”ಅಲ್ಲಾಹ”ನು ಮುಸಲ್ಮಾನರ ದೇವರು ಮಾತ್ರ ಎಂದು ಹೆಚ್ಚಿನವರು ಭಾವಿಸುತ್ತಾರೆ. ಇದೊಂದು ತಪ್ಪುಕಲ್ಪನೆಯಾಗಿದೆ. ”ಅಲ್ಲಾಹ್” ಎಂಬುವುದು ಅರಬ್ಬಿ ಪದ. ಇದರ ಅರ್ಥ ‘ದೇವರು’ ಎಂದಾಗಿದೆ. ಅರಬ್ಬಿ ಭಾಷೆ ಮಾತನಾಡುವ ಯಹೂದಿ ಮತ್ತು ಕ್ರೈಸ್ತರೂ ”ದೇವರು” ಎಂದು ಸೂಚಿಸಲು ”ಅಲ್ಲಾಹ್” ಎಂಬ ಪದವನ್ನೇ ಬಳಸುತ್ತಾರೆ.
ನೀರು(ಕನ್ನಡ), ವಾಟರ್(ಇಂಗ್ಲಿಷ್), ಪಾನಿ(ಹಿಂದಿ), ಮಾಅ(ಅರಾಬಿಕ್) ಎಲ್ಲವೂ ಒಂದೇ ವಸ್ತುವನ್ನು ಸೂಚಿಸುತ್ತದೆ. ಹೀಗೆ ಕೇವಲ ಸೂಚಿಸಲು ಉಪಯೋಗಿಸುವ ಭಾಷೆಯ ಬದಲಾವಣೆಯಿಂದ ಒಂದು ಲೋಟದಲ್ಲಿರುವ ನೀರು ತನ್ನ ಗುಣವನ್ನು ಬದಲಾಯಿಸಲು ಸಾಧ್ಯವಿಲ್ಲ. ದೇವರು(ಕನ್ನಡ), ಗಾಡ್(ಇಂಗ್ಲಿಷ್) ಮತ್ತು ಅಲ್ಲಾಹ್(ಅರಾಬಿಕ್) ಎಲ್ಲವೂ ನಮ್ಮ, ನಿಮ್ಮೆಲ್ಲರನ್ನು ಸೃಷ್ಟಿಸಿರುವ ಜಗದೊಡೆಯನನ್ನೇ ಸೂಚಿಸುತ್ತವೆ.
ಅಲ್ಲಾಹನ ಅಥವಾ ದೇವನ ಗುಣಲಕ್ಷಣಗಳೇನು?
ಖುರಾನಿನ ಅಧ್ಯಾಯ 112. ಅಲ್ ಇಖ್ಲಾಸ್(ಏಕನಿಷ್ಠೆ)ಯಲ್ಲಿ ಅಲ್ಲಾಹನು ತನ್ನ ಕುರಿತಾಗಿ ಹೇಳುತ್ತಾನೆ,
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ; ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು); ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು; ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ; ಯಾರೂ ಅವನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. (112:1 – 4)
ಮೇಲೆ ಓದಿದಾಗ ಸ್ಪಷ್ಟವಾಗುವ ವಿಚಾರ:
- ದೇವನು ಏಕೈಕನು ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.
- ಅವನು ನಿರಪೇಕ್ಷನು ಅಂದರೆ ಮಾನವರಾದಂತಹ ನಾವು ಅಶಕ್ತರು ನಮಗೆ ಶಕ್ತಿ ಪಡೆಯಲು ಆಹಾರಬೇಕು, ಹೆಚ್ಚು ಕೆಲಸ ಮಾಡಿದಾಗ ನಮಗೆ ಆಯಾಸವಾಗುತ್ತದೆ. ಆದರೆ ದೇವನು ಸರ್ವಶಕ್ತನು ಆದ್ದರಿಂದ ಆತನಿಗೆ ಆಹಾರ, ನಿದ್ರೆ, ಕುಟುಂಬ, ಮಡದಿ, ಮಕ್ಕಳು ಮುಂತಾದ ಎಲ್ಲಾ ಬೇಡಿಕೆಗಳ ಅವಶ್ಯಕತೆಯಿಲ್ಲ. ದೇವನಿಗೆ ಆಯಾಸವಾಗುವುದಿಲ್ಲ. ಆಯಾಸವಿಲ್ಲದೇ ಇದ್ದಾಗ ನಿದ್ರೆಯ ಮಾತೇ ಇಲ್ಲ ಆದ್ದರಿಂದ ದೇವನು ನಿದ್ರಿಸುವುದಿಲ್ಲ, ದೇವನಿಗೆ ಭೋಜನದ ಅಶ್ಯಕತೆ ಇಲ್ಲ ಆದ್ದರಿಂದ ಅವನು ಭೋಜನ ಮಾಡುವುದಿಲ್ಲ, ಮಾತಪಿತರಾಗಲಿ, ಮಡದಿ ಮಕ್ಕಳನ್ನಾಗಲಿ ಅವನು ಹೊಂದಿರುವುದಿಲ್ಲ.
- ಮರೆಯುವಿಕೆ ಎಂಬುವುದು ಆತನಿಗಿಲ್ಲ ಅಥವಾ ಆತನಿಂದ ಯಾವುದೇ ತಪ್ಪು ಸಂಭವಿಸದು.
- ಎಲ್ಲ ಮಾನವರು ಆತನ ದೃಷ್ಟಿಯಲ್ಲಿ ಸರಿಸಮಾನರು. ಬಣ್ಣ, ಜಾತಿ-ಮತ, ಕುಲಗೋತ್ರ, ಮಹಿಮೆ ಅಥವಾ ವಂಶಗಳ ಆಧಾರದಲ್ಲಿ ಯಾರ ಮೇಲೂ ತಾರತಮ್ಯ ಮಾಡಲಾಗದು.