ಅಬೂಬಕರ್(ರ)ರವರ ವಂಶಾವಳಿಯು ಏಳನೇ ಪಿತಾಮಹ ಮುರ್ರರಲ್ಲಿ ಪ್ರವಾದಿ(ಸ)ರೊಂದಿಗೆ ಸಂಧಿಸುತ್ತದೆ.
· ಜನನ ಮತ್ತು ಬೆಳವಣಿಗೆ:
ಅಬೂಬಕರ್ ಸಿದ್ದೀಕ್(ರ)ರವರು ಕ್ರಿ.ಶ. 573 ರಲ್ಲಿ ಜನಿಸಿದರು. ಆಗ ಆನೆ ಕಲಹ ನಡೆದು ಎರಡು ವರ್ಷ ಆರು ತಿಂಗಳುಗಳು ಕಳೆದಿದ್ದವು. ಅವರು ಮಕ್ಕಾದಲ್ಲಿಯೇ ಬೆಳೆದು ದೊಡ್ಡವರಾದರು. ಜಾಹಿಲೀ ಕಾಲದಲ್ಲಿ ಅವರು ಕುರೈಶರ ನಾಯಕರೂ ಪ್ರಮುಖರೂ ಆಗಿದ್ದರು. ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು ಮಕ್ಕಾದಲ್ಲಿ ಜನಪ್ರಿಯರಾಗಿದ್ದರು. ಅತಿ ಶ್ರೀಮಂತ ಕುರೈಶರಲ್ಲಿ ಒಬ್ಬರಾಗಿದ್ದ ಅಬೂಬಕರ್(ರ) ಪ್ರವಾದಿ(ಸ)ರವರ ಆತ್ಮೀಯ ಮಿತ್ರರೂ ಆಗಿದ್ದರು.
· ವಂಶಶಾಸ್ತ್ರ ಪರಿಣತರು:
ಅಬೂಬಕರ್(ರ) ವಂಶಶಾಸ್ತ್ರದಲ್ಲಿ ಪರಿಣತರಾಗಿದ್ದರು. ಖ್ಯಾತ ವಂಶತಜ್ಞರಾದ ಉಕೈಲ್ ಬಿನ್ ಅಬೂ ತಾಲಿಬ್ ಮತ್ತು ಜುಬೈರ್ ಬಿನ್ ಮುತ್‌ಇಮ್ ಮುಂತಾದವರ ಗುರುಗಳಾಗಿದ್ದರು. ಒಮ್ಮೆ ಪ್ರವಾದಿ(ಸ)ರವರು ಅವರ ಬಗ್ಗೆ “ಕುರೈಶರ ವಂಶದ ಬಗ್ಗೆ ಅತಿಹೆಚ್ಚು ಜ್ಞಾನವುಳ್ಳವರು” ಎಂದು ಹೇಳಿದ್ದರು. ಅರೇಬಿಯನ್ ಉಪದ್ವೀಪದ ಎಲ್ಲಾ ವಂಶಗಳ ಬಗ್ಗೆಯೂ ಅವರಿಗೆ ಜ್ಞಾನವಿತ್ತು.
· ಇಸ್ಲಾಮ್ ಸ್ವೀಕಾರ:
ಅಬೂಬಕರ್(ರ) ಸತ್ಯಧರ್ಮದ ಹುಡುಕಾಟದಲ್ಲಿದ್ದರು. ಅವರು ವ್ಯಾಪಾರಾರ್ಥ ಸಂಪೂರ್ಣ ಅರೇಬಿಯನ್ ಉಪದ್ವೀಪವನ್ನು ಸುತ್ತುತ್ತಿದ್ದರು. ಪ್ರಯಾಣದ ಮಧ್ಯೆ ಅನೇಕ ಧಾರ್ಮಿಕ ಸಂತರನ್ನು ಮತ್ತು ಕ್ರೈಸ್ತ ಪಾದ್ರಿಗಳನ್ನು ಭೇಟಿಯಾಗುತ್ತಿದ್ದರು. ಒಂದು ದಿನ ಅವರು ಕಅಬಾಲಯದಲ್ಲಿ ಕುಳಿತಿದ್ದಾಗ ಸಮೀಪದಲ್ಲಿ ಝೈದ್ ಬಿನ್ ಅಮ್ರ್ ಬಿನ್ ನುಫೈಲ್ ಇದ್ದರು. ಆಗ ಅಲ್ಲಿಂದ ಹಾದುಹೋಗುತ್ತಿದ್ದ ಉಮಯ್ಯ ಬಿನ್ ಅಬೂ ಸಲ್ತ್ ಝೈದ್‍ರೊಂದಿಗೆ ಕೇಳಿದರು: “ಸತ್ಯಾನ್ವೇಷಕನೇ, ಹೇಗಿದ್ದೀಯಾ?” ಅವರು ಕ್ಷೇಮವೆಂದು ಉತ್ತರಿಸಿದರು. ಉಮಯ್ಯ ಕೇಳಿದರು: “ನಿನಗೆ ಅವರು(ನಿರೀಕ್ಷಿತ ಪ್ರವಾದಿ) ಸಿಕ್ಕಿದರೇ?” ಅವರು ಇಲ್ಲವೆಂದರು.
ಆ ತನಕ ಜನರು ಒಬ್ಬ ಪ್ರವಾದಿಯನ್ನು ನಿರೀಕ್ಷಿಸುತ್ತಿದ್ದಾರೆಂದು ಅಬೂಬಕರ್(ರ)ರಿಗೆ ತಿಳಿದಿರಲಿಲ್ಲ. ಅವರು ನೇರವಾಗಿ ವರಕ ಬಿನ್ ನೌಫಲ್ ರ ಬಳಿಗೆ ಹೋಗಿ ವಿಚಾರಿಸಿದಾಗ ಅವರು “ಹೌದು, ನಿಮ್ಮ ಜನರಲ್ಲಿ ಒಬ್ಬ ಪ್ರವಾದಿ ಬರಲಿದ್ದಾರೆ” ಎಂದರು. ಆದ್ದರಿಂದ ಮುಹಮ್ಮದ್(ಸ) ಪ್ರವಾದಿಯಾದಾಗ ಅದನ್ನು ಒಪ್ಪಿಕೊಳ್ಳಲು ಅಬೂಬಕರ್(ರ)ಸ್ವಲ್ಪವೂ ಅಳುಕು ತೋರಿಸಲಿಲ್ಲ.
· ದಅವಾ:
ಇಸ್ಲಾಮ್ ಸ್ವೀಕರಿಸಿದ ನಂತರ ಅಬೂಬಕರ್(ರ)ಜನರನ್ನು ಇಸ್ಲಾಮಿನ ಕಡೆಗೆ ಆಮಂತ್ರಿಸಲು ಆರಂಭಿಸಿದರು. ಅನೇಕ ಮಂದಿ ಅವರ ಕೈಯಲ್ಲಿ ಇಸ್ಲಾಮ್ ಧರ್ಮ ಸ್ವೀಕರಿಸಿದರು. ಝುಬೈರ್ ಬಿನ್ ಅವ್ವಾಮ್, ಉಸ್ಮಾನ್ ಬಿನ್ ಅಫ್ಘಾನ್, ತಲ್ಹ ಬಿನ್ ಉಬೈದುಲ್ಲಾ, ಸಅದ್ ಬಿನ್ ಅಬೂ ವಕ್ಕಾಸ್, ಅಬ್ದುರ್ರಹ್ಮಾನ್ ಬಿನ್ ಔಫ್, ಉಸ್ಮಾನ್ ಬಿನ್ ಮಝ್‍ಊನ್, ಅಬೂ ಉಬೈದ ಬಿನ್ ಜಾರ್ರಾಹ್, ಅಬೂ ಸಲಮ ಬಿನ್ ಅಬ್ದುಲ್ ಅಸದ್, ಅರ್ಕಮ್ ಬಿನ್ ಅಬೂ ಅರ್ಕಮ್ ಮುಂತಾದವರು ಅವರಲ್ಲಿ ಪ್ರಮುಖರಾಗಿದ್ದರು. ಅವರು ತಮ್ಮ ಕುಟುಂಬವನ್ನು ಇಸ್ಲಾಮಿಗೆ ಕರೆದಾಗ ಅವರ ಮಕ್ಕಳಾದ ಅಬ್ದುಲ್ಲಾ, ಅಸ್ಮಾ, ಆಯಿಶ, ಪತ್ನಿ ಉಮ್ಮು ರೂಮಾನ್ ಮತ್ತು ಸೇವಕ ಆಮಿರ್ ಬಿನ್ ಫುಹೈರ ಇಸ್ಲಾಮ್ ಸ್ವೀಕರಿಸಿದರು.
ಇತರೆಲ್ಲರಂತೆ ಅಬೂಬಕರ್(ರ) ಕೂಡ ಶತ್ರುಗಳಿಂದ ತೀವ್ರ ಹಿಂಸೆಯನ್ನು ಅನುಭವಿಸಿದ್ದರು. ಒಮ್ಮೆ ಅವರು ಪ್ರವಾದಿ(ಸ)ರೊಂದಿಗೆ ಕಅಬಾಲಯದಲ್ಲಿ ಬಹಿರಂಗವಾಗಿ ಜನರನ್ನು ಇಸ್ಲಾಮಿಗೆ ಆಮಂತ್ರಿಸಿದರು. ಆಗ ಶತ್ರುಗಳು ಅವರನ್ನು ಹಿಡಿದು ತೀವ್ರವಾಗಿ ಥಳಿಸಿದರು. ಉತ್ಬ ಬಿನ್ ರಬೀಅ ಅವರ ಮುಖಕ್ಕೆ ಒಂದೇ ಸಮನೆ ಚಪ್ಪಲಿಯಿಂದ ಬಾರಿಸತೊಡಗಿದ. ಇದರಿಂದ ಅವರ ಮೂಗು ಮತ್ತು ಮುಖವನ್ನು ಬೇರ್ಪಡಿಸಿ ತಿಳಿಯಲಾಗದಷ್ಟು ಅವರ ಮುಖ ಊದಿಕೊಂಡಿತು. ಅಷ್ಟರಲ್ಲಿ ಬನೂ ತೈಮ್ ಗೋತ್ರದವರು ಬಂದು ಅವರನ್ನು ಶತ್ರುಗಳಿಂದ ಬಿಡಿಸಿ ಒಂದು ಬಟ್ಟೆಯಲ್ಲಿ ಸುತ್ತಿ ಮನೆಗೆ ಒಯ್ದರು. ಅಬೂಬಕರ್(ರ) ಬದುಕುಳಿಯುವುದೇ ಕಷ್ಟ ಎಂದು ಅವರು ಭಾವಿಸಿದ್ದರು. ಆದರೆ ಅಬೂಬಕರ್(ರ) ಬದುಕಿದರು. ಅವರಿಗೆ ಪ್ರಜ್ಞೆ ಬಂದಾಗ ಅವರು ಮೊತ್ತಮೊದಲು ಕೇಳಿದ್ದು ಪ್ರವಾದಿ(ಸ) ಹೇಗಿದ್ದಾರೆ ಎಂದಾಗಿತ್ತು.
· ದುರ್ಬಲರಿಗೆ ಮತ್ತು ಗುಲಾಮರಿಗೆ ಸಹಾಯ:
ಮಕ್ಕಾದಲ್ಲಿ ಮುಶಿಕರ ಹಿಂಸೆ ಮಿತಿಮೀರುತ್ತಿತ್ತು. ಅವರು ಇಸ್ಲಾಮ್ ಸ್ವೀಕರಿಸಿದ ದುರ್ಬಲರನ್ನು ಮತ್ತು ಗುಲಾಮರನ್ನು ಅತಿಯಾಗಿ ಹಿಂಸಿಸುತ್ತಿದ್ದರು. ಆ ಬಡಪಾಯಿಗಳಿಗೆ ಕೇಳುವವರಾರೂ ಇರಲಿಲ್ಲ. ಅವರ ಪರವಾಗಿ ನಿಲ್ಲಲು ಯಾವುದೇ ಗೋತ್ರ ಮನೆತನಗಳಿರಲಿಲ್ಲ. ಆಗ ಅಬೂಬಕರ್(ರ)ಮುಂದೆ ಬಂದು ಆ ದುರ್ಬಲ ಗುಲಾಮರನ್ನು ಹಣ ಕೊಟ್ಟು ಖರೀದಿಸಿ ಸ್ವತಂತ್ರಗೊಳಿಸ ತೊಡಗಿದರು. ಅವರು ಮೊತ್ತಮೊದಲು ಉಮಯ್ಯ ಬಿನ್ ಖಲಫ್‌ನ ಗುಲಾಮರಾದ ಬಿಲಾಲ್ ಬಿನ್ ರಬಾಹ್‍ರನ್ನು ಖರೀದಿಸಿ ಸ್ವತಂತ್ರಗೊಳಿಸಿದರು. ನಂತರ ಆಮಿ ಬಿನ್ ಫುಹೈರ, ಉಮ್ಮು ಉಬೈಸ್(ಉಮೈಸ್), ಝುನೈರ, ಹಿಂದಿಯ್ಯ ಮತ್ತು ಆಕೆಯ ಮಗಳು, ಬನೂ ಮುಅಮ್ಮಿಲ್ ಗೋತ್ರದ ದಾಸಿ ಮುಂತಾದ ಅನೇಕ ಗುಲಾಮರನ್ನು ಖರೀದಿಸಿ ಸ್ವತಂತ್ರಗೊಳಿಸಿದರು.
· ಹಿಜ್ರ:
ಮದೀನಕ್ಕೆ ಹಿಜ್ರ ಹೋಗಲು ಪ್ರವಾದಿ(ಸ)ರಿಗೆ ಅನುಮತಿ ಸಿಕ್ಕಿದಾಗ ಅವರು ನೇರವಾಗಿ ಅಬೂಬಕರ್(ರ)ರವರ ಮನೆಗೆ ಬಂದು ವಿಷಯ ತಿಳಿಸಿದರು. ಪ್ರವಾದಿ(ಸ)ರವರ ಜೊತೆಗೆ ಹಿಜ್ರ ಮಾಡುವ ಅವಕಾಶ ಒದಗಿದ್ದಕ್ಕಾಗಿ ಅಬೂಬಕರ್(ರ)ರಿಗೆ ಉಂಟಾದ ಸಂತೋಷಕ್ಕೆ ಪಾರವಿರಲಿಲ್ಲ. ಅವರು ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿದರು. ಇಬ್ಬರೂ ಮಕ್ಕಾದ ಬಳಿಯಿರುವ ಸೌರ್ ಗುಹೆಯಲ್ಲಿ ಮೂರು ರಾತ್ರಿಗಳನ್ನು ಕಳೆದರು. ಪ್ರವಾದಿ(ಸ)ರವರ ಸುರಕ್ಷತೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಅಬೂಬಕರ್(ರ) ಮಾಡಿದ್ದರು. ಅನೇಕ ಎಡರು-ತೊಡರುಗಳನ್ನು ದಾಟಿದ ಬಳಿಕ ಕೊನೆಗೆ ಇಬ್ಬರೂ ಕ್ಷೇಮವಾಗಿ ಮದೀನಾ ತಲುಪಿದರು.
· ಯುದ್ಧಗಳು:
ಅಬೂಬಕರ್(ರ) ಪ್ರವಾದಿ(ಸ)ರೊಡನೆ ಎಲ್ಲಾ ಯುದ್ಧಗಳಲ್ಲೂ ಪಾಲ್ಗೊಂಡಿದ್ದರು. ಬದ್ರ್ ಯುದ್ಧದ ಸಂದರ್ಭ ಅವರ ಮಗ ಅಬ್ದುರ್ರಹ್ಮಾನ್ ಮುಶ್ರಿಕರ ಜೊತೆಗಿದ್ದರು. ಇಸ್ಲಾಮ್ ಸ್ವೀಕಾರದ ಬಳಿಕ ಅವರು ಅಬೂಬಕರ್(ರ)ರೊಡನೆ: “ಬದ್ರ್ ಯುದ್ಧದಲ್ಲಿ ತಾವು ನನ್ನ ಮುಂಭಾಗದಲ್ಲಿದ್ದಿರಿ. ಆದರೆ ನಾನು ತಮ್ಮನ್ನು ಕೊಲ್ಲದೆ ದೂರ ಸರಿದುಬಿಟ್ಟೆ” ಎಂದು ಹೇಳಿದಾಗ ಅಬೂಬಕರ್(ರ) ಹೇಳಿದರು: “ಒಂದು ವೇಳೆ ನಾನು ನಿನ್ನನ್ನು ನನ್ನ ಮುಂಭಾಗದಲ್ಲಿ ಕಂಡಿದ್ದರೆ ನಿನ್ನನ್ನು ಕೊಂದೇ ಬಿಡುತ್ತಿದ್ದೆ!”
ಉಹುದ್ ಯುದ್ಧದ ಸಂದರ್ಭ ಪ್ರವಾದಿ(ಸ)ರವರು ಮಡಿದರೆಂಬ ಸುದ್ದಿ ಹಬ್ಬಿದಾಗ ಮೊತ್ತಮೊದಲು ಜನರ ನಡುವಿನಿಂದ ಓಡಿ ಬಂದು ಪ್ರವಾದಿ(ಸ)ರವರ ಬಳಿ ತಲುಪಿದ್ದು ಅಬೂಬಕರ್(ರ) ಆಗಿದ್ದರು. ನಂತರ ಅಬೂ ಉಬೈದ, ಅಲೀ, ಝುಬೈರ್, ಉಮರ್ ಮುಂತಾದವರು ಬಂದರು. ಅವರು ಬನೂ ನದೀರ್, ಬನೂ ಮುಸ್ತಲಕ್, ಖಂದಕ್, ಬನೂ ಕುರೈಝ, ಖೈಬರ್, ನಜ್ದ್ ದಂಡಯಾತ್ರೆ ಬನೂ ಫಝಾರ, ಝಾತು ಸ್ಸಲಾಸಿಲ್ ಮುಂತಾದ ಎಲ್ಲಾ ಯುದ್ಧಗಳಲ್ಲೂ ಪಾಲ್ಗೊಂಡಿದ್ದರು. ಹುದೈಬಿಯಾ ಸಂಧಿಯ ಸಂದರ್ಭ ಅವರು ಉಪಸ್ಥಿತರಿದ್ದರು.
· ಪ್ರವಾದಿ(ಸ)ರವರ ಮರಣ:
ಪ್ರವಾದಿ(ಸ)ರವರು ನಿಧನರಾದಾಗ ಜನರು ಗೊಂದಲದಲ್ಲಿದ್ದರು. ಪ್ರವಾದಿ(ಸ)ನಿಧನರಾದರೆಂದು ಒಪ್ಪಿಕೊಳ್ಳಲು ಸಹಾಬಾಗಳಲ್ಲಿ ಅನೇಕ ಮಂದಿ ಸಿದ್ಧರಾಗಲಿಲ್ಲ. ಉಮರ್(ರ) ಅದರ ಮುಂಚೂಣಿಯಲ್ಲಿದ್ದರು. ಆಗ ಅಬೂಬಕರ್(ರ)ರವರು ಐತಿಹಾಸಿಕ ಭಾಷಣವನ್ನು ಮಾಡುತ್ತಾ ಹೇಳಿದರು: “ಓ ಜನರೇ, ನಿಮ್ಮಲ್ಲಿ ಯಾರಾದರೂ ಮುಹಮ್ಮದ್(ಸ)ರನ್ನು ಆರಾಧಿಸುತ್ತಿದ್ದರೆ, ಇಗೋ ಮುಹಮ್ಮದ್(ಸ) ಮರಣಹೊಂದಿದ್ದಾರೆ. ಆದರೆ ನಿಮ್ಮಲ್ಲಿ ಯಾರಾದರೂ ಅಲ್ಲಾಹನನ್ನು ಆರಾಧಿಸುವುದಾದರೆ ಅವನೆಂದೂ ಮರಣಹೊಂದಲಾರ. ಅವನು ಎಂದೆಂದೂ ಜೀವಿಸಿರುವವನು.”
ನಂತರ ಅವರು ಈ ಆಯತ್ತನ್ನು ಪಾರಾಯಣ ಮಾಡಿದರು: “ಮುಹಮ್ಮದ್ ಒಬ್ಬ ಸಂದೇಶವಾಹಕರಲ್ಲದೆ ಇನ್ನೇನೂ ಅಲ್ಲ. ಅವರೇನಾದರೂ ಮರಣಹೊಂದಿದರೆ ಅಥವಾ ಕೊಲ್ಲಲ್ಪಟ್ಟರೆ ನೀವು ನಿಮ್ಮ ಹಿಮ್ಮಡಿಗಳಲ್ಲಿ ಮರಳುತ್ತೀರಾ? ನಿಮ್ಮಲ್ಲಿ ಯಾರಾದರೂ ತಮ್ಮ ಹಿಮ್ಮಡಿಗಳಲ್ಲಿ ಮರಳಿದರೆ ಅವರು ಅಲ್ಲಾಹನಿಗೆ ಯಾವುದೇ ಹಾನಿಯನ್ನೂ ಮಾಡುವುದಿಲ್ಲ. ಕೃತಜ್ಞತೆ ಸಲ್ಲಿಸುವವರಿಗೆ ಅಲ್ಲಾಹು ಸೂಕ್ತ ಪ್ರತಿಫಲವನ್ನು ನೀಡುತ್ತಾನೆ.” (ಕುರ್‌ಆನ್ 3:144)
· ಖಿಲಾಫತ್:
ಪ್ರವಾದಿ(ಸ) ನಿಧನರಾದಾಗ ಅನ್ಸಾರಿಗಳು ಸಕೀಫ ಬನೂ ಸಾಇದದಲ್ಲಿ ಒಟ್ಟುಗೂಡಿ ತಮಗೆ ಖಲೀಫರನ್ನು ಆರಿಸಲು ಮುಂದಾದರು. ವಿಷಯ ತಿಳಿದು ಅಬೂಬಕರ್(ರ) ಮತ್ತು ಉಮರ್(ರ) ಬನೂ ಸಕೀಫಕ್ಕೆ ತೆರಳಿ ಅನ್ಸಾರಿಗಳೊಡನೆ ಸಮಾಲೋಚನೆ ಮಾಡಿದರು. ನಾಯಕತ್ವವು ಕುರೈಶರಿಗೆ ಸಿಗಬೇಕೆಂಬ ಪ್ರವಾದಿ(ಸ)ರವರ ಮಾತನ್ನು ಅವರಿಗೆ ನೆನಪಿಸಿದರು. ಅನ್ಸಾರಿಗಳು ಒಪ್ಪಿದರು. ನಂತರ ಅಬೂಬಕರ್(ರ)ರನ್ನು ಸರ್ವಾನುಮತದಿಂದ ಖಲೀಫರನ್ನಾಗಿ ಆರಿಸಲಾಯಿತು.
ಖಲೀಫರಾಗಿ ಆರಿಸಲಾದ ಮರುದಿನ ಜನರೆಲ್ಲರೂ ಅವರಿಗೆ ಬೈಅತ್ ಮಾಡಿದ ನಂತರ ಅಬೂಬಕರ್(ರ) ಎದ್ದು ನಿಂತು ಭಾಷಣ ಮಾಡಿದರು: “ಓ ಜನರೇ, ನನ್ನನ್ನು ನಿಮ್ಮ ನಾಯಕನನ್ನಾಗಿ ಆರಿಸಲಾಗಿದೆ. ಆದರೆ ನಾನು ನಿಮಗಿಂತ ಒಳ್ಳೆಯವನಲ್ಲ. ನಾನು ಒಳಿತು ಮಾಡಿದರೆ ನನಗೆ ಸಹಾಯ ಮಾಡಿರಿ, ನಾನು ಕೆಡುಕು ಮಾಡಿದರೆ ನನ್ನನ್ನು ಸರಿಪಡಿಸಿರಿ. ಸತ್ಯವು ಅಮಾನತ್ತಾಗಿದೆ ಮತ್ತು ಸುಳ್ಳು ದ್ರೋಹವಾಗಿದೆ. ನಿಮ್ಮ ಪೈಕಿ ಬಲಹೀನರ ಹಕ್ಕನ್ನು ಇನ್ ಶಾ ಅಲ್ಲಾಹ್ ನಾನು ಅವರಿಗೆ ಮರಳಿಸುವ ತನಕ ಅವರು ನನಗೆ ಸಂಬಂಧಿಸಿದಂತೆ ಬಲಶಾಲಿಗಳಾಗಿದ್ದಾರೆ. ನಿಮ್ಮ ಪೈಕಿ ಬಲಶಾಲಿಗಳಿಂದ ಆ ಹಕ್ಕನ್ನು ಇನ್ ಶಾ ಅಲ್ಲಾಹ್ ಪಡೆಯುವ ತನಕ ಅವರು ನನಗೆ ಸಂಬಂಧಿಸಿದಂತೆ ಬಲಹೀನರಾಗಿದ್ದಾರೆ. ನಾನು ಅಲ್ಲಾಹನನ್ನು ಮತ್ತು ರಸೂಲರನ್ನು ಅನುಸರಿಸುವ ತನಕ ನೀವು ನನ್ನನ್ನು ಅನುಸರಿಸಿರಿ. ನಾನು ಅಲ್ಲಾಹನನ್ನು ಮತ್ತು ರಸೂಲರನ್ನು ಅನುಸರಿಸದಿದ್ದರೆ ನೀನು ನನ್ನನ್ನು ಅನುಸರಿಸಬೇಕಾಗಿಲ್ಲ. ಜನರೇ ನಮಾಝಿಗೆ ಹೊರಡಿ. ಅಲ್ಲಾಹು ನಿಮಗೆ ದಯೆ ತೋರಲಿ.”
· ಈ ಸಾಮ್ರಾಜ್ಯ ವಿಸ್ತರಣೆ:
ಖಲೀಫರಾದ ನಂತರ ಮೊತ್ತಮೊದಲು ಅಬೂಬಕರ್(ರ)ರವರು ಪ್ರವಾದಿ(ಸ)ರು ಕಳುಹಿಸಿದ, ಆದರೆ ಅವರ ಮರಣದ ಕಾರಣ ಅಮಾನತ್ತಿನಲ್ಲಿಡಲಾದ ಉಸಾಮ ಬಿನ್ ಝೈದ್(ರ)ರವರ ಸೈನ್ಯವನ್ನು ರೋಮನ್ನರ ವಿರುದ್ಧ ಹೋರಾಡಲು ಕಳುಹಿಸಿದರು.
ಪ್ರವಾದಿ(ಸ)ರವರ ಮರಣಾನಂತರ ಅನೇಕ ಅರೇಬಿಯನ್ ಗೋತ್ರಗಳು ಧರ್ಮಪರಿತ್ಯಾಗ ಮಾಡಿದವು. ಅವರಲ್ಲಿ ಕೆಲವರು ವಿಗ್ರಹಾರಾಧನೆಗೆ ಮರಳಿದರೆ, ಬೇರೆ ಕೆಲವರು ಮುಸೈಲಿಮ ಕಝ್ಝಾಬ್ ಮತ್ತು ಅಸ್ವದ್ ಅನ್ಸಿಯಂತಹ ಮಿಥ್ಯ ಪ್ರವಾದಿಗಳ ಹಿಂದೆ ಹೋದರು. ಇತರ ಕೆಲವರು ಝಕಾತ್ ನಿರಾಕರಿಸುವ ಮೂಲಕ ಮುರ್ತದ್‍ಗಳಾದರು. ಈ ಆಂತರಿಕ ಬಂಡುಗಾರರನ್ನು ಸದೆ ಬಡಿಯಲು ಅಬೂಬಕರ್(ರ) ಅನೇಕ ಸೈನ್ಯಗಳನ್ನು ಕಳುಹಿಸಿದರು.
ಅಬೂಬಕರ್(ರ)ರವರು 15 ದಿನಗಳ ಕಾಲ ಜ್ವರ ಬಾಧಿತರಾಗಿದ್ದರು. ಹಿಜರಿ 13, ಜುಮಾದಾ ಉಖ್ರಾ 22ನೇ ದಿನ ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಅವರು ನಿಧನರಾದರು. ಅವರನ್ನು ಪ್ರವಾದಿ(ಸ)ರವರ ಬಳಿ ದಫನ ಮಾಡಲಾಯಿತು.