ಜನನ ಕ್ರಿ.ಶ. 699 (ಹಿ.ಶ. 80) – ಮರಣ ಕ್ರಿ.ಶ. 767 (ಹಿ.ಶ. 150)
ವಿಶೇಷತೆಗಳು:
ನಾಲ್ಕು ಮಹಾನ್ ಇಮಾಂಗಳಲ್ಲಿ ಮೊದಲನೆಯವರು
ವಂಶ:
ತಂದೆ: ಸಾಬಿತ್ ಬಿನ್ ಝೂತಾ ಬಿನ್ ಮರ್ಝುಬಾನ್
ಜನನ ಮತ್ತು ಬೆಳವಣಿಗೆ:
ಇಮಾಂ ಅಬೂ ಹನೀಫ(ರ) ಹಿ. 80 ರಲ್ಲಿ ಉಮವೀ ಖಲೀಫ ಅಬ್ದುಲ್ ಮಲಿಕ್ ಬಿನ್ ಮರ್ವಾನ್‌ರ ಆಡಳಿತಕಾಲದಲ್ಲಿ ಕೂಫಾದಲ್ಲಿ ಜನಿಸಿದರು. ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರು. ಅವರ ತಂದೆ ಮತ್ತು ತಾತ ಇಬ್ಬರೂ ಬಟ್ಟೆ ವ್ಯಾಪಾರಿಗಳಾಗಿದ್ದರು. ಅಬೂ ಹನೀಫ ಕೂಡ ಬಟ್ಟೆ ವ್ಯಾಪಾರವನ್ನೇ ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡರು. ಅವರು ವ್ಯಾಪಾರಕ್ಕಾಗಿ ಊರೂರು ಸುತ್ತುತ್ತಿದ್ದರು.
ಅವರು ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ವ್ಯಾಪಾರಿಯಾಗಿದ್ದರು. ಅವರು ಉದಾರವಾಗಿ ದಾನ ಮಾಡುತ್ತಿದ್ದರು. ಅದರ ಜೊತೆಗೆ ಅವರೊಬ್ಬ ಶ್ರೇಷ್ಠ ಆರಾಧಕರೂ ದೈವಭಕ್ತರೂ ಆಗಿದ್ದರು. ಅವರು ತಮ್ಮ ದೈವಭಕ್ತಿ ಮತ್ತು ಪ್ರಾಮಾಣಿಕತೆಯ ಮೂಲಕ ವ್ಯಾಪಾರಿಗಳ ಮಧ್ಯೆ ವಿಶಿಷ್ಟ ಛಾಪನ್ನು ಮೂಡಿಸಿದ್ದರು. ಜನರು ಅವರ ವ್ಯಾಪಾರವನ್ನು ಅಬೂಬಕರ್ ಸಿದ್ದೀಕ್(ರ) ರವರ ವ್ಯಾಪಾರದೊಂದಿಗೆ ಹೋಲಿಸುತ್ತಿದ್ದರು.
ತಮ್ಮ ಸಂಪತ್ತಿನಲ್ಲಿ ಅನ್ಯಾಯವಾಗಿ ಏನಾದರೂ ಸೇರಿಕೊಳ್ಳದಂತೆ ಅವರು ಅತಿಯಾದ ಸೂಕ್ಷ್ಮತೆ ವಹಿಸುತ್ತಿದ್ದರು. ಒಮ್ಮೆ ಅವರು ಕೆಲವು ಬಟ್ಟೆಗಳನ್ನು ಮಾರಲು ತಮ್ಮ ಪಾಲುದಾರ ಹಫ್ಸ್ ಬಿನ್ ಅಬ್ದುರಹ್ಮಾನ್‌ರನ್ನು ಕಳುಹಿಸಿದರು. ಅವುಗಳಲ್ಲೊಂದು ಬಟ್ಟೆಯಲ್ಲಿ ನ್ಯೂನತೆಯಿತ್ತು. ಮಾರುವಾಗ ಆ ನ್ಯೂನತೆಯನ್ನು ವಿವರಿಸಬೇಕೆಂದು ಅಬೂ ಹನೀಫ ಒತ್ತಿ ಹೇಳಿದ್ದರು. ಆದರೆ ಅವರಿಗೆ ಅದು ಮರೆತು ಹೋಗಿತ್ತು. ಆ ಬಟ್ಟೆಯನ್ನು ಖರೀದಿಸಿದ್ದು ಯಾರೆಂದೂ ಅವರು ಗುರುತಿಸಿರಲಿಲ್ಲ. ವಿಷಯ ತಿಳಿದಾಗ ಅಬೂ ಹನೀಫ ಆ ಬಟ್ಟೆಯನ್ನು ಮಾರಿದ ಸಂಪೂರ್ಣ ಹಣವನ್ನು ದಾನ ಮಾಡುವಂತೆ ಹೇಳಿದರು.
ಅವರು ವಿದ್ಯೆ ಕಲಿಯಲು ಆರಂಭಿಸಿದ ಬಳಿಕವೂ ವ್ಯಾಪಾರವನ್ನು ನಿಲ್ಲಿಸಿರಲಿಲ್ಲ. ಅವರು ವಾರ್ಷಿಕವಾಗಿ ತಮ್ಮ ಲಾಭವನ್ನು ಒಟ್ಟುಗೂಡಿಸಿ, ಗುರುಗಳ ಆವಶ್ಯಕತೆಗಳನ್ನು ಪೂರೈಸುತ್ತಿದ್ದರು. ಅವರ ಊಟ-ಬಟ್ಟೆಗಳ ಖರ್ಚು ನೋಡುತ್ತಿದ್ದರು. ನಂತರ ಉಳಿದ ಹಣವನ್ನು ಅವರಿಗೆ ಕಳುಹಿಸಿ, “ಇದನ್ನು ನಿಮ್ಮ ಖರ್ಚಿಗೆ ಇಟ್ಟುಕೊಳ್ಳಿ. ಇದಕ್ಕಾಗಿ ನೀವು ಅಲ್ಲಾಹನನ್ನು ಮಾತ್ರ ಸ್ತುತಿಸಿರಿ. ಏಕೆಂದರೆ ನಾನು ಇದನ್ನು ಕೊಟ್ಟದ್ದು ನನ್ನ ಸಂಪತ್ತಿನಿಂದಲ್ಲ. ಬದಲಾಗಿ ನಿಮ್ಮ ಕಾರಣದಿಂದ ಅಲ್ಲಾಹು ನನಗೆ ದಯಪಾಲಿಸಿದ ಅನುಗ್ರಹದಿಂದಾಗಿದೆ” ಎನ್ನುತ್ತಿದ್ದರು.
ಅಂದಿನ ಇರಾಕ್:
ಇಮಾಂ ಅಬೂ ಹನೀಫ(ರ)ರ ಜನ್ಮಸ್ಥಳ ಕೂಫ ಇರಾಕಿನ ಎರಡು ಪ್ರಮುಖ ನಗರಗಳಲ್ಲಿ ಒಂದಾಗಿತ್ತು. ಇನ್ನೊಂದು ಪ್ರಮುಖ ನಗರ ಬಸ್ರ. ಕೂಫ ಕರ್ಮಶಾಸ್ತ್ರದ ಮಡಿಲಾಗಿದ್ದರೆ ಬಸ್ರ ವಿಭಿನ್ನ ವಿಚಾರಧಾರೆಗಳ ಮಡಿಲಾಗಿತ್ತು. ಆಗ ಇರಾಕಿನಲ್ಲಿ ಅನೇಕ ಧರ್ಮಗಳು ಮತ್ತು ವಿಚಾರಧಾರೆಗಳಿದ್ದವು. ಅದು ಪುರಾತನ ಧರ್ಮಗಳ ಭೂಮಿಯಾಗಿತ್ತು. ಇಸ್ಲಾಮ್ ಪೂರ್ವಕಾಲದಲ್ಲಿ ಅದು ಅಸೀರಿಯನ್ನರ ಪ್ರಭಾವದಲ್ಲಿತ್ತು. ಅವರು ಅಲ್ಲಿ ಶಾಲೆಗಳನ್ನು ನಿರ್ಮಿಸಿ ಗ್ರೀಕ್ ತತ್ವಶಾಸ್ತ್ರ ಮತ್ತು ಪರ್ಶ್ಯನ್ ಯುಕ್ತಿಯನ್ನು ಕಲಿಸುತ್ತಿದ್ದರು.
ಅದೇ ರೀತಿ ಅಲ್ಲಿ ಕ್ರೈಸ್ತರೂ ಇದ್ದರು. ಖಲೀಫ ಉಮರ್ ಬಿನ್ ಖತ್ತಾಬ್(ರ) ರವರ ಕಾಲದಲ್ಲಿ ಇರಾಕ್ ಮುಸ್ಲಿಮರ ವಶಕ್ಕೆ ಬಂತು. ಇರಾಕ್ ದೇಶವು ವಿಭಿನ್ನ ರಾಷ್ಟ್ರೀಯರ ಸಂಗಮ ಸ್ಥಳವಾದ್ದರಿಂದ ಅಲ್ಲಿ ಗೊಂದಲ ಮತ್ತು ಫಿತ್ನಗ ಳು ಉದ್ಭವಿಸಿದವು. ಅಲ್ಲಿ ರಾಜಕೀಯ ಮತ್ತು ಧಾರ್ಮಿಕ ವಿಚಾರಗಳ ಘರ್ಷಣೆ ಸ್ವಾಭಾವಿಕವಾಗಿತ್ತು. ಅಲ್ಲಿ ಒಂದು ಕಡೆ ಶಿಯಾ ವಿಶ್ವಾಸಿಗಳಿದ್ದರು. ಇನ್ನೊಂದು ಕಡೆ ಖವಾರಿಜ್‌ಗಳಿದ್ದರು. ಮತ್ತೊಂದು ಕಡೆ ಮುಅ್‍ತಝಿಲಗಳಿದ್ದರು. ಇವರೆಲ್ಲರ ನಡುವೆ ಸಹಾಬಾಗಳಿಂದ ಜ್ಞಾನವನ್ನು ಕಲಿತ ಅಹ್ಲುಸ್ಸುನ್ನದ ಜನರಿದ್ದರು.
ವಿದ್ಯಾಭ್ಯಾಸ:
ಇಮಾಂ ಅಬೂ ಹನೀಫ(ರ) ರಿಗೆ ಚಿಕ್ಕಂದಿನಲ್ಲೇ ವಿದ್ಯೆ ಕಲಿಯುವ ಆಸಕ್ತಿಯಿತ್ತು. ಅವರು ತಮ್ಮ ವ್ಯಾಪಾರಕ್ಕಾಗಿ ಪ್ರಯಾಣ ಮಾಡುವಾಗಲೆಲ್ಲಾ ಅಲ್ಲಿನ ವಿದ್ವಾಂಸರನ್ನೂ ಭೇಟಿಯಾಗಿ ಅವರಿಂದ ವಿದ್ಯೆ ಕಲಿಯುತ್ತಿದ್ದರು. ಆದರೆ ಇಮಾಂ ಶಅಬಿಯವರ ಮಾತಿನಿಂದ ಪ್ರಭಾವಿತರಾಗಿ ಅವರು ತಮ್ಮ ಸಮಯವನ್ನು ಪೂರ್ಣವಾಗಿ ವಿದ್ಯೆ ಕಲಿಯಲು ಮೀಸಲಿರಿಸಿದರು.
ಅವರು ಹೇಳುತ್ತಾರೆ: ಒಮ್ಮೆ ಇಮಾಂ ಶಅಬಿಯವರು ನನ್ನನ್ನು ಕರೆದು ಕೇಳಿದರು: “ನೀನು ಊರೂರು ತಿರುಗುವುದೇಕೆ?” ನಾನು ಹೇಳಿದೆ: “ವ್ಯಾಪಾರಕ್ಕಾಗಿ.” ಅವರು ಹೇಳಿದರು: “ಅಲ್ಲ, ನಾನು ಕೇಳಿದ್ದು ವ್ಯಾಪಾರದ ಬಗ್ಗೆಯಲ್ಲ. ಊರೂರು ತಿರುಗಿ ವಿದ್ವಾಂಸರನ್ನು ಭೇಟಿಯಾಗುವ ಬಗ್ಗೆ ಕೇಳಿದ್ದು.” ನಾನು ಹೇಳಿದೆ: “ನಾನು ವಿದ್ವಾಂಸರನ್ನು ಭೇಟಿಯಾಗುವುದು ಬಹಳ ಕಮ್ಮಿ.” ಆಗ ಅವರು ಹೇಳಿದರು: “ಅಲಕ್ಷ್ಯನಾಗಬೇಡ, ವಿದ್ಯೆ ಕಲಿತು ವಿದ್ವಾಂಸರ ಜೊತೆಗೆ ಕೂರು. ನಾನು ನಿನ್ನಲ್ಲಿ ಹುಮ್ಮಸ್ಸು ಮತ್ತು ಹುರುಪನ್ನು ಕಾಣುತ್ತಿದ್ದೇನೆ.” ಅಬೂ ಹನೀಫ ಹೇಳುತ್ತಾರೆ: “ಅವರು ಈ ಮಾತು ನನ್ನ ಹೃದಯದ ಆಳಕ್ಕೆ ತಟ್ಟಿತು. ನಾನು ವ್ಯಾಪಾರಕ್ಕಾಗಿ ಊರೂರು ಸುತ್ತುವುದನ್ನು ಬಿಟ್ಟು ವಿದ್ಯೆ ಕಲಿಯತೊಡಗಿದೆ. ಅವರ ಮಾತಿನಿಂದ ಅಲ್ಲಾಹು ನನಗೆ ಬಹಳ ಪ್ರಯೋಜನವನ್ನು ನೀಡಿದನು.”
ಇಮಾಂ ಶಅಬಿಯವರ ಸಲಹೆಯಂತೆ ಇಮಾಂ ಅಬೂ ಹನೀಫ ವಿದ್ಯೆ ಕಲಿಯಲು ನಿರ್ಧರಿಸಿದರು. ಅವರು ವಿಭಿನ್ನ ವಿದ್ವಾಂಸರನ್ನು ಭೇಟಿಯಾದರು. ಆ ಕಾಲದಲ್ಲಿ ವಿದ್ಯೆ ಮೂರು ವಿಷಯಗಳಲ್ಲಿ ವರ್ಗೀಕರಣಗೊಂಡಿತ್ತು. ವಿಶ್ವಾಸ ಶಾಸ್ತ್ರ, ಹದೀಸ್ ಶಾಸ್ತ್ರ ಮತ್ತು ಕರ್ಮಶಾಸ್ತ್ರ. ವಿಭಿನ್ನ ಮೂಲಗಳು ಹೇಳುವಂತೆ ಅಬೂ ಹನೀಫ ಕರ್ಮಶಾಸ್ತ್ರವನ್ನು ಆರಿಸಿದರು. ಇನ್ನೊಂದು ವರದಿ ಹೇಳುವಂತೆ ಅವರು ಮೊದಲು ಇಲ್ಮುಲ್ ಕಲಾಂ ಆರಿಸಿದರು. ನಂತರ ಅದನ್ನು ಬಿಟ್ಟರು. ಅವರು ಕಿರಾಅತ್, ಹದೀಸ್, ಸಾಹಿತ್ಯ, ಕವನ, ತರ್ಕಶಾಸ್ತ್ರ ಮುಂತಾದ ಎಲ್ಲಾ ವಿಷಯಗಳಲ್ಲೂ ಪಾಂಡಿತ್ಯವನ್ನು ಪಡೆದರು. ಅವರು ವಿಭಿನ್ನ ಪಂಗಡಗಳ ಜನರೊಡನೆ ಸಂವಾದ ನಡೆಸುತ್ತಿದ್ದರು. ಒಂದು ಸಂವಾದಕ್ಕಾಗಿ ಅವರು ಬಸ್ರಕ್ಕೆ ಹೋಗಿ ಅಲ್ಲಿ ಒಂದು ವರ್ಷ ತಂಗಿದ್ದೂ ಇದೆ.
ಅಬೂ ಹನೀಫರ ಗುರುಗಳಲ್ಲಿ ಹಮ್ಮಾದ್ ಬಿನ್ ಅಬೂ ಸುಫ್ಯಾನ್ ಪ್ರಮುಖರಾಗಿದ್ದರು. ಹಿ. 120 ರಲ್ಲಿ ಅವರು ನಿಧನರಾಗುವ ತನಕ ಅಬೂ ಹನೀಫ ಅವರ ಶಿಷ್ಯರಾಗಿಯೇ ಉಳಿದರು. ಅಬೂ ಹನೀಫ ಹೇಳುತ್ತಾರೆ: “ನಾನು 10 ವರ್ಷಗಳ ಕಾಲ ಅವರ ಬಳಿ ಕರ್ಮಶಾಸ್ತ್ರವನ್ನು ಕಲಿತೆ. ನಂತರ ನನಗೆ ಸ್ವತಂತ್ರವಾಗಿ ಕಲಿಸಬೇಕೆಂಬ ಆಸೆಯುಂಟಾಯಿತು. ಹೀಗೆ ಒಂದು ರಾತ್ರಿ ಅಲ್ಲಿಂದ ಹೊರಟು ಹೋಗಲು ನಿರ್ಧರಿಸಿದೆ. ಆದರೆ ನಾನು ಮಸೀದಿಗೆ ಬಂದಾಗ ಅಲ್ಲಿ ಅವರು ಕುಳಿತಿದ್ದರು. ಅವರನ್ನು ಕಂಡಾಗ ನನಗೆ ಅವರನ್ನು ಬಿಟ್ಟುಹೋಗಲು ಮನಸ್ಸಾಗಲಿಲ್ಲ. ನಾನು ಹೋಗಿ ಅವರ ಬಳಿ ಕುಳಿತೆ. ಆ ರಾತ್ರಿ ಬಸ್ರದಲ್ಲಿರುವ ಅವರ ಸಂಬಂಧಿಕರಲ್ಲಿ ಯಾರೋ ಅಸುನೀಗಿದ ಸುದ್ದಿ ಬಂತು. ಅವರು ದೊಡ್ಡ ಆಸ್ತಿಯನ್ನು ಬಿಟ್ಟುಹೋಗಿದ್ದರು. ಅವರಿಗೆ ನನ್ನ ಗುರುಗಳ ಹೊರತು ಬೇರೆ ವಾರಸುದಾರರಿರಲಿಲ್ಲ. ಗುರುಗಳು ನನ್ನನ್ನು ಅವರ ಸ್ಥಾನದಲ್ಲಿ ಕೂರಿಸಿ ಬಸ್ರಕ್ಕೆ ಹೊರಟುಹೋದರು. ಜನರು ನನ್ನ ಬಳಿ ಬಂದು ಫತ್ವಾ ಕೇಳುತ್ತಿದ್ದರು. ಅವುಗಳಲ್ಲಿ ಕೆಲವು ನಾನು ಈ ತನಕ ನನ್ನ ಗುರುಗಳಿಂದ ಕೇಳಿರದ ಹೊಸ ಹೊಸ ವಿಷಯಗಳಾಗಿದ್ದವು. ನಾನು ಒಟ್ಟು 60 ಫತ್ವಾಗಳನ್ನು ನೀಡಿದ್ದೆ. ಗುರುಗಳು ಬಂದಾಗ ನಾನು ಅದನ್ನು ಅವರಿಗೆ ತೋರಿಸಿದಾಗ ಅವರು ಅವುಗಳಲ್ಲಿ 20 ಫತ್ವಾಗಳು ತಪ್ಪೆಂದು ಹೇಳಿದರು. ಯಾವುದೇ ಕಾರಣಕ್ಕೂ ಗುರುಗಳನ್ನು ಬಿಟ್ಟು ಹೋಗಬಾರದೆಂದು ನಾನು ಆಗಲೇ ನಿರ್ಧರಿಸಿದೆ. ಹೀಗೆ ಅವರ ಮರಣದ ತನಕ ನಾನು ಅವನ ಜೊತೆಯಲ್ಲೇ ಇದ್ದೆ.”
ಇಮಾಂ ಅಬೂ ಹನೀಫ(ರ) 18 ವರ್ಷಗಳ ಕಾಲ ಅವರ ಶಿಷ್ಯರಾಗಿದ್ದರು. ಗುರುಗಳು ನಿಧನರಾಗುವಾಗ ಅವರ ವಯಸ್ಸು 40 ಆಗಿತ್ತು. ಗುರುಗಳ ಮರಣಾನಂತರ ಅಬೂ ಹನೀಫ ಕೂಫಾ ಮಸೀದಿಯಲ್ಲಿ ಅವರ ಸ್ಥಾನದಲ್ಲಿ ಕುಳಿತು ಸ್ವತಂತ್ರವಾಗಿ ವಿದ್ಯೆ ಕಲಿಸಲು ಆರಂಭಿಸಿದರು.
ಇಜ್ತಿಹಾದ್:
ಇಮಾಂ ಅಬೂ ಹನೀಫ(ರ) ಹೇಳುತ್ತಿದ್ದರು: “ನಾನು ಅಲ್ಲಾಹನ ಗ್ರಂಥದಲ್ಲಿ ನೋಡುತ್ತೇನೆ. ಅದರಲ್ಲಿ ಸಿಗದಿದ್ದರೆ ಪ್ರವಾದಿ(ಸ) ರವರ ಹದೀಸಿನಲ್ಲಿ ನೋಡುತ್ತೇನೆ. ಅಲ್ಲಾಹನ ಗ್ರಂಥದಲ್ಲಿ ಮತ್ತು ಪ್ರವಾದಿ(ಸ) ರವರ ಹದೀಸ್‌ಗಳಲ್ಲಿ ಎರಡರಲ್ಲೂ ಸಿಗದಿದ್ದರೆ ಸಹಾಬಾಗಳ ಅಭಿಪ್ರಾಯಗಳ ಕಡೆಗೆ ನೋಡುತ್ತೇನೆ. ಆದರೆ ಅವರ ಅಭಿಪ್ರಾಯಗಳಲ್ಲೂ ಸಿಗದಿದ್ದರೆ ನಾನೇ ಇಜ್ತಿಹಾದ್ ಮಾಡುತ್ತೇನೆ.”
ಅಬೂ ಹನೀಫ(ರ) ರವರ ಕಾಲದಲ್ಲಿ ಹದೀಸ್‌ಗಳನ್ನು ಸಂಪೂರ್ಣ ಕ್ರೋಢೀಕರಣ ಮಾಡದಿರುವುದರಿಂದ ಅವರಿಗೆ ಹೆಚ್ಚಿನ ಹದೀಸ್‌ಗಳು ಸಿಕ್ಕಿರಲಿಲ್ಲ. ಆದ್ದರಿಂದ ಅವರು ಹೆಚ್ಚಾಗಿ ಅಭಿಪ್ರಾಯಗಳನ್ನು ಸ್ವೀಕರಿಸುತ್ತಿದ್ದರು ಮತ್ತು ಇಜ್ತಿಹಾದ್ ಮಾಡುತ್ತಿದ್ದರು. ಅವರ ಮದ್‌ಹಬ್‌ನಲ್ಲಿ ಅಭಿಪ್ರಾಯಗಳೇ ತುಂಬಿರಲು ಇದೇ ಕಾರಣವಾಗಿದೆ. ಅವರು ಹೇಳುತ್ತಿದ್ದರು: “ನಿಮಗೆ ಹದೀಸ್ ಸಹೀಹ್ ಆಗಿ ಸಿಕ್ಕಿದರೆ ಅದೇ ನನ್ನ ಮದ್‌ಹಬ್ ಆಗಿದೆ.” ಅಂದರೆ ನನ್ನ ಅಭಿಪ್ರಾಯವನ್ನು ಬಿಟ್ಟು ಆ ಹದೀಸನ್ನು ಸ್ವೀಕರಿಸಿರಿ ಎಂದರ್ಥ.
ಅವರು ಹೇಳುತ್ತಿದ್ದರು: “ನಾನು ನನ್ನ ಅಭಿಪ್ರಾಯವನ್ನು ಎಲ್ಲಿಂದ ಸ್ವೀಕರಿಸಿದ್ದೇನೆ ಎಂದು ತಿಳಿಯದೆ ಯಾರೂ ನನ್ನ ಅಭಿಪ್ರಾಯವನ್ನು ಸ್ವೀಕರಿಸಬಾರದು.”
ಅವರು ಹೇಳುತ್ತಿದ್ದರು: “ನಾನು ಒಂದು ಅಭಿಪ್ರಾಯವನ್ನು ಹೊಂದಲು ಕಾರಣವೇನೆಂದು ತಿಳಿಯದೆ ಯಾರೂ ನನ್ನ ಅಭಿಪ್ರಾಯದ ಆಧಾರದಲ್ಲಿ ಫತ್ವಾ ನೀಡಬಾರದು.”
ತಮ್ಮ ಶಿಷ್ಯ ಅಬೂ ಯೂಸುಫ್‌ರೊಡನೆ ಅವರು ಹೇಳುತ್ತಿದ್ದರು: “ನನ್ನ ಎಲ್ಲಾ ಮಾತುಗಳನ್ನೂ ಬರೆದಿಡಬೇಡಿ. ಏಕೆಂದರೆ ನಾನು ಇಂದು ಒಂದು ಅಭಿಪ್ರಾಯವನ್ನು ಸ್ವೀಕರಿಸಿದರೆ ನಾಳೆ ಆ ಅಭಿಪ್ರಾಯವನ್ನು ಬಿಟ್ಟು ಬೇರೊಂದು ಅಭಿಪ್ರಾಯವನ್ನು ಸ್ವೀಕರಿಸಲೂಬಹುದು. ನಾಡಿದ್ದು ಆ ಅಭಿಪ್ರಾಯವನ್ನು ತೊರೆದು ಬೇರೊಂದು ಅಭಿಪ್ರಾಯವನ್ನು ಸ್ವೀಕರಿಸಲೂಬಹುದು.”
ಅವರು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದ ಇನ್ನೊಂದು ಮಾತು ಹೀಗಿತ್ತು: “ಅಲ್ಲಾಹನ ಗ್ರಂಥ ಮತ್ತು ಪ್ರವಾದಿ(ಸ) ರವರ ಸುನ್ನತ್ತಿಗೆ ವಿರುದ್ಧವಾಗಿ ನಾನು ಏನಾದರೂ ಅಭಿಪ್ರಾಯ ಹೇಳಿದರೆ ನನ್ನ ಅಭಿಪ್ರಾಯವನ್ನು ತಿರಸ್ಕರಿಸಿರಿ. ಅದನ್ನು ಸ್ವೀಕರಿಸಬೇಡಿ.”
ಅಗ್ನಿಪರೀಕ್ಷೆ:
ಇಮಾಮ್ ಅಬೂ ಹನೀಫ ತಮ್ಮ ಜೀವನದ 52 ವರ್ಷಗಳನ್ನು ಉಮವಿ ಸಾಮ್ರಾಜ್ಯದ ಆಡಳಿತಕಾಲದಲ್ಲಿ ಮತ್ತು ಉಳಿದ 18 ವರ್ಷಗಳನ್ನು ಅಬ್ಬಾಸಿ ಸಾಮ್ರಾಜ್ಯದ ಆಡಳಿತಕಾಲದಲ್ಲಿ ಕಳೆದರು. ಅವರು ತಮ್ಮ ಜೀವನದಲ್ಲಿ ಎರಡು ಸಾಮ್ರಾಜ್ಯಗಳ ಆಡಳಿತವನ್ನು ಕಂಡಿದ್ದರು.
ಹಿ. 121 ರಲ್ಲಿ ಇಮಾಮ್ ಝದ್ ಬಿನ್ ಅಲಿ ಯವರು ಆಡಳಿತಗಾರರಾದ ಹಿಶಾಮ್ ಬಿನ್ ಅಬ್ದುಲ್ ಮಲಿಕ್ ರ ವಿರುದ್ಧ ದಂಗೆಯೆದ್ದಾಗ ಅಬೂ ಹನೀಫರು ಇಮಾಮ್ ಝದ್ ಬಿನ್ ಅಲಿ ಯವರ ಪಕ್ಷ ವಹಿಸಿದರು. ಒಂದು ವರದಿಯ ಪ್ರಕಾರ ಅವರು ದಂಗೆಯಲ್ಲಿ ಪಾಲ್ಗೊಂಡರು ಎಂದಿದೆ. ಆದರೆ ಇನ್ನೊಂದು ವರದಿಯ ಪ್ರಕಾರ ಅವರು ಕೇವಲ ಬೆಂಬಲ ಸೂಚಿಸಿದ್ದರು ಎಂದಿದೆ. ಹಿ. 132 ರಲ್ಲಿ ಇಮಾಂ ಝದ್ ಬಿನ್ ಅಲಿಯವರ ಕೊಲೆಯೊಂದಿಗೆ ದಂಗೆ ತಣ್ಣಗಾಯಿತು.
ಆಗ ಯಝೀದ್ ಬಿನ್ ಉಮರ್ ಕೂಫದ ರಾಜ್ಯಪಾಲರಾಗಿದ್ದರು. ಅವರು ಅಬೂ ಹನೀಫರನ್ನು ಕರೆಸಿ ಅವರಿಗೆ ಪತ್ರಕ್ಕೆ ಮುದ್ರೆಯೊತ್ತುವ ಹುದ್ದೆಯನ್ನು ಕೊಟ್ಟರು. ಈ ಹುದ್ದೆಯಲ್ಲಿರುವವರ ಮೂಲಕವಲ್ಲದೆ ಪತ್ರಗಳು ರವಾನೆಯಾಗುತ್ತಿರಲಿಲ್ಲ. ಆದರೆ ಅಬೂ ಹನೀಫ ಆ ಹುದ್ದೆಯನ್ನು ತಿರಸ್ಕರಿಸಿದರು. ಹುದ್ದೆ ಸ್ವೀಕರಿಸದಿದ್ದರೆ ಸೆರೆಮನೆಗೆ ತಳ್ಳುತ್ತೇನೆಂದು ರಾಜ್ಯಪಾಲರು ಬೆದರಿಕೆ ಹಾಕಿದರು. ಆದರೆ ಅಬೂ ಹನೀಫ ತಮ್ಮ ನಿಲುವನ್ನು ಬದಲಿಸಲಿಲ್ಲ. ಅವರನ್ನು ಸೆರೆಗೆ ತಳ್ಳಿ ಚಾವಟಿಯಿಂದ ಬಾರಿಸಿ ಥಳಿಸಲಾಯಿತು. ಆದರೂ ಅವರು ಅಚಲರಾಗಿ ನಿಂತರು. ಇದು ನಡೆದದ್ದು ಹಿ. 130 ರಲ್ಲಿ. ನಂತರ ಅಬೂ ಹನೀಫ ಕೂಫದಿಂದ ಮಕ್ಕಾಗೆ ಹೋಗಿ ಅಲ್ಲಿ ಇಬ್ ಅಬ್ಬಾಸ್(ರ) ರವರ ಶಿಷ್ಯರನ್ನು ಭೇಟಿಯಾಗಿ ಅವರಿಂದ ಹದೀಸ್ ಕಲಿತರು.
ನಂತರ ಉಮವಿ ಸಾಮ್ರಾಜ್ಯ ಪತನವಾಗಿ ಅಬ್ಬಾಸಿ ಸಾಮ್ರಾಜ್ಯದ ಅಬೂ ಜಅಫರ್ ಮನ್ಸೂರ್ ಆಡಳಿತಗಾರರಾದಾಗ ಅವರು ಕೂಫಕ್ಕೆ ಮರಳಿದರು.
ಅಬ್ಬಾಸಿ ಸಾಮ್ರಾಜ್ಯದ ಆರಂಭಕಾಲದಲ್ಲಿ ಎಲ್ಲವೂ ಸರಿಯಾಗಿತ್ತು. ಕೆಲವು ವರ್ಷಗಳ ನಂತರ ಪುನಃ ಫಿತ್ನ ಆರಂಭವಾಯಿತು. ಅಲಿ(ರ) ರವರ ಸಂತತಿಯಲ್ಲಿ ಸೇರಿದ ಮುಹಮ್ಮದ್ ಬಿನ್ ಅಬ್ದುಲ್ಲಾಹ್ ಬಿನ್ ಹಸನ್ ಮತ್ತು ಖಲೀಫರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತು. ಮುಹಮ್ಮದ್ ಬಿನ್ ಅಬ್ದುಲ್ಲಾಹ್ ಮತ್ತು ಅವರ ಸಂಗಡಿಗರನ್ನು ದಮನಿಸಲು ಖಲೀಫ ನಿರ್ಧಸಿದರು. ಅಬೂ ಹನೀಫ ಖಲೀಫರಿಗೆ ತಮ್ಮ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದರು. ಅವರು ತಮ್ಮ ತರಗತಿಗಳಲ್ಲಿ ಕೂಡ ಖಲೀಫರ ನಿಲುವನ್ನು ವಿರೋಧಿಸುತ್ತಿದ್ದರು.
ವಿಷಯ ತಿಳಿದ ಖಲೀಫ ಅಬೂ ಹನೀಫರನ್ನು ಕರೆಸಿ ಅವರಿಗೆ ನ್ಯಾಯಾಧೀಶರ ಹುದ್ದೆಯನ್ನು ನೀಡಿದರು. ಆದರೆ ಅಬೂ ಹನೀಫ ನಿರಾಕರಿಸಿದರು. ಆಸ್ಥಾನದಲ್ಲಿದ್ದ ಇತರ ನ್ಯಾಯಾಧೀಶರಿಗೆ ಯಾವುದಾದರೂ ವಿಷಯದಲ್ಲಿ ಫತ್ವ ನೀಡಲು ಕಷ್ಟವಾದರೆ ತಾವು ಅವರ ಸ್ಥಾನದಲ್ಲಿ ನಿಂತು ಫತ್ವ ನೀಡುವ ಹುದ್ದೆಯನ್ನಾದರೂ ಸ್ವೀಕರಿಸಬೇಕೆಂದು ವಿನಂತಿಸಿದರು. ಆದರೆ ಅಬೂ ಹನೀಫ ಅದನ್ನೂ ನಿರಾಕರಿಸಿದರು. ಇದರಿಂದ ಕೋಪೋದ್ರಿಕ್ತರಾದ ಖಲೀಫ ಅವರನ್ನು ಸೆರೆಮನೆಗೆ ತಳ್ಳಿದರು. ಅಬೂ ಹನೀಫ(ರ) ಮರಣದ ತನಕ ಸೆರೆಯಲ್ಲೇ ಇದ್ದು ಅಲ್ಲೇ ಅಸುನೀಗಿದರೆಂದು ಹೇಳಲಾಗುತ್ತದೆ.
ಪ್ರಶಂಸೆ:
ಇಮಾಮ್ ಶಾಫಿಈಯವರ ಗುರುಗಳಾದ ವಕೀಲ್ ಹೇಳುತ್ತಾರೆ: “ಅಬೂ ಹನೀಫ ಅತ್ಯಂತ ವಿಶ್ವಾಸಯೋಗ್ಯರಾಗಿದ್ದರು. ಅವರು ಎಲ್ಲಾ ವಿಷಯಗಳಲ್ಲೂ ಅಲ್ಲಾಹನ ತೃಪ್ತಿಗೆ ಆದ್ಯತೆ ನೀಡುತ್ತಿದ್ದರು. ಅಲ್ಲಾಹನಿಗಾಗಿ ಖಡ್ಗಗಳು ಅವರನ್ನು ಸುತ್ತುವರಿದರೂ ಅವರು ಅದನ್ನು ಸಹಿಸಿಕೊಳ್ಳುವರು.” ಇಮಾಂ ಮಾಲಿಕ್ ಬಿನ್ ಅನಸ್‌ರೊಂದಿಗೆ ನೀವು ಅಬೂ ಹನೀಫರನ್ನು ನೋಡಿದ್ದೀರಾ? ಎಂದು ಕೇಳಲಾಯಿತು. ಅವರು ಉತ್ತರಿಸಿದರು: “ಹೌದು, ನಾನೊಬ್ಬ ವ್ಯಕ್ತಿಯನ್ನು ನೋಡಿದ್ದೇನೆ. ಅವರೇನಾದರೂ ಕಲ್ಲಿನಿಂದ ನಿರ್ಮಿಸಿದ ಈ ಕಂಬವನ್ನು ನೋಡಿ ಇದು ಚಿನ್ನದಿಂದ ನಿರ್ಮಿಸಿದ್ದೆಂದು ಹೇಳಿದರೆ ತಮ್ಮ ವಾದವನ್ನು ಸಮರ್ಥಿಸುವಷ್ಟು ತಾಕತ್ತು ಅವರಲ್ಲಿತ್ತು.” ಅಬೂ ಹನೀಫರ ಹೆಸರು ಕೇಳಿದಾಗಲೆಲ್ಲಾ ಇಮಾಂ ಅಹ್ಮದ್ ಬಿನ್ ಹಂಬಲ್ ಅಳುತ್ತಾ ಅವರ ರಹ್ಮತ್‌ಗಾಗಿ ಪ್ರಾರ್ಥಿಸುತ್ತಿದ್ದರು. ಅವರು ಹೇಳುತ್ತಿದ್ದರು: “ವಿದ್ಯೆ, ದೇವಭಕ್ತಿ, ಐಹಿಕ ವಿರಕ್ತಿ ಮತ್ತು ಪರಲೋಕಕ್ಕೆ ಆದ್ಯತೆ ನೀಡುವ ವಿಷಯದಲ್ಲಿ ಅಬೂ ಹನೀಫರ ಸ್ಥಾನಕ್ಕೆ ತಲುಪಲು ಯಾರಿಗೂ ಸಾಧ್ಯವಿಲ್ಲ. ನ್ಯಾಯಾಧೀಶ ಸ್ಥಾನವನ್ನು ಸ್ವೀಕರಿಸುವಂತೆ ಖಲೀಫ ಮನ್ಸೂರ್ ಅವರನ್ನು ನಿರ್ದಯವಾಗಿ ಥಳಿಸಿದರು. ಆದರೂ ಅವರು ಒಪ್ಪಿಕೊಳ್ಳಲಿಲ್ಲ. ಅಲ್ಲಾಹು ಅವರ ಮೇಲೆ ಕರುಣೆ ತೋರಲಿ.”
ಮರಣ:
ಅಬೂ ಹನೀಫ ಹಿ. 150 ರಲ್ಲಿ ಬಗ್ದಾದ್‌ನಲ್ಲಿ ನಿಧನರಾದರು. ಅವರನ್ನು ಖೈಝುರಾನ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.