂದ “ಹೌದು” ಎಂದರು. ಪ್ರವಾದಿ ಅವರನ್ನು ವಿವಾಹವಾದರು. ಆಗ ಅವರಿಗೆ ಇಪ್ಪತ್ತು ವರ್ಷ ಪ್ರಾಯವಾಗಿತ್ತು.
ಜುವೈರಿಯ(ರ) ರವರ ಬರಕತ್:
ಪ್ರವಾದಿ(ಸ) ರವರು ಜುವೈರಿಯ(ರ) ರನ್ನು ವಿವಾಹವಾದ ಸುದ್ದಿ ತಿಳಿದಾಗ ಸಹಾಬಾಗಳು ಹೇಳಿದರು, ಪ್ರವಾದಿ(ಸ) ರವರ ಬೀಗರನ್ನು ನಾವು ಗುಲಾಮರಾಗಿ ಮಾಡಿಕೊಳ್ಳುವುದು ಹೇಗೆ? ತಕ್ಷಣ ಅವರೆಲ್ಲರೂ ತಮ್ಮ ವಶದಲ್ಲಿ ಬನೂ ಮುಸ್ತಲಕ್ ಗೋತ್ರದ ಯುದ್ಧಕೈದಿಗಳನ್ನು ಬಿಡುಗಡೆ ಮಾಡಿದರು. ಜುವೈರಿಯ(ರ) ರವರ ಕಾರಣದಿಂದ ಸುಮಾರು ಒಂದು ನೂರು ಮನೆಗಳ ಯುದ್ಧ ಕೈದಿಗಳು ಸ್ವತಂತ್ರರಾದರು. ಜುವೈರಿಯ(ರ) ರವರು ಅವರ ಗೋತ್ರದವರಿಗೆ ಬಹಳ ಬರಕತ್ ಇರುವ ಮಹಿಳೆಯಾಗಿ ಮಾರ್ಪಟ್ಟರು. ಆಯಿಶ(ರ) ಹೇಳುತ್ತಿದ್ದರು, ಜುವೈರಿಯ(ರ) ತನ್ನ ಗೋತ್ರಕ್ಕೆ ಉಂಟು ಮಾಡಿದಷ್ಟು ಬರಕತ್ತನ್ನು ಇತರ ಯಾವುದೇ ಮಹಿಳೆ ತನ್ನ ಗೋತ್ರಕ್ಕೆ ಉಂಟು ಮಾಡಿದ್ದನ್ನು ನಾನು ಕಂಡಿಲ್ಲ.
ಜುವೈರಿಯ(ರ) ರವರ ವಿಶೇಷತೆಗಳು:
ಜುವೈರಿಯ(ರ) ಅತ್ಯಂತ ಸುಂದರಿಯಾಗಿದ್ದರು. ಅವರನ್ನು ಮೊದಲ ಬಾರಿ ಕಂಡಾಗ ಆಯಿಶ(ರ) ಕೂಡ ದಂಗಾಗಿದ್ದರು. ಆಯಿಶ(ರ) ಹೇಳುತ್ತಾರೆ, ಜುವೈರಿಯ(ರ) ಎಷ್ಟು ಮುದ್ದಾಗಿದ್ದರೆಂದರೆ ಅವರನ್ನು ಯಾರಾದರೂ ನೋಡಿದರೆ ಖಂಡಿತ ಅವರು ವಶೀಕೃತರಾಗುತ್ತಿದ್ದರು. ಜುವೈರಿಯ(ರ) ಬಹಳ ಮೃದು ಸ್ವಭಾವದವರು. ಅತಿ ಹೆಚ್ಚು ಆರಾಧನೆಗಳಲ್ಲಿ ನಿರತರಾಗುತ್ತಿದ್ದರು. ಹೆಚ್ಚಿನ ವೇಳೆಯನ್ನೂ ಅವರು ಆರಾಧನೆಯಲ್ಲೇ ಕಳೆಯುತ್ತಿದ್ದರು. ಇಹಲೋಕದ ಪರಿವೆಯಿಲ್ಲದೆ ತಮ್ಮಲ್ಲಿರುವುದನ್ನೆಲ್ಲಾ ದಾನ ಮಾಡುತ್ತಿದ್ದರು. ಇಹಲೋಕದ ಬಗ್ಗೆ ಅತ್ಯಧಿಕ ನಿರಾಸಕ್ತರಾಗಿದ್ದರು. ಅವರು ಅತಿಹೆಚ್ಚು ಉಪವಾಸ ಆಚರಿಸುತ್ತಿದ್ದರು. ಕೆಲವೊಮ್ಮೆ ಅವರು ಶುಕ್ರವಾರ ಕೂಡ ಉಪವಾಸ ಆಚರಿಸುತ್ತಿದ್ದರು. ಆಗ ಪ್ರವಾದಿ(ಸ) ರವರು ಅವರಿಗೆ ಶುಕ್ರವಾರ ಮಾತ್ರ ಉಪವಾಸ ಆಚರಿಸದಂತೆ ಹೇಳುತ್ತಿದ್ದರು. ಅವರು ದಿನನಿತ್ಯ ಫಜ್ರ್ ನಮಾಝಿನ ಬಳಿಕ ಸೂರ್ಯೋದಯದ ತನಕ ಕೆಲವೊಮ್ಮೆ ಮಧ್ಯಾಹ್ನದ ತನಕ ಅಲ್ಲಾಹನ ಸ್ಮರಣೆಯಲ್ಲಿ ನಿರತರಾಗಿರುತ್ತಿದ್ದರು. ಒಮ್ಮೆ ಪ್ರವಾದಿ(ಸ) ರವರು ಫಜ್ರ್ ನಮಾಝಿನ ಬಳಿಕ ಎಲ್ಲಿಗೋ ಹೋಗಿ ದುಹಾ ಸಮಯದಲ್ಲಿ ಹಿಂದಿರುಗಿದಾಗ ಅವರು ನಮಾಝ್ ಮಾಡಿದ ಸ್ಥಳದಲ್ಲೇ ಕುಳಿತಿದ್ದರು. ಪ್ರವಾದಿ(ಸ) ಹೇಳಿದರು- ನೀನು ನಾಲ್ಕು ವಚನಗಳನ್ನು ಮೂರು ಸಲ ಹೇಳುತ್ತಿದ್ದರೆ ಅದು ನೀನು ಬೆಳಗ್ಗಿನಿಂದ ಇಲ್ಲಿಯ ತನಕ ಹೇಳಿದ ದಿಕ್ಕಿಗೆ ಸಮಾನವಾಗುತ್ತಿತ್ತು. ನಂತರ ಪ್ರವಾದಿ(ಸ) ರವರು ಆ ದಿಕ್ರ್‌ಗಳನ್ನು ಅವರಿಗೆ ಕಲಿಸಿಕೊಟ್ಟರು.
ಮರಣ:
ಹಿ.ಶ. 56ರಲ್ಲಿ ರಬೀಉಲ್ ಅವ್ವಲ್ ತಿಂಗಳಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ಜುವೈರಿಯ(ರ) ಇಹಲೋಕ ವಾಸವನ್ನು ಮುಗಿಸಿದರು. ಆಗ ಮುಆವಿಯ(ರ) ಆಡಳಿತ ನಡೆಸುತ್ತಿದ್ದರು. ಮದೀನಾದ ರಾಜ್ಯಪಾಲ ಮರ್ವಾನ್ ಬಿನ್ ಹಕಮ್ ಅವರಿಗೆ ಜನಾಝ ನಮಾಝ್ ನಿರ್ವಹಿಸಿದರು. ಅವರನ್ನು ಬಕೀಅ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.