ಖದೀಜಾ(ಅ) ರವರ ವಂಶಾವಳಿಯು ನಾಲ್ಕನೇ ಪಿತಾಮಹ ಕುಸೈರಲ್ಲಿ ಪ್ರವಾದಿ(ﷺ)ರೊಂದಿಗೆ ಸಂಧಿಸುತ್ತದೆ.
ಜನನ ಮತ್ತು ಬೆಳವಣಿಗೆ:
ಖದೀಜಾ(ಅ) ಮಕ್ಕಾದಲ್ಲಿ ಪ್ರವಾದಿ(ﷺ)ರವರ ಜನನಕ್ಕಿಂತ ಸುಮಾರು 14 ವರ್ಷ ಮುಂಚೆ ಜನಿಸಿದರು. ಅವರದ್ದು ಅತ್ಯಂತ ಶ್ರೀಮಂತ, ಕುಲೀನ, ಶೃದ್ಧಾವಂತ ಮತ್ತು ಪರಿಶುದ್ಧ ಕುಟುಂಬ. ಇಸ್ಲಾಮೀ ಪೂರ್ವ ಜಾಹಿಲೀ ಕಾಲದಲ್ಲೇ ಅವರು ‘ತಾಹಿರ’ (ಪರಿಶುದ್ದೆ) ಎಂದು ಹೆಸರುವಾಸಿಯಾಗಿದ್ದರು. ಅವರ ತಂದೆ ಖುವೈಲಿದ್ ಕುರೈಶರ ಮುಖಂಡರೂ, ಮಕ್ಕಾದ ಯಶಸ್ವಿ ಉದ್ಯಮಿಯೂ ಆಗಿದ್ದರು. ಖದೀಜಾ ಚಿಕ್ಕಂದಿನಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದು ಬಂದರು.
ವಿವಾಹ:
ಪ್ರವಾದಿ(ﷺ) ರನ್ನು ವಿವಾಹವಾಗುವುದಕ್ಕೆ ಮೊದಲು ಖದೀಜಾ(ರ) ಎರಡು ಬಾರಿ ವಿವಾಹಿತೆಯಾಗಿದ್ದರು. ಆಕೆಯ ಮೊದಲ ಗಂಡನ ಹೆಸರು ಅಬೂ ಹಾಲ ಬಿನ್ ಝುರಾರ ಬಿನ್ ನಬಾಶ್ ಅತೈಮೀ. ಈತನಿಂದ ಅವರಿಗೆ ಹಿಂದ್ ಮತ್ತು ಹಾಲ ಎಂಬ ಇಬ್ಬರು ಮಕ್ಕಳು ಹುಟ್ಟಿದರು. ಈ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವೇ ವರ್ಷದಲ್ಲಿ ಅಬೂ ಹಾಲ ನಿಧನರಾದರು. ನಂತರ ಖದೀಜಾ(ರ) ಅತೀಕ್ ಬಿನ್ ಆಯಿದ್ ಅಲ್-ಮಖ್ಝೂಮಿ ಎಂಬ ವ್ಯಕ್ತಿಯನ್ನು ವಿವಾಹವಾದರು. ಈತನಿಂದ ಅವರಿಗೆ ಹಿಂದ್ ಎಂಬ ಮಗು ಹುಟ್ಟಿತು. ಆದರೆ ಕಾರಣಾಂತರಗಳಿಂದ ಈ ದಾಂಪತ್ಯದಲ್ಲಿ ಬಿರುಕು ಉಂಟಾಗಿ ವಿಚ್ಛೇದನದಲ್ಲಿ ಕೊನೆಗೊಂಡಿತು. ನಂತರ ಖದೀಜಾ(ರ) ರನ್ನು ಪ್ರವಾದಿ(ﷺ) ರವರು ವಿವಾಹವಾದರು. ಆಗ ಅವರಿಗೆ 40 ವರ್ಷ ಪ್ರಾಯವಾಗಿತ್ತು.
ಯಶಸ್ವಿ ಉದ್ಯಮಿ:
ಎರಡನೇ ಗಂಡನ ವಿಚ್ಚೇದನದ ಬಳಿಕ ಖದೀಜಾ ಬೇರೆ ವಿವಾಹವಾಗಲು ಮನಸ್ಸು ಮಾಡಲಿಲ್ಲ. ಅವರು ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಮತ್ತು ತಂದೆಯಿಂದ ಉತ್ತರಾಧಿಕಾರವಾಗಿ ಪಡೆದ ಉದ್ಯಮವನ್ನು ಮುನ್ನಡೆಸುವುದರಲ್ಲಿ ಗಮನ ಕೇಂದ್ರೀಕರಿಸಿದರು. ಅವರು ಬಹಳ ಚಾಣಾಕ್ಷೆ ಮತ್ತು ಚತುರೆಯಾಗಿದ್ದರು. ಉದ್ಯಮವನ್ನು ಯಶಸ್ವಿಯಾಗಿ ನಿಭಾಯಿಸುವ ಕಲೆ ಅವರಿಗೆ ಕರಗತವಾಗಿತ್ತು. ಅವರು ತಮ್ಮ ಸರಕುಗಳ ರಫ್ತು ಮತ್ತು ಆಮದನ್ನು ನೋಡಿಕೊಳ್ಳಲು ಬಹಳ ಬುದ್ಧಿವಂತ, ವಿಶ್ವಾಸಯೋಗ್ಯ ಮತ್ತು ಶ್ರಮಜೀವಿಗಳನ್ನು ನೇಮಿಸುತ್ತಿದ್ದರು. ಮಕ್ಕಾದಿಂದ ಸರಕುಗಳನ್ನು ಒಯ್ದು ಸಿರಿಯಾ ಮುಂತಾದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದು ಮತ್ತು ಅಲ್ಲಿನ ಸರಕುಗಳನ್ನು ತಂದು ಮಕ್ಕಾದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದು ಅವರ ಕೆಲಸವಾಗಿತ್ತು. ಇದರಿಂದ ಬರುವ ಲಾಭದಲ್ಲಿ ಅರ್ಧ ಭಾಗವನ್ನು ಖದೀಜಾ(ರ) ಅವರಿಗೆ ಕೊಡುತ್ತಿದ್ದರು.
ಪ್ರವಾದಿ(ﷺ) ರ ಮೊತ್ತಮೊದಲ ಭೇಟಿ:
ಹೀಗಿರುವಾಗ ಒಮ್ಮೆ ಖದೀಜಾ(ರ) ರಿಗೆ ಪ್ರವಾದಿ(ﷺ) ರವರ ಪ್ರಾಮಾಣಿಕತೆ, ಎದೆಗಾರಿಕೆ, ನಿಷ್ಠೆ, ನಿಷ್ಕಳಂಕತೆ ಮುಂತಾದ ಉತ್ತಮ ಗುಣಗಳ ಬಗ್ಗೆ ತಿಳಿಯುತ್ತದೆ. ಆಗ ಅವರಲ್ಲಿದ್ದ ವ್ಯವಹಾರ ಚಾತುರ್ಯವು ಎಚ್ಚೆತ್ತುಕೊಂಡಿತು. ಪ್ರವಾದಿ(ﷺ) ರನ್ನು ತಮ್ಮ ಸರಕುಗಳ ಕಾರ್ಯನಿರ್ವಾಹಕರನ್ನಾಗಿ ನೇಮಿಸಲು ಅವರು ನಿರ್ಧರಿಸಿದರು. ಅವರು ಅಬೂ ತಾಲಿಬರ ಬಳಿಗೆ ದೂತರನ್ನು ಕಳುಹಿಸಿದರು. ಅಬೂ ತಾಲಿಬ್ ಬಡವರು. ಸಾಲದ್ದಕ್ಕೆ ಅನೇಕ ಮಕ್ಕಳು ಬೇರೆ. ಜೀವನ ಬಹಳ ಕಷ್ಟವಾಗಿ ಸಾಗುತ್ತಿತ್ತು. ಆದ್ದರಿಂದ ಪ್ರವಾದಿ(ﷺ) ರವರು ಈ ಕೊಡುಗೆಯನ್ನು ಸ್ವೀಕರಿಸಿ ಖದೀಜಾ(ರ) ರ ಬಳಿ ನೌಕರಿ ಮಾಡಲು ಒಪ್ಪಿಕೊಂಡರು. ಅಬೂ ತಾಲಿಬರ ಹೊರೆಯನ್ನು ಇಳಿಸುವುದು ಅವರ ಉದ್ದೇಶವಾಗಿತ್ತು.
ಖದೀಜಾ(ರ) ಪ್ರವಾದಿ(ﷺ) ರನ್ನು ಸರಕುಗಳೊಂದಿಗೆ ವಿದೇಶಕ್ಕೆ ಕಳುಹಿಸಿದರು. ಜೊತೆಗೆ ಮೈಸರ ಎಂಬ ತನ್ನ ನಿಷ್ಠಾವಂತ ಗುಲಾಮನನ್ನೂ ಕಳುಹಿಸಿದರು. ಈತನ ಕೆಲಸ ಪ್ರವಾದಿ(ﷺ) ರವರ ಸೇವೆ ಮಾಡುವುದು ಮತ್ತು ಅವರನ್ನು ಹತ್ತಿರದಿಂದ ಗಮನಿಸುವುದು. ಈ ವ್ಯಾಪಾರ ಪ್ರವಾಸವು ಬಹಳ ಯಶಸ್ವಿ ಮತ್ತು ಲಾಭದಾಯಕವಾಗಿತ್ತು. ಸರಕುಗಳೆಲ್ಲವೂ ಅತ್ಯುತ್ತಮ ಬೆಲೆಗೆ ಮಾರಾಟವಾದವು. ಪ್ರವಾದಿ(ﷺ) ರವರ ಪ್ರಾಮಾಣಿಕತೆ, ಸತ್ಯಸಂಧತೆ, ಗುಣನಡತೆ, ನಿಷ್ಠೆ ಮತ್ತು ವ್ಯವಹಾರ ಚಾತುರ್ಯ ಕಂಡು ಮೈಸರ ದಂಗಾದರು. ಅವರು ಇಂತಹ ಉದಾತ್ತ ಗುಣಗಳನ್ನು ಹೊಂದಿರುವ ಅದ್ಭುತ ವ್ಯಕ್ತಿಯನ್ನು ನೋಡಿರಲೇ ಇಲ್ಲ.
ಪ್ರವಾದಿ(ﷺ) ರೊಂದಿಗೆ ವಿವಾಹ:
ಮಕ್ಕಾ ತಲುಪಿದ ತಕ್ಷಣ ಮೈಸರ ಖದೀಜಾ(ರ) ರವರ ಬಳಿಗೆ ಓಡಿ ನಡೆದ ಸಂಗತಿಯನ್ನೆಲ್ಲಾ ವಿವರಿಸಿದರು. ದಾರಿ ಮಧ್ಯೆ ಪ್ರವಾದಿ(ﷺ) ರವರು ಒಂದು ಮರದ ನೆರಳಲ್ಲಿ ವಿಶ್ರಮಿಸಿದಾಗ ಅಲ್ಲಿಗೆ ಬಂದ ‘ನಸ್ತೂರ್’ ಎಂಬ ಯಹೂದ ಪುರೋಹಿತ ಪ್ರವಾದಿಗಳಲ್ಲದೆ ಇನ್ನಾರೂ ಈ ಮರದ ಕೆಳಗೆ ವಿಶ್ರಮಿಸುವುದಿಲ್ಲ, ಈ ವ್ಯಕ್ತಿ ಪ್ರವಾದಿಯಾಗಿರಬಹುದು ಎಂದು ಹೇಳಿದ್ದನ್ನೂ ವಿವರಿಸಿದರು. ಮೋಡಗಳು ಪ್ರವಾದಿ(ﷺ) ರಿಗೆ ನೆರಳು ನೀಡಿದ ಸಂಗತಿಯನ್ನೂ ಸುಂದರವಾಗಿ ಬಣ್ಣಿಸಿದರು. ಮೈಸರನ ಮಾತು ಕೇಳಿ ಖದೀಜಾ(ಅ) ಬಹಳ ಪ್ರಭಾವಿತರಾದರು. ಅವರಿಗೆ ಪ್ರವಾದಿ(ﷺ) ರವರಲ್ಲಿ ಪ್ರೀತಿ ಅಂಕುರಿಸಿತು. ಹೃದಯದಲ್ಲಿ ಪ್ರವಾದಿ(ﷺ) ರನ್ನು ವಿವಾಹವಾಗುವ ಆಸೆ ಮೂಡಿತು. ಆದರೆ ವಿವಾಹ ಪ್ರಸ್ತಾಪವನ್ನು ಮುಂದಿಡುವುದು ಹೇಗೆ? ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಕೊನೆಗೆ ಅವರು ತನ್ನ ಬಾಲ್ಯ ಗೆಳತಿ ನಫೀಸಳಿಗೆ ವಿಷಯ ತಿಳಿಸಿದರು. ನಫೀಸ ಖದೀಜಾ(ರ) ರ ಪರವಾಗಿ ಪ್ರವಾದಿ(ﷺ) ರವರ ಮುಂದೆ ವಿವಾಹ ಪ್ರಸ್ತಾಪವನ್ನಿಟ್ಟರು. ಪ್ರವಾದಿ(ﷺ) ರವರು ಒಪ್ಪಿಕೊಂಡರು. ನಂತರ ಅವರು ಸಂಗತಿಯನ್ನು ಚಿಕ್ಕಪ್ಪ ಅಬೂತಾಲಿಬ್ ಮತ್ತು ಹಂಝರಿಗೆ ತಿಳಿಸಿದರು. ಅವರಿಬ್ಬರು ಖದೀಜಾ(ಅ) ರವರ ಚಿಕ್ಕಪ್ಪ ಅಮ್ರ್ ಬಿನ್ ಅಸದ್‍ರನ್ನು ಭೇಟಿಯಾಗಿ ವಿವಾಹ ನಿಶ್ಚಯ ಮಾಡಿಕೊಂಡರು. ಅವರಿಬ್ಬರ ವಿವಾಹ ನೆರವೇರಿತು.
ದಾಂಪತ್ಯ ಮತ್ತು ಮಕ್ಕಳು:
ಖದೀಜಾ(ರ) ಮತ್ತು ಪ್ರವಾದಿ(ﷺ) ರವರ ನಡುವಿನ ದಾಂಪತ್ಯವು ಅತ್ಯಂತ ಯಶಸ್ವಿ ಮತ್ತು ಮಾದರೀಯೋಗ್ಯವಾಗಿತ್ತು. ಈ ದಾಂಪತ್ಯದಲ್ಲಿ ಅವರಿಗೆ ಆರು ಮಕ್ಕಳು ಹುಟ್ಟಿದರು. ಝೈನಬ್, ರುಕಯ್ಯ, ಉಮ್ಮು ಕುಲ್ಸೂಮ್, ಕಾಸಿಮ್, ಫಾತಿಮ ಮತ್ತು ಅಬ್ದುಲ್ಲಾ. ಕಾಸಿಮ್ ಎಳೆಯ ಪ್ರಾಯದಲ್ಲೇ ಅಸುನೀಗಿದರು. ಆಗ ಇನ್ನೂ ಅಬ್ದುಲ್ಲಾ ಹುಟ್ಟಿರಲಿಲ್ಲ. ಅಬ್ದುಲ್ಲಾ ಹುಟ್ಟಿದ್ದು ಪ್ರವಾದಿತ್ವದ ಬಳಿಕ. ಅಬೂ ತಾಲಿಬರ ಮಕ್ಕಳಲ್ಲಿ ಒಬ್ಬರಾದ ಅಲೀ ಬಿನ್ ಅಬೂತಾಲಿಬ್‌ರನ್ನು ಪ್ರವಾದಿ(ﷺ) ರವರು ಸಾಕತೊಡಗಿದರು. ಅಬೂ ತಾಲಿಬರ ಹೊರೆಯನ್ನು ಇಳಿಸುವುದು ಅವರ ಉದ್ದೇಶವಾಗಿತ್ತು. ಖದೀಜಾ(ರ) ರವರ ಸಹೋದರ ಅವ್ವಾಮ್ ನಿಧನರಾದಾಗ ಅವರ ಮಗ ಝುಬೈರ್(ರ) ಎರಡೂವರೆ ವರ್ಷದ ಮಗುವಾಗಿದ್ದರು. ಆ ಮಗು ಖದೀಜಾ(ಅ) ರವರ ತನ್ನ ಮನೆಯಲ್ಲೇ ಬೆಳೆಯತೊಡಗಿತು. ಝಬೈರ್(ರ) ರವರ ತಾಯಿ ಸಫಿಯ್ಯ(ರ) ಅಬೂ ತಾಲಿಬರ ಮಗಳು. ಈ ಮಧ್ಯೆ ಖದೀಜಾ(ರ) ರವರ ಸಹೋದರ ಪುತ್ರ ಹಕೀಮ್ ಸಿರಿಯಾದಿಂದ ಮರಳುವಾಗ ಅನೇಕ ಗುಲಾಮರನ್ನು ಖರೀದಿಸಿ ತಂದಿದ್ದರು. ಅವರಲ್ಲಿ ಒಬ್ಬರನ್ನು ಆರಿಸಿಕೊಳ್ಳುವಂತೆ ಅವರು ಅತ್ತೆ ಖದೀಜಾರನ್ನು ವಿನಂತಿಸಿದರು. ಖದೀಜಾ ಗುಲಾಮರಲ್ಲಿ ಒಬ್ಬರಾದ ಝೈದ್ ಬಿನ್ ಹಾರಿಸ(ರ) ರನ್ನು ಆರಿಸಿದರು. ಗಂಡು ಮಕ್ಕಳಿಲ್ಲದ ಕಾರಣ ಪ್ರವಾದಿ(ﷺ) ರವರು ಝೈದ್(ರ) ರನ್ನು ದತ್ತುಪುತ್ರನಾಗಿ ಸ್ವೀಕರಿಸಲು ನಿರ್ಧರಿಸಿದರು. ಖದೀಜಾ(ರ) ರಿಗೆ ವಿಷಯ ತಿಳಿಸಿದಾಗ ಅವರು ಝೈದ್(ರ) ರನ್ನು ಪ್ರವಾದಿ(ﷺ) ರಿಗೆ ಒಪ್ಪಿಸಿದರು. ಪ್ರವಾದಿ(ﷺ) ರವರು ಝೈದ್(ರ) ರನ್ನು ಸ್ವತಂತ್ರಗೊಳಿಸಿ ದತ್ತುಪುತ್ರನಾಗಿ ಮಾಡಿಕೊಂಡರು.
ಪ್ರವಾದಿತ್ವ:
ಕಾಲಕ್ರಮೇಣ ಪ್ರವಾದಿ(ﷺ) ರಿಗೆ ಏಕಾಂತವಾಸ ಇಷ್ಟವಾಗತೊಡಗಿತು. ಅವರು ಮನೆಯ ಸಮೀಪದ ಬೆಟ್ಟದಲ್ಲಿರುವ ‘ಹಿರಾ’ ಎಂಬ ಗುಹೆಯಲ್ಲಿ ಏಕಾಂತವಾಗಿ ವಾಸ ಮಾಡತೊಡಗಿದರು. ಗಂಡನಿಗೆ ಬೇಕಾದ ಆಹಾರ ಮುಂತಾದ ಎಲ್ಲಾ ವ್ಯವಸ್ಥೆಗಳನ್ನು ಖದೀಜಾ(ರ) ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಕೆಲವೊಮ್ಮೆ ಅವರು ಅನೇಕ ದಿನಗಳ ಕಾಲ ಗುಹೆಯಲ್ಲೇ ತಂಗಿರುತ್ತಿದ್ದರು. ಆಗ ಖದೀಜಾ(ಅ) ಸ್ವತಃ ಗುಹೆಗೆ ತೆರಳಿ ಗಂಡನ ಇಷ್ಟಾನಿಷ್ಟಗಳನ್ನು ವಿಚಾರಿಸಿ ಅವರ ಸೇವೆ ಮಾಡುತ್ತಿದ್ದರು.
ಒಮ್ಮೆ ಗುಹೆಯಲ್ಲಿ ಇದ್ದಕ್ಕಿದ್ದಂತೆ ದೇವದೂತ ಜಿಬ್ರಿಲ್(ಅ) ಪ್ರವಾದಿ(ﷺ) ರವರ ಮುಂದೆ ಪ್ರತ್ಯಕ್ಷರಾಗಿ ಪವಿತ್ರ ಕುರ್‌ಆನಿನ ವಚನಗಳನ್ನು ಓದಿಕೊಟ್ಟರು. ಈ ಘಟನೆಯಿಂದ ಪ್ರವಾದಿ(ﷺ) ರವರು ಎಷ್ಟು ಗಾಬರಿಯಾಗಿದ್ದರೆಂದರೆ ಅವರು ಗುಹೆಯಿಂದ ನೇರವಾಗಿ ಖದೀಜಾ(ಅ) ರ ಬಳಿಗೆ ಓಡಿದರು. “ನನಗೆ ಹೊದಿಸಿರಿ ನನಗೆ ಹೊದಿಸಿರಿ” ಎಂದು ಕೂಗುತ್ತಿದ್ದರು. ಖದೀಜಾ(ಅ) ನಡುಗುತ್ತಿದ್ದ ಗಂಡನನ್ನು ಹೊದಿಕೆಯಿಂದ ಹೊದ್ದು ಮಲಗಿಸಿ ಸಾಂತ್ವನ ಪಡಿಸಿದರು. ನಂತರ ಅವರ ಭಯ ನಿವಾರಣೆಯಾದಾಗ ಸಂಗತಿಯೇನೆಂದು ವಿಚಾರಿಸಿದರು. ಪ್ರವಾದಿ) ರವರು ನಡೆದ ಘಟನೆಯನ್ನು ವಿವರಿಸಿದಾಗ ಖದೀಜಾ ಗಾಬರಿಯಾಗಲಿಲ್ಲ, ಎದೆಗುಂದಲಿಲ್ಲ. ಅವರು ಗಂಡನನ್ನು ಸಮಾಧಾನಪಡಿಸುತ್ತಾ ಹೇಳಿದರು- “ಇಲ್ಲ, ಖಂಡಿತ ಇಲ್ಲ. ಅಲ್ಲಾಹನ ಮೇಲಾಣೆ! ಅಲ್ಲಾಹು ಖಂಡಿತ ನಿಮ್ಮನ್ನು ನಿಂದಿಸಲಾರ. ನೀವು ಕುಟುಂಬ ಸಂಬಂಧ ಜೋಡಿಸುತ್ತೀರಿ, ಜನರ ಹೊರೆಗಳನ್ನು ಹೊರುತ್ತೀರಿ, ಇತರರ ಕಷ್ಟಗಳಿಗೆ ಸ್ಪಂದಿಸುತ್ತೀರಿ, ಅತಿಥಿಗಳನ್ನು ಗೌರವಿಸುತ್ತೀರಿ ಮತ್ತು ವಿಕೋಪಗಳಿಗೆ ತುತ್ತಾದವರ ನೆರವಿಗೆ ಧಾವಿಸುತ್ತೀರಿ.” ನಂತರ ಖದೀಜಾ(ಅ) ಗಂಡನನ್ನು ತನ್ನ ಸೋದರ ಸಂಬಂಧಿ ವರಕ ಬಿನ್ ನೌಫಲ್‌ರ ಬಳಿಗೆ ಕರೆದೊಯ್ದರು. ನಡೆದ ಸಂಗತಿಯನ್ನು ತಿಳಿದಾಗ, ಅದು ಮೂಸಾ(ಅ) ರವರ ಬಳಿಗೆ ಬಂದ ಅದೇ ದೇವದೂತರು ಎಂದು ವರಕ ಹೇಳಿದರು. ಪ್ರವಾದಿ(ಅ) ರವರು ಪ್ರವಾದಿಯಾಗುತ್ತಾರೆ ಮತ್ತು ಮಕ್ಕಾ ನಿವಾಸಿಗಳು ಅವರನ್ನು ಊರಿನಿಂದ ಹೊರಗಟ್ಟುತ್ತಾರೆ ಎಂದರು.
ಮೊತ್ತಮೊದಲ ವಿಶ್ವಾಸಿ:
ನಂತರ ಪ್ರವಾದಿ(ﷺ) ರಿಗೆ ಕುರ್‌ಆನ್ ವಚನಗಳು ಅವತೀರ್ಣವಾಗತೊಡಗಿದವು. ಅವರು ಆ ಸಂದೇಶವನ್ನು ತಮ್ಮ ಮಡದಿಯ ಮುಂದಿಟ್ಟರು. ಖದೀಜಾ(ರ) ಒಂದು ಕ್ಷಣ ಕೂಡ ಚಿಂತಿಸದೆ ಆಹ್ವಾನವನ್ನು ಸ್ವೀಕರಿಸಿ ಸತ್ಯಸಾಕ್ಯವನ್ನು ಉಚ್ಚರಿಸಿದರು. ಹೀಗೆ ಅವರು ಮೊತ್ತಮೊದಲ ವಿಶ್ವಾಸಿಯಾಗುವ ಭಾಗ್ಯವನ್ನು ಪಡೆದರು.
ಧೈರ್ಯ, ಧೈರ್ಯ ಮತ್ತು ಸಹನೆ:
ಇಷ್ಟರ ತನಕ ಗಂಡನ ಸೇವೆ ಮಾಡುತ್ತಾ ಸುಖವಾಗಿದ್ದ ಖದೀಜಾ(ಅ) ಈಗ ಹೊಸ ಕರ್ತವ್ಯವನ್ನು ನಿಭಾಯಿಸಬೇಕಾಗಿತ್ತು. ಅವರು ಪ್ರವಾದಿ(ﷺ) ರೊಡನೆ ಸಂದೇಶ ಪ್ರಚಾರದಲ್ಲಿ ಭಾಗಿಯಾದರು. ಪ್ರತಿಕ್ಷಣವೂ ಗಂಡನಿಗೆ ಆಸರೆಯಾಗಿ ನಿಂತರು. ಕುರೈಶರ ಅಣಕು ಮಾತು, ಕೊಂಕು ನುಡಿ, ಕೀಟಲೆಗಳಿಂದ ನೊಂದು ಕಣ್ಣೀರಿಡುತಾ ಮನೆಗೆ ಬರುತ್ತಿದ್ದ ಗಂಡನನ್ನು ಸಮಾಧಾನಪಡಿಸುತ್ತಿದ್ದರು. ಅವರಲ್ಲಿ ಧೈರ್ಯ ತುಂಬುತ್ತಿದ್ದರು. ಅವರ ಮನಸ್ಸಿಲ್ಲಿದ್ದ ಭಯವನ್ನು ನಿವಾರಿಸುತ್ತಿದ್ದರು. ಅವರು ಸತ್ಯ ಮಾರ್ಗದಲ್ಲಿದ್ದಾರೆಂದು ಪದೇ ಪದೇ ಹೇಳುತ್ತಾ ಅವರನ್ನು ಹುರಿದುಂಬಿಸುತ್ತಿದ್ದರು.
ಖದೀಜಾ(ರ) ರವರ ಇಬ್ಬರು ಹೆಣ್ಣು ಮಕ್ಕಳು ರುಕಯ್ಯ ಮತ್ತು ಉಮ್ಮು ಕುಲ್ಸೂಮ್‌ರನ್ನು ಪ್ರವಾದಿ(ﷺ) ರವರ ಚಿಕ್ಕಪ್ಪ ಅಬೂ ಲಹಬನ ಇಬ್ಬರು ಮಕ್ಕಳಿಗೆ ವಿವಾಹ ಮಾಡಿಕೊಡಲಾಗಿತ್ತು. ಪ್ರವಾದಿತ್ವದ ನಂತರ ಅಬೂಲಹಬ್ ಪ್ರವಾದಿ(ﷺ) ರವರ ಬದ್ಧ ಶತ್ರುವಾಗಿ ಅವರ ಇಬ್ಬರು ಸೊಸೆಯರನ್ನು ವಿಚ್ಛೇದನ ಮಾಡಿಸಿ ಪ್ರವಾದಿ(ﷺ) ರವರ ಮನೆಯಲ್ಲಿ ಬಿಟ್ಟರು. ಖದೀಜಾ(ರ) ರಿಗೆ ಆಘಾತವಾದರೂ ಧೈರ್ಯಗುಂದಲಿಲ್ಲ. ನಂತರ ರುಕಯ್ಯರನ್ನು ಉಸ್ಮಾನ್ ಬಿನ್ ಅಫ್ಫಾನ್(ರ) ವಿವಾಹವಾದರು. ಮಗಳನ್ನು ಉಸ್ಮಾನ್(ﷺ) ರೊಂದಿಗೆ ದೂರದ ಇಥಿಯೋಪಿಯಾ ಎಂಬ ಅಪರಿಚಿತ ಊರಿಗೆ ಕಳುಹಿಸುವಾಗಲೂ ಖದೀಜಾ(ರ) ವಿಚಲಿತರಾಗಲಿಲ್ಲ. ಅಲ್ಲಾಹನಿಗಾಗಿ ಅವರು ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡರು.
ಪ್ರವಾದಿ(ﷺ) ರವರ ಸಂದೇಶ ಪ್ರಚಾರವು ಕಾವು ಪಡೆಯುತ್ತಿದ್ದಂತೆ ಅನೇಕ ಮಂದಿ ಇಸ್ಲಾಂ ಸ್ವೀಕರಿಸಿದರು. ಹೊಸದಾಗಿ ಮುಸಲ್ಮಾನರಾದವರಿಗೆ ಕುರೈಶರು ನಾನಾ ರೀತಿಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದರು. ಅನೇಕ ಬಾರಿ ಅವರು ಪ್ರವಾದಿ(ﷺ) ರವರ ಮೇಲೂ ಕೈ ಮಾಡಿದ್ದರು. ಒಮ್ಮೆ ಪ್ರವಾದಿ(ﷺ) ರವರು ಕಅಬಾಲಯದಲ್ಲಿ ನಮಾಝ್ ಮಾಡುತ್ತಿದ್ದಾಗ ಅವರು ಕೊಳೆತ ಒಂಟೆಯ ಕರುಳನ್ನು ತಂದು ಅವರ ಕುತ್ತಿಗೆಯ ಮೇಲೆ ಹಾಕಿದ್ದರು. ಅದರ ಭಾರದಿಂದಾಗಿ ಪ್ರವಾದಿ(ﷺ) ರಿಗೆ ತಲೆಯೆತ್ತಲಾಗಲಿಲ್ಲ. ಆಗ ಮಗಳು ಫಾತಿಮ ಬಂದು ಸಹಾಯ ಮಾಡಿದರು. ಇಂತಹ ಘಟನೆಗಳು ದಿನನಿತ್ಯ ನಡೆಯುತ್ತಿದ್ದವು. ಪ್ರವಾದಿ(ﷺ) ರವರ ಜೀವ ಪ್ರತಿದಿನವೂ ಅಪಾಯದಲ್ಲಿತ್ತು. ಎಲ್ಲವೂ ಖದೀಜಾರ ಕಿವಿಗೆ ಬೀಳುತ್ತಿತ್ತು. ಆದರೂ ಅವರು ಗಂಡನಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದರು.
ಕುರೈಶರ ಬಹಿಷ್ಕಾರ:
ದಿನಗಳೆದಂತೆ ಕುರೈಶರ ಹಿಂಸೆ ಅತಿಯಾಗುತ್ತಿತ್ತು. ಬನೂ ಹಾಶಿಮ್ ಮತ್ತು ಬನೂ ಮುತ್ತಲಿಬ್ ಕುಟುಂಬಗಳು ಪ್ರವಾದಿ(ﷺ) ರವರ ಬೆಂಬಲಕ್ಕೆ ನಿಂತಿದ್ದವು. ಆದ್ದರಿಂದ ಆ ಎರಡು ಕುಟುಂಬಗಳಿಗೆ ಬಹಿಷ್ಕಾರ ಹಾಕಲು ಕುರೈಶರು ನಿರ್ಧರಿಸಿದರು. ಈ ಎರಡು ಕುಟುಂಬಗಳು ಪ್ರವಾದಿ(ﷺ) ರನ್ನು ತಮ್ಮ ವಶಕ್ಕೆ ಒಪ್ಪಿಸುವ ತನಕ ಅವರೊಂದಿಗೆ ವಿವಾಹ ಮಾಡಿಕೊಳ್ಳಬಾರದು, ಅವರಿಂದ ಏನನ್ನೂ ಖರೀದಿಸಬಾರದು, ಏನನ್ನೂ ಮಾರಾಟ ಮಾಡಬಾರದು, ಅವರೊಂದಿಗೆ ಮಾತನಾಡಬಾರದು, ಅವರನ್ನು ನೋಡಬಾರದು ಎಂದು ಘೋಷಣೆಯನ್ನು ಬರೆದು ಕಅಬಾಲಯದಲ್ಲಿ ತೂಗಿ ಹಾಕಲಾಯಿತು. ಬಹಿಷ್ಕಾರ ಜಾರಿಗೆ ಬಂತು. ಬನೂ ಅಸದ್ ಕುಟುಂಬದವರಾದ ಖದೀಜಾ(ರ) ಆ ಕುಟುಂಬವನ್ನು ತೊರೆದು ಪ್ರವಾದಿ(ﷺ) ರವರ ಬನೂ ಹಾಶಿಮ್ ಕುಟುಂಬವನ್ನು ಸೇರಿಕೊಂಡರು. ಮೂರು ವರ್ಷಗಳ ಕಾಲ ಪ್ರವಾದಿ(ﷺ) ರೊಂದಿಗೆ ಶಿಅಬ್ ಅಬೂ ತಾಲಿಬ್ ಕಣಿವೆಯಲ್ಲಿ ವಾಸ ಮಾಡಿದರು. ಅಲ್ಲಿ ತಿನ್ನಲು ಆಹಾರವಿಲ್ಲದೆ ಮರದ ಎಲೆಗಳನ್ನು ಮತ್ತು ಗಿಡಗಂಟಿಗಳನ್ನು ತಿಂದು ಹಸಿವು ನೀಗಿಸಿಕೊಂಡರು. ಹೆಚ್ಚಿನ ಸಂದರ್ಭಗಳಲ್ಲೂ ಅವರು ಉಪವಾಸವೇ ಇರುತ್ತಿದ್ದರು.
ಮರಣ:
ಶಿಅಬ್ ಅಬೂ ತಾಲಿಬ್ ಕಣಿವೆಯಿಂದ ಮನೆಗೆ ಹಿಂದಿರುಗಿದ ಬಳಿಕ ಅಬೂ ತಾಲಿಬ್ ಕಾಯಿಲೆ ಬಿದ್ದು ನಿಧನರಾದರು. ಅವರು ನಿಧನರಾದ ಸುದ್ದಿಯನ್ನು ಅರಗಿಸಿಕೊಳ್ಳುವುದಕ್ಕೆ ಮೊದಲೇ ಪ್ರವಾದಿ(ﷺ) ರಿಗೆ ಇನ್ನೊಂದು ಆಘಾತ ಕಾದಿತ್ತು. ಅದು ತನ್ನ ನೆಚ್ಚಿನ ಮಡದಿಯ ಮರಣ. ಹಿಜ್ರಕ್ಕೆ ಮೂರು ವರ್ಷ ಮೊದಲು ರಮದಾನ್ ತಿಂಗಳಲ್ಲಿ ಖದೀಜಾ(ರ) ಇಹಲೋಕಕ್ಕೆ ವಿದಾಯ ಹೇಳಿದರು. ಇದರಿಂದ ಪ್ರವಾದಿ(ﷺ) ರವರು ಎಷ್ಟು ನೊಂದುಕೊಂಡರೆಂದರೆ ಅವರಿಗೆ ಆ ಆಘಾತದಿಂದ ಹೊರಬರಲು ಕೆಲವು ತಿಂಗಳುಗಳೇ ಹಿಡಿದಿತ್ತು. ಇತಿಹಾಸಕಾರರು ಈ ವರ್ಷವನ್ನು ‘ದುಃಖದ ವರ್ಷ’ ಎಂದು ದಾಖಲಿಸಿದ್ದಾರೆ.
ಅಕ್ಕರೆಯ ಮಡದಿ:
ಪ್ರವಾದಿ(ﷺ) ರವರು ಖದೀಜಾ(ಅ)ರನ್ನು ಎಷ್ಟು ಪ್ರೀತಿಸುತ್ತಿದ್ದರೆಂದರೆ ತಮ್ಮ ಮರಣದವರೆಗೂ ಅವರನ್ನು ನೆನಪಿಸಿಕೊಳ್ಳುತ್ತಿದ್ದರು. ಖದೀಜಾ(ರ) ಗಿಂತಲೂ ಸುಂದರಿ ಮತ್ತು ಎಳೆಯ ಪ್ರಾಯದ ಆಯಿಶ(ಅ) ರನ್ನು ವಿವಾಹವಾದ ಬಳಿಕವೂ ಅವರು ಖದೀಜಾ(ಅ) ರನ್ನು ಮರೆಯಲಿಲ್ಲ. ಅವರು ತಮ್ಮ ಮನೆಯಲ್ಲಿ ಮಾಂಸದ ಅಡುಗೆ ಮಾಡುವಾಗಲೆಲ್ಲಾ ಖದೀಜಾ(ರ) ರ ಸವಿನೆನಪಿಗಾಗಿ ಅವರ ಗೆಳತಿಯರಿಗೆ ಕಳುಹಿಸಿಕೊಡುತ್ತಿದ್ದರು. ಬದ್ರ್ ಯುದ್ಧದಲ್ಲಿ ಸೆರೆ ಸಿಕ್ಕ ತನ್ನ ಗಂಡನನ್ನು ಬಿಡಿಸಿಕೊಳ್ಳಲು ಮಗಳು ಝೈನಬ್(ರ) ಪರಿಹಾರವಾಗಿ ಕಳುಹಿಸಿಕೊಟ್ಟ ಸರವನ್ನು ಕಂಡಾಗ ಪ್ರವಾದಿ(ﷺ) ರವರ ಕಣ್ಣಿನಿಂದ ಅವರಿಗೆ ಅರಿವಿಲ್ಲದೆಯೇ ಕಣ್ಣೀರು ಹರಿಯಿತು. ಅದು ಖದೀಜಾ(ಅ) ರ ಸರವಾಗಿತ್ತು. ತಮ್ಮ ಅಚ್ಚುಮೆಚ್ಚಿನ ಮಡದಿ ಆಯಿಶ (ರ) ರಿಗೆ ಇಷ್ಟವಿಲ್ಲದಿದ್ದರೂ ಸಹ ಅವರು ಆಯಿಶ(ಅ) ರ ಮುಂದೆ ಖದೀಜಾರನ್ನು ಹಾಡಿ ಹೊಗಳುತ್ತಿದ್ದರು. ಅವರು ಹೇಳುತ್ತಿದ್ದರು- “ಯಾರೂ ನನಗೆ ಸಹಾಯ ಮಾಡಲು ಮುಂದೆ ಬರದಾಗ ಖದೀಜಾ ನನಗೆ ಸಹಾಯ ಮಾಡಿದಳು. ಅವಳು ನನಗೆ ಸಾಂತ್ವನ ಹೇಳುತ್ತಿದ್ದಳು. ನನ್ನಲ್ಲಿ ಧೈರ್ಯ ತುಂಬುತ್ತಿದ್ದಳು. ಅವಳ ಸಂಪತ್ತನ್ನು ನನಗೆ ನೆರವಾದಂತೆ ಇನ್ನಾರ ಸಂಪತ್ತು ನನಗೆ ನೆರವಾಗಲಿಲ್ಲ. ಅಲ್ಲಾಹು ನನಗೆ ಅವಳ ಮೂಲಕವಲ್ಲದೆ ಮಕ್ಕಳನ್ನು ಕರುಣಿಸಿಲ್ಲ.”