ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಮುಸ್ಲೀಮೇತರ ಟಿಪ್ಪಣಿಗಳು :
ಮಹಾತ್ಮಾಗಾಂಧಿಯ ವ್ಯಾಖ್ಯಾನ ಅಲ್ಲಾಹನ ಸಂದೇಶವಾಹಕರ ಕುರಿತು, ಅಲ್ಲಾಹನ ಸಂದೇಶವಾಹಕರ ಸರಳ ಜೀವನ. ತನ್ನನ್ನು ಸಾಮಾನ್ಯನೆಂದು ಪರಿಗಣಿಸುವ ಸಹಜ ಸ್ವಭಾವ, ವಚನಪಾಲನೆಯಲ್ಲಿರುವ ಅತಿಯಾದ ನಿಷ್ಠೆ, ತಮ್ಮ ಸಂಗಡಿಗರು ಮತ್ತು ಅನುಯಾಯಿಗಳ ಕುರಿತ ತೀವ್ರ ಕಾಳಜಿ, ಅಪೂರ್ವ ಎದೆಗಾರಿಕೆ, ಅತೀವ ನಿರ್ಭಯತೆ, ಅಲ್ಲಾಹನಲ್ಲಿರುವ ಅವನ ದೃಢ ವಿಶ್ವಾಸ ಮತ್ತು ಅವರ ಕರ್ತವ್ಯ ಪ್ರಜ್ಞೆಯು ಅವರನ್ನು ಜೀವನದ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ತಮ್ಮ ಗುರಿಯನ್ನು ತಲುಪುವಂತೆ ಮಾಡಿತೇ ಹೊರತು ಯಾವುದೇ ಖಡ್ಗ ಪ್ರಯೋಗವೂ ಅದನ್ನು ಸಿದ್ಧಿಸಲು ಸಾಧ್ಯವಿಲ್ಲ.
ಖ್ಯಾತ ಬರಹಗಾರ ಹಾಗೂ ನಾಟಕಕಾರ ಜಾರ್ಜ್ ಬರ್ನಾಡ್ ಷಾ (ಪ್ರವಾದಿ ಮಹಮ್ಮದ್(ಸ)ರ ಕುರಿತು ಹೇಳಿರುವುದು: ಒಂದು ವೇಳೆ (ಪ್ರವಾದಿ ಮಹಮ್ಮದ್(ಸ) ಅವರು ಇಂದು ಜೀವಂತವಾಗಿರುತ್ತಿದ್ದರೆ. ಆಧುನಿಕ ಜಗತ್ತು ಎದುರಿಸುತ್ತಿರುವ ಮಾನವ ಸಂಸ್ಕೃತಿಯನ್ನು ಸರ್ವನಾಶ ಮಾಡುವ ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಯಶಸ್ವಿಯಾಗುತ್ತಿದ್ದರು’.
ಅಮೆರಿಕಾದ ಖ್ಯಾತ ಕಾದಂಬರಿಕಾರ ಮೈಕೆಲ್ ಹೆಚ್ ಹಾರ್ಟ್ ಮಾನವ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರಿದ 100 ವ್ಯಕ್ತಿಗಳ ಪಟ್ಟಿಯಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರಿಗೆ ಮೊದಲನೇ ಸ್ಥಾನ ನೀಡಿದ್ದಾರೆ.
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರವಾದಿ ಮಹಮ್ಮದ್(ಸ) ಅವರನ್ನು ಮೊದಲ ಸ್ಥಾನ ನೀಡುವ ನನ್ನ ಆಯ್ಕೆ ಬಹಳಷ್ಟು ಓದುಗರಿಗೆ ಆಶ್ಚರ್ಯಗೊಳಿಸಬಹುದು. ಅದೇ ರೀತಿ ಬಹಳಷ್ಟೂ ಜನ ಇದಕ್ಕೆ ಸ್ಪಷ್ಟೀಕರಣ ಕೇಳಬಹುದು. ಆದರೆ ವಾಸ್ತವದಲ್ಲಿ ಪ್ರವಾದಿ ಮುಹಮ್ಮದ್(ಸ) ಅವರು ಇತಿಹಾಸದಲ್ಲಿ ಧಾರ್ಮಿಕ ಮತ್ತು ಜಾತ್ಯಾತೀತ ನೆಲೆಯಲ್ಲಿ ಯಶಸ್ಸುಕಂಡ ಏಕಮಾತ್ರ ವ್ಯಕ್ತಿಯಾಗಿದ್ದಾರೆ.
ಭಾರತೀಯ ಇತಿಹಾಸಕಾರ ದೇವಾನ್ ಚಂದ್ ಶರ್ಮಾ (ಪ್ರವಾದಿ ಮುಹಮ್ಮದ್(ಸ) ಅವರ ಕುರಿತು ಈ ರೀತಿ ಬರೆಯುತ್ತಾರೆ.ಮುಹಮ್ಮದ್ ಕರುಣೆಯ ಚಿಲುಮೆಯಾಗಿದ್ದರು. ಇವರ ಅನುಯಾಯಿಗಳ ಮೇಲೆ ಇವರ ಪ್ರಭಾವ ವರ್ಣಾತೀತ (ದೇವಾನ್ ಚಂದ್ ಶರ್ಮಾ, ದಿ ಪ್ರಾಫೆಟ್ಸ್, ಆದಿ ಕೊಲ್ಕತಾ 1935 ಪುಟ- 122)
ದೇ. ಜವರೇಗೌಡ – ವಿಶ್ರಾಂತ ಉಪಕುಲಪತಿ, ಮೈಸೂರು ವಿಶ್ವವಿದ್ಯಾಲಯ (ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ ಎಂಬ ಗ್ರಂಥದ ಮುನ್ನುಡಿಯಲ್ಲಿ) ಮಹಮ್ಮದ್ (ಸ್ರ) ರಂತಹ ಮಹಾಪ್ರವಾದಿಗಳ ಜೀವನ ಯಾತ್ರೆಯ ಪಥ ಸಸಿನವೂ ಅಲ್ಲ. ಸರಾಗವೂ ಅಲ್ಲ, ನಿಷ್ಕಪಟಕವೂ ಅಲ್ಲ ಎಂಬುದು ಲೋಕ ವೇದ್ಯ. ಅವರು ಮುಳ್ಳೀನ ಕಿರೀಟ ಧರಿಸಿ, ಮುಳ್ಳಿನ ಹಾವುಗೆಯ ಮೇಲೆ, ಅಗ್ನಿಜ್ವಾಲೆಯ ನಡುವೆ, ಕಂಡದ ಕೊಂಡದಲ್ಲಿ ನಡೆಯಬೇಕಾಗುತ್ತದೆ. ಅಲ್ಲಾಹನ ಪ್ರೀತಿ ಅವರಿಗೆ ಬಲು ಸುಲಭದಲ್ಲಿ ದೊರೆಯಲಿಲ್ಲ. ಅವರು ಅನುಭವಿಸಿದ ಕಷ್ಟ, ಸಂಕಷ್ಟಗಳಿಗೆ, ಜೀನ, ಬವಣೆಗಳಿಗೆ ಲೆಕ್ಕವಿಲ್ಲ. ದಿನ ಬೆಳಗಾದರೆ ಅವರು ಅಪಾಯದ ಅಂಚಿನಲ್ಲಿರುತ್ತಿದ್ದರು. ಭಾವುಕರಿಗೆ ಅದೊಂದು ಕಣ್ಣೀರಿನ ಕಥೆ, ವಿರೋಧಿಗಳು ಅವರ ಕಣ್ಣಿಗೆ ಮರಳು ಧೂಳುಗಳನ್ನು ತೂರಿದಾಗ, ಕಲ್ಲೆಸೆದು ಅವರ ಮೈಯಿಂದ ರಕ್ತ ಹರಿಯುತ್ತಿದ್ದಾಗ, ಅವರನ್ನು ಬಾಳಿಗೊಂದಿರಿದಾಗ, ತಮ್ಮಲ್ಲಿದ್ದುದನ್ನು ಪರರಿಗಿತ್ತು ತಾವು ಹಸಿದಾಗ, ತಮ್ಮ ಮಡದಿಯರನ್ನೂ, ಅಳಿಯಂದಿರನ್ನೂ ಅವರ ಮೇಲೆತ್ತಿ ಕಟ್ಟಿದಾಗ ಯಾವ ಓದುಗನಾದರೂ ಕಣ್ಣೀರಿನಲ್ಲಿ ಮೀಯದಿರುತ್ತಾನೆಯೇ? ನಾನಂತೂ ಅತ್ತಿದ್ದೇನೆ. ಅವರು ನನ್ನೆದುರಿಗೇ ಅಷ್ಟೆಲ್ಲ ಯಾತನೆಯನ್ನನುಭವಿಸುತ್ತಿರುವಂತೆ ನನಗೆ ವೇದನೆಯಾಗುತ್ತದೆ.
(ಪ್ರವಾದಿ ಮಹಮ್ಮದ್(ಸ)ರವರನ್ನು ಕುರಿತು ಪ್ರೊ. ರಾಮಕೃಷ್ಣರಾವ್ ಮಹಮ್ಮದ್(ಸ) ಮಹಾನ್ ಪ್ರವಾದಿ ಎಂಬ ಪುಸ್ತಕವನ್ನು ರಚಿಸಿದ್ದು ಅದರಲ್ಲಿ ಪ್ರವಾದಿ ಮಹಮ್ಮದ್(ಸ) ಶ್ಲಾಘಿಸಿದ್ದಾರೆ ಮತ್ತು ಆ ಪುಸ್ತಕದಲ್ಲಿ ಸ್ತ್ರೀ ವಿಮೋಚಕ, ಮಾನವ ಕುಲದ ವಿಮೋಚ, ಪ್ರಜಾಪ್ರಭುತ್ವದ ಸಂಸ್ಥಾಪಕ ಎಂದೆಲ್ಲಾ ಅವರು ತಮ್ಮ ಪುಸ್ತಕದಲ್ಲಿ ಅಲ್ಲಾಹನ ಅಂತಿಮ ಸಂದೇಶವಾಹಕರ ಕುರಿತು ಪ್ರಶಂಸಿದ್ದಾರೆ.
ಇಂತಹ ಪ್ರತಿಷ್ಠಿತ ವ್ಯಕ್ತಿಯನ್ನು ಅರಿಯುವುದು ನಮ್ಮ ಕರ್ತವ್ಯವಲ್ಲವೇ?
ಅಲ್ಲಾಹನಲ್ಲಿ ಮತ್ತು ಅಂತಿಮದಿನದಲ್ಲಿ ನಿರೀಕ್ಷೆಯನ್ನಿರಿಸಿಕೊಂಡಿರುವ ಮತ್ತು ಸತತವಾಗಿ ಅಲ್ಲಾಹನ ಸ್ಮರಣೆಯಲ್ಲಿರುವವರಿಗೆ ಅನುಸರಿಸಲು ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರಲ್ಲಿ ಉತ್ತಮ ಮಾದರಿಯಲ್ಲಿರುತ್ತದೆ (ಖುರ್‍ಆನ್ 33:21)
ಕೇವಲ ಅಲ್ಲಾಹನ ಆರಾಧನೆ ಮತ್ತು ಆಜ್ಞಾಪಾಲನೆಯತ್ತ ಆಹ್ವಾನಿಸಲು ಕಳುಹಿಸಿರುವ ಎಲ್ಲಾ ಸಂದೇಶವಾಹಕರುಗಳ ಪೈಕಿ ಮಹಮ್ಮದ್ (ಸ) ಅಂತಿಮ ಸಂದೇಶವಾಹಕರೆಂದು ಮುಸ್ಲೀಮರು ವಿಶ್ವಾಸವಿರಿಸುತ್ತಾರೆ.
ಇಂತಹ ಸಂದೇಶವಾಹಕರುಗಳ ಪೈಕಿ ಕೆಲವರನ್ನು ಇಲ್ಲಿ ಹೆಸರಿಸಬಹುದಾಗಿದೆ. ಉದಾ: ಆದಮ್ ನೂಹ್, ಇಬ್ರಾಹಿಂ, ಇಸ್ಮಾಯಿಲ್, ಇಸ್‍ಹಾಕ್, ಯಾಕೂಬ್, ಯುಸೂಫ್, ಮೂಸಾ, ದಾವೂದ್, ಸುಲೈಮಾನ್ ಮತ್ತು ಏಸು
ಕರುಣಾಮಯಿ :
ನಾವು (ಅಲ್ಲಾಹ್) ನಿಮ್ಮನ್ನು (ಮುಹಮ್ಮದ್ (ಸ) ಸಕಲ ಲೋಕಕ್ಕೆ ಕರುಣಾಮಯಿಯಾಗಿ ಕಳುಹಿಸಿರುತ್ತೇವೆ. (ಪವಿತ್ರ ಖುರ್‍ಆನ್ 21:107)
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಶಾಂತಿ ಇರಲಿ) ಹೇಳಿದರು :
“ನಡವಳಿಕೆಯಲ್ಲಿ ಯಾರು ಉತ್ತಮರೋ, ಅವರೇ ನಿಮ್ಮ ಪೈಕಿ ಅತ್ತ್ಯುತ್ತಮರು”
ಅಲ್ಲಾಹನ ಸಂದೇಶವಾಹಕರ (ಮೇಲೆ ಶಾಂತಿ ಇರಲಿ) ಹಲವಾರು ನುಡಿಗಳು ಮಾನವನ ವಿಶ್ವಾಸ ಮತ್ತು ಕರ್ಮಗಳ ನಡುವಿನ ಸಂಬಂಧಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿರುತ್ತಾರೆ.
ಉದಾ : ಅಲ್ಲಾಹನಲ್ಲಿ ಮತ್ತು ಅಂತಿಮದಿನದಲ್ಲಿ ವಿಶ್ವಾಸವಿರಿಸುವವನು ತನ್ನ ನೆರೆಹೊರೆಯವರಿಗೆ ತೊಂದರೆ ಕೊಡಬಾರದು ಮತ್ತು ಅತಿಥಿಗಳೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು ಮತ್ತು ಉತ್ತಮ ಮಾತುಗಳನ್ನೇ ಆಡಬೇಕು ಇಲ್ಲವೇ ಮೌನವಹಿಸಬೇಕು.
ಕ್ಷಮಾಭಾವ :
ಅವರು ಕ್ಷಮಿಸುವಂಥವರಾಗಲಿ ಮತ್ತು ಮನ್ನಿಸುವಂಥವರಾಗಲಿ ನಿಮ್ಮ ಪ್ರಭು ನಿಮ್ಮನ್ನು ಕ್ಷಮಿಸಿಬಿಡಲೆಂದು ನೀವು ಆಶಿಸುವುದಿಲ್ಲವೇ ? ಮತ್ತು ಅಲ್ಲಾಹನು ಮಹಾ ಕ್ಷಮಾಶೀಲನೂ, ಪರಮ ಕರುಣಾಮಯಿಯೂ ಆಗಿರುತ್ತಾನೆ. (ಪವಿತ್ರ ಖುರ್‍ಆನ್ 24:22)
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಶಾಂತಿ ಇರಲಿ) ಎಲ್ಲಾ ಮಾನವರ ಪೈಕಿ ಅತ್ಯಂತ ಕ್ಷಮಾಭಾವವನ್ನು, ಕರುಣಾ ಭಾವವನ್ನೂ ಹೊಂದಿದ್ದರು. ಯಾರಾದರೂ ಅವರನ್ನು (ಅವರ ಮೇಲೆ ಶಾಂತಿ ಇರಲಿ) ನಿಂದಿಸಿದಲ್ಲಿ, ಅವರನ್ನು ಕ್ಷಮಿಸುತ್ತಿದ್ದರು. ಅವರ (ಅವರ ಮೇಲೆ ಶಾಂತಿ ಇರಲಿ) ಮೇಲೆ ಹಾನಿ ಮಾಡಲು ಯತ್ನಿಸಿದಷ್ಟು ಅವರು (ಅವರ ಮೇಲೆ ಶಾಂತಿ ಇರಲಿ) ತಾಳ್ಮೆಯಿಂದಿರುತ್ತಿದ್ದರು.
“(ಓ ಮಹಮ್ಮದ್) ಕ್ಷಮಾಶೀಲರಾಗಿರಲಿ, ಒಳಿತನ್ನೇ ಬೋಧಿಸಿರಿ ಮತ್ತು ತಿಳಿಗೇಡಿಗಳನ್ನು ನಿರ್ಲಕ್ಷಿಸಿರಿ. (ಪವಿತ್ರ ಖುರ್‍ಆನ್ 7:199)
ಸಮಾನತೆ :
‘ನಿಶ್ಚಯವಾಗಿಯೂ ನಿಮ್ಮ ಪೈಕಿ ಅತ್ಯಧಿಕ ಧರ್ಮ ನಿಷ್ಠನೇ ಅಲ್ಲಾಹನ ದೃಷ್ಠಿಯಲ್ಲಿ ಅತೀ ಹೆಚ್ಚು ಗೌರವಕ್ಕೆ ಪಾತ್ರನು’ (ಪವಿತ್ರ ಖುರ್‍ಆನ್ 49:13)
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಶಾಂತಿ ಇರಲಿ) ಈ ಕೆಳಗಿನ ಹೇಳಿಕೆಯಲ್ಲಿ, ಎಲ್ಲಾ ಮಾನವರೂ ಅಲ್ಲಾಹನ ದೃಷ್ಠಿಯಲ್ಲಿ ಸಮಾನರು ಎಂಬುದು ಸ್ಪಷ್ಟವಾಗುತ್ತದೆ.
‘ಎಲ್ಲಾ ಮಾನವರೂ ಅದಮ(ಅ ಸ) ಸಂತಾನರೇ ಮತ್ತು ಆದಮರು ಮಣ್ಣಿನಿಂದ ಸೃಷ್ಠಿಸಲ್ಪಟ್ಟರು. ಧರ್ಮ ನಿಷ್ಠತೆಯ ವಿನಃ ಅರಬರು ಅರಬೇತರರಿಗಿಂತ ಶ್ರೇಷ್ಟರಲ್ಲ. ಅಂತೆಯೇ ಬಿಳಿಯರು ಕರಿಯರಿಗಿಂತ ಶ್ರೇಷ್ಟರಲ್ಲ’
ತಾಳ್ಮೆ :
ಸತ್ಕರ್ಮಗಳೂ ದುಷ್ಕರ್ಮಗಳು ಏಕಸಮಾನವಲ್ಲ, ಕೆಡುಕನ್ನು ಒಳಿತಿನಿಂದ ಬಗೆಹರಿಸಿರಿ. ಹೀಗೆ ನಿಮ್ಮ ಶತ್ರುವೂ ನಿಮ್ಮ ಆಪ್ತಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ. (ಖುರ್‍ಆನ್ 41:34)
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಶಾಂತಿ ಇರಲಿ) ಮಾನವರಿಗೆ ಸಂಕಷ್ಟಗಳಲ್ಲಿ ತಾಳ್ಮೆಯಿಂದಿರಲು ಸಲಹೆ ನೀಡುತ್ತಿದ್ದರು.
ತನ್ನ ಪ್ರಾಬಲ್ಯತೆಯಿಂದ ಜನರ ಮೇಲೆ ಹಾನಿಯಾಗುವವನು ಪ್ರಬಲನಲ್ಲ : ಬದಲಾಗಿ ಕೋಪಾವಸ್ಥೆಯಲ್ಲಿ ತಾಳ್ಮೆ ವಹಿಸುವವನೇ ನಿಜವಾಗಿಯೂ ಪ್ರಬಲನು.
ಸೌಮ್ಯತೆ :
ಅಲ್ಲಾಹನ ಕೃಪೆಯಿಂದ ನೀವು ಜನರೊಂದಿಗೆ ಸೌಮ್ಯರಾಗಿರುವಿರಿ. ಒಂದು ವೇಳೆ ನೀವು ಜನರೊಂದಿಗೆ ಕಠಿಣರಾಗಿರುತ್ತಿದ್ದರೆ ಅಥವಾ ನಿರ್ದಯಿಯಾಗಿರುತ್ತಿದ್ದರೆ, ಅವರು ನಿಮ್ಮ ಸುತ್ತಮುತ್ತಲಿನಿಂದ ಚದುರಿ ಹೋಗಿರುತ್ತಿದ್ದರು. (ಪವಿತ್ರ ಖುರ್‍ಆನ್ 3:159)
ಸುಮಾರು 10 ವರ್ಷ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಶಾಂತಿ ಇರಲಿ) ಸೇವೆಗೈದ ಅವರ ಸಂಗಡಿಗರಲ್ಲೊಬ್ಬರು ಅವರ (ಅವರ ಮೇಲೆ ಶಾಂತಿ ಇರಲಿ) ಕುರಿತು ಹೇಳುತ್ತಾರೆ.
`ನಾನು ಏನೇ ಮಾಡಲಿ ಅಲ್ಲಾಹನ ಸಂದೇಶವಾಹಕರು ಎಂದಿಗೂ ನನ್ನನ್ನು ಹೀಗೇಕೆ ಮಾಡಿದೆನೆಂದು ಜರೆಯಲಿಲ್ಲ. ನಾನೇನಾದರೂ ಮಾಡುವಲ್ಲಿ ವಿಫಲನಾದರೂ, ನನ್ನ ವಿಫಲತೆಯನ್ನು ಪ್ರಶ್ನಿಸಲಿಲ್ಲ ಎಲ್ಲಾ ಜನರ ಪೈಕಿ ಅವರು ಅತ್ಯಂತ ಆತ್ಮೀಯರಾಗಿದ್ದರು’.
ಔದಾರ್ಯತೆ :
ಕರುಣಾಮಯಿ ಅಲ್ಲಾಹನ ದಾಸರು ಭೂಮಿಯಲ್ಲಿ ಔದಾರ್ಯಪೂರ್ಣರಾಗಿ ನಡೆಯುತ್ತಾರೆ ಮತ್ತು ತಿಳಿಗೇಡಿಗಳು ತಕರಾರಿಗೆ ಬಂದಾಗ ಅವರ ಉತ್ತರ `ಶಾಂತಿ’ ಎಂದಾಗಿರುತ್ತದೆ. (ಪವಿತ್ರ ಖುರ್‍ಆನ್ 25 : 63)
ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಶಾಂತಿ ಇರಲಿ) ಕಂಡು ಜನರು ಗೌರವಾದರಗಳೊಂದಿಗೆ ನಿಂತುಕೊಳ್ಳುವುದನ್ನು ಅವರು (ಅವರ ಮೇಲೆ ಶಾಂತಿ ಇರಲಿ) ಬಯಸುತ್ತಿರಲಿಲ್ಲ. ಜನಸಮೂಹದ ನಡುವೆ ಕುಳಿತುಕೊಳ್ಳಲು ಅವರಿಗೆ ಯಾವುದೇ ಉನ್ನತ ಅಥವಾ ಮಹತ್ವದ ಸ್ಥಳದ ಅವಶ್ಯಕತೆಯಿರಲಿಲ್ಲ ಬದಲಾಗಿ ಅವಕಾಶವಿರುವಲ್ಲಿ ಎಲ್ಲೆಂದರಲ್ಲಿ ಆಸೀನರಾಗುತ್ತಿದರು. ಅನ್ಯರ ನಡುವೆ ವಿಶೇಷವಾಗಿ ಕಾಣಲು ಯಾವುದೇ ವಿಶೇಷ ವಸ್ತ್ರಾಭೂಷಣಗಳನ್ನು ಅವರು ಧರಿಸಿದವರಲ್ಲ. ಅವರು (ಅವರ ಮೇಲೆ ಶಾಂತಿ ಇರಲಿ) ಬಡವ-ಬಲ್ಲಿದರೆನ್ನದೆ ಎಲ್ಲರೊಂದಿಗೂ ಬೆರೆತು ಹೋಗುತ್ತಿದ್ದರು. ಹಿರಿಯರೊಂದಿಗೆ ಕುಳಿತು ಚರ್ಚಿಸುತ್ತಿದ್ದರು ಮತ್ತು ವಿಧವೆಯರಿಗೆ ಸಹಕರಿಸುತ್ತಿದ್ದರು. ಅಪರಿಚಿತರು ಇವರನ್ನು(ಅವರ ಮೇಲೆ ಶಾಂತಿ ಇರಲಿ) ಜನಸಮೂಹದಿಂದ ಪ್ರತ್ಯೇಕಿಸಿ ಕಂಡುಹಿಡಿಯುವುದು ಸಾಧ್ಯವಿರಲಿಲ್ಲ. ಅಷ್ಟೊಂದು ಸಾಧಾರಣ ವ್ಯಕ್ತಿಯಾಗಿದ್ದರು.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಶಾಂತಿ ಇರಲಿ) ಎಷ್ಟೊಂದು ನಮ್ರರಾಗಿದ್ದರೆಂದರೆ, ಕೇವಲ ಅಲ್ಲಾಹನಿಗೆ ಅರ್ಪಿಸಬೇಕಾದ ಆರಾಧನ ಕರ್ಮಗಳನ್ನು ಜನರೆಲ್ಲಾದರೂ ತಮಗೆ ಅರ್ಪಿಸಬಹುದೆಂದು ಭಯಪಡುತ್ತಿದ್ದರು. ಅವರು (ಅವರ ಮೇಲೆ ಶಾಂತಿ ಇರಲಿ) ಈ ರೀತಿ ಹೇಳಿರುವಂತೆಯೂ ವರದಿಯಾಗುತ್ತದೆ.
`ಕ್ರಿಶ್ಚಿಯನ್ನರು ಏಸುವನ್ನು ಶ್ಲಾಘಿಸುವಲ್ಲಿ ಅತಿರೇಕವೆಸಗಿದಂತೆ, ನೀವು ನನ್ನನ್ನು ಶ್ಲಾಘಿಸುವಲ್ಲಿ ಅತಿರೇಕವೆಸಗದಿರಿ. ನಾನಂತೂ ಪ್ರಭುವಿನ ಬರಿಯ ದಾಸನಾಗಿರುತ್ತೇನೆ. ಅಂತೆಯೇ, ನನ್ನನ್ನು ಅಲ್ಲಾಹನ ದಾಸನೂ ಮತ್ತು ಅಲ್ಲಾಹನ ಸಂದೇಶವಾಹಕನೆಂದು ಕರೆಯಿರಿ.
ಆದರ್ಶ ಪತಿ :
`ಅವರೊಂದಿಗೆ (ನಿಮ್ಮ ಪತ್ನಿಯೊಂದಿಗೆ) ಸೌಹಾರ್ದಮಯ ಜೀವನ ನಡೆಸಿರಿ’ (ಪವಿತ್ರ ಖುರ್‍ಆನ್ 4:19)
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಶಾಂತಿ ಇರಲಿ) ಪ್ರೀತಿಯ ಪತ್ನಿ, ಆಯಿಷಾ ತಮ್ಮ ಪತಿಯ ಕುರಿತು ಹೇಳುತ್ತಾರೆ
`ಅವರು (ಅವರ ಮೇಲೆ ಶಾಂತಿ ಇರಲಿ) ಸದಾ ಮನೆಗೆಲಸಗಳಲ್ಲಿ ಸಹಕರಿಸುತ್ತಿದ್ದರು ಮತ್ತು ಅವಶ್ಯಕತೆಯಿದ್ದಲ್ಲಿ ತಮ್ಮ ಬಟ್ಟೆಯನ್ನು ತಾವೇ ಹೊಲಿದುಕೊಳ್ಳುತ್ತಿದ್ದರು. ತಮ್ಮ ಚಪ್ಪಲಿಯನ್ನು ರಿಪೇರಿ ಮಾಡಿಕೊಳ್ಳುತ್ತಿದ್ದರು ಮತ್ತು ಕಸವನ್ನೂ ಗುಡಿಸುತ್ತಿದ್ದರು. ಅವರು ತಮ್ಮ ಬಳಿ ಇದ್ದ ಮೇಕೆಗಳ ಹಾಲನ್ನು ಕರೆಯುತ್ತಿದ್ದರು. ಅವುಗಳನ್ನು ಸಾಕುವುದರಲ್ಲಿ ಮನೆಗೆಲಸಗಳಲ್ಲಿ ಭಾಗವಹಿಸುವುದು ಅವರ ಚಟುವಟಿಕೆಗಳಾಗಿದ್ದವು’.
ಅವರು (ಅವರ ಮೇಲೆ ಶಾಂತಿ ಇರಲಿ) ಸ್ವತಃ ಆದರ್ಶ ಪತಿಯಾಗಿರುವುದಲ್ಲದೇ, ತಮ್ಮ ಅನುಯಾಯಿ ಗಳಿಗೂ ಅಂತೆಯೇ ಇರುವಂತೆ ಉಪದೇಶಿಸುತ್ತಿದ್ದರು.
`ಸತ್ಯ ವಿಶ್ವಾಸಿಗಳ ಪೈಕಿ ನಮ್ಮ ನಡವಳಿಕೆಗಳಲ್ಲಿ ಯಾರು ಉತ್ತಮರೋ, ಅವರೇ ನಿಜವಾಗಿಯೂ ಉತ್ತಮರು ಮತ್ತು ಅವರಲ್ಲಿಯೂ ಉತ್ತಮರಾರೆಂದರೆ ತಮ್ಮ ಪತ್ನಿಯೊಂದಿಗೆ ಉತ್ತಮ ನಡವಳಿಕೆಯನ್ನು ಹೊಂದಿರುವವರು.
ಅತ್ಯುತ್ತಮ ಮಾದರಿ :
ನಿಶ್ಚಯವಾಗಿಯೂ `ಓ ಮಹಮ್ಮದರೇ’ ನೀವು ನಡೆತೆಯ ಅತ್ಯುನ್ನತ ಮಟ್ಟದಲ್ಲಿರುವಿರಿ. (ಪವಿತ್ರ ಖುರ್‍ಆನ್ 68:4)
ಈ ಮೇಲೆ ತಿಳಿಸಿರುವ ಸಂಗತಿಯು ಮಹಮ್ಮದ್‍ರು (ಅವರ ಮೇಲೆ ಶಾಂತಿ ಇರಲಿ) ಹೇಗೆ ಜೀವನ ನಡೆಸಿರುವರೆಂಬುದಕ್ಕಿರುವ ಒಂದು ಉದಾಹರಣೆಯಷ್ಟೇ ಇಸ್ಲಾಮಿನ ನಕ್ಷೆಯನ್ನು ಮಾಧ್ಯಮಗಳು ತಿರುಚಿ ಪ್ರದರ್ಶಿಸುತ್ತಿರುವುದನ್ನು ಮತ್ತು ಪದೇ ಪದೇ ಅವುಗಳನ್ನೇ ಮರುಕಳಿಸುತ್ತಿರುವುದನ್ನು ಕಂಡು ಹಲವರಿಗೆ ಈ ಕರುಣೆ, ಅನುಕಂಪೆಗಳ ಚಿತ್ರಣವು ಅನಿರೀಕ್ಷಿತವಾಗಿ ಗೋಚರಿಸಬಹುದು.
ನಿಮ್ಮ ಮಹಿಳೆಯರೊಂದಿಗೆ ಕರುಣೆಯಿಂದ ವರ್ತಿಸಿರಿ. ಅವರು ನಿಮ್ಮ ಸಹಾಯಕಿಯರಾಗಿದ್ದಾರೆ, ಅವರು ತಮ್ಮ ವ್ಯವಹಾರಗಳನ್ನು ತಾವೇ ನೋಡಿಕೊಳ್ಳಲು ಶಕ್ತರಲ್ಲ. ನಿಮ್ಮ ಪತ್ನಿಯರ ಬಗ್ಗೆ ಅಲ್ಲಾಹನನ್ನು ಭಯಪಡಿರಿ ನೀವು ಅಲ್ಲಾಹನ ಜಾಮೀನಿನೊಂದಿಗೆ ಅವರನ್ನು ವರಿಸಿರುವಿರಿ. ಅಲ್ಲಾಹನ ವಚನದಂತೆ ಅವರನ್ನು ನಿಮಗೆ ಧರ್ಮ ಸಮ್ಮತವಾಗಿ ಮಾಡಿಕೊಂಡಿರುವಿರಿ.