ಉಸ್ಮಾನ್(ರ)ರವರ ವಂಶಾವಳಿಯು ನಾಲ್ಕನೇ ಪಿತಾಮಹ ಅಬ್ದು ಮನಾಫ್‍ರಲ್ಲಿ ಪ್ರವಾದಿ(ಸ)ರೊಂದಿಗೆ ಸಂಧಿಸುತ್ತದೆ.
o ಜನನ ಮತ್ತು ಬೆಳವಣಿಗೆ:
ಉಸ್ಮಾನ್(ರ) ಆನೆ ಕಲಹದ ಆರನೇ ವರ್ಷದಲ್ಲಿ (ಕ್ರಿಶ 576) ತಾಇಫ್‌ನಲ್ಲಿ (ಮಕ್ಕಾದಲ್ಲಿ ಎಂದು ಹೇಳಲಾಗುತ್ತದೆ) ಹುಟ್ಟಿದರು. ಇವರ ವಂಶದವರು ಕುರೈಶಿ ಮುಖಂಡರಾಗಿದ್ದರು. ಜಾಹಿಲೀಕಾಲದಲ್ಲಿ ಉಸ್ಮಾನ್(ರ) ಶ್ರೀಮಂತರೂ ಗೌರವಾನ್ವಿತರೂ ಆಗಿದ್ದರು. ಅವರು ಅತಿ ಬುದ್ಧಿವಂತರಾಗಿದ್ದರು ಮತ್ತು ಕುರೈಶರಿಗೆ ಅತಿಪ್ರಿಯ ವ್ಯಕ್ತಿಯಾಗಿದ್ದರು. ಅವರು ಜಾಹಿಲೀ ಕಾಲದಲ್ಲೂ ಯಾವುದೇ ವಿಗ್ರಹಕ್ಕೆ ತಲೆಬಾಗಿದವರಲ್ಲ, ಮದ್ಯ ಸೇವಿಸಿದವರಲ್ಲ. ಅವರು ಬಹಳ ಸೌಮ್ಯ ಮೃದು ಸ್ವಭಾವದ ವ್ಯಕ್ತಿಯಾಗಿದ್ದರು.
o ಇಸ್ಲಾಮ್ ಸ್ವೀಕಾರ:
ಉಸ್ಮಾನ್(ರ)ರಿಗೆ 34 ವರ್ಷ ಪ್ರಾಯವಾದಾಗ, ಒಂದಿನ ಅಬೂಬಕರ್(ರ) ಅವರನ್ನು ಇಸ್ಲಾಮಿಗೆ ಆಮಂತ್ರಿಸಿದರು. ಅಬೂಬಕರ್(ರ) ಹೇಳಿದರು: “ಓ ಉಸ್ಮಾನ್! ನಿಮಗೆ ದುರದೃಷ್ಟ ಕಾದಿದೆ! ನೀವೊಬ್ಬ ಬುದ್ಧಿವಂತ ದೃಢನಿಶ್ಚಯದ ವ್ಯಕ್ತಿ. ಸತ್ಯವೇನೆಂದು ನಿಮಗೆ ಸ್ಪಷ್ಟವಾಗಿ ತಿಳಿದಿದೆ. ನಿಮ್ಮ ಜನರು ಆರಾಧಿಸುತ್ತಿರುವ ಈ ವಿಗ್ರಹಗಳು ಯಾವುದೇ ಉಪಕಾರ ಅಥವಾ ಉಪದ್ರವ ಮಾಡದ ಮೂಕ ಕಲ್ಲುಗಳಾಗಿವೆಯೆಂದು ನಿಮಗೆ ಗೊತ್ತಿದೆ.” ಉಸ್ಮಾನ್(ರ) ಉತ್ತರಿಸಿದರು: “ಹೌದು! ತಾವು ಹೇಳುವುದು ಸರಿ.”
ಅಬೂಬಕರ್(ರ) ಮುಂದುವರಿಸಿದರು: “ಅಲ್ಲಾಹು ಮುಹಮ್ಮದ್(ಸ)ರನ್ನು ಪ್ರವಾದಿಯಾಗಿ ಸಂಪೂರ್ಣ ಮನುಕುಲಕ್ಕೆ ಕಳುಹಿಸಿದ್ದಾನೆ. ಅವರ ಮಾತಿಗೆ ಕಿವಿಗೊಡಬಾರದೇ?” ಅದೇ ಸಂದರ್ಭದಲ್ಲಿ ಪ್ರವಾದಿ(ಸ) ಅಲೀ(ರ)ರೊಂದಿಗೆ ಅಲ್ಲಿಗೆ ಬಂದರು. ಅಬೂಬಕರ್(ರ) ವಿಷಯ ತಿಳಿಸಿದಾಗ ಪ್ರವಾದಿ(ಸ) ಉಸ್ಮಾನ್(ರ)ರೊಂದಿಗೆ ಹೇಳಿದರು: “ಓ ಉಸ್ಮಾನ್! ಅಲ್ಲಾಹನ ಕರೆಗೆ ಉತ್ತರ ನೀಡಿರಿ. ನಾನು ಸಂಪೂರ್ಣ ಮನುಕುಲಕ್ಕೆ ಬಂದ ಅವನ ಸಂದೇಶವಾಹಕನಾಗಿದ್ದೇನೆ.” ಉಸ್ಮಾನ್(ರ) ಹೇಳುತ್ತಾರೆ: “ಈ ಮಾತುಗಳನ್ನು ಕೇಳಿದಾಗ ಶಹಾದ ಉಚ್ಛರಿಸುವುದಲ್ಲದೆ ನಾನು ಬೇರೇನನ್ನೂ ಮಾತನಾಡುವಂತಿರಲಿಲ್ಲ.”
o ವಲಸೆ:
ಶತ್ರುಗಳಿಂದ ಕಿರುಕುಳ ಅನುಭವಿಸಿದ ಸಹಾಬಿಗಳಲ್ಲಿ ಉಸ್ಮಾನ್(ರ) ಕೂಡ ಒಬ್ಬರಾಗಿದ್ದರು. ಅವರ ತಂದೆಯ ಸಹೋದರ ಹಕಮ್ ಬಿನ್ ಅಬುಲ್ ಆಸ್ ಅವರನ್ನು ಕಟ್ಟಿ ಹಾಕಿ ನಿರಂತರ ಥಳಿಸುತ್ತಿದ್ದರು. ಶತ್ರುಗಳ ಕಿರುಕುಳ ಮಿತಿಮೀರಿದಾಗ ಅಬೀಸೀನಿಯಾಗೆ ವಲಸೆ ಹೋಗುವಂತೆ ಪ್ರವಾದಿ(ಸ) ಸಹಾಬಿಗಳಿಗೆ ಆಜ್ಞಾಪಿಸಿದರು. ಉಸ್ಮಾನ್(ರ) ತಮ್ಮ ಪತ್ನಿ ರುಕಯ್ಯ(ರ)ರೊಂದಿಗೆ ಅಬೀಸೀನಿಯಾಗೆ ವಲಸೆ ಹೋದರು.
o ಯುದ್ಧಗಳು:
ಬದ್ರ್ ಯುದ್ಧಕ್ಕೆ ಕರೆ ನೀಡಲಾದ ಸಂದರ್ಭದಲ್ಲಿ ಉಸ್ಮಾನ್(ರ)ರ ಪತ್ನಿ ರುಕಯ್ಯ(ರ) ಕಾಯಿಲೆ ಪೀಡಿತರಾಗಿದ್ದರು. ಉಸ್ಮಾನ್(ರ) ಯುದ್ಧಕ್ಕೆ ಹೊರಟು ನಿಂತರೂ, “ತಾವು ಇಲ್ಲೇ ಇರಿ ತಮಗೆ ಯುದ್ಧದಲ್ಲಿ ಪಾಲ್ಗೊಂಡ ಪ್ರತಿಫಲವಿದೆ” ಎಂದು ಪ್ರವಾದಿ(ಸ) ಅವರನ್ನು ಮದೀನಾದಲ್ಲೇ ಇರಲು ಹೇಳಿದರು. ಸ್ವಲ್ಪ ದಿನದಲ್ಲೇ ಪತ್ನಿ ಅಸುನೀಗಿದರು. ಪ್ರವಾದಿ(ಸ) ಯುದ್ಧದಿಂದ ಮರಳಿದ ಬಳಿಕ ಮಗಳ ಮರಣವಾರ್ತೆಯನ್ನು ತಿಳಿದರು. ಉಸ್ಮಾನ್(ರ) ಬದ್ರ್ ಯುದ್ಧದಲ್ಲಿ ಪಾಲ್ಗೊಳ್ಳದಿದ್ದರೂ ಕೂಡ ಅವರು ಬದ್ರಿಯ್ಯೀನ್(ಬದ್ ಯುದ್ಧದಲ್ಲಿ ಪಾಲ್ಗೊಂಡವರು)ಗಳಲ್ಲಿ ಸೇರುತ್ತಾರೆ ಎಂಬ ವಿಷಯದಲ್ಲಿ ಉಲಮಾಗಳಿಗೆ ಒಮ್ಮತಾಭಿಪ್ರಾಯವಿದೆ.
ಎಲ್ಲಾ ಯುದ್ಧಗಳಿಗೂ ಉಸ್ಮಾನ್(ರ) ದೊಡ್ಡ ರೂಪದ ಕೊಡುಗೆಯನ್ನೇ ನೀಡುತ್ತಿದ್ದರು. ತಬೂಕ್ ಯುದ್ದಕ್ಕೆ ಅವರು ಯುದ್ಧದ ಮೂರನೇ ಒಂದು ಭಾಗದಷ್ಟಿರುವ 940 ಒಂಟೆಗಳನ್ನು ಮತ್ತು 60 ಕುದುರೆಗಳನ್ನು ಕೊಡುಗೆಯಾಗಿ ನೀಡಿದರು. ಅಷ್ಟು ಮಾತ್ರವಲ್ಲದೆ 10,000 ದೀನಾರ್‌ಗಳನ್ನು ಸಹ ಪ್ರವಾದಿ(ಸ)ರವರ ಮುಂದೆ ಸುರಿದರು.
o ರೂಮ ಬಾವಿ:
ಪ್ರವಾದಿ(ಸ) ಮದೀನಕ್ಕೆ ಬಂದಾಗ ಅಲ್ಲಿ ನೀರಿನ ಅಭಾವವಿತ್ತು. ಅಲ್ಲಿದ್ದ ಬಾವಿಗಳಲ್ಲಿರುವ ನೀರನ್ನು ಮಾರಾಟ ಮಾಡಲಾಗುತ್ತಿತ್ತು. ನೀರು ಬೇಕಾದರೆ ಅದನ್ನು ಹಣ ತೆತ್ತು ಪಡೆಯಬೇಕಾದ ಪರಿಸ್ಥಿತಿಯಿತ್ತು. ಯಹೂದಿಗಳ ವಶದಲ್ಲಿದ್ದ ರೂಮ್ ಬಾವಿಯನ್ನು ಉಸ್ಮಾನ್(ರ) 20,000 ದಿರ್ಹಮ್ ಕೊಟ್ಟು ಖರೀದಿಸಿದರು. ನಂತರ ಅದನ್ನು ಮುಸಲ್ಮಾನರ ಮುಕ್ತ ಬಳಕೆಗೆ ಅಲ್ಲಾಹನ ಮಾರ್ಗದಲ್ಲಿ ಅರ್ಪಿಸಿದರು. ಅದೇ ರೀತಿ ಮಜ್ಜಿದುನ್ನಬವಿಯಲ್ಲಿ ಸ್ಥಳ ಸಾಕಾಗದೆ ಜನರು ಇಕ್ಕಟ್ಟು ಅನುಭವಿಸತೊಡಗಿದಾಗ ಉಸ್ಮಾನ್(ರ) ಮಸೀದಿಯ ಪಕ್ಕದಲ್ಲಿರುವ ಜಾಗವನ್ನು ಖರೀದಿಸಿ ಮುಸೀದಿಯನ್ನು ವಿಸ್ತರಿಸಿದರು.
o ಖಿಲಾಫತ್:
ಉಮರ್(ರ)ರವರು ಮರಣಹೊಂದುವಾಗ ತಮ್ಮ ನಂತರ ಖಲೀಫ ಆಗಿ ಆರು ಜನರನ್ನು ಆರಿಸಿದ್ದರು. ಅವರಲ್ಲಿ ಮೂರು ಜನರು ಅದರಿಂದ ಹಿಂದೆ ಸರಿದರು. ಉಳಿದ ಮೂವರು ಉಸ್ಮಾನ್ ಬಿನ್ ಅಫ್ಫಾನ್, ಅಲೀ ಬಿನ್ ಅಬೂ ತಾಲಿಬ್ ಮತ್ತು ಅಬ್ದುರಹ್ಮಾನ್ ಬಿನ್ ಔಫ್ ಆಗಿದ್ದರು. ಅಬ್ದುರಹ್ಮಾನ್ ಬಿನ್ ಔಫ್ ಮೂರು ದಿನಗಳ ಕಾಲ ಸಹಾಬಾಗಳೊಂದಿಗೆ ಸಮಾಲೋಚನೆ ಮಾಡಿ ನಂತರ ಉಸ್ಮಾನ್(ರ)ರಿಗೆ ಬೈಅತ್ ಮಾಡಿದರು. ಅಲೀ(ರ) ಕೂಡ ಉಸ್ಮಾನ್(ರ)ರಿಗೆ ಬೈಅತ್ ಮಾಡಿದರು. ಹೀಗೆ ಉಸ್ಮಾನ್(ರ)ರನ್ನು ಖಲೀಫರಾಗಿ ಆರಿಸಲಾಯಿತು.
o ಸಾಮ್ರಾಜ್ಯ ವಿಸ್ತರಣೆ:
ಹಿಜರಿ 24ರಲ್ಲಿ ಉಸ್ಮಾನ್(ರ) ಆಡಳಿತವನ್ನು ವಹಿಸಿಕೊಂಡರು. ಅವರ ಆಡಳಿತ ಕಾಲದಲ್ಲಿ ಇಸ್ಲಾಮಿ ಸಾಮ್ರಾಜ್ಯ ಇನ್ನಷ್ಟು ವಿಸ್ತರಿಸಿತು. ಅರ್ಮೇನಿಯ, ಖುರಾಸಾನ್, ಕರ್ಮಾನ್, ಸಿಜಿಸ್ತಾನ್, ಉತ್ತರ ಆಫ್ರಿಕ, ಸಿಪ್ರಸ್ ಮುಂತಾದ ಪ್ರದೇಶಗಳು ಇಸ್ಲಾಮಿನ ತೆಕ್ಕೆಗೆ ಬಂದವು. ಇಸ್ಲಾಮಿ ಸಾಮ್ರಾಜ್ಯದ ತೀರಗಳನ್ನು ರೋಮನ್ನರ ಆಕ್ರಮಣಗಳಿಂದ ಸಂರಕ್ಷಿಸುವುದಕ್ಕಾಗಿ ಉಸ್ಮಾನ್(ರ) ಮೊದಲ ಬಾರಿಗೆ ನಾವಿಕ ಪಡೆಗಳನ್ನು ರಚಿಸಿದರು.
ಉಮರ್(ರ) ನಿಧನರಾದಾಗ ಶತ್ರುಗಳಿಗೆ ಇಸ್ಲಾಮಿನ ವಿರುದ್ಧ ಹೋರಾಡಲು ಧೈರ್ಯ ಬಂತು. ವಿಶೇಷವಾಗಿ ಪರ್ಶಿಯನ್ ಮತ್ತು ರೋಮನ್ ಸಾಮ್ರಾಜ್ಯಗಳಿಗೆ. ಅವರು ತಾವು ಕಳಕೊಂಡ ಪ್ರದೇಶಗಳನ್ನು ಮರಳಿ ಪಡೆಯಲು ಹವಣಿಸಿದರು. ಪರ್ಶಿಯನ್ ಚಕ್ರವರ್ತಿ ಸಮರ್ಕಂದ್‍ನಲ್ಲಿ ಸಭೆ ನಡೆಸಿದನು. ರೋಮನ್ ಚಕ್ರವರ್ತಿ ಆಗಲೇ ತನ್ನ ಸಾಮ್ರಾಜ್ಯವನ್ನು ಕಳಕೊಂಡು ಕಾನ್ಸ್‌ಟಾಂಟಿನೋಪಲ್‌ಗೆ ಓಡಿ ಹೋಗಿದ್ದನು. ಅವನು ಅಲ್ಲಿ ಸಭೆ ನಡೆಸಿದನು. ಇಸ್ಲಾಮಿ ಸಾಮ್ರಾಜ್ಯದ ವಿರುದ್ಧ ತಲೆಯೆತ್ತಿದ ಈ ಎರಡು ಶಕ್ತಿಗಳನ್ನೂ ಉಸ್ಮಾನ್(ರ) ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು. ಮಾತ್ರವಲ್ಲದೆ ಅವರ ವಶದಲ್ಲಿದ್ದ ಇನ್ನೂ ಹಲವಾರು ಪ್ರದೇಶಗಳು ಮುಸ್ಲಿಮರ ವಶಕ್ಕೆ ಬಂದವು.
o ಕುರ್‌ಆನ್ ಕ್ರೋಢೀಕರಣ
ಉಸ್ಮಾನ್(ರ)ರವರ ಕಾಲದಲ್ಲಿ ಇಸ್ಲಾಮಿ ಸಾಮ್ರಾಜ್ಯವು ವಿಸ್ತರಿಸಿ ಅರಬೇತರ ರಾಜ್ಯಗಳೂ ಇಸ್ಲಾಮಿ ಸಾಮ್ರಾಜ್ಯಕ್ಕೆ ಸೇರ್ಪಡೆಯಾದವು. ಆದ್ದರಿಂದ ಸ್ವಾಭಾವಿಕವಾಗಿ ಕುರ್‌ಆನ್ ಪಾರಾಯಣದ ವಿಷಯದಲ್ಲಿ ಜನರ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರಿದವು. ಉಸ್ಮಾನ್(ರ)ರವರು ಅರ್ಮೇನಿಯನ್ನರ ವಿರುದ್ಧ ಯುದ್ಧ ಮಾಡುತ್ತಿದ್ದ ಸಂದರ್ಭ ಹುಝೈಫ(ರ) ಬಂದು ಅವರೊಡನೆ ಹೇಳಿದರು: “ಜನರು ಕುರ್‌ಆನನ್ನು ಬೇರೆ ಬೇರೆ ರೀತಿಯಲ್ಲಿ ಪಾರಾಯಣ ಮಾಡುತ್ತಿದ್ದಾರೆ. ಯಹೂದ ಕ್ರೈಸ್ತರಂತೆ ಈ ಸಮುದಾಯವೂ ಆಗುವುದನ್ನು ತಪ್ಪಿಸಿ.”
ಆಗ ಉಸ್ಮಾನ್(ರ) ಹಫ್ಸ(ರ)ರವರ ಬಳಿಯಲ್ಲಿದ್ದ ಮುಸ್‌ಹಫನ್ನು ತರಿಸಿದರು. ನಂತರ ಝೈದ್ ಬಿನ್ ಸಾಬಿತ್, ಸಈದ್ ಬಿನ್ ಆಸ್ ಮತ್ತು ಅಬ್ದುರ್ರಹ್ಮಾನ್ ಬಿನ್ ಹಾರಿಸ್ ಬಿನ್ ಹಿಶಾಮ್‌ರನ್ನು ಕರೆಸಿ ಕುರ್‌ಆನನ್ನು ನಕಲು ಮಾಡುವಂತೆ ಆಜ್ಞಾಪಿಸಿದರು. ನಿಮಗೆ ಯಾವುದೇ ಭಿನ್ನತೆ ಕಂಡುಬಂದರೆ ಕುರೈಶರ ಭಾಷೆಯನ್ನು ಅವಲಂಬಿಸಿ. ಏಕೆಂದರೆ ಕುರ್‌ಆನ್ ಅವತೀರ್ಣವಾದದ್ದು ಕುರೈಶರ ಭಾಷೆಯಲ್ಲಿ ಎಂದು ಹೇಳಿದರು. ಹೀಗೆ ಅವರು ಕುರ್‌ಆನನ್ನು ನಕಲು ಮಾಡಿದ ಬಳಿಕ ಮೂಲ ಪ್ರತಿಯನ್ನು ಹಫ್ಸ(ರ)ರಿಗೆ ಮರಳಿಸಲಾಯಿತು ಮತ್ತು ನಕಲು ಮಾಡಿದ ಪ್ರತಿಗಳನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಿಕೊಡಲಾಯಿತು. ಜನರೆಲ್ಲರೂ ಈ ಪ್ರತಿಯನ್ನೇ ಅವಲಂಬಿಸಬೇಕು ಮತ್ತು ತಮ್ಮ ಬಳಿಯಿರುವ ಎಲ್ಲಾ ಪ್ರತಿಗಳನ್ನು ಸುಟ್ಟುಹಾಕಬೇಕೆಂದು ಅವರು ಆಜ್ಞಾಪಿಸಿದರು. ಉಸ್ಮಾನ್(ರ) ಈ ವಿಷಯದಲ್ಲಿ ಅಲೀ(ರ) ಸೇರಿದಂತೆ ಅನೇಕ ಸಹಾಬಾಗಳೊಡನೆ ಸಮಾಲೋಚನೆ ಮಾಡಿದ್ದರು. ಅವರೆಲ್ಲವೂ ಉಸ್ಮಾನ್(ರ)ರವರ ನಿರ್ಧಾರವನ್ನು ಬೆಂಬಲಿಸಿದ್ದರು.
o ಹುತಾತ್ಮ:
ಉಸ್ಮಾನ್(ರ) 12 ವರ್ಷ ಖಿಲಾಫತ್ ನಡೆಸಿದರು. ಅದರಲ್ಲಿ ಮೊದಲ 6 ವರ್ಷಗಳು ಸಾಮ್ರಾಜ್ಯ ವಿಸ್ತರಣೆಯಲ್ಲಿ ಕಳೆದರೆ ಉಳಿದ 6 ವರ್ಷಗಳು ಅವರ ವಿರುದ್ಧ ಪಿತೂರಿಗಳಲ್ಲೇ ಕಳೆದವು. ಇದು ಅವರ ಕೊಲೆಯ ತನಕ ಮುಂದುವರಿಯಿತು. ಉಸ್ಮಾನ್(ರ)ರವರ ಆಡಳಿತಕಾಲದಲ್ಲಿ ಸಾಮ್ರಾಜ್ಯದಲ್ಲಿದ್ದ ಹೇರಳ ಸಂಪತ್ತು, ಸಾಮಾಜಿಕ ಬದಲಾವಣೆ, ಸಹಾಬಾಗಳ ನಂತರದ ಹೊಸ ತಲೆಮಾರಿನ ಉದಯ, ವದಂತಿಗಳು, ಪಕ್ಷಪಾತಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕಪಟವಿಶ್ವಾಸಿಗಳ ಮಾತಿಗೆ ಕಿವಿಗೊಡವವರು ಹೆಚ್ಚಾದದ್ದು ಈ ಪಿತೂರಿಗಳಿಗೆ ಪ್ರಮುಖ ಕಾರಣಗಳಾಗಿದ್ದವು.
ಪಿತೂರಿಯ ಪ್ರಮುಖ ಸೂತ್ರಧಾರಿ ಅಬ್ದುಲ್ಲಾ ಬಿನ್ ಸಬಾ ಎಂಬ ಯಹೂದಿಯಾಗಿದ್ದ. ಈತ ಉಸ್ಮಾನ್(ರ)ರ ಕಾಲದಲ್ಲಿ ಇಸ್ಲಾಮ್ ಸ್ವೀಕರಿಸಿದಂತೆ ಅಭಿನಯಿಸಿ ಇಸ್ಲಾಮಿಗೆ ಬಂದಿದ್ದ. ಉಸ್ಮಾನ್(ರ)ರನ್ನು ಅವರ ಮನೆಯಲ್ಲಿ ಮುತ್ತಿಗೆ ಹಾಕಿದ ಜನರೂ ಈ ಪಿತೂರಿಯಲ್ಲಿ ಪಾಲ್ಗೊಂಡಿದ್ದರು.
ಉಸ್ಮಾನ್(ರ) ನೇಮಿಸಿದ ಕೆಲವು ರಾಜ್ಯಪಾಲರ ವಿಷಯದಲ್ಲಿ ಜನರ ಮನಸ್ಸಿನಲ್ಲಿ ವೈಷಮ್ಯವನ್ನು ಬಿತ್ತುವ ಮೂಲಕ ಮತ್ತು ಅಲೀ(ರ)ರಿಗೆ ಸಿಗಬೇಕಾಗಿದ್ದ ಖಲೀಫ ಸ್ಥಾನವನ್ನು ಅವರಿಂದ ಬಲವಂತವಾಗಿ ಕಸಿಯಲಾಗಿದೆ ಎಂಬ ವದಂತಿ ಹಬ್ಬಿಸುವ ಮೂಲಕ ಪಿತೂರಿಗೆ ಆರಂಭ ಹಾಡಲಾಯಿತು. ಇದರಿಂದ ಜನರ ನಡುವೆ ಭಿನ್ನಮತದ ಬೇರುಗಳು ಉದ್ಭವಿಸತೊಡಗಿದವು. ಜನರನ್ನು ವಿಶೇಷವಾಗಿ ವಿಭಿನ್ನ ಪ್ರದೇಶಗಳ ಬುಡಕಟ್ಟು ನಾಯಕರನ್ನು ಖಲೀಫರ ವಿರುದ್ಧ ಎತ್ತಿ ಕಟ್ಟುವುದರಲ್ಲಿ ಅಬ್ದುಲ್ಲಾ ಬಿನ್ ಸಬಾ ಮತ್ತು ಕಪಟವಿಶ್ವಾಸಿಗಳು ಯಶಸ್ವಿಯಾದರು. ಅವರ ಮಾತಿಗೆ ಕಿವಿಗೊಟ್ಟು ಜನರು ಖಲೀಫರ ವಿರುದ್ಧ ರೊಚ್ಚಿಗೆದ್ದು ಪಿತೂರಿಗಳನ್ನು ನಡೆಸತೊಡಗಿದರು.
ಮದೀನದಲ್ಲಿ ತನ್ನ ವಿರುದ್ಧ ಪಿತೂರಿ ನಡೆಯುತ್ತಿದೆಯೆಂ ದು ಉಸ್ಮಾನ್(ರ)ರಿಗೆ ತಿಳಿದಿತ್ತು. ಪಿತೂರಿ ವ್ಯಾಪಕವಾಗಿ ಹರಡಿ ಖಲೀಫ ಕೆಳಗಿಳಿಯದಿದ್ದರೆ ಅವರನ್ನು ಕೊಲ್ಲುತ್ತೇವೆಂದು ಪಿತೂರಿಗಾರರು ಬೆದರಿಕೆ ನೀಡಿದಾಗ ಅವರನ್ನು ಸದೆಬಡಿಯುವಂತೆ ಸಹಾಬಾಗಳು ಸಲಹೆ ನೀಡಿದರು. ಆದರೆ ಉಸ್ಮಾನ್(ರ) ಅದಕ್ಕೆ ಮುಂದಾಗಲಿಲ್ಲ. ತನ್ನಿಂದಾಗಿ ಆಂತರಿಕ ಕಲಹ ಉಂಟಾಗುವುದು ಮತ್ತು ತನಗಾಗಿ ಮುಸಲ್ಮಾನರು ಪರಸ್ಪರ ಹೊಡೆದಾಡುವುದನ್ನು ಅವರು ಇಷ್ಟಪಡಲಿಲ್ಲ. ಪಿತೂರಿಗಾರರಿಗೆ ಬೇಕಾಗಿರುವುದು ನನ್ನ ರಕ್ತ. ಅವರು ನನ್ನನ್ನು ಕೊಲ್ಲುವುದಾದರೆ ಕೊಲ್ಲಲಿ. ಆದರೆ ತನ್ನಿಂದಾಗಿ ಯಾರೂ ಸಾಯುವಂತಾಗಬಾರದು ಎಂದು ಅವರು ದೃಢನಿಶ್ಚಯ ತಾಳಿದ್ದರು.
ಪಿತೂರಿಗಾರರು ಉಸ್ಮಾನ್(ರ)ರವರ ಮನೆಯ ಮೇಲೆ ದಾಳಿ ಮಾಡಿದರು. ಆಗ ನಡೆದ ಸಂಘರ್ಷದಲ್ಲಿ ನಾಲ್ಕು ಮಂದಿ ಕುರೈಶಿ ಯುವಕರು ಹತರಾಗಿ ನಾಲ್ಕು ಮಂದಿ ಗಾಯಾಳುಗಳಾದರು. ಉಸ್ಮಾನ್(ರ) ಕುರ್‌ಆನ್ ಮಾಡುತ್ತಿದ್ದರು. ಶತ್ರುಗಳು ಅವರ ಮೇಲೆ ಮುಗಿಬಿದ್ದು ಅವರನ್ನು ಕೊಂದರು. ಅವರು ಕೊನೆಯದಾಗಿ ಪಾರಾಯಣ ಮಾಡಿದ ಆಯತ್ ಹೀಗಿತ್ತು: “ಅವರಿಗೆ ವಿರುದ್ಧವಾಗಿ ತಮಗೆ ಅಲ್ಲಾಹು ಸಾಕು. ಅವನು ಎಲ್ಲವನ್ನು ಕೇಳುವವನೂ ತಿಳಿಯುವವನೂ ಆಗಿದ್ದಾನೆ.” (2:137).
ಇದು ನಡೆದದ್ದು ಹಿಜರಿ 35, ದುಲ್-ಹಿಜ್ಜ ತಿಂಗಳ 18ನೇ ದಿನ. ಆಗ ಉಸ್ಮಾನ್(ರ)ರಿಗೆ 82 ವರ್ಷ ಪ್ರಾಯವಾಗಿತ್ತು. ಅವರನ್ನು ಬಕೀಅ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.