ಉಮರ್(ರ)ರವರ ವಂಶಾವಳಿಯು ಎಂಟನೇ ಪಿತಾಮಹ ಕಅಬ್‌ರಲ್ಲಿ ಪ್ರವಾದಿ(ಸ)ರೊಂದಿಗೆ ಸಂಧಿಸುತ್ತದೆ.
o ಜನನ ಮತ್ತು ಬೆಳವಣಿಗೆ:
ಪ್ರವಾದಿ(ಸ)ರವರ ಜನನವಾಗಿ 13 ವರ್ಷಗಳ ನಂತರ ಉಮರ್(ರ) ಹುಟ್ಟಿದರು. ಅವರು ಹುಟ್ಟಿದ್ದು, ಬೆಳೆದದ್ದು ಎಲ್ಲಾ ಮಕ್ಕಾದಲ್ಲೇ. ಇತರ ಕುರೈಶಿಗಳಿಗೆ ವ್ಯತಿರಿಕ್ತವಾಗಿ ಅವರು ಓದು-ಬರಹ ಬಲ್ಲವರಾಗಿದ್ದರು. ಅವರ ತಂದೆ ಬಹಳ ಒರಟು ಸ್ವಭಾವದವರು. ಉಮರ್(ರ) ಚಿಕ್ಕಂದಿನಲ್ಲೇ ಒಂಟೆಗಳನ್ನು ಮೇಯಿಸುವ ಕೆಲಸವನ್ನು ಮಾಡುತ್ತಿದ್ದರು. ಕುದುರೆ ಸವಾರಿ, ಕುಸ್ತಿ ಮುಂತಾದ ಕ್ರೀಡೆಗಳಲ್ಲಿ ಅವರು ಪರಿಣತರಾಗಿದ್ದರು.
o ವೃತ್ತಿಜೀವನ:
ಅವರು ಉಕ್ಕಾಝ್, ಮಜನ್ನ, ದುಲ್ ಮಜಾಝ್ ಮುಂತಾದ ಅರಬ್ ಮಾರುಕಟ್ಟೆಗಳಿಗೆ ತೆರಳಿ ವ್ಯಾಪಾರ ಕಲಿತು ನಂತರ ಅದರಿಂದಲೇ ಧನಿಕರಾದರು. ಅವರು ವ್ಯಾಪಾರಾರ್ಥ ಉಷ್ಣಕಾಲದಲ್ಲಿ ಶಾಮ್ ಮತ್ತು ಶೈತ್ಯಕಾಲದಲ್ಲಿ ಯಮನ್‌ಗೆ ತೆರಳುತ್ತಿದ್ದರು. ಅವರಿಗೆ ಕುರೈಶರಲ್ಲಿ ಪ್ರಮುಖ ಸ್ಥಾನಮಾನವಿತ್ತು. ಕುರೈಶರು ಮತ್ತು ಇತರ ಅರಬ್ ಗೋತ್ರಗಳ ನಡುವೆ ಯುದ್ಧವಾದರೆ ಕುರೈಶರು ಇವರನ್ನು ರಾಯಭಾರಿಯಾಗಿ ಕಳುಹಿಸುತ್ತಿದ್ದರು.
o ಇಸ್ಲಾಮ್ ಧರ್ಮದ ಬದ್ಧ ಶತ್ರು:
ಇತರ ಕುರೈಶರಂತೆಯೇ ಉಮರ್(ರ) ವಿಗ್ರಹಾರಾಧಕರಾಗಿಯೇ ಬೆಳೆದರು. ಅವರು ಇಸ್ಲಾಮ್ ಧರ್ಮದ ಬದ್ಧ ಶತ್ರುವಾಗಿದ್ದರು. ಮುಸ್ಲಿಮರನ್ನು ಅತಿಯಾಗಿ ಹಿಂಸಿಸಿದವರಲ್ಲಿ ಅವರೂ ಒಬ್ಬರು. ಶತ್ರುಗಳ ಹಿಂಸೆ ಸಹಿಸಲು ಸಾಧ್ಯವಾಗದೇ ಹೋದಾಗ ಪ್ರವಾದಿ(ಸ)ರವರು ತಮ್ಮ ಸಹಾಬಾಗಳಿಗೆ ಅಬಿಸೀನಿಯಾಗೆ ವಲಸೆ ಹೋಗಲು ಆದೇಶಿಸಿದರು. ಆಗ ಉಮರ್(ರ)ರಿಗೆ ರೋಷ ಇನ್ನಷ್ಟು ಉಕ್ಕಿ ಬಂತು. ಪ್ರವಾದಿ(ಸ)ರಿಂದಾಗಿ ಕುರೈಶಿ ಸಮಾಜವು ಇಬ್ಬಾಗವಾಗುವುದು ಅವರಿಗೆ ಸಹಿಸಲಾಗಲಿಲ್ಲ. ಈ ಎಲ್ಲಾ ಸಮಸ್ಯೆಗಳಿಗೂ ಮುಹಮ್ಮದ್(ಸ)ರನ್ನು ಕೊಲ್ಲುವುದೇ ಪರಿಹಾರವೆಂಬ ತೀರ್ಮಾನಕ್ಕೆ ಬಂದರು.
o ಇಸ್ಲಾಮ್ ಸ್ವೀಕಾರ:
ಅವರು ಪ್ರವಾದಿ(ಸ)ರವರನ್ನು ಕೊಲ್ಲುವ ತೀರ್ಮಾನಕ್ಕೆ ಬರಲು ಇನ್ನೊಂದು ಕಾರಣ ಹಂಝ ಬಿನ್ ಅಬ್ದುಲ್ ಮುತ್ತಲಿಬ್(ರ)ರವರು ಉಮರ್(ರ)ರವರ ಮಾವಂದಿರಲ್ಲಿ ಒಬ್ಬನಾದ ಅಬೂಜಹಲ್ ನನ್ನು ಅವಮಾನಿಸಿದ್ದಾಗಿತ್ತು. ಇದು ತನಗೂ ಅವಮಾನವೆಂದು ಬಗೆದ ಉಮರ್(ರ) ಕೈಯಲ್ಲಿ ಖಡ್ಗ ಹಿಡಿದು ಪ್ರವಾದಿ(ಸ)ರನ್ನು ಹುಡುಕುತ್ತಾ ಹೊರಟರು. ದಾರಿ ಮಧ್ಯೆ ನುಐಮ್ ಬಿನ್ ಅಬ್ದುಲ್ಲಾ ಅವರನ್ನು ಭೇಟಿಯಾದರು. ಅವರು ಆಗಲೇ ಇಸ್ಲಾಮ್ ಸ್ವೀಕರಿಸಿದ್ದರೂ ಅದನ್ನು ಗೋಪ್ಯವಾಗಿರಿಸಿದ್ದರು.
“ತಾವು ಎಲ್ಲಿ ಹೋಗುತ್ತಿದ್ದೀರಿ?” ಎಂದು ಕೇಳಿದಾಗ, “ಮುಹಮ್ಮದ್(ಸ)ರನ್ನು ಕೊಲ್ಲಲು” ಎಂದು ಉಮರ್(ರ) ಉತ್ತರಿಸಿದರು. “ಆದರೆ ಅದಕ್ಕೆ ಮುಂಚೆ ನಿನ್ನ ಕುಟುಂಬವನ್ನು ಸರಿಮಾಡಬಾರದೇ? ನಿನ್ನ ಸೋದರ ಸಂಬಂಧಿ ಸಈದ್ ಬಿನ್ ಝದ್ ಮತ್ತು ನಿನ್ನ ತಂಗಿ ಫಾತಿಮ ಈಗಾಗಲೇ ಇಸ್ಲಾಮ್ ಸ್ವೀಕರಿಸಿದ್ದಾರೆ” ಎಂದು ಹೇಳುತ್ತಾ ನುಐಮ್ ಅವರನ್ನು ಬಂದ ದಾರಿಯಲ್ಲೇ ಹಿಂದಿರುಗುವಂತೆ ಮಾಡಲು ಸಫಲರಾದರು.
ಉಮರ್(ರ) ನೇರವಾಗಿ ಮನೆಗೆ ಹೋದರು. ಅಲ್ಲಿ ಖಬ್ಬಾಬ್ ಬಿನ್ ಅರತ್(ರ) ಅವರಿಬ್ಬರಿಗೆ ಕುರ್‌ಆನ್ ಕಲಿಸುತ್ತಿದ್ದರು. ಉಮರ್(ರ) ಸಈದ್‌ರಿಗೆ ತೀವ್ರವಾಗಿ ಥಳಿಸಿದರು. ತಂಗಿ ಫಾತಿಮ(ರ) ಕೆನ್ನೆಗೆ ಬಲವಾಗಿ ಬಾರಿಸಿದರು. ಆಕೆಯ ಕೈಯಲ್ಲಿದ್ದ ಕುರ್‌ಆನ್ ಪ್ರತಿ ಕೆಳಗೆ ಬಿತ್ತು. ಉಮರ್(ರ) ಅದನ್ನು ಹೆಕ್ಕಿ ಓದಲು ಮುಂದಾದಾಗ ಆಕೆ ನಿರಾಕರಿಸಿ ಸ್ನಾನ ಮಾಡಿ ಬರಲು ಹೇಳಿದರು. ಉಮರ್(ರ) ಸ್ನಾನ ಮಾಡಿ ಬಂದು ಅದನ್ನು ಓದಿದರು. ಅದರಲ್ಲಿ ಸೂರ ತಾಹಾದ ಪ್ರಾರಂಭದ ಆರು ಆಯತ್‌ಗಳಿದ್ದವು. ಅದನ್ನು ಓದುತ್ತಿದ್ದಂತೆ ಉಮರ್(ರ) ನಡುಗುತ್ತಿದ್ದರು. ಆ ಕ್ಷಣದಲ್ಲೇ ಅವರು ಇಸ್ಲಾಮ್ ಸ್ವೀಕರಿಸಿದರು.
ಅದು ಪ್ರವಾದಿತ್ವದ ಐದನೇ ವರ್ಷ ದುಲ್-ಹಿಜ್ಜ ತಿಂಗಳಾಗಿತ್ತು. ಉಮರ್(ರ) ಅಲ್ಲಿಂದ ದಾರುಲ್ ಅರ್ಕಮ್‌ಗೆ ಹೋಗಿ ಪ್ರವಾದಿ(ಸ)ರವರ ಮುಂದೆ ತಮ್ಮ ಇಸ್ಲಾಮನ್ನು ಬಹಿರಂಗಪಡಿಸಿದರು. “ಓ ಅಲ್ಲಾಹ್! ಇಬ್ಬರು ಉಮರ್ ರಲ್ಲಿ (ಉಮರ್ ಅಥವಾ ಅಬೂಜಹಲ್ ಯಾರಾದರೂ ಒಬ್ಬರ ಮೂಲಕ ಇಸ್ಲಾಮನ್ನು ಬಲಪಡಿಸು” ಎಂಬ ಪ್ರವಾದಿ(ಸ) ಪ್ರಾರ್ಥನೆಗೆ ಅಲ್ಲಾಹು ಉತ್ತರಿಸಿದ್ದನು.
o ದಅವಾ:
ಉಮರ್(ರ) ಮತ್ತು ಹಂಝ(ರ) ಮುಸ್ಲಿಮರಾಗುವುದಕ್ಕೆ ಮುನ್ನ ಮುಸ್ಲಿಮರು ಗೋಪ್ಯವಾಗಿ ದಅವಾ ಮಾಡುತ್ತಿದ್ದರು. ಏಕೆಂದರೆ ಆಗ ಅವರಿಗೆ ಕುರೈಶರ ಹಿಂಸೆಗಳಿಂದ ರಕ್ಷಿಸಲು ಯಾರೂ ಇರಲಿಲ್ಲ. ಆದರೆ ಉಮರ್(ರ)ರವರು ಮುಸ್ಲಿಮರಾದ ಬಳಿಕ ಮುಸ್ಲಿಮರು ಬಹಿರಂಗವಾಗಿ ಕಾಣಲು ಆರಂಭಿಸಿದರು. ಒಮ್ಮೆ ಉಮರ್(ರ) ಪ್ರವಾದಿ(ಸ)ರೊಡನೆ ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ, ನಾವು ಸತ್ಯದಲ್ಲಿಲ್ಲವೇ?” ಪ್ರವಾದಿ(ಸ) ಹೌದೆಂದರು. ಅವರು ಕೇಳಿದರು: “ಅವರು ಮಿಥ್ಯದಲ್ಲಿದ್ದಾರಲ್ಲವೇ?” ಪ್ರವಾದಿ(ಸ) ಹೌದೆಂದರು. ಉಮರ್(ರ) ಕೇಳಿದರು: “ಹಾಗಾದರೆ ನಾವೇಕೆ ಅಡಗಬೇಕು?” ಪ್ರವಾದಿ(ಸ) ಕೇಳಿದರು: “ನಿಮ್ಮ ಅಭಿಪ್ರಾಯವೇನು?” ಉಮರ್(ರ) ಉತ್ತರಿಸಿದರು: “ನಾವು ಹೋಗಿ ಕಅಬಾಲಯಕ್ಕೆ ತವಾಫ್ ಮಾಡೋಣ.” ಹೀಗೆ ಮುಸಲ್ಮಾನರು ಎರಡು ಸಾಲುಗಳಾಗಿ ಕಅಬಾಲಯಕ್ಕೆ ಹೊರಟರು. ಒಂದು ಸಾಲಿನ ಮುಂಚೂಣಿಯಲ್ಲಿ ಉಮರ್(ರ) ಇದ್ದರೆ ಇನ್ನೊಂದು ಸಾಲಿನ ಮುಂಚೂಣಿಯಲ್ಲಿ ಹಂಝ(ರ) ಇದ್ದರು. ಪ್ರವಾದಿ(ಸ) ಎರಡು ಸಾಲುಗಳ ಮಧ್ಯದಲ್ಲಿದ್ದರು. ಇವರನ್ನು ಕಂಡು ಕುರೈಶರು ಏನೂ ಮಾಡಲಾಗದೆ ಮೂಕವಿಸ್ಮಿತರಾಗಿ ನಿಂತರು.
o ಹಿಜ್ರ:
ಪ್ರವಾದಿ(ಸ)ರವರು ಮದೀನಕ್ಕೆ ಹಿಜ್ರ ಹೋಗಲು ಆದೇಶಿಸಿದಾಗ ಹೆಚ್ಚಿನ ಮುಸ್ಲಿಮರು ಶತ್ರುಗಳ ಭಯದಿಂದ ಕದ್ದು ಮುಚ್ಚಿ ಹಿಜ್ರ ಮಾಡಿದರೆ ಉಮರ್(ರ) ಬಹಿರಂಗವಾಗಿಯೇ ಹಿಜ್ರ ಮಾಡಿದರು. ಅವರು ಖಡ್ಗವನ್ನು ಕೈಯಲ್ಲಿ ಹಿಡಿದು, ಬಿಲ್ಲನ್ನು ಹೆಗಲಿಗೇರಿಸಿದರು. ನಂತರ ಕಅಬಾ ತವಾಫ್ ಮಾಡಿ ಮಕಾಮ್ ಇಬ್ರಾಹೀಮ್ ಹಿಂದೆ ನಮಾಝ್ ಮಾಡಿದರು. ನಂತರ ಅಲ್ಲಿದ್ದ ಮುಶ್ರಿಕರೊಂದಿಗೆ, “ಇಗೋ ನಾನು ಹಿಜ್ರ ಹೋಗುತ್ತಿದ್ದೇನೆ. ಯಾರ ತಾಯಿಗೆ ತನ್ನ ಮಗನನ್ನು ಕಳೆದುಕೊಳ್ಳಲು, ಯಾರಿಗೆ ತನ್ನ ಮಕ್ಕಳನ್ನು ಅನಾಥರನ್ನಾಗಿ ಮಾಡಲು ಮತ್ತು ಯಾರಿಗೆ ತನ್ನ ಹೆಂಡತಿಯನ್ನು ವಿಧವೆಯನ್ನಾಗಿ ಮಾಡಲು ಇಷ್ಟವಿದೆಯೋ ಅವರು ನನ್ನನ್ನು ತಡೆಯಲಿ” ಎಂದರು. ಆದರೆ ಅಲ್ಲಿದ್ದ ಯಾರೂ ಅವರನ್ನು ತಡೆಯಲು ಮುಂದಾಗಲಿಲ್ಲ. ಸುಮಾರು ಇಪ್ಪತ್ತರಷ್ಟು ಮುಸಲ್ಮಾನರೊಂದಿಗೆ ಅವರು ಶತ್ರುಗಳ ಮುಂಭಾಗದಲ್ಲೇ ಹಿಜ್ರ ಹೊರಟರು.
o ಯುದ್ಧಗಳು:
ಉಮರ್(ರ) ಪ್ರವಾದಿ(ಸ)ರೊಡನೆ ಎಲ್ಲಾ ಯುದ್ಧಗಳಲ್ಲೂ ಪಾಲ್ಗೊಂಡಿದ್ದರು. ಬದ್ರ್ ಯುದ್ಧಕ್ಕೆ ಮುನ್ನ ಪ್ರವಾದಿ(ಸ) ಸಮಾಲೋಚನೆ ಮಾಡಿದಾಗ ಮುಶ್ರಿಕರೊಂದಿಗೆ ಯುದ್ಧ ಮಾಡಬೇಕೆಂಬ ಅಭಿಪ್ರಾಯ ಹೇಳಿದ ಎರಡನೇ ವ್ಯಕ್ತಿ ಉಮರ್(ರ) ಆಗಿದ್ದರು. ಬದ್ರ್ ಯುದ್ಧದಲ್ಲಿ ಅವರು ತಮ್ಮ ಮಾವ ಆಸ್ ಬಿನ್ ಹಿಶಾಮ್‌ರನ್ನು ಕೊಂದರು. ಉಹುದ್ ಯುದ್ಧದಲ್ಲಿ ಪ್ರವಾದಿ(ಸ) ಮಡಿದರೆಂದು ವದಂತಿ ಹಬ್ಬಿದಾಗ ಉಮರ್(ರ) ತಬ್ಬಿಬ್ಬಾದರು. ಆದರೆ ಪ್ರವಾದಿ(ಸ) ಬೆಟ್ಟದ ಹಿಂದೆ ಜೀವಂತವಿದ್ದಾರೆಂಬ ಸುದ್ದಿ ತಿಳಿದಾಗ ಉಮರ್(ರ) ಆವೇಶದಿಂದ ಅಲ್ಲಿಗೆ ತೆರಳಿ ಅವರಿಗೆ ಬೆಂಗಾವಲಾಗಿ ನಿಂತರು. ಹುದೈಬಿಯಾ ಸಂಧಿಯ ಸಂದರ್ಭದಲ್ಲೂ ಉಮರ್(ರ) ಉಪಸ್ಥಿತರಿದ್ದರು.
o ಪ್ರವಾದಿ(ಸ)ರವರ ಮರಣ:
ಪ್ರವಾದಿ(ಸ)ರವರ ಮರಣವಾರ್ತೆ ಮದೀನದಾದ್ಯಂತ ಹಬ್ಬಿದಾಗ ಉಮರ್(ರ) ಸೇರಿದಂತೆ ಅನೇಕ ಮಂದಿ ಸಹಾಬಿಗಳು ಅದನ್ನು ನಂಬಲಿಲ್ಲ. ಉಮರ್(ರ) ಎದ್ದು ನಿಂತು ಹೇಳಿದರು: “ಅಲ್ಲಾಹನಾಣೆ! ಪ್ರವಾದಿ(ಸ) ಮರಣಹೊಂದಿಲ್ಲ. ಅವರು ಖಂಡಿತವಾಗಿಯೂ ಎದ್ದು ಬರುತ್ತಾರೆ. ಪ್ರವಾದಿ(ಸ) ನಿಧನರಾದರೆಂದು ಯಾರಾದರೂ ಹೇಳಿದರೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ.” ಜನರೆಲ್ಲರೂ ಗೊಂದಲದಲ್ಲಿದ್ದರು. ಯಾರಿಗೆ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ.
ಕೊನೆಗೆ ಅಬೂಬಕರ್(ರ) ಬಂದು ಉಮರ್(ರ)ರನ್ನು ಸಮಾಧಾನಪಡಿಸಿ ನಂತರ ಜನರ ಕಡೆಗೆ ತಿರುಗಿ ಹೇಳಿದರು: “ಓ ಜನರೇ, ನಿಮ್ಮಲ್ಲಿ ಯಾರಾದರೂ ಮುಹಮ್ಮದ್(ಸ)ರನ್ನು ಆರಾಧಿಸುತ್ತಿದ್ದರೆ, ಇಗೋ ಮುಹಮ್ಮದ್(ಸ) ಮರಣಹೊಂದಿದ್ದಾರೆ. ಆದರೆ ನಿಮ್ಮಲ್ಲಿ ಯಾರಾದರೂ ಅಲ್ಲಾಹನನ್ನು ಆರಾಧಿಸುವುದಾದರೆ ಅವನೆಂದೂ ಮರಣಹೊಂದಲಾರ, ಅವನು ಎಂದೆಂದೂ ಜೀವಿಸಿರುವವನು.”
ನಂತರ ಅವರು ಈ ಆಯತ್ತನ್ನು ಪಾರಾಯಣ ಮಾಡಿದರು: “ಮುಹಮ್ಮದ್ ಒಬ್ಬ ಸಂದೇಶವಾ ಹಕರಲ್ಲದೆ ಇನ್ನೇನೂ ಅಲ್ಲ. ಅವರೇನಾದರೂ ಮರಣಹೊಂದಿದರೆ ಅಥವಾ ಕೊಲ್ಲಲ್ಪಟ್ಟರೆ ನೀವು ನಿಮ್ಮ ಹಿಮ್ಮಡಿಗಳಲ್ಲಿ ಮರಳುತ್ತೀರಾ? ನಿಮ್ಮಲ್ಲಿ ಯಾರಾದರೂ ತಮ್ಮ ಹಿಮ್ಮಡಿಗಳಲ್ಲಿ ಮರಳಿದರೆ ಅವರು ಅಲ್ಲಾಹನಿಗೆ ಯಾವುದೇ ಹಾನಿಯನ್ನೂ ಮಾಡುವುದಿಲ್ಲ. ಕೃತಜ್ಞತೆ ಸಲ್ಲಿಸುವವರಿಗೆ ಅಲ್ಲಾಹು ಸೂಕ್ತ ಪ್ರತಿಫಲವನ್ನು ನೀಡು ತ್ತಾನೆ.” (ಕುರ್‌ಆನ್ 3:144)
ಈ ಮಾತನ್ನು ಕೇಳಿದಾಗ ಪ್ರವಾದಿ(ಸ) ನಿಧನರಾದರೆಂದು ಉಮರ್(ರ)ರಿಗೆ ಖಾತ್ರಿಯಾಯಿತು. ಅವರು ತಮ್ಮ ಮಂಡಿಯ ಮೇಲೆ ಬಿದ್ದು ಅಳತೊಡಗಿದರು.
o ಖಿಲಾಫತ್:
ಅಬೂಬಕರ್(ರ) ಮರಣಶಯ್ಯೆಯಲ್ಲಿದ್ದಾಗ ಸಹಾಬಾಗಳೊಂದಿಗೆ ಸಮಾಲೋಚನೆ ಮಾಡಿ ತಮ್ಮ ನಂತರ ಖಲೀಫರನ್ನಾಗಿ ಉಮರ್(ರ)ರನ್ನು ಆಯ್ಕೆ ಮಾಡಿದರು. ಸಹಾಬಿಗಳೆಲ್ಲರೂ ಒಪ್ಪಿಕೊಂಡರು. ಅಬೂಬಕರ್(ರ) ಮರಣಹೊಂದಿದಾಗ ಉಮರ್(ರ) ಎದ್ದು ನಿಂತು ಹೇಳಿದರು: “ಜನರೇ, ಅರಬ್ಬರು ಹೇಗೆಂದರೆ ತನ್ನ ಯಜಮಾನನನ್ನು ಹಿಂಬಾಲಿಸುವ ಒಂಟೆಯಂತೆ. ಆದ್ದರಿಂದ ನಿಮ್ಮನ್ನು ನಿಮ್ಮ ನಾಯಕರು ಎಲ್ಲಿಗೆ ಒಯ್ಯುತ್ತಿದ್ದಾರೆಂಬ ಬಗ್ಗೆ ನೀವು ಹುಷಾರಾಗಿರಬೇಕು. ಅಲ್ಲಾಹನಾಣೆ! ನಾನು ನಿಮ್ಮ ನೇರಮಾರ್ಗಕ್ಕಲ್ಲದೆ ಇನ್ನೆಲ್ಲಿಗೂ ಒಯ್ಯುವುದಿಲ್ಲ.”
o ಸಾಮ್ರಾಜ್ಯ ವಿಸ್ತರಣೆ:
ಉಮರ್(ರ)ರವರ ಕಾಲದಲ್ಲಿ ಇಸ್ಲಾಮಿ ಸಾಮ್ರಾಜ್ಯವು ದೂರ ದೂರದ ದೇಶಗಳ ತನಕ ವಿಸ್ತರಿಸಿತು. ಸಂಪೂರ್ಣ ಇರಾಕ್, ಈಜಿಪ್ಟ್, ಲಿಬಿಯ, ಶಾಮ್, ಇರಾನ್, ಖುರಾಸಾನ್, ಏಷ್ಯಾ ಮೈನರ್, ಅರ್ಮೇನಿಯಾದ ದಕ್ಷಿಣ ಭಾಗ, ಸಿಜಿಸ್ತಾನ್ ಮುಂತಾದ ಎಲ್ಲಾ ಪ್ರದೇಶಗಳೂ ಇಸ್ಲಾಮಿ ಸಾಮ್ರಾಜ್ಯದ ವಶಕ್ಕೆ ಬಂದವು. ಉಮರ್(ರ)ರವರ ಆಡಳಿತ ಕಾಲದಲ್ಲಿ ಬೈತುಲ್ ಮುಕದ್ದಸ್ ಮೊದಲ ಬಾರಿ ವಶಪಡಿಸಲಾಯಿತು. ಇದರೊಂದಿಗೆ ಪರ್ಶಿಯನ್ ಸಾಮ್ರಾಜ್ಯ ಸಂಪೂರ್ಣವಾಗಿ ಇಸ್ಲಾಮಿಗೆ ಶರಣಾದರೆ ರೋಮನ್ ಸಾಮ್ರಾಜ್ಯದ ಮೂರನೇ ಎರಡು ಭಾಗವು ಇಸ್ಲಾಮಿನ ವಶಕ್ಕೆ ಬಂತು. ಉಮರ್(ರ)ರವರು ಖಲೀಫ ಆಗಿ ಕೇವಲ ಎರಡು ವರ್ಷಗಳಲ್ಲೇ ಪರ್ಶಿಯನ್ ಸಮ್ರಾಜ್ಯವನ್ನು ಸಂಪೂರ್ಣ ವಶಪಡಿಸಲಾಯಿತು.
o ಮರಣ:
ಮಜೂಸಿ ಧರ್ಮದಲ್ಲೇ ಉಳಿದ ಪರ್ಶಿಯನ್ನರಿಗೆ ತಮ್ಮ ಸಾಮ್ರಾಜ್ಯವನ್ನು ನಾಶ ಮಾಡಿದ ಉಮರ್(ರ)ರವರ ಮೇಲೆ ಬಹಳ ಹಗೆಯಿತ್ತು. ಅವರು ಅದಕ್ಕಾಗಿ ಸಮಯ ಕಾಯುತ್ತಿದ್ದರು. ಹಿಜ್ರ 23ನೇ ವರ್ಷದಲ್ಲಿ (ಕ್ರಿ.ಶ. 644) ಉಮರ್(ರ) ಹಜ್ಜೆ ನಿರ್ವಹಿಸಲು ಮಕ್ಕಾಗೆ ತೆರಳಿದರು. ಅಲ್ಲೇ ಅವರನ್ನು ಮುಗಿಸುವ ಸಂಚನ್ನು ವಿರೋಧಿಗಳು ಹೆಣೆದಿದ್ದರು. ಆದರೆ ಅವರು ಸಫಲರಾಗಿರಲಿಲ್ಲ. ನಂತರ ಉಮರ್(ರ) ಮದೀನಕ್ಕೆ ಮರಳಿ ಒಂದಿನ ಮಸ್ತಿದುನ್ನಬವಿಯಲ್ಲಿ ಫಜ್ರ್ ನಮಾಝ್ ನಿರ್ವಹಿಸುತ್ತಿದ್ದಾಗ ಅಬೂ ಲುಅ್‍ಲುಅ ಫೀರೋಝ್ ಎಂಬಾತ ಅವರಿಗೆ ಆರು ಸಲ ಇರಿದನು. ಅದು ಹಿಜ್ರ 23, ದುಲ್-ಹಿಜ್ಜ ತಿಂಗಳ 26ನೇ ದಿನ ಬುಧವಾರವಾಗಿತ್ತು (23 ಆಗಸ್ಟ್ 644), ರಕ್ತದ ಮಡುವಿನಲ್ಲಿ ಬಿದ್ದಿದ್ದ ಉಮರ್(ರ)ರನ್ನು ಸೂರ್ಯೋದಯಕ್ಕೆ ಮೊದಲೇ ಮನೆಗೆ ಒಯ್ಯಲಾಯಿತು. ಅಬೂ ಲುಅ್‍ಲುಅನನ್ನು ಸಹಾಬಿಗಳು ಹಿಡಿಯುವ ಮೊದಲೇ ಆತ ಚೂರಿಯಿಂದ ಇರಿದು ಆತ್ಮಹತ್ಯೆ ಮಾಡಿಕೊಂಡ. ಮರಣಶಯ್ಯೆಯಲ್ಲಿದ್ದ ಉಮರ್(ರ) ತಮ್ಮ ನಂತರ ಖಲೀಫ ಆಗಲು ಉಸ್ಮಾನ್, ಅಲೀ, ತಲ್ಹ, ಝುಬೈರ್, ಅಬ್ದುರಹ್ಮಾನ್ ಬಿನ್ ಔಫ್ ಮತ್ತು ಸಅದ್ ಬಿನ್ ಅಬೂ ವಕ್ಕಾಸ್ ಮುಂತಾದ ಆರು ಸಹಾಬಿಗಳನ್ನು ಆರಿಸಿದರು.