ಅಲೀ(ರ) ಹಿಜರಿ ಪೂರ್ವ 23 ರಜಬ್ 13 ರಂದು (ಕ್ರಿ.ಶ.599 ಮಾರ್ಚ್ 17) ಮಕ್ಕಾದಲ್ಲಿ ಹುಟ್ಟಿದರು. ಅವರು ಮಕ್ಕಾದಲ್ಲೇ ಬೆಳೆದರು. ಅವರು ಅಬೂತಾಲಿಬರ ಗಂಡು ಮಕ್ಕಳಲ್ಲಿ ಚಿಕ್ಕವರಾಗಿದ್ದರು. ಒಮ್ಮೆ ಮಕ್ಕಾದಲ್ಲಿ ತೀವ್ರ ಬರಗಾಲ ಉಂಟಾಗಿ ಅನ್ನಕ್ಕೆ ಹಾಹಾಕಾರವುಂಟಾಯಿತು. ಅಬೂತಾಲಿಬರಿಗೆ ತಮ್ಮ ಮಕ್ಕಳನ್ನು ಸಾಕುವುದು ಕಷ್ಟವಾಯಿತು. ಆಗ ಪ್ರವಾದಿ(ಸ) ಮತ್ತು ಅಬ್ಬಾಸ್(ರ) ಅಬೂತಾಲಿಬರ ಬಳಿಗೆ ಹೋಗಿ ಅವರ ಇಬ್ಬರು ಮಕ್ಕಳನ್ನು ಸಾಕುವ ಹೊಣೆಯನ್ನು ವಹಿಸಿಕೊಂಡರು. ಪ್ರವಾದಿ(ಸ) ಅಲೀ(ರ)ರನ್ನು ತೆಗೆದುಕೊಂಡರೆ ಅಬ್ಬಾಸ್(ರ) ಜಅಫರ್(ರ)ರನ್ನು ತೆಗೆದುಕೊಂಡರು. ಹೀಗೆ ಅಲೀ(ರ) ಪ್ರವಾದಿ(ಸ)ರವರ ಮನೆಯಲ್ಲೇ ಬೆಳೆದು ದೊಡ್ಡವರಾದರು. ಪ್ರವಾದಿ(ಸ)ರವರ ಎಲ್ಲಾ ಸ್ವಭಾವಗಳೂ ಅವರಲ್ಲಿ ಮೈಗೂಡಿಕೊಂಡಿತ್ತು.
· ಇಸ್ಲಾಮ್ ಸ್ವೀಕಾರ:
ಪ್ರವಾದಿ(ಸ)ರಿಗೆ ಪ್ರವಾದಿತ್ವ ಸಿಕ್ಕಿದಾಗ ಅಲೀ(ರ)ರಿಗೆ ಹತ್ತು ವರ್ಷ ಪ್ರಾಯ. ಪ್ರವಾದಿ(ಸ)ರವರು ಅವರಿಗೆ ಇಸ್ಲಾಮಿನ ಆಹ್ವಾನವಿತ್ತಾಗ ಅವರು ಅದನ್ನು ಮನಃಪೂರ್ವಕ ಸ್ವೀಕರಿಸಿದರು. ಅವರು ಚಿಕ್ಕ ಪ್ರಾಯದಲ್ಲೇ ಇಸ್ಲಾಮ್ ಸ್ವೀಕರಿಸಿದರು. ಅವರು ಇಸ್ಲಾಮ್‌ಗೆ ಪ್ರವೇಶಿಸಿದ ಎರಡನೇ ಅಥವಾ ಮೂರನೇ ವ್ಯಕ್ತಿಯಾಗಿದ್ದರು. ಅವರು ಅಬಿಸೀನಿಯಾಗೆ ಹಿಜ್ರ ಹೋಗಿರಲಿಲ್ಲ. ಪ್ರವಾದಿ(ಸ)ರವರ ಕುಟುಂಬವನ್ನು ಮುಶ್ರಿಕರು ಮೂರು ವರ್ಷಗಳ ಕಾಲ ಶಅಬ್ ಅಬೀ ತಾಲಿಬ್ ಕಣಿವೆಯಲ್ಲಿ ದಿಗ್ಬಂಧನದಲ್ಲಿರಿಸಿದಾಗ ಅಲೀ(ರ) ಕೂಡ ಅವರ ಜೊತೆಗಿದ್ದರು. ಪ್ರವಾದಿ(ಸ) ದಅವಾ ಮಾಡಲು ತಾಇಫ್‌ಗೆ ಹೋದಾಗಲೂ ಅಲೀ(ರ) ಅವರನ್ನು ಹಿಂಬಾಲಿಸಿದ್ದರು.
· ಹಿಜ್ರ:
ಪ್ರವಾದಿ(ಸ) ಮದೀನಕ್ಕೆ ಹಿಜ್ರ ಹೋಗಲು ನಿರ್ಧರಿಸಿದ ರಾತ್ರಿ ಮುಶ್ರಿಕರು ದಾರುನ್ನದ್ವದಲ್ಲಿ ಒಟ್ಟುಗೂಡಿ ಪ್ರವಾದಿ(ಸ)ರನ್ನು ಕೊಲ್ಲುವ ಪಿತೂರಿ ನಡೆಸಿದರು. ಎಲ್ಲಾ ಗೋತ್ರಗಳಿಂದಲೂ ಒಬ್ಬೊಬ್ಬ ಯುವಕ ಅವರನ್ನು ಇರಿದು ಕೊಲ್ಲುವುದೆಂದು ತೀರ್ಮಾನಿಸಲಾಯಿತು. ಇದರಿಂದ ಅವರ ಕೊಲೆಯ ಆರೋಪ ಎಲ್ಲಾ ಗೋತ್ರಗಳ ಮೇಲೂ ಇರುವುದರಿಂದ ಈ ಎಲ್ಲಾ ಗೋತ್ರಗಳೊಡನೆ ಪ್ರತೀಕಾರ ತೀರಿಸಲು ಹಾಶಿಮ್ ಗೋತ್ರಕ್ಕೆ ಸಾಧ್ಯವಾಗಲಾರದು ಎಂದು ಅವರು ಉಪಾಯ ಹೂಡಿದ್ದರು. ಹೀಗೆ ಈ ಎಲ್ಲಾ ಯುವಕರು ಪ್ರವಾದಿ(ಸ)ರವರ ಮನೆಯ ಸುತ್ತ ಕಾಯುತ್ತಾ ಹೊಂಚು ಹಾಕಿ ಕುಳಿತರು. ಇತ್ತ ಜಿಬ್ರೀಲ್(ಅ) ಪ್ರವಾದಿ(ಸ)ರಿಗೆ ಶತ್ರುಗಳ ಪಿತೂರಿಯ ಬಗ್ಗೆ ತಿಳಿಸಿದರು. ಆಗ ಪ್ರವಾದಿ(ಸ) ಅಲೀ(ರ)ರನ್ನು ತಮ್ಮ ಹಾಸಿಗೆಯಲ್ಲಿ ಮಲಗಿಸಿ ಮನೆಯಿಂದ ಪಲಾಯನ ಮಾಡಿದರು. ಅಲೀ(ರ) ಪ್ರವಾದಿ(ಸ)ರನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಾಸಿಗೆಯಲ್ಲಿ ಮಲಗಿದರು.
ಮೂರು ದಿನಗಳ ನಂತರ ಅಲೀ(ರ) ಮದೀನಕ್ಕೆ ಹಿಜ್ರ ಹೊರಟರು. ಆಗ ಅವರ ಪ್ರಾಯ 22 ಆಗಿತ್ತು. ಅವರ ಜೊತೆಗೆ ತಾಯಿ ಫಾತಿಮ ಬಿನ್ತ್ ಅಸದ್, ಪತ್ನಿ ಫಾತಿಮ ಬಿನ್ತ್ ಮುಹಮ್ಮದ್(ಸ) ಮತ್ತು ಫಾತಿಮ ಬಿನ್ತ್ ಝುಬೈರ್ ಇದ್ದರು. ಇವರು ಕೆಲವೇ ದಿನಗಳಲ್ಲಿ ಮದೀನ ತಲುಪಿದರು. ಮದೀನದಲ್ಲಿ ಪ್ರವಾದಿ(ಸ)ರವರು ಒಬ್ಬೊಬ್ಬ ಮುಹಾಜಿರರನ್ನು ಒಬ್ಬೊಬ್ಬ ಅನ್ಸಾರರೊಂದಿಗೆ ಸಹೋದರರನ್ನಾಗಿ ಮಾಡಿದರೆ ಅಲೀ(ರ)ರನ್ನು ಸ್ವಯಂ ತನ್ನ ಸಹೋದರನನ್ನಾಗಿ ಮಾಡುತ್ತಾ ಹೇಳಿದರು, “ನೀನು ಇಹಲೋಕದಲ್ಲೂ ಪರಲೋಕದಲ್ಲೂ ನನ್ನ ಸಹೋದರನಾಗಿರುವೆ.”
· ಯುದ್ಧಗಳು:
ತಬೂಕ್ ಯುದ್ದ ಬಿಟ್ಟು ಇತರೆಲ್ಲಾ ಯುದ್ಧಗಳಲ್ಲಿ ಅಲೀ(ರ) ಪಾಲ್ಗೊಂಡಿದ್ದರು. ಅವರು ಬಹಳ ಧೀರ ಮತ್ತು ಶೂರರಾಗಿದ್ದರು. ಖಂದರ್ ಮತ್ತು ಖೈಬರ್ ಯುದ್ಧಗಳಲ್ಲಿ ಅವರು ತಮ್ಮ ಶೌರ್ಯವನ್ನು ಪೂರ್ಣರೂಪದಲ್ಲಿ ಪ್ರದರ್ಶಿಸಿದ್ದರು. ಬದ್ರ್ ಯುದ್ಧದಲ್ಲಿ ಅವರು ವಲೀದ್ ಬಿನ್ ಉತ್ಪ ಸೇರಿದಂತೆ 20 ಮುಶಿಕರ ಕಥೆ ಮುಗಿಸಿದ್ದರು. ಉಹುದ್ ಯುದ್ಧದಲ್ಲಿ ಅವರು ಕುರೈಶರ ಧ್ವಜವಾಹಕರಾದ ತಲ್ಹ ಬಿನ್ ಅಬ್ದುಲ್ ಉಝ್ಝನನ್ನು ಸಂಹಾರ ಮಾಡಿದ್ದರು. ಖೈಬರ್ ಯುದ್ಧದಲ್ಲಿ ಎರಡು ಬಾರಿ ಮುಸ್ಲಿಮರು ಯಹೂದಿಗಳ ಕೋಟೆಯನ್ನು ನುಸುಳುವಲ್ಲಿ ವಿಫಲರಾದಾಗ ಪ್ರವಾದಿ(ಸ) ಹೇಳಿದರು: “ನಾನು ಧ್ವಜವನ್ನು ಒಬ್ಬ ವ್ಯಕ್ತಿಗೆ ಕೊಡುತ್ತೇನೆ. ಅವನನ್ನು ಅಲ್ಲಾಹು ಪ್ರೀತಿಸುತ್ತಾನೆ ಮತ್ತು ಅವನು ಅಲ್ಲಾಹನನ್ನು ಪ್ರೀತಿಸುತ್ತಾನೆ. ಅವನು ಈ ಕೋಟೆಯನ್ನು ಜಯಿಸಲಿದ್ದಾನೆ.” ಅವರು ಧ್ವಜವನ್ನು ಅಲೀ(ರ)ರಿಗೆ ನೀಡಿದರು. ಅಲೀ(ರ) ಕೋಟೆಯನ್ನು ಜಯಿಸಿದರು. ಅವರು ಯುದ್ಧದಲ್ಲಿ ಕೋಟೆಯ ಬಾಗಿಲನ್ನೇ ತನ್ನ ಗುರಾಣಿಯನ್ನಾಗಿ ಮಾಡಿಕೊಂಡರೆಂದು ಹೇಳಲಾಗುತ್ತದೆ.
· ಖಿಲಾಫತ್
ಉಸ್ಮಾನ್(ರ)ರವರ ಹತ್ಯೆಯ ಬಳಿಕ ಹಿಜರಿ 35, ದುಲ್-ಹಿಜ್ಜ 25ನೇ ದಿನ ಮದೀನಾದಲ್ಲಿ ಅಲೀ(ರ)ರನ್ನು ಖಲೀಫರಾಗಿ ಆರಿಸಲಾಯಿತು. ಮದೀನದಲ್ಲಿದ್ದವರೆಲ್ಲರೂ ಅಲೀ(ರ)ರಿಗೆ ಬೈಅತ್ ಮಾಡಿದರು. ಉಸ್ಮಾನ್(ರ)ರವರ ವಿರುದ್ಧ ಪಿತೂರಿ ನಡೆಸಿದವರೂ ಬೈಅತ್ ಮಾಡಿದರು. ಆ ಕಾಲದಲ್ಲಿ ಇಸ್ಲಾಮಿ ಸಾಮ್ರಾಜ್ಯವು ಪೂರ್ವದಲ್ಲಿ ಇರಾನಿನ ತನಕ, ಪಶ್ಚಿಮದಲ್ಲಿ ಈಜಿಪ್ಟಿನ ತನಕ ಮತ್ತು ಸಂಪೂರ್ಣ ಅರೇಬಿಯನ್ ಉಪದ್ವೀಪವನ್ನು ಒಳಗೊಂಡು ವಿಸ್ತಾರವಾಗಿತ್ತು. ಇತರ ಕೆಲವು ಪ್ರದೇಶಗಳಲ್ಲಿ ಮುಸ್ಲಿಮರಿಗೆ ಪೂರ್ಣವಾದ ಪ್ರಾಬಲ್ಯ ಸಿಕ್ಕಿರಲಿಲ್ಲ.
· ಜಮಲ್ ಯುದ್ಧ:
ಅಲೀ(ರ) ಖಲೀಫ ಆಗಿ ಕೆಲವೇ ತಿಂಗಳಲ್ಲಿ (ಹಿ 36) ಜಮಲ್ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಅಲೀ(ರ)ರಿಗೆ ವಿರುದ್ಧ ಪಕ್ಷದಲ್ಲಿ ತಲ್ಹ(ರ), ಝುಬೈರ್(ರ) ಮತ್ತು ಉಮ್ಮುಲ್ ಮುಅಮಿನೀನ್ ಆಯಿಶ(ರ) ಇದ್ದರು.
ಅಲೀ(ರ) ಖಲೀಫರಾದ ಬಳಿಕ ಕೆಲವು ರಾಜ್ಯಪಾಲರನ್ನು ಬದಲಾಯಿಸಿದರು. ಆದರೆ ಸಿರಿಯಾದ ರಾಜ್ಯಪಾಲರಾಗಿದ್ದ ಮುಆವಿಯ(ರ) ಕೆಳಗಿಳಿಯಲು ಒಪ್ಪಲಿಲ್ಲ. ಇದಕ್ಕೆ ಮುಂಚೆ ಉಸ್ಮಾನ್(ರ)ರವರ ಕೊಲೆಗಾರರನ್ನು ಪತ್ತೆ ಹಚ್ಚಿ ಪ್ರತೀಕಾರ ತೀರಿಸಬೇಕು ಎನ್ನುವುದು ಅವರ ಮನವಿಯಾಗಿತ್ತು. ಆದರೆ ಉಸ್ಮಾನ್(ರ)ರ ಕೊಲೆಗಾರರನ್ನು ಪತ್ತೆಹಚ್ಚುವುದು ಸುಲಭವಾಗಿರಲಿಲ್ಲ. ಅವರಲ್ಲಿ ಕೆಲವರು ಉಸ್ಮಾನ್(ರ) ಹತ್ಯೆಯಾಗುತ್ತಿದ್ದಂತೆ ಮದೀನ ಬಿಟ್ಟು ಓಡಿದ್ದರು. ಕೆಲವು ವರದಿಗಳಲ್ಲಿರುವಂತೆ ಅವರ ಪೈಕಿ ಸುಮಾರು 2000ದಷ್ಟು ಮಂದಿ ಸೇನೆಯಲ್ಲಿದ್ದರು. ಆ ಸಮಯದಲ್ಲಿ ಹೆಚ್ಚಿನ ಸಹಾಬಾಗಳು ಮದೀನದ ಹೊರಗಿದ್ದರು. ಪ್ರವಾದಿ(ಸ)ರವರ ಪತ್ನಿಯರು ಸೇರಿದಂತೆ ಅನೇಕ ಮಂದಿ ಹಜ್ಜ್ ನಲ್ಲಿದ್ದರು.
ಅಲೀ(ರ)ರವರ ಬೈಅತ್ ನಡೆದು ನಾಲ್ಕು ತಿಂಗಳುಗಳಾದರೂ ಉಸ್ಮಾನ್(ರ)ರವರ ಕೊಲೆಗಾರರ ವಿರುದ್ಧ ಪ್ರತೀಕಾರ ಜರುಗದಿರುವುದರಿಂದ ತಲ್ಹ(ರ) ಮತ್ತು ಝುಬೈರ್(ರ) ಮಕ್ಕಾಗೆ ಹೋಗಿ ಅಲ್ಲಿ ಆಯಿಶ(ರ)ರನ್ನು ಭೇಟಿಯಾದರು. ಅವರೆಲ್ಲರೂ ಈ ವಿಷಯದಲ್ಲಿ ಸಮಾನ ಮನಸ್ಕರಾಗಿದ್ದರಿಂದ ಅಲ್ಲಿಂದ ಬಸ್ರಾಗೆ ಹೋಗಿ ಅಲ್ಲಿರುವ ಸಮಾನಮನಸ್ಕರನ್ನು ಭೇಟಿಯಾದರು. ಅಲೀ(ರ)ರ ವಿರುದ್ಧ ಯುದ್ಧ ಮಾಡುವುದು ಅವರ ಉದ್ದೇಶವಾಗಿರಲಿಲ್ಲ. ಬದಲಾಗಿ ಉಸ್ಮಾನ್(ರ)ರ ಕೊಲೆಗಾರರ ವಿರುದ್ಧ ಪ್ರತೀಕಾರ ತೀರಿಸುವಂತೆ ಒತ್ತಡ ಹೇರುವುದು ಅವರ ಉದ್ದೇಶವಾಗಿತ್ತು.
ಆಯಿಶ(ರ), ತಲ್ಹ(ರ) ಮತ್ತು ಝುಬೈರ್(ರ) ಬಸ್ರಾಕ್ಕೆ ಹೋಗಿರುವ ವಿಷಯ ಅಲೀ(ರ)ರಿಗೆ ತಿಳಿಯಿತು. ಇದರಿಂದ ಇಸ್ಲಾಮಿ ಸಾಮ್ರಾಜ್ಯವು ಇಬ್ಬಾಗವಾಗಬಹುದೆಂದು ಭಯಪಟ್ಟು ಸಂಧಾನ ಮಾಡುವುದಕ್ಕಾಗಿ ಅಲೀ(ರ) ಬಸ್ರಕ್ಕೆ ಹೊರಟರು. ಅಲ್ಲಿ ಅವರು ಕಅಕಾಲ್(ರ)ರನ್ನು ಸಂಧಾನಕಾರರಾಗಿ ಕಳುಹಿಸಿದರು. ತಮ್ಮ ಆಗಮನದ ಉದ್ದೇಶ ಯುದ್ಧವಲ್ಲ, ಬದಲಾಗಿ ಸುಧಾರಣೆ ಎಂದು ಆಯಿಶ(ರ) ಉತ್ತರಿಸಿದರು. ಈ ಸುದ್ದಿ ಅಲೀ(ರ)ರಿಗೆ ಸಿಕ್ಕಿದಾಗ ಅವರ ಸಂತೋಷಕ್ಕೆ ಪಾರವಿರಲಿಲ್ಲ. ಆದರೆ ಉಸ್ಮಾನ್(ರ)ರವರ ವಿರುದ್ಧ ಪಿತೂರಿ ನಡೆಸಿದವರಿಗೆ ಸಹಾಬಿಗಳ ನಡುವೆ ಸಾಮರಸ್ಯ ಉಂಟಾಗುವುದು ಇಷ್ಟವಿರಲಿಲ್ಲ.
ಅಂದು ರಾತ್ರಿ ಎಲ್ಲರೂ ನೆಮ್ಮದಿಯಿಂದ ಮಲಗಿದರೆ ಪಿತೂರಿಗಾರರಲ್ಲಿ ಸೇರಿದ ಅಶ್ತರ್, ಶುರೈಹ್ ಬಿನ್ ಔಫಾ ಮತ್ತು ಅಬ್ದುಲ್ಲಾ ಬಿನ್ ಸಬಾ ಮುಂತಾದವರು ಎಚ್ಚರವಾಗಿದ್ದರು. ಅವರು ಸುಮಾರು 2,500 ಮಂದಿಯಿದ್ದರು. ಅವರಲ್ಲಿ ಒಬ್ಬನೇ ಒಬ್ಬ ಸಹಾಬಿಯಿರಲಿಲ್ಲ. ಅವರು ಎರಡು ಕಡೆಯಲ್ಲೂ ನುಸುಳಿ ರೋಷದ ಕಿಡಿ ಹಚ್ಚಿದರು. ಇದರಿಂದ ಸಹಾಬಾಗಳು ಪರಸ್ಪರ ಯುದ್ಧ ಮಾಡುವಂತಾಯಿತು. ಯುದ್ಧದಲ್ಲಿ ತ ತಲ್ಹ(ರ) ಮತ್ತು ಝುಬೈರ್(ರ) ಹುತಾತ್ಮರಾದರು. ಅಲೀ(ರ)ರವರು ಆಯಿಶ(ರ)ರನ್ನು ಅವರ ಸಹೋದರ ಅಬ್ದುರಹ್ಮಾನ್(ರ)ರವರ ಜೊತೆಗೆ (ಇವರು ಅಲೀ(ರ)ರವರ ಪಕ್ಷದಲ್ಲಿದ್ದರು) ಎಲ್ಲಾ ಗೌರವಾದರಗಳೊಂದಿಗೆ ಮದೀನಕ್ಕೆ ಕಳುಹಿಸಿದರು.
· ಸಿಫ್ಫೀನ್ ಯುದ್ಧ:
ಆಗ ಶಾಮ್‌ನಲ್ಲಿ ಮುಆವಿಯ(ರ) ರಾಜ್ಯಪಾಲರಾಗಿದ್ದರು. ಅವರು ಅಲೀ(ರ)ರಿಗೆ ಬೈತ್ ಮಾಡಲು ಒಪ್ಪಲಿಲ್ಲ. ತಾನು ಬೈಅತ್ ಮಾಡಬೇಕಾದರೆ ಮೊದಲು ಉಸ್ಮಾನ್(ರ)ರವರ ಕೊಲೆಗಾರರನ್ನು ನ್ಯಾಯದ ಮುಂದೆ ತರಬೇಕೆನ್ನುವುದು ಅವರ ಹಠವಾಗಿತ್ತು. ಅಲೀ(ರ) ಕೂಫಕ್ಕೆ ಹೋಗಿ ಅಲ್ಲಿಂದ ಜರೀರ್ ಬಿನ್ ಅಬ್ದುಲ್ಲಾ(ರ)ರನ್ನು ತನಗೆ ಬೈಅತ್ ಮಾಡಬೇಕೆಂಬ ಆದೇಶದೊಂದಿಗೆ ಮುಆವಿಯ(ರ)ರವರ ಬಳಿಗೆ ಕಳುಹಿಸಿದರು. ಆದರೆ ಪ್ರತೀಕಾರ ಪಡೆಯುವುದಕ್ಕೆ ಮುಂಚೆ ಬೈಅತ್ ಮಾಡಲು ತಾನು ಸುತರಾಂ ಸಿದ್ಧನಿಲ್ಲ ಎಂದು ಮುಆವಿಯ(ರ) ಹೇಳಿದರು. ಅಲೀ(ರ) ತಮ್ಮ ಸೇನೆಯೊಂದಿಗೆ ಶಾಮ್‌ಗೆ ಹೊರಟರು. ಮುಆವಿಯ(ರ) ತಮ್ಮ ಸೇನೆಯೊಂದಿಗೆ ಹೊರಟರು. ಅವರಿಬ್ಬರೂ ಸಿಫ್ಫೀನ್ ಎಂಬ ಸ್ಥಳದಲ್ಲಿ ಮುಖಾಮುಖಿಯಾದರು. ಅಲ್ಲಿ ಅವರಿಬ್ಬರ ನಡುವೆ ಸುದೀರ್ಘ 100 ದಿನಗಳ ಕಾಲ ಮಾತುಕತೆ ನಡೆದರೂ ಯಾವುದೇ ಫಲಿತಾಂಶವಿಲ್ಲ. ಉಸ್ಮಾನ್(ರ)ರವರನ್ನು ಕೊಂದವರೊಡನೆ ಪ್ರತೀಕಾರ ತೀರಿಸುವ ತನಕ ಬೈಅತ್ ಮಾಡುವುದಿಲ್ಲ ಎಂಬ ತಮ್ಮ ಅಭಿಪ್ರಾಯಕ್ಕೆ ಮುಆವಿಯ(ರ) ಬಲವಾಗಿ ಅಂಟಿ ನಿಂತರು. ಕೊನೆಗೆ ಅವರಿಬ್ಬರ ನಡುವೆ ಒಂದು ವಾರದ ಕಾಲ ಯುದ್ಧ ನಡೆಯಿತು.
· ನಹವಾನ್ ಯುದ್ಧ:
ಸಿಫ್ಫೀನ್ ಯುದ್ಧದ ಕೊನೆಯಲ್ಲಿ ಮುಆವಿಯ(ರ) ಮತ್ತು ಅಲೀ(ರ) ಪರಸ್ಪರ ಅಲ್ಲಾಹನ ಕಾನೂನಿನ ಆಧಾರದಲ್ಲಿ ಒಮ್ಮತಕ್ಕೆ ಬರಲು ಮತ್ತು ಅಲ್ಲಾಹು ಏನು ಹೇಳುತ್ತಾನೋ ಅದನ್ನು ಒಪ್ಪಿಕೊಳ್ಳಲು ತೀರ್ಮಾನಿಸಿದರು. ಮುಆವಿಯ(ರ) ಕಡೆಯಿಂದ ಅಮ್ ಬಿನ್ ಆಸ್(ರ) ಮತ್ತು ಅಲೀ(ರ)ರ ಕಡೆಯಿಂದ ಅಬೂ ಮೂಸಾ ಅಲ್-ಅಶ್‌ಅರಿ(ರ)ರನ್ನು ಮಧ್ಯವರ್ತಿಗಳಾಗಿ ಕಳುಹಿಸಲಾಯಿತು. ಈ ಇಬ್ಬರು ಯಾವ ನಿರ್ಧಾರಕ್ಕೆ ಬರುತ್ತಾರೋ ಅದನ್ನು ಒಪ್ಪಿಕೊಳ್ಳುವುದಾಗಿ ಎರಡು ಕಡೆಯವರೂ ತೀರ್ಮಾನಿಸಿದರು.
ಆದರೆ ಅಲೀ(ರ)ರವರ ಸೇನೆಯಲ್ಲಿದ್ದ ಕೆಲವರು ಇದನ್ನು ಒಪ್ಪಲಿಲ್ಲ. ಅವರು ಅಲೀ(ರ)ರ ವಿರುದ್ಧ ಬಹಿರಂಗವಾಗಿ ಬಂಡೆದ್ದರು. ಅಲ್ಲಾಹನ ಕಾನೂನನ್ನು ನಿರ್ಧರಿಸಲು ಮನುಷ್ಯರನ್ನು ನಿಯೋಗಿಸುವುದು ಸರಿಯಲ್ಲ, ಕಾನೂನು ನಿರ್ಮಿಸುವ ಅಧಿಕಾರ ಅಲ್ಲಾಹನಿಗಲ್ಲದೆ ಇನ್ನಾರಿಗೂ ಇಲ್ಲ ಎಂದು ಅವರು ಬಲವಾಗಿ ವಾದಿಸಿದರು. ಕಾನೂನು ನಿರ್ಮಿಸುವ ಹಕ್ಕನ್ನು ಮನುಷ್ಯರಿಗೆ ನೀಡುವ ಮೂಲಕ ಅಲೀ(ರ) ತಪ್ಪು ಮಾಡಿದ್ದಾರೆ, ಅವರು ತೌಬಾ ಮಾಡಬೇಕು ಎಂದು ಹೇಳಿದರು. ಇವರು ನಂತರ ಖವಾರಿಜ್ ಎಂಬ ಹೆಸರಿನಲ್ಲಿ ಕುಖ್ಯಾತರಾದರು.
ಅಲೀ(ರ) ಅವರ ಬಳಿಗೆ ಇಬ್ ಅಬ್ಬಾಸ್(ರ)ರನ್ನು ಕಳುಹಿಸಿದರು. ಅವರು ಅವರೊಡನೆ ವಾದ ಮಾಡಿದಾಗ ಅವರಲ್ಲಿ ಕೆಲವರು ಸತ್ಯಕ್ಕೆ ಮರಳಿದರು. ಆದರೆ ಹೆಚ್ಚಿನವರು ಅದರಲ್ಲೇ ಸ್ಥಿರವಾಗಿದ್ದರು. ಹಿಜರಿ 39ರಲ್ಲಿ ನಡೆದ ನಹವಾನ್ ಯುದ್ಧದಲ್ಲಿ ಅಲೀ(ರ) ಈ ಖವಾರಿಜ್‌ಗಳ ವಿರುದ್ಧ ಹೋರಾಡಿ ಅವರನ್ನು ಸೋಲಿಸಿದರು. ಆದರೂ ಆಂತರಿಕ ಸಮಸ್ಯೆ ಬಗೆಹರಿಯಲಿಲ್ಲ. ಖವಾರಿಜ್‌ಗಳು ಹೆಚ್ಚಾದರು. ಇತ್ತ ಅಬ್ದುಲ್ಲಾ ಬನ್ ಸಬಾ ಮತ್ತು ಅವನ ಹಿಂಬಾಲಕರೂ ಹೆಚ್ಚಾದರು. ಇವರು ಶೀಅತು ಅಲೀ (ಶಿಯಾ) ಪಂಥವನ್ನು ಹುಟ್ಟು ಹಾಕಿದರು.
· ಹುತಾತ್ಮತೆ:
ಹಿಜ್ರ 40, ರಮದಾನ್ ತಿಂಗಳ 19ನೇ ದಿನ ಅಲೀ(ರ)ರವರು ಕೂಫದ ಮಸೀದಿಯಲ್ಲಿ ಫಜ್ರ್ ನಮಾಝ್ ನಿರ್ವಹಿಸುತ್ತಿದ್ದಾಗ ಅಬ್ದುರಹ್ಮಾನ್ ಬಿನ್ ಮುಲ್ಜಿಮ್ ಎಂಬ ಖವಾರಿಜ್ ವಿಷ ಲೇಪಿಸಿದ ಖಡ್ಗದಿಂದ ಅವರಿಗೆ ಇರಿದನು. ವಿಷವು ದೇಹದಲ್ಲೆಲ್ಲಾ ಹರಡಿ ಮೂರು ದಿನಗಳ ನಂತರ ಅಲೀ(ರ) ಇಹಲೋಕ ತ್ಯಜಿಸಿದರು. ಆಗ ಅವರಿಗೆ 64 ವರ್ಷ ಪ್ರಾಯವಾಗಿತ್ತು.