ಮುನ್ನುಡಿ,
ಶುಕ್ರವಾರ ಜುಮುಅ ಖುತ್ಬಾವು ಇಂದು ಜಾಗತಿಕ ಮುಸ್ಲಿಮರು ನಿರ್ವಹಿಸುತ್ತಿರುವ ಒಂದು ಕರ್ಮವಾಗಿದೆ. ಆದರೆ ಈ ಪ್ರಕ್ರಿಯೆಗೆ ಹಲವು ಶತಮಾನಗಳ ಇತಿಹಾಸವಿದೆ. ಆಯಾ ಪ್ರದೇಶದಲ್ಲಿ ಅಲ್ಲಿನ ಜನರ ಮಾತೃಭಾಷೆಯಲ್ಲಿ ಜನರಿಗೆ ಉಪದೇಶ ನೀಡುವುದೇ ಖುತ್ಬಾದ ಉದ್ದೇಶ. ಖುತ್ಬಾದ ಅರ್ಕಾನ್ (ವಿಧಿ)ಗಳನ್ನು ಮಾತ್ರ ಅರಬಿಯಲ್ಲಿ ಹೇಳಲಾಗುತ್ತದೆ.
ಕೇರಳದಲ್ಲಿಯೂ ಹಿಂದಿನ ಕಾಲದಿಂದಲೇ ಖುತ್ಬಾದ ಪ್ರಾಮುಖ್ಯ ಅಂಶಗಳ ಹೊರತು ಜುಮುಅ ಖುತ್ಬಾವನ್ನು ಮಲೆಯಾಳ ಭಾಷೆಯಲ್ಲಿಯೇ ನಿರ್ವಹಿಸಲಾಗುತ್ತಿದೆ. ಕೇರಳದ ತಿರುವನಂತಪುರಂ, ಕಲ್ಲಿಕೋಟೆ, ಕಣ್ಣೂರು ಮುಂತಾದ ಖ್ಯಾತ ಪಟ್ಟಣಗಳಲ್ಲಿಯೂ ಪರಿಸರ ಪ್ರದೇಶಗಳಲ್ಲಿಯೂ ಇಂದು ಅದೇ ರೀತಿ ಮಾತೃಭಾಷೆಯಲ್ಲಿಯೇ ಖುತ್ಬಾ ನಡೆಯುತ್ತಿದೆ.
ಈ ಕುರಿತು 1947ರ ಬಳಿಕ ವಿವಾದ ಆರಂಭಗೊಂಡಿತು. 1923ರಲ್ಲಿ ಸ್ಥಾಪನೆಗೊಂಡ ಸಮಸ್ತ ಕೇರಳ ಅಂಗೀಕರಿಸಿದ ಒಂದು ಠರಾವು ಅದಕ್ಕೆ ಕಾರಣವಾಯಿತ್ತು.
ಆ ಠರಾವು ಹೀಗಿತ್ತು:
ಜುಮುಅ ಖುತ್ಬದಲ್ಲಿ ಅರಬಿ ಭಾಷೆಯ ವಿನಾ ಇತರ ಭಾಷೆಗಳನ್ನು ಬಳಸುವುದು ಉತ್ತಮವಲ್ಲ. ಹಾಗೆ ಮಾಡುವುದು (ಮುಂಕರತ್) ಬಿದ್ಆತ್ ಆಗಿದೆಯೆಂದು ಈ ಸಭೆಯು ತೀರ್ಮಾನಿಸಿದೆ. ಇಂದು ಖುತ್ಬಾ ಅನುವಾದ ಮಾಡುತ್ತಿರುವ ಜುಮಾ ಮಸೀದಿಗಳ ಆಡಳಿತ ವರ್ಗ ಮತ್ತು ಖತೀಬರೊಡನೆ, ಆ ಕ್ರಮವನ್ನು ವರ್ಜಿಸುವಂತೆ ಈ ಸಭೆಯು ವಿನಂತಿಸುತ್ತದೆ.
ಇಲ್ಲಿಂದ ಗೊಂದಲ ಆರಂಭಗೊಂಡಿತು. (ನವೂದುಬಿಲ್ಲಾ)
ಪ್ರಶ್ನಾತೀತವಾಗಿರುವ ಇಸ್ಲಾಮೀ ಶರೀಅತ್ನ ನಿಯಮಗಳನ್ನು ಒಂದು ಠರಾವಿನ ಮೂಲಕ ತಿದ್ದುಪಡಿ ಮಾಡುವ ಧಾರ್ಷ್ಟ್ಯ ಸಂಪೂರ್ಣ ಅನಿಸ್ಲಾಮಿಕವಾಗಿದೆ. ಯಹೂದಿಯರು ಮತ್ತು ಕ್ರೈಸ್ತರು ತಮ್ಮ ಪುರೋಹಿತರ ಮೂಲಕ ಧಾರ್ಮಿಕ ವಿಧಿಗಳನ್ನು ತಿದ್ದುಪಡಿ ಮಾಡುತ್ತಿದ್ದರು. ಅಂಥ ತಿದ್ದುಪಡಿ ಮಾಡುವುದೂ ಇಸ್ಲಾಮೀ ಶರೀಅತ್ಗಾಗಲೀ (ಪವಿತ್ರ ಕುರ್ಆನ್ ಮತ್ತು ಪ್ರವಾದಿ ಚರ್ಯೆ) ಅಥವಾ ಸುನ್ನತ್ ಜಮಾಅತ್ನ ವಿದ್ವಾಂಸರಿಗಾಗಲೀ ಅಂಗೀಕಾರಾರ್ಹವಲ್ಲ. ಆದ್ದರಿಂದಲೇ ಅಂದಿನ ಸಮಸ್ತದ ಹಿರಿಯ ನಾಯಕರಾಗಿದ್ದ ಕಾಡೇರಿ ಮುಹಮ್ಮದ್ ಮುಸ್ಲಿಯಾರ್, ಕೊಡಿಯತ್ತೂರ್ ಕಾಜೀ ಅಬ್ದುಲ್ ಅಜೀಜ್ ಮುಸ್ಲಿಯಾರ್, ಅರಕ್ಕಲ್ ಖತೀಬ್ ಅಬ್ದಲ್ ಕಾದರ್ ಮೌಲವಿ(ನವ್ವರ) ಎಂಬೀ ಗಣ್ಯರು ಪ್ರತಿಭಟಿಸಿ ಸಭಾತ್ಯಾಗ ಮಾಡಿದ್ದರು.
ಅಂದು ಅನುವಾದವನ್ನು ಬಿದ್ಅತ್ ಎಂದು ಪರಿಗಣಿಸಿದ್ದರೆ ಇಂದು ಕೆಲವರು ಅದನ್ನು ಹರಾಮ್ ಎನ್ನುತ್ತಿದ್ದಾರೆ. ನವೂದ್ಬಿಲ್ಲಾಃ ನಾವು ಅಲ್ಲಾಹನ ರಕ್ಷಣೆಯನ್ನು ಬೇಡುತ್ತೇವೆ. ಖುತ್ಬಾ ಅನುವಾದಿಸಬಾರದೆಂದು ಹೇಳುವವರ ವಾದದ ಪೊಳ್ಳುತನವನ್ನು ಸ್ಪಷ್ಟಪಡಿಸಲಿಕ್ಕಾಗಿ ಇಷ್ಟೆಲ್ಲ ಬರೆಯಬೇಕಾಯಿತು. ಈ ಕಿರುಕೃತಿಯಲ್ಲಿ ಶಾಫೀ ಮದ್ಹಬನ್ನು ಘನ ವಿದ್ವಾಂಸರ ಉದ್ಧರಣೆಗಳನ್ನು ಮಾತ್ರ ಕ್ರೋಢೀಕರಿಸಲಾಗಿದೆ. ಅಹ್ಲು ಸುನ್ನತ್ ವಲ್ ಜಮಾಅತ್ನ ಶಾಫೀ ಮದ್ಹಬನ್ನು ಅಂಗೀಕರಿಸಿರುವ ಸತ್ಯಶೋಧಕರು ಇದರ ವಾಸ್ತವಿಕತೆಯನ್ನು ಇಲ್ಲಿ ಉಲ್ಲೇಖಿಸಲಾಗಿರುವ ದಾಖಲೆಗಳ ಮೂಲಕ ಪರಿಶೀಲಿಸಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಹೃದಯಿ ಜನಸಾಮಾನ್ಯರಲ್ಲಿರುವ ಬತ ಸಂದೇಹಗಳನ್ನು ನಿವಾರಿಸಬೇಕೆಂಬ ಏಕೈಕ ಸದುದ್ದೇಶದಿಂದ ಈ ಕೃತಿಯನ್ನು ರಚಿಸಲಾಗಿದೆ. ಸತ್ಯವನ್ನು ಗ್ರಹಿಸುವ ವಿಶಾಲ ಹೃದಯವನ್ನು ಅಲ್ಲಾಹನು ನಮಗೆ ದಯಪಾಲಿಸಲಿ (ಅರೇಬಿಕ್) ಈ ಕಿರುಹೊತ್ತಗೆಯಲ್ಲಿ ನಾನು ಮೌಲಾನಾ ಅಬ್ದುಲ್ ಅಝೀಝಲ್ ಬಾಕವಿ(ನ) ಮತ್ತು ಮೌಲಾನಾ ಅಬ್ದುರ್-ರಹ್ಮಾನ್ ಮುಹಮ್ಮದುಲ್ ಫೈಇ ಬಾಕವಿ(ನ) ಮತ್ತು ಮಹಾನುಭಾವರ (ಅರೇಬಿಕ್) ಎಂಬೀ ಗ್ರಂಥಗಳ ಹಲವು ಹೇಳಿಕೆಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ.
ಹಲಾಲನ್ನು ಹರಾಮ್ ಮತ್ತು ಹರಾಮನ್ನು ಹಲಾಲ್ಗೊಳಿಸುವ ಅಧಿಕಾರಿ ಅಲ್ಲಾಹನ ವಿನಾ ಯಾರಿಗೂ ಇಲ್ಲ. ಅಲ್ಲಾಹ್ ಮತ್ತು ಆತನ ಪ್ರವಾದಿಯು ಹರಾಮ್ಗೊಳಿಸಿದ್ದನ್ನು ಹರಾಮ್ ಎಂದೂ ಹಲಾಲ್ಗೊಳಿಸಿದ್ದನ್ನು ಹಲಾಲೆಂದೂ ಪರಿಗಣಿಸುವ ವಿದ್ವಾಂಸರನ್ನು ಅನುಗಮಿಸಿ, ಠರಾವುಗಳ ಮೂಲಕ ಅಥವಾ ಹೇಳಿಕೆಗಳ ಮೂಲಕ ಕುರ್ಆನ್ ಮತ್ತು ಸುನ್ನತ್ಗೆ ವಿರುದ್ಧವಾಗಿರುವ ಯಾವುದೇ ಧರ್ಮವಿರೋಧಿ ಚಟುವಟಿಕೆಗಳನ್ನು ಪ್ರಬಲವಾಗಿ ವಿರೋಧಿಸಿ ಸೋಲಿಸಲು ವಿವೇಕಮತಿಗಳಾದ ನಾವು ಸಿದ್ಧರಾಗಬೇಕು. ಅದಕ್ಕೆ ಅಲ್ಲಾಹನು ನೆರವಾಗಲೆಂದು ಪ್ರಾರ್ಥಿಸುತ್ತೇನೆ.
(ಅರೇಬಿಕ್)يَـٰٓأَيُّهَا ٱلَّذِينَ ءَامَنُوٓا۟ إِذَا نُودِىَ لِلصَّلَوٰةِ مِن يَوْمِ ٱلْجُمُعَةِ فَٱسْعَوْا۟ إِلَىٰ ذِكْرِ ٱللَّهِ وَذَرُوا۟ ٱلْبَيْعَ ۚ ذَٰلِكُمْ خَيْرٌۭ لَّكُمْ إِن كُنتُمْ تَعْلَمُونَ ٩
ಸತ್ಯ ವಿಶ್ವಾಸಿಗಳೇ! ಶುಕ್ರವಾರ ದಿನ ನಿಮ್ಮನ್ನು ನಮಾಝ್ಗಾಗಿ ಕರೆದರೆ ನೀವು ದೇವ ಸ್ಮರಣೆಗಾಗಿ ಕೂಡಲೇ ತೆರಳಿರಿ. ವ್ಯಾಪಾರಗಳನ್ನು ನಿಲ್ಲಿಸಿರಿ. ನೀವು ತಿಳಿದವರಾಗಿದ್ದರೆ ನಿಮಗೆ ಅದುವೇ ಉತ್ತಮ. (ಸೂರಃ ಜುಮುಅ 9)
ಶುಕ್ರವಾರವು ಮುಸ್ಲಿಮರಿಗೆ ವಿಶೇಷ ದಿನವಾಗಿದೆ. ಪ್ರವಾದಿ (ಸ) ಯವರ ಹೇಳಿಕೆಯನ್ನು ಅಬೂಹುರೈರ(ರ) ಹೀಗೆ ವರದಿ ಮಾಡಿದ್ದಾರೆ: ಸೂರ್ಯನು ಉದಿಸಿದ ದಿನಗಳಲ್ಲಿ ಶುಕ್ರವಾರ ದಿನವು ಉತ್ತಮವಾಗಿದೆ. ಆ ದಿನವೇ ಮಾನವರ ಮಹಾಪಿತ ಆದಮ್ (ಅ)ರನ್ನು ಸೃಷ್ಟಿಸಲಾಗಿದೆ. ಅದೇ ದಿನ ಸ್ವರ್ಗದಲ್ಲಿ ಪ್ರವೇಶಗೊಳಿಸಲಾಗಿದೆ. ಆ ದಿನದಲ್ಲಿಯೇ ಅವರನ್ನು ಹೊರಹಾಕಲಾಗಿದೆ (ಮುಸ್ಲಿಮ್).
ಶ್ರೇಷ್ಟವಾದ ಈ ದಿನದಂದು ಮುಸ್ಲಿಮರು ತಮ್ಮ ವ್ಯಾಪಾರ -ಕೆಲಸಕಾರ್ಯಗಳನ್ನು ನಿಲ್ಲಿಸಿ ಅಲ್ಲಾಹನ ಮಸೀದಿಗೆ ಪ್ರಯಾಣ ಬೆಳೆಸುತ್ತಾರೆ. ಎಲ್ಲರೂ ಅಲ್ಲಿ ಒಟ್ಟು ಸೇರುತ್ತಾರೆ. ಮಧ್ಯಾಹ್ನ ನಮಾಜ್ನಸಮಯವೇ ಜುಮುಅ ನಮಾಝ್ನ ಸಮಯವೂ ಆಗಿದೆ. ಪ್ರಸ್ತುತ ವೇಳೆಗೆ ಮುಅದ್ದಿನ್ ಬಾಂಗ್ (ನಮಾಝ್ನ ಕರೆ)ಕೊಡುತ್ತಾರೆ.ಇಮಾಮ್ (ಖತೀಬ್)ರು ಭಾಷಣ ವೇದಿಕೆಯ ಮೇಲೆ ನಿಂತು ಮುಸ್ಲಿಮರಿಗೆ ಅತ್ಯಗತ್ಯ ಮತ್ತು ಪ್ರಾಮುಖ್ಯವಾಗಿರುವಧಾರ್ಮಿಕ ಮತ್ತು ಲೌಕಿಕ ವಿಷಯಗಳ ಕುರಿತು ಸಂಕ್ಷಿಪ್ತ ಹಾಗೂ ಸಮಗ್ರವಾದ ಭಾಷಣವನ್ನು ಮಾಡುತ್ತಾರೆ. ಅದರಲ್ಲಿ ದೇವಭಕ್ತಿಯಿಂದ, ಹಾಗೂ ಒಳಿತು ಭೋಧಿಸಿ ಕೆಡುಕನ್ನು ನಿರೋಧಿಸುತ್ತಾ ಬಾಳಬೇಕೆಂದೂ ಕರೆನೀಡುತ್ತಾರೆ.
ಆದರೆ ಶುಕ್ರವಾರದ ಭಾಷಣವು ಭಿನ್ನವಾದ ಹಲವು ಘಟಕ (ಅರ್ಕಾನ್)ಗಳಿವೆ. , ಸಲಾತ್ ಹೇಳುವುದುತಕ್ವಾದಿಂದ ವಸಿಯ್ಯತ್ ಮಾಡುವುದುಕುರ್ಆನಿನ ಒಂದು ಆಯತ್ ಓದುವುದುಸತ್ಯವಿಶ್ವಾಸಿಗಳಿಗಾಗಿ ಪ್ರಾರ್ಥಿಸುವುದು ಇವು ಖುತ್ಬಾದ ಅಲ್ಲದೆ, ಪುರುಷನು ಭಾಷಣ ಮಾಡಬೇಕು ಮತ್ತು ಅಂಗಸ್ನಾನ ಮಾಡಬೇಕು. ಇವು ಅದರ ನಿಬಂಧನೆಗಳಾಗಿವೆ. ಬಾಂಗ್ನ ಬಳಿಕ ಖುತ್ಬಾ ನಿರ್ವಹಿಸುವುದು, ಎತ್ತರದ ಸ್ಥಳದಲ್ಲಿ ನಿಲ್ಲುವುದು, ಸಲಾಮ್ ಹೇಳುವುದು, ಸರಳ ಮತ್ತು ಗ್ರಾಹ್ಯವಾಗಿರುವುದು, ಸಾಹಿತ್ಯಮಯವಾಗಿರುವುದು, ಇವೆಲ್ಲವೂ ಸುನ್ನತ್ಗಳಾಗಿವೆ ಆದರೆ, ಈ ಪ್ರಧಾನ ಧಾರ್ಮಿಕ ಭಾಷಣವನ್ನು, ಆಲಿಸುವವರಿಗೆ ಅದು ಅರ್ಥವಾಗಬೇಕೆ ? ಅಥವಾ ಅರ್ಥವಾಗುವುದು ಬೇಡವೇ ? ಈ ಕುರಿತು ಭಿನ್ನಾಭಿಪ್ರಾಯಗಳಿವೆ.
ಪ್ರವಾದಿ(ಸ)ವರ್ಯರು ಖುತ್ಬಾವನ್ನು ಅರಬಿಯಲ್ಲಯೇ ನಿರ್ವಹಿಸುತ್ತಿದ್ದರು, ಆದ್ದರಿಂದ ಆ ಭಾಷೆಯಲ್ಲಿಯೇ ಅದನ್ನು ನಿರ್ವಹಿಸಬೇಕು. ಅದು ಶ್ರೋತೃಗಳಿಗೆ ಅರ್ಥವಾಗುವುದೋ ಇಲ್ಲವೋ ಎಂಬುದನ್ನು ಪರಿಗಣಿಸಬೇಕಾಗಿಲ್ಲವೆಂದು ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಪ್ರವಾದಿವರ್ಯರ ಖುತ್ಬಾವು ಸಭಿಕರಿಗೆ ಅರ್ಥವಾಗುತ್ತಿತ್ತು. ಆದುದರಿಂದ ನಮ್ಮ ಖುತ್ಬಾ ಕೂಡಾ ಸಭಿಕರಿಗೆ ಅರ್ಥವಾಗಬೇಕು, ಅದಕ್ಕಾಗಿ ಬಹುಮಂದಿ ಸಭಿಕರಿಗೆ ಅರ್ಥವಾಗುವ ಭಾಷೆಯಲ್ಲಿ ನಿರ್ವಹಿಸಬೇಕೆಂದೂ ವಾದಿಸುತ್ತಾರೆ.
ಜಾಗತಿಕ ಮುಸ್ಲಿಮ್ ಸಂಘಟನೆಗಳು ಹಾಗೂ ಹೆಚ್ಚಿನೆಲ್ಲ ವಿದ್ವಾಂಸರು ಈ ಎರಡನೇ ಅಭಿಪ್ರಾಯವನ್ನು ಹೊಂದಿದ್ದಾರೆ. ಈ ಕುರಿತು ಜಾಗತಿಕ ಮುಸ್ಲಿಮ್ ವಿದ್ವಾಂಸರ ಹಾಗೂ ಇಮಾಮ್ಗಳ ಅಭಿಪ್ರಾಯಗಳನ್ನು ಪರಿಶೀಲಿಸೋಣ. 1975ರ ಸೆಪ್ಟೆಂಬರ್ನಲ್ಲಿ ರಾಬಿತತುಲ್ ಆಲಮಿಲ್ ಇಸ್ಲಾಮೀ (Muslim world league)ಯು ಆಶ್ರಯದಲ್ಲಿ, ಮಕ್ಕಾದಲ್ಲಿ ಜರಗಿದ ಮಸ್ಜಿದ್ ಕಾನ್ಫರೆನ್ಸ್ (ಅರೇಬಿಕ್) ನಲ್ಲಿ 80 ರಾಷ್ಟ್ರಗಳ ಉಲೆಮಾಗಳು, ಇಮಾಮರು ಮತ್ತು ಧಾರ್ಮಿಕ ನಾಯಕ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಸ್ತುತ ಸಮ್ಮೇಳನದಲ್ಲಿ ಜಗತ್ತಿನಾದ್ಯಂತವಿರುವ ಮಸೀದಿಗಳನ್ನು ಇನ್ನಷ್ಟು ಸಕ್ರಿಯಗೊಳಿಸಿ, ಅವುಗಳನ್ನು ಪ್ರವಾದಿ (ಸ)ಯವರ ಕಾಲದ ಮಸೀದಿಗಳಂತೆ ಶೈಕ್ಷಣಿಕ ಸಾಂಸ್ಕೃತಿಕ ಕೇಂದ್ರಗಳಾಗಿ ಸುಧಾರಿಸುವ ಕುರಿತು ಅನೇಕಾರು ತೀರ್ಮಾನಗಳನ್ನು ಅಂಗೀಕರಿಸಲಾಯಿತು. ಜುಮುಅಃ ಖುತ್ಬಾದ ಅರ್ಕಾನ್ (ಕಡ್ಡಾಯಕರ್ಮ)ಗಳನ್ನು ಅರಬಿಯಲ್ಲಿಯೂ, ಉಪದೇಶವನ್ನು ಸಭಿಕರಲ್ಲಿ ಬಹು ಮಂದಿ ಅರಬಿ ಭಾಷೆ ತಿಳಿಯದವರಿದ್ದರೆ, ಅವರ ಮಾತೃಭಾಷೆಯಲ್ಲಿಯೂ ನಿರ್ವಹಿಸಬೇಕೆಂದು ಸಮ್ಮೇಳನವು ಕರೆನೀಡಿತು. ಈ ಕುರಿತು ಸಮಸ್ತ ಕೇರಳ ಜಮ್ಯಿಯತುಲ್ ಉಲೆಮಾ ಕಳುಹಿಸಿದ ಪ್ರಶ್ನೆಗಳಿಗೆ ಈ ಕೆಳಗಿನಂತೆ ಉತ್ತರ ಬಂದಿತ್ತು. ಖುತ್ಬಾದ ಪೀಠಿಕೆ ಮತ್ತು ಅರ್ಕಾನ್ಗಳ ಹೊರತು ಉಳಿದ ವಿಷಯಗಳ ಉದ್ದೇಶವು ಒಳತಿನಿ ಆದೇಶ ಮತ್ತು ಕೆಡುಕಿನ ನಿಷೇಧವಾಗಿದೆ. ಅದನ್ನು ಶ್ರೋತೃಗಳ ಮನೋಭಾವವನ್ನು ಪರಿಗಣಿಸಿ ಸ್ಥಾನೀಯ ಭಾಷೆಗಳಲ್ಲಯೇ ನಿರ್ವಹಿಸಬೇಕೆಂದು ನಿರ್ದೇಶಿಸಲಾಗಿದೆಯೆಂದೂ ತಿಳಿಸಲಾಗಿತ್ತು.
ಇನ್ನು , ಭಾರತದ ಪ್ರಮುಖ ವಿದ್ವಾಂಸರಲ್ಲಿ ಸುಪ್ರಸಿದ್ಧರಾದ ಪಂಡಿತರ ಫತ್ವ ಮತ್ತು ಪ್ರಕಾಶನಗಳನ್ನು ಪರಿಶೀಲಿಸಿದರೆ, ಜುಮುಅ ಖುತ್ಬದ ಅರ್ಕಾನ್ (ಫರ್ಳ್)ಗಳ ಹೊರತು ಉಳಿದ ವಿಷಯಗಳನ್ನು ಅರಬಿ ಭಾಷೆಯಲ್ಲಿಯೇ ನಿರ್ವಹಿಸಬೇಕೆಂದು ಅವರು ಯಾರೂ ಹೇಳಿಲ್ಲವೆಂದು ವ್ಯಕ್ತವಾಗುತ್ತದೆ. ಮಾತ್ರವಲ್ಲ; ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಅದನ್ನು ನಿರ್ವಹಿಸಬೇಕೆಂದು ಸಾರಿರುವುದೂ ಕಂಡುಬರುತ್ತದೆ.
ಇತೀ, ಮುಹ್ಯುದ್ದೀನ್ ಕಾಸಿಮೀ ಚುಜಿಲಿ
ಫಾಜಿಲ್ ದೇವ್ಬಂದ್, ಖತೀಬ್ ಮಸ್ಜಿದುನ್ನೂರ್
ಇಸ್ಲಾಮನ್ನು ಅನ್ವೇಷಿಸಿ





ಅಲ್ಲಾಹ್
ನಂಬಿಕೆ




ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು





ಪ್ರವಾದಿಗಳು


ಜೀವನ ಚರಿತ್ರೆಗಳು








ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು






ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ


ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್

